ಕವಿಯತ್ರಿ ಪದ್ಮಶ್ರೀ ಗೋವಿಂದರಾಜ್ ಅವರ ಒಂದು ಸುಂದರ ಕವನವನ್ನು, ತಪ್ಪದೆ ಓದಿ …
ನಿರಂತರ ಅಲೆಗಳು ದಡಕಪ್ಪಳಿಸಿ
ಮರಳ ಮರಳಿ ಕಬಳಿಸಿ ಹೊತ್ತೋಯ್ಯುವುದು ಎಲ್ಲಿಗೋ?
ಮತ್ತೆಲ್ಲಿಗೆ?
ಅದೇ ದಡಕೆ ಮರಳಿಸುವುದು,
ದಡದಲ್ಲೊಬ್ಬ ಬೆಸ್ತ
ನೆನ್ನೆ ಸಂಜೆಯೇ ದೋಣಿಯಲಿ ತೆರಳಿ
ಬಲೆ ಬೀಸಿ ಬಂದಿದ್ದ ಸಂಗಡಿಗರೊಡನೆ ಕೂಡಿ
ಸಿಲುಕಿರಬಹುದು ಬಳುಕಾಡುವ ಒಂದಷ್ಟು ಜಾತಿಯ ಮೀನುಗಳು
ಮೀನಿಗೂ ಜಾತಿ ಉಂಟು ಗೊತ್ತಾ ನಿಮಗೆ?
ನಮ್ಮ ನಿಮ್ಮಂತೆ ಸಸ್ಯಾಹಾರಿಯಿಂದ ಮಾಂಸಹಾರಿ
ಬೆಸ್ತನಿಂದ ಭಟ್ಟನ ತನಕ
ಸಣ್ಣ ಬೆಸ್ತ ಇವನು
ಅಂದೆ ಹಿಡಿದ ಮೀನ ಜಾತಿ ಬೇರ್ಪಡಿಸಿ ಗುಡ್ಡೆ ರಾಶಿ ಮಾಡಿ ಸಣ್ಣ ಪ್ರಮಾಣದ ಬೆಲೆಗೆ
ತಾಜಾವಾಗಿಯೇ ಮಾರುವ
ಅದೇ ಸಮುದ್ರ ಅಲೆಗಳ ಸಮೀಪವೇ..
ಇಲ್ಲೂ ಸಿರಿವಂತ ಹಡಗಿನ ಬೆಸ್ತರು ಇರುವರು ಗೊತ್ತಲ್ಲ ನಿಮಗೆ
ತಿಂಗಳುಗಟ್ಟಲೆ
ತೇಲುವ ಅಲೆಗಳ ನಡುವೆ ಮಾಯವಾಗಿ ಟನ್ನುಗಟ್ಟಲೆ ಸತ್ತ ಮೀನುಗಳ ಹೊತ್ತು ತರುವರು
ಮೀನ ಮಾರು ಕಟ್ಟೆಯಲಿ ಇವರದ್ದೇ ದರ್ಬಾರು
ನಾವುಗಳೋ
ತಾಜಾ ಸಮಾಚಾರ ಎನ್ನುತ್ತಲೆ,,,
ಸತ್ತು ತಿಥಿ ಮುಗಿಸಿದ ಮೀನಿಗೆ ಬೆಲೆ ಕಟ್ಟುವೆವು
ದೋಣಿ ಬಿಟ್ಟು
ಹಡಗಿಗೆ..
- ಪದ್ಮಶ್ರೀ ಗೋವಿಂದರಾಜ್