ಸಂಸ್ಕೃತಿ ಬೇರು ಎಲ್ಲಿದೆ? –  ಶಾರದಾ ಶ್ರಾವಣ ಸಿಂಗ್

 ಇಂದು ಹೆಚ್ಚುತ್ತಿರುವ ಯುವ ಜನರ ಅಪರಾಧಗಳಿಗೆ ಕಾರಣಗಳೇನು? ಇಂದು ವಿಕೃತ ಮನಸ್ಸುಗಳ ಅಟ್ಟಹಾಸಗಳಿಗೆ ಕಾರಣಗಳೇನು? ಇಂದು ಕುಟುಂಬಗಳಲ್ಲಿ ಸಂಬಂಧಗಳು ‘ಗಟ್ಟಿತನ’ ಕಳೆದುಕೊಳ್ಳುತ್ತಿರುವುದಕ್ಕೆ ಕಾರಣಗಳೇನು? ಇಂತಹ ಅನೇಕ ಪ್ರಶ್ನೋತ್ತರ ಪ್ರಬುದ್ಧ ಮನಸ್ಸುಗಳನ್ನು ಚಿಂತನೆಗಳಿಗೆ ಒಳಪಡಿಸುತ್ತವೆ, ಕಾರಣಗಳನ್ನು ಹುಡುಕುತ್ತಾ ಮೂಲಕ್ಕೆ ಹೋದಂತೆ  ಅದು ನಮ್ಮ ಸಂಸ್ಕೃತಿಗೆ ಬಂದು ನಿಲ್ಲುತ್ತದೆ. –  ಶಾರದಾ ಶ್ರಾವಣಸಿಂಗ್ ರಜಪೂತ ಅವರ ಒಂದು ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…

ಹಾಗಾದರೆ ಈ ಸಂಸ್ಕೃತಿ ಬೇರು ಎಲ್ಲಿದೆ ? ಎಂದು ಹುಡುಕಾಡಿದಾಗ ಅದು ಸಿಗುವುದು ಮನೆಯ ತೊಟ್ಟಿಲಿನಿಂದಲೇ ಎನ್ನುವುದು ಎಲ್ಲರೂ ಒಪ್ಪಿಕೊಳ್ಳಬಹುದಾದ ಸತ್ಯ! “ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರು ” ಎನ್ನುವಂತೆ ಸಂಸ್ಕಾರದ ಪಾಠ ಮನೆಯಿಂದಲೇ ಪ್ರಾರಂಭವಾಗಬೇಕು. ಯಾಕೆಂದರೆ ಮಗುವಿನ ಮನಸ್ಸು ಹಸಿಮಣ್ಣು ಇದ್ದಂತೆ. ಅದಕ್ಕೆ ಯಾವ ರೂಪವಾದರೂ ಕೊಡಲು ಸಶಕ್ತವಾಗಿರುತ್ತದೆ. ಹಾಗಾಗಿ ಅದಕ್ಕೆ ಸರಿಯಾದ ಆಕಾರ ಕೊಡುವ ಜವಾಬ್ದಾರಿ ಪ್ರಥಮವಾಗಿ ತಂದೆ ತಾಯಿಯರದು ಆಗಿರುತ್ತದೆ.

ಈಗಂತೂ ಅವಿಭಕ್ತ ಕುಟುಂಬಗಳಲ್ಲಿ ಅಜ್ಜ ಅಜ್ಜಿಯ ಮಮಕಾರ, ಬಾಂಧವ್ಯ ಕಾಣದೇ ಬೆಳೆಯುವ ಮಕ್ಕಳೇ ಹೆಚ್ಚು. ಕೂಡು ಕುಟುಂಬದ ಪ್ರೀತಿ, ಅನ್ಯೋನ್ಯತೆ, ಬಾಂಧವ್ಯ, ಹುಸಿಜಗಳ, ಹುಸಿಕೋಪ, ರಮಿಸುವಿಕೆ, ಇವೆಲ್ಲ ವಿಭಕ್ತ ಕುಟುಂಬಗಳ ಮಕ್ಕಳು ಕಾಣಲು ಸಾಧ್ಯವೇ? ಅಜ್ಜ – ಅಜ್ಜಿ ಪೌರಾಣಿಕ ಕಥೆಗಳು, ನೀತಿ ಕಥೆಗಳು ಹೇಳುವ ನೀತಿ ಎಲ್ಲಿಂದ ಸಿಗಲು ಸಾಧ್ಯ? ಉದ್ಯೋಗಸ್ಥ ತಂದೆ -ತಾಯಿ ಇದ್ದರಂತೂ ಅವರ ಪ್ರೀತಿ, ಆರೈಕೆ ಸಿಗದೇ ಬೆಳೆಯುವ ಮಕ್ಕಳಿಗೆ ಸಂಸ್ಕಾರದ ಪಾಠ ಎಲ್ಲಿ ಸಿಗಲು ಸಾಧ್ಯ?

ಈ ನಿಟ್ಟಿನಲ್ಲಿ ನಾವು ಚಿಂತನೆಗೈದಾಗ ಇಂದಿನ ಮಕ್ಕಳು ಸಂಸ್ಕಾರ ಗುಣ ಮೈಗೂಡಿಸಿಕೊಳ್ಳುವಲ್ಲಿ ವಂಚಿತರಾಗುತ್ತಿದ್ದಾರೆ. ಈ ಸಂಸ್ಕಾರದಿಂದ ಸಂಸ್ಕೃತಿ ರೂಪುಗೊಳ್ಳುತ್ತದೆ. ಈ ಸಂಸ್ಕಾರ ಎನ್ನುವುದು ಒಂದು ದಿನದಲ್ಲಿ ಕಲಿತುಕೊಳ್ಳುವಂತದಲ್ಲ.ಒಂದು ಮನೆಯಲ್ಲಿ ನೋಡುವ,ಕೇಳುವ, ಅನುಭವಕ್ಕೆ ಒಳಪಡುವ ವಾತಾವರಣದಲ್ಲಿ ಮಕ್ಕಳಿಗೆ ಸಂಸ್ಕಾರದ ಪ್ರಕ್ರಿಯೆಗೆ ಒಳಪಟ್ಟು, ಅವರ ವ್ಯಕ್ತಿತ್ವ ವಿಕಸನಗೊಳ್ಳುತ್ತಾ ಹೋಗುತ್ತದೆ.ಆದರೆ ದುರಂತವೆಂದರೆ ಇವತ್ತು ಹುಟ್ಟಿದ ಕೂಸುಗಳು ಮನೆ ತೊಟ್ಟಿಲು ಬಿಟ್ಟು ‘ಬೇಬಿ ಸಿಟ್ಟಿಂಗ್’ ಅಥವಾ ದಾದಿಯರ ಕೈಯಲ್ಲಿ ಬೆಳೆಯುವಾಗ ಅವುಗಳಿಗೆ ಎಲ್ಲಿ ಪ್ರೀತಿಯ ಬಾಂಧವ್ಯದ ಬೆಸುಗೆ ಬೆಸೆಯಬೇಕು ಅಲ್ಲವೇ? ಮನೆಯ ಸಂಸ್ಕಾರದ ಮಹತ್ವ ಹೇಗೆ ಆ ಮಕ್ಕಳಿಗೆ ಉಂಟಾಗಬೇಕು? ಅಲ್ಲವೇ?

” Culture is what we are, Civilization is what we use ” ಎನ್ನುವ ಆಂಗ್ಲ ಭಾಷೆಯಲ್ಲಿ ಹೇಳುವಂತೆ “ನಾಗರಿಕತೆಗೆ ಎಂಬುದು ನಾವು ಬಳಸುತ್ತೇವೆ ಎಂಬುದಾದರೆ ಸಂಸ್ಕೃತಿ ಅಥವಾ ಸಂಸ್ಕಾರ ನಾವು ಏನು ಎಂಬುದಾಗಿದೆ ” ನಾಗರಿಕರಾಗುವುದು ಸುಲಭ ಆದರೆ ಸಂಸ್ಕಾರಗೊಂಡು ಸುಸಂಸ್ಕೃತರಾಗುವುದು ಕಷ್ಟ.ಇದಕ್ಕೆ ಮನೆ, ಶಾಲೆ, ಸಮಾಜ ಮೂರು ಪ್ರಭಾವ ಬೀರುವ ಮಾರ್ಗವಾಗಿವೆ.

ಇಂದಿನ ಜೀವನದ ಪದ್ಧತಿಗಳು,ಜನರ ಮನೋಭಾವ, ಸಮಾಜದ ಧೋರಣೆಗಳು ಈ ಮೂರು ಇವತ್ತಿನ ನೆಲೆಯಲ್ಲಿ ಸ್ಪಂದಿಸುವ ಗುಣ ಕಳೆದುಕೊಂಡು ಬಿಟ್ಟಿವೆ ಕಂಪ್ಯೂಟರ್, ಅಂತರ್ಜಾಲ,  ಮೊಬೈಲ್ ಆಕರ್ಷಣೆಯಲ್ಲಿ ಮಕ್ಕಳು ತಮ್ಮದೇ ಆದ ಪ್ರಪಂಚದಲ್ಲಿ ಇವತ್ತು ಬದುಕುತ್ತಿದ್ದಾರೆ.ಮತ್ತೊಬ್ಬರು ಹೇಳಿದ್ದನ್ನು ಕೇಳುವ ಅಥವಾ ಇತರರಿಗೆ ಸ್ಪಂದಿಸುವ ಗುಣಗಳನ್ನು ಪಡೆಯದೇ ಮೌಲ್ಯಗಳ ಆಚೆ ಅವರ ಬದುಕು ನಿಂತು ಬಿಟ್ಟಿದೆ.

ಸಾಮಾಜಿಕ ಬದುಕಿಗೆ ಪೂರಕವಾಗಿ ಬದುಕುವ ಸಂಸ್ಕಾರಗಳನ್ನು ಇಂದು ನಾವು ಮಕ್ಕಳಿಗೆ ಕೊಡಲೇಬೇಕಾಗಿದೆ.ಇಲ್ಲವಾದರೆ ಸಾತ್ವಿಕವಲ್ಲದ ನಡತೆ,ಸಂಸ್ಕಾರಹೀನ ಸಮಾಜದ ಹಿಡಿತದಲ್ಲಿ ಒಳ್ಳೆಯದನ್ನು ಕಾಣುವುದಾದರೂ ಎಲ್ಲಿ? ಬೇವು ಬಿತ್ತಿ ಮಾವು ಬೇಡಿದರೆ ಸಿಗುವುದೇ? ವಿದ್ಯೆ ಮನುಷ್ಯನನ್ನು ಪರಿಪಕ್ವಗೊಳಿಸುತ್ತದೆ. ಇಂದಿನ ಶಿಕ್ಷಣದಲ್ಲಿ ಶಿಕ್ಷಣ ಕೇವಲ ಬದುಕಿಗಾಗಿ ಅಲ್ಲದೇ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಬೇಕು.ಅಂತಹ ಮೌಲ್ಯಗಳನ್ನು ಹೊಂದಿದ, ನೈತಿಕ ಹೊಣೆಯ ಜವಾಬ್ದಾರಿ ಹೊತ್ತು ನಿಲ್ಲಲು ಸಶಕ್ತ ಯುವ ಜನಾಂಗವನ್ನು ಇಂದು ಕಟ್ಟುವ ಶಿಕ್ಷಣ ಬೇಕಾಗಿದೆ. ಇದರಿಂದ ಯುವಜನಾಂಗಕ್ಕೆ ತನ್ನನ್ನು ತಾನು ಸಮಾಜದಲ್ಲಿ ಗುರುತಿಸಿಕೊಳ್ಳುವುದಕ್ಕೆ ಹಾಗೂ ಸಕಾರಾತ್ಮಕ ಧೋರಣೆಗಳ ಮುಖಾಂತರ ಗಟ್ಟಿ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ. ಈ ಕಾರ್ಯದಲ್ಲಿ ಪಾಲಕರು, ಶಿಕ್ಷಕರು ಮತ್ತು ಸಮಾಜದ ಪಾತ್ರ ತುಂಬಾ ಮಹತ್ವದ್ದಾಗಿದೆ ಎನ್ನುವುದು ಎಲ್ಲರೂ ಒಪ್ಪಿಕೊಳ್ಳಲೇ ಬೇಕಾಗಿದೆ.


  •  ಶಾರದಾ ಶ್ರಾವಣಸಿಂಗ್ ರಜಪೂತ – ಕೊಪ್ಪಳ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading