ರವಿ ಕೈಯಲ್ಲಿದ್ದ ಪತ್ರವನ್ನು ಓದಿ ಕಣ್ಣುಗಳಿಂದ ನೀರು ಹರಿಯತೊಡಗಿತು.ರವಿ ಮತ್ತು ಕಿಶೋರ ಇಬ್ಬರೂ ಒಂದೇ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದರು, ಇಬ್ಬರಲ್ಲಿ ಮನಸ್ತಾಪವಾಗಿ ಮುಂದೆ ಇವರ ಸ್ನೇಹ ಏನಾಯಿತು?…ಹರಿಹರ ಬಿ ಆರ್ ಅವರ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…
ರವಿ ಮತ್ತು ಕಿಶೋರ ಇಬ್ಬರೂ ಒಂದೇ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದು ಆಪ್ತ ಸ್ನೇಹಿತರಾಗಿದ್ದರು. ಒಮ್ಮೆ ಕೀಶೋರ ತುರ್ತಾಗಿ ರಜೆಯ ಮೇಲೆ ಹೋಗಬೇಕಾಗಿತ್ತು. ಆಗ ರವಿಗೆ ಒಂದು ಮುಖ್ಯ ವಿಷಯವನ್ನು ವಿವರಿಸಿ ಅದನ್ನು ಮುಗಿಸಿಕೊಡಲು ಹೇಳಿ ಹೋಗಿದ್ದ.
ಮಾರನೇ ದಿನ ಕಿಶೋರ ಬಂದವನೇ ಅಧಿಕಾರಿಯಿಂದ ಒಪ್ಪಿಸಿದ್ದ ಕೆಲಸದ ಬಗ್ಗೆ ಬೈಸಿಕೊಂಡ. ಏನೆಂದು ತಲೆ ಬುಡ ಅರಿಯದೆ ಇರುವ ವಿಷಯ ತಿಳಿಸಿ “ನಿನ್ನೆ ಮನೆಯ ಕಡೆ ತುರ್ತಾದ ಕೆಲಸ ಇದ್ದುದರಿಂದ ನನಗೆ ಏನಾಗಿದೆಯೆಂದು ತಿಳಿಯುತ್ತಿಲ್ಲ. ಸರಿಯಾಗಿ ಏನಾಗಿದೆಯೆಂದು ತಿಳಿದುಕೊಂಡು ನಿಮಗೆ ವಿಷಯ ಈಗಲೇ ತಿಳಿಸುವೆ.” ಎಂದು ತನ್ನ ಕುರ್ಚಿಯ ಕಡೆ ನಡೆದ.
ಸ್ನೇಹಿತ ರವಿಯ ಬಳಿ ಹೇಳಿಕೊಂಡಾಗ, “ಓ ಅದಾ ಏನೋ ಗೊತ್ತಿಲ್ಲದೆ ತಪ್ಪಾಗಿದೆ.” ಎಂದು ನಗುತ್ತಾ ನುಡಿದ.
“ತಪ್ಪಾಗಿದೆ ಅಂತ ಗೊತ್ತಾಗಿ ಹಾಗೇ ಕೊಟ್ಟೆಯಾ? ಸರಿ ಬಿಡು. ನನಗೆ ಹೀಗೆಲ್ಲ ಮಾಡಿದರೆ ಸರಿಹೋಗಲ್ಲ. ಈಗಲೇ ನನ್ನ ಅಧಿಕಾರಿಗಳಿಗೆ ಇರುವ ವಿಷಯ ತಿಳಿಸಿ ಬರ್ತೀನಿ. ಅವರು ಕಾಯ್ತಾ ಇದಾರೆ.” ಎಂದು ಹೇಳುತ್ತಾ ಅಧಿಕಾರಿಯವರಿಗೆ ವಿಷಯವನ್ನೆಲ್ಲ ತಿಳಿಸಿದ. ಅವರು ರವಿಯನ್ನು ಕರೆದು ಕೂಗಾಡಿದರು. ಇದರಿಂದ ಅವಮಾನಿತನಾದ ರವಿಯು ಕಿಶೋರನ ಕಡೆ ತಿರುಗಿ ಕೆಕ್ಕರಿಸಿ ನೋಡುತ್ತಾ ಆಚೆಗೆ ಬಿರಬಿರನೆ ನಡೆದು ಹೋದ.
ಇದಾದಂದಿನಿಂದ ರವಿಯು ಕಿಶೋರನ ಕಡೆ ತಿರುಗಿಯೂ ನೋಡುತ್ತಿರಲಿಲ್ಲ. ಕಿಶೋರನೇ ಮೇಲೆ ಬಿದ್ದು ಮಾತನಾಡಿಸಲು ಬಂದರೂ, ಏನೂ ಉತ್ತರ ಕೊಡದೆ ಸುಮ್ಮನಾಗಿಬಿಡುತ್ತಿದ್ದ.
ಒಂದು ವಾರದ ನಂತರ ಅಧಿಕಾರಿಯವರು ರವಿಗೆ ಬರಲು ಹೇಳಿಕಳಿಸಿದ್ದರು. ಅದರಂತೆ ಒಳಗಡಿಯಿರಿಸುತ್ತಿರಲು ಅವರ ಜೊತೆ ಕಿಶೋರ ಇದ್ದುದನ್ನು ನೋಡಿ, ‘ಇಂದೇನೋ ದೊಡ್ಡ ಆವಾಂತರವಾಗಬಹುದು. ಅಂದು ಅವನಿಗೆ ಸರಿಯಾಗಿ ಕೆಲಸ ಮಾಡಿಕೊಟ್ಟದ್ದರೆ ಚೆನ್ನಿರುತ್ತಿತ್ತು. ಸೋಲೊಪ್ಪಿಕೊಳ್ಳೋಣವೆಂದು ನಿರ್ಧರಿಸಿದ್ದರೂ ಏನು ಕೇಳಬಹುದು’ ಎಂದು ಗಲಿಬಿಲಿಗೊಂಡಿದ್ದ.
“ಬನ್ನಿ ಕೂತ್ಕೊಳಿ. ಮೊದಲಿಗೆ ನಿಮಗೆ ಒಂದು ಆದೇಶವನ್ನು ಕೊಡುತ್ತಿದ್ದೇನೆ. ಅದನ್ನು ಗಮನವಿಟ್ಟು ಓದಿ.” ಎಂದು ನುಡಿದರು.
ರವಿಯು ಗಾಬರಿಯಿಂದ ಅದನ್ನು ಪಡೆದು ಓದಿಕೊಂಡ. ಅದರಲ್ಲಿ ಆ ಕಚೇರಿಯ ಘನತೆ ಕಾಪಾಡಲು ಕೆಲವು ನಿಯಮಗಳಿದ್ದವು. ಕೊನೆಯಲ್ಲಿ ನಿಯಮಗಳನ್ನು ಪಾಲಿಸುವುದು ಹಾಗೂ ಅದನ್ನು ಚೆನ್ನಾಗಿ ಮನನ ಮಾಡಿ ಕೊನೆಯತನಕ ಶಿಸ್ತಿನಿಂದ ಇದ್ದು ಸಹಕಾರಿಯಾಗಿರುವುದನ್ನು ಆ ಆದೇಶವು ತೋರುತ್ತಿತ್ತು. ರವಿಯು ‘ಇದೆಲ್ಲ ಸರಿ. ಆದರೆ ಇನ್ನೂ ಏನು ಹೇಳುವರೋ’ ಗಾಬರಿಯಿಂದ ನೋಡುತ್ತಿದ್ದ.
“ಇದಲ್ಲದೆ ನಿಮ್ಮನ್ನು ಮನೆಗೆ ಕಳಿಸುವ ಇನ್ನೂ ಒಂದು ಆದೇಶ ಕಾದಿದೆ. ಅದು ಏಕೆಂದು ನಿಮಗೆ ಚೆನ್ನಾಗಿ ತಿಳಿದಿದೆ. ಆ ಪತ್ರವೂ ಸಿದ್ಧವಾಗುತ್ತಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಹಸ್ತಾಂತರಿಸುತ್ತೇನೆ.”
ಈಗ ರವಿಯ ಕಣ್ಣುಗಳಿಂದ ನೀರು ಹರಿಯತೊಡಗಿತು. ‘ಇದೋ ನಿನ್ನ ಕಿತಾಪತಿ’ ಎಂದು ಕಿಶೋರನ ಕಡೆ ತಿರುಗಿ ಎದ್ದು ನಿಲ್ಲಲು ಹೋದ.
“ತಾಳ್ಮೆಯಿರಲಿ. ದುಡುಕುತನವು ಸಲ್ಲ. ಈಗಾಗಲೇ ಒಂದು ಬಾರಿ ನಿಮ್ಮಿಂದಲೇ ಘಟಿಸಿ, ಸ್ನೇಹಿತನನ್ನು ಕಳೆದುಕೊಂಡಿರುವಿರಿ. ಈಗ ಕೆಲಸವನ್ನೇ ಕಳೆದುಕೊಳ್ಳುವ ದುಡುಕುತನಕ್ಕೆ ಕೈ ಹಾಕಬೇಡಿ. ನೀವುಗಳು ಎಲ್ಲೇ ಹೋದರೂ ಮನ ಬಂದಂತೆ ಹಾಳು ಉದ್ದೇಶ ಇಟ್ಟುಕೊಂಡು ಹೀನ ಕೆಲಸ ಮಾಡಬಾರದು. ನಿಮ್ಮಗಳ ಭಾಗಕ್ಕೆ ಈ ಕೆಲಸ ಹೋದರೆ ಇನ್ನೊಂದು ಎಂದು ಹೋಗಬಹುದು. ಆದರೆ ಕೆಲಸ ಸಿಗುತ್ತದೆಯೇ ಎಂದು ಆಲೋಚಿಸಿ. ಈಗ ವಾಸ್ತವ ಪ್ರಪಂಚದಲ್ಲಿ ನಿಮ್ಮ ಬಗ್ಗೆ ಅಂತರಜಾಲದಲ್ಲಿ ನಿಮ್ಮ ನಡತೆಗಳನ್ನು ಕಾಣಬಹುದಾಗಿದೆ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಕೆಲಸ ಸಿಗುವುದು ಬಹಳ ಕಷ್ಟವಿದೆ. ಇದನ್ನು ನಾನು ಹೇಳಬಾರದು, ನಿಜ. ನಿಮ್ಮ ಬಗ್ಗೆ ಕಿಶೋರ ಎಲ್ಲವನ್ನೂ ನನಗೆ ಹೇಳಿರುವನು. ನಿಮ್ಮ ಪರಿಶ್ರಮವೆಲ್ಲವನ್ನು ಬಿಡಿಬಿಡಿಯಾಗಿ ತಿಳಿಸಿರುವನು.” ಎಂದು ನುಡಿದಾಗ, ರವಿಯು ಕಿಶೋರನತ್ತ ನೋಡಿದ. ಅವನ ಮುಖ ಗಂಭೀರವಾಗಿತ್ತು. ಮತ್ತೆ ಅಧಿಕಾರಿಗಳು ಮುಂದುವರೆದು, “ನಿಮಗೆ ಕೆಲಸ ಜಾಸ್ತಿ ಎನಿಸುತ್ತಿದೆಯೇ? ಇನ್ನೇನಾದರೂ ತೊಂದರೆಯೇ? ನನಗೆ ನೇರವಾಗಿ ತಿಳಿಸಿ. ಆದರೆ ಈ ಕಚೇರಿಯಲ್ಲಿ ಒಳ್ಳೆಯ ವಾತಾವರಣವಿರಬೇಕು. ಒಬ್ಬರಿಗೊಬ್ಬರು ಸಹಕರಿಸಿಕೊಂಡು ಒಗ್ಗಟ್ಟಾಗಿ ದುಡಿಯಬೇಕು. ನನ್ನ ಎರಡನೇಯ ಪತ್ರ ತೆಗೆದುಕೊಳ್ಳಿ.” ಎಂದು ಗಂಭೀರವದನರಾಗಿ ರವಿಗೆ ಹಸ್ತಾಂತರಿಸಿದರು. ಅವನು ಪಡೆದು ಕೈಯಲ್ಲಿ ಹಿಡಿದಿದ್ದ.
“ಅದರಲ್ಲೇನಿದೆ? ಈಗಲೇ ಓದಿ. ಇಲ್ಲಿ ಸಹಿ ಹಾಕಿ”
ರವಿಯು ಅದನ್ನು ಬಿಡಿಸಿ ಓದಿದ. ಮತ್ತೆ ಕಣ್ಣೀರು ಹಾಕುತ್ತಿದ್ದ. ಆದರೆ ಅದು ಆನಂದ ಬಾಷ್ಪವಾಗಿತ್ತು. ಎಷ್ಟೋ ಹೊತ್ತು ಹೇಗೆ ಪ್ರತಿಕ್ರಿಯಿಸಬೇಕೆಂದು ಒದ್ದಾಡುತ್ತಿದ್ದ. ನಂತರ ಇಬ್ಬರಿಗೂ ವಂದಿಸುತ್ತಾ ಧನ್ಯವಾದಗಳನ್ನು ತಿಳಿಸಿದ. ಆ ಪತ್ರವು ಬಡ್ತಿಯ ವಿಚಾರವಾಗಿತ್ತು.
- ಹರಿಹರ ಬಿ ಆರ್
