ಮನಸ್ಸಿನ ಭಾವನೆಗಳನ್ನು ಬೇರೊಬ್ಬರ ಹತ್ತಿರ ಹಂಚಿಕೊಳ್ಳದೇ ಒಂಟಿತನದಲ್ಲೆ ಮುಳುಗಿದಾಗ ಆತ್ಮಹತ್ಯೆ ಯೋಚನೆಗಳು ಬರುತ್ತದೆಯೇ ಅಥವಾ ಮತ್ಯಾವ ಕಾರಣಕ್ಕೆ ಬರುತ್ತದೆ, ಒಂದು ಸುದೀರ್ಘ ಚಿಂತನ ಲೇಖನವನ್ನು ಲೇಖಕ ಎಸ್. ಸಂತೋಷ ಕುಮಾರ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…
ಪ್ರಸ್ತಾವನೆ :
ಜನನ ಮರಣ ಎರಡರ ಕಾಲಾಂತರದ ನಡುವಿನ ಅತ್ಯದ್ಭುತವಾದ ಅವಕಾಶವೇ “ಜೀವನ”. ಈ ಅವಕಾಶವನ್ನು ಎಷ್ಟು ಗೌರವಿಸುತ್ತೇವೋ, ಎಷ್ಟು ಪ್ರೀತಿಸುತ್ತೇವೋ ಮತ್ತು ಎಷ್ಟು ಅರ್ಥಪೂರ್ಣವಾಗಿ ಬಳಸಿಕೊಳ್ಳುತ್ತೇವೋ ಎನ್ನುವುದೇ “ಜೀವನ ಪ್ರೇಮ”.
ಯಾವುದೋ ಅನಿರೀಕ್ಷಿತ ಸನ್ನಿವೇಶಗಳ ಒತ್ತಡಕ್ಕೆ ಸಿಲುಕಿ ಮಾನಸಿಕ ಸ್ಥಿಮಿತವನ್ನೂ ಕಳೆದುಕೊಂಡು ಸುಮಧುರವಾದ ಬದುಕಿನ ಪಯಣವನ್ನು ಬಲವಂತದಿ ನಿಲ್ಲಿಸಿ, ಅಸಹಾಯಕರಂತೆ ಬದುಕಿನ ದೋಣಿಯನ್ನು ದಡಮುಟ್ಟದೆ ನಡುವಲ್ಲಿಯೇ ಮುಳುಗಿಸಿ, ಕಾಲದ ಮಾಯೆಯಲಿ ಕಣ್ಮರೆಯಾಗುವ ದುಷ್ಟ ಪ್ರಕ್ರಿಯೆ “ಆತ್ಮಹತ್ಯೆ”.
ನಿರೂಪಣೆ :
ಬದುಕು ಎನ್ನುವುದು ಒಂದು ಅಪೂರ್ವ ಪಯಣ. ಆರಂಭದಿಂದ ಅಂತ್ಯದವರೆಗೆ ಅನುಭವಗಳ ಪಾಠವನ್ನು ನಯವಾಗಿ ತಿಳಿಹೇಳುವ ಅಮೋಘ ಪ್ರಯೋಗ ಶಾಲೆ. ಪ್ರತಿ ಹೆಜ್ಜೆಗೂ ಬಗೆ ಬಗೆಯ ಭಾವನೆಗಳ ಮೂಡಿಸುವ ವಿಸ್ಮಯಗಳ ಆಗರ.
ಕಾಲಚಕ್ರದ ನಿಯಮದಂತೆ ಬದುಕಿನ ವಿವಿಧ ಆಯಾಮಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಈ ಸುಮಧುರ ಅವಕಾಶವನ್ನು ಆ ದೇವರು ಜಗದೆಲ್ಲ ಜೀವರಾಶಿಗಳ ಹೊರತು ಪಡಿಸಿ ಕೇವಲ ಮಾನವ ಜೀವಿಗಳಿಗೆ ನೀಡಿರುವ ವಿಶೇಷ ಉಡುಗೊರೆ.

ಫೋಟೋ ಕೃಪೆ : google
ಅದಕ್ಕೆ ಪ್ರತಿಯಾಗಿ ನಾವುಗಳು ಸೃಷ್ಟಿಕರ್ತನು ಮೆಚ್ಚುವ ರೀತಿಯಲ್ಲಿ ಬದುಕಿನ ಯಾತ್ರೆಯನ್ನು ಸಾಗಿಸಬೇಕು.
ನಾವು ನಮ್ಮ ವೈಯ್ಯಕ್ತಿಕ, ಕೌಟುಂಬಿಕ, ಸಾಮಾಜಿಕ ಬಳಗದಲ್ಲಿ ಭರವಸೆಯ ಗುರುತಾಗಿ ಬೆಳೆಯಬೇಕು. ಸದಾಕಾಲ ಸದ್ಗುಣಗಳಿಂದ ಮುನ್ನಡೆಯುತ್ತಾ ಉತ್ತಮ ವಿಚಾರಗಳ ವಿವರಣೆಗೆ ಉದಾಹರಣೆಯಾಗಿರಬೇಕು. ಆಗ ಮಾತ್ರ ಮಾನವ ಜನ್ಮವನು ಸಾರ್ಥಕಗೋಳಿಸಲು ಸಾಧ್ಯ.
ನಿಸರ್ಗದಲ್ಲಿ ಅಡಗಿರುವ ಅಚ್ಚರಿಗಳನ್ನು ಆಧುನಿಕ ಆವಿಷ್ಕಾರಗಳಿಂದ ಭೇದಿಸಲು ಹೊರಟಿರುವ ಮಾನವನಿಗೆ ಇಂದಿಗೂ ಅರಿಯಲಾಗದ ಒಂದು ವಿಸ್ಮಯವೆಂದರೆ “ಮನಸ್ಸು”. ಮನಸ್ಸಿನ ಯೋಚನೆಗಳು, ಯೋಜನೆಗಳು ಯಾವ ತರ್ಕಕ್ಕೂ ನಿಲುಕದ್ದು. ಅಂತಹ ಮನಸ್ಸು ಇಂದು ತನ್ನ ಸ್ಥಿಮಿತವನ್ನು ಕಳೆದುಕೊಂಡು, ದುರ್ಬಲವಾಗಿ ತನ್ನನ್ನು ತಾನು ಘಾಸಿಗೊಳಿಸಿ ತನ್ನವರಿಗೆಲ್ಲ ಅಘಾದವಾದ ನೋವನ್ನು ನೀಡುತ್ತಿರುವುದು ಪ್ರಸ್ತುತ ಕಾಲಮಾನದ ದುರಂತ.
ಇದು ಕಲಿಯ ಕಾಲ ಇಲ್ಲಿ ಒಳ್ಳೆಯದು ಕೆಟ್ಟದ್ದು ಎನ್ನುವುದು ನಮ್ಮೊಳಗೆ ಇದೆ. ಪ್ರತಿಯೊಬ್ಬರಲ್ಲೂ ಸಕಾರಾತ್ಮಕ ಮತ್ತು ನಕಾರಾತ್ಮಕ ಭಾವಗಳ ಮನಸ್ಸು ಇರುವುದು ಸಹಜ, ನಮ್ಮ ವಿಚಾರಗಳ ನಿರ್ಣಯದಿಂದ ಮುಂಬರುವ ಸಂಧರ್ಭಗಳು ಸೃಷ್ಟಿಯಾಗುತ್ತವೆ. ಮತ್ತು ನಾವುಗಳೇ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅದರ ರೂವಾರಿಗಳಾಗಿರುತ್ತೆವೆ.

ಫೋಟೋ ಕೃಪೆ : google
ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಎನ್ನುವುದು ತೀರಾ ಸಾಮಾನ್ಯವಾಗಿದೆ. ಆತ್ಮಹತ್ಯೆ ಅಂತಹ ಹಿನ ಕೃತ್ಯದ ನಿರ್ಣಯಕ್ಕೆ ಕಾರಣಗಳು ಹಲವು ಅವುಗಳೆಂದರೆ :
- ನಮ್ಮಲ್ಲಿ ಆತ್ಮವಿಶ್ವಾಸದ ಕೊರತೆಯಾದಾಗ
- ನಮ್ಮಲ್ಲಿ ನಂಬಿಕೆ ಕಡಿಮೆಯಾದಾಗ
- ಸನ್ನಿವೇಶಗಳ ನಿಭಾಯಿಸುವ ಆತ್ಮಸ್ಥೈರ್ಯ ಕಳೆದುಕೊಂಡಾಗ
- ನಕಾರಾತ್ಮಕ ಭಾವಗಳು ಮನತುಂಬಿದಾಗ
- ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡಾಗ
- ತೆಗೆದುಕೊಂಡ ನಿರ್ಣಯಗಳು ವಿಫಲವಾದಾಗ
- ಅತಿಯಾದ ನಿರೀಕ್ಷೆಗಳು ಸುಳ್ಳಾದಾಗ
- ಆಪ್ತರ ಕುತಂತ್ರಕ್ಕೆ ಬಲಿಯಾದಾಗ
- ನಂಬಿದವರಿಂದ ಮೋಸ ಹೋದಾಗ
- ನಿರೀಕ್ಷೆಯ ಮಟ್ಟದಲ್ಲಿ ಗೆಲುವು ಸಿಗದಾಗ
- ಸನ್ನಿವೇಶಗಳ ಬಗ್ಗೆ ಸಂಪೂರ್ಣ ಜ್ಞಾನ ಇಲ್ಲದಾಗ
- ದುರ್ಬಲ ಮನಸ್ಥಿತಿ ಇದ್ದಾಗ
- ಅಪರಾಧಿ ಭಾವವು ಅತಿಯಾಗಿ ಕಾಡಿದಾಗ
- ವಿಕೋಪದಿಂದ ಆತುರದ ನಿರ್ಧಾರವನ್ನು ತೆಗೆದುಕೊಂಡಾಗ
- ಮನಸ್ಸಿನ ಭಾವನೆಗಳನ್ನು ಬೇರೊಬ್ಬರ ಹತ್ತಿರ ಹಂಚಿಕೊಳ್ಳದೇ ಒಂಟಿತನದಲ್ಲೆ ಮುಳುಗಿದಾಗ.
ಹೀಗೆ ಬಹುತೇಕ ಸನ್ನಿವೇಶಗಳಲ್ಲಿ ಜಾಣತನದ ಆಯ್ಕೆಯನ್ನು ಮರೆತು ಆ ಸಂದರ್ಭದ ವಿವಿಧ ದೃಷ್ಟಿಕೋನಗಳ ಬಗ್ಗೆ ಕೊಂಚವೂ ಅರಿಯದೇ, ಯಾರೊಬ್ಬರ ಹತ್ತಿರವೂ ಮನಸ್ಸಿನ ವೇದನೆಯ ಹೇಳಿಕೊಳ್ಳದೆ, ನಾಳೆಯ ಬಗ್ಗೆ ಯೋಚಿಸದೆ, ಆಸೆ, ಕನಸುಗಳನ್ನು ಉಸಿರುಗಟ್ಟಿಸಿ, ಬಲವಂತವಾಗಿ ಶಿಕ್ಷಿಸಿಕೊಳ್ಳುತ್ತಿರುವುದು ವಿಷಾದನೀಯ.

ಫೋಟೋ ಕೃಪೆ : google
ಆತ್ಮಹತ್ಯೆ ಅಂತಹ ಘೋರ ಸಂದರ್ಭಗಳ ತಡೆಗಟ್ಟುವ ಮಾರ್ಗಗಳೆಂದರೇ :
- ಆತ್ಮವಿಶ್ವಾಸವನ್ನು ಬಲಗೊಳಿಸಬೇಕು
- ದೃಢ ಸಂಕಲ್ಪದೀ ಪ್ರತಿಯೊಂದು ಪ್ರಸಂಗವನ್ನು ಗೆಲ್ಲುವ ನಂಬಿಕೆ ಬೆಳೆಸಿಕೊಳ್ಳಬೇಕು
- ಆತ್ಮಸ್ಥೈರ್ಯದಿಂದ ಮುನ್ನಡೆಯಬೇಕು
- ಸದಾಕಾಲ ಸಕಾರಾತ್ಮಕ ಭಾವಗಳನ್ನು ಬೆಳೆಸಿಕೊಳ್ಳಬೇಕು
- ಮನಸನ್ನು ಹತೋಟಿಯಲ್ಲಿಟ್ಟು ಮಾನಸಿಕ ಸ್ಥಿರತೆಯನ್ನು ಪಡೆಯಬೇಕು.
- ಸಂದರ್ಭಗಳ ಮೂಲವನ್ನು ಅರಿತುಕೊಳ್ಳಬೇಕು.
- ಸುಖ – ದುಃಖ, ಒಳ್ಳೇದು – ಕೆಟ್ಟದ್ದು ಎಲ್ಲವನ್ನೂ ಸಮನಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು.
- ತಾಳ್ಮೆ, ಸಹನೆಯನ್ನು ವೃದ್ದಿಸಿಕೊಳ್ಳಬೇಕು.
- ಉನ್ನತ ವಿಚಾರಗಳು ಬೆಳೆಸಿಕೊಳ್ಳಬೇಕು.
- ದೈಹಕವಾಗಿಯೂ, ಮಾನಸಿಕವಾಗಿಯೂ, ಸ್ವಸ್ತರಾಗಿರಬೇಕು.
- ದೈವದ ಉಪಾಸನೆ ಮಾಡಬೇಕು.
- ಪ್ರತಿ ಸನ್ನಿವೇಶದಲ್ಲೂ ಸಂತೃಪ್ತ ಭಾವದಿ ಇರಬೇಕು.
- ಪ್ರತಿ ಕ್ಷಣವೂ ಕ್ರಿಯಾಶೀಲರಾಗಿರಬೇಕು.
- ನಾಳೆಯ ಬಗ್ಗೆ ಕನಸುಗಳ ಕಾಣಬೇಕು ಮತ್ತು ಪ್ರತಿ ಕನಸನ್ನು ನನಸಾಗಿಸಲು ಸತತವಾಗಿ ಶ್ರಮಿಸಬೇಕು.
ಹೀಗೆ ಬರುವ ಪ್ರತಿ ಸನ್ನಿವೇಶವನ್ನು ಸವಾಲಾಗಿ ಸ್ವೀಕರಿಸಿ ಅದನ್ನು ಗೆಲ್ಲಲ್ಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು, ಪ್ರತಿ ಕ್ಷಣವೂ ಸಂತೋಷದಿಂದ ಮುನ್ನಡೆಯಬೇಕು ಅಂದಾಗ ಮಾತ್ರ ಈ ಬದುಕಿಗೊಂದು ಅರ್ಥಸಿಗಲು ಸಾಧ್ಯ.
ಸಾಮಾಜಿಕ ಜವಾಬ್ದಾರಿ :
ಒಬ್ಬ ವ್ಯಕ್ತಿಯು ಒಳ್ಳೆಯವನಾಗಿ ಸನ್ಮಾರ್ಗದಲ್ಲಿ ನಡೆಯಲು ಅಥವಾ ಕೆಟ್ಟವನಾಗಿ ದುರ್ಮಾರ್ಗದಲ್ಲಿ ನಡೆಯಲು ಅವನ ಸುತ್ತಲಿನ ಸಮಾಜವೇ ಕಾರಣವಾಗಿರುತ್ತದೆ. ಅದಕ್ಕಾಗಿಯೇ ಸಾಮಾಜಿಕ ಚಟುವಟಿಕೆಗಳು, ಸಾಮಾಜಿಕ ಕಾರ್ಯಗಳು ತುಂಬಾ ಮಹತ್ವದಾಗಿರುತ್ತವೆ.

“ಸ್ವಸ್ಥ ಮನಸ್ಸಿಂದ – ಸ್ವಸ್ಥ ಕುಟುಂಬ, ಸ್ವಸ್ಥ ಕುಟುಂಬದಿಂದ – ಸ್ವಸ್ಥ ಸಮಾಜದ ನಿರ್ಮಾಣ” ಎಂಬಂತೆ ನಾಗರೀಕ ಸಮಾಜದ ನವೀಕರಣವು ಇಲ್ಲಿ ಬದುಕುವ ಪ್ರತಿಯೊಬ್ಬರ ಮೂಲ ಧ್ಯೇಯವಾಗಬೇಕು. ನಾವುಗಳು ನಮ್ಮೆಲ್ಲ ಸಾಮಾಜಿಕ ಜವಾಬ್ದಾರಿಗಳ ಅರಿತು ಬಾಳಬೇಕು. ನಮ್ಮ ವೈಯಕ್ತಿಕ ಗೆಲುವು ಈ ಸಮಾಜದ ಗೆಲುವು, ನಮ್ಮ ಪ್ರತಿ ಹೆಜ್ಜೆಯ ತೀರ್ಮಾನದ ಪ್ರಭಾವವು ಸಮಾಜದ ಮೇಲೆ ಬೀರುತ್ತದೆ.
ಕೇವಲ ನಾನು ನನ್ನದು ಎನ್ನದೆ ನಾವು ನಮ್ಮದು ಎಂದು ಸ್ವಂತಕ್ಕಾಗಿಯೂ ಮತ್ತು ಸಮಾಜಕ್ಕಾಗಿಯೂ ಶ್ರಮಿಸಬೇಕು. ಯುವ ಪೀಳಿಗೆಯು ಜಾಗೃತಿ ಮೂಡಿಸುವ ಬದಲಾವಣೆಯ ಅನೇಕ ಪ್ರಾಯೋಗಿಕ ಕಾರ್ಯಾಗಾರಗಳನ್ನು ನಡೆಸಬೇಕು. ಜನಗಳಿಗೆ ಮಾನವ ಮೌಲ್ಯಗಳ ಉನ್ನತ ವಿಚಾರಗಳು ತಿಳಿಹೇಳಬೇಕು, ನಮ್ಮ ಸುತ್ತಲೂ ಇರುವ ಮೋಸ, ದ್ವೇಷ, ಅಸುಯೆ, ಕೆಟ್ಟದ್ದು ಎನ್ನುವ ಎಲ್ಲ ಕಲ್ಮಶವನ್ನೂ ಕಿತ್ತು, ಮಾನವೀಯತೆಯ ಮೇರೆಯೋ, ಒಳ್ಳೆಯತನವ ಬೆಳೆಸೋ, ಎಲ್ಲರೂ ಒಂದೇ ಎನ್ನುವ ಭಾವವ ಎತ್ತಿ ಹಿಡಿದು, ಪ್ರೀತಿ ಪ್ರೇಮವ ಪಸರಿಸುವ ಸುಗಂಧಭರಿತ ಹೂವಿನಂತಾಗಬೇಕು. ಹೀಗೆ ಎಲ್ಲವನ್ನೂ ಅರಿತು ನಮ್ಮೆಲ್ಲರ ಎಳಿಗೆಯ ಜೊತೆ ಜೊತೆಗೆ ಬದಲಾವಣೆಯ ನವ ಸಮಾಜದ ನಿರ್ಮಾಣವೂ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಉಪಸಂಹಾರ :
“ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ” ಎನ್ನುವ ಹಿರಿಯರ ಅದ್ಭುತ ವಾಣಿಯಂತೆ, ಎಷ್ಟೋ ಜನ್ಮಗಳ ಪುಣ್ಯದ ಫಲದಿ ದೊರೆತ ಮಾನವ ಜನ್ಮ ಎನ್ನುವ ಈ ಅವಕಾಶವನ್ನು ಆದಷ್ಟು ಅರ್ಥಪೂರ್ಣವಾಗಿ ಬಳಸಿಕೊಳ್ಳಬೇಕು. ನೋವು-ನಲಿವು, ಸುಖ-ದುಃಖ, ಒಳ್ಳೆಯದು-ಕೆಟ್ಟದ್ದು, ಇವುಗಳೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಒಂದರ ಹಿಂದೆ ಮತ್ತೊಂದು ಬರುವುದು.
ಬದುಕಲಿ ಅನಿರೀಕ್ಷಿತ ಘಟನೆಗಳು ಸಂಭವಿಸಿದಾಗ ಎದೆಗುಂದದೆ ಪರಿಸ್ಥಿತಿಯನ್ನು ಎದುರಿಸಬೇಕು. “ಎಲ್ಲವನು ಸಹಿಸುವ ತಾಳ್ಮೆ ನಮ್ಮಲ್ಲಿರಬೇಕು, ಅಂದಾಗ ಮಾತ್ರ ಎಲ್ಲವನು ಅನುಭವಿಸುವ ಅದೃಷ್ಟವನ್ನು ಆ ಸೃಷ್ಟಿಕರ್ತನು ನಮಗೆ ಕರುಣಿಸುತ್ತಾನೆ”. ಬದುಕಲಿ ಏನೇ ಆದರೂ ಭರವಸೆಯನ್ನು ಮಾತ್ರ ಕಳೆದುಕೊಳ್ಳಬಾರದು, ಬರುವ ನಾಳೆಯ ಸಂತೋಷದ ಕ್ಷಣಗಳಿಗಾಗಿ ಇಂದಿನ ನೋವಿನ ಜೊತೆ ಹೋರಾಡಲೆಬೇಕು.
ಸೋಲನ್ನು ಸಹಿಸುತ್ತ, ಗೆಲುವನ್ನು ಸಂಭ್ರಮಿಸುತ್ತಾ, ಒಳ್ಳೆದಯನ್ನು ಆಲೋಚಿಸುತ್ತಾ, ಎಲ್ಲರ ಜೊತೆಗೂಡಿ “ಪ್ರಬುದ್ಧ ಮನಸ್ಸಿಂದ ಪ್ರಬುದ್ಧ ಸಮಾಜ ನಿರ್ಮಾಣವಾಗಬೇಕು”.
“ನೋವುಗಳೇ ಇಲ್ಲವೆಂಬಂತೆ, ಎಲ್ಲರೂ ಮೆಚ್ಚುವಂತೆ, ಸಾವೇ ನಾಚುವಂತೆ ಬದುಕಬೇಕು”. ಹೀಗೇ ಈ ಬದುಕು ಪರಿಪೂರ್ಣವಾಗಿಸಬೇಕು. ಈ ಜೀವನದ ಸವಿಯನ್ನು ಪ್ರೇಮದಿ ಸವಿಯಬೇಕು. ಮತ್ತು ಈ ಯುಗದ ಅಚ್ಚಳಿಯದ ಗುರುತಾಗಿ ಉಳಿಯಬೇಕು.
- ಎಸ್. ಸಂತೋಷ ಕುಮಾರ (ವೃತ್ತಿಯಲ್ಲಿ ಇಂಜಿನಿಯರ್, ಹವ್ಯಾಸಿ ಬರಹಗಾರರು) ಬೀದರ
