ಪ್ರಾಣಿ ಹಿಂಸೆ ನಿರ್ಬಂಧ’ ಕಾನೂನು ಬಗ್ಗೆ ತಿಳಿದುಕೊಳ್ಳಿ !



ನಿನ್ನೆ ಮೊನ್ನೆಯಿಂದ ಬಹು ಚರ್ಚಿತವಾಗಿರುವ ವಿಷಯವೆಂದರೆ ಹಲಾಲ್ ಅಥವಾ ಜಟ್ಕಾ ಪದ್ಧತಿಯಲ್ಲಿ ಪ್ರಾಣಿಗೆ ಕಡಿಮೆ ನೋವಾಗದ ರೀತಿಯಲ್ಲಿ ನೋವಾಗುವ ಎಚ್ಚರ ತಪ್ಪಿಸುವ ಸ್ಟನ್ನಿಂಗ್ ಪದ್ಧತಿ ಕುರಿತು ಪಶುವೈದ್ಯ ಡಾ.ಎನ್.ಬಿ.ಶ್ರೀಧರ ಅವರು ಒಂದಿಷ್ಟು ಮಾಹಿತಿಯನ್ನು ಓದುಗರ ಮುಂದಿಟ್ಟಿದ್ದಾರೆ, ಮುಂದೆ ಓದಿ…

ಅದರಲ್ಲೂ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಪ್ರಾಣಿ ಕಲ್ಯಾಣ ಹಿತದೃಷ್ಟಿಯಿಂದ ಇದರ ಪ್ರಾಣಿ ಹಿಂಸೆ ನಿರ್ಬಂಧ ಸಂಸ್ಥೆಯ ಉಪನಿರ್ದೇಶಕರು ಬೆಂಗಳೂರು ನಗರದ ಅಧೀಕೃತ ಪ್ರಾಣಿ ವಧಾಗಾರಗಳಲ್ಲಿ/ಕೋಳಿ ಅಂಗಡಿಗಳಲ್ಲಿ 2001 ನೇ ಸಾಲಿನ ಪ್ರಾಣಿ ವಧೆಯ ನಿಯಮವನ್ನು ಉಲ್ಲೇಖಿಸಿ ಇದರ ಪ್ರಕಾರ ಪ್ರಾಣಿಗಳನ್ನು ಮಾಂಸವನ್ನು ವಧೆ ಮಾಡುವ ಮುನ್ನ ಕಡ್ಡಾಯವಾಗಿ ಸ್ಟನ್ನಿಂಗ್ ಮಾಡಿ ಪ್ರಜ್ಞೆ ತಪ್ಪಿಸಿ ವಧೆ ಮಾಡಲು ಎಲ್ಲರಿಗೂ ಸೂಚಿಸಿ ಕೋಳಿ ಅಂಗಡಿಗಳಿಗೆ ಪರವಾನಗಿ ನೀಡುವಾಗ ಸ್ಟನ್ನಿಂಗ್ ಸೌಕರ್ಯ ಇರುವುದನ್ನು ಪರಿಶೀಲಿಸಿ ಅನುಮತಿ ನೀಡಬೇಕಾಗಿದೆ ಮತ್ತು ಈ ಕುರಿತು ಎಸ್ ಪಿ ಸಿ ಎ ಗೆ ವರದಿ ನೀಡಲು ಸೂಚಿಸಿರುತ್ತಾರೆ. ಈ ಸುತ್ತೋಲೆ ಈಗ ಬಹುಚರ್ಚಿತ ವಿಷಯವಾಗಿದೆ. ಇದ್ದಕ್ಕಿದ್ದ ಹಾಗೇ ಈ ಸೌಲಭ್ಯವನ್ನು ಧುತ್ತೆಂದು ಕಡ್ಡಾಯ ಮಾಡಿದರೆ ಹೇಗೆ? ಜನರಿಗೆ ಈ ಕುರಿತು ತಿಳುವಳಿಕೆ ನೀಡಿಲ್ಲ? ಬಡ ವ್ಯಾಪಾರಗಾರರು ಹೇಗೆ ಈ ಉಪಕರಣಗಳನ್ನು ಖರೀದಿಸುತ್ತಾರೆ? ಈವರೆಗೆ ನೀಡಿದ ಪರವಾನಿಗೆಗಳೆಲ್ಲಾ ಅಮಾನ್ಯವೇ? ಹಲಾಲ್ ಮತ್ತು ಜಟ್ಕಾ ವಿವಾದದ ಸಂದರ್ಭದಲ್ಲಿಯೇ ಈ ಸುತ್ತೋಲೆ ಯಾಕೆ ಬಂತು ಎಂಬೆಲ್ಲಾ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.

ಏನಿದು ಕಾನೂನು?

ಈ ಕಾನೂನಿನ ಪೀಠಿಕೆಯಲ್ಲಿಯೇ ಮಹಾತ್ಮಾ ಗಾಂಧಿಯವರ “ ರಾಷ್ಟ್ರದ ಶ್ರೇಷ್ಠತೆ ಮತ್ತು ಅದರ ನೈತಿಕ ಪ್ರಗತಿಯನ್ನು ಅದು ಪ್ರಾಣಿಗಳನ್ನು ಯಾವ ರೀತಿ ನಡೆಸಿಕೊಳ್ಳುತ್ತದೆಯೋ ಅದರ ಮೇಲೆ ನಿರ್ಣಯಿಸಬಹುದು” ಎಂದು ತಿಳಿಸಲಾಗಿದೆ. ಮುಂದುವರೆದು ಪಂಡಿತ್ ಜವಾಹಾರ ಲಾಲ್ ನೆಹರೂಜಿಯವರ “ನಿಜವಾದ ಕರುಣೆ ಎಂದರೆ ಪ್ರಾಣಿಗಳ ಜೊತೆಗಿನ ನೈಜ ಪ್ರೇಮ” ಎಂಬ ವಾಖ್ಯವನ್ನೂ ಸಹ ಉಲ್ಲೇಖಿಸಿ ಪ್ರಾಣಿಗಳ ಬಗೆಗಿನ ಅಪಾರ ಕರುಣೆಯನ್ನು ಕಾನೂನು ಎತ್ತಿ ಹಿಡಿಯುತ್ತದೆ.

ಪ್ರಾಣಿಯನ್ನು ವಧೆ ಮಾಡುವ ಮೊದಲು ಅದರ ಪ್ರಜ್ಞೆಯನ್ನು ಕಡ್ಡಾಯವಾಗಿ ತಪ್ಪಿಸಬೇಕೆಂದು ಮತ್ತು ಪ್ರಾಣಿಗಳಿಗೆ ಬದುಕುವ ಹಕ್ಕಿಲ್ಲವಾದರೂ ಸಹ ಸುಖವಾಗಿ ಸಾಯುವ ಹಕ್ಕಾದರೂ ಇರಬೇಕೆಂದು ಪ್ರಾಣಿಗಳ ಪರವಾಗಿರುವ ಅನೇಕ ಸಂಘಟನೆಗಳು ಹೇಳುತ್ತಲೇ ಬಂದಿವೆ. ಭಾರತ ಸರ್ಕಾರವು ಪ್ರಾಣಿ ಹಿಂಸೆ ನಿರ್ಬಂಧ ನಿಯಮ (ಪ್ರಾಣಿ ವಧಾಗಾರ) 2001 ಇದನ್ನು ಲೋಕಸಭೆಯಲ್ಲಿ ಅಂಗೀಕರಿಸಿ ನಿಯಮ ಜಾರಿಗೆ ತಂದಿದ್ದೇ ವಧಾಗಾರಗಳು ಇರಬೇಕಾದ ವಿಧಾನದ ಬಗ್ಗೆ. ಈ ಮೊದಲು ಈ ನಿಯಮವನ್ನು 1960 ರಲ್ಲಿ ಅಂಗೀಕರಿಸಿದ್ದು, ಇದರಲ್ಲಿಯೇ ಅನೇಕ ನಿಯಮಗಳಿದ್ದರೂ ಸಹ ಇದಕ್ಕೆ ಪೂರಕವಾಗಿ ತಿದ್ದುಪಡಿಗಳನ್ನು 2001 ನೇ ಸಾಲಿನಲ್ಲಿ ತಂದು ನಿಯಮ ರೂಪಿಸಲಾಯಿತು.

ಈ ನಿಯಮದ ಪ್ರಕಾರ:

1. “ವಧಾಗಾರ” ಎಂದರೆ ಎಲ್ಲಿ ದಿನಕ್ಕೆ 10 ಪ್ರಾಣಿಗಳನ್ನು ದಿನಕ್ಕೆ ವಧಿಸುತ್ತಾರೆಯೋ ಅದು.
2. ಪ್ರಾಣಿಗಳನ್ನು ಎಲ್ಲೆಂದರಲ್ಲಿ ವಧಿಸುವ ಹಾಗೆಯೇ ಇಲ್ಲ. ಅಧೀಕೃತ ವಧಾಗಾರದಲ್ಲಿ ಮಾತ್ರ ವಧಿಸುವುದು ಕಡ್ಡಾಯ.
3. ಪ್ರಾಧಿಕಾರದ ರಹದಾರಿ ಪಡೆದ “ವಧಾಗಾರ” ಗಳನ್ನು ಹೊರತು ಪಡಿಸಿ ಯಾರು ಪ್ರಾಣಿಗಳನ್ನು ವಧಿಸಿದರೂ ಅದು ಶಿಕ್ಷಾರ್ಹ.
4. ಗರ್ಭ ಧರಿಸಿದ, ರೋಗ ಪೀಡಿತ, 3 ತಿಂಗಳಿಗಿAತ ಕಡಿಮೆ ವಯಸ್ಸಿನ ಪ್ರಾಣಿಗಳನ್ನು ವಧಿಸುವ ಹಾಗಿಲ್ಲ.
5. ಪಶುವೈದ್ಯರು ವಧಿಸಬಹುದೆಂದು ಪ್ರಮಾಣೀಕರಿಸಿದ ಆರೋಗ್ಯವಂತ ಪ್ರಾಣಿಯನ್ನು ಮಾತ್ರ ವಧಿಸಬೇಕು.
ಈ ನಿಯಮದಲ್ಲಿ ವಧಾಗಾರ ಹೇಗಿರಬೇಕೆಂದು ಸಹ ಹೇಳುತ್ತಾರೆ
4. ಪ್ರಾಣಿಗಳನ್ನು ವಧಿಸುವ ಮೊದಲು ಅದಕ್ಕೊಂದು ವಿಶ್ರಾಂತಿ ಪ್ರದೇಶವಿರಬೇಕು. ಇದು ವಧಾಗಾರಕ್ಕೆ ಸಮೀಪದಲ್ಲಿ ಶಾಂತ ಪ್ರದೇಶದಲ್ಲಿರಬೇಕು.
  • ಪಶುವೈದ್ಯರು ಒಮ್ಮೆ 12 ಪ್ರಾಣಿಗಳನ್ನು ಮಾತ್ರ ನೋಡಬೇಕು. ದಿನಕ್ಕೆ 96 ಕ್ಕಿಂತ ಜಾಸ್ತಿ ಪ್ರಾಣಿಗಳ ಪರೀಕ್ಷೆ ಸಲ್ಲ.
  • ಪ್ರಾಣಿಗಳಿಗೆ ದೃಢತೆ ನೀಡಬೇಕಾದ ಪಶುವೈದ್ಯರು ಕೇಂದ್ರ ಸರ್ಕಾರ ಈ ಕುರಿತು ಹೊರಡಿಸಿದ ಮಾನದಂದಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
  • ಪ್ರಾಣಿಗಳ ವಧಾಪೂರ್ವ ಗೃಹವು ಪ್ರಾಣಿಗಳನ್ನು ಇಳಿಸಲು ಅನುಕೂಲವಾಗುವ ಇಳಿಜಾರು ಪ್ರದೇಶ ಹೊಂದಿರಬೇಕು ಮತ್ತು ಬಿಸಿಲಿನಲ್ಲಿ ಬಳಲದಂತೆ ಮೇಲ್ಚಾವಣಿ ಹೊಂದಿರಬೇಕು.
  • ಪ್ರತ್ಯೇಕ ವಿಶ್ರಾಂತಿ ಸ್ಥಳವು ಇರಬೇಕಿದ್ದು ಇದರಲ್ಲಿ ಆಯಾ ಪ್ರಾಣಿಯ ಗಾತ್ರಕ್ಕೆ ಅಗತ್ಯವಿರುವ ಸ್ಥಳ, ಸಾಕಷ್ಟು ಶುದ್ಧ ನೀರು ಮತ್ತು ಆಹಾರವನ್ನು ಒದಗಿಸಬೇಕು.

5. ವಧಾಪೂರ್ವ ಗೃಹ

ವಧಾಪೂರ್ವಗೃಹದಲ್ಲಿ ಪ್ರಾಣಿಯು ಕನಿಷ್ಟ 24 ಗಂಟೆಯ ಕಾಲ ತಂಗಿರಬೇಕು. ಇದರಲ್ಲಿಯೂ ಸಹ ಪ್ರಾಣಿ ಕಲ್ಯಾಣ ನಿಯಮಗಳಂತೆ ಶುದ್ಧ ಕುಡಿಯುವ ನೀರು, ಆಹಾರ, ಬಿಸಿಲಿನ ಚಾವಣಿ, ಓಡಾಡಲು ಸ್ಥಳ ಎಲ್ಲವೂ ಸಹ ಇರಬೇಕು.!

6.ಪ್ರಾಣಿ ವಧೆ

  • ಯಾವುದೇ ಪ್ರಾಣಿಯನ್ನು ಇನ್ನೊಂದು ಪ್ರಾಣಿಯ ಎದುರಿನಲ್ಲಿ ವಧೆಯನ್ನು ಮಾಡಲೇಬಾರದು.
  • ಪ್ರಾಣಿಯನ್ನು ವಧೆ ಮಾಡುವ ಮುನ್ನ ಇದಕ್ಕೆ ಯಾವುದೇ ರಾಸಾಯನಿಕ, ಔಷಧಿ ಅಥವಾ ಹಾರ್ಮೋನುಗಳನ್ನು ನೀಡಿರಬಾರದು.
  • ಪ್ರಾಣಿಯನ್ನು ಇಕ್ಕಟ್ಟಿನಲ್ಲಿ ಸಿಲುಕಿಸದೇ, ಎಳೆದಾಡದೇ, ಗಲಿಬಿಲಿಗೊಳಿಸದೇ ವಧಾಸ್ಥಾನಕ್ಕೆ ತರಬೇಕು.
  • ಪ್ರತಿಯನ್ನು ವಧೆ ಮಾಡುವ ಮೊದಲು ಸುಖಮರಣವನ್ನಪ್ಪಲು ಅನುವಾಗುವಂತೆ ಪ್ರಜ್ಞೆ ತಪ್ಪಿಸಬೇಕು. ಇದನ್ನೇ ಸ್ಟನ್ನಿಂಗ್ ಎನ್ನುವುದು. ಇದಕ್ಕೆ ಸಂಬAಧಿಸಿದ ಹಲವಾರು ಕಾನೂನಿನಿಂದ ಅನುಮತಿಸಿದ ನಿಯಮಗಳನ್ನು ಪಾಲಿಸಬೇಕು.
  • ಧಾರ್ಮಿಕವಾದ ವಿಧಾನವನ್ನು ಅನುಸರಿಸಿ ವಧೆ ಮಾಡುವ ಅವಶ್ಯಕತೆ ( ಹಲಾಲ್, ಜಟ್ಕಾ) ಇದ್ದಾಗ ಈ ವಿಧಾನಕ್ಕೆ ಅನುಕೂಲವಾಗಲು ಅವಶ್ಯಕ ಸ್ಥಳ ಮತ್ತು ಪ್ರಾಣಿ ತಪ್ಪಿಸಿಕೊಂಡು ಹೋಗದಂತೆ ಸೂಕ್ತ ತಡೆ ಇರಬೇಕು.
  • ರಕ್ತಸ್ರಾವ ಮಾಡಿ ವಧೆ ಮಾಡುವ ಸಂದರ್ಭದಲ್ಲಿ ಚಿಮ್ಮಿದ ರಕ್ತ ಇತ್ರ ಪ್ರಾಣಿಗಳ ಮೇಲೆ ಅಥವಾ ಈಗಾಗಲೇ ಸಿದ್ಧ ಪಡಿಸಿದ ಮಾಂಸದ ಮೇಲೆ ಬೀಳಬಾರದು.
  • ಸಂಗ್ರಹವಾಗುವ ರಕ್ತವನ್ನು ಕೂಡಲೇ ಸಂಗ್ರಹಿಸಿ ವಿಲೇವಾರಿ ಮಾಡಲು ಉತ್ತಮ ವ್ಯವಸ್ಥೆ ರೂಪಿಸಿಕೊಳ್ಳಬೇಕು.
  • ರಕ್ತ ಹರಿಸಿದ ನೆಲವನ್ನು ಮೇಲಿಂದ ಮೇಲೆ ಕ್ರಿಮಿನಾಶಕ ದ್ರಾವಣದಿಂದ ತೊಳೆಯಬೇಕು ಮತ್ತು ಕೈತೊಳೆಯುವ, ಚಾಕುವನ್ನು ಸ್ವಚ್ಚಗೊಳಿಸುವ ಉಪಕರಣ ವ್ಯವಸ್ಥೆ ಇರಬೇಕು.
  • ವಧೆಯಾದ ಮೇಲೆ ಪ್ರಾಣಿಯ ಶರೀರವನ್ನು ನೆಲದ ಮೇಲಿಡದೇ ಅದನ್ನು ನೇತು ಹಾಕಲು ಉಪಯುಕ್ತವಾಗುವ ಹುಕ್ಕುಗಳು, ಸರಪÀಳಿಗಳು, ಚರ್ಮವನ್ನು ಬೇರ್ಪಡಿಸುವ ಮತ್ತು ವಿಲೆವಾರಿ ಮಾಡುವ ವ್ಯವಸ್ಥೆ ಇರಬೇಕು.



ಈ ನಿಯಮ 9 ಉಪಖಂಡಗಳಲ್ಲಿ ಹೀಗೆಯೇ ಅನೇಕ ವಿವಿಧದಲ್ಲಿ ವಧಾಗಾರ ಎಲ್ಲಿರಬೇಕು, ಎಷ್ಟು ಪ್ರಾಣಿಗಳನ್ನು ವಧಿಸಬಹುದು, ಅದರ ಅಳತೆ, ಅನುಸರಿಸಬಹುದಾದ ತ್ಯಾಜ್ಯ ವಿಲೇವಾರಿ ವ್ಯವಸ್ಥೆ, ಮಾಂಸವನ್ನು ಸಂಗ್ರಹಿಸಿಡಲು ಅವಶ್ಯ ಸ್ಥಳ, ಶೀತಲಿಕರಣ ವ್ಯವಸ್ಥೆ, ಕೆಲಸಗಾರರ ಸಂಖ್ಯೆ, ಅವರ ಆರೋಗ್ಯ ತಪಾಸಣೆ ಇದೆಲ್ಲಾ ನಿಯಮಿತವಾಗಿ ನಡೆಯಲೇ ಬೇಕು ಅನ್ನುತ್ತದೆ ಕಾನೂನು. ಈ ಕಾನೂನಿನನ್ನು ಮೀರಿದರೆ ಇರುವ ಶಿಕ್ಷೆಗಳನ್ನೂ ಸಹ ಕಾನೂನು ವಿವರಿಸುತ್ತದೆ.

ಇದಾದ ಮೇಲೆ ಬಹಳ ಮುಖ್ಯವಾದ ಅಂಶವೆAದರೆ ಭಾರತ ಸರ್ಕಾರದ ಪ್ರಾಣಿ ಕಲ್ಯಾಣ ಮಂಡಲಿ ಅಥವಾ ಅವರಿಂದ ಅನುಮತಿ ಪಡೆದ ಪ್ರಾಣಿ ಕಲ್ಯಾಣ ಸಂಸ್ಥೆಗಳ ಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು ಈ ಎಲ್ಲಾ ವ್ಯವಸ್ಥೆಗಳನ್ನು ಕಚೇರಿ ಸಮಯದಲ್ಲಿ ಪರಿಶೀಲಿಸಿ ಸಂಬAಧಿಸಿದ ಪ್ರಾಧಿಕಾರಿಗಳಿಗೆ ವರದಿ ನೀಡಬಹುದು ಎನ್ನುತ್ತದೆ ಕಾನೂನು. ಈ ವ್ಯವಸ್ಥೆ ಸರಿಯಿಲ್ಲದಿದ್ದರೆ ಯಾವುದೇ ಸಮಯದಲ್ಲಿ ವಧಾಗಾರದ ಲೈಸನ್ಸ್ ರದ್ಧತಿಯನ್ನು ಮಾಡಬಹುದು ಎನ್ನುತ್ತದೆ ಕಾನೂನು.

ಫೋಟೋ ಕೃಪೆ : ukhumanrightsblog

ಈ ಕಾನೂನು 2001 ರಲ್ಲಿಯೇ ಜಾರಿಗೆ ಬಂದರೂ ಸಹ ಈ ವರೆಗೂ ಈ ಮಾದರಿಯ ಆಧುನಿಕ ವಧಾಗಾರಗಳಿಲ್ಲದೇ ಶೇ 90 ರಷ್ಟು ಇರುವ ಮಾಂಸಾಹಾರಿಗಳು ಉತ್ತಮ ಶುಚಿಯಾದ, ಸರಿಯಾದ ಪದ್ಧತಿಯಲ್ಲಿ ಕರುಣಾ ಪೂರಿತ ವಿಧಾನಗಳಿಂದ ಪಡೆಯುವ ಮಾಂಸದಿ0ದ ವಂಚಿತರಾಗಿದ್ದು ರಸ್ತೆಯ ಬದಿಯಲ್ಲಿಯೇ “ಅಮಾನವೀಯವಾಗಿ” ನಡೆಯುವ ಯಾವುದೇ ಪದ್ಧತಿಯ ಪ್ರಾಣಿಗಳ ಮಾಂಸವನ್ನು ಖರೀದಿಸಿ ಆರೋಗ್ಯಕ್ಕೆ ಮಾರಕ ತಂದುಕೊಳ್ಳುವುದು ಅಸಹನೀಯ.

ಸಾವಿರಾರು ಜನರ ಪ್ರಾಣ ತೆಗೆದು ಅಥವಾ ಅದಕ್ಕಿಂತ ಘೋರವಾದ ಅಪರಾಧ ಎಸಗಿ ನೇಣು ಶಿಕ್ಷೆಗೆ ಗುರಿಯಾದ ಮನುಷ್ಯನನ್ನು ನೇಣಿಗೆ ಹಾಕುವಾಗ ಆತನ ಆರೋಗ್ಯ ತಪಾಸಣೆ, ಉತ್ತಮ ಕುಣಿಕೆ ಹಗ್ಗ, ಸೂಕ್ತ ಸಮಯ, ಅಂತಿಮ ಆಸೆ ಕೇಳುವುದು, ಶರೀರವನ್ನು ಸಂಬಂಧಿಕರಿಗೆ ಒಪ್ಪಿಸುವುದು ಇತ್ಯಾದಿ ಖಚಿತವಾದ ಭಾರತ ಸರ್ಕಾರದ ನಿಯಮಗಳನ್ನು ಪಾಲಿಸಿ ಪ್ರಾಣಹರಣ ಮಾಡಲಾಗುತ್ತಿದೆ.
ಆದರೆ ಆಹಾರಕ್ಕಾಗಿ ಕೊಲ್ಲುವುದಕ್ಕೆಂದೇ ಸಾಕಿದ ಮೂಕಪ್ರಾಣಿಗಳಿಗೆ ಬದುಕುವ ಹಕ್ಕೇ ಇಲ್ಲದಿದ್ದರೂ ಸಹ ಸುಖವಾಗಿ ಸಾಯುವ ಹಕ್ಕೂ ಸಹ ಇಲ್ಲವೇ? ಇದಕ್ಕೆಂದೇ ಇರುವ ನಿಯಮಗಳ ಕನಿಷ್ಟ ಪಾಲನೆಯಾದರೂ ಆಗಬೇಡವೇ? ಸುಸಜ್ಜಿತ ವಧಾಗಾರಗಾರಗಳು ಬೇಡವೇ? ಎಷ್ಟು ದಿನ ಮೂಕಪ್ರಾಣಿಗಳ ನೋವುಭರಿತ ರೋಧನೆ? ಎಂದೆಲ್ಲಾ ಪ್ರಶ್ನಿಸುವವರಿಗೆ ಸದ್ಯಕ್ಕಂತೂ ಉತ್ತರವಿಲ್ಲ


  • ಡಾ.ಎನ್.ಬಿ.ಶ್ರೀಧರ (ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಶಶಾಸ್ತ್ರ ವಿಭಾಗ ಪಶುವೈದ್ಯಕೀಯ ಮಹಾವಿದ್ಯಾಲಯ) ಶಿವಮೊಗ್ಗ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading