ಭಾರತೀಯ ವಿದೇಶಾಂಗ ಸೇವೆಗೆ ಸೇರಿದ ಮೊದಲ ಮಹಿಳೆ ಮತ್ತು ಕರ್ನಾಟಕದ ಹೆಮ್ಮೆಯ ಮಗಳು ಚೋನಿರ ಬೆಳ್ಯಪ್ಪ ಮುತ್ತಮ್ಮ. “ನನಗೆ ಗುಂಡು ಹೊಡೆದರೂ ಭಾರತ ಬಿಟ್ಟು ಬೇರೆಡೆ ನೆಲೆ ನಿಲ್ಲುವುದಿಲ್ಲ” ಎಂದಿದ್ದ ಮಹಾನ್ ಸ್ವಾಭಿಮಾನಿ ಕುರಿತು ಎನ್.ವಿ.ರಘುರಾಂ ಅವರು ಬರೆದ ಲೇಖನವನೊಮ್ಮೆ ಓದಿ…
ಭಾರತ ವಿದೇಶಾಂಗ ಸೇವೆ(IFS)ಯಲ್ಲಿ ಕೆಲಸ ಮಾಡುವುದು ಅತ್ಯಂತ Glamorous ಎಂದು ಈಗ ಹೆಸರು ತೆಗೆದುಕೊಂಡಿದೆ. ಆದರೆ ಮೊದಲು ಮಹಿಳೆಯರು ಈ ಸೇವೆ ಸೇರಲು ಬಯಸಿದರೆ ಬಹಳ ಜನ ಪ್ರೋತ್ಸಾಹ ಕೊಡುತ್ತಿರಲಿಲ್ಲ! ಸರ್ಕಾರ ಕೂಡ ಮಹಿಳೆಯರ ಪರವಾಗಿ ಇರಲಿಲ್ಲ!. ಈ ಸೇವೆಗೆ ಸೇರಿ ಮದುವೆ ಆಗ ಬೇಕಾದರೆ ಕೆಲಸ ಬಿಡಬೇಕು ಎಂದು ಕೂಡ ಶರತ್ತನ್ನು ಸರ್ಕಾರವೇ ಹಾಕುತ್ತಿತ್ತು ಎಂದರೆ ಈಗ ನಂಬಲು ಕಷ್ಟ ಆಗುತ್ತದೆ. ಅಃತಹ ಸಮಯದಲ್ಲಿ ಕೊಡಗಿನ ಮುತ್ತಮ್ಮ ಭಾರತದ ವಿದೇಶಾಂಗ ಸೇವೆಗೆ ಸೇರಿದ ಪ್ರಥಮ ಮಹಿಳೆ.
ಮುತ್ತಮ್ಮರವರು ಜನವರಿ ೨೪, ೧೯೨೪ ರಲ್ಲಿ ಕೊಡಗಿನ ವಿರಾಜಪೇಟೆಯಲ್ಲಿ ಹುಟ್ಟಿದರು. ಅರಣ್ಯದ ಅಧಿಕಾರಿಯಾಗಿದ್ದ ಇವರ ತಂದೆ ಇವರಿಗೆ ಒಂಬತ್ತು ವರ್ಷ ಇರುವಾಗಲೇ ಮರಣ ಹೊಂದಿದರು. ಅವರ ತಾಯಿ ವಿಧ್ಯಾಭ್ಯಾಸಕ್ಕೆ ಕೊಟ್ಟ ಮಹತ್ವದಿಂದ St.Joseph’s Girl School, ಮಡಿಕೇರಿಯಲ್ಲಿ ಸ್ಕೂಲ್ ಮುಗಿಸಿ, ಮದ್ರಾಸ್ ಗೆ ಹೋಗಿ ಇಂಗ್ಲಿಷ್ ಸಾಹಿತ್ಯದಲ್ಲಿ ಮದ್ರಾಸ್ ನ ಪ್ರೆಸಿಡೆನ್ಸಿ ಕಾಲೇಜ್ನಿಂದ ಎಮ್.ಎ. ಮಾಡಿದರು.

ಫೋಟೋ ಕೃಪೆ : BX
೧೯೪೮ ರಲ್ಲಿ ಯು.ಪಿ.ಎಸ್.ಸಿ. ಪರೀಕ್ಷೆ ಪಾಸು ಮಾಡಿದ ಪ್ರಥಮ ಮಹಿಳೆ ಮುತ್ತಮ್ಮ. Interview ನಲ್ಲಿ ಇವರು ವಿದೇಶಾಂಗ ಸೇವೆ ಆಯ್ಕೆ ಮಾಡಿಕೊಂಡಿರುವುದನ್ನು ಅಲ್ಲಿಯ ಅಧಿಕಾರಿಗಳು ಬೇಡ ಎಂದರೂ ಇವರು ಒಪ್ಪಲಿಲ್ಲ. ಇವರಿಗೆ interview ನಲ್ಲಿ ಅತ್ಯಂತ ಕಡಿಮೆ ಅಂಕಗಳನ್ನು ಕೊಡಲಾಯಿತು. ಆದರೂ ವಿದೇಶಾಂಗ ಸೇವೆಯಲ್ಲಿ ಪ್ರಥಮ ಸ್ಥಾನದಲ್ಲಿ ಆಯ್ಕೆ ಆದರು. ಆದರೆ ಅವರು ೧೯೪೯ ರಲ್ಲಿ ಕೆಲಸಕ್ಕೆ ಸೇರುವಾಗ ಸರ್ಕಾರ ಇವರ ಬಳಿ ಮದುವೆ ಆದರೆ ರಾಜೀನಾಮೆ ಕೊಡಬೇಕು ಎನ್ನುವ ಮುಚ್ಚಳಿಕೆ ಬರೆಸಿಕೊಂಡು ಕೆಲಸ ಕೊಟ್ಟಿತು. ಇವರು ಬರೆದ “Slain by the System” ಪುಸ್ತಕದಲ್ಲಿ ಇದನ್ನು ಬರೆದಿದ್ದಾರೆ.
ಇವರು ಪ್ರಥಮ ಬಾರಿ ಪ್ಯಾರಿಸ್ ಗೆ ರಾಜತಾಂತ್ರಿಕರಾಗಿ ಹೋದರು. ಅಲ್ಲಿ ಕೂಡ ಮಹಿಳಾ ರಾಜತಾಂತ್ರಿಕ ಅಧಿಕಾರಿಗಳು ಪಡುವ ಕಷ್ಟಗಳನ್ನು ಕಂಡರು. ರಂಗೂನ್, ಲಂಡನ್ ಗಳಲ್ಲಿ ಕೆಲಸಮಾಡಿದರು. ೧೯೭೯ ರಲ್ಲಿ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಹುದ್ದೆಯ ಆಯ್ಕೆ ಪ್ರಶ್ನೆ ಬಂದಾಗ ಇವರು ಮಹಿಳೆ ಎಂದು ಮತ್ತೆ ಪರಿಗಣಿಸಲಿಲ್ಲ. ಆಗ ಇವರು ಕೋರ್ಟ್ ಮೆಟ್ಟಿಲು ಹತ್ತಿದರು. ಆಗ ಎಚ್ಚೆತ್ತುಕೊಂಡ ಸರ್ಕಾರ ಇವರಿಗೆ ಬಡ್ತಿ ನೀಡಿತು!
ಮಹಿಳೆ ಅಧಿಕಾರಿಗಳು ಮದುವೆ ಆಗಬಾರದು ಎನ್ನುವ ವಿಷಯವನ್ನು ಕೂಡ ಕೋರ್ಟ್ನಲ್ಲಿ ಪ್ರಶ್ನೆ ಮಾಡಿದರು. ಅತ್ಯಂತ ಹೆಸರುವಾಸಿ ವಕೀಲರಾಗಿದ್ದ Soli Sorabjeeಯವರು ಸರ್ಕಾರದ ಪರವಾಗಿ ವಾದ ಮಾಡಿ ಮಹಿಳಾ “ಅಧಿಕಾರಿಗಳ ಬಳಿ ವಿಷಯದ ಗೌಪ್ಯತೆ ಕಾಪಾಡಲು ಕಷ್ಟ” ಎಂದು ಹೇಳಿದ್ದರು! ನಂತರ ಘನತೆವೆತ್ತ ನ್ಯಾಯಾಧೀಶರಾದ ಶ್ರೀ ಕೃಷ್ಣ ಐಯ್ಯರ್ ಸರ್ಕಾರದ ವಾದವನ್ನು ತಿರಸ್ಕರಿಸಿ, ಬಹುಶಃ ಒಂದು ಮೈಲಿಗಲ್ಲು ಆಗುವಂತಹ ತೀರ್ಮಾನ ಕೊಟ್ಟು ಮಹಿಳೆಯರ ವಿರುದ್ಧ ಎಲ್ಲ ತರಹದ ತಾರತಮ್ಯವನ್ನು ತೆಗೆದು ಹಾಕಲು ಆದೇಶ ಕೊಟ್ಟರು. ಈ ತೀರ್ಮಾನದಿಂದ ಅಖಿಲ ಭಾರತೀಯ ಸೇವೆಯಲ್ಲಿ ಮಹಿಳೆಯರ ವಿರುದ್ಧ ತಾರತಮ್ಯ ತೆಗದುಹಾಕಿ ಅಮೂಲಾಗ್ರ ಬದಲಾವಣೆ ತರಲಾಯಿತು.

ಫೋಟೋ ಕೃಪೆ : namma karnataka
ಭಾರತದ ಪ್ರಥಮ ಮಹಿಳಾ ರಾಯಭಾರಿ ಆಗಿದ್ದ ಇವರು ೩೨ ವರ್ಷಗಳ ಸೇವೆಯಿಂದ ೧೯೮೨ ರಲ್ಲಿ ಸೇವೆಯಿಂದ ನಿವೃತ್ತಿ ಆದರು.
ನಿವೃತ್ತಿ ನಂತರ ಸ್ವೀಡನ್ ಪ್ರಧಾನಿ ಶ್ರೀ ಪಾಲ್ಮೆಯವರು ಸ್ಥಾಪಿಸಿದ ನಿಶ್ಸ್ಯತ್ರೀಕರಣ ಮತ್ತು ರಕ್ಷಣೆ ಕಮಿಶನ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಕೊಡವರ ಅಡಿಗೆ ಬಗ್ಗೆ ಇವರು ಪುಸ್ತಕ ಬರೆದಿದ್ದಾರೆ. ದೆಹಲಿಯಲ್ಲಿ ಅವರ ೧೫ ಎಕರೆ ಜಾಗವನ್ನು Missionaries Of Charity ಯವರಿಗೆ ದಾನ ಮಾಡಿ, ಅಲ್ಲಿ ವಿಶೇಷ ಚೇತನರಿಗೆ ಸ್ಕೂಲ್ ಕಟ್ಟಲು ಕಾರಣರಾದರು. ಅವರು ಓದಿದ ಗೋಣಿಕೊಪ್ಪಲು ಸ್ಕೂಲ್ ಗೆ ಲೈಬ್ರರಿಗೆ ಸಹಾಯ ಮತ್ತು ಅವರು ಹುಟ್ಟಿದ ಊರಿನಲ್ಲಿ Business Management College ಕಟ್ಟಡ ಕಟ್ಟಲು ಸಹಾಯ ಮಾಡಿದ್ದಾರೆ. ಅವರು ತಮ್ಮ ೮೫ ನೇಯ ವಯಸ್ಸಿನಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
“ಮೊದಲ ಮಹಿಳಾ ರಾಯಭಾರಿ” ಎಂದು ಯಾರದ್ರು ಪರಿಚಯ ಮಾಡಿಸಿದಿರಿ, “ಯಾರದ್ರು ಒಬ್ಬರು ಆಗಬೇಕಿತ್ತು, ನಾನು ಆದೆ” ಎಂದು ಹೇಳಿ ಸರಳತೆ ತೋರುವ ಇವರು ಕಛೇರಿಯಲ್ಲಿ ಕೂಡ ಸರಳತೆಯ ನಡೆವಳಿಕೆ ಅಳವಡಿಸಿಕೊಂಡಿದ್ದರು. ಈ ದಿನ ಮಹಿಳೆಯರ ಅನುಭವಿಸುವ ತಾರತಮ್ಯ ಕಡಿಮೆ ಆಗಿದ್ದರೆ, ಅದಕ್ಕೆ ಇಂತಹ ಮಹಿಳೆಯರು ಕಾರಣಕರ್ತರಾಗಿದ್ದಾರೆ.
ಇಂತಹ ಮಹಿಳಾ ಸಾಧಕಿ ನಮ್ಮ ಕರ್ನಾಟಕದ ಹೆಮ್ಮೆ.
- ಎನ್.ವಿ.ರಘುರಾಂ. (ನಿವೃತ್ತ ಅಧೀಕ್ಷಕ ಅಭಿಯಂತರ (ವಿದ್ಯುತ್ ), ಕ.ವಿ.ನಿ.ನಿ, ಬೆಂಗಳೂರು)
