ಸ್ವಾತಂತ್ರ್ಯ ದಿನ ನಿವೃತ್ತ ಸೈನಿಕರ ಜೊತೆ…..

ನಮ್ಮ ದೇಶವು ಅಸ್ಪ್ರಶ್ಯತೆ, ಮೂಢನಂಬಿಕೆ, ಭೇದಬಾವ, ವ್ಯಕ್ತಿ ಪೂಜೆ ಯಿಂದ ಇನ್ನೂ ಸ್ವಾತಂತ್ರ್ಯ ಹೊಂದಿಲ್ಲ. ಎಲ್ಲಿಯ‌ ತನಕ ಇವುಗಳು ದೇಶದೊಳಗೆ ಇರುವುದೋ ಅಲ್ಲಿಯತನಕ ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದರ್ಥ. – ರೂಪೇಶ್ ಪುತ್ತೂರು, ತಪ್ಪದೆ ಮುಂದೆ ಓದಿ…

ಹುಟ್ಟಿ 49 ವರುಷ ಆಯಿತು. ವಿದ್ಯಾರ್ಥಿ ಜೀವನದಲ್ಲಿ ನಾನು ಕಲಿತ ವಿದ್ಯಾಸಂಸ್ಥೆಗಳಲ್ಲಿ, ನಂತರ ನಾನು ಕೆಲಸಮಾಡುತ್ತಿದ್ದ ವಿದ್ಯಾಸಂಸ್ಥೆಗಳಲ್ಲಿ ಸ್ವಾತಂತ್ರೋತ್ಸವದ ದಿನ ತಪ್ಪದೆ ಪಾಲ್ಗೊಳ್ಳುತ್ತಿದ್ದೆ. ಈ ವರುಷ, ೭೮ ನೇ ಸ್ವಾತಂತ್ರ್ಯತೋತ್ಸವದ ದಿನ ನಿವೃತ್ತ ಸೈನಿಕರು ಹೊಸದಾಗಿ ಕಟ್ಟಿಸಿದ , Kerala State Ex Service League ಕಟ್ಟಡದಲ್ಲಿ ನನ್ನ ಕರೆದರು. ತಂದೆಯ ಮಿತ್ರರ ಜೊತೆ , ಅವರ ಮಿತ್ರರು ಎಲ್ಲರೂ ನಿವೃತ್ತ ಸೈನಿಕರೇ… ಭೂಸೇನೆ, ವಾಯುಸೇನೆ ಹಾಗೂ ನೌಕಾ ಸೇನೆ ಯಲ್ಲಿ ಕೆಲಸಮಾಡಿದವರ ಒಂದು ಕೂಟ ಅದು.. “ನಿನ್ನ ಅಪ್ಪನನ್ನು ಈ ವರುಷ ಕರೆಯಬೇಕು ಎಂದಿದ್ದೆವು…. ಬದಲಾಗಿ ನಿನ್ನ ಕರೆದೆವು” ಎಂದರು.

ಬೆಳಿಗ್ಗೆ ೮.೦೦ ಗಂಟೆಗೆ ಧ್ವಜಾರೋಹಣ, ಎಲ್ಲರೂ ೭೦+ ಹರೆಯದವರಾದರೂ ೭.೦೦ಘಂಟೆಗೆ ಅಲ್ಲಿ ಉಪಸ್ಥಿತರಾಗಿದ್ದರು. ಒಂದು ಕಡೆ ಬಿಸಿ ಬಿಸಿ ಪಾಯಸ, ಲಡ್ಡು… ಮುಂತಾದ ಸಿಹಿತಿಂಡಿ ಒಂದು ಕೊಠಡಿಯಲ್ಲಿ . ಎಲ್ಲಾ ವ್ಯವಸ್ಥೆಗಳು ಶಿಸ್ತುಬದ್ಧವಾಗಿ ಮೊದಲೇ ವೇಳಾಪಟ್ಟಿ ಮಾಡಿದ್ದರು. ನನ್ನಲ್ಲಿ ಧ್ವಜಾರೋಹಣ ಮಾಡಲು ಕೇಳಿಕೊಂಡರು. ಆದರೆ ಅಲ್ಲೇ ಇದ್ದ ಹರೆಯದಲ್ಲಿ ೯೦+ ಹಿರಿಯರಾದ ನಿವೃತ್ತ ಏರ್ ಮ್ಯಾನ್ ರವೀಂದ್ರ ರಿಂದ ಧ್ವಜಾರೋಹಣ ಮಾಡಲು ಒತ್ತಾಯಿಸಿದೆ ಮಾಡಿಸಿದೆ.

ಕೊನೆಗೆ ಹಿಂದಿಯಲ್ಲಿ ಒಂದು ನುಡಿ ಸಮರ್ಪಣೆ ಮಾಡಿದೆ… ” ಮನದಲ್ಲಿ ನಿಷ್ಕಳಂಕತೆ ನಿಷ್ಕಲ್ಮಶತೆ ಮುಗ್ದತೆ ಇರುವುದೋ ಅಲ್ಲಿ ಸ್ವಾತಂತ್ರ್ಯದ ಚಿಗುರು ಇದ್ದೇ ಇರುತ್ತದೆ. ನಿಮ್ಮೆಲ್ಲರ ಮನಸ್ಸಲ್ಲಿ ಸ್ವಾತಂತ್ರ್ಯ ಭರಿತ ದೇಶಭಕ್ತಿ ಇದೆ ಅಂದ್ರೆ ಮಾನವೀಯ ಮೌಲ್ಯವೂ ತುಂಬಿದೆ. ಇಂತಹಾ ಸಂಧರ್ಭದಲ್ಲಿ ಹಿರಿಯರಾದ ನಿಮ್ಮ ಮುಂದೆ ನಾನೇನು ಮಾತನಾಡಲಿ? ನಿಮ್ಮಲ್ಲಿ ಇರದ ವಿಷಯ ಎಷ್ಟು ಕೆಟ್ಠದು? ಅದು ಯಾರಲ್ಲಾದರೂ ನೀವು ಕಂಡರೆ ಅವರನ್ನು ನಿಮ್ಮಂತೆ ಸನ್ಮಾರ್ಗಿಗಳಾಗಿ ಮಾಡಿ ಎಂಬ ಕೋರಿಕೆ ಯೊಂದಿಗೆ ನನ್ನ ಮಾತನ್ನು ಮುಂದುವರಿಸುತ್ತೇನೆ….

ಎಲ್ಲಿ ಒಂಚೂರು ಮೂಢನಂಬಿಕೆ ಅಹಂಕಾರ ಇರುತ್ತದೋ ಅಲ್ಲಿ ಸ್ವಾತಂತ್ರ್ಯ ಇರುವುದೇ ಇಲ್ಲ- ಅಂತವಲ್ಲಿ ಇರುವುದು ಬರೇ ಇನ್ನೊಬ್ಬರ ಬಗ್ಗೆ ಅಜೀರ್ಣವಾಗುವ ದ್ವೇಷ ರೋಗ. ಆ ರೋಗದಿಂದ ಮುಕ್ತಿಯಾಗಬೇಕಿದ್ದಲ್ಲಿ ಮೂಢನಂಬಿಕೆ ಹಾಗೂ ಅಹಂಕಾರಕ್ಕೆ ಮನದಿಂದ ಹೊರ ಹೋಗುವ ಸ್ವಾತಂತ್ರ್ಯ ಬೇಕು. ದ್ವೇಷ ಒಂದು ಅಜ್ಞಾನ , ಅಜ್ಞಾನಕ್ಕೆ ಎಂದೂ ಸ್ವತಂತ್ರತೆ ಇರುವುದಿಲ್ಲ.

ಅಹಂಕಾರ ಎಂಬುವುದು ಒಂದು ಘನಘೋರ ಗಾಢ ನಿದ್ರಾವಸ್ಥೆ ಆಗಿರುತ್ತದೆ. ಅಂತಹಾ ನಿದ್ರಾವಸ್ಥೆಗೂ ಸ್ವತಂತ್ರತೆ ಇರುವುದಿಲ್ಲ. ಮೂಢನಂಬಿಕೆಯೊಳಗೆ ಸಿಕ್ಕಿಕೊಂಡಿರುವುದು ಮೂರ್ಛೆ ಹೋಗಿದ್ದಕ್ಕೆ ಸಮ. ಮೂರ್ಛಾವಸ್ಥೆಗೂ ಸ್ವತಂತ್ರತೆ ಇರುವುದಿಲ್ಲ. ಎಂದಾದರೂ ಯಾರಾದರೂ ಮೂಢನಂಬಿಕೆ -ಅಹಂಕಾರದಿಂದ ಸ್ವಾತಂತ್ರ್ಯರಾದಾಗ ಮಾನವೀಯ ಮೌಲ್ಯದ ಅರಿವು ಉಂಟಾಗುವುದು.

ಎಲ್ಲಿಯತನಕ ಸ್ವತಂತ್ರವಾಗಲು ಏನಾದರೂ ಬಾಕಿ ಇರುವುದೋ ಅಲ್ಲಿಯ ತನಕ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದರ್ಥ. ನಮ್ಮ ದೇಶವು ಅಸ್ಪ್ರಶ್ಯತೆ, ಮೂಢನಂಬಿಕೆ, ಭೇದಬಾವ, ವ್ಯಕ್ತಿ ಪೂಜೆ ಯಿಂದ ಇನ್ನೂ ಸ್ವಾತಂತ್ರ್ಯ ಹೊಂದಿಲ್ಲ. ಎಲ್ಲಿಯ‌ ತನಕ ಇವುಗಳು ದೇಶದೊಳಗೆ ಇರುವುದೋ ಅಲ್ಲಿಯತನಕ ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದರ್ಥ. ನಾನು ನನ್ನದು, ನನ್ನ ಭಾಷೆ, ನನ್ನ ಜಾತಿ ಮತ ಪಂಥ…ದವರು ಮಾತ್ರ ಇರಬೇಕು ಎಂಬ ಸಂಕುಚಿತತೆಯ ಸಂಕೊಲೆಯೊಳಗೆ ಹಲವಾರು ಭಾರತೀಯರು ಸಿಲುಕಿಕೊಂಡಿದ್ದಾರೆ. ಇಂತಹಾ ಸಮಸ್ಯೆಗಳು ಸ್ವಾತಂತ್ರವಾಗಿ ಹೊರಹೋಗಲು ಕಾಯುತ್ತಿವೆ.

ಮತ್ತೆ ಆ ಒಂದು ದಿನ ಬರಬಹುದು, ಯಾವ ಸಮಸ್ಯೆಯೂ ದೇಶದಿಂದ ಸ್ವತಂತ್ರವಾಗಲು ಬಾಕಿ ಇರುವುದಿಲ್ಲವೋ ಅಂತಹಾ ಆಶಾದಿನ!!! ಅಂದು ಸ್ವಾತಂತ್ರವಾಯಿತು ಎಂದು ಹೇಳಬಹುದು. ಅಂತಹಾ ಸ್ವತಂತ್ರ್ಯ ಎಂದೂ ಸ್ವಾತಂತ್ರ್ಯವಾಗಲು ಇಷ್ಟಪಡುವುದಿಲ್ಲ -ಅದುವೇ ಸಂಪೂರ್ಣ ಸ್ವಾತಂತ್ರ್ಯ – ಪರಿಪೂರ್ಣ ಸ್ವಾತಂತ್ರ್ಯ – ಮಾನವೀಯ ಮೌಲ್ಯಗಳ ವಸಂತಕಾಲ.

ನೀವು ನನ್ನ ದೇಶದ ಮಣ್ಣು , ರಾಷ್ಟ್ರ ಧ್ವಜ , ರಾಷ್ಟ್ರ ಗೀತೆ, ರಾಷ್ಟ್ರ ಲಾಂಛನ ಒಬ್ಬರದಲ್ಲ – ನಮ್ಮೆಲ್ಲಾ ಭಾರತೀಯರ ಸ್ವತ್ತು ಎಂದು ಆಲಿಂಗಿಸುವ ಆತ್ಮಸೌಂಧರ್ಯ ಇರುವವರು. ನಾನು ಸ್ವತಂತ್ರ ಎಂಬುವುದರ ಅರ್ಥ ಸೇನಿಕರಾಗಿ ನಿವೃತ್ತ ಸೈನಿಕರಾದ ನಿಮ್ಮಷ್ಟು ಅನುಭವಿಸಿಲ್ಲ ಎನ್ನಬಹುದು. ನೀವಾದರೆ, – ನಾನು ನಿಂತ ಈ ಮಣ್ಣು ಸ್ವತಂತ್ರ, ಆದ್ದರಿಂದ ನಾನು ಸ್ವತಂತ್ರ, ನನ್ನ ನಿಯಂತ್ರಣ ನನ್ನ ಮೇಲಿದೆ, ನನಗೆ ಯಾರದೇ ನಿಯಂತ್ರಕರ ಅವಶ್ಯಕತೆ ಇಲ್ಲ. ಯಾಕೆಂದರೆ ನನ್ನ ಸ್ವಾತಂತ್ರ್ಯ ಎಲ್ಲರ ರಕ್ಷಣೆ ಈ ಮಣ್ಣಿನ ಸಂರಕ್ಷಣೆ. ನನ್ನ ಕರ್ತವ್ಯ ನನ್ನ ಕೈಯೊಳಗಿದೆ, ಅದು ಇನ್ನೊಬ್ಬರ ಕೈಯಲ್ಲಿರುವ ನಿಯಂತ್ರಣದಲ್ಲಿ ಇಲ್ಲ. ನನ್ನ ಕರ್ತವ್ಯವೇ ನನ್ನ ಮರ್ಜಿ(will ಆಶಯ)– ಎಂಬ ಧೃಡಸಂಕಲ್ಪದಲ್ಲಿ ಇರುವವರು. ಇನ್ನೊಬ್ಬರ ಮರ್ಜಿಯಲ್ಲಿ ಕರ್ತವ್ಯದ ಹೆಜ್ಜೆ ಇಡುವುದು ಸಂಪೂರ್ಣ ಪರತಂತ್ರ ಎಂದು ತಿಳಿದವರು. ಅದರಿಂದ ಇಂದು ನಿಮ್ಮೊಳಗಿರುವ ಐಕ್ಯತೆ ಅಖಂಡತೆಯೆಂಬ ಹೃದಯ ಶ್ರೀಮಂತಿಕೆ ಉದ್ಭವಿಸಿದೆ.

ನಿಮ್ಮಲ್ಲಿ “ನಾನು ಎಂಬ ಸಂಕುಚಿತತೆ” ಇಲ್ಲ, ಅಹಂಕಾರ ಇಲ್ಲ , ಮೂಢನಂಬಿಕೆ ಇಲ್ಲ. ಇಂದು ಯಾರದೂ ನಿಯಂತ್ರಣ ಇಲ್ಲದೆ , ನೀವೆಲ್ಲ ಸುಗಮವಾಗಿ ಶಿಸ್ತುಬದ್ಧವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ನಿಮ್ಮ ಮರ್ಜಿಯಲ್ಲಿ ನನ್ನಂತಹಾ ಒಬ್ಬ ಪಕ್ಕದ ರಾಜ್ಯದ ಸಾಮಾನ್ಯನನ್ನು ಕರೆದು ಆಚರಿಸುತ್ತಿರುವಿರಿ. ಯಾಕೆಂದರೆ ನೀವು ನನ್ನನ್ನು ಕರ್ನಾಟಕ ರಾಜ್ಯದವ ಎಂಬ ಪರತಂತ್ರಕ್ಕಿಂತ ವಿಶಾಲವಾದ, ಈ ಭಾರತದೇಶದ ಪ್ರಜೆ ಎಂಬ , ಭಾರತೀಯತೆಯ ವಿಶಾಲ ಸ್ವಾತಂತ್ರ್ಯತೆಯಿಂದ ಕರೆದಿದ್ದೀರಿ. ನಿಮ್ಮ ಈ ವಿಶಾಲ ಹೃದಯವಂತಿಕೆಯಲ್ಲಿರುವುದೇ ನಿಷ್ಕಲ್ಮಶ ಮುಗ್ದ ಸ್ವಾತಂತ್ರ್ಯ ಅದು ಈ ದೇಶದ ಪ್ರತೀಯೊಬ್ಬನಲ್ಲೂ ಬಂದರೆ ಪೂರ್ಣ ಸ್ವಾತಂತ್ರ್ಯ ಎಂಬ ನಂಬಿಕೆಯೊಂದಿಗೆ…

ಜೈಹಿಂದ್
ಜೈ ಕರ್ನಾಟಕ
ಜೈ ಕನ್ನಡಾಂಬೆಯ ಸಹೋದರಿ ಕೇರಳಾಂಬೆ
….
ಇಷ್ಟು ಹೇಳಿ ಮುಗಿಸುವ ವರೆಗೂ ಅವರೆಲ್ಲಾ ಮೌನವಾಗಿ ಕೇಳಿಸುತ್ತಿದ್ದರು. ಒಬ್ಬರು ” ಪರೇಡ್ ಏಕ್ ಸಾತ್ ತಾಲಿ ಬಜೆಯೇಗಾ” ಎಂದು ಕೂಡಲೇ ಒಂದು ಗಣಿತಾತ್ಮಕ ತಾಳದ ಚಪ್ಪಾಳೆ.

ಈ ವಯಸ್ಸಿನಲ್ಲಿ ಅವರೆಲ್ಲರೂ ಪಾದರಸದಂತೆ ಸಮಯಕ್ಕೆ ಸರಿಯಾಗಿ ಬರುವುದು, ಕಾರ್ಯಕ್ರಮವನ್ನು ಒಂದು ಸೆಕೆಂಡ್ ಸಮಯವ್ಯಯ ಆಗದೆ ವ್ಯವಸ್ಥಿತವಾಗಿ ನಡೆಸುವುದು……. ವಿವರಿಸಲು ಅಸಾಧ್ಯ.

8.30ಯಿಂದ 10.30ಯವರೆಗೆ ಅಲ್ಲಿ ಬಂದ ,ಓಡಾಡುವ ಎಲ್ಲಾ ಸಾರ್ವಜನಿಕರಿಗೂ ಪಾಯಸ, ಲಡ್ಡು, ಹಣ್ಣು…. ಕೊಟ್ಟು ಅವರು ತಮ್ಮ ಖುಷಿ ಸಡಗರ ವ್ಯಕ್ತ ಪಡಿಸಿದರು. ನಾನು ಇನ್ನು ಹೊರಡುವೆ ಎಂದಾಗ ” ನಾವೆಲ್ಲ ಸಂಜೆ 5.30-ಯಿಂದ 6.00ಘಂಟೆಯೊಳಗೆ ಧ್ವಜಾವರೋಹಣ ಮಾಡಿ, ಧ್ವಜವಂದಿಸಿ , ರಾಷ್ಟ್ರ ಗೀತೆ ನಮನ ಸಲ್ಲಿಸಿ ಹೊರಡುವವರು. ನೀವು ಈಗಲೇ ಹೋಗುತ್ತಿದ್ದರೆ, ಧ್ವಜಕ್ಕೆ ನಮಸ್ಕರಿಸಿ ಹೋಗಬಹುದು ” ಎಂದರು.

ನಾನು ಆಗ ಆಕಾಶದ ವಿಶಾಲತೆಯಲ್ಲಿ ಸಾರ್ವಭೌಮ ಸ್ವಾತಂತ್ರ್ಯ ಬಾವುಟವನ್ನು ಮನಸಾರೆ ಒಂದು ಸೆಲ್ಯೂಟ್ ಕೊಟ್ಟೆ….

ನಿಮ್ಮವ ನಲ್ಲ
ರೂಪು


  • ರೂಪೇಶ್ ಪುತ್ತೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading