ಮೂಲ ಸೌಂದರ್ಯ ಕಳಚಿಕೊಂಡು, ಸೋತು ಸೊರಗಿ ಧರೆಗುರುಳಿ ಅವಸಾನವಾಗುವ ಕೊನೆಯ ಕ್ಷಣಕ್ಕಾಗಿ ಏದುಸಿರು ಬಿಡುತ್ತಿರುವ ಪುಟ್ಟ ದೈವನೆಲೆ “ದುಂಡಿ ಬಸವಣ್ಣ” ದೇವಸ್ಥಾನ. (ಕೆಲವರು ಬರಮ ದೇವರು ಎನ್ನುವರು). “ದುಂಡಿ ಬಸವಣ್ಣ” ದೇವಸ್ಥಾನ ದ ಕುರಿತು ಡಾ ಪ್ರಕಾಶ ಬಾರ್ಕಿ ಅವರು ಬರೆದ ಜಾಗೃತಿ ಲೇಖನ, ತಪ್ಪದೆ ಓದಿ, ಅಭಿಪ್ರಾಯವನ್ನು ಹಂಚಿಕೊಳ್ಳಿ, ಮುಂದೆ ಓದಿ…
ನಮ್ಮೂರಿನಿಂದ ಹಾವೇರಿಗೆ ದೌಡಾಯಿಸುವಾಗ ಪ್ರತಿ ಸಾರೆ ಆ ಚಿಕ್ಕ ದೇವಾಲಯ ನನ್ನ ನೋಟ ಬಸಿದುಕೊಳ್ಳುತಿತ್ತು. ತನ್ನ ಜೀವಿತಾವಧಿಯ ಕೊನೆಯ ಕ್ಷಣಗಳ ದೈನೇಸಿ ದೃಷ್ಟಿ ಬೀರುತ್ತಾ ದಾರಿಹೋಕರನ್ನ ಸೆಳೆಯಲು ಇನ್ನಿಲ್ಲದ ಕಸರತ್ತು ಮಾಡಿತ್ತಾದರೂ.. ಯಾರ ಗಮನ ಸೆಳೆಯದೇ ವಿಫಲವಾಗಿ ಸೋತು, ಮುಳ್ಳು ಬೇಲಿಯನ್ನು ಮೈ ಮೇಲೆ ಹೊದ್ದು “ಸಲ್ಲೇಖನ” ವೃತಕ್ಕೆ ಜಾರಿತು.
ನೆಲಕ್ಕುರಳಲು ಸಿದ್ದವಾದ ಛಾವಣಿಯ ಕಲ್ಲುಗಳಲ್ಲಿ ಬಿರುಕು ಮೂಡಿ ಮಣ್ಣು ಕುಸಿದಿದೆ, ಸಿಮೆಂಟ್ (ಗಚ್ಛು) ಮತ್ತು ಕಲ್ಲು ಪೇರಿಸಿ ಮೇಲೆದ್ದ ಗೋಡೆಗಳಿಗೆ ಮುದಿತನ ಅಡರಿದೆ. ಇಂತಹ ಅವ್ಯವಸ್ದೆಯಿದ್ದರೂ ರಾಜಕಾರಣಿಗಳಂತೆ ಜಗುಲಿ ಮೇಲೆ ಸುಣ್ಣ ಬಳಿದುಕೊಂಡ ಕುಳಿತ ಮೂರು ದುಂಡು #ಕಲ್ಲುಗಳು. ಅದ್ಯಾವಾಗಲೋ ಕುಂಕುಮ, ವಿಭೂತಿ, ಊದುಬತ್ತಿ ಹಚ್ಚಿದ ಗುರುತುಗಳು “ಪೂಜೆ”ಯ ಪಳೆಯುಳಿಕೆಗಳಂತೆ ತೋರುತ್ತಿವೆ.

ಹಿರಿಯರು ಕಲ್ಲುಗಳಿಗೆ ದೈವ ಸ್ವರೂಪ ನೀಡಿ ಪೂಜಿಸುವುದು ಪ್ರಕೃತಿ ಆರಾಧನೆಯಾಗಿದೆ.
ನಮ್ಮ ಸಂಸ್ಕೃತಿ, ಆರಾಧನೆ, ಇತಿಹಾಸಗಳ ಮೂಲ ಕೊಂಡಿ ಹೀಗೆ ನಿರ್ಲಕ್ಷ್ಯಕ್ಕೊಳಪಟ್ಟ ದೈವ ನೆಲೆಯ ಮೂಲಗಳೆ.
ಬನ್ನಿಹಳ್ಳಿಯಿಂದ ಹಾವೇರಿಯ ಮಾರ್ಗ ಮಧ್ಯೆ ಸಿಗುವ “ಕಲ್ಲಾಪುರ” ಕ್ರಾಸ್ ಬಳಿ ಈ #ದೇವಸ್ಥಾನವಿದೆ. ಹಲವು ವರುಷಗಳಿಂದಲೆ ನಾನು ಈ ದೇವಸ್ಥಾನ ನೋಡುತ್ತಿದ್ದೇನೆ ಆದರೆ ಯಾವತ್ತೂ ಗಮನ ಕೇಂದ್ರಿಕರಿಸಿರಲಿಲ್ಲ. ಹಲವರದ್ದೂ ಇದೇ ಅನುಭವ.
ಈ ಚಿಕ್ಕ ದೇವಸ್ಥಾನದ ಹಿಂಬದಿಗೆ ನೀರು ಸಂಗ್ರಹಗೊಂಡ “ಹೊಂಡ” ಇದೆ. ಇದು ಸುತ್ತಲೂ ಹಲವು ದಷ್ಟ ಪುಷ್ಠ ಮಾವಿನ ಮರಗಳನ್ನ ಸಾಕ್ಷಿಗೆ ಬೆಳೆಸಿಕೊಂಡು “ಮಾವಿನಕಟ್ಟೆ” ಎಂದು ಪ್ರಸಿದ್ಧವಾಗಿದೆ. ಈ ಹೊಂಡ ಕೆಲವು ಬಾರಿ ಕಾಮಗಾರಿಗಳನ್ನ ಮಾಡಿಸಿಕೊಂಡು ಚಂದಗೆ ರೂಪ ಪಡೆದು ಅಲಂಕೃತಗೊಂಡಿದೆ.

ಊರಿನ ಹೊರವಲಯದಲ್ಲಿನ ಜಲ ಮೂಲಗಳ ಅಂಚಿಗೆ “ಮಾಸ್ತೆಮ್ಮನ ಕಟ್ಟೆ” (“ವೀರಗಲ್ಲು”) ಇರುವುದು ಸಾಮಾನ್ಯ. ಆದರೆ ಇಲ್ಲಿನ “ಮಾವಿನಕಟ್ಟೆ ಹೊಂಡ” ಮತ್ತು “ದುಂಡಿ ಬಸವೇಶ್ವರ” ದೇವಸ್ಥಾನದ ಸುತ್ತಮುತ್ತ ತಡಕಾಡಿದರೂ ಅಂತಹ ಕುರುಹುಗಳು ಸಿಗಲಿಲ್ಲ. (ನನ್ನ ಗಮನಕ್ಕೆ ಬಂದಿರಲಿಕ್ಕಿಲ್ಲ)
ಆದರೆ….
ಕೆಲವರ ಪ್ರಕಾರ ಇಲ್ಲಿ ಈ ಮೊದಲೆ ಹೊಂಡವಿತ್ತು, ಪೂಜಿಸಿದ ಕಲ್ಲುಗಳು ಇದ್ದವು. ಕೆಲವು ದಶಕಗಳ ಹಿಂದೆಯೇ ರಸ್ತೆ ನಿರ್ಮಾಣಕ್ಕಾಗಿ ಹೊಲಗಳು ಇಬ್ಬಾಗವಾದಾಗ ಅಕ್ಕ ಪಕ್ಕದ ಹೊಲದವರಿಂದಲೆ “ಆ ಪೂಜನೀಯ ಕಲ್ಲುಗಳಿಗೆ” ಮೂಲರೂಪದಿಂದ ಚಿಕ್ಕ ದೇವಸ್ಥಾನ ಕಟ್ಟಲಾಗಿದೆಯಂತೆ. ಪೂಜೆಗೆ ಅಕ್ಕಪಕ್ಕದವರೆ ಗತಿ.
ದಿನಕಳೆದಂತೆ….

“ಕೆಲವರು ಜೇಬು ತುಂಬಿಸಿಕೊಳ್ಳಲು, ಹೊಂಡಕ್ಕೆ ಕೆಲ ಬಾರಿ ಕಾಮಗಾರಿ ಆಗಿದೆ. ದೇವಾಲಯ ಮಾತ್ರ ಪುನರ್ ನಿರ್ಮಾಣವಾಗಿಲ್ಲ ಏಕೆಂದರೆ ಇದರಿಂದ ಯಾವುದೇ ಲಾಭವಿಲ್ಲ, ಹೀಗಾಗಿಯೇ ಸಂಪೂರ್ಣ ನೆಲಕ್ಕೆ ವಾಲುತ್ತಿದೆ” ಎನ್ನುತ್ತಾರೆ ಊರಿನ ಹಿರಿಯರೊಬ್ಬರು.
ದೇವಸ್ಥಾನದ ಸುತ್ತ ಮುಳ್ಳುಕಂಟಿ, ಬೇಲಿ ಹುಲುಸಾಗಿ ಬೆಳೆದಿದೆ. ಗುಟ್ಕಾ ಚೀಟುಗಳು, ಸಾರಾಯಿ ಬಾಟಲ್’ಗಳು, ಪ್ಲಾಸ್ಟಿಕ್ ಬಿದ್ದ ಕುರುಹಿದೆ. ನಮ್ಮ ಮೂಲ ಸಂಸ್ಕೃತಿ “ಪ್ರಕೃತಿ ಆರಾಧನೆಯ” ಕೊಂಡಿ ಕಳಚುತ್ತಿದೆ. ಈ ದೇವಸ್ಥಾನ ಮತ್ತು ಹೊಂಡ ಇತಿಹಾಸದ ಗುರುತುಗಳನ್ನು ತನ್ನ ಗರ್ಭದೊಳಗೆ ಹುದುಗಿಸಿಕೊಂಡಿರಬಹುದು. ಅವುಗಳ ಮೂಲ ತಿಳಿದ ತಲೆಮಾರಿನ ಜನ ಇದ್ದಂತಿಲ್ಲ. “ಸಂಶೋಧನೆ” ಒಂದೇ ನಮಗಿರುವ ದಾರಿ.

ಊರಿನ ಜವಾಬ್ದಾರಿಯುತ ನಾಗರೀಕರು, ಸುತ್ತ ಮುತ್ತಲಿನ ಹೊಲದ ಹಿರಿಯರು, ಸಂಬಂಧಪಟ್ಟ ಇಲಾಖೆಯವರು ಆದಷ್ಟೂ ಬೇಗ ಗಮನ ನೀಡಿ. “ದುಂಡಿ ಬಸವಣ್ಣ ಅಥವಾ ಬರಮ ದೇವರ” ದೈವಸ್ಥಾನ ನೆಲಕ್ಕುರಳದಿರಲಿ. ನಮ್ಮ ಭವ್ಯ ಪರಂಪರೆಯ ಮೂಲ ಚಿವುಟುವುದು ಬೇಡ.
ಮುಂದೊಂದು ದಿನ ದೇವಸ್ಥಾನ ಇದ್ದದ್ದು ಕಣ್ಮರೆಯಾಗಿ, ಗುರುತುಗಳು ನಶಿಸಬಹುದು.
[ಮಾರ್ಗ: ಕಾಗಿನೆಲೆ- ಬನ್ನಿಹಳ್ಳಿ- ಕಲ್ಲಾಪುರ ಕ್ರಾಸ್- ಭೂ.ಕೋಡಿಹಳ್ಳಿ- ಕನಕಾಪುರ- ಹಾವೇರಿ]
(ಈ ದೇವಸ್ಥಾನ ಮತ್ತು ಹೊಂಡದ ಬಗೆಗಿನ ಹೆಚ್ಚಿನ ಮಾಹಿತಿ, ಇತಿಹಾಸ ಬಲ್ಲವರಿದ್ದರೆ ಕಮೆಂಟ್ ಮಾಡಿ)
- ಡಾ. ಪ್ರಕಾಶ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ
