ಹರಿಹರ ಬಿ ಆರ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಕಷ್ಟದಲಿ ಸುಖದಲಿ ಜೊತೆಗಿರುವೆ
ಸದಾ ನಿನ್ನ ಮೊಗವ ನೋಡುತಿರುವೆ
ನಿನಗಾಗಿ ಸಮಯ ಮೀಸಲಿಟ್ಟಿರುವೆ
ನೆಮ್ಮದಿಯಿಂದಿರುವಂತೆ ಕಾಪಾಡುವೆ
ಸರಿಯಾಗಿ ತಿಳಿಯಲಿ ನಾನೆಂತಹವಳು
ಬಿಡು ಮನದಲಿಹ ಅನ್ಯಾಲೋಚನೆಗಳು
ನನಗಿಲ್ಲ ಯಾವಾಗಲೂ ಕೆಲಸಗಳ ಕಟ್ಟು
ಆರೋಗ್ಯದಿಂದಿರಬೇಕು ಶ್ರಮಗಳ ಪಟ್ಟು
ನಿಧಿ ಕರಗಿಸುವ ಮನಸುಗಳು ನಶಿಸಲಿ
ರೋಗ ರುಜಿನ ಬಾಧೆಗಳು ಬಾರದಿರಲಿ
ಶರೀರವು ಚಟುವಟಿಕೆಯ ಗೂಡಾಗಿರಲಿ
ಹಲವಾರು ಸಾಧನೆ ಪೂರೈಸುವಂತಾಗಲಿ
ನಿನ್ನ ಮನಸಿನಲಿಹುದೂ ಚೆನ್ನಾಗಿ ಬಲ್ಲೆ
ವೃಥಾ ಪರರ ಸಂಗ ಬಯಸುವುದ ಒಲ್ಲೆ
ದುಗುಡವ ಸರಿಸಿ ಮೆಲ್ಲಗೆ ಹಿತವಚನದಿಂ
ಇಬ್ಬರೂ ಜೊತೆಯಲಿರಬೇಕು ಒಮ್ಮತದಿಂ
- ಹರಿಹರ ಬಿ ಆರ್
