ವಚನ ಸಂಗ್ರಹ ಪಿತಾಮಹ : ಫ.ಗು.ಹಳಕಟ್ಟಿ ಶರಣರು

ವಚನ ಸಂಗ್ರಹ ಪಿತಾಮಹ ಫ.ಗು.ಹಳಕಟ್ಟಿ ಶರಣರ ಕುರಿತು ಚಳ್ಳಕೆರೆ ಡಿ.ಶಬ್ರಿನಾ ಮಹಮದ್ ಅಲಿ ಅವರು ಬರೆದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಪದಗಳಿಗೆ ಸಿಗದಷ್ಟು
ಸತ್ಕಾರ್ಯವ ಮಾಡಿದ
‘ವಚನ ಗುಮ್ಮಟ’ರನು
ಏನೆಂದು ಬಣ್ಣಿಸಲಿ..
ನಂಬುವಿರಾ ನೀವು?
ಲೇಖನಿ ಹಿಡಿದ ನನ್ನೀ ಕೈ
ಬರೆಯುವುದನು ನಿಲಿಸಿ
ನಮಿಸಲು ಮುಂದಾಗಿದೆ!

 

ಇಳೆಗಿಳಿದ ಈ ಶರಣ
ಒಂದು ವೇಳೆ ಜನಿಸಿರದಿದ್ದರೆ!
ಅಬ್ಬಾ!…….
ಮನುಕುಲಕೆ ಆಗುತಿದ್ದ
ನಷ್ಟವನು ಊಹಿಸಲಾರೆ!
ಊಹಿಸಿದರೆ ಉಸಿರೇ ನಿಂತಂತೆ
ಭಾಸವಾಗುತಿದೆ ಎನಗೆ!

ವಚನಪಿತಾಮಹರು
ಮನೆ ಮನೆ ತಿರುಗಿ ಕೂಡಿಸಿದ್ದು…
ಬರೀ ಒಣಗಿದ ತಾಳೆ ಗರಿಗಳನ್ನೆ?
ಹೌದೆಂದರೆ ನನ್ನಳಿವು
ಇಂದೇ..ಈಗಲೇ ಆಗುವುದು!
ಕಾರಣ ಕೇಳುವಿರಾ ಇದಕೆ?
ಕಿವಿಗೊಟ್ಟು ಕೇಳಿ…
ಅವರು ಕೂಡಿಸಿದ್ದು…
ಅವರು ಪರಿಚಯಿಸಿದ್ದು…

ಒಣಗಿದ ಗರಿಗಳಲಿ
ಮಿರಿ ಮಿರಿ ಮಿಂಚಿದ
ಜ್ಞಾನದ ಕಿರಣದಿ
ಮನುಕುಲದ ಅಂತರಂಗದ
ಅಂಧಕಾರವನು ಚದುರಿಸಿ
ಜಾತಿ-ಲಿಂಗ,ವರ್ಗ-ವರ್ಣ
ಬೇಧಗಳನೋಡಿಸಿ

ಗುರುಬಸವಣ್ಣ, ಬೆಡಗಿನ ಅಲ್ಲಮರು
ಜೇಡರ ದಾಸಿಮಯ್ಯಾ,ಮಾದರಾ ಚೆನ್ನಯ್ಯಾ
ಡೋಹಾರ ಕಕ್ಕಯ್ಯಾ ಮಡಿವಾಳ ಮಾಚಯ್ಯಾ,
ಅಂಬಿಗರ ಚೌಡಯ್ಯಾ,ಶರಣ ಹರಳಯ್ಯ
ಶರಣೆ ಅಕ್ಕ,ಸತ್ಯಕ್ಕ ಸೂಳೆ ಸಂಕವ್ವ,ಆಯ್ದಕ್ಕಿ ಲಕ್ಕವ್ವ
ನದಿಯೊಳಗೆ ನದಿ ಬೆರೆತಂತೆ
ಎಲ್ಲರೊಂದಾಗಿ ಏಕದೇವನ ನಂಬಿ
ಅರಿವಿನ ಕುರುಹಾದ ಇಷ್ಟಲಿಂಗವ ಪೂಜಿಸಿ

ಕಾಯಕದೊಳು ಕೈಲಾಸವ ಕಂಡು
ಅನುಭವ ಮಂಟಪದಿ
ಜ್ಞಾನ ದಾಸೋಹವನುಂಡು
ಇವನಾರವ ಇವನಾರವರೆನ್ನದೆ
ಇವ ನಮ್ಮವ ಇವ ನಮ್ಮವರೆಂದು
ಭಾವೈಕ್ಯದಿ ಬದುಕಿ ಜಗಕೆಲ್ಲಾ
ಸಮರತಿ,ಸಮಕಳೆ,ಸಮಸುಖ
ತತ್ವ ಸಾರಿಹ ಶರಣರ ‘ಅನುಭಾವ’ದ ಬುತ್ತಿ ಹೊತ್ತ ಶರಣ ಫ.ಗು‌.ಹಳಕಟ್ಟಿ ಎಲ್ಲೆಡೆ ಪಸರಿಸಿದ್ದು
ಜಗಕೆ ಬೆಳಕಾದ
‘ವಚನ’ ವೆಂಬ ದಿವ್ಯಜ್ಯೋತಿಯನ್ನ!
ವಚನವೆಂಬ ಪರಂಜ್ಯೋತಿಯನ್ನ!


  • ಡಿ.ಶಬ್ರಿನಾ ಮಹಮದ್ ಅಲಿ – ಚಳ್ಳಕೆರೆ

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading