ನಮಗೆ ಎಂತಹ ಶಿಕ್ಷಣ ಬೇಕು?

ದೇಶವನ್ನು ಕಟ್ಟಲು ಶಿಕ್ಷಣ ಪದ್ಧತಿ ಅತಿಮುಖ್ಯವಾದುದು. ಆದರೆ ಇಂದು ನೀಡುತ್ತಿರುವ ಶಿಕ್ಷಣ ಉದ್ಯೋಗದಲ್ಲಿ ಪರರನ್ನು ಆವಲಂಬಿಸುವಂತಾಗಿದೆ. ಇಂಥ ಶಿಕ್ಷಣ ಬೇಕೇ ಎಂದು ಅನೇಕ ಶಿಕ್ಷಣ ತಜ್ಞರು, ಸಾರ್ವಜನಿಕರು, ವಿದ್ಯಾರ್ಥಿಗಳು, ಪೋಷಕರು ಚರ್ಚೆ ನಡೆಸುತ್ತಿದ್ದಾರೆ. ಆದರೆ ಎಂತಹ ಶಿಕ್ಷಣ ಬೇಕು ಅನ್ನೋದು ಬಹುಮುಖ್ಯವಾದ ಪ್ರಶ್ನೆಯಾಗಿದೆ.ಎನ್ .ಶೈಲಜಾ ಹಾಸನ ಅವರ ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…

ಶಿಕ್ಷಣ ನೀತಿ ಬದಲಾಗಬೇಕೇ, ಬದಲಾಗಬೇಕಾದರೆ ಅದು ಹೇಗೆ ಬದಲಾಗಬೇಕು, ಪ್ರಸ್ತುತ ಶಿಕ್ಷಣ ಕೇವಲ ಗುಮಾಸ್ತರನ್ನು ಸೃಷ್ಟಿಸುವಂತಿದೆ. ಹದಿನೈದು ವರ್ಷಗಳ ಕಾಲ ಶಿಕ್ಷಣ ಕಲಿತು ಪದವೀಧರನಾಗಿ ಹೊರಬರುವ ಇಂದಿನ ಯುವ ಜನತೆಗೆ ಸ್ವಾವಲಂಬನೆಯ ಬದುಕು ಸಾಧ್ಯವಾಗುತ್ತಿಲ್ಲ. ತನ್ನ ಉದ್ಯೋಗಕ್ಕಾಗಿ ಪರರನ್ನು ಆವಲಂಬಿಸುವಂತಹ ಇಂಥ ಶಿಕ್ಷಣ ಬೇಕೇ ಎಂದು ಅನೇಕ ಶಿಕ್ಷಣ ತಜ್ಞರು, ಸಾರ್ವಜನಿಕರು, ವಿದ್ಯಾರ್ಥಿಗಳು, ಪೋಷಕರು ಚರ್ಚೆ ನಡೆಸುತ್ತಿದ್ದಾರೆ. ಆದರೆ ಎಂತಹ ಶಿಕ್ಷಣ ಬೇಕು ಅನ್ನೋದು ಬಹುಮುಖ್ಯವಾದ ಪ್ರಶ್ನೆಯಾಗಿದೆ.

ಈಗಿನ ಶಿಕ್ಷಣ ರೀತಿಯಲ್ಲಿ ತಾರತಮ್ಯ ಇದೆ. ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಇದನ್ನು ಕಾಣುತ್ತಿದ್ದೇವೆ. ಶಾಲೆ ಅವಧಿ ಮುಗಿದ ತಕ್ಷಣವೇ ವಿದ್ಯಾರ್ಥಿಗಳಿಗೆ ಜೈಲಿನಿಂದ ಬಿಡುಗಡೆಯಾದಷ್ಟು ಸಂತಸವಾಗುತ್ತದೆ. ಇದಕ್ಕೆ ಕಾರಣ ಇಂದಿನ ಶಿಕ್ಷಣ ವ್ಯವಸ್ಥೆ. ಆನಂದ ದಾಯಕ, ಆಸಕ್ತಿ ದಾಯಕ ,ಬದುಕಿಗೆ ಹತ್ತಿರವಾದ ಶಿಕ್ಷಣ ಇಲ್ಲವೆ ಇಲ್ಲ. ಹಾಗಾದರೆ ಇಂತಹ ಶಿಕ್ಷಣ ಅಗತ್ಯವೆ? ಇವತ್ತಿನ ಪರೀಕ್ಷೆಗಳು ವಿದ್ಯಾರ್ಥಿಗಳಲ್ಲಿ ಭಯೋತ್ಪಾದನೆ ಉಂಟು ಮಾಡುತ್ತಿವೆ. ಅಂತಹ ಭಯ ತುಂಬಿದ ವಾತಾವರಣ ನಿರ್ಮಾಣವಾಗುತ್ತಿದೆ. ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾಗಲು ಕಾರಣವೇನು, ಅದಕ್ಕೆ ಏನು ಮಾಡಬೇಕು ಎಂಬ ಚಿಂತನೆ ಅಗತ್ಯವಾಗಿದೆ. ಅಧಿಕೃತ ಹೊಂದಿದ ಸಂಸ್ಥೆಗಳು ಐದನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ.ಯವರೆಗೆ ಪಠ್ಯವನ್ನು ರಚಿಸುತ್ತವೆ. ಹಾಗಾಗಿಯೇ ಪಠ್ಯಕ್ರಮ ಸರಿಯಾಗಿಲ್ಲ. ಪ್ರಸ್ತುತ ಶಿಕ್ಷಣ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದು ಪಠ್ಯವಸ್ತುಗಳ ಪಾಠ ಮಾಡುವ ಪ್ರಕ್ರಿಯೆಯು ಕೆಲಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಬದಲಾವಣೆ ಅಗತ್ಯವಾಗಿದೆ. ಪ್ರಾಥಮಿಕ ಶಾಲಾ ಮಕ್ಕಳಿಗೂ ಮತ್ತು ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೂ ಮೂರುಗಂಟೆ ಬೋಧಿಸಲಾಗುತ್ತದೆ. ಇದರಿಂದ ಪ್ರಾಥಮಿಕ ಶಾಲಾ ಮಕ್ಕಳ ಮೇಲೆ ಅತಿಯಾದ ಪರಿಣಾಮ ಬೀರುತ್ತದೆ. ಹಾಗಾಗಿಯೇ ತೊಂದರೆಯಾಗುತ್ತಿದೆ.

ಈ ಚರ್ಚೆಯು ರಾಜ್ಯಮಟ್ಟದಲ್ಲಿ ಆ ಮೂಲಕ ರಾಷ್ಟ್ರಮಟ್ಟದಲ್ಲಿ ಮುಟ್ಟಲು ಸಾಧ್ಯವಾಗಬೇಕು. ಏಕ ಸಂಸ್ಕೃತಿ ಇಲ್ಲದ ಭಿನ್ನ ಸಂಸ್ಕೃತಿ ಹೊಂದಿರುವ ಈ ದೇಶಕ್ಕೆ ಈಗಿನ ಶಿಕ್ಷಣ ನೀತಿ ಸರಿ ಇಲ್ಲ. ಏಕ ಸಂಸ್ಕೃತಿ ಇರುವ ವಿದೇಶಗಳಲ್ಲಿ ವಿಭಿನ್ನ ಶಿಕ್ಷಣದ ವ್ಯವಸ್ಥೆ ಇದೆ. ಇಂತಹ ವಿಭಿನ್ನ ಶಿಕ್ಷಣ ಈ ದೇಶದಲ್ಲಿ ಕಾಣುತ್ತಿಲ್ಲ. ಇಂಗ್ಲಿಷನ್ನು ಮಾತೃಭಾಷೆಯಾಗಿ ಕಲಿಸುತ್ತಿದ್ದೇವೆ. ಅದು ದ್ವಿತೀಯ ಭಾಷೆಯಾಗಬೇಕು. ಇಲ್ಲಿ ಏಕರೂಪಿತ ಶಾಲೆಗಳಿಲ್ಲ. ಕಲಿಸುವ ಶಾಲೆಗಳಲ್ಲಿ ಊಟಿ, ವಸತಿಶಾಲೆ, ಕೇಂದ್ರೀಯ ಶಾಲೆ, ಖಾಸಗಿ ಶಾಲೆ, ಸರ್ಕಾರಿ ಶಾಲೆ ಹೀಗೆ ಒಂದಕ್ಕೊಂದು ಪೈಪೋಟಿ ನೀಡುವ ವಾತಾವರಣ ಇದೆ. ಯಾವ ಶಾಲೆಯಲ್ಲಿ ಕಲಿತರೂ ಒಂದೇ ಬೆಲೆ ಇದ್ದಾಗ ಮಾತ್ರ ಶಿಕ್ಷಣ ಯಶಸ್ವಿಯಾದೀತು. ಶಿಕ್ಷಣದಲ್ಲಿ ಖಾಸಗೀಕರಣದ ಮಾತು ಕೇಳಿಬರುತ್ತಿದೆ. ಹೀಗಾದರೆ ಶಿಕ್ಷಣ ಕ್ಷೇತ್ರದಿಂದ ಹಲವು ಜನ ವಂಚಿತರಾಗುತ್ತಾರೆ. ಇಂಗ್ಲಿಷ್ ಮಾಧ್ಯಮದಲ್ಲಿ ಓದದಿದ್ದರೆ ಗುಮಾಸ್ತರ ಕೆಲಸವೂ ಸಿಗುತ್ತಿಲ್ಲವೆಂಬ ವಾತಾವರಣ ನಿರ್ಮಾಣವಾಗಿದೆ. ಇದು ಸರಿಯಾದ ಕ್ರಮವಲ್ಲ. ಇಂಗ್ಲಿಷ್ ಕಲಿಸಲು ಯಾವ ವಿರೋಧವೂ ಇಲ್ಲ. ಆದರೆ ಭಾಷೆ ಬೋಧನೆಯಲ್ಲಿ ಹೊಸ ಅನ್ವೇಷಣೆ ಅಗತ್ಯ. ಪ್ರೌಢಶಾಲೆಯವರೆಗೂ ದೇಶೀಯ ಮಾಧ್ಯಮ ಅಗತ್ಯ. ಇಲ್ಲದಿದ್ದಲ್ಲಿ ದೇಶೀಯ ಭಾಷಾ ಬೆಳವಣಿಗೆಗೆ ತೊಂದರೆಯಾಗುತ್ತದೆ ಎಂದು ವಿಶ್ಲೇಷಿಸಿದರು.

ದೇಶವನ್ನು ಕಟ್ಟಲು ಶಿಕ್ಷಣ ಪದ್ಧತಿ ಅತಿಮುಖ್ಯವಾದುದು. ಜೀವನಕ್ಕೆ ಪೂರಕ ಶಿಕ್ಷಣ ಬೇಕು. ಇವತ್ತಿನ ಶಿಕ್ಷಣದಲ್ಲಿ ಸರ್ವತೋಮುಖ ಪ್ರಗತಿ ಸಾಧ್ಯವೇ? ಶಿಕ್ಷಣ ನೀತಿ ಕೆಲವೇ ಹುದ್ದೆಗಳಿಗೆ ಮಾತ್ರ ಒತ್ತು ನೀಡಿದ ಫಲವಾಗಿ ಬಹುದೊಡ್ಡ ಅಸಮಾನತೆ ಸೃಷ್ಟಿಯಾಗಿದೆ. ಗ್ರಾಮೀಣ ಭಾಗದಲ್ಲಿನ ಹಲವು ಕಸುಬುಗಳು ನಿರ್ಲಕ್ಷ್ಯಗೊಳಗಾಗುತ್ತಿದೆ. ಬುದ್ದಿಯನ್ನು ಅಳೆಯಲು ಮಾನದಂಡವಿದೆ. ಆದರೆ ಹೃದಯವನ್ನು ಅಳೆಯಲು ಮಾನದಂಡಗಳೇ ಇಲ್ಲ. ಬುದ್ದಿಯಿಂದ ದೇಶ ಕಟ್ಟಲು ಸಾಧ್ಯವೇ ಇಲ್ಲ. ಪ್ರಾಥಮಿಕ ಶಾಲೆಯಿಂದಲೇ ಮಗು ಸ್ವಾವಲಂಬನೆಯ ದಿಕ್ಕಿನಲ್ಲಿ ನಡೆಯುವ ಶಿಕ್ಷಣ ಬೇಕು. ಓದಿದ ವ್ಯಕ್ತಿ ವ್ಯವಸಾಯ ಮಾಡಿದರೆ ಅವಮಾನ.ಕುಲಕಸುಬು ಕೈಗೊಂಡರೆ ಮರ್ಯಾದೆಗೇಡು ಎಂಬ ಭಾವ ಬೆಳೆಸುತ್ತಿರುವ ಈ ಶಿಕ್ಷಣ ಪದ್ಧತಿಗೆ ಬದಲಾಗಿ ಪ್ರತಿಯೊಂದು ಮಗುವು ತನ್ನ ಶಿಕ್ಷಣದ ಅವಧಿಯಲ್ಲಿಯೇ ವೃತ್ತಿಪರ ಕುಶಲತೆ ಪಡೆದು ಶಿಕ್ಷಣ ಮುಗಿಸಿ ಹೊರಬಂದಾಗ ತಾನೇ ವೃತ್ತಿ ಕೈಗೊಂಡು ಗಳಿಸುವ ಸಾಮರ್ಥ್ಯ ತಂದು ಕೊಡುವ ಶಿಕ್ಷಣಬೇಕು .

ಶಿಕ್ಷಣ ನೀತಿಯನ್ನು ತಕ್ಷಣವೇ ಜಾರಿಗೊಳಿಸಲು ಸಾಧ್ಯವಿಲ್ಲ. ವರ್ಷಗಳ ಕಾಲ ಚರ್ಚೆಯಾಗಬೇಕು. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕಾದರೆ ಆಂಗ್ಲಭಾಷೆಯನ್ನು ಕಲಿಯಬೇಕು. ಈ ಹಿನ್ನೆಲೆಯಲ್ಲಿ ಇಂಗ್ಲಿಷ್ ಶಿಕ್ಷಕರನ್ನು ನೇಮಕ ಮಾಡಿ ಅಂತವರಿಂದ ಕಲಿಸಬೇಕು. ಮಗು ಭಾಷೆಯನ್ನು ಯಾವ ಹಂತದಲ್ಲಿ ಕಲಿಯುತ್ತದೆ ಎಂಬುದು ಬಹುಮುಖ್ಯ. ಭಾಷೆ ಕಲಿಯುವ ಜೊತೆಗೆ ಸಂಸ್ಕೃತಿ ತಿಳಿಯುತ್ತದೆ. ಗ್ರಹಿಕೆ ಜ್ಞಾನ ಪಡೆದುಕೊಂಡ ನಂತರ ಇಂಗ್ಲಿಷ್ ಕಲಿಸುವುದು ಅಗತ್ಯ. ಹತ್ತನೆ ತರಗತಿಯವರೆಗೂ ಏಕ ರೂಪ ಶಿಕ್ಷಣ ಅಗತ್ಯ. ಉಚಿತ ಶಿಕ್ಷಣ, ಬಿಸಿಯೂಟ, ಆರೋಗ್ಯ, ಬಹಳ ಮುಖ್ಯ. ಇದು ಸರ್ಕಾರದ ಜವಾಬ್ದಾರಿ. ಪ್ರೈಮರಿ ಶಿಕ್ಷಕರ ಸಂಬಳ ಹೆಚ್ಚಿಸಬೇಕು. ಅವರನ್ನು ಗೌರವದಿಂದ ಕಾಣಬೇಕು. ಒಂದೆಡೆ ಐಷಾರಾಮದ ಶಿಕ್ಷಣ, ಇನ್ನೊಂದೆಡೆ ಕನಿಷ್ಠ ಸೌಲಭ್ಯವೂ ಇಲ್ಲದೆ ಶಿಕ್ಷಣ, ಈ ತಾರತಮ್ಯ ಮೊದಲು ಹೋಗಬೇಕು. ಒಂದು ಕಿಲೋಮೀಟರ್ ಒಳಗಿರುವ ಎಲ್ಲಾ ಮಕ್ಕಳು ಒಂದೇ ಶಾಲೆಗೆ ಹೋಗಬೇಕು. ಹಳ್ಳಿಯ ಶಾಲೆಗಳಿಗೆ ಉತ್ತಮ ಶಿಕ್ಷಕರು, ಉತ್ತಮ ಸೌಲಭ್ಯಗಳು ಬೇಕು ಎಂದರು.

ಬದುಕಿಗೆ ಪೂರಕವಾದ ಶಿಕ್ಷಣದ ಕೊರತೆ ಇದೆ. ದೇಶದಲ್ಲಿ 67% ಕೃಷಿಕರಿದ್ದರೂ ಕೃಷಿ ಕುರಿತಂತೆ ಯಾವ ಶಾಲೆಯೂ ಇಲ್ಲ. ಕೃಷಿ ಕಾಲೇಜುಗಳು ಇದ್ದರೂ ಬದುಕಿಗೆ ಪೂರಕವಾಗಬಲ್ಲ ಕೃಷಿಯನ್ನು ಹೇಳಿಕೊಡುವಲ್ಲಿ ವಿಫಲವಾಗಿವೆ. ಈ ಕಾಲೇಜುಗಳು ಕೃಷಿ ಮಾಡುವವರನ್ನು ತಯಾರಿಸುತ್ತ ಇಲ್ಲ. ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ನಿಗದಿಪಡಿಸುವ ಅಧಿಕಾರ ರೈತನಿಗಿಲ್ಲ. ರೈತರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರುವುದೇ ಕೃಷಿ ಬಿಟ್ಟು ಬೇರೆ ರಂಗಕ್ಕೆ ಹೋಗುವುದಕ್ಕೆ. ಈ ರಂಗವನ್ನು ಪುಷ್ಟಿಗೊಳಿಸುವ ಅಗತ್ಯವಿದೆ. ಜೀವನ ಶಿಕ್ಷ ಕಲಿಸುವಂತಹ ಶಿಕ್ಷಣ ಬೇಕು. ಆರ್ಥಿಕವಾಗಿ ಅಭಿವೃದ್ಧಿಯನ್ನು ಸಾಧಿಸುವಂತಹ ಶಿಕ್ಷಣದ ಕಲಿಕೆ ಕನ್ನಡ ಭಾಷಾಮಾಧ್ಯಮದಲ್ಲಿ ಆಗಬೇಕಾಗಿದೆ. ಮೆಕಾಲೆ ಶಿಕ್ಷಣ ಪದ್ಧತಿಯನ್ನು ರದ್ದುಗೊಳಿಸುವುದು ಅಷ್ಟು ಸುಲಭವಲ್ಲ, 100 ವರ್ಷಗಳಿಂದ ಹಿಡಿದಿಟ್ಟುಕೊಂಡಿದೆ ಎಂದರೆ ಅದರ ಹಿಂದಿನ ಬುದ್ದಿವಂತಿಕೆ ಎಷ್ಟಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಹಳೆಯದನ್ನು ಹೊಸದನ್ನು ಮಿಶ್ರಮಾಡಿದ ಅತಂತ್ರ ಸ್ಥಿತಿ. ಮೊದಲು ಪರೀಕ್ಷಾಭಯ ನಿವಾರಿಸಬೇಕು. ಅದರ ಬದಲಿ ವ್ಯವಸ್ಥೆ ಏನಿದೆ ಎಂದು ಕಂಡುಕೊಳ್ಳಬೇಕು. ಹತ್ತು ಸಲ ಸರ್ವಶಿಕ್ಷಣ ಅಭಿಯಾನ ಸಂದರೂ ಡ್ರಾಪ್ ಔಟ್ ತಡೆಯಲು ಈ ಶಿಕ್ಷಣ ಪದ್ಧತಿಯಿಂದ ಸಾಧ್ಯವಿಲ್ಲ. ಕಾನೂನಿನಿಂದ ಮಾತ್ರ ಸಾಕ್ಷರತೆ ಸಾಧಿಸಲು ಸಾಧ್ಯವಿಲ್ಲ. ಸಂಬಂಧಗಳಿಂದ ಮಾತ್ರ ಸಾಧ್ಯ. ವಸಾಹತು ರಾಷ್ಟ್ರಗಳಲ್ಲಿ ಮಾತ್ರ ಮುಷ್ಕರವಾದಾಗ ಸಾರ್ವಜನಿಕ ಆಸ್ತಿಹಾನಿ ಮಾಡುವುದು ನಿರೂಪಿತವಾಗಿದೆ. ಇಂಥವರನ್ನು ಸೃಷ್ಟಿಸುತ್ತಿರುವ ಈ ಶಿಕ್ಷಣದ ವ್ಯವಸ್ಥೆ ಬದಲಾಗಬೇಕು. ಪ್ರಾದೇಶಿಕ ಭಾಷೆಗೆ ಮಹತ್ವ ಇರಲೇಬೇಕು. ಇದರಿಂದ ಜ್ಞಾನವನ್ನು ಉಳಿಸಲು ಸಾಧ್ಯ. ಶಿಕ್ಷಣ ನೀತಿಗೆ ಸ್ಪಷ್ಟ ರೂಪುರೇಷೆ ಕೊಡಬೇಕು.


  • ಎನ್ .ಶೈಲಜಾ ಹಾಸನ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW