‘ಈಸಾಡತಾವ ಜೀವಾ’ ಕೃತಿ ಪರಿಚಯ

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಮೂಲದವರಾದ ಲೇಖಕ ಶ್ರೀಧರ ಬಳಗಾರವರು ವೃತ್ತಿಯಲ್ಲಿ ಪ್ರಾಧ್ಯಾಪಕರು. ತಮ್ಮ ಕಥಾಸಂಕಲನಗಳು, ಕಾದಂಬರಿಗಳು ಹಾಗೂ ಅಂಕಣ ಬರಹಗಳ ಮೂಲಕ ಇವರು ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿದ್ದಾರೆ. ಅನೇಕ ಪ್ರಶಸ್ತಿ- ಪುರಸ್ಕಾರಗಳಿಗೆ ಇವರು ಭಾಜನರಾಗಿದ್ದಾರೆ. ಅವರ ಈಸಾಡತಾವ ಜೀವಾ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ  :ಈಸಾಡತಾವ ಜೀವಾ.
ಲೇಖಕರು: ಶ್ರೀಧರ ಬಳಗಾರ.
ಅಂಕಿತ ಪುಸ್ತಕ ಬೆಂಗಳೂರು
ಮುದ್ರಣದ ವರ್ಷ: ೨೦೧೫
ಪುಟಗಳು: ೨೨೪
ಬೆಲೆ: ರೂ. ೧೯೫

ಸಾಹಿತ್ಯ ಸುಗ್ಗಿಯ ಮುಕ್ತಾಯದ ದಿನದ ಕೊನೆಯ ಕೃತಿಯ ಬರಹವಾಗಿ ನಾನು ಇವರ ಕೃತಿಯನ್ನು ಇದೇ ಮೊದಲ ಬಾರಿಗೆ ಓದಿ ಬರೆಯುತ್ತಿರುವೆ. ಈ ಸಂಕಲನದಲ್ಲಿ ಒಟ್ಟೂ ೧೨ ಕಥೆಗಳಿವೆ. ಕೆಲವು ಕಥೆಗಳ ಸಾರಾಂಶ ಹೀಗಿದೆ.

*ಚಕ್ರಾಕಾರ

ಗಜು ಎಂಬ ಮೆಕ್ಯಾನಿಕ್ ಬಳಿ ತನ್ನ ಹಳೇ ಸ್ಕೂಟರ್ ರಿಪೇರಿಗೆ ಬರುವ ನಿರೂಪಕ ಹೆಣಭಾರದ ಸ್ಕೂಟರ್ ತಳ್ಳುತ್ತಾ, ಸವಾರಿ ಮಾಡುವಾಗ ಪುಷ್ಪಕ ವಿಮಾನದಷ್ಟು ಹಗುರವೆನಿಸುವುದು ಇದೇನಾ ಎಂದು ಅಚ್ಚರಿ ಪಡುತ್ತಾನೆ.

ಮೊದಲು ಯಾರದ್ದೋ ವರ್ಕ್ ಶಾಪ್ ನಲ್ಲಿ ಕೆಲಸಕ್ಕಿದ್ದ ಗಜು ಈಗ ಸ್ವಂತ ಅಂಗಡಿ ಮಾಡಿಕೊಂಡ ಬಗ್ಗೆ ಇಲ್ಲಿ ವಿಸ್ತೃತವಾದ ಬಣ್ಣನೆ ಓದಲು ಸೊಗಸೆನಿಸುತ್ತದೆ. ಪರರಿಗೆ ಸಹಾಯ ಮಾಡುವುದು ಗಜುವಿನ ಹುಟ್ಟು ಗುಣ. ಯಾರ್ಯಾರದೋ ಅಂಗಡಿಯಲ್ಲಿ ಬಟ್ಟೆ ಹೊಲಿಯುತ್ತಿದ್ದ ನಾಗಣ್ಣನಿಗೆ ಮಿಷನ್ ಕೊಡಿಸಿ, ಪೆಟ್ಟಿಗೆ ಅಂಗಡಿ ಹಾಕಿ ಕೊಟ್ಟಿದ್ದ. ಒಮ್ಮೆ ಹೊಲಿಯುತ್ತಿದ್ದಾಗ ಆ ಪೆಟ್ಟಿಗೆ ಗೂಡು ಜಾರುತ್ತಾ ರಸ್ತೆಗೆ ಬರುತ್ತಿದ್ದಾಗ ಗಜುವಿನ ಹೆಂಡತಿ ಸುನಾಮ ಅದು ಬೀಳದಂತೆ ತನ್ನೆರಡು ಹಸ್ತಗಳನ್ನು ಒತ್ತಿ ರಕ್ಷಿಸಿದ್ದಳು.

ಗಜು ಒಳ್ಳೆಯವನಾದರೂ, ವ್ಯವಹಾರದ ಬೋಳೆತನದಿಂದಾಗಿ ತನಗಾಗಿ ಒಂದು ಲೂನಾ ಕೂಡಾ ಕೊಳ್ಳಲಾಗಿರಲಿಲ್ಲ.ಅವನ ದುಡಿಮೆಗೆ ಕಾರು ಇಡಬಹುದಾಗಿತ್ತು. ಎನ್ನುವುದು ಸುನಾಮಳ ಅಳಲು.

ಅವಳ ಇಬ್ಬರು ಅತ್ತಿಗೆಯರು ಮುಂಬೈನಲ್ಲಿದ್ದರು. ಅವರಿಲ್ಲಿ ಬರುವಾಗ ತರುವ ತಮ್ಮ ಹಳೆಯ ಸೀರೆ, ರವಿಕೆಗಳನ್ನು ಸುನಾಮ ಧರಿಸಿ ಓಡಾಡುವಾಗ, ಊರ ಹೆಂಗಸರು ಯಾರು ಹೊಲಿದಿದ್ದೆಂದು ಕೇಳಿದರೆ ಆಕೆ ನಾಗಣ್ಣನ ಹೆಸರು ಹೇಳಿದ್ದಳು!.

ಇದು ಅವನಿಗೆ ಲಾಭವನ್ನೇ ತಂದಿತ್ತು. ಒಮ್ಮೆ ವಿದೇಶಿ ಜೋಡಿಯೊಂದು ತಾಯ್ನಾಡಿಗೆ ಮರಳುವ ಮುನ್ನ ಕಡಿಮೆ ಬೆಲೆಗೆ ಬೈಕನ್ನು ಗಜುವಿಗೆ ಮಾರಿದ್ದರು.ಅವನು ಅದಕ್ಕೆ ಬೇರೆ ಗಿರಾಕಿ ಹೊಂದಿಸಿ ಮಾರಿದ್ದ. ಆದರೆ ಕೊಂಡವ ವಿಚಿತ್ರ ಶಬ್ಧ ಬರುತ್ತಿದೆಯೆಂದು ಮತ್ತೆ ಗಜುವಿಗೆ ಬೈಕ್ ಕೊಟ್ಟು, ನಿನಗೆ ರಿಪೇರಿ ಮಾಡಲು ಬರುವುದಿಲ್ಲ ಎಂದು ಬಿಟ್ಟು ಹೋದಮೇಲೆ, ಅದು ಕದ್ದ ಬೈಕ್ ಎಂದು ಪೊಲೀಸ್ ಕೇಸಾಗಿ ಗಜು ಅಲೆಯ ಬೇಕಾಯಿತು. ಅವನ ಕಷ್ಟಕಾಲ ಆರಂಭವಾಗಿತ್ತು.!

ನಾಗಣ್ಣ ಮತ್ತು ಸುನಾಮ ಬಗ್ಗೆ ಊರಲ್ಲಿ ಒಂದಿಷ್ಟು ಸುದ್ದಿಗಳು ಹರಿದಾಡಿದವು.!!ಯಾರ್ಯಾರದೋ ವಾಹನ ದುರಸ್ತಿ ಮಾಡಿ ಜನ್ಮ ಸೆವೆಸುವ ಗಜುವಿನ ಸಂಸಾರವನ್ನು ರಿಪೇರಿ ಮಾಡಿ ಸರಿ ರಸ್ತೆಗೆ ಬಿಡಬೇಕೆನ್ನುವ ಸುನಾಮಳ ಆಗ್ರಹವನ್ನು ನಿರೂಪಕ ಸ್ವೀಕರಿಸಿದನೇ?…. ಸ್ತಬ್ಧವಾದ ಸ್ಕೂಟರನ್ನು ಗಜುವಿನ ಗರಾಜಿನಲ್ಲಿಡಲು ಬಂದಾಗ ಕಂಡ ಗಜುವಿನ ಹೊಸ ಅವತಾರವೇನು? … ಎನ್ನುವುದನ್ನು ಓದಿಯೇ ಅನುಭವಿಸ ಬೇಕು.

*ಅಮೃತಪ್ಪನ ವಾನಪ್ರಸ್ಥ

ಅಮೃತಪ್ಪ ಮತ್ತು ಗಣಪಕ್ಕ ದಂಪತಿಗಳಿಗೆ ತಡವಾಗಿ ಹುಟ್ಟಿದ ಒಬ್ಬನೇ ಪ್ರತಿಭಾವಂತ ಮಗ ಅನಂತ. ಅವನ ವಿದ್ಯಾಭ್ಯಾಸಕ್ಕಾಗಿ ಉಳಿತಾಯವನ್ನೇ ಮಂತ್ರವನ್ನಾಗಿಸಿ ಕೊಂಡ ಅವರ ಸರಳಜೀವನ ಕ್ರಮವನ್ನು ಲೇಖಕರು ಇಲ್ಲಿ ವಿವರಿಸಿದ ಪರಿಯೇ ಚೆಂದ. ಮುಂದೆ ಮಗನಿಗೆ ಕೆಲಸ ಸಿಕ್ಕಿ ಈ ಹಳ್ಳಿ ಮನೆಯನ್ನು ಮಾರಿ ಮಗನೊಟ್ಟಿಗೆ ಇರಲೆಂದು ಬೆಂಗಳೂರಿಗೆ ಬಂದಾಗ, ಅಲ್ಲಿನ ಬದಲಾದ ಜೀವನ ಶೈಲಿಗೆ ಒಗ್ಗಿಕೊಳ್ಳುವ ಅನಿವಾರ್ಯತೆಯಂತೂ ಅತ್ಯಂತ ಸಹಜತೆಯಿಂದ ಎಂಬಂತೆ ಬಿಂಬಿಸುವ ರೀತಿಯೂ ಆಪ್ತವೆನಿಸುತ್ತದೆ.

ಮಗ ಅನಂತ ಕಂಪ್ಯೂಟರ್ ಮುಂದೆ ತನ್ನ ಚಮತ್ಕಾರದ ವಿಶ್ವದಲ್ಲಿದ್ದಾಗಲೆಲ್ಲಾ…ಆ ದಂಪತಿಗಳಿಗೆ ತಾವೂ ಶಾಲೆಗೆ ಹೋಗದೇ ಕೆಟ್ಟೆವು ಅನಿಸುತ್ತಿತ್ತು. ತಮ್ಮ ಹಣ ಹೀಗೇ ಖರ್ಚಾದರೆ ಮುಂದೇನು? ಎಂಬ ವಿಚಾರದಲ್ಲಿದ್ದಾಗಲೇ ದೇಶ- ವಿದೇಶ ಸುತ್ತುತ್ತಿದ್ದ ಮಗ ಕೆಲಸ ಕಳೆದು ಕೊಂಡಿದ್ದ! . ಕಪಾಟಿನಲ್ಲಿ ಇಟ್ಟ ಒಡವೆಗಳೂ ನಾಪತ್ತೆಯಾಗಿದ್ದವು.

ವೃದ್ಧ ದಂಪತಿಗಳಿಗೆ ಟಿ.ವಿ ವೀಕ್ಷಣೆಯಲ್ಲಿಯೇ ಕಾಲಹರಣ ವಾಗುತ್ತಿತ್ತು. ಅದೂ ಒಂದಿನ ಹಾಳಾಯಿತು. ಇದರಿಂದ ತೊಳಲಾಡುವ ಅವರಿಗೆ ಬಹುದೂರ ಕ್ರಮಿಸಿದ ಧಾರವಾಹಿಗಳು ಅನಾಥರನ್ನಾಗಿಸಿದವು. ಮಗ ಮನೆಯ ಒಂದೊಂದೇ ಸಾಮಾನುಗಳನ್ನು ಮಾರತೊಡಗಿದ್ದ. ಈಗ ಕೂತಲ್ಲೇ ಅಮೃತಪ್ಪನಿಗೆ ಮೂಲವೇಷ ಮರಳಿ ಬಂತು. ಹಳ್ಳಿಯ ನೆನಪು ತೇಲಿ ಬಂತು. ಇಲ್ಲಿಗೆ ಬರುವಾಗ ಹರಕೆಯಲ್ಲಿ ಜಾತ್ರೆಯ ಕೋಣನ ಮರಿಯನ್ನು ಬಲಿ ಕೊಡದೇ ಕಾಡಿಗೆ ಬಿಟ್ಟ ಸತ್ಯವನ್ನು ಅನಂತ ಬಾಯ್ಬಿಟ್ಟಾಗ ವಿಹ್ವಲಗೊಂಡ ಅಮೃತಪ್ಪ ಹಳ್ಳಿಗೆ
ಹೊರಟಿದ್ದೇಕೆ? …. ಮನುಷ್ಯ ಎಷ್ಟೇ ನಾಗರೀಕತೆಯತ್ತ ಹೊರಳಿದರೂ, ಸಂಪ್ರದಾಯದ ಮೂಲಬೇರು ಜೀವಂತವೇ… ಎಂದು ಹೇಳುವ ಈ ಕಥೆಯ ನಿರೂಪಣೆಯ ರೀತಿ ಭಿನ್ನವಾಗಿದೆ.

* ಈಸಾಡತಾವ ಜೀವಾ

ಸಾರ್ಥಕ ಇಂಜಿನಿಯರಿಂಗ್ ಓದುತ್ತಿದ್ದರೂ, ಕಥೆ- ಕವನ ಬರೆಯುತ್ತಾ ತನ್ನದೇ ಭಾವ ಪ್ರಪಂಚದಲ್ಲಿರುವ ಹುಡುಗ. ಅವನ ಗೆಳೆಯರು ದಾಂಡೇಲಿಯ ಕಾಡಿಗೆ ಚಾರಣ
ಹೋಗಲೆಂದು ಕರೆದರೂ, ಪ್ರಕೃತಿ ಪ್ರಿಯನಾದ ಇವನು ತನ್ನೂರಿನ ಹಳ್ಳಿಗೆ ಬಂದಿದ್ದ. ಆ ಊರಿನ ದೇವಸ್ಥಾನ, ಬೆಟ್ಟ, ಜನ ಜೀವನದ ವಿವರವೆಲ್ಲಾ ಇಲ್ಲಿ ನೈಜವಾಗಿ ಮೂಡಿ ಬಂದಿದೆ.

ಮಗನ ಓದಿನ ಬಗ್ಗೆ ಸಾರ್ಥಕನ ತಂದೆ ಏನೂ ಆಕ್ಷೇಪ ವ್ಯಕ್ತಪಡಿಸದಿದ್ದರೂ, ಮಗ ಓದಿಗಿಂತ ಸಾಹಿತ್ಯವನ್ನು ನೆಚ್ಚಿ ಕೊಂಡಿದ್ದು ಅವನಮ್ಮ ಅನುಸೂಯಳಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಕೆರೆಯ ಕಟ್ಟೆಯ ಬಳಿ ಸಾರ್ಥಕನೊಂದಿಗೆ ಕುಳಿತು, ಆಕೆ ನಿನ್ನ ಓದಿಗಾಗಿಯೇ ಜಮೀನು ಮಾರಿದ್ದು, ತಾನು ವಿಧುರನಾದ ನಿನ್ನಪ್ಪನಿಗೆ ಎರಡನೇ ಹೆಂಡತಿಯಾಗಿ ಬಂದಿದ್ದು, ಹಿರಿ ಹೆಂಡತಿಯ ಮೂರು ಮಕ್ಕಳನ್ನು ಸಾಕಿದ್ದು,ಈ ಪುರೋಹಿತರ ಮನೆಯ ಮಡಿ ಮೈಲಿಗೆ, ಬರುವ ನೆಂಟರು, ಅಡುಗೆ, ಪೂಜೆ ಕೆಲಸವೆಂದು ನರಕ ಯಾತನೆ ಪಟ್ಟಿದ್ದು ಎಲ್ಲಾ ನನ್ನ ಸೊಸೆಯಾಗುವವಳಿಗೂ ಆಗಬೇಕಾ? … ಎಂದೆಲ್ಲಾ ಹೇಳಿ ಅತ್ತಿದ್ದಳು.

ಈ ಹಳ್ಳಿಯ ಕಾಡಲ್ಲಿ ಕುಳಿತು ಕವಿತೆ ಗೀಚುತ್ತಾ, ಕೃಷಿ ಮಾಡುತ್ತಾ, ಪುಟ್ಟ ಸಂಸಾರದೊಂದಿಗೆ ತಾನಿರ ಬೇಕೆಂದು ಬಯಸುತ್ತಿದ್ದ ಸಾರ್ಥಕ ನಿದ್ರೆ ಬರದೇ ಚಡಪಡಿಸಿದ್ದೇಕೆ? ..
ಅವರಿವರ ಸುದ್ದಿ ಹೇಳುವ ಅಮ್ಮ ಪರೋಕ್ಷವಾಗಿ ತನ್ನ ಅಂತರ್ಯದ ಮರ್ಮವನ್ನು ಅರುಹುತ್ತಲೇ ಇದ್ದಾಗ…. ಚಂಚಲ ಚಿತ್ತದ ಸಾರ್ಥಕ ಬ್ಯಾಗ್ ಹೆಗಲಿಗೇರಿಸುತ್ತಾ ಹೊರಟಿದ್ದು ಎಲ್ಲಿಗೆ?…

ಹೀಗೆ ಅಪರೂಪದ ಶೀರ್ಷಿಕೆ ಹೊತ್ತ ಸೊಗಸಾದ ಇನ್ನಷ್ಟು ಕಥೆಗಳು ಇಲ್ಲಿವೆ. ಈ ನೆಲದ ಮಣ್ಣಿನೊಂದಿಗೆ ಮನುಷ್ಯನ ಸಜೀವ ಸಂಬಂಧ ಸಾಧ್ಯವಾಗಬೇಕೆನ್ನುವ ಕಳಕಳಿಯ ಅಂಶ ಲೇಖಕರ ಕೆಲವು ಕಥೆಗಳಲ್ಲಿ ಎದ್ದು ಕಾಣುತ್ತದೆ. ಹಳ್ಳಿಯ ಸನ್ನಿವೇಶ ಹಾಗೂ ಸೂಕ್ಷ್ಮಗಳನ್ನು ಅತ್ಯಂತ ಹೃದ್ಯವಾಗಿ ಇಲ್ಲಿ ಚಿತ್ರಿಸಲಾಗಿದ್ದು ಕಥೆಗಳು ನಿಜಕ್ಕೂ ನಮ್ಮನ್ನು ಒಂದು ಭಾವಲೋಕಕ್ಕೆ ಕೊಂಡೊಯ್ಯುತ್ತವೆ.

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW