‘ದಾರಿ ದೀವಿಗೆ’ ಕೃತಿ ಪರಿಚಯ : ಮಲ್ಲಿಕಾರ್ಜುನ ಶೆಲ್ಲಿಕೇರಿ

ಜೀವನ ಪ್ರೀತಿ, ಆಡಂಬರರಹಿತ ಜೀವನ, ನೆಮ್ಮದಿಯುತ ಬಾಳು, ಆರೋಗ್ಯವಂತ ಸಮಾಜದ ನಿರ್ಮಾಣದ ಹಾದಿಗೆ ದಾರಿದೀಪದಂತೆ ‘ದಾರಿ ದೀವಿಗೆ’ ತೋರುತ್ತದೆ . ನಾಗೇಶ ಜೆ ನಾಯಕ ಅವರ ಈ ಕೃತಿಯ ಕುರಿತು ಕತೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….

ಪುಸ್ತಕ : ದಾರಿ ದೀವಿಗೆ
ಲೇಖಕರು : ನಾಗೇಶ ಜೆ ನಾಯಕ
ಪ್ರಕಾರ : ಬಾಳಿಗೆ ಬೆಳಕಾಗುವ ದೀಪಗಳು

ಬದುಕು ನಾವೆಣಿಸಿದಂತೆ ಎಂದೂ ಇರದು. ಸುಖವನ್ನು ನಿರೀಕ್ಷಿಸುತ್ತ ಕುಳಿತವರಿಗೆ ಧುತ್ತೆಂದು ಭರಿಸಲಾಗದ ಕಷ್ಟ ಬಂದೊಡನೆ ಅದನ್ನು ಎದುರಿಸುವ ಧೈರ್ಯ ಬಾರದೆ ಏನೆಲ್ಲಾ ಆಲೋಚನೆಗಳು ಮನುಷ್ಯನ ಮನಸ್ಸಿನಲ್ಲಿ ಸುಳಿದಾಡುತ್ತವೆ ಎಂಬುವುದು ಎಲ್ಲರಿಗೂ ತಿಳಿದ ಸತ್ಯವೇ. ಅಂತಹ ಸಂದರ್ಭಗಳಲ್ಲಿ ಆಸರೆ, ಸಹಾಯ ಬಯಸಿದಾಗ ಅದು ಯಾರಿಂದಲೂ ಸಿಗದೆ ಇನ್ನಷ್ಟು ಹತಾಶೆ ಮೂಡುವಂತಹ ಪ್ರಸಂಗಗಳು ಅನೇಕ. ಆದರೆ, ಅಂತಹ ವೇಳೆಯಲ್ಲಿ ನಮಗೆ ಜೊತೆಯಾಗಿ ಬರುವುದು ಆತ್ಮವಿಶ್ವಾಸ ಒಂದೇ. ಅಂತಹ ಘಳಿಗೆಯಲ್ಲೂ ನಮ್ಮಲ್ಲಿ ಮನೋಬಲವನ್ನು ಹೆಚ್ಚಿಸಿ ದಾರಿ ತೋರುವ ಮಣಿದೀಪವೆಂದರೆ’ ದಾರಿದೀಪ’ ದಂತಹ ಪುಸ್ತಕಗಳ ಬರಹಗಳು. ಎಂತಹ ಸಂದರ್ಭದಲ್ಲೂ ಜೊತೆಯಾಗಿ ಕೈ ಹಿಡಿದು ಕರೆದುಕೊಂಡು ಸಾಗುವ ಏಕಮಾತ್ರ ಸಾಧನಗಳೆಂದರೆ ಇಂತಹ ಲೇಖನಗಳು.

ಯಾವುದೇ ಎದೆ ಝಲ್ಲೇನಿಸುವಂತಹ ಘಟನೆಗಳು ಬದುಕಿನಲ್ಲಿ ಜರುಗಿದರೂ ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿದೋಣಿ ಎನ್ನುವಂತಹ ಭರವಸೆ ತುಂಬುವ ಕವಿ ಸಾಲುಗಳು ಬದುಕನ್ನು ಸಹನೀಯಗೊಳಿಸುತ್ತವೆ. ಇಲ್ಲಿನ ಅನೇಕ ಲೇಖನಗಳು ಬಾಳಿನಲ್ಲಿ ಈ ಕಾರ್ಯವನ್ನು ಮಾಡುತ್ತವೆ.

“ಬಾಳಕದನದಲ್ಲಿ ಭರವಸೆಗಳು ಬೇಕು
ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು,
ಜೀವರಾಸದಿಯಲ್ಲಿ ಮಾನವನಿಗೆ ಆದ್ಯತೆ
ನಾವೇ ಮೂಢರಾದರೆ ಜ್ಞಾನಕೆಲ್ಲಿ ಪೂಜ್ಯತೆ,
ಇಲ್ಲಿ ಈಸಬೇಕು, ಇದ್ದು ಜಯಿಸಬೇಕು,
ನಾಗರೀಕರಾದ ಮೇಲೆ ಸುಗುಣರಾಗಬೇಕು”

ಎಂಬ ಅಣ್ಣಾವ್ರ ಗೀತೆಯಂತೆ ಬದುಕಿಗೆ ಮಾರ್ಗದರ್ಶಿಯಂತೆ ತೋರುತ್ತವೆ ಇಲ್ಲಿನ ಲೇಖನಗಳು. ನಮ್ಮಲ್ಲಿರುವ ಅನೇಕ ಇತ್ಯಾತ್ಮಕ ಗುಣಗಳನ್ನು ಧನಾತ್ಮಕವನ್ನಾಗಿ ಯಾವ ರೀತಿ ಮಾರ್ಪಡಿಸಿಕೊಳ್ಳಬೇಕೆಂಬ ಇಲ್ಲಿನ ಅನೇಕ ಲೇಖನಗಳು ಪುಸ್ತಕದ ತೂಕವನ್ನು ಹೆಚ್ಚಿಸುವಂತೆ ಮಾಡಿವೆ. ಉದಾ..ಮರೆವು. ಕೊಳ್ಳುಬಾಕ ಸಂಸ್ಕೃತಿ ಬದಲಾಗಿ ಇರುವುದರಲ್ಲಿ ತೃಪ್ತ ಮನೋಭಾವನೆ ಇರಬೇಕೆನ್ನುವ ಬರಹ.

ದುಡ್ಡು, ಕಾಸು ಎಂದು ಬೆಂಬತ್ತುವ ಮನುಷ್ಯ ತನ್ನ ಆರೋಗ್ಯದ ಬಗ್ಗೆ ನಿಷ್ಕಾಳಜಿ ತೋರಿದಾಗ ಆಗುವ ಫಲಿತಾಂಶದಂತಹ ಮೌಲಿಕವಾದ ಇಲ್ಲಿನ ಲೇಖನಗಳು ಪ್ರತಿಯೊಬ್ಬನ ಮನೋಭಿತ್ತಿಯಲ್ಲಿ ಸಕಾರಾತ್ಮಕ ಚಿತ್ರಗಳನ್ನು ಬಿಡಿಸುವಲ್ಲಿ ಯಶಸ್ವಿಯಾಗಿವೆ.

ಕೆಲವೊಮ್ಮೆ ಅತಿಯಾದ ದುರಾಸೆಯಿಂದ ಜೀವನವನ್ನು ನರಕವನ್ನಾಗಿ ಮಾಡಿಕೊಳ್ಳುವಂತಹ ಸ್ವಯಂಕೃತ ಅಪರಾಧಕ್ಕೆ ದೊಡ್ಡ ಬೆಲೆ ತೆತ್ತಬೇಕಾಗುತ್ತದೆ. ಮದ, ಮತ್ಸರ,ಕಾಮ,ಲೋಭ, ಈರ್ಷೇಯಂತಹ ಗುಣಗಳಿಂದ ದೂರವಿದ್ದಾಗಲೇ ಬದುಕು ಸಸಾರವಾಗಿ ಸಾಗುತ್ತದೆಯೆಂಬುವುದು ಮತ್ತು ಸುಂದರ ಬದುಕಿಗೆ ಇಲ್ಲಿಯ ಲೇಖನಗಳು ಹೆದ್ದಾರಿಯಂತೆ ತೋರುತ್ತವೆ. ಜೀವನಪ್ರೀತಿ, ಆಡಂಬರರಹಿತ ಜೀವನ, ನೆಮ್ಮದಿಯುತ ಬಾಳು, ಆರೋಗ್ಯವಂತ ಸಮಾಜದ ನಿರ್ಮಾಣದ ಹಾದಿಗೆ ದಾರಿದೀಪದಂತೆ ತೋರುತ್ತದೆ ಈ ಹೊತ್ತಿಗೆ.

ಜೊತೆಗೆ ಈ ಪುಸ್ತಕ ತುಂಬಾ ಸೂಕ್ತವೆನಿಸುತ್ತದೆ, ವೈರುಧ್ಯವೇ ತುಂಬಿರುವ ಈ ಹೊತ್ತಿಗೆ. ಅಭಿನಂದನೆಗಳು ನಾಗೇಶರವರಿಗೆ…


  • ಮಲ್ಲಿಕಾರ್ಜುನ ಶೆಲ್ಲಿಕೇರಿ – ಕತೆಗಾರರು, ಕೆಎಸ್ಎ ಅಧಿಕಾರಿಗಳು, ಬಾಗಲಕೋಟೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading