‘ಇಂದು ಬೆಳಿಗ್ಗೆ ಮನೆಯಾಕೆ ಆತನನ್ನು ನೋಡಿಕೊಂಡು ಬರಲೆಂದು ಹೋದವಳೇ “ರೀ ಟೈಗರ್ ಹೋಯ್ತ್ರಿ” ಎಂದಾಗ ನನಗೆ ಎದೆಬಡಿತವೇ ನಿಂತಂತಾಯ್ತು. ಹತ್ತು-ಹನ್ನೆರಡು ವರ್ಷಗಳವರೆಗೆ ಮನೆಯ ಸದಸ್ಯನಾಗಿದ್ದ ಟೈಗರ್ ಇನ್ನಿಲ್ಲವೆಂಬುದನ್ನು ಅರಗಿಸಿಕೊಳ್ಳುವುದೇ ನನಗೆ ಆಗುತ್ತಿಲ್ಲ. ಕೇವಲ ಅವನು ನಾಯಿ ಆಗಿರಲಿಲ್ಲ. ಮನೆಯ ಸದಸ್ಯನಾಗಿದ್ದ’ – ಸಿದ್ಧರಾಮ ಕೂಡ್ಲಿಗಿ ಅವರ ಭಾವುಕ ಲೇಖನ, ತಪ್ಪದೆ ಓದಿ…
” ರೀ ಟೈಗರ್ ಹೋಯ್ತ್ರಿ ” ಎಂದು ಮನೆಯಾಕೆ ಬೆಳ್ ಬೆಳಿಗ್ಗೆ ಕೂಗಿದಾಗ ನನಗಾದ ತಳಮಳ, ಸಂಕಟ ಅಷ್ಟಿಷ್ಟಲ್ಲ.
ಕಳೆದ ಒಂದು ವಾರದಿಂದಲೂ ಅನಾರೋಗ್ಯಪೀಡಿತನಾಗಿದ್ದ, ನಮ್ಮ ಮನೆಯ ಸದಸ್ಯನಂತಿದ್ದ, ಟೈಗರ್ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದ. ಕಳೆದ 10-12 ವರ್ಷಗಳಿಂದಲೂ ನಮ್ಮ ಮನೆಯ ಎಲ್ಲ ಚಟುವಟಿಕೆಗಳಲ್ಲೂ ತಾನೂ ಒಬ್ಬ ಸದಸ್ಯನಾಗಿ ಪಾಲ್ಗೊಂಡಿದ್ದದ್ದು ಮರೆಯಲಾರದಂಥದ್ದು.
ಹಾಗೆ ನೋಡಿದರೆ ಟೈಗರ್ ಎಲ್ಲಿಂದಲೋ ಕೊಂಡು ತಂದ ವಿಶೇಷ ತಳಿಯ ನಾಯಿಯಲ್ಲ. ನಮ್ಮ ಓಣಿಯಲ್ಲಿಯೇ ಇದ್ದ ಬೀದಿನಾಯಿಯೊಂದು ನಾಲ್ಕೈದು ಮರಿಗಳಿಗೆ ಜನ್ಮ ಕೊಟ್ಟಿತ್ತು. ಅವುಗಳನ್ನು ನೋಡುತ್ತ ನಾನು ಸುಮ್ಮನೆ ಕರೆದಿದ್ದೆ. ತಕ್ಷಣ ಪುಟುಪುಟನೆ ನನ್ನ ಬಳಿ ಓಡಿಬಂದದ್ದೇ ಈ ಟೈಗರ್. ಅದನ್ನೇ ಮನೆಗೆ ತಂದು ಸಾಕಿದ್ದೆವು. ನೋಡ ನೋಡೋದರೊಳಗೆ ಟೈಗರ್ ಹೇಗೆ ಬೆಳೆದುನಿಂತನೆಂದರೆ ನೋಡಿದವರೆಲ್ಲ ” ಎಲ್ಲಿಂದ ತಂದೀರಿ ? ” ಎಂದೇ ಕೇಳುವಷ್ಟು. ನಾವು ತಮಾಶೆಯಾಗಿ ಬೆಂಗಳೂರಿನಿಂದ 5,000 ರೂ. ಕೊಟ್ಟು ತಂದಿದೀವಿ ಅಂದರೆ. ನಿಜಕ್ಕೂ ನಂಬುತ್ತಿದ್ದರು.
ಟೈಗರ್ ನ ಇಡೀ ದೇಹ ಅಪ್ಪಟ ಬಂಗಾರದ ಬಣ್ಣದ ಕೂದಲು. ಬೆನ್ನ ಮೇಲಿನಿಂದ ಒಂದಿಷ್ಟು ಕಪ್ಪನೆಯ ಪಟ್ಟಿ. ಚೂಪಾದ ಬಾಯಿ. ಸದಾ ಎಚ್ಚರಿಕೆಯಿಂದಿರುತ್ತಿದ್ದ ಕಿವಿಗಳು, ಚುರುಕಾದ ಕಣ್ಣುಗಳು, ನಾಲ್ಕೂ ಕಾಲಿಗೆ ಬಿಳಿಯ ಸಾಕ್ಸ್ ಹಾಕಿದಂತೆ ಬಿಳಿಬಣ್ಣ, ದಟ್ಟ ಕೂದಲಿನಿಂದ ಕೂಡಿದ ಬಾಲ ಟೈಗರ್ ನ ಸ್ವರೂಪ. ಸುಂದರನೆಂದರೆ ಸುಂದರ.
ಟೈಗರ್ ನಮ್ಮ ಮನೆಗೆ ಅದೆಷ್ಟು ಹೊಂದಿಕೊಂಡಿದ್ದನೆಂದರೆ ಮನೆಯ ಬಳಿ ಯಾರೂ ಸುಳಿಯುವಂತಿರಲಿಲ್ಲ. ತುಂಬಾ ಸೂಕ್ಷ್ಮನೂ ಆಗಿದ್ದ ಟೈಗರ್ ಗೆ ನಮ್ಮೆಲ್ಲರ ಮನಸಿನ ಭಾವನೆಗಳು ಅರ್ಥವಾಗುತ್ತಿದ್ದವು. ಗದರಿದರೆ ಓಡಿಹೋಗಿ ಟೇಬಲ್ ಕೆಳಗೋ, ಕುರ್ಚಿಯ ಕೆಳಗೋ ಪುಟ್ಟ ಮಕ್ಕಳಂತೆ ಅವಿತುಬಿಡುತ್ತಿದ್ದ. ಖುಷಿಯಿಂದ ಕರೆದರೆ ಓಡಿಬಂದು ತುಂಟಾಟ ಆಡುತ್ತಿದ್ದ. ಮಕ್ಕಳಂತೂ ಎಲ್ಲಿಯೇ ಊರಿಗೆ ಹೋಗಿಬಂದರೂ “ಟೈಗರ್” ಎನ್ನುತ್ತಲೇ ಬರುತ್ತಿದ್ದರು. ಅವರನ್ನಂತೂ ಎಗರಿ ಎಗರಿ ಸ್ವಾಗತಿಸುತ್ತಿದ್ದ.
ಇಲಿ, ಜಿರಳೆಗಳನ್ನು ಗೋಳು ಹೊಯ್ದುಕೊಳ್ಳುವುದೆಂದರೆ ಟೈಗರ್ ಗೆ ಪಂಚಪ್ರಾಣ. ಅವುಗಳನ್ನು ಅರೆಜೀವವಾಗಿಸಿ ತನ್ನೆದುರಿನ ಪರಿಧಿ ಬಿಟ್ಟುಹೋಗದಂತೆ ನೋಡಿಕೊಳ್ಳೋದು ಆತನ ನೆಚ್ಚಿನ ಹವ್ಯಾಸಗಳಲ್ಲೊಂದು.
ಆತನ ಬೊಗಳುವಿಕೆಯ ವೈವಿಧ್ಯತೆಯನ್ನೂ ನಾವೆಲ್ಲ ಅರ್ಥ ಮಾಡಿಕೊಂಡಿದ್ದೆವು. ಹಸಿವಾದಾಗ ಒಂದು ವಿಧ, ಮನೆಯ ಮುಂದೆ ಯಾರಾದರೂ ಬಂದಾಗ ಒಂದು ವಿಧ, ಬೇರೆ ನಾಯಿಗಳು ಬಂದರೆ ಬೇರೆ ರೀತಿ ಹೀಗೆ ಬೇರೆ ಬೇರೆ ರೀತಿಯಲ್ಲಿ ಬೊಗಳುವಿಕೆಯನ್ನು ನಾವೆಲ್ಲ ಅರಿತಿದ್ದೆವು.
ಮೂರು, ನಾಲ್ಕು ಸಲ ಮನೆಯ ಹತ್ತಿರ ನಮಗೆ ಗೊತ್ತಿಲ್ಲದಂತೆ ಹಾವು ಬಂದಾಗಲೂ ಒಂದೇ ರೀತಿಯಲ್ಲಿ ಅರಚಿ ನಮ್ಮನ್ನೆಲ್ಲ ಎಚ್ಚರಿಸಿದ್ದ. ಬೆಳಿಗ್ಗೆ, ಸಂಜೆ ಮನೆಯ ಮಾಳಿಗೆಯಲ್ಲಿ ಓಡಾಡೋದು ಆತನ ನೆಚ್ಚಿನ ಹವ್ಯಾಸವಾಗಿತ್ತು.
ಟೈಗರ್ ನಮ್ಮ ಮನೆಗೆ ಅದೆಷ್ಟು ಹೊಂದಿಕೆಯಾಗಿತ್ತೆಂದರೆ “ಟೈಗರ್ ಇರುವ ಮನೆ” ಎಂದೇ ಗುರುತಿಸುವಶ್ಟು. ನಾವೆಲ್ಲ ಊರಿಗೆ ಹೋದರಂತೂ ಊಟವನ್ನೇ ಮಾಡದೆ ಸಪ್ಪಗೆ ಮಲಗಿರುತ್ತಿದ್ದ. ಬಂದೊಡನೆ ಅದೆಷ್ಟು ಸಂಭ್ರಮದಿಂದ ನೆಗೆದಾಡುತ್ತಿದ್ದನೆಂದರೆ ಅವನನ್ನು ಮುದ್ದಿಸುವವರೆಗೆ ನಮ್ಮನ್ನೆಲ್ಲ ಮನೆಯೊಳಗೆ ಬಿಡುತ್ತಲೇ ಇರಲಿಲ್ಲ.
ಇತ್ತೀಚೆಗೆ ಅನಾರೋಗ್ಯಪೀಡಿತನಾಗಿದ್ದ ಟೈಗರ್ ಗೆ ಏನೆಲ್ಲ ಉಪಚಾರ ಮಾಡಿದರೂ ಸುಧಾರಿಸಲಿಲ್ಲ. ಮನೆಯ ಮಾಳಿಗೆ ಸೇರಿದವನು ಕೆಳಗೆ ಬರಲೊಪ್ಪಲೇ ಇಲ್ಲ. ಇಂದು ಬೆಳಿಗ್ಗೆ ಮನೆಯಾಕೆ ಆತನನ್ನು ನೋಡಿಕೊಂಡು ಬರಲೆಂದು ಹೋದವಳೇ “ರೀ ಟೈಗರ್ ಹೋಯ್ತ್ರಿ” ಎಂದಾಗ ನನಗೆ ಎದೆಬಡಿತವೇ ನಿಂತಂತಾಯ್ತು. ಹತ್ತು-ಹನ್ನೆರಡು ವರ್ಷಗಳವರೆಗೆ ಮನೆಯ ಸದಸ್ಯನಾಗಿದ್ದ ಟೈಗರ್ ಇನ್ನಿಲ್ಲವೆಂಬುದನ್ನು ಅರಗಿಸಿಕೊಳ್ಳುವುದೇ ನನಗೆ ಆಗುತ್ತಿಲ್ಲ.
ನಿಜ ಒಂದು ನಾಯಿಯ ಸಾವಿಗೆ ಇಷ್ಟು ದು:ಖಪಡೋದಾ ಅಂತ ಯಾರಿಗಾದರೂ ಅನಿಸಬಹುದು. ಆದರೆ ಅದು ನಾಯಿ ಅನ್ನೋದಕ್ಕಿಂದ ಅಲ್ಲೊಂದು ನಿಷ್ಠಾವಂತ, ಪ್ರೀತಿಸುವ ಮನಸಿತ್ತು, ಜೀವವಿತ್ತು ಅನ್ನೋದೇ ತುಂಬಾ ಮುಖ್ಯವಾದುದು. ಜೀವ ಹಾಗೂ ಮನಸು ಯಾವುದೇ ಜೀವಿಗಳಲ್ಲೂ ಒಂದೇ ಎಂದು ನಂಬಿದವನು ನಾನು. ಹೀಗಾಗಿ ಇಷ್ಟೊಂದು ದು:ಖ. ಯಾರೇನು ಅಂದುಕೊಂಡರೂ ಅದು ನನಗೆ ಸಂಬಂಧವಿಲ್ಲ.
ಬೆಳಿಗ್ಗೆ ಟೈಗರ್ ನನ್ನು ಕಳಿಸುವಾಗ ಎಲ್ಲರೂ ಕಣ್ಣೀರು ಹಾಕಿದೆವು. ಇಡೀ ದಿನ ಮನೆ ಖಾಲಿಯಾದಂತೆ. ಟೈಗರ್ ನನ್ನು ಕಟ್ಟಿಹಾಕಲು ಬಳಸುತ್ತಿದ್ದ ಬೆಲ್ಟ್, ಚೈನು, ಆತನ ಔಷಧೋಪಚಾರದ ವಸ್ತುಗಳು, ಆತನಿಗಾಗಿ ತರುತ್ತಿದ್ದ ಬನ್, ಆತನ ಹಾಸಿಗೆ ಎಲ್ಲವೂ ಮತ್ತೆ ಮತ್ತೆ ಟೈಗರ್ ನ ನೆನಪುಗಳನ್ನು ಹೊತ್ತು ಕೂತಿದ್ದವು.
ಮನಸಿನೊಳಗೆ ಟೈಗರ್ ಚಿರಸ್ಥಾಯಿಯಾಗಿ ಉಳಿದುಬಿಟ್ಟ. ಈಗೇನಿದ್ದರೂ ನೆನಪಾದಾಗಲೊಮ್ಮೆ ಆತನ ನೆನಪಿನ ಮೇಲೊಂದು ಕಂಬನಿಯ ಹೂವನ್ನಿರಿಸಿ ಸ್ಮರಿಸುವುದು.
ಟೈಗರ್ ನೀನೆಲ್ಲೇ ಇರು ನೀನು ನಮ್ಮ ಮನದಲ್ಲೊಂದು ಶಾಶ್ವತವಾದ ಪ್ರೀತಿಯ ಮುದ್ರೆಯನ್ನೊತ್ತಿ ಹೋಗಿರುವೆ. ಎಲ್ಲಿರುವೆಯೋ ಅಲ್ಲಿ ಯಾವುದೇ ನೋವು, ಸಂಕಟ, ಕಾಯಿಲೆಗಳಿರದಂತೆ ಖುಷಿಯಾಗಿ ನೆಗೆದಾಡಿಕೊಂಡಿರು. ನಿನ್ನನ್ನು ಸದಾ ಸ್ಮರಿಸುತ್ತೇವೆ. ಯಾವತ್ತಿಗೂ ನೀನು ನಮ್ಮ ಮುದ್ದಿನ ಟೈಗರ್.
- ಕ್ಯಾಮೆರಾ ಕಣ್ಣು ಮತ್ತು ಲೇಖನ : ಸಿದ್ಧರಾಮ ಕೂಡ್ಲಿಗಿ – ಹವ್ಯಾಸಿ ಛಾಯಾಗ್ರಾಹಕರು, ಲೇಖಕರು