ಆಲೆಮನೆ ಎಂದರೆ ಕಬ್ಬಿನ ರಸದಿಂದ ಬೆಲ್ಲವನ್ನು ತಯಾರಿಸುವಂತಹ ಜಾಗ. ಲೇಖಕ ನಟರಾಜ್ ಸೋನಾರ್ ಅವರು ಈ ಆಲೆಮನೆ ಕುರಿತು ಬರೆದಂತಹ ಲೇಖನ, ತಪ್ಪದೆ ಓದಿ…
ಹಂಪಿಯಿಂದ ಹೊಸಪೇಟೆ ಮಾರ್ಗವಾಗಿ ಇಳಿಹೊತ್ತು ಕಾರ್ ನ್ನು ಡ್ರೈವ್ ಮಾಡಿಕೊಂಡು ಕುಷ್ಟಗಿ ಗೆ ಬರುತ್ತಿದ್ದಾಗ ದಾರಿಯಲ್ಲಿ ಘಮ ಘಮ ಬೆಲ್ಲದ ವಾಸನೆಯು ಬರುತ್ತಿರಲಾಗಿ ಕಾರಿನಲ್ಲಿದ್ದ ನಮ್ಮ ತಂಗಿ ಗೀತಾ ಟೀಚರ್ , ಅಳಿಯ ಫಣಿ , ನನ್ನ ಪತ್ನಿ ಉಮಾ, ಹರ್ಷಿತ್ ಸುಮಂತ್ ಅಲ್ಲಿಗೆ ಹೋಗೋಣ ನಾವು ನೋಡಿಲ್ಲ ಎಂದು ಹಕ್ಕೊತ್ತಾಯ ಕ್ಕೆ ಮಣಿದು ಕಾರ್ ಸ್ಟೇರಿಂಗ್ ಹೊರಳಿಸಿದೆ. ಅದು ಒಂದು ಕಬ್ಬಿನ ಲೋಕ ಸಿಹಿಯಾದ ರಸ ಪಾಕ.
ಕಬ್ಬಿನ ಗಾಣದ ಪ್ರವೇಶಕ್ಕೆ ಒಬ್ಬ ಯಜಮಾನರು ಎಲ್ಲಿಗೆ? ಎಂದರು. ಇಲ್ಲ ಕಬ್ಬಿನ ಗಾಣ ಅಲೆಮನೆ ನೋಡುವೆವು ಎಂದೆ. ಬರ್ರೀ ಈ ಜಾಗದಲ್ಲಿ ಮೂವತ್ತಕ್ಕೂ ಹೆಚ್ಚು ಕಬ್ಬಿನ ಗಾಣಗಳಿವೆ ಎಂದ !
ಹೌಹಾರಿ ಪ್ರಶ್ನೆಗಳ ಕೇಳುತ್ತಾ ಹೋದೆ ? ಬರ್ರೀ ಯಾವ ಊರು? ಎಂದು ಕರೆದುಕೊಂಡು ಹೋಗಿ ಮೊದಲಿಗೆ, ಕಬ್ಬು ಅರೆಯುವ ಮಶೀನ್ ನ ಹತ್ತಿರ ಇಬ್ಬರು ಹೆಣ್ಣು ಮಕ್ಕಳು ಹಾಗೂ ಇಬ್ಬರು ವಯಸ್ಸಿನ ಹುಡುಗರು ಕಬ್ಬುತಂದು ಗಾಣದ ಬಾಯಿಗೆ ನೂಕುತ್ತಿದ್ದರು. ಕಬ್ಬಿನ ಹಾಲಿನ ಪಾಕದಂತ ರಸವು ದೊಡ್ಡ ಪ್ರಮಾಣದ ಮೂರು ಬಾನಿ ಬಾನಿಗಳ ಕೆಳಗೆ ನಿಗಿ ನಿಗಿ ಬೆಂಕಿ ಆ ಬೆಂಕಿಗೆ ಕೊತ ಕೊತ ಕುದಿಯುವ ದೃಶ್ಯ ಇದರಲ್ಲಿ ಮೊದಲ ಬಾನಿಗೆ ಬಂದು ಸೇರುತ್ತಿತ್ತು. ಅದಕ್ಕೆ ಅಗತ್ಯವಾದಷ್ಟು ಕೆಮಿಕಲ್ ಸ್ವಲ್ಪ ಸುಣ್ಣ, ಮತ್ತಿತರ ದ್ರಾವಣ ಸೇರಿಸಿ, ನಂತರ ಉರಿಯುವ ಒಲೆಯ ಬಾಣಲೆಗೆ ರವಾನೆಯಾಗುತ್ತಿತ್ತು. ಸಾಕಷ್ಟು ಬೆಂಕಿಯಿಂದ ಕುದ್ದ ಕಬ್ಬಿನ ರಸವು ಎರಡನೆಯ ಬಾಣಲೆಯಿಂದ ಮೂರನೆ ಬಾಣಲೆಗೆ ಬಂದು ಶೇಖರಣೆಯಾಗಿ ಬೆಲ್ಲದ ಚೌಕಾಕಾರದ ಜಾಗಕ್ಕೆ ಸೇರುತಿತ್ತು. ನಂತರ ಬೆಲ್ಲದ ಪಾಕವನ್ನು ನೆಲದಲ್ಲಿ ಈ ಮೊದಲೆ ಮಾಡಲಾದ ಜಾಗಕ್ಕೆ ಸುರಿದು ಆರಲು ಬಿಟ್ಟಿದ್ದರು. ಅದು ಮುಂಧ ಹಲಗಿ ಬೆಲ್ಲವಾಗಿ ರಾಜ್ಯದ ನಾನಾಕಡೆ ಮಾರಾಟಕ್ಕೆ ಸಿದ್ದ ಪಡಿಸುತ್ತಿದ್ದರು.
ಒಂದು ಡಬ್ಬಿಯಲ್ಲಿ ೧೧ ಕೆಜಿ ಲೆಕ್ಕದಲ್ಲಿ ಆರು ಜನ ಕಾರ್ಮಿಕರು ಸತತ ಬೆಳಿಗ್ಗೆ ೬ ರಿಂದ ಸಂಜೆ ೫ ರವರೆಗೆ ಕೆಲಸ ಮಾಡುವುದು ಕಷ್ಟ. ನಮಗೆ ಕಬ್ಬಿನ ಬಿಸಿಯಾದ ಹಾಲು ಕುಡಿಯಲು ನೀಡಿದರು.
ಅಹಾ ! ಅದರ ರುಚಿ ! ಬೆಲ್ಲದ ಸ್ವಾದ !
ಕಬ್ಬುನ್ನು ಹಿಂಡಿ ಕಬ್ಬಿನ ರಸವನ್ನು ತಗೆದು ಅದರ ಸೊಪ್ಪನ್ನು ಬಿಸಿಲಲ್ಲಿ ಒಣಗಿಸಿ ಅದನ್ನೇ ಕಬ್ಬಿನ ಗಾಣದ ಉರುವಲನ್ನಾಗಿಸಿಕೊಳ್ಳುವ ಜಾಣ್ಮೆಮಾನವನದು. ಕಬ್ಬಿಗೆ ಇದ್ದರು ಬೆಲೆ ! ರಸ ಇಲ್ಲದಾಗಲು ಬೆಲೆ! ನೀ ನಾರಿಗಾದೆಲೋ ಎಲೆಮಾನವ ? ವೈರಾಗ್ಯ ಬಂದಾತಾಯಿತು.
ಇನ್ನಷ್ಡು ವಿವರ :
#ಆಲೆಮನೆ, ಕಬ್ಬಿನ ರಸದಿಂದ ಬೆಲ್ಲವನ್ನು ತಯಾರಿಸುವ ಜಾಗ. ಆಲೆ ಎಂದರೆ ಕಬ್ಬಿನ ಗಾಣ. ಆಲೆಮನೆ ಎಂದರೆ ಕಬ್ಬನ್ನು ಹಿಂಡಿ ಬೆಲ್ಲ ಮಾಡುವ ಜಾಗ.
ಜನಪದ ಜೀವನದಲ್ಲಿ ಕಬ್ಬು ಬೆಳೆಯುವುದು, ಅದನ್ನು ಮುರಿದು ಆಲೆಯಾಡುವುದು, ಬಂದ ಬೆಲ್ಲದಲ್ಲಿ ಮನೆ ಬಳಕೆಗೆ ಬೇಕಾಗುವಷ್ಟನ್ನು ಇಟ್ಟುಕೊಂಡು ಉಳಿದದ್ದನ್ನು ಮಾರುವುದು-ಒಂದು ಲಾಭದಾಯಕ ಉದ್ಯೋಗ ಎನ್ನಬಹುದು: ಸಣ್ಣ ಪ್ರಮಾಣದ ಕೈಗಾರಿಕೆ ಎನ್ನಬಹುದು.
ಇಡೀ ವರ್ಷ ಬೆವರನ್ನು ಸುರಿಸಿ ಎದೆಯ ರಕ್ತವನ್ನು ಭೂಮಿತಾಯಿಗೆ ಬಸಿದು ಬೆಳೆದ ಕಬ್ಬನ್ನು ಆಲೆಯಾಡಿ, ಬೆಲ್ಲದಡಿಗೆಯನ್ನು ಕಂಡಾಗ ರೈತರಿಗಾಗುವ ಸಂತೋಷ ಹೇಳತೀರದು. ಏಕೆಂದರೆ ಕಬ್ಬಿನ ಬೆಳೆಗೆ ಹೆಚ್ಚು ದುಡಿಮೆ ಬೇಕು. ಕಾಳಜಿ ಬೇಕು. ನಿರಂತರ ನಿಗವಿಲ್ಲದೆ ಕಾಟಾಚಾರಕ್ಕೆ ಕೈ ಸೇರುವ ಫಸಲಲ್ಲ ಅದು, ಸಲೀಸಾಗಿ ಬರುವ ಬೆಳೆಯಲ್ಲ.
ಕಬ್ಬಿನ ತೋಟದಿಂದ ಪ್ರತಿಯೊಂದು ಕುಳವೂ ಕಬ್ಬನ್ನು ಮುರಿದು ತಂದು ಆಲೆಮನೆಯಲ್ಲಿ ರಾಶಿ ಹಾಕುತ್ತಾರೆ. ಸರದಿಯ ಪ್ರಕಾರ ಪ್ರತಿಯೊಂದು ಕುಳವೂ ಗಾಣಕ್ಕೆ ಅವರವರ ಎತ್ತುಗಳನ್ನು ಕಟ್ಟಿ, ನಿಗದಿಯಾದಷ್ಟು ಡಬ್ಬ ಹಾಲು ಬರುವವರೆಗೂ ಕಬ್ಬು ಹಿಂಡಿ ಕೊಪ್ಪರಿಗೆಗೆ ಹುಯ್ಯುತ್ತಾರೆ.
ಎರಡು ಕೊಪ್ಪರಿಗೆಗಳಲ್ಲೂ ಹಾಲು ಕಾಯುತ್ತಿರುತ್ತದೆ. ಮೇಲಿನ ಒಲೆಗೆ ಅಷ್ಟು ಹೆಚ್ಚು ಉರಿ ತಾಕದಿರುವುದರಿಂದ ಆ ಕೊಪ್ಪರಿಗೆಯ ಹಾಲು ಅಷ್ಟು ಬೇಗ ಕಾಯುವುದಿಲ್ಲ. ಆದರೆ ಮೊದಲನೆಯ ಒಲೆಯ ಮೇಲೆ ಹಾಲು ಬೇಗ ಕಾಯುತ್ತದೆ. ಹಾಲು ಕಾದಾಗ ಮೇಲುಗಡೆ ಮಡ್ಡಿ ಬರುತ್ತದೆ. ಅದನ್ನು ಚಿಬ್ಬಲಿನಿಂದ ಗೋರಿ ಹಾಕುತ್ತಾರೆ. ಕಾದ ಹಾಲಿಗೆ ಹೆಬ್ಬೆರಳು ಗಾತ್ರದ ಹೆಪ್ಪನ್ನು (ಸುಣ್ಣವನ್ನು) ಹಾಕುತ್ತಾರೆ. ಸೊನೆ ನೆಲದ ತ್ರಾಣವನ್ನು ಅವಲಂಬಿಸಿರುತ್ತವೆ. ಮೊದಲು ದೊಡ್ಡ ಉಕ್ಕಲು ಕೊಪ್ಪರಿಗೆಯ ಕಂಠದವರೆಗೂ ಬರುತ್ತದೆ.
ಆಮೇಲೆ ತಳಕ್ಕೆ ಇಳಿದುಹೋಗುತ್ತದೆ. ಹಾಗೇ ಇನ್ನೂ ಉರಿಯನ್ನು ಹಾಕುತ್ತಿದ್ದರೆ ಕಾದು ಕಾದು ಸ್ವಲ್ಪ ಕೆಂಪು ಬಣ್ಣಕ್ಕೆ ತಿರುಗಿದ ಪಾಕ ಮತ್ತೆ ಕಂಠದವರೆಗೂ ಉಕ್ಕುಬರದೆ ತಳದಲ್ಲೇ ಸಣ್ಣುಕ್ಕಲು ಬರುತ್ತದೆ. ಅದಕ್ಕೆ ಗೆಜ್ಜೆಯುಕ್ಕಲು ಎಂದೂ ಕರೆಯುತ್ತಾರೆ. ಬೆಲ್ಲ ಬೇಯಿಸುವುದರಲ್ಲಿ ನಿಷ್ಣಾತವಾದ ರೈತ ಕೈಯನ್ನು ನೀರಲ್ಲಿ ಅದ್ದಿ ಕುದಿಯುವ ಪಾಕವನ್ನು ಸರಕ್ಕನೆ ಬೆರಳಲ್ಲಿ ತೆಗೆದುಕೊಂಡು ನೀರಿನಲ್ಲಿ ಹಾಕಿ ಹಿಸುಕಿ ನೋಡುತ್ತಾನೆ. ಎಳಾದ (ಎಳೆಯ+ಹದ) ಆಗಿದ್ದರೆ ಅದು ಹರಿದುಕೊಂಡು ಹೋಗುತ್ತದೆ. ಸರಿಯಾದ ಹದವಿದ್ದರೆ ನೀರಿಗೆ ಹಾಕಿ ಹಿಸುಕಿದ ಕ್ಷಣ ಗಟ್ಟಿಗಾಗಿ ಬಿಡುತ್ತದೆ. ಕೂಡಲೇ ತರದೂದಿನಿಂದ ತಲಾತಟ್ಟಿಗೆ ಓಡಿಬಂದು ಕೊಪ್ಪರಿಗೆಯ ಬಳೆಗಳಿಗೆ ದೆವಗೆ (ಬೊಂಬು) ತೂರಿಸಿ ಕೆಳಕ್ಕಿಳಿಸಿ ಮತ್ತೊಂದು ಕೊಪ್ಪರಿಗೆಗೆ ಬಗ್ಗಿಸುತ್ತಾರೆ. ಆ ಕೊಪ್ಪರಿಗೆಯನ್ನು ಯಥಾಪ್ರಕಾರ ಒಲೆಯ ಮೇಲಿಟ್ಟು ಮೇಲಿನ ಒಲೆಯ ಮೇಲೆ ಕಾದಿರುವ ಹಾಲನ್ನು ಅದಕ್ಕೆ ಹುಯ್ಯುತ್ತಾರೆ. ಈ ಕಡೆ ಗ್ವಾರೆಯನ್ನು (ಗೋರೆ) ಆಡಿಸುತ್ತಾ ಪಾಕ ಆರಿಸುತ್ತಾರೆ. ಆಮೇಲೆ ಅಚ್ಚಿನ ಮಣೆಗೆ ಅದನ್ನು ಬಗ್ಗಿಸುತ್ತಾರೆ. ಚೂಪುಗತ್ತಿಯಿಂದ ಕೊಪ್ಪರಿಗೆಗೆ ಅಂಟಿರುವ ಪಾಕವನ್ನು ಹೆರೆದು ಹಾಕುತ್ತಾರೆ. ಇನ್ನೊಂದು ಒಲೆ (ಅಡಿಗೆ) ಬರುವಷ್ಟರಲ್ಲಿ ಅಚ್ಚಿನ ಮಣೆಯನ್ನು ದಬ್ಬಾಕುತ್ತಾರೆ. ಮೇಲಿನಿಂದ ಹಾರೆಕೋಲಿನಿಂದ ತೆಗೆದುಕೊಂಡು ಕುಟ್ಟುತ್ತಾರೆ. ಅಚ್ಚುಗಳೆಲ್ಲ ಕೆಳಗೆ ಬೀಳುತ್ತವೆ. ಬಿಡುವಿದ್ದ ವೇಳೆಯಲ್ಲಿ ಕೆಳಗೆ ಎರಡು ಕಟ್ಟು ಹಾಕಿ ಅದರ ಮೇಲೆ ಕಬ್ಬಿನ ಗರಿಯನ್ನು ಹಾಸಿ, ಅಚ್ಚುಗಳನ್ನು ಇಟ್ಟು ಮೂಟೆ ಕಟ್ಟುತ್ತಾರೆ. ಇದಕ್ಕೆ ಪೆಂಡಿ ಎಂದೂ ಕರೆಯುತ್ತಾರೆ. ಒಂದೊಂದು ಮೂಟೆ ಯಲ್ಲಿ ಐವತ್ತು ಅಥವಾ ಐವತ್ತನಾಲ್ಕು ಅಚ್ಚುಗಳಿರುತ್ತವೆ.
ಇಂಥ ಎರಡು ಮೂಟೆ ಗಳಿಗೆ ಒಂದು ಅಡುಗೆ ಬೆಲ್ಲ ಎನ್ನುತ್ತಾರೆ. ತಮ್ಮ ತಮ್ಮ ಹಸುಗೆಯಲ್ಲಿ ಎಷ್ಟು ಅಡುಗೆ ಬೆಲ್ಲವಾಯಿತು ಎಂಬುದರ ಮೇಲೆ ಅವರ ದುಡಿಮೆಯ ಸಾರ್ಥಕತೆ ಅಥವಾ ಅಸಾರ್ಥಕತೆ ನಿಗದಿಯಾಗುತ್ತದೆ. ಸಣ್ಣ ಮತ್ತು ದೊಡ್ಡ ಪ್ರಮಾಣದಲ್ಲಿ ಬೆಲ್ಲವನ್ನು ಅಚ್ಚು ಹುಯ್ಯುವಂತೆ ಉಂಡೆಗಟ್ಟುವ ಪದ್ಧತಿಯೂ ಉಂಟು.
ಇನ್ನು ಕೆಲವು ಬಾರಿ ಜೋನಿ ಬೆಲ್ಲಮಾಡಿ ಡಬ್ಬ ಅಥವಾ ಮಡಿಕೆಯಲ್ಲಿ ತುಂಬುತ್ತಾರೆ.
ಬೆಲ್ಲದ ಇನ್ನು ಕೆಲವು ಮಾದರಿಗಳು ಹೀಗಿವೆ:
ತಟ್ಟೆ ಬೆಲ್ಲ, ಆರತಿ ತಟ್ಟೆಗೆ ಪಾಕವನ್ನು ಬಿಟ್ಟು ಅದಕ್ಕೆ ಕೊಬ್ಬರಿತುರಿ, ಕಡಲೆ, ಗಸೆಗಸೆ, ಏಲಕ್ಕಿಪುಡಿ ಮುಂತಾದುವುಗಳನ್ನು ಉದುರಿಸುತ್ತಾರೆ.
ಆರಿದ ಮೇಲೆ ತಟ್ಟೆಯಿಂದ ಅದನ್ನು ಎಬ್ಬುತ್ತಾರೆ. ಅದು ತಿನ್ನಲು ತುಂಬ ರುಚಿಯಾಗಿರುತ್ತದೆ. ಚಿಟ್ಟಚ್ಚು : ದೊಡ್ಡಚ್ಚಿನ ಮಣೆಗೆ ಬದಲಾಗಿ ಚಿಟ್ಟಚ್ಚಿನ ಮಣೆ ಇರುತ್ತದೆ. ಮದುವೆ ಮುಂಜಿ ಇವುಗಳಲ್ಲಿ ಹೆಂಗಸರಿಗೆ ಮಡಿಲುದುಂಬುವಾಗ ಬೆಲ್ಲದ ಅಚ್ಚನ್ನು ಇಡಬೇಕಾಗುತ್ತದೆ.
ಅದಕ್ಕೋಸ್ಕರವಾಗಿ ಚಿಟ್ಟಚ್ಚಿನ ಮಣೆಗೆ ಪಾಕ ಹೊಯ್ದು ಚಿಟ್ಟಚ್ಚುಗಳನ್ನು ಮಾಡಿಕೊಳ್ಳುತ್ತಾರೆ. ಇನ್ನು ಕೆಲವು ಕಡೆ ಕಾಕಂಬಿ ಬೆಲ್ಲವನ್ನು ತಯಾರಿಸುತ್ತಾರೆ.
ಇದನ್ನು ತಯಾರಿಸುವ ವಿಧಾನ ಈ ರೀತಿ ಇದೆ:
ಬೆಲ್ಲದ ಹದಕ್ಕೆ ಬರುವ ಮುನ್ನ ಪಾಕವನ್ನು ಹೊಸ ಮಡಕೆಗಳಿಗೆ ಹಾಕಿ ಕೆಲವು ದಿನಗಳು ಬಿಡುತ್ತಾರೆ. ಅನಂತರ ಅದರ ಮೇಲೆ ಗಸಗಸೆಯನ್ನು ಉದುರಿಸುತ್ತಾರೆ. ಗಸಗಸೆಯ ಕಾಳುಗಳು ಮೇಲೆದ್ದು ಕಾಣುವ ಆ ಬೆಲ್ಲ ತಿನ್ನಲು ಬಲು ರುಚಿ.
ಹಳ್ಳಿಯ ಕಡೆ ಶಾಲೆಗೆ ಹೋಗುವ ಮಕ್ಕಳ ಜೇಬುಗಳಲ್ಲಿ ಬೆಳಗಿನ ತಿಂಡಿಯಾಗಿ ಇದು ಅಡಗಿರುತ್ತದೆ. ಸಕ್ಕರೆ: ಹೊಸ ಗಡಿಗೆಗೆ ಪಾಕ ಬಗ್ಗಿಸಿ ಅದರ ಬಾಯಿ ಮುಚ್ಚಿ ಮಣ್ಣಿನಿಂದ ಮೆತ್ತೆ ಹಾಕುತ್ತಾರೆ. ಮೂರು ತಿಂಗಳವರೆಗೂ ಅದನ್ನು ತೆಗೆಯುವುದಿಲ್ಲ. ಆಮೇಲೆ ತೆಗೆದಾಗ, ಗಡಿಗೆಗೆ ಬಿಟ್ಟಿದ್ದ ಪಾಕ ಮರಳು ಮರಳಿನಂತೆ ಸಕ್ಕರೆ ಆಗಿರುತ್ತದೆ. ಆದರೆ ಸಕ್ಕರೆಯ ಬಣ್ಣ ಅದಕ್ಕಿರುವುದಿಲ್ಲ. ಕೆಂಪಾಗಿಯೇ ಇರುತ್ತದೆ. ಸಕ್ಕರೆ ಮಾಡುವ ಜನಪದ ವಿಧಾನ ಇದು.
ಆಲೆಮನೆ ನಗೆಹೊಗೆಯ ಕಲಸು ಮೇಲೋಗರ ಎನ್ನಬಹುದು. ಇರುಳು ಹೊತ್ತು ಅಡಿಗೆ ಬಂದಾಗ ಕೆಲವರು ಮಲಗಿರುತ್ತಾರೆ. ಎಬ್ಬಿಸಿದ ಕೂಡಲೇ ಏಳಬೇಕು.
ಕಾರಣ ಒಲೆಯ ಮೇಲಿನಿಂದ ಕೊಪ್ಪರಿಗೆಯನ್ನು ಇಳಿಸುವುದು ತಡವಾದರೆ ಪಾಕ ಕಂಟು ಹಿಡಿದು ಬೆಲ್ಲ ಕೆಟ್ಟುಹೋಗುತ್ತದೆ. ಆಗ ಆ ಕುಳಕ್ಕೆ ನಷ್ಟವಾಗುತ್ತದೆ. ಆದ್ದರಿಂದ ಆ ಸಮಯದಲ್ಲಿ ಸಿಟ್ಟಿನ ಮಾತುಗಳೂ ಹೊರಬರುತ್ತವೆ. ಹಾಗೆಯೇ ತಮಾಷೆಯ ಪ್ರಸಂಗಗಳೂ ಇರುತ್ತವೆ.
- ನಟರಾಜ್ ಸೋನಾರ್ (ಮಾಜಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ) ಕುಷ್ಟಗಿ.