ಕಾರ್ ಹತ್ತಿ ಗಂಡನ ಪಕ್ಕ ಮುಂದಿನ ಸೀಟಿನಲ್ಲಿ ಕುಳಿತ ವನಿತಾಳ ಮನವೂ ಜನನಿಯ ವಿಷಯವಾಗಿಯೇ ಯೋಚಿಸತೊಡಗಿತು. ಎಂತಹ ಆರಾಮದ ಬದುಕು. ಸುಜಾತಾ ರವೀಶ್ ಅವರ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…
ಸಾವಿರ ಮನೆಗಳಿದ್ದ ಬಹು ಪ್ರತಿಷ್ಠಿತ ವಸತಿ ಸಮುಚ್ಚಯ ಮೈತ್ರಿ ಸದನ. ಸಮಯ ಬೆಳಿಗ್ಗೆ ೭.೩೦, ಅಲ್ಲಿನ ಮೂರನೆಯ ಕಾವೇರಿ ಬಿಲ್ಡಿಂಗ್ ನ ಎಂಟನೇ ಅಂತಸ್ತಿನ ಲಿಫ್ಟ್ ಮುಂದೆ ನಿಂತಿದ್ದಾಳೆ ವನಿತಾ.
ಗಂಜಿ ಮಾಡಿದ ಗರಿಗರಿ ಕಾಟನ್ ಸೀರೆ ಅದಕ್ಕೊಪ್ಪುವ ಅಂತಹ ಅಯೊಡೈಸ್ಡ್ ಸಿಲ್ವರ್ ಸೆಟ್ ಕಿವಿಗೆ ಕತ್ತಿಗೆ ಮ್ಯಾಚಿಂಗ್ ಬಳೆ ಒಟ್ಟಿನಲ್ಲಿ ಟಿಪ್ ಟಾಪ್ ಆಗಿ ಅಲಂಕರಿಸಿಕೊಂಡು ಕೆಲಸಕ್ಕೆ ಹೊರಟ ಮೂವತ್ತಾರರ ಆಸು ಪಾಸಿನವಳು. ಲಿಫ್ಟ್ ಇನ್ನೇನು ಬಂತು ಅನ್ನೋವಷ್ಟರಲ್ಲಿ ಅವಳನ್ನು ಕೂಡಿದವಳು ಜನನಿ . ಅದೇ ಅಂತಸ್ತಿನ ಅವಳದೇ ಹೆಚ್ಚು ಕಡಿಮೆ ವಯಸ್ಸಿನ ಗೃಹಿಣಿ . ಸ್ನೇಹದ ನಗೆ ಬೀರಿ ಲಿಫ್ಟಿನೊಳಗೆ ಸೇರಿಕೊಂಡರು. ” ಇದೇನು ಇಷ್ಟುಬೇಗ ಹೊರಟಿದ್ದೀರಿ ಕೆಲಸಕ್ಕೆ “ಜನನಿಯ ಪ್ರಶ್ನೆ . “ಹೂಂ ಜನನಿ ಇಂದು ಆಫೀಸಿನಲ್ಲಿ ಆಡಿಟಿಂಗ್ ಇದೆ. ಅದಕ್ಕೆ ಸ್ವಲ್ಪ ಬೇಗ ಹೊರಟೆ. ನೀವೇನು ಯಾವುದೋ ಸಮಾರಂಭಕ್ಕೆ ಹೊರಟಹಾಗಿದೆ” ವನಿತಾಳ ಮರುಪ್ರಶ್ನೆ .”ಹೂನ್ರೀ ನಮ್ಮ ಜಮಾನರ ಚಿಕ್ಕಮ್ಮನ ಮಗಳ ಸೀಮಂತ ಇವತ್ತು ಮೈಸೂರಿನಲ್ಲಿ. ಅವರಿಗೆ ರಜೆ ಇಲ್ಲವಲ್ಲ ಅದಕ್ಕೆ ನಾನೇ ಹೊರಟೆ . ಸಂಜೆಗೆ ವಾಪಾಸ್ಸು .” “ಹೌದಾ” ಎಂದಂದು ಸುಮ್ಮನಾದಳು ವನಿತಾ. ಲಿಫ್ಟು ಬೇಸ್ಮೆಂಟಿಗೆ ತಲುಪಿತು . ಪತಿಯ ಕಾರಿನೆಡೆಗೆ ಹೊರಟವಳು “ಬನ್ನಿ ಎಲ್ಲಾದರೂ ನಿಯರೆಸ್ಟ್ ಜಾಗಕ್ಕೆ ಡ್ರಾಪ್ ಮಾಡುತ್ತೇವೆ” ಎಂದಳು ” ಇಲ್ಲಪ್ಪ ಓಲಾಗೆ ಬುಕ್ ಮಾಡಿದ್ದೇನೆ 5ನಿಮಿಷದಲ್ಲಿ ಬರುತ್ತೆ ಥ್ಯಾಂಕ್ಯೂ” ಎಂದಾಗ ಬೈ ಹೇಳಿ ಬೇರಾದರು.
ಓಲಾದಲ್ಲಿ ಕುಳಿತ ಮೇಲೆ ಜನನಿಯ ಮನ ವನಿತಳ ವಿಷಯವನ್ನೇ ಯೋಚಿಸುತ್ತಿತ್ತು. ಎಷ್ಟು ಪುಣ್ಯವಂತೆ. ಗಂಡನಿಗೆ ದೊಡ್ಡ ಪ್ರತಿಷ್ಠಿತ ಕಂಪನಿಯ ಕೆಲಸ. ಇವಳು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಉದ್ಯೋಗಿ . ಇಬ್ಬರಿಗೂ ಕೈ ತುಂಬಾ ಸಂಬಳ . ಬೆಳಗಾದರೆ ಜಮ್ಮಂತ ಅಲಂಕರಿಸಿಕೊಂಡು ಹೊರಡುತ್ತಾಳೆ.
ಸಂಜೆ ಬಂದ ಮೇಲೂ ಅಷ್ಟೇ ಮನಸ್ಸಾದರೆ ಅಡುಗೆ ಇಲ್ಲದಿದ್ದರೆ ಸ್ವಿಗ್ಗಿ ಜಮಾಟ ಬುಕ್ ಮಾಡೋದು .ಮನೆಗೆ ನೆಂಟರು ಬಂದರು ಅಂದರೆ ಸರಿ ಕ್ಯಾಟರಿಂಗ್ಗೆ ಆರ್ಡರು. ಕೈಯಲ್ಲಿ ದುಡ್ಡಿದ್ದರೆ ಎಷ್ಟು ಚೆಂದ . ಬೇಕಾದವರಿಗೆ ಗಿಫ್ಟ್ ಕೊಡಲು ಆಗುತ್ತೆ ಪ್ರತಿಯೊಂದಕ್ಕೂ ನನ್ನ ಹಾಗೆ ಪತಿಯ ಮುಂದೆ ಕೈಚಾಚುವ ಅಥವಾ ಮಾಡಿದ ಖರ್ಚಿಗೆ ಲೆಕ್ಕ ಹೇಳುವ ಪ್ರಶ್ನೆಯೇ ಇಲ್ಲ . ವರ್ಷ 2ವರ್ಷಕ್ಕೊಮ್ಮೆ ಹೊರಗೆ ಸುತ್ತಾಡಲು ಹೋಗುತ್ತಲೇ ಇರುತ್ತಾರೆ . ಬಟ್ಟೆಬರೆ ಒಡವೆಗಳೂ ಅಷ್ಟೇ ಧಾರಾಳವಾಗಿ ತೆಗೆದುಕೊಳ್ಳುತ್ತಾಳೆ . “ಎಣಿಸಿ ಹಾಕಿದ ಕಜ್ಜಾಯ” ಎಂಬಂತಹ ನಮ್ಮ ತರಹದ ಬದುಕಲ್ಲ. ಈ ಫ್ಲ್ಯಾಟ್ ತೆಗೆದುಕೊಂಡ ಮೇಲಂತೂ ಉಸಿರು ಕಟ್ಟುವಷ್ಟು ಆರ್ಥಿಕ ಬಿಕ್ಕಟ್ಟು . ಮನೆಯಲ್ಲೇ ಇರುವ ಸೊಸೆಯೆಂದು ಆಗಾಗ ಬಂದು ಬೀಡು ಬಿಡುವ ಅತ್ತೆ ಮಾವ ಬೆಂಗಳೂರಿನಲ್ಲಿ ಏನೇ ಕೆಲಸವಿದ್ದರೂ ತಮ್ಮ ಮನೆಯಲ್ಲೇ ಝಂಡಾ ಊರುವ ಬಂಧು ಬಳಗ ಸುಧಾರಿಸಲೇ ಸಾಕಾಗಿ ಹೋಗಿ ಬಿಡುತ್ತದೆ . ಇನ್ನೂ ವಾರಾಂತ್ಯ ಅಂದರೆ ನನಗೆ ಸುಸ್ತು ಎಂದು ಪೂರ ದಿನ ಮಲಗಿಯೇ ರೆಸ್ಟ್ ತೆಗೆದುಕೊಳ್ಳುವ ಪತಿ. ವಾರವೆಲ್ಲ ಮನೆಯಲ್ಲೇ ಇರುತ್ತಾಳೆ ಅವಳಿಗೂ ಚೇಂಜ್ ಬೇಕು ಅಂತ ಯಾರಿಗೂ ಅನಿಸಲ್ಲ. ಡಿಗ್ನಿಫೈಡ್ ಲೇಬರ್ ನ ಪಟ್ಟ ಅಷ್ಟೆ ಹೋಮ್ ಮೇಕರ್ ಅಂತ ಇರೋದು ಬೇರೆ . ನಾನು ಅಷ್ಟೆ ಹಟಹಿಡಿದು ಯಾವುದಾದರೂ ಕೆಲಸಕ್ಕೆ ಸೇರಿ ಬಿಡಬೇಕಿತ್ತು ಮದುವೆಯಾದ ಹೊಸದರಲ್ಲೇ ಆಗ ಅದೇ ರೂಢಿಯಾಗಿರುತ್ತಿತ್ತು. ಏನೋ ಸ್ವಲ್ಪ ಈ ಫ್ಲ್ಯಾಟ್ ಗೆ ಬಂದ ಮೇಲೆ ಮಹಿಳಾ ಸಂಘ ದೇವರನಾಮ ಅಂತ 1ಚೂರು ಮನಸ್ಸು ಬೇರೆ ಕಡೆ ಹರಿಯಲು ಸಾಧ್ಯವಾಗಿವೆ ಇಲ್ಲದಿದ್ದರೆ 4ಗೋಡೆಗಳೊಳಗಿನ ಬಂಧಿಯಾಗಿ ಉಳಿದು ಬಿಡುತ್ತಿದ್ದೆ ನಾನು . ಇವತ್ತು ವಷ್ಟೇ ಊರಿನಲ್ಲಿದ್ದ ತನ್ನ ಹೋಗಲು ಸಾಧ್ಯವಿಲ್ಲ ಎಂದು ಕುಟುಂಬದ ಪ್ರತಿನಿಧಿಯಾಗಿ ನಾನು ಹೋಗಲೇಬೇಕು ಅಂತ ಇವತ್ತು ನಮ್ಮ ಕಿಟ್ಟಿ ಪಾರ್ಟಿಯ ಮೀಟಿಂಗ್ ಇತ್ತು. ಅದು ಮಿಸ್ಸಾಯಿತು . ಅಲ್ಲದೆ ನಮ್ಮ ಕಡೆಯ ಯಾವುದಾದರೂ ಸಮಾರಂಭಕ್ಕೆ ಹೋಗುತ್ತೇನೆ ಎಂದರೆ ಅದೇನು ಅಂತ ಅವಶ್ಯಕವಾ ಬೇಡ ಬಿಡು ಎಂದು ಸುಮ್ಮನಾಗಿ ಬಿಡುತ್ತಾರೆ. ಎಲ್ಲದಕ್ಕೂ ಪಡೆದುಕೊಂಡು ಬರಬೇಕು ಎಂದು ನಿಟ್ಟುಸಿರಿಟ್ಟಳು . ಅಷ್ಟರಲ್ಲಿ ಸೆಟಲೈಟ್ ಬಸ್ ಸ್ಟ್ಯಾಂಡ್ ಬಂತು. ಹಣ ಪಾವತಿಸಿ ಮೈಸೂರಿನ ಬಸ್ ಹತ್ತಲು ಹೊರಟಳು ಜನನಿ.
ಕಾರ್ ಹತ್ತಿ ಗಂಡನ ಪಕ್ಕ ಮುಂದಿನ ಸೀಟಿನಲ್ಲಿ ಕುಳಿತ ವನಿತಾಳ ಮನವೂ ಜನನಿಯ ವಿಷಯವಾಗಿಯೇ ಯೋಚಿಸತೊಡಗಿತು. ಎಂತಹ ಆರಾಮದ ಬದುಕು. ಎಷ್ಟು ಸಣ್ಣ ಸಣ್ಣ ಸಮಾರಂಭಗಳಿಗೂ ಹೀಗೆ ಅಲಂಕರಿಸಿಕೊಂಡು ನಿರಾಳವಾಗಿ ಹೋಗಿಬರುತ್ತಾಳೆ. ನನಗಂತೂ ಪ್ರತಿಯೊಬ್ಬರಿಂದಲೂ ಬೈಗುಳ. ಯಾವುದಕ್ಕೂ ಬರುವುದಿಲ್ಲ ದೊಡ್ಡಸ್ಥಿಕೆ ಅಂತ . ಇಲ್ಲಿ ನನಗೆ ರಜದ ಸಮಸ್ಯೆ ಯಾರಿಗೆ ಹೇಳಿಕೊಳ್ಳುವುದು ? ಚಿಕ್ಕಪುಟ್ಟದ್ದಕ್ಕೆಲ್ಲ ರಜಾ ಕೊಡುವುದಿಲ್ಲ ಕೊಟ್ಟರೂ ಹಾಕಲು ಮನಸ್ಸಿರುವುದಿಲ್ಲ ಮುಂದೆ ಏನಾದರೂ ಬೇಕಾದರೆ ಎಂಬ ಭಯದಲ್ಲಿ ಇರುವುದೇ ಆಗತ್ತೆ .ಬೆಳಿಗ್ಗೆ ಅಷ್ಟು ಬೇಗ ಏನೋ ಒಂದು ಬೇಯಿಸಿ ಎಷ್ಟೋ ಬಾರಿ ಬೆಳಗಿನ ತಿಂಡಿಯನ್ನು ತಿನ್ನಲು ಆಗಿರುವುದಿಲ್ಲ. ಅಂತಹ ಆತುರದಲ್ಲಿ ಓಡುವುದು ಕೆಲವೊಮ್ಮ ಬರುವಷ್ಟರಲ್ಲಿ ಎಂತಹ ಸುಸ್ತಾಗಿರುತ್ತದೆ ಎಂದರೆ ಯಾವುದೋ ಒಂದು ತರಿಸಿ ತಿಂದು ಹಾಸಿಗೆ ಕಾಣೋಣ ಎಂದೆನಿಸಿ ಬಿಟ್ಟಿರುತ್ತದೆ. ರುಚಿಯಾಗಿ ಮಾಡಿಕೊಂಡು ತಿನ್ನಲೂ ಯೋಗ ಇರಬೇಕು. ಇಬ್ಬರ ಸಂಪಾದನೆ ಎಂದು ಕಾರು ಫ್ಲ್ಯಾಟು ಎಲ್ಲದಕ್ಕೂ ಸಾಲ ಮಾಡಿ ಕೈ ಕಟ್ಟುವಷ್ಟು ಆರ್ಥಿಕ ಬಿಕ್ಕಟ್ಟು . ಕೆಲಸ ಮಾಡದಿದ್ದರೆ ವಿಧಿಯೇ ಇಲ್ಲ ಎನ್ನುವಂತೆ ಕುತ್ತಿಗೆ ಹಿಡಿದ ಹಾಗಾಗಿದೆ. ನನಗೆ ಒಂದು ತಲೆನೋವು ನೆಗಡಿ ಅಂದರು ಏನೋ ಗುಳಿಗೆ ನುಂಗಿ ಆಫೀಸಿಗೆ ಓಡುವಂತಹ ಸ್ಥಿತಿ .ನಿದ್ರೆ ಅನ್ನುವುದು ಸಹ ಲಗ್ಷುರಿಯಾಗಿದೆ ಇನ್ನೂ ಹವ್ಯಾಸಗಳ ಮಾತೆಲ್ಲಿ? ಅದೇ ಆರಾಮ ಗೃಹಿಣಿಯಾಗಿದ್ದರೆ ಮನೆಯವರನ್ನೆಲ್ಲಾ ಕಳಿಸಿದ ಮೇಲೆ ನಮ್ಮ ಹವ್ಯಾಸಗಳಿಗೂ ಸಮಯ ಸಿಕ್ಕುತ್ತಿತ್ತು. ಕಣ್ತುಂಬಾ ನಿದ್ರಿಸಲೂ ಬಹುದು. ಈಗ ಮನೆಗೆ ಯಾರಾದರೂ ಬರುತ್ತಾರೆ ಎಂದರೆ ಬೆಚ್ಚುವಂತೆ ಆಗುತ್ತದೆ. ಮಾಡಲು ಸಾಧ್ಯವಿಲ್ಲದಿದ್ದಾಗ ಆ ಕ್ಯಾಟರಿಂಗ್ ಗಳಿಗೆ ಒಂದಕ್ಕೆರಡು ತೆತ್ತುವುದು ರುಚಿಯೂ ಇರುವುದಿಲ್ಲ ಮತ್ತೆ ಮಾಡಲಿಲ್ಲ ಎಂಬ ಕೆಟ್ಟ ಹೆಸರು ಹೊತ್ತುಕೊಳ್ಳುವುದು. ದೆವ್ವದ ತರಹ ವಾರವೆಲ್ಲಾ ದುಡಿದು ಕುಂಭಕರ್ಣನ ತರಹ ಶನಿವಾರ ಭಾನುವಾರ ಮಲಗುವುದು ಅದು ಯಾವುದೇ ಸಮಾರಂಭ ಅಥವಾ ಮನೆಗೆ ನೆಂಟರು ಇಲ್ಲದಿದ್ದರೆ ಒಂದಷ್ಟು ರೆಸ್ಟ್. ಯಾರಾದರೂ ಬಂದರೆ ಅದಕ್ಕೂ ಖೋತಾ. ಅಲ್ಲದೆ ವಾರದ ಬಾಕಿ ಉಳಿದ ಕೆಲಸಗಳನ್ನು ಮಾಡುವವರು ಯಾರು ?ಪ್ರವಾಸಕ್ಕೆ ಸೌಲಭ್ಯವಿದೆ ಎಂದು ಎಲ್ಲಾದರೂ ಹೋಗಿ ತಿರುಗಾಡುವುದು. ಆದರೆ ಕೆಲವೊಮ್ಮೆ ಅದು ಬೇಡವೆಂದು ಅನ್ನಿಸಿಬಿಡುತ್ತದೆ ವಾಪಸ್ ಬಂದ ಮೇಲೆ ಮನೆಯ ಸವರಣಿಕೆ ಆಫೀಸಿನ ಪೆಂಡಿಂಗ್ ಕೆಲಸಗಳು ಅದರ ಬದಲು ಮನೆಯಲ್ಲೇ ನೆಮ್ಮದಿಯಾಗಿ ಇದ್ದಿದ್ದ್ರ ಆಗುತ್ತಿತ್ತು ಅನ್ನಿಸಿಬಿಡುತ್ತದೆ. ಆನೆಯ ಕಷ್ಟ ಆನೆಗೆ ಇರುವೆ ಭಾರ ಇರುವೆಗೆ ಎಂಬಂತೆ ಸಂಪಾದನೆಗೆ ತಕ್ಕಂತೆ ಕಮಿಟ್ ಮೆಂಟ್ ಗಳು ಮಾಡಿಕೊಂಡು ಆರ್ಥಿಕವಾಗಿಯೂ ಏನೂ ಧಾರಾಳತನ ತೋರಿಸುವಂತೆಯೂ ಇಲ್ಲ. ನಮ್ಮ ಇಷ್ಟದ ಹಾಗೆ ಖರ್ಚು ಮಾಡುವ ಸ್ವಾತಂತ್ರ್ಯವೂ ಇಲ್ಲ. ಸಾಕಾಗಿ ಹೋಗಿದೆ ಒಳಗೆ ಹೊರಗೆ ಎರಡೂ ಕಡೆ ದುಡಿಯುವ ಮನಸ್ಸಿಗೂ ದೇಹಕ್ಕೂ ಸುಸ್ತು ಕೊಡುವ ಈ ಉದ್ಯೋಗಿ ಎಂಬ ಪಟ್ಟ.
“ಏನು ಕನಸ್ ಕಾಣ್ತಾ ಇದೀಯ ನಿಮ್ಮ ಆಫೀಸು ಬಂತು ಇಳಿ” ಎಂಬ ಮಾತಿಗೆ ಕಣ್ಣುಬಿಟ್ಟು ಬೈ ಹೇಳಿ ಇಳಿದುಹೋದಳು ವನಿತಾ ತನ್ನ ಮತ್ತೊಂದು ದಿನದ ಕರ್ಮ ಸವೆಸಲು.
- ಸುಜಾತಾ ರವೀಶ್
