ಓದುಗಳಿಗೆ ಲೇಖಕಿಯ ಬರಹ ಸಂತೋಷ ಕೊಟ್ಟರೆ, ಲೇಖಕಿಗೆ ಓದುಗಳ ಪ್ರೀತಿ ಸಂತೋಷಕೊಡುತ್ತದೆ ಎನ್ನುವುದಕ್ಕೆ ಕವಿಯತ್ರಿ ಕಾವ್ಯ ಪುನೀತ್ ಅವರು ಹಂಚಿಕೊಂಡಿರುವ ಫೇಸ್ಬುಕ್ ಸ್ನೇಹಿತೆಯ ಒಂದು ಪುಟ್ಟ ಅಭಿಮಾನದ ಕತೆಯನ್ನು ತಪ್ಪದೆ ಮುಂದೆ ಓದಿ…
ನನ್ನೆಲ್ಲಾ ಬರಹಗಳಿಗೆ ಖಾಯಂ ಲೈಕುದಾರರಾದ ಈ ತಾರಾ ದೇವಿ ಯಾರು? ಯಾರಿರಬಹುದು..! ಎನ್ನುವ ಕುತೂಹಲಕ್ಕೊಮ್ಮೆ ಬಿದ್ದೆ. ಅವರ ಪ್ರೊಫೈಲ್ ತಡಕಾಡಿದರೆ ಪ್ರೊಫೈಲ್ ಲಾಕ್. ಪ್ರೊಫೈಲ್ ನಲ್ಲಿ ಯಾವ ಫೋಟೋ ಕೂಡ ಇರಲಿಲ್ಲ. ಅವರು ನನಗೆ ಫ್ರೆಂಡ್ ರಿಕ್ವೆಸ್ಟ್ ಕೂಡ ಕಳಿಸಿರಲಿಲ್ಲ. ಕೇವಲ ಹಿಂಬಾಲಿಸುತ್ತಿದ್ದರು. ಅವರಿಗಿದ್ದದ್ದೆ 20 ಫ್ರೆಂಡ್ಸ್.
ಇಷ್ಟೆಲ್ಲಾ ನೋಡಿದ ಮೇಲೆ ಇದೊಂದು ಮೋಸದ ಅಕೌಂಟ್ ಅಥವಾ ಯಾವುದೋ ಹುಡುಗನೇ ಇರಬೇಕು ಎನ್ನುವ ತೀರ್ಮಾನಕ್ಕೆ ಬಂದುಬಿಟ್ಟೆ ಮತ್ತು ತಾರಾದೇವಿ ಯಾರು ಎನ್ನುವ ಯೋಚನೆ ಬಿಟ್ಟುಬಿಟ್ಟೆ. ಸುಮಾರು ಆರೇಳು ತಿಂಗಳಿನಿಂದ ನನ್ನ ಒಂದೇ ಒಂದು ಪೋಸ್ಟ್ ಬಿಡದಂತೆ ಲೈಕ್ ಮಾಡಿದವರು ತಾರಾ. ಒಮ್ಮೆಯೂ ನನ್ನ ಮೆಸ್ಸೆಂಜರ್ ಗೂ ಬಂದವರಲ್ಲ. ನನಗೂ ಅವರು ಬರೀ ಲೈಕ್ ಅಷ್ಟೇ ಒತ್ತುತ್ತಿದ್ದದ್ದು, ನೋ ಹಾರ್ಟ್, ನೋ ಕಾಮೆಂಟ್ಸ್.
ಇದು ಯಾರಿರಬಹುದು? ಮತ್ತೆ ಮೊಳೆಯಿತು ಕುತೂಹಲ. ಯಾರಾದ್ರೂ ಅನಾಮಿಕ ಪ್ರೇಮಿ!?…ಇದ್ದರೂ ಇರಬಹುದು. ಆದರೆ ಯಾರು? ನನ್ನ ಕ್ಲಾಸ್ಮೇಟ್ ಯಾರಾದ್ರೂ ಇರಬಹುದಾ..! ತಲೆಕೆರೆದುಕೊಂಡು ನನಗೆ ಗೊತ್ತಿದ್ದ ಎಲ್ಲ ತಾರಗಳನ್ನ ನೆನೆಸಿಕೊಂಡದ್ದು ಆಯ್ತು. ಅವರಲ್ಲವೆ ಅಲ್ಲ. ಮತ್ಯಾರು ? ಕೊನೆಗೆ ನಾನೇ ಮೆಸ್ಸೆಂಜರ್ ನಲ್ಲಿ ಒಂದು ನಮಸ್ತೆ ಹಾಕಿದೆ. ಉಹುಂ … ಎಂತದ್ದು ಇಲ್ಲ, ಮೆಸೇಜ್ ಕೂಡ ಡೆಲಿವರ್ ಆಗಲಿಲ್ಲ.
ಹುಂ… ಮತ್ತೊಮ್ಮೆ ಪ್ರೊಫೈಲ್ ಹೋದೆ. ಮತ್ತೆ ಮತ್ತೆ ಹೋದೆ. No updates. ಆದ್ರೆ ಈ ಸಲ ಒಂದೇ ಒಂದು mutual friend ಕಾಣಿಸಿತು. ಅವರನ್ನ ಸಂಪರ್ಕಿಸಿ, “ನಿಮ್ಮ ಫ್ರೆಂಡ್ ಲಿಸ್ಟ್ ನಲ್ಲಿರುವ ಈ ತಾರದೇವಿ ಯಾರು?” ಅಂದೆ.
ಉತ್ತರ ಸಿಂಪಲ್ “ಗೊತ್ತಿಲ್ಲ..!”
“ಒಂದು ಮೆಸೇಜ್ ಹಾಕಿ ಅವರಿಗೆ ಸುಮ್ಮನೆ ಮಾತಾಡಿ ಯಾರು ಅಂತ ತಿಳಿದುಕೊಳ್ಳಿ” ಅಂದೆ.
ಅವರ “ಯಾಕೆ? ಏನಾಯ್ತು? ಏನ್ ತೊಂದ್ರೆ ಮಾಡಿದ್ರು?” ಅನ್ನೋ ಪ್ರಶ್ನೆಗಳಿಗೆಲ್ಲ ಉತ್ತರ ಕೊಡೋ ಅಷ್ಟರಲ್ಲಿ ಸುಸ್ತಾಗಿ
“ಹೋಗ್ಲಿ ಬಿಡಿ ಅತ್ಲಾಗೆ, ಈ ತಾರಾದೇವಿ ಸಹವಾಸನೇ ಬೇಡ” ಅಂತ ಸುಮ್ಮನಾದೆ.
ಕೊನೆಗೊಂದು ದಿನ ನನ್ ಮೆಸೇಜ್ ಡೆಲಿವರ್ ಆಯ್ತು. ಒಂದೆರಡು ಸಲ ಅವರ ಜೊತೆ ಮಾತಾಡಿದೆ. ಅವರು ಅಕ್ಕಾ… ಎಂದರು. ‘ಪತಂಗ’ ಪುಸ್ತಕ ಕಳಿಸಿದೆ. ನಿಮ್ಮದೊಂದು ಫೋಟೋ ಕಳ್ಸಿ ಅಂದೆ. ನಾನು ಚೆನ್ನಾಗಿಲ್ಲ ಬೇಡ ಅಂದ್ರು. ಒತ್ತಾಯ ಮಾಡಲಿಲ್ಲ.
ಒಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ, ಮುಗ್ದ ಚೆಹರೆಯುಳ್ಳ ತಾರ ಒಮ್ಮೆಲೇ ಎದುರು ನಿಂತು “ಮೇಡಂ… ನಾನು ತಾರಾ” ಎಂದರು. ತಾರಾ ನನಗಾಗಿ ಬಂದಿದ್ರು. ಇಷ್ಟೆಲ್ಲಾ ದಿನದ ತಹತಹಿಕೆಗೆ ಒಂಥರಾ ಸಮಾಧಾನದ ನಿಟ್ಟುಸಿರು, ಖುಷಿ.
ಐದು ನಿಮಿಷ ಅವರೊಂದಿಗೆ ಮಾತಾಡಿದೆ, “ಕೆಲಸವಿದೆ ಹೋಗ್ಬೇಕು ಅಂದ್ರು”. ನಾನೇ ಸೆಲ್ಫಿ ಕೇಳಿದೆ.
ಏನೇನೂ ಅಲ್ಲದ ನಮ್ಮಂಥವರ ಬರಹಗಳನ್ನ ಸೆಲೆಬ್ರೇಟ್ ಮಾಡುವ ತಾರಾ ನಂತವರು ನನಗೆ ನಿಜವಾದ ಸೆಲೆಬ್ರಿಟಿ ಅನ್ನಿಸುತ್ತಾರೆ. ಇಂಥವರನ್ನೇ ಅಲ್ವಾ ನಾವು ತಲುಪಬೇಕಿರುವುದು.
ಬರೆದದ್ದು ಸಾರ್ಥಕ ಎನಿಸುವುದು ಇಂತಹ ಖುಷಿಗಳಂದಲೆ ಅಲ್ವಾ?…
ತಾರಾ ನಾನು ಚೆನ್ನಾಗಿಲ್ಲ ಅಂದ್ರು…ನೀವು ಹೇಳಿ, ತಾರ ಎಷ್ಟು ಕ್ಯೂಟ್ ಅಂತಾ..
- ಕಾವ್ಯ ಪುನೀತ್