‘ಈ ಹೊತ್ತಿನ ಕವಿತೆಗಳು’ ಪುಸ್ತಕ ಪರಿಚಯ – ಸಿ.ಎಸ್. ಕೃಷ್ಣಮೂರ್ತಿ

ಕವಿ ಸಿ.ಎಸ್. ಕೃಷ್ಣಮೂರ್ತಿ ಅವರ ‘ಈ ಹೊತ್ತಿನ ಕವಿತೆಗಳು’ ಪುಸ್ತಕದಲ್ಲಿ ೨೬೩ ಕವನಗಳಿರುವ ಬೃಹತ್ ಕವನ ಸಂಗ್ರಹವಾಗಿದ್ದು,ಈ ಪುಸ್ತಕ ಪರಿಚಯವನ್ನು ಲೇಖಕ ಎನ್.ವಿ.ರಘುರಾಂ ಅವರು ಮಾಡಿದ್ದಾರೆ, ಮುಂದೆ ಓದಿ…

ಕಾವ್ಯ ಪ್ರಕಾರ: ಕವನ ಸಂಗ್ರಹ
ಹೆಸರು: ಈ ಹೊತ್ತಿನ ಕವಿತೆಗಳು.
ಸಾಹಿತಿ: ಸಿ.ಎಸ್. ಕೃಷ್ಣಮೂರ್ತಿ
ಪೂಜಾ ಪ್ರಿಂಟರ್ಸ್, ಬೀದರ್.
ಪ್ರಥಮ ಮುದ್ರಣ:೨0೨0

ಕವನ ಸಂಗ್ರಹಗಳನ್ನು ಓದುವುದಕ್ಕೆ ಕನ್ನಡದಲ್ಲಿ ಎಂ.ಎ. ಮಾಡಿರಬೇಕು ಅಥವ ಕನಿಷ್ಠ ಬಿ.ಎ.ನಾದರೂ ಮಾಡಿರಬೇಕು ಎಂದು ಎಷ್ಟೋ ದಿನ ನಾನು ತಿಳಿದಿದ್ದೆ! ಹಾಗಾಗಿ ಕವನ ಸಂಗ್ರಹಗಳಿಂದ ದೂರವೇ ಇದ್ದೆ. ಹಾಗೇನಿಲ್ಲ, ಕನ್ನಡ ಓದುವುದಕ್ಕೆ ಬಂದರೆ ಸಾಕು!.

ಕವನಗಳನ್ನು ಓದಿ ಅರ್ಥ ಮಾಡಿಕೊಳ್ಳಬಹುದು ಎಂದು ಗೊತ್ತಾಗಿದ್ದು ಅನುರಾಗ ವೆಂಬ ಕವನದ ಕೆಲವು ಸಾಲುಗಳನ್ನು ಓದಿದಾಗ. ಆ ಸಾಲುಗಳನ್ನು ನೀವು ಈಗ ಓದಿ ನೋಡಿ.
‘ಅನುರಾಗ’

ಪ್ರೇಮಸಂಗ ಸಿಗುವುದಲ್ಲ ಮುಖ್ಯ
ಉಳಿಸಿಕೊಳ್ಳಬೇಕು ಬಿಡದೆ ಸಖ್ಯ
ಒಲಿದ ಮನಗಳಾಗಬೇಕು ಐಕ್ಯ.

ಈ ರೀತಿ ಅತ್ಯಂತ ಸರಳ ಕನ್ನಡದಲ್ಲಿ ಜನ ಸಾಮಾನ್ಯರಿಗೂ ಅರ್ಥವಾಗುವಂತೆ ಮತ್ತು ಅವರ ಮನಸ್ಸಿನಲ್ಲಿ ಚಿಂತನೆಗೆ ಹಚ್ಚುವಂತೆ ಇರುವ ಕವನಗಳ ಸಂಗ್ರಹದ ಪುಸ್ತಕವೇ “ಈ ಹೊತ್ತಿನ ಕವಿತೆಗಳು”. ಈ ಕವನ ಸಂಗ್ರಹದ ಕತೃ ಶ್ರೀಯುತ ಸಿ.ಎಸ್. ಕೃಷ್ಣಮೂರ್ತಿಯವರು. ಬನ್ನಿ ಕವಿಗಳ ಬಗ್ಗೆ ಮತ್ತು ಅವರ ಕವಿತೆಗಳ ಬಗ್ಗೆ ಒಂದು ಸುತ್ತು ಹಾಕಿ ಬರೋಣ.

ಕವಿ ಪರಿಚಯ:

ಶ್ರೀಯುತ ಸಿ.ಎಸ್. ಕೃಷ್ಣಮೂರ್ತಿಯವರು ೨೮.೮. ೪೬ ರಂದು ಜನಿಸಿದರು. ಸಣ್ಣ ವಯಸ್ಸಿನಲ್ಲಿ ಮನೆಯ ಜವಾಬ್ದಾರಿ ತೆಗೆದುಕೊಂಡು ಕೆಲಸಕ್ಕೆ ಸೇರಿದರು. ಪ್ರಪಂಚ ವಾರಪತ್ರಿಕೆ ಮತ್ತು ಜನಪ್ರಗತಿ ಮತ್ತು ಮಲ್ಲಿಗೆ ಪತ್ರಿಕೆಗಳಲ್ಲಿ ಫ್ರೂಫ್ ರೀಡರ್ ಆಗಿ ೧೯೬೩ ರಿಂದ ೧೯೬೫ ರವರೆಗೆ ಕೆಲಸ ಮಾಡಿದರು. ನಂತರ ೧೯೬೫ ರಿಂದ ೧೯೭೬ ರವರೆಗೆ ಎನ್.ಸಿ.ಸಿ. ಡಿಪಾರ್ಟಮೆಂಟ್ ಮತ್ತು ಒಂದು ವರ್ಷ ಭಾರತೀಯ ವಿಜ್ಞಾನ ಮಂದಿರ (ಐ.ಐ.ಎಸ್.ಸಿ. )ದಲ್ಲಿ ಎರಡನೇಯ ದರ್ಜೆ ಗುಮಾಸ್ತರಾಗಿ ಕೆಲಸ ಮಾಡಿದರು. ಜೊತೆಗೆ ೧೯೬೭ರಲ್ಲಿ ಬಿ.ಕಾಂ.ಪದವಿ, ನಂತರ ೧೯೯೪ರಲ್ಲಿ ಎಲ್.ಎಲ್.ಬಿ. ಪದವಿ ಪಡೆದುಕೊಂಡಿದ್ದಾರೆ.

೧೯೭೬ ರಲ್ಲಿ ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆ ಸೇರಿ, ೨00೪ ರಲ್ಲಿ ಡೆಪ್ಯುಟಿ ಮಾನ್ಯೇಜರ್ (ವಿಜಿಲನ್ಸ್) ಆಗಿ ನಿವೃತ್ತಿ ಹೊಂದಿದ್ದಾರೆ.

ಸಿ.ಎಸ್. ಕೃಷ್ಣಮೂರ್ತಿ

 

ಪತ್ರಿಕಾಲಯಕ್ಕೆ ಭೇಟಿಕೊಡುತ್ತಿದ್ದ ಸಾಹಿತಿಗಳಿಂದ ಪ್ರೇರಣೆ ಪಡೆದು ಇವರು ಲೇಖನಿ ಹಿಡಿದರು. ಆಗಾಗ ಬರೆದ ಹಾಸ್ಯ ಲೇಖನಗಳು, ಸಣ್ಣ ಕಥೆಗಳು, ಅಂಕಣಗಳು, ಕವನಗಳು, ಇತ್ಯಾದಿ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇವರು ಬರೆದ “ಲಾಂದ್ರದ ರಾಮಪ್ಪ” ಸಣ್ಣ ಕಥೆಗಳ ಸಂಗ್ರಹ ೧೯೯೫ರಲ್ಲಿ ಪ್ರಕಟವಾಯಿತು. ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲರಾಗಿರುವ ಇವರು ಅನೇಕ ಕವನಗಳನ್ನು ಬರೆದಿದ್ದಾರೆ. ಇವರು ಬರೆದ ಕವನಗಳ ಸಂಗ್ರಹವನ್ನು ಸಮಾನ ಮನಸ್ಕರ ಓತ್ತಾಯದ ಮೇರೆಗೆ “ಈ ಹೊತ್ತಿನ ಕವಿತೆಗಳು” ಪುಸ್ತಕದ ರೂಪ ಪಡೆದು ೨00೨ ರಲ್ಲಿ ಪ್ರಕಟವಾಗಿದೆ. ಈ ಪುಸ್ತಕ ೨೬೩ ಕವನಗಳಿರುವ ಬೃಹತ್ ಸಂಗ್ರಹ.

ಇವರು ನಾಟಕಗಳಲ್ಲಿ ಪಾತ್ರವಹಿಸಿದ್ದಾರೆ ಮತ್ತು ಕ್ರಿಕೆಟ್ ಇವರ ನೆಚ್ಚಿನ ಆಟ. ಮೊದಲಿನಿಂದಲೂ ಸಮಾಜ ಸೇವೆಯ ಬಗ್ಗೆ ಒಲವು ಹೊಂದಿದ್ದಾರೆ. ಈ ಪುಸ್ತಕದಿಂದ ಬಂದ ಹಣವನ್ನು ಬಡ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿಟ್ಟಿದ್ದಾರೆ. ಒಬ್ಬ ಓಳ್ಳೆಯ ಯೋಗಪಟು ಕೂಡ ಆಗಿದ್ದಾರೆ. ಇವರ ಯೋಗ ಗುರು ಶ್ರೀ ಪಟ್ಟಾಭಿರಾಮ್. ಇವರ ಅಭಿರುಚಿಗಳು ಯೋಗ ಉಪನ್ಯಾಸಕ, ನಿತ್ಯ ಯೋಗ, ಪ್ರಾಣಾಯಾಮ ಮತ್ತು ಧ್ಯಾನ.

ಮೊದಲಿನಿಂದಲೂ ಸಮಾಜ ಸೇವೆ ಮತ್ತ ಅಧ್ಯಾತ್ಮದ ಬಗ್ಗೆ ಒಲವು ಹೊಂದಿದ್ದಾರೆ. ಇವರ ಈ ಒಲವುಗಳು ಅವರ ಕವನಗಳಲ್ಲಿ ಕಾಣಬಹುದು.

ಇವರ ಮನೆಯವರು ೨0೧0ರಲ್ಲಿ ದೈವಾಧೀನರಾದರು. ಇಬ್ಬರು ಗಂಡುಮಕ್ಕಳು ಮತ್ತು ಒಬ್ಬಳು ಮಗಳು. ನಾಟ್ಯಪ್ರಿಯರಾದ ಇವರು ಮಗಳಿಗೆ ನಾಟ್ಯ ತರಭೇತಿ ಕೊಡಿಸಿದ್ದಾರೆ. ಆಕೆ ದೇಶ, ವಿದೇಶಗಳಲ್ಲಿ ನಾಟ್ಯ ಪ್ರದರ್ಶನಗಳನ್ನು ಕೊಟ್ಟಿದ್ದಾರೆ. ಈ ಪುಸ್ತಕವನ್ನು ಅವರ ಮಡದಿಗೆ ಅರ್ಪಿಸಿದ್ದಾರೆ.

ಕವನ ಸಂಗ್ರಹದ ಪರಿಚಯ :

ಈ ಪುಸ್ತಕ ೨೬೩ ಕವನಗಳಿರುವ ಬೃಹತ್ ಕವನ ಸಂಗ್ರಹ. ಸರಳವಾದ ಕನ್ನಡ ಮತ್ತು ಆಧ್ಯಾತ್ಮಿಕ ಒಲವನ್ನು ತೋರಿಸುವ ಕವನಗಳು ಈ ಸಂಗ್ರಹದ ವಿಶೇಷ. “ಇವುಗಳು ಕೇವಲ ಮನರಂಜಿಸುವ ಕವಿತೆಗಳಲ್ಲ, ಜೀವನದ ನಶ್ವರತೆಯನ್ನು, ಬದುಕಿನ ಗುರಿಯನ್ನು, ಗುರಿಯ ಸೇರುವ ದಾರಿಯನ್ನು ತೋರುವ ದಿಕ್ಸೂಚಿಗಳೆಂದರೆ ಅತಿಶಯೋಕ್ತಿಯಲ್ಲ” ಎಂದು ಶ್ರೀಮತಿ ಟಿ.ಕೆ. ವಾಣಿಯವರು ಮುನ್ನುಡಿಯಲ್ಲಿ ಹೇಳಿರುವುದು ಸರಿಯಾಗಿದೆ.

ಪ್ರತಿಯೊಂದು ಕವನವೂ ನಾಲ್ಕೈದು ಚರಣಗಳನ್ನು ಹೊಂದಿದೆ. ಆದಿ ಪ್ರಾಸ, ಅಂತ್ಯ ಪ್ರಾಸಗಳನ್ನು ಕವನಗಳಲ್ಲಿ ಅಳವಡಿಸಿಕೊಂಡಿದ್ದಾರೆ. ಮೇಲು ನೋಟಕ್ಕೆ ಸರಳತೆ ಕಂಡರೂ, ಆ ದೇವನಲ್ಲಿ ಕವಿಯ ಸಂಪೂರ್ಣ ಶರಣಾಗತಿಯ ಮನೋಭಾವವನ್ನು ಪ್ರಧಾನವಾಗಿ ಎಲ್ಲಕಡೆ ಗುರುತಿಸಬಹುದು.

ಕೆಲವು ಕವನಗಳನ್ನು ಈಗ ನೋಡೋಣ:

‘ಅಲೆ’
ಧ್ಯಾನದ ಓಲವಿರುವ ಕವಿ ಮೊದಲ ಕವನದಲ್ಲಿ ಹರಿ ನಿನ್ನ ಅಂತರ್ಯವನ್ನು ತಿಳಿಯಲು ಕಾತರದಿ ಕಾದಿರುವೆ ಎಂದು ಹೇಳುತ್ತಾ “ಧ್ಯಾನದಲಿ ನನ್ನ ನಾ ಅರಿಯುವಂತಾಗಲಿ” ಎಂದಿದ್ದಾರೆ.

‘ಯೌವನ’
ಯೌವನ ಮನವರಳುವ ದಿನಗಳು ಆ ಸಮಯದಲ್ಲಿ ಅತ್ತಿತ್ತ ಹೋರಾಡುವ ಮನವನ್ನು ಸಡಿಲ ಬಿಡಬೇಡಿ ಎಂದು ಹೇಳುತ್ತಾ ಕವಿ ಹೀಗೆ ಎಚ್ಚರಿಸಿದ್ದಾರೆ.

ಬಿಟ್ಟರೆ ಸಡಿಲ ಲಗಾಮು
ಕೆಟ್ಟರೆ ತಿಂದಂತೆ ಅಫೀಮು
ಸುಟ್ಟ ಮೂತಿಗೆ ಇಲ್ಲ ಮುಲಾಮ

‘ವೇಗ’
ಈಗಂತೂ ವೇಗದ ಬದುಕು. ಆದರೆ ಗುರಿಮುಟ್ಟುವ ತವಕದಲಿ ತಪ್ಪು ದಾರಿ ಹಿಡಿಯಬಾರದು ಎಂದು ಎಚ್ಚರಿಸುತ್ತಾ, ಶುದ್ದ ಮನಸ್ಸಿನಿಂದ ಒಳ್ಳೆಯ ಚಿಂತನೆ ಮಾಡಿದರೆ ಬುದ್ದಿವಂತರಾಗುತ್ತೀರಿ ಎಂದು ಹೀಗೆ ಹೇಳಿದ್ದಾರೆ.

ಶುದ್ದ ಮನಸು ಪಕ್ವ ಚಿಂತನೆ
ಬುದ್ದನಾಗದಿದ್ದರು ಎಲ್ಲರೂ
ಬುದ್ದಿವಂತರಾಗಲು ಅಡ್ಡಿಯಿಲ್ಲ.

‘ಸಂವಾದ’
ಹೆಣ್ಣು- ಗಂಡಿನ ಸಂವಾದದ ರೂಪದಲ್ಲಿ ಬಂದಿರುವ ಕವನವಿದು. ನನ್ನ ಒಳ ಮನ ಹೊಕ್ಕು ನೋಡು, ಪ್ರೇಮವಿಲ್ಲದ ಕಾಮ ನೇಮವಿಲ್ಲದ ಪೂಜೆಯಂತೆ ಎಲ್ಲ ವ್ಯರ್ಥವೆನ್ನುವ ಹೆಣ್ಣಿಗೆ ಮತ್ತು ಪ್ರೇಮದಾಸರೆಯೊಂದೇ ಬದುಕು ಎಂದು ಗೊತ್ತಿದ್ದರೂ ಗಂಡೆಂಬ ಅಹಃಕಾರ ಆಗಾಗ್ಗೆ ಕಾಡಿ ತಪ್ಪಾಗುತ್ತದೆ ಎನ್ನುವ ಗಂಡಿಗೆ ಕವಿ ಇಬ್ಬರೂ ಕೂಡಿ ಬಾಳಿದರೆ ಓಳ್ಳೆಯ ಜೀವನವಾಗುತ್ತದೆಂದು ಹೀಗೆ ಹೇಳುತ್ತಾರೆ.

ಹೇಳಿಹರು ಚಕ್ರವೆರಡು ಗಾಡಿವೊಂದೇ
ಹೆಚ್ಚು ಕಡಿಮೆ ಯಾರಿಲ್ಲ ಸಮರೆಂದು
ಬದುಕಿನ ಪಯಣ ತಿರುವುಗಳ ಆಗರ
ಹದದಿ ಬೆಂದರೆ ರುಚಿಯಾದ ಮೇಲೋಗರ.

‘ಹದ’
ಈ ಕವನದಲ್ಲಿ ಸರಿಯಾದ ರೀತಿಯಲ್ಲಿ ಪಾಕ ಮಾಡುವುದನ್ನು ಹೇಳುತ್ತಾ, ಅದೇ ರೀತಿ ಎಚ್ಚರ ಬೇಕು ನಡೆ ನುಡಿಯಲಿ ಎನ್ನುತ್ತಾ, ಸರಿದಾರಿಯಲಿ ನಡೆಯಲು ಈ ರೀತಿ ಹೇಳಿದ್ದಾರೆ.

ಹದದಿ ತಟ್ಟಿದರೆ ಶಾಖ
ಮುದದಿ ಅರಳುವುದು ಪಾಕ
ಸೀಯಬಾರದು ಅತಿಯಲಿ
ಕಾಯಬೇಕು ಸಹನೆಯಲಿ

ತಪ್ಪುವುದು ಹದ ನಿಜ ಆಗಾಗ್ಗೆ
ಹೆಚ್ಚು ಚಿಂತಿಸಬಾರದು ಈ ಬಗ್ಗೆ
ಮರಳಿದರೆ ಸರಿದಾರಿಗೆ ಬೇಗ
ಕೈ ಹಿಡಿದು ನಡೆಸುವ ರೀತಿ ಸರಾಗ

‘ಚೆಲುವೆ ನನ್ನ ಮನದರಸಿ’

ಎಷ್ಟೋ ದಿನಗಳಿಂದ ನಿನ್ನಂದವ ವರ್ಣಿಸುವ ಬಯಕೆ ಎಂದು ಹೇಳುತ್ತಾ ಕವಿ ಮನದರಸಿಯ ಮುಂಗುರಿಳಿನ ಲಾಸ್ಯ, ನೀಳ ನಾಸಿಕದ ಅಂದ, ಇತ್ಯಾದಿಗಳ ಬಗ್ಗೆ ವರ್ಣಿಸುತ್ತಾ ತಾನು ಮೆಚ್ಚಿರುವುದು ಆಕೆಯ ಅಂತರಂಗದ ಸೌಂದರ್ಯವೆಂದು ಹೀಗೆ ಹೇಳಿದ್ದಾರೆ.

ಎಚ್ಚರದ ನುಡಿಗಳು ತಪ್ಪು ಹೇಳುತ್ತಿಲ್ಲವೆಂದಿಗೂ
ಮೆಚ್ಚಿದೆನು ಅಂತರಂಗದ ಹೃದಯ ಸಂಪನ್ನತೆಗೆ
ಹೆಚ್ಚಿಗೆ ಹೇಳಲಾರೆ ಪೂರ್ತಿ ಎಚ್ಚರವಾಗಿದೆ ಸ್ವಪ್ನದಿಂದ
ತಪ್ಪು ತಿಳಿಯಬೇಡ ತೊದಲನುಡಿಗೆ ಎಲ್ಲಿದ್ದರೂ ನೀನು.

‘ಮಡದಿ’
ಕೊನೆಯವರೆಗೂ ಸಲಹುವ ‘ಮಡದಿ’ ಯು ಮಕ್ಕಳನ್ನು ಹೊತ್ತು ಹೆತ್ತುವುದರ ಜೊತೆಗೆ ಅವಳ ರೀತಿ, ನೀತಿ, ಸಹನೆ, ಶಾಂತಿ, ವ್ಯವಹಾರ ಚತುರತೆಗಳನ್ನು ಹೇಳುತ್ತಾ ಆಕೆಯ ಋಣ ತೀರಿಸಲಾಗುವುದಿಲ್ಲವೆಂದು ಸಾಲುಗಳನ್ನು ನೋಡಿ.

ನೋಯಿಸಿದರೆ ಶಾಪ ತಟ್ಟುವುದು
ಕಳೆದು ಹೋದರೆ ಸಿಗದ ರತ್ನ
ಅನುಭವವೆ ತಿಳಿಸುವುದು ಎಲ್ಲವನು
ಮಡದಿ ನಿನ್ನ ಋಣ ತೀರಿಸಲೆಂತು.

‘ಬಾಳ ಬಂಡಿ’
ಸಣ್ಣವರು ಬರುವ ನೋವುಗಳಿಗೆ ಹೆದರಿ ಕುಗ್ಗಬಾರದು. ಬಾಳಬಂಡಿಯಲ್ಲಿ ಗಂಡು ಹೆಣ್ಣುಗಳು ಜೋಡೆತ್ತುಗಳು. ಬಾಳ ಬಂಡಿಯನ್ನು ಎಳೆಯಲು ಆಗದೇ ಸೋಲಬಾರದು. ಒಳ್ಳೆಯ ದಿನ ಬರಲು ಕಾಯಬೇಕು. ನಂಬಿ ಕೆಟ್ಟವರಿಲ್ಲ ಎಂದು ದಾಸರೂ ಹೇಳಿದ್ದಾರೆ. ನೊಗದ (ಸಂಸಾರದ) ಭಾರ ಹೊರಲೇ ಬೇಕು, ಒಳ್ಳೆಯ ಬದುಕಿಗೆ ತ್ಯಾಗ ಅನಿವಾರ್ಯ. ಆಗ ಬಾಳ ಬಂಡಿ ಸರಾಗವಾಗಿ ಗುರಿ ಮುಟ್ಟುತ್ತದೆ ಎಂದಿದ್ದಾರೆ.

ಅರಳುವ ಮನ ಮುದುಡ ಬಾರದು
ಹದಿವಯಸಿನಲಿ ಮುದಿತನವೇಕೆ
ಯಾರಿಗಿಲ್ಲ ನೋವು ಬಾಳ ಕಾವು

ಚಾತಕ ಪಕ್ಷಿ ಕಾಯ್ವದು ಮಳೆ ಹನಿಗೆ
ಕಾಯಬೇಕು ನಾವು ಸುಖದ ದಿನಕೆ
ನಂಬಿ ಕೆಟ್ಟವರಿಲ್ಲವೆಂದರು ದಾಸರು

ಗುರಿ ಮುಟ್ಟುವ ತವಕವಿರಲಿ ಸದಾ
ಹರಿ ಇಹನು ಜೊತೆಗೆ ಸಾರಥಿಯಾಗಿ
ಮರೆಯದೆಲೆ ನಂಬಿ ಹೂಡೋಣ ಬಂಡಿ.

‘ಶೂನ್ಯದಿಂದ ಶೂನ್ಯಕ್ಕೆ’
ಒಪ್ಪತ್ತಿನ ಕೂಳಿಗೆ ಪರದಾಡಿ, ಹರಿದ ಅರಿವೆಯನ್ನು ಹಾಕಿಕೊಂಡು, ಮೆಲ್ಲಗೆ ಸಾಗಿ, ಹೆಜ್ಜೆಯೂರಿ ತಲೆ ಎತ್ತಿ ನಡೆದ ದಿನಗಳು, ಬದುಕಿಗೆ ಮೆಟ್ಟಲಾಗಿ ಮತ್ತು ಬೆಳದಿಂಗಳಾಗಿ ಬಂದ ನಲ್ಲೆ, ಮಕ್ಕಳ ಸುಖಮಯ ಭವಿಷ್ಯದಲ್ಲಿ ಎಂದು ಕುಟುಂಬದ ಪಯಣ ಸಾಗುತ್ತಿರಬೇಕಾದಾಗ

ಎಲ್ಲದಕು ಕೊನೆಯುಂಟು ಹೊರಟಳು ನಲ್ಲೆ ತೇರನೇರಿ
ಹಕ್ಕಿಗಳು ಹಾರಿದವು ರೆಕ್ಕೆ ಬಲಿತಾದ ಮೇಲೆ
ಯಾಂತ್ರಿಕ ಬದುಕಲಿ ನೆನಪಿನಾ ಭಾವನಾತ್ಮಕ ಸಂಬಂಧಕೆಲ್ಲಿ ಬೆಲೆ
ಮತ್ತೇ ಶೂನ್ಯಕೆ ನೆನಪಿನಾ ದೋಣಿಯಲಿ ಒಂಟಿ ಪಯಣ.

ಅರ್ಥವಾದಾಗ ಜೀವನದಲ್ಲಿ ಎಲ್ಲವೂ ಶಿವನ ಮಾಯೇ, ಕೊಡುವವನಿದ್ದರೂ ಪಡೆಯುವ ಭಾಗ್ಯ ಬೇಕು ಎಂದು ಹೇಳಿದ್ದಾರೆ.

‘ವಯಸು’
ಮುದಿತನದ ದಿನಗಳಲಿ ಕೆದಕಿ ತಿಳಿಯುವ ಚಪಲ ಬಿಟ್ಟು ಹದವರಿತು ಬದುಕಬೇಕು ಎಂದು ಹೇಳುತ್ತಾ ಧ್ಯಾನದಲ್ಲಿರಲು ಹೀಗೆ ಹೇಳಿದ್ದಾರೆ.

ವಾನಪ್ರಸ್ಥ ಅಂದಿಗಾಯಿತು
ಏನು ಪ್ರಶ್ನೆಯ ಕೇಳದೆ ಧ್ಯಾನದಲಿ
ತಾನು ತನದೆಂದು ನೆಮ್ಮದಿ ಇದ್ದರೆ
ಬೇನೆಗಳಿಲ್ಲದ ಆನಂದವಿಹುದು ಕಾಣ.

‘ಹೂ- ತಾರು ಮಾರು’
ಪುಷ್ಪಗಳ ಒಂದು ಗುಪ್ತ ಸಭೆಯಲ್ಲಿ ಕಾಡು ಹೂ, ನಾಡ ಹೂ ಎಂಬ ಭೇದ ಏಕೆ ಈ ಮನುಷ್ಯರು ಮಾಡುತ್ತಾರೆ ಎಂಬ ವಿಷಯ ಚರ್ಚೆಯಾಗುತ್ತದೆ. ಬೆರಕೆ ಮಾಡಿ, ಕಸಿ ಮಾಡಿ, ಸಹಜ ಸುವಾಸನೆ ಮತ್ತು ಬಣ್ಣ ಕಳೆದುಕೊಂಡಿರುವ ಹೂಗಳು, ಕಿರು ಹೂಗಳ ತುಳಿದು ಹೊಸಕುವ ನೀತಿಗೆ ಹೂಗಳ ಗೋಳು ಕಾಣುತ್ತದೆ. ಅದರೆ ದೇವರ ಪಾದಕ್ಕೆ, ಲಲನೆಯರ ಮುಡಿಗೇರುವ ಮಲ್ಲಿಗೆ, ಸಂಪಿಗಿ ಯಂತಹ ಹೂಗಳು ಈ ಸಭೆಯಲ್ಲಿ ಹೆಮ್ಮೆಯಿಂದ ಮಾತನಾಡದೇ ಗಂಭೀರದಲ್ಲಿ ಕೂತಿದ್ದಾರೆ. ಆಗ ಹೇಳಿದ್ದಾರೆ.

ಮಾನವನ ಈ ಅನ್ಯಾಯ ಎದುರಿಸಬೇಕಿತ್ತು
ಶವಕೆ ಪೂಜೆಗೆ ನಾರಿಗೆ ಬೇರೆ ಬೇರೆ ತಪ್ಪೆಂದು
ಸಮಾನತೆಗೆ ಹೋರಾಡಲು ಬಹುಮತವಿತ್ತು
ದಶಕಕೊಮ್ಮೆ ಅರಳುವ ಸುಮಗಳು ಆಕಳಿಸುತಿತ್ತು.

ಮನುಷ್ಯರಲ್ಲಿ ಭೇಧ ಭಾವನೆಗಳು ಬೇಡವೆಂದು ಇದಕ್ಕಿಂತ ಸರಳವಾಗಿ ಹೇಳಲು ಸಾಧ್ಯವೇ?

‘ಜ್ಞಾನೋದಯ’
ಸತಿ, ಸುತರ ಬಿಟ್ಟು ಹೋದ ಬುದ್ದನನ್ನು ಕೊಂಡಾಡಿದವರು ಯಶೋಧರೆಯ ಅಳಲ ಅರಿಯಲಿಲ್ಲ ಎಂದು ಹೇಳುತ್ತಾ, ಅಹಲ್ಯ, ದ್ರೌಪತಿ, ರಾಧೆ, ಸೀತೆಯ ಉದಾಹರಣೆ ಕೊಡುತ್ತಾ ಹೆಣ್ಣಿಗೆ ನ್ಯಾಯ ಸಿಗಲಿಲ್ಲವೆಂದು ಹೀಗೆ ಹೇಳಿದ್ದಾರೆ.

ಎಲ್ಲೂ ಸಿಗಲಿಲ್ಲ ನ್ಯಾಯ ಹೆಣ್ಣಿಗೆ
ಬರೀ ಬಳಕೆಯಾದಳು ಬವಣೆ ಕಾರುತ
ನೋವಿನಲು ನಲಿವೆ ಕಂಡರು ಎಲ್ಲರೂ

ಯಾವ ಪಕ್ಷಪಾತವೂ ಇಲ್ಲ ಈ ಭಾವದಲಿ
ಹೊಗಳಿ ಹೊನ್ನ ಶೂಲಕೇರಿಸುವ ಗುಣದಲಿ
ಬೇಕಿದೆ ಬದಲಾವಣೆ ತಪ್ಪಲು ವಕ್ರದೃಷ್ಟಿ.

‘ನವೋನ್ಮದ’
ವಸಂತ ಋತುವಿನಲ್ಲಿ ಹಳೆಯ ಎಲೆಗಳು ಉದುರಿ ಹೊಸ ಚಿಗುರು ಬರುವ ವೈಭವವನ್ನು ವರ್ಣಿಸುತ್ತಾ, ನಾವು ಪ್ರಕೃತಿಯ ಈ ನಿಯಮದಿಂದ ಪಾಠ ಕಲಿತು ಅನ್ಯಥಾ ಭಾವಗಳನ್ನು ಬಿಡಬೇಕೆಂದು ಹೀಗೆ ಹೇಳಿದ್ದಾರೆ.

ಬಿಡಬೇಕು ಅನ್ಯಥಾ ಭಾವಗಳ ಸದಾ
ತೊಡಬೇಕು ಉಚಿತ ಶಸ್ತ್ರಾಸ್ತ್ರ ಬದುಕಲಿ
ನಡೆಸಬೇಕು ಜೀವನದಲಿ ಧರ್ಮಯುದ್ಧ
ಪಡೆಯಬೇಕು ಬಂದ ಫಲಿತಾಂಶ ನಿಷ್ಟೆಯಲಿ

‘ನಶಿಸು’
ಈ ಕವನದಲ್ಲಿ ತಲೆ ಕೂದಲು ಕಳೆದುಕೊಂಡ ಬೊಕ್ಕ ತಲೆಯವರ ಸಂಕಟವನ್ನು ತೆರೆದಿಡುತ್ತಾ, ಕಳೆಯುವುದು ಸಹಜ ಗುಣ ಎಂದು ಸಮಾಧಾನ ಪಡಿಸುತ್ತಾ, ಸಜ್ಜನರ ಜೊತೆ ಬೆರೆತಾಗ ನೆಮ್ಮದಿಯು ಸಿಗುತ್ತದೆ ಎಂದು ಹೇಳುತ್ತಾರೆ. ನಂತರ-

ಅಮರರಲ್ಲ ನಾವು ಶಾಶ್ವತ ಬದುಕಿಗೆ
ಸಮರವಿದು ಕಳೆದು ಕೂಡುತಿರಬೇಕು
ಗಮನ ಹರಿಸದೆ ಬದುಕಬಾರದು
ಶಮನವೆಲ್ಲವೂ ಕೂತು ಧ್ಯಾನಿಸಿದರೆ.

‘ನಂತರ’
ಒಬ್ಬನೇ ಇದ್ದೇನೆ ನಾನು, ಈಗ ಸಾವಾದರೆ ಎಲ್ಲರಿಗೆ ಹೇಗೆ ತಿಳಿಸುವುದು, ಭಾನುವಾರ ಸತ್ತರೆ ಒಳ್ಳೆಯದೇನೋ, ಯಾರ್ಯಾರು ನೋಡಲು ಬರಬಹುದು, ಮಕ್ಕಳಿಗೆ ತಿಳಿಸುವವರಾರು, ಹೀಗೆ ಚಿಂತಿಸುತ್ತಾ ಹೇಳಿದ್ದಾರೆ.

ನಡೆದಿತ್ತು ಚಿಂತನ ಮಂಥನ ಒಳಗೆ
ಅಪರೂಪ ಸತ್ತನಂತರದ ಕಾಡುವ ಚಿಂತೆ
ಸದ್ಯ ಹೊಡೆದಾಡಲು ನನ್ನ ಹೆಸರಲೇನಿಲ್ಲ
ಹಂಚಿಕೊಳ್ಳಲು ಆನಂತರ ಹೆಸರೇ ಇಲ್ಲ.

‘ಪುಸ್ತಕ’
ಬಾಳನ್ನು ಪುಸ್ತಕವೊಂದಕ್ಕೆ ಹೋಲಿಸುತ್ತಾ ಮೊದಲು ಹೀಗಿರಬಹುದು, ಹಾಗಿರಬಹುದು ಎಂಬ ಊಹೆ, ಹಾಳೆಗಳನ್ನು ತಿರುವಿದಾಗ ತೆರೆದು ಕೊಳ್ಳುವ ಕಷ್ಟ ಸುಖಗಳು, ಸಿಹಿ, ಕಹಿಗಳು, ಕೊನೆಗೆ ಕಡೆಯ ಪುಟಕ್ಕೆ ಬರುವ ಅನಿವಾರ್ಯತೆ. ಅದನ್ನು ತೆರೆದಿಟ್ಟಿರುವ ರೀತಿ ಹೀಗಿದೆ.

ಬಾಳೆಂಬ ಪುಸ್ತಕದಲಿ
ಹುಟ್ಟೆಂಬುದು ಮುನ್ನುಡಿ
ಭವಿಷ್ಯ ಕಾಣಿಸುವ ಕನ್ನಡಿ

ಕಡೆಗೆ ಇದ್ದರು ಇಂತಹವರೆಂಬ ಹೆಗ್ಗಳಿಕೆ
ಬದುಕ ಪಯಣದ ಬರಿ ಗೋಗರಿಕೆ
ಸಂಭ್ರಮವೋ ಸಂತಾಪವೋ ಎಲ್ಲ ಕನವರಿಕೆ

‘ವಿಶ್ವರೂಪ.’
ನೊಂದು ಬಳಲಿದ ಪಾರ್ಥನ ಮನಸ್ಸಿಗೆ ಸಾಂತ್ವನ ನೀಡಲು ಅಂದು ವಿಶ್ವರೂಪ ತೋರಿದೆ. ಆಗ ಪಾರ್ಥನ ಚಿತ್ತವೆಲ್ಲ ಬಂಧು ಬಳಗದತ್ತವಿತ್ತು, ಯಾರಿಗೆ ನೋವಾಗುವುದೋ ಯಾರು ಸಾಯಬಹುದೋ ಎಂದಿತ್ತು. ಆಗ ಎಲ್ಲರಿಗೂ ಕಾಯುವನಿಹನೆಂಬ ಅರಿವು ಪಾರ್ಥನಿಗೆ ಮಾಯವಾಗಿತ್ತು. ಆಗ ಎಲ್ಲಕ್ಕೂ ಕಾರಣೀಭೂತ ತಾನೆಂದು ವಿಶ್ವರೂಪ ತೋರಿದೆ. ಇಂದು ಹಗೆತನ ಮಾಡುತ್ತಿರುವವರು ಆ ಬಗ್ಗೆ ಸುಳಿವು ಕೊಡದೆ ಕ್ಷಣಕ್ಕೊಂದು ರೂಪ ಧರಿಸುತ್ತಾರೆ. ಮುಖವೆತ್ತಿ ನೋಡಿದರೆ ಬರಿ ದ್ವೇಷ ಅಸೂಯೆ ಕಾಣುತ್ತದೆ. ಈಗ ಮತ್ತೆ ಮುರಾರಿ ಬರಬೇಕೆಂದು ಹೀಗೆ ಬರೆಯುತ್ತಾರೆ.

ಅಂದು ಅನಿವಾರ್ಯವಾಗಿತ್ತು
ನೊಂದು ಬಳಲಿದ ಪಾರ್ಥನಿಗೆ
ಬೆಂದ ಮನಕೆ ನೀಡಲು ಸಾಂತ್ವನ.
ಚೆಂದದಲಿ ತೋರಲು ವಿಶ್ವರೂಪ.

ನಿತ್ಯ ಸಮರದ ಭಾವದಲಿ ಬದುಕು
ಮಿಥ್ಯೆಯಾಗಿದೆ ಒಳ ಶತ್ರು ಸಂಹಾರ
ಸತ್ಯವಂತರಿಗಿಲ್ಲ ನೆಮ್ಮದಿಯ ಕಾಲ
ಮತ್ತೆ ಬರಬೇಕಿದೆ ಮುರಾರಿ ತೋರಲು
ವಿಶ್ವರೂಪ.

‘ಪ್ರಕೃತಿ’
ವಸಂತನಾಗಮನ ಆದಾಗ ಹಳತು ಬಿಸಾಕಿ, ಕೊಳಕು ತೊಳೆಯುವ ರೀತಿ, ಹೊಸ ಚಿಗುರು ಬಂದು ಅಂದದಲ್ಲಿ ನರ್ತನ ಮಾಡುತ್ತದೆ. ಸರ್ಪ ಕೂಡ ಪೊರೆ ಕಳಚಿ, ಹೊಸ ಬಟ್ಟೆ ಧರಿಸಿದಂತೆ ಉಲ್ಲಾಸದಲಿ ಬಳಕುತ್ತಾ ಹೊಸ ಬೇಟೆಗೆ ಹೊರಡುತ್ತದೆ. ಆಗ ಕವಿ ಹೇಳುತ್ತಾರೆ-

ಪ್ರಕೃತಿ ಕಲಿಸುವ ಪಾಠ ಎಲ್ಲ ತೊರೆ
ಹೊಸ ಚಿಗುರ ಭಾವದಲಿ ಪ್ರೀತಿಯ ಸೆರೆ
ತೊರೆದು ದೃಷ್ಟ ಭ್ರಷ್ಟತನದ ಹೊರೆ
ನಡೆಯಲಿ ನಿತ್ಯ ಸತ್ಯದ ಹೊಸ ಆಲಿಂಗನ.

‘ನವೋದಯ’

ಸಾರಬೇಕಿದೆ ಜಗಕೆ
ನೇರ ಮಾತಿನಲಿ ಇಂದು
ತರ ತರದ ಜನರಿರುವ ಲೋಕದಲಿ
ನರ ಮಾನವರೆಲ್ಲ ಒಂದೇ ಎಂದು

ಹೀಗೆಂದು ಹೇಳುತ್ತಾ, ಹಿಂದೆಯು ಮತ್ತು ಇಂದೂ ಇರುವವರು ರಾಕ್ಷಸರು. ತಪ್ಪು ಮಾಡದವರನು ಸದಾ ರಕ್ಷಿಸಬೇಕಿದೆ ಎಂದು ಹೇಳುತ್ತಾ.

ಪ್ರಳಯ ಸನ್ನಿಹಿತವಾಗಿದೆ
ಹಳತೆಲ್ಲ ಕೊಚ್ಚಿ ಹೊಸತ ಕಾಣಲು
ಕಳೆ ಖೂಳುಗಳ ತರಿಯದೆ ಫಸಲೆಲ್ಲಿ
ನಳನಳಿಸುವ ನವಯುಗ ಉದಯವೆಂದು.

‘ತಪಸ್ಸು’
ಕೊನೆಯ ಕವನದಲ್ಲಿ ಬದುಕು ಒಂದು ತಪಸ್ಸಿನಂತೆ ಎಂದಿದ್ದಾರೆ. ಈ ತಪಸ್ಸಿನ ಹಾದಿಯಲ್ಲಿ ತಪೋಭಂಗವಾದರೆ ಆಶ್ಚರ್ಯವಿಲ್ಲ. ಈ ಬದುಕಿನ ಗುರಿಯ ಅರಿವಿರಬೇಕು. ನಿಶ್ಚಲ ಮನಸ್ಸಿನಿಂದ ಪೂಜೆ ಮಾಡಿದರೆ ಭಗವಂತನ ಸನ್ನಿಧಿ ಸೇರಲು ಸಾಧ್ಯವೆಂದು ಹೇಳುತ್ತಾ ಲೌಕಿಕ ಜಿಡ್ಡುಗಳನ್ನು ಹಂತ ಹಂತವಾಗಿ ಕರಗಿಸಿಕೊಂಡು ಬಂದು, ಓಳ್ಳೆಯ ದಾರಿಯಲ್ಲಿ ಸಂಸ್ಕಾರವಂತನಾಗಬೇಕು. ಆಗ ದೊರೆಯುವುದೇ ಮಹದಾನಂದ ಎಂದು ಹೀಗೆ ಹೇಳಿದ್ದಾರೆ.

ಒಳಗಿನ ಜಿಡ್ಡು ಕರಗಬೇಕು ಹಂತ ಹಂತದಲಿ
ಸತ್ಕಾರ್ಯ ಸತ್ಸಂಗ ಸತ್ ಚಿಂತನೆಗಳ ಮಾರ್ಜಕದಲಿ
ಒಮ್ಮೆ ಸಂಸ್ಕಾರ ಬಲಿತು ಚೆಂದದಲಿ ಮನವರಳಿದಾಗ
ಶುದ್ದ ಚಿಂತನೆಯಲಿ ದೊರೆವುದೇ ಮಹದಾನಂದ.

ಹೀಗೆ ಅನೇಕ ಕವನಗಳ ಮೂಲಕ ತಮ್ಮ ಮನ ತೆರೆದಿಟ್ಟಿರುವ ಕವಿ, ತಮ್ಮ ‘ಕವಿತೆ’ ಕವನದಲ್ಲಿ ಈ ನನ್ನ ಪ್ರೀತಿಯ ಕವಿತೆಗಳು ಹಲವು ಗುರುಗಳಿಂದ ಕಲಿತ ಬರಹದ ಮೂಲಕ ತಮ್ಮ ಬಿಚ್ಚಿಟ್ಟ ಭಾವನೆಗಳು ಮತ್ತು ಮುಚ್ಚಿಟ್ಟ ಸುಂದರ ಕನಸುಗಳು ಎಂದಿದ್ದಾರೆ. ತಾವು ಬರೆದ ಕವಿತೆಗಳನ್ನು ಮೆಚ್ಚಿದವರೂ ಇದ್ದಾರೆ, ಮೆಚ್ಚದವರೂ ಇದ್ದಾರೆ(ಸಜ ನೀಡಿದರು ಹಲವರು ಓದದೆ). ಮೆಚ್ಚಲೆಂಬ ಆಸೆ ಯಾರಿಗಿಲ್ಲ? ಎಂದು ಹೇಳುತ್ತಾ ಕವಿತೆಗಳನ್ನು ಮನಸ್ಸಿಗೆ ಬಂದಂತೆ ಬರೆದಿದ್ದೇನೆ, ಮುಂದೊಂದು ದಿನ ಸದೃಯರ ಮನ ಮುಟ್ಟುವ ಆಶಯವನ್ನು ಹೀಗೆ ಹೇಳಿದ್ದಾರೆ.

ಅಚ್ಚರಿಯ ಕವಿ ನಾನಾಗಬಹುದೇನೋ
ಅಳಿವ ಕಾಲದ ಅತಿ ಸನಿಹದಲಿ
ತಿಳಿವುದು ಹೇಗೆ ಕವಿತೆ ಕ್ರಮಗಳ
ತಳಮಳದ ಒಳ ಭಾವ ಹೊರಬಂದರೆ
ಬೆಳಗಲಾರದೆ ಸಹೃದಯರ ಮನ

“ಅತಿ ಸರಳವಾದ ಕನ್ನಡದಲ್ಲಿ ಯಾವುದೇ ಶಬ್ದಾಡಂಬರವಿಲ್ಲದೇ ಜೀವನ ಸಾರವನ್ನು ತತ್ವಪದಗಳಂತಿರುವ ಕವಿತೆಗಳ ರೂಪದಲ್ಲಿ ಕಾವ್ಯಲೋಕಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ” ಎಂದು ಮುನ್ನಡಿಯಲ್ಲಿ ಶ್ರೀಮತಿ ಟಿ.ಕೆ.ವಾಣಿಯವರು ಬರೆದಿರುವುದು ಮತ್ತು “ಈ ಕವನಗಳು ವಾಚಕರ ನಯನಗಳಿಗೆ ಹಬ್ಬದೂಟ’ವೆಂದು ಖ್ಯಾತ ಸಾಹಿತಿ ಡಾ.ಎಂ.ಜಿ.ದೇಶಪಾಂಡೆ ಯವರು ತಮ್ಮ ಬೆನ್ನುಡಿಯಲ್ಲಿ ಹೇಳಿರುವುದು ನಿಜವೆಂದು ಓದಿದವರಿಗೆಲ್ಲಾ ಅನಿಸುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ

ಒಂದು ಕವಿತೆ ತಮ್ಮ ಓದಿಗೆ:

ಓಲೆ

ಓ! ನನ್ನ ಪ್ರೀತಿಯ ನಲ್ಲ,

ನಿಜವಾಯಿತು ಮದುವೆಯ ಕನಸು
ಮುದವಾಯಿತು ಪ್ರೀತಿಯ ನನಸು
ಹದದಿ ಮಾಡುವ ಜೀವನ ಸೊಗಸು

ನಾರಿ ನಾನು ಬಲು ಸೂಕ್ಷ್ಮ ಮತಿಯು
ಮುಂದೆ ನಮಗೆ ನಾವೇ ಗತಿಯು
ಚೆಂದದಿ ಬಾಳಲು ಬೇಕು ಮತಿಯು

ಗಂಡು ಛಲದಿ ಬದುಕುವನಂತೆ
ನನಗೆ ಬೇಡ ಸಲ್ಲದ ಅಂತೆ ಕಂತೆ
ಮಧುರ ಒಡನಾಟ ಸುಖಕೆ ಸಾಕಂತೆ

ಇಷ್ಟಪಟ್ಟ ಬೇಡದ ಹವ್ಯಾಸಗಳ
ನಮಗಾಗಿ ಬಿಟ್ಟರೆ ಬದುಕು ಅಂದದಂಗಳ
ಸಾಗೋಣ ಗಮನವಿರಸಿ ಬರುವ ನಾಳೆಗಳ

ನಿನಗಾಗಿ ನಾ ನೀಡುವೆ ಸುಖದ ಬದುಕು
ಹೊರಗೆಲ್ಲೂ ಸಿಗದು ಶಾಂತಿ ನನ್ನಲ್ಲೇ ಹುಡುಕು
ತಿಳಿಯಲಿ ಸುಂದರ ಸಂಸಾರವೆಂದು ಜಗಕು

ಇಂದಷ್ಟಕ್ಕೆ ಮುಗಿಯದು ಸುಂದರ ಕನಸು
ಬದುಕೆಲ್ಲ ಆಗಲಿ ಆಶೋತ್ತರಗಳ ನನಸು
ಮುಂದೆ ಬರುವ ನಮ್ಮ ಕಂದ ತರುವ ಸೊಗಸು.

‘ಈ ಹೊತ್ತಿನ ಕವಿತೆಗಳು’ ಮುದ್ರಣಗೊಂಡು ಎರಡು ವರ್ಷವಾದರೂ ಓದಿದಾಗ ‘ಈ ಹೊತ್ತಿನ ಕವಿತೆಗಳು’ ಎಂದೆನಿಸುವುದು ಆಶ್ಚರ್ಯವಿಲ್ಲ.

ಉತ್ತಮ ಕವನ ಸಂಗ್ರಹಕೊಟ್ಟ ಕವಿಗೆ ಧನ್ಯವಾದಗಳು.


  • ಎನ್.ವಿ.ರಘುರಾಂ (ನಿವೃತ್ತ ಅಧೀಕ್ಷಕ ಅಭಯಂತರ(ವಿದ್ಯುತ್) ಕ.ವಿ.ನಿ.ನಿ), ಬೆಂಗಳೂರು. 

5 2 votes
Article Rating

Leave a Reply

2 Comments
Inline Feedbacks
View all comments
Ramachandra

ತುಂಬಾ ಚೆನ್ನಾಗಿದೆ

Ravi

👌👌👌👌👌

Home
News
Search
All Articles
Videos
About
2
0
Would love your thoughts, please comment.x
()
x
%d
Aakruti Kannada

FREE
VIEW