ಕೋವ್ಯಾಕ್ಸಿನ್ ಗೆ ವಿಶ್ವ ಸ್ವಾಸ್ತ್ಯ ಸಂಸ್ಥೆ ಅನುಮೋದನೆ ತಡವಾಗಿರುವುದರ ಹಿಂದೆ ಚೀನಾ ಹುನ್ನಾರವಿರಬಹುದೆಂಬ ಅನುಮಾನವೂ ಕಾಡುತ್ತಿದೆ. ಕೋವ್ಯಾಕ್ಸೀನ್ ಕುರಿತು ಲೇಖಕರು ಹಾಗೂ ವಿಜ್ಞಾನಿಯಾದ ಸುಧೀಂದ್ರ ಹಾಲ್ದೊಡ್ಡೇರಿ ಅವರು ತಮ್ಮ ವಿಚಾರವನ್ನು ವ್ಯಕ್ತ ಪಡಿಸಿದ್ದಾರೆ. ಓದಿ…
ಮೊನ್ನೆ ಹಿರಿಯ ವಿಜ್ಞಾನ ಲೇಖಕರೊಬ್ಬರೊಂದಿಗೆ ಮಾತನಾಡುವಾಗ ‘ಈ ವೈರಸ್ ಮೊದಲು ಸೃಷ್ಟಿಯಾಯಿತೋ ಅಥವಾ ಅದಕ್ಕೆ ಪ್ರತಿಯಾಗಿ ಬಳಕೆಯಾಗುತ್ತಿರುವ ವ್ಯಾಕ್ಸಿನ್ ಗಳ ತಯಾರಿಕೆ
ಮೊದಲು ಆರಂಭವಾಯಿತೋ ಎಂಬ ಅನುಮಾನವನವನ್ನು ವ್ಯಕ್ತ ಪಡಿಸಿದರು. ಕೋವಿಡ್- ೧೯ ಕುರಿತಂತೆ ನಡೆದಿರುವ ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ಗಮನಿಸಿದರೆ ಅವರ ಅಭಿಪ್ರಾಯ
ನಿಜವಿರಬಹುದೆನಿಸುತ್ತದೆ. ಚೀನಾ ದೇಶವು ಅಭಿವೃದ್ಧಿಸಿರುವ ‘ಸೈನೋವಾಕ್’ ಹಾಗೂ ‘ಸೈನೋಫಾರ್ಮ್’ ವ್ಯಾಕ್ಸಿನ್ ಗಳ ಹತ್ತಾರು ಕೋಟಿ ಡೋಸ್ ಗಳು ಬಳಕೆಯಾಗಿದೆ. ಅವುಗಳ
ಪೂರ್ವಭಾವಿ ಪರಿಶೀಲನೆಯ ಫಲಿತಾಂಶಗಳ ಪ್ರಮಾಣವೂ ಅಪಾರವಾಗಿದೆ.
೨೦೧೯ ರಲ್ಲಿ ಚೀನಾದ ವುಹಾನ ಪ್ರಯೋಗ ಶಾಲೆಯಿಂದ ಕೊರೋನಾ ವೈರಸ್ ಉದ್ಭವಿಸಿದ ಕ್ಷಣದಿಂದ ‘ವಿಶ್ವ ಸ್ವಾಸ್ತ್ಯ ಸಂಸ್ಥೆ’ ನಡೆಸಿದ ನಾಟಕಗಳು ನಿಮಗೆಗೊತ್ತು. (ಅಲ್ಲಿನ ಮೂವರು
ವಿಜ್ಞಾ ನಿಗಳಿಗೆ ೨೦೧೯ ರ ನವೆಂಬರ್ ನಲ್ಲೆ ಕೋವಿಡ್- ೧೯ ಸೋಂಕು ತಗುಲಿತ್ತು ಎಂಬ ಅಮೆರಿಕದ ಗುಪ್ತಚರ ಇಲಾಖೆಯ ವರದಿಗಳನ್ನು ಪ್ರತಿಷ್ಟಿತ ‘ವಾಲ್ ಸ್ಟ್ರೀಟ್ ಜನರಲ್’ ಪತ್ರಿಕೆ ನಿನ್ನೆಯಷ್ಟೇಬಹಿರಂಗ ಪಡಿಸಿದೆ). ಕೋವಿಡ್-೧೯ ರ ದಾಂಧಲೆಯ ನಂತರ ಚೀನಾಗೆ ಕಿಂಚಿತ್ತೂ ಕಳಂಕ ತಗುಲದಂತೆ ಆ ದೇಶದ ಅಧ್ಯಕ್ಷರಿಗಿಂತಲೂ ಹೆಚ್ಚಿನ ಮುತುವರ್ಜಿ ವಿಶ್ವ ಸ್ವಾಸ್ತ್ಯ ಸಂಸ್ಥೆ ಮಹಾ ನಿರ್ದೇಶಕ ಟೇಡ್ರೋಸ್ ಅವರದಾಗಿತ್ತು.

ಅವರುಕೋವಿಡ್-೧೯ ರ ವಿಷಯದಲ್ಲಿ ಚೀನಾದ ವರ್ಚಸ್ ಗೆ ಧಕ್ಕೆಯಾಗದಂತೆ ನೋಡಿಕೊಂಡರು. (೨೦೨೦ ರ ವರದಿಯಲ್ಲಿ ವೈರಸ್ ಮೂಲ ವುಹಾನ ಪ್ರಯೋಗ ಶಾಲೆಯಲ್ಲವೆಂದು ವಿಶ್ವ ಸ್ವಾಸ್ತ್ಯ ಸಂಸ್ಥೆ ಹೇಳಿತ್ತು, ಆದರೆ ಆ ಪ್ರಯೋಗ ಶಾಲೆಗೆ ಸಂಸ್ಥೆಯ ತನಿಖಾಧಿಕಾರಿಗಳಿಗೆ ಪ್ರವೇಶವನ್ನು ಚೀನಾ ನಿರಾಕರಿಸಿತ್ತು). ಅವರ ಈ ನಡುವೆಯು ಕ್ರಿಕೆಟ್ ಪಂದ್ಯದಲ್ಲಿ ಅಂಪೈರ್ ಕೂಡಾ ತಂಡವೊಂದರ ಪರವಾಗಿ ಆಟದಲ್ಲಿ ಭಾಗವಹಿಸಿದಂತಿತ್ತು. ವೈರಸ್ ಸೃಷ್ಟಿಯ ವೈರಸ್ ಆಪಾದನೆಯಿಂದ ಚೀನಾವನ್ನು ಪಾರು ಮಾಡಿದ ನಂತರ ವ್ಯಾಕ್ಸಿನ್ ಅನುಮೋದನೆಯಲ್ಲಿ ಇದೇ ವಿಶ್ವ ಸ್ವಾಸ್ತ್ಯ ಸಂಸ್ಥೆ ಚೀನಾ ಪರ ಬ್ಯಾಟಿಂಗ್ ಮಾಡುತ್ತಿದೆವೆಂಬ ವರದಿಗಳು ಬಂದಿವೆ. ಅಪ್ಪಟ ಭಾರತೀಯ ಭಾರತೀಯ ವ್ಯಾಕ್ಸಿನ್ ಎಂಬ ಹೆಗ್ಗಳಿಕೆಯ ‘ಕೋವಾಕ್ಸಿನ್ ‘ನ ತುರ್ತು ಬಳಕೆ ಅನುಮೋದನೆಯನ್ನು ಬೇಕೆಂದೇ ನಿಧಾನಿಸುತ್ತಿದೆಯೆಂಬ ಆಪಾದನೆ ವಿಶ್ವ ಸ್ವಾಸ್ತ್ಯ ಸಂಸ್ಥೆ ಮೇಲಿದೆ. ಇದರ ಹಿಂದೆ ಚೀನಾ ದೇಶದ ಹುನ್ನಾರವಿರಬಹುದೆಂಬ ಅನುಮಾನವೂ ಕಾಡುತ್ತಿದೆ.
ಸೋಂಕು ನಿರೋಧಕಗಳೂ ಸೇರಿದಂತೆ ವ್ಯಾಕ್ಸಿನ್ ಗಳ ಅನುಮೋದನೆಗೆ ವಿಶ್ವ ಸ್ವಾಸ್ತ್ಯ ಸಂಸ್ಥೆಯಡಿಯಲ್ಲಿ ಸ್ಟ್ರಾಟಜಿಕ್ ಅಡ್ವಿಸೆರ್ ಗ್ರೋಪ್ ಆಫ್ ಎಕ್ಸ್ಪರ್ಟ್ (ಸೇಜ್) ಎಂಬ ಸಮಿತಿ ತನ್ನ ಸಲಹೆಗಳನ್ನು ನೀಡುತ್ತದೆ. ಈ ಸಮಿತಿಯ ಸದಸ್ಯರು ಥೇಟ್ ಸಂತರಂತೆ (ಸೇಜ್) ನಿಷ್ಪಕ್ಷಪಾತ ಕೆಲಸ ಮಾಡಬೇಕು. ಜಗತ್ತಿನಾದ್ಯಂತ ಕೋವಿಡ್ – ೧೯ ರ ಅಭಿವೃದ್ದಿಯಾಗಿರುವ ವ್ಯಾಕ್ಸಿನ್ ಗಳ ಬಳಕೆಗೆ ಈ ಸಮಿತಿಯು ಮಾಡಿರುವ ಶಿಫಾರಸ್ಸುಗಳನ್ನು ಗಮನಿಸಿದರೆ ಅದರ ಕಾರ್ಯವೈಖರಿಯ ಬಗ್ಗೆ ಅನುಮಾನಗಳು ಮೂಡುತ್ತವೆ.
ಸೇಜ್ ಸಮಿತಿಯು ಇದೇ ಮೇ ತಿಂಗಳ ಏಳನೆಯ ತಾರೀಕು ಚೀನಾ ದೇಶವು ಕೋವಿಡ್ ೧೯ರ ವಿರುದ್ಧ ಅಭಿವೃದ್ಧಿಪಡಿಸಿರುವ ಸೈನೋಫಾರ್ಮ ಎಂಬ ವ್ಯಾಕ್ಸಿನ್ ಅನ್ನು ತುರ್ತು ಬಳಕೆಗೆ ಅನುಮೋದಿಸಿತು. ವಿಶ್ವ ಸ್ವಾಸ್ತ್ಯ ಸಂಸ್ಥೆ ಅನುಮೋದಿತ ಕೋವಿಡ್ -೧೯ ವ್ಯಾಕ್ಸಿನ್ ಗಳ ಪಟ್ಟಿಯಲ್ಲಿ ಪಶ್ಚಿಮ ದೇಶಗಳ ಹೊರತಾದ ಏಕೈಕ ವ್ಯಾಕ್ಸಿನ್ ಎಮ್ ಹೆಗ್ಗಳಿಕೆಗೆ ಅದು ಪಾತ್ರವಾಯಿತು.ಆದರೆ, ಈ ಸೈನೋಫಾರ್ಮ ತಯಾರಾದ ಸೂತ್ರದಲ್ಲೇ ರೂಪಗೊಂಡ ‘ ಕ್ಲಿನಿಕಲ್ ಟ್ರಯಲ್’ ಗಳಲ್ಲಿಅದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯೆಂದೂ ಸಾಬೀತಾದ ಭಾರತ್ ಬಯೋಟೆಕ್ ಕೋವಾಕ್ಸಿನ್ ಗೆ ಅಂಥ ಅನುಮೋದನೆ ಇನ್ನೂ ಸಿಕ್ಕಿಲ್ಲ.

ಭಾರತದ ಜತೆಗೆ ಬೋಟ್ಸಾನಾ, ಗ್ವಾಟೆಮಾಲಾ,ಗಯಾನಾ, ಇರಾನ್, ಮಾರಿಷಸ್, ಮೆಕ್ಸಿಕೋ, ಮ್ಯಾನ್ ಮಾರ, ನೇಪಾಳ, ಪಾರಾಗ್ವೆ, ಫಿಲಿಪೈನ್ಸ್, ವೆನಿಝ್ಯಾಲ, ಹಾಗೂ ಜಿಂಬಾಬ್ವೆ ದೇಶಗಳು ತಮ್ಮ ಕೋವಿಡ್ ೧೯ ಸೋಂಕಿತರ ಮೇಲೆ ಕೋವ್ಯಾಕ್ಸಿನ್ ನ ತುರ್ತು ಬಳಕೆಗೆ ಅನುಮತಿ ನೀಡಿದೆ.ಇನ್ನೂ ಇಪ್ಪತ್ತೆಂಟು ದೇಶಗಳಿಂದ ಬಳಕೆಗೆ ಅನುಮೋದನೆಯನ್ನು ಭಾರತ್ ಬಯೋಟೆಕ್ ಕಂಪನಿ ನಿರೀಕ್ಷಿಸುತ್ತಿದೆ. ಕಂಪನಿಯು ೨೫,೮೦೦ ಜನರ ಮೇಲೆ ನಡೆಸಿದ ಮೂರನೆಯ ಕ್ಲಿನಿಕಲ್ ಟ್ರಯಲ್’ ನಲ್ಲಿ ವ್ಯಾಕ್ಸಿನ್ ಪ್ರತಿಶತ ೮೧ ರಷ್ಟು ಪರಿಣಾಕಾರಿಯೆಂದು ಗೊತ್ತಾಗಿದೆ.
ಇದುವರೆಗಿನ ಎಲ್ಲ ಪರಿಶೀಲನೆಗಳಲ್ಲೂ ಕೋವ್ಯಾಕ್ಸಿನ್ ಯಾವುದೇ ಗಮನಾರ್ಹ ಅಡ್ಡ ಪರಿಣಾಮಗಳನ್ನು ಪ್ರದರ್ಶಿಸಿಲ್ಲ.ಹಾಗೆಯೇ ಬ್ರಿಟನ್ , ಬ್ರೆಝಿಲ್, ಹಾಗೂ ದಕ್ಷಿಣ ಆಫ್ರಿಕಾ ರೂಪಾಂತರಿಗಳ ಮೇಲೂ ಕೋವಾಕ್ಸಿನ್ ಕೆಲಸ ಮಾಡಿದೆ.ಈ ವರ್ಷದ ಜನವರಿಯಲ್ಲಿ ಮೂರನೆಯ ಹಂತದ ಪರಿಶೀಲನೆಯ ಆರಂಭದಲ್ಲೇ ಫಲಿತಾಂಶಗಳು ಉತ್ತೇಜನಕಾರಿಯಾಗಿದ್ದವು. ಈ ವರದಿಯನ್ನು ವಿಶ್ವ ಸ್ವಾಸ್ತ್ಯ ಸಂಸ್ಥೆಯು ಕೂಡಾ ಒಪ್ಪಿಕೊಂಡಿತ್ತು. ಪರಿಣಿತರಿಂದ ಮಾನ್ಯತೆ ಪಡೆದ ವಿಜ್ಞಾನ ಜರ್ನಲ್ ಗಳಲ್ಲಿ ಹೊಸತಾಗಿ ಕಾಣಿಸಿಕೊಂಡಿರುವ ರೂಪಾಂತರಿಯೂ ಸೇರಿದಂತೆ ಎಲ್ಲ ಬಗೆಯ ಕೋವಿಡ್ ೧೯ ರೂಪಾಂತರಿಗಳ ಮೇಲೆ ಕೋವಾಕ್ಸಿನ್ ಉತ್ತಮ ಪರಿಣಾಮ ಬಿರುವುದೆಂದು ಬರೆಯಲಾಗಿದೆ. ಆದರೆ, ವಿಶ್ವ ಸ್ವಾಸ್ತ್ಯ ಸಂಸ್ಥೆಯ ಜಾಲತಾಣದಲ್ಲಿ ಕೋವಾಕ್ಸಿನ್ ತುರ್ತು ಬಳಕೆಯ anumatige ಭಾರತ್ ಬಯೋಟೆಕ್ ಕಂಪನಿ ಆಸಕ್ತಿವಹಿಸಿದೆ ಎಂದಷ್ಟೇ ದಾಖಲೆಯಾಗಿದೆ.
ಇತ್ತ ೫೧ ದೇಶಗಳಲ್ಲಿ ತುರ್ತು ಬಳಕೆಗೆ ಪರವಾನಿಗೆ ಗಿಟ್ಟಿಸಿಕೊಂಡಿರುವ ಚೀನಾ ವ್ಯಾಕ್ಸಿನ್ ಸೈನೋಫಾರ್ಮ ಕುರಿತಂತೆ ಅನೇಕ ವಿವಾದಗಳಿವೆ. ಫಿಲಿಫೈನ್ಸ್ ಮಲೇಶಿಯಾ ಹಾಗು ಸಿಂಗಾಪುರ ದೇಶಗಳು ತಮ್ಮಲ್ಲಿ ಕ್ಲಿನಿಕಲ್ ಟ್ರಯಲ್ ಗಳಾದ ನಂತರ ಈ ವ್ಯಾಕ್ಸಿನ್ ನ ಅಡ್ಡ ಪರಿಣಾಮಗಳನ್ನು ಪಟ್ಟಿಮಾಡಿವೆ. ಸೇಯ್ ಷೆಲ್ಸ್ ನಲ್ಲಿ ಇದು ಪರಿಣಾಮಕಾರಿಯಾಗಿಲ್ಲವೆಂಬ ವರದಿ ಬಂದಿದೆ. ಇದೇ ಜನವರಿಯಲ್ಲಿ ಚೀನಾ ದೇಶದ ವ್ಯಾಕ್ಸಿನ್ ತಜ್ಞ ತಾವೊ – ಲೀನಾ ಎಂಬುವವರು ಅಲ್ಲಿನ ಸಾಮಾಜಿಕ ಜಾಲತಾಣ ವೇಯ್ಬೋ ದಲ್ಲಿ ಸೈನೋಫಾರ್ಮ್ ನ ೭೩ ಅಡ್ಡ ಪರಿಣಾಮಗಳನ್ನು ಪಟ್ಟಿ ಮಾಡಿ, ಅದು ಸುರಕ್ಷವಲ್ಲವೆಂದು ಬರೆದಿದ್ದರು. ವಾಯ್ಸ್ ಆಫ್ ಅಮೇರಿಕ ಸೇರಿದಂತೆ ಅನೇಕ ಪಾಶ್ಚಿಮಾತ್ಯ ಮಾಧ್ಯಮಗಳಲ್ಲಿ ಇದೊಂದು ದೊಡ್ಡ ಸುದ್ದಿಯಾಗಿತ್ತು. ವಿವಾದದ ಕಿಡಿ ಹೊತ್ತಿದಂತೆ ಮರುದಿನ ತಾವೋ- ಲೀನಾ ಅವರು ತಮ್ಮ ಹೇಳಿಕೆಯನ್ನು ವಾಯ್ಸ್ ಆಫ್ ಅಮೆರಿಕ ತಪ್ಪಾಗಿ ಅರ್ಥೈಸಿಕೊಂಡಿದೆ.ಸೈನೋಫಾರ್ಮ್ ಅತ್ಯಂತ ಸುರಕ್ಷವಾದ ವ್ಯಾಕ್ಸಿನ್ ಎಂದು ಘೋಷಿಸಿದರು. ಯು.ಎ.ಇ ಹಾಗೂ ಬಾಹರೇನ್ ಗಳಲ್ಲಿ ೬೦-೭೦ ಪ್ರತಿಶತ ಜನಸಂಖ್ಯೆಗೆ ಸೈನೋಫಾರ್ಮ್ ನೀಡಲಾಗಿದ್ದು ಅವರಲ್ಲಿ ಅರ್ಧದಷ್ಟು ಜನರಿಗೆ ಕೋವಿಡ್ ೧೯ ಸೋಂಕು ಮತ್ತೆ ತಗುಲಿದೆ. ವ್ಯಾಕ್ಸಿನ್ ನ ಪರಿಣಾಮ ಪ್ರತಿಶತ ೫೦ ರಷ್ಟು ಮಾತ್ರವಿದೆಯೆಂಬ ಕಾರಣಕ್ಕೆ ಈಗಾಗಲೇ ಎರಡು ಡೋಸ್ ವ್ಯಾಕ್ಸಿನ್ ಪಡೆದವರಿಗೆ ಮೂರನೆಯ ಡೋಸ್ ನೀಡಲು ನಿರ್ಧರಿಸಲಾಗಿದೆ.
ಇದೀಗ ಯು.ಎ.ಇ ದೇಶವು ಇದುವರೆಗೂ ಸೈನೋಫಾರ್ಮ್ ವ್ಯಾಕ್ಸಿನ್ ಪಡೆಯದವರೆಗೆ ಫೈಝರ್ ವ್ಯಾಕ್ಸಿನ್ ನೀಡಲು ತೀರ್ಮಾನಿಸಿದೆ. ಇಷ್ಟಾಗಿಯೂ ಉಳಿದ ವ್ಯಾಕ್ಸಿನ್ ಗಳಿಗೆ ನೀಡಿರುವ ತುರ್ತು ಬಳಕೆಗೆ ಅನುಮತಿಯನ್ನು ಸೈನೋ ಫಾರ್ಮ್ ಗೂ ಚೀನಾ ನೀಡಿದೆ.ತನ್ನ ದೇಶದಲ್ಲಿನ ಬಳಕೆಗೆ ಚೀನಾ ಅನುಮತಿಯನ್ನು ನೀಡಿದ ನಾಲ್ಕೈ ತಿಂಗಳಿಗೆ ವಿಶ್ವ ಸ್ವಾಸ್ತ್ಯ ಸಂಸ್ಥೆಯೂ ಅದಕ್ಕೆ ಪರವಾನಗಿ ಕೊಟ್ಟಿದೆ.

ಚೀನಾ ತನ್ನದೇ ದೇಶದಲ್ಲಿ ವ್ಯಾಕ್ಸಿನ್ ಗಳ ಕುರಿತು ಟೀಕೆಯನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಗಿದೆ.ಅಲ್ಲಿನ ಸೈನೋಫಾರ್ಮ್ ವ್ಯಾಕ್ಸಿನ್ ಸರ್ಕಾರಿ ಸಂಸ್ಥೆಯೊಂದರ ಉತ್ಪಾದನೆಯಾದರೆ, ಸೈನೊವ್ಯಾಕ್ ಎಂಬುದು ಖಾಸಗಿ ಕಂಪನಿಯೊಂದು ರೂಪಿಸಿದ ಕೋವಿಡ್ ೧೯ ವ್ಯಾಕ್ಸಿನ್. ಸೈನೊವ್ಯಾಕ್ ನ ಪರಿಣಾಮಕಾರಿ ಸೂಚ್ಯಂಕ ಕೇವಲ ೫೬-೬೫ % ಎಂದು ಪ್ರತಿಷ್ಠಿತ ವಿಜ್ಞಾನ ಜರ್ನಲ್ ಗಳು ದಾಖಲಿಸಿವೆ. ಆದರೂ ಈ ವ್ಯಾಕ್ಸಿನ್ ಅನ್ನು ಸ್ಥಳೀಯವಾಗಿ ಬಳುಸುವುದರ ಜೊತೆಗೆ ಹತ್ತಾರು ರಾಷ್ಟ್ರಗಳಿಗೆ ಚೀನಾ ರಫ್ತು ಮಾಡುತ್ತಿದೆ. ಚೀನಾ ದೇಶದ ಔಷಧ ನಿಯಂತ್ರಣ ಸಂಸ್ಥೆ ಸೆಂಟರ್ ಫ಼ಾರ್ ಡಿಸೀಸ್ ಕಂಟ್ರೋಲ್ ನ ಮುಖ್ಯಸ್ಥರಾದ ಗಾವೋ ಫು ಅವರು ಕಳೆದ ತಿಂಗಳು ಕೋವಿಡ್ ೧೯ ರ ಸಮರ್ಥ ನಿರ್ವಹಣೆಗೆ ಇವೆರಡೂ ವ್ಯಾಕ್ಸಿನ್ ಗಳ ಒಂದೊಂದು ಡೋಸ್ ನೀಡಿದರೆ ಪರಿಣಾಮಕಾರಿ ಅಥವಾ ಒಂದೇ ವ್ಯಾಕ್ಸಿನ್ ನ ಎರಡು ಡೋಸ್ ಗಳನ್ನೂ ಕೊಟ್ಟಿದ್ದರೆ ಮತ್ತೊಂದು ಬೂಸ್ಟರ್ ಡೋಸ್ ನ ಅವಶ್ಯಕತೆ ಬೀಳಬಹುದು ಎಂಬ ಬಹಿರಂಗ ಹೇಳಿಕೆಯನ್ನು ನೀಡಿದ್ದರು. ಎಂದಿನಂತೆ ಚೀನಾ ಈ ವಿವಾದವನ್ನು ತಣ್ಣಗಾಗಿಸಿತು.ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ವಿವಾದದಿಂದ ನುಣುಚಿಕೊಂಡರು.
ವ್ಯಾಕ್ಸಿನ್ ನ ಬಳಕೆಗೆ ವಿಶ್ವ ಸ್ವಾಸ್ತ್ಯ ಸಂಸ್ಥೆಯ ಅನುಮೋದನೆ ಸಿಗದಿದ್ದರೆ ಬೇರೆ ದೇಶಗಳಿಗೆ ಆ ವ್ಯಾಕ್ಸಿನ್ ಬಗ್ಗೆ ವಿಶ್ವಾಸ ಮೂಡುವುದಿಲ್ಲ.ವಿಶ್ವ ಸಂಸ್ಥೆ ಬೆಂಬಲದ ಕೊನ್ಯಾಕ್ಸ್ ಕಾರ್ಯಕ್ರಮದಲ್ಲಿ ಅಂಥ ವ್ಯಾಕ್ಸಿನ್ ಗಳು ಸೇರ್ಪಡೆಯಾಗುವುದಿಲ್ಲ.ಮುಂದಿನ ದಿನಗಳಲ್ಲಿ ಮತ್ತೊಂದು ದೇಶವನ್ನು ಪ್ರವೇಶಿಸಲು ಪಾಸ್ ಪೋರ್ಟ್ ವೀಸಾ ಜತೆಗೆ ವಿಶ್ವ ಸ್ವಾಸ್ತ್ಯ ಸಂಸ್ಥೆ ಮಾನ್ಯ ಮಾಡಿದ ವ್ಯಾಕ್ಸಿನ್ ಪಡೆದಿರುವ ಕುರಹಾದ ಡಿಜಿಟಲ್ ಸರ್ಟಿಫಿಕೇಟ್ ಗಳು ಬೇಕಾಗುವುದು.ಆಗ ಭಾರತದ ಕೋವ್ಯಾಕ್ಸಿನ್ ಪಡೆವರಿಗೆ ಪ್ರವಾಸ ಮಾಡಲು ತೊಂದರೆಯಾಗಬಹುದು.ಇದನ್ನು ಮನಗಂಡಿರುವ ಚೀನಾ ತನ್ನ ತೆಕ್ಕೆಯಲ್ಲೇ ಇರುವ ವಿಶ್ವ ಸ್ವಾಸ್ತ್ಯ ಸಂಸ್ಥೆಯಿಂದ ಕೋವ್ಯಾಕ್ಸಿನ್ ನ ತುರ್ತು ಬಳಕೆ ಪರವಾನಗಿ ಪಡೆಯಲು ಅಗತ್ಯ ಸಹಕಾರ ನೀಡಲು ಭಾರತದ ವಿದೇಶಾಂಗ ಮಂತ್ರಾಲಯ ಮುಂದಾಗಿದೆ.
ಏತನ್ಮಧ್ಯೆ, ವಿಶ್ವ ಸ್ವಾಸ್ತ್ಯ ಸಂಸ್ಥೆ ಅನುಮೋದಿಸಿದ ವ್ಯಾಕ್ಸಿನ್ ಗಳನ್ನಷ್ಟೇ ತಾವು ಖರೀದಿಸುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಇತ್ತ ಅಮೇರಿಕಾದ ಮಾಡೆರ್ನಾಕಂಪನಿಯು ಪಂಜಾಬ್ ಹಾಗೂ ದೆಹಲಿ ಸರ್ಕಾರಗಳ ವ್ಯಾಕ್ಸಿನ್ ಬೇಡಿಯನ್ನು ಮಾನ್ಯ ಮಾಡದೇ, ಇಂಥ ರಫ್ತುಗಳ ವಿಷಯದಲ್ಲಿ ತಾನು ಕೇವಲ ಕೇಂದ್ರ ಸರ್ಕಾರದೊಂದಿಗೆ ಮಾತ್ರ ವಹಿವಾಟು ನಡೆಸುತ್ತೇನೆಂದಿದೆ.ಇದೇ ಉತ್ತರವನ್ನು ಫೈಝರ್ ಸಹ ದೆಹಲಿ ಸರ್ಕಾರಕ್ಕೆ ನೀಡಿದೆ. ಒಟ್ಟಿನಲ್ಲಿ ಕೋವಿಡ್ ೧೯ ವ್ಯಾಕ್ಸಿನ್ ಗಳು ರಾಷ್ಟ್ರ -ರಾಷ್ಟ್ರಗಳ ಹಾಗು ಕೇಂದ್ರ ರಾಜ್ಯಗಳ ನಡುವಿನ ರಾಜಕೀಯ ದಾಳಗಳಾಗಿ ಬಳಕೆಯಾಗುತ್ತಿವೆ.
- ಸುಧೀಂದ್ರ ಹಾಲ್ದೊಡ್ಡೇರಿ (ಹಿರಿಯ ಲೇಖಕರು, ವಿಜ್ಞಾನಿಗಳು)
