ಆ ಫೋಟೊದಲ್ಲಿರುವ ಚೆಲುವೆಯ ಮುಖ ಹಾಗೂ ಫೋಟೊಕ್ಕೆ ಇಟ್ಟ ಕೆಂಪು ಗುಲಾಬಿಯನ್ನೇ ದಿಟ್ಟಿಸುತ್ತಿದ್ದಾಗ, ಆ ಚೆಲುವೆಗೂ ಹಾಗೂ ಆ ಚೆಲುವಾದ ಹೂವಿಗೂ ಭೇದವಿಲ್ಲ ಎನ್ನಿಸಿ, ಇಬ್ಬರೂ ಶಿವನ ಪಾದ ಸೇರುವ ಸ್ವರ್ಗಸಮಾನರೆನ್ನಿಸಿತು.
ಫೋಟೋ ಕೃಪೆ : YouTube
ನಾ ಮುಡಿದ ಮಾಲೆ ಜವಾರಿ ಸೇವಂತಿಗೆಯದಾಗಿದ್ದರೆ, ಇಡೀ ದಿನ ಹಾಕಿಕೊಂಡು ರಾತ್ರಿ ಮತ್ತೆ ಮಾಲೆಗೆ ಒಂದಿಷ್ಟು ನೀರು ಚುಮುಕಿಸಿ ನೀರಿನ ಹತ್ತಿರ ಅಥವಾ ತಂಪಾದ ಜಾಗದಲ್ಲಿಟ್ಟು ಮತ್ತೆ ಮುಂಜಾನೆ ಎದ್ದು ಅದೇ ಮಾಲೆಯನ್ನು ಹಾಕಿಕೊಳ್ಳುತ್ತಿದ್ದೆ. ಅವ್ವ ಕೂಡ ಒಂದು ಮಾಲೆಯನ್ನು ಅವಳ ದೊಡ್ಡ ತುರುಬಿಗೆ ಹಾಕಿಕೊಳ್ಳುತ್ತಿದ್ದಳು. ಕೆಂಪು ಬಣ್ಣದ ಅವ್ವ ಮೊದಲೇ ಚಲುವೆ ಆಕೆ ತುರುಬಿಗೆ ಮಾಲೆ ಹಾಕಿಕೊಂಡಾಗ ಇನ್ನೂ ಚೆಂದ ಕಾಣಿಸುತ್ತಿದ್ದಳು. ಅವ್ವ ಅಷ್ಟೇ ಅಲ್ಲ ಆಗ ಸಾಮಾನ್ಯವಾಗಿ ಎಲ್ಲ ಹೆಣ್ಣುಮಕ್ಕಳೂ ಹೂ ಮುಡಿದುಕೊಂಡು ಶೋಭಿಸುತ್ತಿದ್ದರು. ಜಡೆಯವರಾದರೆ ಜಡೆಯ ಉದ್ದಕ್ಕೂ ಅಥವಾ ತಲೆಯಲ್ಲಿ ದುಂಡಗೆ ಮಾಲೆಯನ್ನು ಹಾಕಿಕೊಳ್ಳುತ್ತಿದ್ದರು. ಎರಡು ಜಡೆಯವರಾದರೆ ಆ ಜಡೆಗೊಂದು ತುದಿಯನ್ನು ಈ ಜಡೆಗೊಂದು ತುದಿಯ ದಾರವನ್ನು ಕಟ್ಟಿ ಹಿಂಬದಿಯ ಮಧ್ಯಕ್ಕೆ ಹಾಕಿಕೊಳ್ಳುತ್ತಿದ್ದರು. ಹಾಗೆ ಎರಡೂ ಜಡೆಯ ಮಧ್ಯ ಹಾಕಿಕೊಳ್ಳುವ ಬಗೆ ಬಹಳ ಆಕರ್ಷಕವಾಗಿ ಕಾಣಿಸುತ್ತಿತ್ತು. ಅಲ್ಲದೇ ಅದು ಅಂದಿನ ಫ್ಯಾಶನ್ ಕೂಡ ಆಗಿತ್ತು. ಎರಡು ಜಡೆಯ ಚಿಕ್ಕ ಮಕ್ಕಳಾಗಿದ್ದರೆ, ನೆತ್ತಿಯ ಮೇಲೆ ಮಾಲೆಯನ್ನು ಹಾಕುತ್ತಿದ್ದರು. ಅಂದಿನ ಯುವತಿಯರು ತಮ್ಮ ಬಲ ಕಿವಿಯ ಹತ್ತಿರ ಅದು ಮುಂದುಗಡೆ ಕಾಣಿಸುವಂತೆ ಹಾಕಿಕೊಳ್ಳುತ್ತಿದ್ದರು.
ಬಹಳ ವರ್ಷಗಳ ಹಿಂದೆ ನಾನು ಒಂದು ಕಾರ್ಯದ ನಿಮಿತ್ತ ಬೇರೆ ಊರಿಗೆ ನನ್ನ ಆಫೀಸು ಸ್ನೇಹಿತೆಯೊಂದಿಗೆ ಅವರ ಸಂಬಂಧಿಕರ ಮನೆಗೆ ಹೋಗಿದ್ದೆ. ನಾವು ಅವರ ಮನೆಗೆ ಹೋದಾಗ, ಒಂದು ಟೇಬಲ್ ಮೇಲೆ ಒಂದು ಹುಡುಗಿಯ ಫೋಟೋ ಇಟ್ಟು ಆ ಫೋಟೊದ ಮೇಲೆ ಕೆಳಕ್ಕೆ ಸುಂದರವಾದ ರಕ್ತರಂಜಿತ ಕೆಂಪು ಗುಲಾಬಿ, ಹಳದಿ, ಗುಲಾಬಿ, ಬಿಳಿ ಬಣ್ಣಗಳ ಗುಲಾಬಿ ಹೂವುಗಳನ್ನು ಏರಿಸಿದ್ದರು. ಆ ದೃಶ್ಯವನ್ನು ನೋಡಿ ಆ ಹುಡುಗಿ ತೀರಿಕೊಂಡಿದ್ದಾಳೆಂದು ಅರ್ಥೈಸಿಕೊಂಡೆನಾದರೂ, ಸಾಮಾನ್ಯವಾಗಿ ಸತ್ತವರ ಫೋಟೊಗಳನ್ನು ಗೋಡೆಗೆ ಹಾಕಿರುತ್ತಾರೆ. ಆದರೆ ಹೀಗೆ ಟೇಬಲ್ ಮೇಲೆ ಎಂದುಕೊಳ್ಳುತ್ತಲೇ ಬಹುಶ: ಶ್ರಾದ್ಧವಿರಬಹುದು ಎಂದು ಸಂಶಯ ಪಡುತ್ತಿರುವವಳನ್ನು ಗೆಳತಿ “ಪಾಪ ಅವರ ಏಕೈಕ ಪುತ್ರಿ ಸತ್ತು ಐದಾರು ವರ್ಷ ಆತ ನೋಡವಾ” ಎಂದು ನನ್ನ ಕಿವಿಯಲ್ಲಿ ಉಸುರಿದಳು. ಆ ಫೋಟೊದಲ್ಲಿಯ ಅತಿ ಸುಂದರವಾದ ಹುಡುಗಿಯನ್ನು ಕಂಡು ಬೇಸರವೆನ್ನಿಸಿತು. ನಾನು ಮತ್ತೆ ಮತ್ತೆ ಆ ಹುಡುಗಿಯ ಫೋಟೊ ಜೊತೆಗೆ ಸುಂದರವಾದ ಹೂವುಗಳನ್ನು ನೋಡುತ್ತಿದ್ದಾಗ, ಆ ಹುಡುಗಿಯ ತಾಯಿ “ಯವ್ವಾ ನನ್ನ ಮಗಳ ನಂದಾ ನೋಡ್ರೆವಾ. ಆಕಿ ಈ ಮನಿಗೆ ನಂದಾ ದೀಪದಂಗ ಇದ್ದಳ ನೋಡ್ರೆವಾ….. “ ಎಂದು ಕಣ್ಣೀರು ಹಾಕುತ್ತಲೇ ತನ್ನ ದೌರ್ಭಾಗ್ಯವನ್ನು ಹೇಳಿಕೊಳ್ಳತೊಡಗಿದಳು.
ಫೋಟೋ ಕೃಪೆ : Birds and Blooms
ಆ ಹೆಣ್ಣುಮಗಳು ಹೇಳಿದಂತೆ ನಂದಾ ನಿಜಕ್ಕೂ ಆ ಮನೆಯ ನಂದಾದೀಪವಾಗಿದ್ದಳು. ಆ ಹುಡುಗಿ ಹೂವುಗಳೆಂದರೆ ಪ್ರಾಣವನ್ನೇ ಬಿಡುತ್ತಿದ್ದಳು. ಅದರಲ್ಲಿಯೂ ಗುಲಾಬಿ ಹೂವಿನ ಮೇಲೆ ಬಹಳ ಪ್ರೀತಿ. ಪ್ರತಿ ದಿನವೂ ಆಕೆಗೆ ಹೂವು ಅದರಲ್ಲಿಯೂ ಗುಲಾಬಿ ಹೂವು ಬೇಕೇ ಬೇಕು. ಅದಕ್ಕಾಗಿ ಆಕೆಗೆಂದೇ ಅವರ ಹಿತ್ತಲಿನಲ್ಲಿ ಒಂದಿಷ್ಟು ಹೂವುಗಳ ಗಿಡಗಳನ್ನು ನೆಟ್ಟಿದ್ದರು. ಹಿತ್ತಲಿನಲ್ಲಿ ಯಾವುದೇ ಹೂವು ಅರಳದಿದ್ದಾಗ, ಬೇರೆಯವರ ಹಿತ್ತಲಿನಲ್ಲಿ ಅಲ್ಲಿಯೂ ಸಿಗದಿದ್ದಾಗ ಬಜಾರಕ್ಕೆ ಹೋಗಿ ಆಕೆಗೆ ಹೂವು ತಂದು ಕೊಡಬೇಕಿತ್ತು. ಸದಾ ಎರಡು ಜಡೆ ಹಾಕಿಕೊಳ್ಳುತ್ತಿದ್ದ ಚೆಲುವೆ ಮುಡಿಯಲ್ಲೊಂದಿಷ್ಟು ಹೂವು
ಮುಡಿಯುತ್ತಿದ್ದಳು.
ಶಾಲೆಯಲ್ಲಿ ನಡೆಯುತ್ತಿದ್ದ ಶಾರದಾ ದೇವಿ ಪೂಜೆ, ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ ಮುಂತಾದ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಶಾಲೆಗೆ ಸಾಕಷ್ಟು ಮುಂಚಿತವಾಗಿ ಹೋಗಿ ರಂಗವಲ್ಲಿ ಬಿಡಿಸಿ ಅದರ ಮೇಲೆ ಹೂವಿನ ಪಕಳೆಗಳನ್ನುದುರಿಸಿ ಅಲಂಕರಿಸುತ್ತಿದ್ದಳು. ಗಾಂಧೀಜಿ ಫೋಟೊಕ್ಕಾಗಿ ತಾನೇ ಕೈಯಿಂದ ಹೂಮಾಲೆ ಹೆಣೆದು ತಂದು ಹಾಕಿ ಜೊತೆಗೆ ಒಂದಷ್ಟು ಗುಲಾಬಿ ಹೂವುಗಳನ್ನು ಏರಿಸಿ ಪೂಜೆಗೆ ಅಣವು ಮಾಡಿ ಕೊಡುತ್ತಿದ್ದಳು.
ನಂದಾಳ ಹೂವಿನ ಪ್ರೀತಿ ಕಂಡು ಜನರು ಆಕೆಗೆ ಹೂವಕ್ಕ ಎಂದೇ ಹೆಸರಿಟ್ಟಿದ್ದರು. ದಿನಗಳೆದಂತೆ ನಂದಾಳ ಹೆಸರು ಮರೆತು ಹೋಗಿ ಆಕೆ ಹೂವಕ್ಕಳೇ ಆಗಿಬಿಟ್ಟಳು. ಹೀಗಿದ್ದ ಹೂವಕ್ಕಳ ಮೇಲೆ ಹೂವಿಗೆ ಪ್ರೀತಿ ಹುಟ್ಟಿತೋ ಅಥವಾ ಹೂವಕ್ಕಳೇ ಹೂವಿನ ಮೇಲೆ ಪ್ರೀತಿ ಅಧಿಕವಾಯಿತೋ ಏನೋ ಹೂವಕ್ಕಳಿಗೆ ಅಷ್ಟು ಸಣ್ಣ ವಯಸ್ಸಿನಲ್ಲಿಯೇ ಹಾರ್ಟ ಅಟ್ಯಾಕ್ ಆಯಿತು. ಆಕೆಯನ್ನು ಉಳಿಸಲು ಎಷ್ಟೋ ಪ್ರಯತ್ನಗಳು ನಡೆದವು. ಆದರೆ ಅವು ಯಾವವೂ ಫಲ ಕೊಡದೇ ಹೂವಕ್ಕ ಹೂವು ಆಗಿ ಶಿವನ ಪಾದ ಸೇರಿದಳು. ಆಕೆಯ ಹೆಣದ ಶೃಂಗಾರಕ್ಕಾಗಿ ಎಲ್ಲಿಲ್ಲದ ಹೂವುಗಳು ಬಂದು ಸೇರಿ ಆಕೆಯ ದೇಹವೇ ಕಾಣಿಸದಂತೆ ಆಕೆಯನ್ನು ಅಪ್ಪಿಕೊಂಡವು. ಅದರಲ್ಲಿಯೂ ಗುಲಾಬಿ ಹೂವುಗಳ ರಾಶಿಯೇ ಬಿದ್ದು ಆಕೆಯ ತಾಯಿ “ಏ ನಂದಾ ನನ್ನ ಕಂದಾ, ನೋಡ ಇಲ್ಲೆ ಹೂವಿನ ರಾಶಿ ನೋಡ ನನ್ನ ಬಂಗಾರಿ. ಹೂವಾ ಇರಲೀಕ ಹ್ಯಾಂಗ ಮಾಡತಿದ್ದೆ ನನ್ನ ಕೂಸ ಎಲ್ಲಾರ ಹಿತ್ತಲಾಗ ತಿರಗಿಕೊಂತ ಹೊಕ್ಕಿದ್ದೆಲ್ಲ ನನ್ನವ್ವಾ, ಎಲ್ಲಾರ ಹಿತ್ತಲನ್ನ ಹೂವು ಈಗ ನಿನ್ನ ಹುಡಿಕ್ಕೊಂಡ ಬಂದಾವು. ನೋಡ ಕಣ್ಣ ತಗೀಯ ಕೂಸ” ಆಕೆಯ ಪ್ರಲಾಪವನ್ನು ಕೇಳಿಸಿಕೊಳ್ಳಲಾಗದೇ, ದು:ಖವನ್ನು ಕಣ್ಣಿನಿಂದ ನೋಡಲಾಗದೇ ಜನರೇ ಬಿಕ್ಕಿ ಬಿಕ್ಕಿ ಅತ್ತರು.

ನಂದಾ ದೀಪವಾಗಿ ಹೋದ ಮೇಲೆ, ಪಾಪ ಅವರ ಬದುಕೇ ಶೂನ್ಯವಾಗಿ ಹೋಗಿತ್ತು. ಅಂದಿನಿಂದಲೂ ಅವರು ಗುಲಾಬಿ ಹೂವು ಕಂಡಲ್ಲೆಲ್ಲ ಹುಡುಕಿ ತಂದು ಆಕೆಯ ಫೋಟೊಕ್ಕೆ ಅಲಂಕರಿಸುತ್ತಿದ್ದರು. ನಂದಾಳ ತಾಯಿ ಹಾಗೂ ನನ್ನ ಗೆಳತಿಯರು ನಂದಾಳ ಕತೆ ಹೇಳಿ ಮುಗಿಸಿದಾಗ, ನನ್ನ ಕಣ್ಣಲ್ಲೂ ಕಂಬನಿ ಉಕ್ಕಿತು. ಅವರ ಮನೆಯಿಂದ ಮರಳುವವರೆಗೂ ಆ ಫೋಟೊದಲ್ಲಿರುವ ಚೆಲುವೆಯ ಮುಖ ಹಾಗೂ ಫೋಟೊಕ್ಕೆ ಇಟ್ಟ ಕೆಂಪು ಗುಲಾಬಿಯನ್ನೇ ದಿಟ್ಟಿಸುತ್ತಿದ್ದಾಗ, ಆ ಚೆಲುವೆಗೂ ಹಾಗೂ ಆ ಚೆಲುವಾದ ಹೂವಿಗೂ ಭೇದವಿಲ್ಲ ಎನ್ನಿಸಿ, ಇಬ್ಬರೂ ಶಿವನಪಾದ ಸೇರುವ ಸ್ವರ್ಗಸಮಾನರೆನ್ನಿಸಿತು. ಈಗಲೂ ಎಲ್ಲಿಯಾದರೂ ಗುಲಾಬಿ ಹೂವು, ಮಾಲೆ ಕಂಡಗಲೆಲ್ಲ ನನಗೆ ಸ್ವರ್ಗಸ್ಥ ಹೂವಕ್ಕ ನೆನಪಾಗದೇ ಇರಲಾರಳು.
ಮುಕ್ತಾಯ…
- ಪಾರ್ವತಿ ಪಿಟಗಿ