ನೇವರಿಕೆಯಿಂದಲೆ ರೋಗ ಓಡಿಸುವ ಡಾ.ಅನಿಲ್ ಕುಮಾರ್ಗರ್ಭಿಣಿಯರು, ಬಾಣಂತಿಯರು, ಕೆಮ್ಮು, ಶೀತದಂತಹ ಕಾಯಿಲೆಗೊಳಗಾದ ಚಿಕ್ಕ ಮಕ್ಕಳು ಮತ್ತು ಗಂಭೀರ ಕಾಯಿಲೆಯಿಂದ ಬಳಲುವವರೆಲ್ಲ ಡಾ.ಅನಿಲ್ ಕುಮಾರ್ ಅವರಿಂದ ಸಲಹೆ ಪಡೆದ ನಂತರವೆ ಮುಂದೆ ಹೋಗುತ್ತಿದ್ದ ಕಾಲವೊಂದಿತ್ತು. ಈ  ಡಾ.ಅನಿಲ್ ಕುಮಾರ್ ಮತ್ಯಾರು ಅಲ್ಲ ಜ್ಞಾನಪೀಠ ಪುರಸ್ಕೃತರಾದ ಡಾ.ಯು. ಆರ್. ಅನಂತಮೂರ್ತಿಯವರ ಖಾಸ ಸಹೋದರ. ಡಾ.ಅನಿಲ್ ಕುಮಾರ್ ಅವರ ಕುರಿತು ನೆಂಪೆ ದೇವರಾಜ್ ಅವರು ಬರೆದ ಲೇಖನವನೊಮ್ಮೆ ಓದಿ…

ಮಂಡಗದ್ದೆ, ಹಣಗೆರೆ, ತೂದೂರು, ತನಿಕಲ್ಲು, ದಾನಸಾಲೆ, ಹೊಬೀಡು, ಮಾಳೂರು, ಕುಡುಮಲ್ಲಿಗೆ , ಕುಣಿ ಕುಂದೂರು, ಅಕ್ಸಾಲ್ಮಕ್ಕಿ, ಬೆಕ್ಸೆ ,ಕೆಂಜಿಗುಡ್ಡೆ,ಮಹಿಷಿ,ದಬ್ಬಣಗದ್ದೆ ಕಡೆಯ ರಾಶಿ ರಾಶಿ ಮಂದಿ ಇವರನ್ನು ಕಾಯುತ್ತಾ ಇವರು ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ಆರಂಭಿಸಿದ್ದ ಪುಷ್ಯ ಕ್ಲಿನಿಕ್ ಎದುರು ಇವರಿಗಾಗಿ ಸಾಲು ಸಾಲಾಗಿ ನಿಂತು ಎದುರು ನೋಡುತ್ತಿದ್ದ ಕಾಲ ನೆನಪಿಗೆ ಬರುತ್ತಿದೆ.
ಹೀಗೆ ಕಾಯುತ್ತಿದ್ದಾಗ ಡಾ.ಯು. ಆರ್ ಅನಿಲ್ ಕುಮಾರ್ ಕ್ಲಿನಿಕ್ ಕ್ಕೊಳಗೆ ಬಂದ ಬಗೆಯನ್ನು ಗ್ರಹಿಸಿದ ಆ ರೋಗಿಗಳ ಮನಸ್ಸಲ್ಲಾಗುವ ತಲ್ಲಣ ಸಂಭ್ರಮಾದಿಗಳು ವರ್ಣಿಸಲು ಸಾಧ್ಯವಾಗಿ ಹೊರಬರುತ್ತವೆ. ಮೇಲೆ ಹೇಳಿರುವ ಊರುಗಳಿಂದ ಬರುವ ಸಾವಿರಾರು ರೋಗಿಗಳ ಹೆಸರು ಹಿಡಿದು ಕರೆದು ಅವರನ್ನು ಮೈದಡವುವ ಅಪೂರ್ವ ಗುಣವನ್ನು ಬೇರಾವ ವೈದ್ಯಲೋಕದಿಂದ ನಿರೀಕ್ಷಿಸಲು ಸಾಧ್ಯ ಹೇಳಿ ನೋಡೋಣ. ಕಳೆದ ಮುವತ್ತು ವರ್ಷಗಳ ಹಿಂದೆಯೇ ತೂದೂರನ್ನು ಬಿಟ್ಟು ಶಿವಮೊಗ್ಗಕ್ಕೆ ಬಂದಿದ್ದರೂ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ,ಅಗ್ರಹಾರ,ಮತ್ತು ಅರ್ಧ ಮುತ್ತೂರು ಹೋಬಳಿಯ ಸಾವಿರಾರು ಜನರ ಮುಖ ಪರಿಚಯ ಮತ್ತು ಹೆಸರನ್ನು ಮರೆಯದೆ ತಮ್ಮ ಮನಸ್ಸಲ್ಲಿ ಜತನದಿಂದ ಕಾಪಾಡಿಕೊಂಡು ಬರಲು ಕಾರಣವಾದದ್ದು ಅದಾವ ಶಕ್ತಿ? ಜೋಲು ಮೋರೆಯೊಂದಿಗೆ ಬಂದು, ತಮ್ಮನ್ನು ಬಾದಿಸುತ್ತಿರುವ ಕಾಯಿಲೆ ಈ ಲೋಕದಿಂದಲೆ ಹೊತ್ತೊಯ್ಯಲಿದೆಯೆಂಬ ಆತಂಕದಲ್ಲಿರುವ ರೋಗಿಗಳು ಒಮ್ಮೆಲೆ ಸಂಚಲನಕ್ಕೊಳಗಾಗುತ್ತಾರೆ. ಕಣ್ಣುಗಳಿಂದ ಹೊರಹೊಮ್ಮಬಹುದಾದ ಸಹಜ ಮಿಂಚುಗಳನ್ನೆಲ್ಲ ಕಳೆದುಕೊಂಡವರು ಒಮ್ಮೆಲೆ ಮಿಂಚಾಗುತ್ತಾರೆ. ಈ ವೈದ್ಯ ಮಾತ್ರೆ ಕೊಡದೆ ಬರಿ ಬಾಯಿ ಮಾತಲ್ಲೆ ಗುಣಪಡಿಸುತ್ತಾ ಹೋಗುತ್ತಾರೆ.

ಕುದುರೆ ಮುಖ ಗಣಿಗಾರಿಕೆ ಬಗ್ಗೆ, ಮರಳು ದಂಧೆ ಬಗ್ಗೆ, ಅಮ್ ಆದ್ಮಿ ಪಕ್ಷದ ಬಗ್ಗೆಮಾತ್ರವಲ್ಲ ಹೆಗ್ಗಾರು ಘಟ್ಟವನ್ನು ಹೇಗಾದರೂ ಉಳಿಸಿಕೊಳ್ಳಲೇಬೇಕೆಂದು ಹೇಳುವ ಇವರು ವೈದ್ಯರೋ ಅಥವಾ ಹೋರಾಟಗಾರರೋ ಎಂಬ ಅನುಮಾನ ಕಾಡುತ್ತದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದ ರಾಜಕಾರಣ ಆರಂಭಿಸಿರುವ ಅಸಹನೆಯ ಬಗ್ಗೆ ಪದೇ ಪದೇ ಬೇಸರಿಸಿಕೊಳ್ಳುತ್ತಾರೆ. ತೂದೂರಿನಲ್ಲಿ ಎಂಭತ್ತರ ದಶಕದ ಆರಂಭದಲ್ಲಿ ಇವರು ಕ್ಲಿನಿಕ್ಕೊಂದನ್ನು ಇಟ್ಟುಕೊಂಡಿದ್ದಾಗ ಇವರೇನೂ ಮೂಳೆ ತಜ್ಞರಾಗಿ ಅಲ್ಲಿಗೆ ಬಂದವರಲ್ಲ.ಮಾಮೂಲಿ ಎಂಬಿಬಿಎಸ್ ಮಾಡಿಕೊಂಡಿದ್ದರು.ಆಗಲೇ ಇಡೀ ಮಂಡಗದ್ದೆ ಹೋಬಳಿಯ ಜನರಿಗೆ ಕೇವಲ ಡಾಕ್ಟರಾಗಿ ಕಣ್ಣಿಗೆ ಕಾಣಲಿಲ್ಲ.ಇವರೊಳಗೆ ಇವರಿಗೆ ಗೊತ್ತಿಲ್ಲದಂತೆಯೇ ಸಮಾಜ ವಿಜ್ಞಾನಿಯಾಗಿ ರೂಪುಗೊಳ್ಳತೊಡಗುತ್ತಾರೆ. ಹಾಗೆಯೇ ಕಾಣುತ್ತಾರೆ.

ಹುಲುಮಾನವನಿಗೆ ತಗುಲುವ ಸರ್ವ ರೋಗಗಳ ಪರಿಹರಿಸುವ ಅವಧೂತನಾಗುತ್ತಾರೆ.ತುಂಗಾ ನದಿಯನ್ನು ದೋಣಿಯ ಮೂಲಕ ದಾಟಿ ಇವರ ಕ್ಲಿನಿಕ್ಕಿಗೆ ಧಾವಿಸುತ್ತಿದ್ದ ಹತ್ತು ಹಲವು ತರಹದ ರೋಗಿಗಳು ಮತ್ತೆ ಮನೆಗೆ ಹೋಗಬೇಕೆಂದರೆ ಈ ಹೆದ್ದೂರು,ಹೊಸಳ್ಳಿ,ಮೃಗವಧೆ,ಶೇಡ್ಗಾರು,ಕಟಗಾರು,ಕ್ಯಾದಿಗ್ಗೆರೆ ಕಡೆಯವರಿಗೆ ವಾಪಾಸು ಹೋಗಲು ರಾತ್ರಿಯಾಗುತ್ತಿತ್ತು.ದೋಣಿ ಬಂದ್ ಆಗುತ್ತಿತ್ತು.ಹೀಗೆ ಬಂದವರಯ ಇವರ ಕ್ಲಿನಿಕ್ಕಿನ ಹಿಂಬದಿಯ ಜಾಗದಲ್ಲಿ ಉಳಿದು ತೂದೂರಿನ ಅಚ್ಯುತ್ತಯ್ಯನವರ ಹೋಟೆಲಲ್ಲಿ ಮಾರನೇ ದಿನ ತಿಂಡಿ ತಿಂದು ಮನೆಗೆ ಹೋಗುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಾರೆ.

ಡಾ.ಅನಿಲ್ ಕುಮಾರ್

ಮತ್ತು ಮುಂದೊರೆದು ಮಹಿಷಿ, ದಬ್ಬಣಗದ್ದೆ, ಅಮ್ತಿ ಅಂದಗೆರೆ, ಯಡವಿನಕೊಪ್ಪದವರ ಮೇಲೆ ಮಂಗನ ಕಾಯಿಲೆ ದಾಳಿ ಇಟ್ಟ ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಶೀತ ಕೆಮ್ಮಿನ ಜೊತೆ ವಿಷಮ ಶೀತ ಜ್ವರ, ಆಮ ಶಂಕೆಯಂತವುಗಳೆ ಬಹು ಮುಖ್ಯವಾಗಿ ಮಲೆನಾಡನ್ನು ಭಾದಿಸುತ್ತಿದ್ದವು.ಅಂದು ಹೃದಯ,ಕಿಡ್ನಿ ಸಂಬಂಧಿತ ಕಾಯಿಲೆಗಳು ಅಪರೂಪದಲ್ಲಿ ಅಪರೂಪ.ಇಸಿಜಿಯಲ್ಲೇ ಹೃದಯದ ಎಲ್ಲ ಸಮಸ್ಯೆಗಳು ಹೊರಬರುತ್ತಿದ್ದವು.ಅಂದು ಸಿಟಿ ಸ್ಕ್ಯಾನ್,ಟಿಎಂಟಿ,ಎಕೋ,ಎಮ್ಆರ್ ಐ ತರಹದ ಭಯ ಹುಟ್ಟಿಸು ಭಯಾನಕ ಯಂತ್ರಗಳೇ ಇರಲಿಲ್ಲ. ದುಬಾರಿ ವೆಚ್ಚದ ಪರಿಕರಗಳಿದ್ದರೂ ಹೃದಯ ಸಂಬಂಧಿ ರೋಗಗಳಿಗೆ ಲೆಕ್ಕವಿಲ್ಲದಷ್ಟು ಜನ ತಲೆಕೊಡುತ್ತಿದ್ದಾರೆ.ಈ ಯಂತ್ರಗಳು ಭಯ ಮತ್ತು ರೋಗಗಳನ್ನು ಸೃಷ್ಟಿಸುವ ಕಾರ್ಖಾನೆಗಳಾಗಿ ಕಾಡುತ್ತಿರುವ ಬಗ್ಗೆ ತಮ್ಮ ಯೋಚನೆಗಳನ್ನು ಹೊರಗೆಡವಲು ಪ್ರಯತ್ನಿಸುತ್ತಾರೆ. ಇವೆಲ್ಲ ಇದ್ದರೂ ಕಾಯಿಲೆಗಳ ಸಂಖ್ಯೆ ದಿನೇ ದಿನೇ ಏರುತ್ತಲೆ ಇವೆ.  ಸಂಶೋಧನೆಗಳ ಜೊತೆ ಕಾಯಿಲೆಗಳೂ ಏರುತ್ತಿವೆ ಎನ್ನುತ್ತಾರೆ. ಆರೋಗ್ಯ ಸಂಬಂಧದಲ್ಲಿ ನಡೆಯುತ್ತಿರುವ ಹೆರೆತವು ಲೂಟಿಯತ್ತ ಸಾಗಿ ದರೋಡೆಯಾಗುತ್ತಿರುವ ಬಗ್ಗೆ ಅವರೊಳಗಿನ ಆತಂಕ ನಿನ್ನೆ ಅವರನ್ನು ಭೇಟಿಯಾಗಿದ್ದಾಗ ಎದ್ದು ಕಾಣುತ್ತಿತ್ತು.

ಎಂಭತ್ತರ ದಶಕದಲ್ಲಿ ಮಹಿಷಿ ಮತ್ತು ದಬ್ಬಣಗದ್ದೆ ಭಾಗದಲ್ಲಿ ಬಹುವಾಗಿ ಮತ್ತು ಹೊಸದಾಗಿ ತನ್ನ ವಿರಾಟ್ ದರ್ಶನವನ್ನು ತೋರಿದ ಮಂಗನ ಕಾಯಿಲೆ ತೂದೂರಿನಲ್ಲಿ ಇವರು ಹಾಕಿದ್ದ ಕ್ಲಿನಿಕ್ ಕ್ಕಿಗೆ ಹೊಸ ಸವಾಲಾಯಿತು. ದೂರದ ಪುಣೆಯ ಸಂಶೋಧನಾಲಯಕ್ಕೆ ರೋಗಿಗಳಿಂದ ಪಡೆಯಲಾಗಿದ್ದ ರಕ್ತ ಹೋಗಿ ಅದರ ಫಲಿತಾಂಶ ಬರುವುದರೊಳಗೆ ನೂರಾರು ರೋಗಿಗಳು ಏಕೆ ಉಡು ಮಗ್ಗುಲು ಹಾಕುತ್ತಿದ್ದಾರೆ. ಟೈಫಾಯಿಡ್ ಗೆ ಕೊಡುವ ಚಿಕಿತ್ಸೆ ಕೊಟ್ಟರೂ ಗುಣವಾಗದ ರೋಗ ಅದಾವುದು? ಪ್ರತಿ ಗದ್ದೆಕೊಯ್ಲಿನ ಸಂದರ್ಭದಲ್ಲೇ ಮಲೆನಾಡಿನ ಜನರನ್ನು ಲಬೋ ಲಬೋ ಎನಿಸುತ್ತಿದ್ದ ಈ ಕಾಯಿಲೆ ಯಾವುದು?. ಆಗ ತಿಳಿದು ಬಂದ ಸತ್ಯವನ್ನರಸಿ ಮಂಗನ ಕಾಯಿಲೆ ಅಥವಾ ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆ ಎಫ್ ಡಿ)ಗೆ ಸಂಬಂಧಿಸಿದಂತೆ ಇವರು ಓಡಾಡದ ಸಣ್ಣಪುಟ್ಟ ಊರುಗಳಿರಲಿಲ್ಲ. ಮೈದಡವದ ದೇಹಗಳಿಲ್ಲ.ನೇವರಿಸದ ಮನಸ್ಸುಗಳಿಲ್ಲ.

ತೂದೂರು ಸುತ್ತ ಮುತ್ತಲಿನ ತಳಲೆ, ಮೂವಳ್ಳಿ, ಇರೆಗೋಡು, ಹೆಗಲತ್ತಿ, ಕುಡುಮಲ್ಲಿಗೆ, ಕನ್ನಂಗಿ, ಸಂಕ್ಲಾಪುರ, ಕುಂಬಿನಕೈ, ಕರ್ಕಿ, ಸೀಕೆ, ಗಬಡಿ, ಮಕ್ಕಿಕೊಪ್ಪ, ಇರುವತ್ತಿ, ಚಿಡುವ, ಬೇಗೊಳ್ಳಿ,  ಬಿದ್ರೊಳ್ಳಿಗಳಂತಹ ಊರುಗಳು ಡಾ.ಅನಿಲ್ ಕುಮಾರರ ಜೊತೆ ಇಂದಿಗೂ ಅನುಸಂಧಾನವನ್ನಿಟ್ಟುಕೊಂಡು ಮುಂದುವರಿಯುತ್ತಿವೆ.ಇವರು ಕೊಡುತ್ತಿದ್ದ ಚಿಕಿತ್ಸೆಗಿಂತ ಇವರು ರೋಗಿಗಳಿಗೆ ತುಂಬುತ್ತಿದ್ದ ಆತ್ಮ ವಿಶ್ವಾಸ ಭಯಂಕರದ ಪರಿಣಾಮ ಬೀರಿ ಮಾತ್ರೆ ಕಂಪೆನಿಗಳ ಕೆಂಗಣ್ಣಿಗೆ ಗುರಿಯಾಗುವಂತಹ ತೂಕದಂತವುಗಳು.ನಿನ್ನೆ ನಾನೂ, ನನ್ನ ಪತ್ನಿ ಸುಧಾ, ಸಹೋದರಿ ಇಂದಿರಾ ಮತ್ತು ದಬ್ಬಣಗದ್ದೆ ಶ್ರೀನಂದರವರು ಚಿಕಿತ್ಸೆ ನೀಡಲು ಮತ್ತೆ ಬರುತ್ತಿದ್ದಾರೆ ಎಂಬ ವಿಷಯ ತಿಳಿದು ಹೋದಾಗ ನಮಗೆ ಕಂಡದ್ದು ಅರವತ್ತೇಳು ವರ್ಷವಾಗಿದ್ದರೂ ಯವ್ವನಾವಸ್ಥೆಯಲ್ಲಿರುವ ಅದೇ ನಗುಮೊಗ,ಕಂಚಿನ ಕಂಠ ಮತ್ತು ಲವಲವಿಕೆಗಳು!.

ಅನಿಲ್ ಕುಮಾರ್ ಅವರ ಸಹೋದರ ಗುರುರಾಜ್ ರವರ ಜೊತೆಗಿನ ತಮ್ಮ ಒಡನಾಟವನ್ನು ಹಂಚಿಕೊಳ್ಳುವುದರಲ್ಲಿ ಇವರಿಗೆ ಹೆಚ್ಚಿನ ಆಸಕ್ತಿ. ಗುರು ರಾಜ್ ಆ ದಿನಗಳಲ್ಲಿ ಕೃಷಿಯ ಜೊತೆ ಏಗುತ್ತಾ ಹೋದ ಬಗೆ ಇಂದಿಗೂ ಇವರಲ್ಲಿ ಕ್ರಿಯಾಶೀಲ ನೆನಪುಗಳ ಮೆಲುಕು.

ಹೊಸ ಕಾಲದ ಪ್ರತಿ ಸಾಹಿತಿ ಬರಹಗಾರರನ್ನು ಗಮನಿಸುವ ಶ್ರೀಯುತರು ಆಸ್ಪತ್ರೆಗಳು ಮಲ್ಟಿ ಸ್ಪೆಷಾಲಿಟಿಗಳಾಗಿ ಪರಿವರ್ತನೆಯಾಗಿವೆ.ಕ್ರೂಷಿಯಲ್ ಸಂದರ್ಭದಲ್ಲಿ ಈ ತರಹದ ಆಸ್ಪತ್ರೆಗಳು ಮನುಷ್ಯತ್ವ ಕಳೆದುಕೊಂಡದ್ದರ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾರೆ .ಕ್ಲಿನಿಕ್ಕಿನಿಂದ ತಮ್ಮದೊಂದು ನರ್ಸಿಂಗ್ ಹೋಮ್ ಆರಂಭಿಸಿದಾದ ಮೇಲೆ ಅನಿಲ್ ಕುಮಾರ್ ರವರನ್ನು ಲಾಭ ನಷ್ಟದ ಲೆಕ್ಕಾಚಾರಕ್ಕೆ ಸೀಮಿತಗೊಳಿಸಿದ್ದರ ಗ್ರಹಿಕೆ ಇವರನ್ನು ಎಚ್ಚರಗೊಳಿಸುತ್ತದೆ. ತುಂಬ ದಿನಗಳ ಕಾಲ ನರ್ಸಿಂಗ್ ಹೋಮ್ ಗೂ ಹೋಗದೆ ತಮ್ಮ ಪ್ರಾಕ್ಟೀಸ್ ಗೆ ಗುಡ್ ಬೈ ಹೇಳಿ ಸುಮ್ಮನೆ ಕೂತು ಇವರ ಲಾಗಾಯ್ತಿನ ಅಭಿಮಾನಿ ಪೇಷೆಂಟುಗಳು ತಲ್ಲಣಗೊಳ್ಳುವಂತೆ ಮಾಡುತ್ತಾರೆ. ಇವರು ಸ್ಥಾಪಿಸಿದ್ದ ನರ್ಸಿಂಗ್ ಹೋಮ್ ಅನ್ನು ಸರ್ಜಿ ಎಂಬ ಸರಣಿ ಆಸ್ಪತ್ರೆಗಳ ಸಂಸ್ಥೆಗೆ ವಹಿಸಿಕೊಟ್ಟು ತಣ್ಣಗೆ ಕುಳಿತಿದ್ದಾಗ ಸರಣಿ ಆಸ್ಪತ್ರೆಯ ಹೆಸರಿನ ಜೊತೆ ಪುಷ್ಯ ನರ್ಸಿಂಗ್ ಹೋಮ್ ಎಂಬ ಹೆಸರು ನೋಡಿಯೇ ನೂರಾರು ರೋಗಿಗಳು ಬಂದು ಅನಿಲ್ ಕುಮಾರ್ ಇದ್ದಾರೆಯೇ ಎಂಬ ಪ್ರಶ್ನೆಯನ್ನು ಪ್ರತಿ ದಿನ ಎಸೆಯುತ್ತಾರೆ.

ಆದರೆ ಅನಿಲ್ ಕುಮಾರ್ ಅಲ್ಲಿಲ್ಲದೆ ಇರುವುದನ್ನು ತಿಳಿದು ವಾಪಾಸು ಮರಳುತ್ತಾರೆ.ಎಲ್ಲಿಯ ತನಕ ಜ್ಞಾನ ಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ.ಯು.ಆರ್ ಅನಂತ ಮೂರ್ತಿಯವರ ಸಹೋದರ ಅನಿಲ್ ಕುಮಾರ್ ರವರ ಅನುಪಸ್ಥಿತಿಯನ್ನು ಸರಣಿ ಒಡೆತನದ ಆಸ್ಫತ್ರೆ ಸಹಿಸಿ ಕೊಂಡೀತು.ಮತ್ತೆ ಅನಿಲ್ ಕುಮಾರ್ ಆಸ್ಪತ್ರೆಗೆ ಬರಬೇಕಾಯಿತು.ನಿನ್ನೆ ಅವರ ಆಸ್ಪತ್ರೆಗೆ ಹೋದಾಗ ಇವರ ಲವಲವಿಕೆ ಮತ್ತೆ ನಮ್ಮೆಲ್ಲರ ಕಣ್ಣೆದುರು ನಿಲ್ಲುವಂತಾಯಿತು. ಹೆಗ್ಗಾರು ಘಟ್ಟವನ್ನು ಹೇಗಾದರೂ ಉಳಿಸಿಕೊಳ್ಳಬೇಕು ಎಂಬ ಇವರು ಬಹು ಹಿಂದೆ ದಬ್ಬಣಗದ್ದೆ ಶ್ರೀನಂದನ ಹತ್ತಿರ ಹೇಳಿದ್ದನ್ನು ಮತ್ತೊಮ್ಮೆ ಈತ ನೆನಪಿಸಿಕೊಂಡ.


  • ನೆಂಪೆ ದೇವರಾಜ್ (ಲೇಖಕರು, ಪತ್ರಕರ್ತರು), ತೀರ್ಥಹಳ್ಳಿ

5 1 vote
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW