ಸ್ವಲ್ಪ ದಿನಗಳ ಹಿಂದೆ, ನಮ್ಮ ದೊಡ್ಡಪ್ಪ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರೆಂದು ವಿಚಾರ ತಿಳಿದ ತಕ್ಷಣ ಹೋಗಿ ಅವರನ್ನು ನೋಡಿ ಆರೋಗ್ಯ ವಿಚಾರಿಸಿಕೊಂಡು ಬರೋಣವೆಂದು ಆಸ್ಪತ್ರೆಗೆ ಹೊರಟೆ.
ತುಂಬಾ ದೊಡ್ಡ ಆಸ್ಪತ್ರೆ. ನನ್ನ ಕಾರು ನಿಲ್ಲಿಸಿ, ನನ್ನ ದೊಡ್ಡಪ್ಪನ ಮಗನಿಗೆ ಫೋನ್ ಮಾಡಿ ದೊಡ್ಡಪ್ಪ ಇರುವ ವಾರ್ಡ್ ಸಂಖ್ಯೆ ತಿಳಿದುಕೊಂಡು ಅವರನ್ನು ನೋಡಲು ಹೊರಟೆ. ಮೊದಲನೇ ಮಹಡಿ. ಜನರಲ್ ವಾರ್ಡ್ ನ ಮುಂದೆ ನನಗೋಸ್ಕರ ಕಾಯುತ್ತಿದ್ದ ನಮ್ಮ ಅಣ್ಣ. ಅವನಜೊತೆ ಮಾತಾಡುತ್ತ ಒಳಗೆ ನಡೆದೆ. ಒಳಗೆ ಸುಮಾರು ೨೦ ಹಾಸಿಗೆಗಳಿದ್ದು, ಪ್ರತಿಯೊಂದರಲ್ಲೂ ರೋಗಿಗಳು ಬಳಲುತ್ತಿದ್ದ ದೃಶ್ಯ ನೋಡಿ ಓ ದೇವರೇ ಎಂದೆ.
ದೊಡ್ಡಪ್ಪ ಮಂಚದ ಮೇಲೆ ಮಲಗಿದ್ದರು. ಅವರನ್ನು ನೋಡಿ ಮನ ಕಲಕಿತು. ಹತ್ತಿರ ಹೋಗಿ ಮಾತಾಡಿಸಿ ಅಲ್ಲಿಯೇ ಸ್ವಲ್ಪ ಹೊತ್ತು ಕುಳಿತೆ. ಅವರು ಮಲಗಿದ್ದ ಹಾಸಿಗೆ ಒಮ್ಮೆ ನೋಡಿದೆ. ಆ ಹಾಸಿಗೆ ಎಷ್ಟು ಚಿಕ್ಕದಾಗಿತ್ತೆಂದರೆ ಅವರಿಗೆ ಹೊರಳಾಡಲೂ ಜಾಗವಿರಲಿಲ್ಲ. ಅಂಗಾತವಾಗಿ ಮಲಗಿದ್ದರು. ಹಾಸಿಗೆ ತುಂಬಾ ಚಿಕ್ಕದಾಗಿದೆ, ಮಧ್ಯಾನ್ಹದಿಂದ ಹೀಗೆ ಅಂಗಾತವಾಗಿ ಮಲಗಿದ್ದೇನೆ. ಸ್ವಲ್ಪಾನು ಹೊರಳಾಡಲು ಆಗುತ್ತಿಲ್ಲ ಎಂದು ಕಣ್ಣೀರಿಟ್ಟರು.
ಅದನ್ನು ಕೇಳಿ ನಿಜಕ್ಕೂ ತುಂಬ ಕಷ್ಟ ವಾಯಿತು. ಬೇಸರ ಗೊಂಡು, ಅಲ್ಲಿಯೇ ಇದ್ದ ನರ್ಸ್ ಅನ್ನು ಸ್ವಲ್ಪ ಇಲ್ಲಿ ಬನ್ನಿ ಎಂದು ಕರೆದೆ. ಇದು ಮಕ್ಕಳು ಮಲಗುವ ಹಾಸಿಗೆಯಂತಿದೆ ಇದನ್ನು ದೊಡ್ಡವರಿಗೆ ಹೇಗೆ ಕೊಟ್ಟಿದ್ದೀರಿ ಎಂದು ಕೇಳಿದೆ. ಆಗ ನರ್ಸ್, “ಸಾರ, ಹಾಸಿಗೆ ಯಾವುದೂ ಖಾಲಿ ಇಲ್ಲ, ಖಾಲಿಯಾದ ತಕ್ಷಣ ಬದಲಾಯಿಸಿ ಕೊಡಲಾಗುವುದೆಂದು” ಹೇಳಿ ಹೊರಟು ಹೋದರು. ಮತ್ತೆ ಸ್ವಲ್ಪ ಸಮಯದ ನಂತರ ದೊಡ್ಡಪ್ಪನ ಕಷ್ಟ ನೋಡಲಾಗದೆ ನರ್ಸ್ ನ ಬಳಿ ಹೋಗಿ, ಅವರಿಗೆ ಮಲಗಲು ತುಂಬಾ ಕಷ್ಟ ವಾಗುತ್ತಿದೆ ಬೇರೆ ಹಾಸಿಗೆಯ ವ್ಯವಸ್ಥೆ ಮಾಡಿ ಎಂದು ಕೇಳಿಕೊಂಡೆ. ತಕ್ಷಣ ಅವರು ನನ್ನನ್ನು ಪಕ್ಕದ ಹಾಸಿಗೆಯಲ್ಲಿ ಮಲಗಿದ್ದ ಇನ್ನೊಬ್ಬರನ್ನು ತೋರಿಸಿ, ನೋಡಿ ಸಾರ, ಇವರು ಮೂರು ದಿನದಿಂದ ಚಿಕ್ಕ ಹಾಸಿಗೆ ಯಲ್ಲೇ ಮಲಗಿದ್ದಾರೆ. ಅವರ ಪಕ್ಕದಲ್ಲೂ ಮಲಗಿರುವ ಇನ್ನೊಬ್ಬರನ್ನು ತೋರಿಸಿ, ಅವರೂ ಕೂಡ ಎರಡು ದಿನಗಳಿಂದ ಹಾಗೆಯೇ ಇದ್ದಾರೆ. ಹಾಸಿಗೆ ಖಾಲಿ ಇಲ್ಲ. ಇವರೆಲ್ಲ ಮಲಗಿಲ್ಲವೇ, ನೀವು ಬಂದು ಒಂದೇ ದಿನದಲ್ಲಿ ಬೇರೆ ಹಾಸಿಗೆ ಕೇಳ್ತಿರಾ? ಎಂದು ಮತ್ತೆ ಹೊರಟು ಹೋದರು.
ಅಲ್ಲಿ ಇದ್ದಂತಹ ಯಾವುದೇ ನರ್ಸುಗಳಿಗಾಗಲಿ, ಡಾಕ್ಟರುಗಳಿಗಾಗಲಿ ಅಲ್ಲಿದ್ದಂತಹ ರೋಗಿಗಳ ಬಗ್ಗೆ ಕಾಳಜಿ ಕಂಡು ಬರಲಿಲ್ಲ. ಅವರು ರೋಗಿಗಳೊಂದಿಗೆ ಮಾತಾಡುತ್ತಿದ್ದ ರೀತಿ, ಅವರ ನಡುವಳಿಕೆ ತುಂಬಾ ಬೇಸರ ಮತ್ತು ಕೋಪ ತರಿಸಿತು. ನನ್ನ ಅಣ್ಣನ ಹತ್ತಿರ ಹೋಗಿ, ಇವರ ಬೇಜವಾಬ್ದಾರಿಯ ನಡುವಳಿಕೆಯ ಬಗ್ಗೆ ದೂರು ನೀಡೋಣ ಅಂತ ಹೇಳಿದೆ. ಅವನು ಇಲ್ಲಿ ಯಾರಿಗೆ ಹೇಳಿದರು ಅಷ್ಟೇ ಕಣೋ. ಎಲ್ಲರೂ ಒಂದಲ್ಲ ಒಂದು ರೀತಿ ಅಸಡ್ಡೆಯಿಂದ ಮಾತಾಡುವವರೇ. ಅದರಿಂದ ಪ್ರಯೋಜನದ ಬದಲಾಗಿ ದೂರು ನೀಡಿದ ಕಾರಣ ಮತ್ತಷ್ಟು ಉದಾಸೀನ ತೋರಿಸುತ್ತಾರೆ. ಅದರಿಂದ ಮತ್ತಷ್ಟು ತೊಂದರೆ ಅನುಭವಿಸ ಬೇಕಾಗುತ್ತದೆ ಎಂದು ಅವನು ಸ್ವಲ್ಪ ಹೊರಗೆ ಹೋಗಿ ಬರುತ್ತೇನೆಂದು ಹೊರಟ.
ನಾನು ಅಲ್ಲಿಯೇ ದೊಡ್ಡಪ್ಪನ ಪಕ್ಕದಲ್ಲೇ ಕುಳಿತೆ. ಅಲ್ಲಿ ಪ್ರತಿಯೊಬ್ಬರೂ ಪಡುತ್ತಿದ್ದ ಕಷ್ಟ ನೋಡಿ, ನನ್ನಲ್ಲಿ ಯಾವಾಗಲೂ ಕಾಡುತ್ತಿದ್ದ ಪ್ರಶ್ನೆ ಮತ್ತೆ ನನ್ನನ್ನು ಇರಿಯಿತು. ಏಕೆ ಆಸ್ಪತ್ರೆಗಳಲ್ಲಿ ಈ ರೀತಿಯಾಗಿ ರೋಗಿಗಳನ್ನ ಕಾಣುತ್ತಾರೆ? ಏಕೆ ಇಷ್ಟೊಂದು ನಿರ್ಲಕ್ಷ್ಯ ಮಾಡುತ್ತಾರೆ ಎಂದು. ದೊಡ್ಡಪ್ಪ ಮಲಗಿದ್ದನ್ನು ಕಂಡು ಹಾಗೆಯೇ ಎದ್ದು ಹೊರಗೆ ಬಂದೆ. ಬಾಗಿಲಲ್ಲಿ ನಿಂತಿದ್ದ ಸೆಕ್ಯುರಿಟಿ ಗಾರ್ಡ್ ನನ್ನನ್ನು ನೋಡಿ “ಏನ್ ಸಾರ ನಮ್ಮನ್ನ ನೋಡಿಕೊಳ್ಳಲ್ವಾ” ಎಂದು ಕೇಳಿದ. ಏನೋ ಯೋಚನೆಯಲ್ಲಿ ಬಂದ ನನಗೆ ಅವನ ಮಾತು ಅರ್ಥವಾಗಲಿಲ್ಲ. ಏನ್ರಿ ನಿಮ್ಮನ್ನ ನಾನೇನು ನೋಡೋದು ಅಂತ ಹೇಳಿ ಹೊರಟು ಹೋದೆ. ಆಸ್ಪತ್ರೆಗೆ ಅಣ್ಣ ವಾಪಸು ಬಂದ.
ಅವನನ್ನು ಕೇಳಿದೆ. ಸೆಕ್ಯುರಿಟಿ ಯ ಆ ವರ್ತನೆಯ ಬಗ್ಗೆ ತಿಳಿಸಿದೆ. ಅಣ್ಣ ಹೇಳಿದ. ನೋಡು, ಆಸ್ಪತ್ರೆಗಳಿಗೆ ರೋಗಿಗಳನ್ನ ನೋಡಲು ತುಂಬಾ ಜನ ಬರುತ್ತಾರೆ. ಎಲ್ಲರನ್ನು ಒಳಗೆ ಬಿಡುವಂತಿಲ್ಲ. ಇವರು ಹಣ ಪಡೆದು ಒಳಗೆ ಬಿಡುತ್ತಾರೆ. ಹಣ ಕೊಡದಿದ್ದಲ್ಲಿ ಒಳಗಡೆ ಹೋಗುವದು ಕಷ್ಟದ ವಿಷಯ ಎಂದ. ಅಲ್ಲಿಗೆ ನನ್ನ ಕೋಪ ನೆತ್ತಿಗೆ ಏರಿತ್ತು.
“ಬಡವನ ಕೋಪ ದವಡೆಗೆ ಮೂಲ” ಎನ್ನುವ ಗಾದೆಯ ಹಾಗೆ ನನ್ನ ಕೋಪಕ್ಕೆ ಅರ್ಥವೇ ಇಲ್ಲ ಎಂಬಂತೆ ಅಲ್ಲಿಂದ ನಾನು ಹೊರಟು ಹೋದೆ.
ಹಣ ಇದ್ದವನು ಖಾಸಗಿ ಆಸ್ಪತ್ರೆಗೆ ಹೋಗಿ ಹಣ ಕಳೆದು ಕೊಳ್ಳುತ್ತಾನೆ. ಇಲ್ಲದವನು ಸರಕಾರಿ ಆಸ್ಪತ್ರೆಗೆ ಹೋಗಿ ಈ ರೀತಿಯ ಕಷ್ಟ ಪಡುತ್ತಾನೆ. ಎರಡೂ ಕಡೆ ಮೋಸ ಇದ್ದೇ ಇದೆ. ಪ್ರಶ್ನೆ ಪ್ರಶ್ನೆಯಾಗೇ ಉಳಿದು, ಉತ್ತರ ಸಿಗುವ ನಿರೀಕ್ಷೆ ಯಲ್ಲೇ ಜೀವನ ಹುಡುಕಬೇಕಾಗಿದೆ. ಇದು ಒಂದು ಚಿಕ್ಕ ಉದಾಹರಣೆ.
– ರಮೇಶ್