ಕನ್ನಡ ಚಿತ್ರರಂಗದ ಮೊದಲ ಸಂಗೀತ ನಿರ್ದೇಶಕಿ ನೀಲಮ್ಮ ಕಡಾಂಬಿ ಕುರಿತು ಖ್ಯಾತ ಪತ್ರಕರ್ತರಾದ ಎನ್.ಎಸ್.ಶ್ರೀಧರ ಮೂರ್ತಿ ಅವರು ಸಂಗ್ರಹಿಸಿರುವ ಮಾಹಿತಿಯನ್ನು ಓದುಗರ ಮುಂದಿಟ್ಟಿದ್ದಾರೆ, ಮುಂದೆ ಓದಿ…
ಕನ್ನಡದ ಮೊದಲ ಸಂಗೀತ ನಿರ್ದೇಶಕಿ ಯಾರು? ಈ ಕುತೂಹಲದ ಪ್ರಶ್ನೆ ಅನೇಕ ವರ್ಷಗಳಿಂದಲೂ ನನ್ನ ಮನಸ್ಸಿನಲ್ಲಿ ಇದ್ದರೂ ಅದಕ್ಕೆ ತೀವ್ರತೆ ಸಿಕ್ಕಿದ್ದು ಗಾಯಕಿ ಡಾ.ಶಮಿತಾ ಮಲ್ನಾಡ್ ಅವರ ಜೊತೆ ಈ ವಿಷಯ ಚರ್ಚೆ ಮಾಡುವಾಗ. ಈಗಾಗಲೇ ಎಂಟು ಚಿತ್ರಗಳಿಗೆ ಸಂಗೀತ ನೀಡಿರುವ ಶಮಿತಾ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ ಸಂಗೀತ ನಿರ್ದೇಶಕಿ ಎನ್ನಿಸಿ ಕೊಂಡಿದ್ದಾರೆ. ಅವರು ಏಕೆ ನಮ್ಮಲ್ಲಿ ಸಂಗೀತ ನಿರ್ದೇಶಕಿಯರು ಬರುತ್ತಿಲ್ಲ ಎನ್ನುವುದರ ಕುರಿತು ಚರ್ಚೆ ಮಾಡುತ್ತಿರುವಾಗ ಈ ವಿಷಯ ಬಂದಿತು.
ಕನ್ನಡ ಚಿತ್ರರಂಗದ ಪ್ರಾರಂಭದ ದಿನಗಳಲ್ಲಿಯೇ ‘ಬಿಂದು ಬಿ.ಎ’ ಎನ್ನುವ ಚಿತ್ರಕ್ಕೆ ರಜಿಯಾ ಎಂಬ ಸಂಗೀತ ನಿರ್ದೇಶಕಿ ಸಂಗೀತ ನೀಡಿದ್ದರು ಎಂದು ಅದರ ನಿರ್ಮಾಪಕರಲ್ಲಿ ಒಬ್ಬರಾದ ದೊರೆಸ್ವಾಮಿಯವರು ಹೇಳಿರುವುದಕ್ಕೆ ದಾಖಲೆ ಇದ್ದರೂ ಈ ಕುರಿತು ಹೆಚ್ಚಿನ ವಿವರಗಳು ಲಭ್ಯವಿಲ್ಲ. 1962ರಲ್ಲಿ ‘ಮಹಾತ್ಮ ಕಬೀರ್’ ಚಿತ್ರಕ್ಕೆ ಸಂಗೀತ ನೀಡಿದ ಅನುಸೂಯಾ ದೇವಿಯವರೇ ಕನ್ನಡದ ಮೊದಲ ಸಂಗೀತ ನಿರ್ದೇಶಕಿ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಆದರೆ ಇದಕ್ಕಿಂತಲೂ ಮೊದಲೇ ನೀಲಮ್ಮ ಕಡಾಂಬಿ ಸಂಗೀತ ನೀಡಿದ್ದಾರೆ ಎನ್ನುವ ಕುರಿತು ನನ್ನ ಗಮನ ಸೆಳೆದವರು ಹಿರಿಯ ಇತಿಹಾಸಕಾರರಾದ ಅ.ನ.ಪ್ರಹ್ಲಾದ ರಾವ್. ಕಳೆದ ಕೆಲವು ದಿವಸಗಳಿಂದ ಸತತವಾಗಿ ಈ ಕುರಿತ ಅನೇಕ ದಾಖಲೆಗಳನ್ನು ಪರಿಶೀಲಿಸಿದಾಗ ನೀಲಮ್ಮ ಕಡಾಂಬಿಯವರೇ ಕನ್ನಡದ ಮೊದಲ ಸಂಗೀತ ನಿರ್ದೇಶಕಿ ಎನ್ನುವುದು ಖಚಿತ ಪಟ್ಟಿತು. ಈ ಕುರಿತು ಇನ್ನಷ್ಟು ಹೆಚ್ಚಿನ ಚರ್ಚೆ ನಡೆಯ ಬೇಕಾಗಿದೆ. ಇದಕ್ಕೆ ಪೂರಕವಾಗಿ ವಿವಿಧ ಮೂಲಗಳಿಂದ ನಾನು ನೀಲಮ್ಮ ಕಡಾಂಬಿಯವರ ಕುರಿತು ಸಂಗ್ರಹಿಸಿರುವ ಮಾಹಿತಿಯನ್ನು ಇಲ್ಲಿ ಹಂಚಿ ಕೊಂಡಿದ್ದೇನೆ.
1949ರಲ್ಲಿ ತೆರೆ ಕಂಡ ‘ಸತಿ ತುಳಸಿ’ ಚಿತ್ರಕ್ಕೆ ನೀಲಮ್ಮ ಕಡಾಂಬಿ ಸಂಗೀತ ನೀಡಿದ್ದರು. ಈ ಚಿತ್ರದಲ್ಲಿ ಒಟ್ಟು 13 ಹಾಡುಗಳಿದ್ದು ಮೈಸೂರಿನ ನವಜ್ಯೋತಿ ಸ್ಟುಡಿಯೋದಲ್ಲಿ ಧ್ವನಿ ಮುದ್ರಣಗೊಂಡಿದ್ದವು. ಮೈಸೂರಿನ ಅಯ್ಯಂಗಾರ್ ಪ್ರೊಡಕ್ಷನ್ನ ಈ ಚಿತ್ರದ ನಿರ್ದೇಶಕರು ಎಂ.ಎ.ಎನ್.ಅಯ್ಯಂಗಾರ್.
ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ 1911ರ ಜುಲೈ 7ರಂದು ಎಂ.ವಿ.ನೀಲಮ್ಮ ಕಡಾಂಬಿ ಜನಿಸಿದರು. ತಂದೆ ವೆಂಕಟಾಚಾರ್ಯ ವೀಣಾ ವಿದ್ವಾಂಸರಾಗಿದ್ದರು. ಪೋಲೀಸ್ ಅಧಿಕಾರಿಯಾಗಿದ್ದ ಅವರು ನಿವೃತ್ತಿಯ ನಂತರ ಮೇಲುಕೋಟೆ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸಿದರು. ತಾಯಿ ಗೌರಮ್ಮ ಮತ್ತು ಅವರ ತವರಿನವರೂ ಕೂಡ ವೀಣೆಯಲ್ಲಿ ಪರಿಣಿತಿ ಪಡೆದವರೇ. ಅಣ್ಣ ಶ್ರೀನಿವಾಸ ಅಯ್ಯಂಗಾರ್ ಸಂಗೀತ ವಿದ್ವಾಂಸರು. ನೀಲಮ್ಮ ತಂದೆ ಮತ್ತು ಅಣ್ಣನಿಂದ ಮೊದಲ ಸಂಗೀತ ಅಭ್ಯಾಸ ಪಡೆದರು. ವಿದ್ವಾನ್ ಲಕ್ಷ್ಮಿನಾರಾಯಣಪ್ಪ, ವೀಣೆ ವೆಂಕಟಗಿರಿಯಪ್ಪ, ಮೈಸೂರು ವಾಸುದೇವಾಚಾರ್ಯ, ಪಿಟೀಲ್ ಚೌಡಯ್ಯ, ವಿ.ರಾಮರತ್ನಂ ಮೊದಲಾದವರಲ್ಲಿ ಸಂಗೀತಾಭ್ಯಾಸ ಮಾಡಿದ ನೀಲಮ್ಮ ಮುಂದೆ ವೀಣಾವಾದನದಲ್ಲಿ ಪರಿಣತಿ ಪಡೆದರು. ಅವರ ಪತಿ ಕಡಂಬಿ ಕೃಷ್ಣಯ್ಯಂಗಾರ್ ನಂಜನಗೂಡಿನ ಪ್ರಸಿದ್ಧ ವಕೀಲರು. ಕೆಲವು ವರ್ಷಗಳ ನಂತರ ಮೈಸೂರಿನಲ್ಲಿಯೇ ನೆಲೆಸಿದರು.
ಸಂಗೀತ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಲು ಪತ್ನಿಯನ್ನು ಪ್ರೋತ್ಸಾಹಿಸಿದರು. ಸಾರ್ವಜನಿಕವಾಗಿ ಸಂಗೀತ ಕಛೇರಿ ನೀಡಿದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆ ನೀಲಮ್ಮ ಕಡಾಂಬಿಯವರಿಗೆ ಇದೆ. ಕರ್ನಾಟಕಿ ಪದ್ದತಿಯಲ್ಲಿ ಸಂಗೀತ ಕಛೇರಿ ನೀಡುತ್ತಿದ್ದರೂ ನೀಲಮ್ಮನವರು ಹಿಂದೂಸ್ತಾನಿ ಮಟ್ಟುಗಳನ್ನು ಕೂಡ ಪ್ರಯೋಗ ಮಾಡುತ್ತಾ ಇದ್ದರು. ಚಕ್ರವಾಕ, ಅಭೇರಿ, ಹಂಸಧ್ವನಿ ರಾಗಗಳಿಗೆ ಅವರು ಪ್ರಸಿದ್ಧಿ ಪಡೆದಿದ್ದರು. ಮೈಸೂರು ಅರಮನೆಯಲ್ಲಿ ಅನೇಕ ಕಛೇರಿಗಳನ್ನು ನೀಡಿದ ನೀಲಮ್ಮನವರ ಕಛೇರಿ ದೆಹಲಿಯಲ್ಲಿ ನಡೆದಾಗ ಆಗಿನ ಪ್ರಧಾನಿ ಜವಹರಲಾಲ್ ನೆಹರು ಮತ್ತು ರಾಷ್ಟ್ರಪತಿ ಎಸ್.ರಾಧಾಕೃಷ್ಣನ್ ಇಬ್ಬರೂ ಹಾಜರಿದ್ದು ತಮ್ಮ ಮೆಚ್ಚುಗೆ ಸೂಚಿಸಿದ್ದರು. ಕೊಲಂಬಿಯಾ ಕಂಪನಿ ಅವರ ವೀಣಾ ವಾದನ ಮತ್ತು ಗಾಯನದ ಗ್ರಾಮಾಪೋನ್ ಪ್ಲೇಟ್ಗಳನ್ನು ತಂದಿದ್ದು ಅವು ಬಹಳ ಜನಪ್ರಿಯವಾಗಿದ್ದವು. ‘ಭಕ್ತ ರಾಮದಾಸ’ ಮತ್ತು ‘ನಾಗ ಕನ್ನಿಕಾ’ ಚಿತ್ರಗಳಿಗೆ ಹಿನ್ನೆಲೆ ಗಾಯನ ನೀಡಿದ ‘ಸತಿ ತುಳಸಿ’ ಚಿತ್ರಕ್ಕೆ ಸಂಗೀತ ನೀಡಿದ್ದು ಮಾತ್ರವಲ್ಲದೆ ಹಿನ್ನೆಲೆ ಗಾಯನವನ್ನೂ ನೀಡಿದ್ದರೂ ಈ ಚಿತ್ರದಲ್ಲಿ ಅವರ ವೀಣಾ ವಾದನದ ಒಂದು ದೃಶ್ಯ ಕೂಡ ಇತ್ತು. 1956ರಲ್ಲಿ ವಿಶಾಲ ಮೈಸೂರು ಏಕೀಕರಣವಾದ ಕಾರ್ಯಕ್ರಮದಲ್ಲಿ ಅವರ ಸಂಗೀತ ಕಛೇರಿ ಇತ್ತು. 1972ರಲ್ಲಿ ಕರ್ನಾಟಕ ಗಾನ ಕಲಾ ಪರಿಷತ್ನ ಅಧ್ಯಕ್ಷೆಯಾದ ನೀಲಮ್ಮನವರು ಈ ಗೌರವ ಪಡೆದ ಮೊದಲ ಮಹಿಳೆ ಎನ್ನಿಸಿ ಕೊಂಡಿದ್ದಾರೆ. ಅವರಿಗೆ ‘ ಗಾನ ಕಲಾಭೂಷಣ’ ಗೌರವ ಕೂಡ ದೊರಕಿತ್ತು. 1987-88ರಲ್ಲಿ ಕರ್ನಾಟಕ ಸಂಗೀತ ಅಕಾಡಮಿ ಅವರನ್ನು ಗೌರವಿಸಿತ್ತು. ತಂಜಾವೂರಿನ ಸಂಗೀತ ಸಮ್ಮೇಳನದಲ್ಲಿ ‘ಬಾಲಕೇಸರಿ’ ಗೌರವ ಪಡೆದ ನೀಲಮ್ಮನವರನ್ನು ಟಿ.ವಿ.ಎಸ್.ಗ್ರೂಪ್ ಬೆಳ್ಳಿ ವೀಣೆ ನೀಡಿ ಗೌರವಿಸಿತ್ತು. ಶಾಸ್ತ್ರೀಯ ಸಂಗೀತದಲ್ಲಿ ಹೆಚ್ಚು ಹೆಚ್ಚು ಸಾಧನೆ ಮಾಡುತ್ತಾ ಹೋದಂತೆ ನೀಲಮ್ಮ ಚಿತ್ರರಂಗದಿಂದ ದೂರವಾದರು. ಕನ್ನಡ ಚಿತ್ರರಂಗ ಹೆಚ್ಚು ಮದ್ರಾಸ್ ಮುಖಿ ಆಗಿದ್ದೂ ಕೂಡ ಇದಕ್ಕೆ ಕಾರಣವಾಗಿತ್ತು. ಅನೇಕ ಪ್ರತಿಭಾವಂತ ಶಿಷ್ಯರನ್ನು ತಯಾರು ಮಾಡಿದ ನೀಲಮ್ಮನವರು 1998ರ ಡಿಸಂಬರ್ 14ರಂದು ಮೈಸೂರನ ಕೆ.ಆರ್.ಆಸ್ಪತ್ರೆಯಲ್ಲಿ ನಿಧನರಾದರು.
ಕನ್ನಡದ ಮೊದಲ ಸಂಗೀತ ನಿರ್ದೇಶಕಿ ನೀಲಮ್ಮನವರ ಕುರಿತು ಸಾಕಷ್ಟು ಸಂಶೋಧನೆಗಳಾಗ ಬೇಕು, ಅವರ ನೆನಪುಗಳನ್ನು ಉಳಿಸುವ ಕೆಲಸಗಳೂ ಆಗ ಬೇಕು.
- ಎನ್.ಎಸ್.ಶ್ರೀಧರ ಮೂರ್ತಿ (ಲೇಖಕರು, ಪತ್ರಕರ್ತರು, ಉಪನ್ಯಾಸಕರು) , ಬೆಂಗಳೂರು