ಸ್ವಾಭಾವಿಕ ಹೆರಿಗೆ ಮತ್ತು ಸಿಸೇರಿಯನ್ ಹೆರಿಗೆಯ ಸಾಧಕ, ಬಾಧಕದ ಕುರಿತು ಲೇಖಕರಾದ ಸುದರ್ಶನ್ ಪ್ರಸಾದ್ ಅವರು ಬರೆದಿರುವ ಲೇಖನ ಬಹಳಷ್ಟು ಜನರಿಗೆ ಉಪಯುಕ್ತವಾಗಿದೆ, ತಪ್ಪದೆ ಮುಂದೆ ಓದಿ…
ಜೀವನದ ವಿವಿಧ ಹಂತಗಳಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ ಎಂಬುದು ಪ್ರತಿಯೊಬ್ಬರಿಗೂ ಅರಿವಿರುವ ವಿಷಯ. ಒಂದಿಷ್ಟು ನಿರ್ಧಾರಗಳು ತಕ್ಷಣಕ್ಕೆ ಫಲ ನೀಡಿದರೆ ಇನ್ನೊಂದಿಷ್ಟು ದೀರ್ಘಾವಧಿಯಲ್ಲಿ ಫಲ ನೀಡುವಂತವು. ಆದರೆ ಯಾವುದೇ ನಿರ್ಧಾರವಾದರೂ ಅದನ್ನು ನಿರ್ಧರಿಸುವ ಘಳಿಗೆ ಅತೀ ಮುಖ್ಯ. ಎಷ್ಟೋ ಬಾರಿ ಇಂತಹಾ ನಿರ್ಧಾರಗಳಿಗೆ ಅದೆಷ್ಟು ಪ್ರಾಮುಖ್ಯತೆ ಎಂದರೆ ಅವು ಜೀವ ಮತ್ತು ಜೀವನದ ಅಳಿವು ಉಳಿವಿನ ಪ್ರಶ್ನೆಯೂ ಆಗಿರುತ್ತವೆ.
ಇಷ್ಟೆಲ್ಲಾ ಪೀಠಿಕೆಯ ನಂತರ ವಾಸ್ತವ ವಿಚಾರಕ್ಕೆ ಬರುವುದಾದರೆ, ಇಂತಹ ಪ್ರಶ್ನೆ ಎದುರಾಗುವ ಒಂದು ಸಂದರ್ಭ ಮಗುವಿನ ಜನನ. ಆ ಕ್ಷಣ ವೈದ್ಯರಾದವರು ಯೋಚಿಸಿ ನಿರ್ಧರಿಸುವಷ್ಟೇ ಪ್ರಾಮುಖ್ಯತೆ ಮಗುವಿನ ಪೋಷಕರ ನಿರ್ಧಾರಕ್ಕೂ ಇರುತ್ತದೆ. ಅದರಲ್ಲೂ ಮುಖ್ಯವಾಗಿ ಸ್ವಾಭಾವಿಕ ಪ್ರಸವ ನಡೆಯಬೇಕೋ ಅಥವಾ ಸಿಸೇರಿಯನ್ ಹೆರಿಗೆಯೋ ಎಂಬುದು ಹಲವರನ್ನು ಕಾಡುವ ಪ್ರಶ್ನೆ. ಅಂತಿಮ ನಿರ್ಧಾರ ವೈದ್ಯರೇ ತೆಗೆದುಕೊಳ್ಳುತ್ತಾರಾದರೂ ಪೋಷಕರಿಗೆ ಎದುರಾಗುವ ಸವಾಲುಗಳನ್ನು ಸಹಾ ನಾವಿಲ್ಲಿ ಚರ್ಚಿಸಲೇ ಬೇಕು.
ಫೋಟೋ ಕೃಪೆ : google
ಸಾಮಾನ್ಯವಾಗಿ ಸಿಸೇರಿಯನ್ ಎಂದ ತಕ್ಷಣ ಅನೇಕ ಸಾಧಕ ಬಾಧಕಗಳು ಕಣ್ಮುಂದೆ ಬರುತ್ತವೆ. ಬಾಧಕಗಳನ್ನೇ ನೋಡುವುದಾದರೆ :
*ಮೊದಲನೆಯದಾಗಿ ಅದೊಂದು ಮೇಜರ್ ಸರ್ಜರಿಯಾಗಿದ್ದು ತಾಯಿಯ ದೇಹಸ್ಥಿತಿ ಮತ್ತು ನಂತರದ ಕಟ್ಟುನಿಟ್ಟಿನ ಆರೈಕೆ ಅತ್ಯಗತ್ಯ.
*ಗರ್ಭಕೋಶವನ್ನು ಛೇದಿಸುವ ಕಾರಣ ಭವಿಷ್ಯದಲ್ಲಿ ಮಗು ಹೊಂದುವ ಮತ್ತು ಆಗ ಸಿಸೇರಿಯನ್ ಸಾಧ್ಯತೆ ಹೆಚ್ಚಿರುವ ಬಗ್ಗೆಯೂ ಈಗಲೇ ನಿರ್ಧರಿಸಬೇಕಾಗುತ್ತದೆ.
*ಜನಿಸಿದ ಆರಂಭದಲ್ಲಿ ಮಗುವಿನ ಉಸಿರಾಟದ ಕಡೆಗೆ ಹೆಚ್ಚು ನಿಗಾ ವಹಿಸಬೇಕಾಗುತ್ತದೆ.
*ಅತೀ ವಿರಳವಾದರೂ ತಾಯಿ ಅಥವಾ ಮಗುವಿಗೆ ಅನಗತ್ಯ ಗಾಯಗಳು ಉಂಟಾಗುವ ಸಾಧ್ಯತೆಯೂ ಇರುತ್ತದೆ.
*ಎಪಿಡ್ಯುರಲ್ ಅನಸ್ತೇಶಿಯಾ ನೀಡುವ ಕಾರಣ ನರಗಳ ಚೇತರಿಕೆಗೆ ಸಮಯ ಹಿಡಿಯುತ್ತದೆ.
*ಆರಂಭಿಕ ದಿನಗಳಲ್ಲಿ ತಾಯಿಯ ಚಟುವಟಿಕೆಗಳು, ಹಾಲುಣಿಸುವಿಕೆ ಮುಂತಾದವುಗಳ ಮೇಲೆ ಅತಿಯಾದ ಪರಿಣಾಮ ಉಂಟಾಗುತ್ತದೆ.
*ಆರ್ಥಿಕವಾಗಿ ದುರ್ಬಲರಾಗಿದ್ದಲ್ಲಿ ಸೇವೆ ಪಡೆದುಕೊಳ್ಳುವುದು ಕಷ್ಟವಾಗಬಹುದು.
ಫೋಟೋ ಕೃಪೆ : google
ಈ ಮೇಲಿನ ಕಾರಣಗಳನ್ನು ನೋಡಿದರೆ ಸ್ವಾಭಾವಿಕ ಪ್ರಸವ ಉತ್ತಮ ಆಯ್ಕೆ ಎನ್ನುವುದು ಹಲವರ ನಿರ್ಧಾರ. ಆದರೆ ಅದರಲ್ಲೂ ಕೆಲವೊಂದು ಭಾದಕ ವಿಷಯಗಳಿದ್ದು :
*ಪ್ರಸವದ ಸಂದರ್ಭದಲ್ಲಿ ಪೆಲ್ವಿಕ್ ಭಾಗದ ಮಾಂಸಖಂಡಗಳು ಒತ್ತಡಕ್ಕೆ ಒಳಗಾಗಿ ಗಾಯಗೊಳ್ಳುತಯವ ಸಾಧ್ಯತೆ ಇರುತ್ತದೆ.
*ಹೆರಿಗೆಯ ಸಂದರ್ಭದಲ್ಲಿ ಅತಿಯಾದ ನೋವು ಅನುಭವಿಸಬೇಕಾಗುತ್ತದೆ.
*ಯೋನಿ, ಗುದದ್ವಾರ, ಮೂತ್ರಕೋಶ ಮುಂತಾದ ಭಾಗಗಳ ಕಾರ್ಯವೈಖರಿಯಲ್ಲಿ ಕೆಲ ಸಮಯ ವ್ಯತ್ಯಯವಾಗುತ್ತದೆ ಮುಖ್ಯವಾಗಿ ಮೂತ್ರಕೋಶ ಹೊರಚಾಚುವ ಸಾಧ್ಯತೆ ಇರುತ್ತದೆ.
*ಮಗುವಿಗೆ ಜನನದ ಸಂದರ್ಭದಲ್ಲಿ ಆಕ್ಸಿಜನ್ ಕೊರತೆ ಉಂಟಾಗುತ್ತದೆ.
*ಸ್ವಚ್ಛತೆಗೆ ಒತ್ತು ನೀಡದ ತಾಯಂದಿರಿಂದ ಮಗುವಿಗೆ ಇನ್ಫೆಕ್ಷನ್ ಉಂಟಾಗುವ ಸಾಧ್ಯತೆಯೂ ಇರುತ್ತದೆ.
ಎರಡರಲ್ಲೂ ಬಾಧಕಗಳು ಇದ್ದಾಗ ಯಾವ ಆಯ್ಕೆ ಉತ್ತಮ ಎಂದು ನಿರ್ಧರಿಸಲು ಸಾಧಕಗಳನ್ನು ಗಮನಿಸುವುದಾದರೆ :
*ಸಿಸೇರಿಯನ್ ಗೆ ಹೋಲಿಸಿದರೆ ಸ್ವಾಭಾವಿಕ ಪ್ರಸವದಲ್ಲಿ ಚೇತರಿಕೆಯ ವೇಗ ಹೆಚ್ಚು.
*ಹಾಲುಣಿಸುವಿಕೆ ಮತ್ತು ಮಗುವಿನ ಆರೈಕೆಗೆ ಸ್ವಾಭಾವಿಕ ಪ್ರಸವದಿಂದ ಶೀಘ್ರವಾಗಿ ತೊಡಗಿಸಿಕೊಳ್ಳಬಹುದು.
*ಸಿಸೇರಿಯನ್ ಹೆರಿಗೆ ಕಡಿಮೆ ನೋವಿನಿಂದ ಕೂಡಿದ್ದಾಗಿದ್ದು ಹೆರಿಗೆಯ ಸಂದರ್ಭದಲ್ಲಿ ಉಂಟಾಗುವ ಅಪಾಯಗಳು ಕಡಿಮೆ ಪ್ರಮಾಣದಲ್ಲಿರುತ್ತವೆ.
*ಸಿಸೇರಿಯನ್ ಹೆರಿಗೆಯ ನಂತರ ಮೂತ್ರ ಸಂಬಂಧಿ ತೊಂದರೆಗಳು ಉಂಟಾಗುವ ಸಾಧ್ಯತೆ ಕಡಿಮೆ.
ಹೀಗೆ ಮೇಲಿನ ಅಂಶಗಳನ್ನು ಗಮನಿಸಿದಾಗ ಎರಡೂ ವಿಧಾನಗಳಲ್ಲಿಯೂ ಅದರದ್ದೇ ಆದ ಸಾಧಕ ಬಾಧಕಗಳಿವೆ. ಆದರೆ ತಾಯಿಯ ಮತ್ತು ಮಗುವಿನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸುವಾಗ ವೈದ್ಯರು ಅತ್ಯಂತ ಸುರಕ್ಷಿತ ವಿಧಾನವನ್ನೇ ಆರಿಸಿಕೊಳ್ಳುತ್ತಾರೆ. ಗರ್ಭದ ಆರೋಗ್ಯ, ಈಗಾಗಲೇ ಮಗು ಇದ್ದಲ್ಲಿ ಹಿಂದೆ ಹೆರಿಗೆ ನಡೆದ ವಿಧಾನ, ಗರ್ಭಪಾತಗಳು, ತಾಯಿಯ ದೇಹಸ್ಥಿತಿ ಮುಂತಾದ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧರ ಮಾಡಬೇಕಾಗುತ್ತದೆ.
ಕೇವಲ ಹಣಕ್ಕಾಗಿ ಸಿಸೇರಿಯನ್ ಆಯ್ಕೆಯನ್ನು ಸೂಚಿಸಲು ಸಾಧ್ಯವಿಲ್ಲ. ಅಂತಹಾ ಕೆಲವರನ್ನು ಹೊರತುಪಡಿಸಿದರೆ ಉಳಿದಂತೆ ವ್ಯಕ್ತಿಯ ಹಿತ ಕಾಯುವುದೇ ವೈದ್ಯಕೀಯ ಸಿಬ್ಬಂದಿಯ ಕರ್ತವ್ಯ. ಆದ್ದರಿಂದ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳುವ ನಿರ್ಧಾರವನ್ನು ವೃತಾ ಅನುಮಾನಿಸುವುದು ಸರಿಯಲ್ಲ. ತುರ್ತು ಸಂದರ್ಭಗಳಲ್ಲಿ ಸಿಸೇರಿಯನ್ ಒಂದು ಅತ್ಯುತ್ತಮ ಆಯ್ಕೆ. ಯಾವುದೇ ಅಪಾಯಗಳು ಇಲ್ಲ ಎಂದ ಸಂದರ್ಭದಲ್ಲಿ ತಾಯಿಯ ಹಿತ ಬಯಸುವ ವೈದ್ಯರು ಖಂಡಿತಾ ಸ್ವಾಭಾವಿಕ ಪ್ರಸವದ ಸಲಹೆಯನ್ನೇ ನೀಡುತ್ತಾರೆ. ಯಾವುದೇ ವಿಧಾನದಿಂದ ಹೆರಿಗೆ ನಡೆದರೂ ತಾಯಿಯ ಮತ್ತು ಮಗುವಿನ ಆರೋಗ್ಯ ಕಾಪಾಡುವುದು ವೈದ್ಯ ಲೋಕದ ಪರಮೋಚ್ಚ ಧ್ಯೇಯ. ನಂಬಿಕೆಯೇ ಪರಮ ಮಂತ್ರ. ಆದ್ದರಿಂದ ಯೋಚಿಸಿ ನಿರ್ಧರಿಸಿ.
ಧನ್ಯವಾದಗಳು
- ಸುದರ್ಶನ್ ಪ್ರಸಾದ್