ಕಾಳೀ ಕಣಿವೆಯ ಕತೆ ಭಾಗ – ೧೫

ಬೆಳಕು ತಂದವರ ಕತ್ತಲ ಬದುಕಿನ ನೈಜ್ಯ ಚಿತ್ರಣವಿದು. ಲೇಖಕರು ತಾವಿದ್ದ ಬಾಡಿಗೆ ಮನೆಯ ಅನುಭವವನ್ನು ಈ ಸಂಚಿಕೆಯಲ್ಲಿ ಹೇಳಿದ್ದಾರೆ. 

ಸಣ್ಣದಾದ ಒಂದು ಖೋಲೆ. ಚಾಳದವರ ಉಪಯೋಗಕ್ಕೆ ಕಟ್ಟಿಸಿದ ನಾಲ್ಕು ಸಣ್ಣದಾದ ಶೌಚಗೃಹಗಳು. ಅವುಗಳ ಸಂದಿನಲ್ಲಿ ಐದಾರು ಹಂದಿಗಳ ಬೀಡು.  ಬಾಗಿಲು ತೆರೆದರೆ ಅವುಗಳದೇ ದರ್ಶನ. ಕೆಳಗೆ ಹರಿಯುತ್ತಿದ್ದಕಾಳೀ ನದಿಯಿಂದ ಶೌಚಕ್ಕೆ ನೀರು ಹೊತ್ತು ತರಬೇಕು. ಇನ್ನಷ್ಟು ಕುತೂಹಲಕಾರಿ ವಿಷಯಗಳನ್ನು

ಮುಂದಕ್ಕೆ  ಓದಿ…


ಸೂಪಾದಲ್ಲಿ ವಾಸಕ್ಕೆ ಮನೆ ಸಿಕ್ಕಿತು. ನಾಲ್ಕು ರೂಪಾಯಿ ಎಂಟಾಣೆ ತಿಂಗಳ ಬಾಡಿಗೆ ನನಗೆ ಬಾಡಿಗೆ ರೂಮು ಪಕ್ಕಾ ಮಾಡಿ ಅದರ ಕೀ ಪಡೆಯುವ ಆತುರ. ಭೈರಾಚಾರಿಯವರು ಬೇರೆ ಇವತ್ತೇ ಆಫೀಸು ಖಾಲೀ ಮಾಡಿ ಎಂದು ಪರೋಕ್ಷವಾಗಿ ಹೇಳಿದ್ದರು. ಕಚೇರಿಯಲ್ಲಿ ವಸ್ತಿ ಮಾಡುವುದೂ ಸರಿಯಲ್ಲ. ನಾನೂ ನಿರ್ಧರಿಸಿಬಿಟ್ಟೆ. ಕೋಣೆ ಹೇಗಾದರೂ ಇರಲಿ. ಇವತ್ತು ಒಂದು ತಿಂಗಳ ಮುಂಗಡ ಬಾಡಿಗೆ ಕೊಟ್ಟು ಈ ದಿನವೇ ರೂಮಿನ ಚಾವಿ ಪಡೆಯಬೇಕು. ಮತ್ತು ಆಫೀಸೀನಲ್ಲಿರುವ ನನ್ನ ಟ್ರಂಕು ಎತ್ತಿಕೊಂಡು ಬಂದು ಸಾಮಾನು ಹೊಂದಿಸಿಕೊಳ್ಳಬೇಕು. ಅಲ್ಲಿ ಆ ಕೋಳಿಗಳು, ಅದಕ್ಕಾಗಿ ಅಲ್ಲಿ ಬರುವ ಹೆಬ್ಬಾವು, ಭೈರಾಚಾರಿಯ ನನ್ನ ಮೇಲಿನ ಅನುಮಾನ ಯಾವುದೂ ಬೇಡ. ಒಂದು ದಿನ ಇಲ್ಲಿ ಇದ್ದದ್ದಕ್ಕೇ ಅವರು ನನ್ನನ್ನು ಕೋಳೀ ಕಳ್ಳನಂತೆ ಕಂಡದ್ದೂ ಸಾಕು ಆಗಲೇ ಹೊತ್ತು ಮುಳುಗುವ ಸಮಯ. ಈ ಕಾಡಿನಲ್ಲಿ ಸೂರ್ಯ ಬೇಗ ಮರೆಯಾಗಿ ಬಿಡುತ್ತಾನೆ. ಬೆಟ್ಟದ ಸಂದುಗಳಲ್ಲಿ ಅವಿತುಕೊಳ್ಳುವ ಆತುರ ಅವನಿಗೆ. ದೀಪ ಬೆಳಗುವ ಮುಂಚೆಯೇ ಚಾಂದಗುಡೆಯವರ ಮನೆಯಲ್ಲಿರಬೇಕು. ನನಗಾಗಿ ಅಲ್ಲಿ ಅವರು ಕಾಯುತ್ತಿರಬಹುದು. ಅವಸರದ ಅತ್ತ ಹೆಜ್ಜೆ ಹಾಕಿದೆ.

ಮನೆಯ ಮುಂದುಗಡೆ ಮನುಷ್ಯರ ಸಂಸಾರ. ಹಿಂದುಗಡೆ ಡುಕ್ರುಗಳ [ಹಂದಿಗಳ] ಸಂಸಾರ. ನಾನು ಅಂದುಕೊಂಡಂತೆಯೇ ಆಗಿತ್ತು. ಚಾಂದುಗುಡೆಯವರು ನನಗಾಗಿ ಕಾಯುತ್ತ ತಮ್ಮ ಮನೆಯ ಬಾಗಿಲ ಹೊರಗೇ ನಿಂತಿದ್ದರು. ನಾನು ಅಲ್ಲಿ ಹೋಗುತ್ತಲೇ – ‘’ಬರ್ರಿ. ಮೊದಲ ಖೋಲೀ ತೋರಸ್ತೀನಿ. ನೀವು ಹೂಂ ಅಂದ್ರ ಹುಡುಗನ್ನ ಕಳಿಸಿ ಮಾಲಕರನ್ನ ಕರೆಸ್ತೀನಿ’’ ಅಂದವರೇ ಚಾಳದ ಕೊನೆಯಲ್ಲಿದ್ದ ಹಂಚಿನ ಖೋಲೆಯತ್ತ ನಡೆದರು. ಚಾಳದಲ್ಲಿದ್ದುದು ನಾಲ್ಕೇ ಮನೆ. ಒಂದರಲ್ಲಿ ಭೈರಾಚಾರಿಯವರೂ, ಇನ್ನೊಂದರಲ್ಲಿ ಚಾಂದಗುಡೆಯವರೂ, ಮತ್ತೆರಡು ಮನೆಗಳಲ್ಲಿ ಕಾರವಾರ ಕಡೆಯ ಇಬ್ಬರು ಪೋಲೀಸರು ಸಂಸಾರ ಸಮೇತ ಇದ್ದರು. ಸಂಸಾರಕ್ಕೆ ಒಗ್ಗದ ಈ ಖೋಲೆಯನ್ನು ಯಾಕೆ ಕಟ್ಟಿಸಿದ್ದರೋ ಗೊತ್ತಿಲ್ಲ.

ಸಂಸಾರಸ್ಥರ ಚಾಳದಲ್ಲಿ ಬ್ರಹ್ಮಚಾರಿ ಹುಡುಗ
ನಾನು ಬ್ರಹ್ಮಚಾರಿ. ಇನ್ನೂ ಲಗ್ನವಾಗದ ಹುಡುಗ. ಸಂಸಾರಸ್ಥರ ಚಾಳದಲ್ಲಿ ವಾಸ ಮಾಡುವುದು ಸರಿಯೋ ತಪ್ಪೋ. ಯಾರಾದರೂ ತಕರಾರು ಮಾಡಿದರೆ? ಹಾಗೇನಾದರೂ ಆದರೆ ಬೇರೆ ಕಡೆ ಬಿಡಾರ ಹುಡುಕಿದರಾಯಿತು. ನನ್ನ ಧೈರ್ಯವೇ ನನಗೆ ಬಂಡವಾಳವಾಗಿತ್ತು. ಈ ಚಾಳದಲ್ಲಿ ನಮ್ಮ ಇಲಾಖೆಯವರೇ ಇದ್ದಾರಲ್ಲ. ಅದೂ ನನಗೆ ಅನುಕೂಲವೇ.

ಫೋಟೋ ಕೃಪೆ : Irish Mirror

ಚಾಂದಗುಡೆಯವರು ಮನೆಯ ಬಾಗಿಲು ತಗೆಯುತ್ತಿದ್ದರು. ನಾನು ಅವರ ಹಿಂದೆ ನಿಂತಿದ್ದೆ. ಅಷ್ಟರಲ್ಲಿ ಅತ್ತ ಪೋಲೀಸರ ಮನೆಗಳ ಬಾಗಿಲುಗಳು ಕಿರ್‌ ಅಂದವು. ಅಲ್ಲಿಯ ಎರಡೂ ಮನೆಗಳ ಹೆಂಗಸರು ಕದವನ್ನು ತುಸುವೇ ಓರೆ ಮಾಡಿ ನಮ್ಮತ್ತ ನೋಡುತ್ತ ಮುಖ ಅರ್ಧ ಮರೆ ಮಾಡಿ ನೋಡಿದರು. ಚಾಂದಗುಡೆಯವರು ಹ್ಹಿಹ್ಹಿಹ್ಹಿ…. ಅನ್ನುತ್ತ ಮರಾಠಿಯಲ್ಲಿ ‘’ಹಮಚಾ ಮಾನುಷ್‌ ಬಾಯೀ…’’ ಎಂದು ನಗುತ್ತ ಹೇಳಿದರು. ಕೂಡಲೇ ಅವರು ನನ್ನನ್ನು ಹರಿದು ತಿನ್ನುವವರಂತೆ ನೋಡಿ ಪಟಕ್ಕನೇ ಬಾಗಿಲು ಹಾಕಿಕೊಂಡರು.

ಮೂರಡಿ ಅಗಲದ ಗುಂಡಿಯೇ ಬಚ್ಚಲು ಮನೆ. ಕೂತು ಸ್ನಾನ ಮಾಡುವುದಕ್ಕಲ್ಲ. ನಿಂತು ಸ್ನಾನ ಮಾಡುವುದಕ್ಕೆ ಒಳಗೆ ಕಾಲಿಟ್ಟು ಖೋಲೆಯ ತುಂಬ ಕಣ್ಣಾಡಿಸಿದೆ. ಇದ್ದದ್ದೇ ಒಂದು ಕೋಣೆ.ಅದು ದೊಡ್ಡದೂ ಅಲ್ಲ. ಹತ್ತು ಅಡಿ ಅಗಲ ಹನ್ನೆರಡು ಅಡಿ ಉದ್ದದ ಇಟ್ಟಿಗೆ-ಮಣ್ಣು ಹಾಕಿ ಕಟ್ಟಿದ ಗೋಡೆಗಳು. ಗೋಡೆಗಳಿಗೆ ಸಿಮೆಂಟು ಹಾಕಿದ್ದರೂ ಸುಣ್ಣ ಬಳಿದಿರಲಿಲ್ಲ. ಬಾಡಿಗೆ ಮನೆ ತಾನೆ. ಅನುಕೂಲ ಕಡಿಮೆ ಇದ್ದಷ್ಟೂ ಬೇಗ ಬಿಟ್ಟು ಹೋಗುತ್ತಾರೆ ಎಂದು ಮನೆಯ ಮಾಲೀಕ ಲೆಕ್ಕ ಹಾಕಿರಬೇಕು.

ಆದರೆ ನನಗೆ ಅನಾನುಕೂಲಗಳನ್ನೇ ನನ್ನ ಅನುಕೂಲಕ್ಕೆ ಹೊಂದಿಸಿಕೊಂಡು ಬದುಕುವುದು ರೂಢಿಯಾಗಿತ್ತು. ಹಿಂದೆ ಆ ಖೋಲೆಯಲ್ಲಿದ್ದವರ ಎಣ್ಣೆ ಕೈಬೆರಳ ಗುರುತುಗಳು, ಎಲೆಯಡಿಕೆ ತಿಂದು ಬೆರಳಿನಿಂದ ಸುಣ್ಣ ಒರೆಸಿದ ಗುರುತು ಹಾಗೇ ಇದ್ದವು. ಪುಣ್ಯಕ್ಕೆ ಗೋಡೆಗೆ ಉಗುಳಿರಲಿಲ್ಲ.

ಒಂದು ಮೂಲೆಯಲ್ಲಿ ಕಟ್ಟಿಗೆಯ ಒಲೆ. ಅದರ ಪಕ್ಕದಲ್ಲಿ ಪಾತ್ರೆಗಳನ್ನು ತೊಳೆಯಲೆಂದು ಮಾಡಿದ್ದ ಎರಡು ಅಡಿ ಅಗಲದ ಇಟ್ಟಿಗೆಯ ಗುಂಡಿಯೊಂದಿತ್ತು. ಅದರ ತಳಕ್ಕೆ ಸಿಮೆಂಟು ಹಾಕಿದ್ದರೋ ಕಲ್ಲು ಹಾಕಿದ್ದರೋ ಕಾಣುತ್ತಿರಲಿಲ್ಲ. ಕಪ್ಪಿಡಿದು ಹೋಗಿತ್ತು. ಅದನ್ನೇ ಬಚ್ಚಲೂ ಅನ್ನಬಹುದು.

ಗೊಮ್ಮಟೇಶ್ವರನಿಗೆ ಅಭಿಷೇಕ ಮಾಡುವ ಫೋಜಿನಲ್ಲಿ ಸ್ನಾನ


ಫೋಟೋ ಕೃಪೆ : NPR

ಕುಳಿತು ಜಳಕ ಮಾಡಿದರೆ ನೀರೆಲ್ಲ ಹೊರಗೆ ಬೀಳುವ ಹಾಗಿತ್ತು. ಅದಕ್ಕೇ ಅಲ್ಲಿ ಸ್ನಾನವನ್ನು ನಿಂತು ಮಾಡುವುದೇ ಕ್ಷೇಮ. ಗೋಮ್ಮಟೇಶ್ವರನಿಗೆ ಅಭಿಷೇಕ ಮಾಡುವಂಥ ಫೋಜಿನಲ್ಲಿ.

ಗೋಡೆಗೆ ಅಲ್ಲಲ್ಲಿ ಸಿಕ್ಕಿಸಿದ ಕಟ್ಟಿಗೆಯ ನಾಲ್ಕಾರು ಗೂಟಗಳು. ಶರ್ಟು, ಪ್ಯಾಂಟು, ಕ್ಯಾಪು, ಕೈಚೀಲ ಮುಂತಾದವು ಗಳನ್ನು ಅಲ್ಲಿ ತೂಗು ಹಾಕಬಹುದಿತ್ತು. ಮತ್ತೊಂದೆಡೆ ಸೂರಿನ ಕಟ್ಟಿಗೆಗೆ ತೂಗು ಹಾಕಿದ ಉದ್ದದ ಬಿದಿರಿನ ಗಳ. ಅದು ಹಸಿ ಅರಿವೆಗಳನ್ನು ಒಣ ಹಾಕಲು ಇರಬೇಕು.

ಮಂಚ ಇರಲಿಲ್ಲ. ಬೇಕಾದರೆ ನಾವೇ ತಂದು ಹಾಕಿಕೊಳ್ಳಬೇಕು. ಬೇಡವೆಂದರೆ ಸಿಮೆಂಟಿನ ನೆಲಕ್ಕೆ ಚಾಪೆ ಹಾಕಿ ಹಾಯಾಗಿ ಹಂಚಿನ ಸೂರು ನೋಡುತ್ತ ಮಲಗೋ ವ್ಯವಸ್ಥೆ. ಇಡೀ ಮನೆಗೆ ಒಂದೇ ಒಂದು ಸೂರಿನ ಮಧ್ಯ ತೂಗು ಹಾಕಿದ ಕರಂಟು ಬಲ್ಬು. ಅದಕ್ಕೇನಾದರೂ ಆದರೆ ಮರು ದಿನದವರೆಗೂ ಕತ್ತಲೇ ದೇವರು. ಇಡೀ ಖೋಲೆಗೆ ಒಂದೇ ಒಂದು ಕಿಟಕಿಯೂ ಇರಲಿಲ್ಲ. ಬೆಕ್ಕು ಬಂದೀತು ಎಂದಲ್ಲ. ಆಚೆಯಿಂದ ಹಾವಿನ ಭಯ.

ಧಾರವಾಡದ ಹಳೇ ರೈಲು ನಿಲ್ದಾಣದಲ್ಲಿ ರಾತ್ರಿಯೆಲ್ಲ ಮಲಗಿದವನಿಗೆ ಇದು ಅವ್ಯವಸ್ಥೆ ಅನ್ನಿಸಲಿಲ್ಲ

ನಾನು ಮಾಡಿದ ಅರಣ್ಯ ವಾಸಕ್ಕಿಂತಲೂ ಇಲ್ಲಿಯದು ಸೊಗಸಾದ ವ್ಯವಸ್ಥೆ ಅನ್ನಿಸಿತು. ನಾನು ಬೆಳಗಾವಿಯಲ್ಲಿ ಓದುವಾಗ ಅಲ್ಲಿನ ಹಾಸ್ಟೆಲ್‌ ವ್ಯವಸ್ಥೆಯೂ ಹೀಗೇ ಇತ್ತು. ಅಲ್ಲಿ ಓದಲು ಬಂದ ಹುಡುಗರಷ್ಟೇ ಇದ್ದರು. ಇಲ್ಲಿ ನೌಕರಿ ಮಾಡಲು ಬಂದ ಸಂಸಾರಸ್ಥರು ಇದ್ದಾರೆ ಅಷ್ಟೇ.

ಕಾಡಿನಲ್ಲಿ ಇದ್ದಾಗ ಟೆಂಟಿನಲ್ಲಿ, ಊರಿನಲ್ಲಿದ್ದಾಗ ಹೊಲದ ಬದುವಿನಲ್ಲಿ, ಧಾರವಾಡದಲ್ಲಿದ್ದಾಗ ಹಳೇ ರೈಲು ನಿಲ್ದಾಣದ ಹೊರಗೆ ಇಡೀ ರಾತ್ರಿ ಮಲಗೆದ್ದು ಬಂದವನಿಗೆ ಇದ್ಯಾವುದೂ ಕೊರತೆ ಅನ್ನಿಸಲಿಲ್ಲ.

ನೀರನ್ನು ಮಾತ್ರ ನದಿಗೆ ಹೋಗಿಯೇ ತರಬೇಕು. ತಿಂಗಳಿಗೆ ಒಂದು ರೂಪಾಯಿ ಎಂಟಾಣೆ ಕೊಟ್ಟರೆ ಇಲ್ಲೊಬ್ಬ ಮರಾಠಿ ಹೆಂಗಸು ದಿನಕ್ಕೆ ನಾಲ್ಕು ಕೊಡ ನೀರು ತಂದು ಕೊಡುತ್ತಾಳೆ. ನಿಮಗೆ ಅಷ್ಟು ನೀರು ಬೇಕಿಲ್ಲ. ಸ್ನಾನಕ್ಕೆ- ಶೌಚಕ್ಕೆ ಹೊಳೆಯ ಕಡೆ ಹೋದರಾಯಿತು. ನಿಮ್ಮ ಒಂಟಿ ಜೀವನಕ್ಕೆ ದಿನಕ್ಕೆರಡು ಕೊಡ ನೀರು ಸಾಕು. ಹನ್ನೆರಡು ಆಣೆಯಲ್ಲಿ ಎಲ್ಲಾ ಆಗುತ್ತದೆ. ಚಾಂದಗುಡೆ ಸಲಹೆ ಮಾಡಿದರು.

ಬೆಳಿಗ್ಗೆ ಬಾಗಿಲು ತಗೆದರೆ ಸಾಕು. ಸಾಲಾಗಿ ಕಟ್ಟಿಸಿದ್ದ ನಾಲ್ಕು ಶೌಚಾಲಯಗಳ ಅಮೋಘ ದರ್ಶನ ಕೋಣೆಯ ಎದುರಿನ ಗೋಡೆಯಾಚೆ ಚಾಳಕ್ಕೆ ಸೇರಿದ ಜಾಗದಲ್ಲಿ ಸಾಲಾಗಿ ಕಟ್ಟಿಸಿದ ಹೆಂಚು ಹೊದಿಸಿದ್ದ ನಾಲ್ಕು ಶೌಚ ಗೃಹಗಳಿದ್ದವು. ಅವುಗಳೆದುರು ಮರೆಯಾಗಲೆಂದು ಅರ್ಧ ಎತ್ತರಕ್ಕೆ ಕಟ್ಟಿಸಿದ್ದ ಮಣ್ಣಿನ ಗೋಡೆಯಿತ್ತು. ಆದರೂ ಶೌಚಗೃಹದ ಬಾಗಿಲು, ಕದಗಳು ಈ ಖೋಲೆಯಲ್ಲಿ ಕೂತಿದ್ದರೂ ಸಾಕು. ಎದುರಿಗೇ ಕಾಣುತ್ತಿದ್ದವು. ಹಾಗೊಮ್ಮೆ ಆ ಗೋಡೆಯೇನಾದರೂ ಬಿದ್ದು ಹೋದರೆ ಇನ್ನೂ ಅಧ್ವಾನ. ಆಗ ಎಲ್ಲಾ ಶೌಚಾಲಯಗಳ ಇಡೀ ಬಾಗಿಲುಗಳನ್ನು ಮತ್ತು ಒಳಗಿದ್ದ ಶೌಚ ಪೀಠಗಳನ್ನೂ ಇಲ್ಲಿ ಕೂತುಕೊಂಡೇ ನೋಡಬಹದಿತ್ತು. ಅಂಥ ವ್ಯವಸ್ಥೆ ಈ ಖೋಲೆಯದು. ಚಾಳದಲ್ಲಿದ್ದ ಹೆಂಗಸರು, ಗಂಡಸರು, ಮಕ್ಕಳಾದಿಯಾಗಿ ಎಲ್ಲರೂ ನಿತ್ಯ ಶೌಚಾಮನಕ್ಕೆ ಈ ಕೋಣೆಯ ಮುಂದೆ ಹಾದುಕೊಂಡೇ ಹೋಗಬೇಕು. ಹಾಗಾಗಿ ಚಾಳದಲ್ಲಿದ್ದ ಎಲ್ಲರ ಮುಖ ದರ್ಶನ ಬೇಡವೆಂದರೂ ಕೋಣೆಯಿಂದಲೇ ಆಗುತ್ತದೆ.

ಬರೀ ಮುಖವೊಂದೇ ಅಲ್ಲ. ಅಂಡರವೇರ ಮೇಲೆ ಟವೆಲ್ಲು ಸುತ್ತಿಕೊಂಡು ಬರುವ ಗಂಡಸರು, ಮೊಣಕಾಲು ತನಕ ಸೀರೆ ಎತ್ತಿಕಟ್ಟಿಕೊಂಡು ಕೈಯಲ್ಲಿ ಚಿಕ್ಕ ಬಕೆಟ್ಟು ಹಿಡಿದು ಶೌಚಕ್ಕೆ ಬರುವ ಹೆಂಗಸರು ಇತ್ಯಾದಿಗಳನ್ನು ಮನೆಯ ಬಾಗಿಲಿ ನಿಂದಲೇ ನೋಡಬಹುದು.

ಶೌಚಾಲಯ ಪುರಾಣ.
ನಡುವಿಗೆ ಟವೆಲ್ಲು ಕಟ್ಟಿಕೊಂಡು ಚೆಂಬು ಹಿಡಿದು ಬರುವ ಗಂಡಸರು, ಮೊಣಕಾಲ ಮೇಲೆ ಸೀರೆ ಕಟ್ಟಿಕೊಂಡು ಕೋಣೆಯ ಮುಂದೆಯೇ ಓಲಾಡುವ ತೇರಿನಂತೆ ಬರುವ ಹೆಂಗಸರು, ‘ಬರಿಗುಂಡಿ’ಯಲ್ಲಿ ಬಂದು ಬಾಗಿಲೂ ಹಾಕಿಕೊಳ್ಳದೆ ಕೂಡುವ ಮಕ್ಕಳು.

ಫೋಟೋ ಕೃಪೆ : Flickr

ಆಗಿನ ಕಾಲದಲ್ಲಿ ಹೆಂಗಸರಿಗೆ ಬರ್ಮುಡಾ, ಮಿನಿ ಚಡ್ಡಿ. ನೈಟ್‌ ಗೌನು, ನೈಟ್‌ ವೇರ್ಸು ಸಾರ್ವತ್ರಿಕವಾಗಿರಲಿಲ್ಲ. ಅವು ದೊಡ್ಡ ನಗರದಲ್ಲಿ ಮಾತ್ರ ಕಾಣುವಂಥವು. ಇಲ್ಲಿ ಮೊಣಕಾಲು ಮೇಲೆ ಕಾಣುವ ಹಾಗೆ ಎತ್ತಿ ಕಟ್ಟಿಕೊಂಡರೂ ಸರಿಯೆ. ಸೀರೆಯನ್ನೇ ಉಟ್ಟಿರಬೇಕು. ಪಂಜಾಬಿ ಡ್ರೆಸ್ಸಂತೂ ಆಗ ಪರಿಚಯವಾಗಿರಲೇ ಇಲ್ಲ. ಪ್ಯಾಂಟು, ಪೈಜಾಮಾ ಗಂಡಸರ ಡ್ರೆಸ್ಸಾಗಿದ್ದವು.

ನಮ್ಮ ತ್ರಿವೇಣೀ ಕಾದಂಬರಿ ಓದುಗ ಮಿತ್ರೆ ಪರಿಮಳಾ ಅವರೂ ಶೌಚಕ್ಕೆ ಇಲ್ಲಿಗೇ ಬರಬೇಕು. ಬೇಡವೆಂದರೂ ದಿನವೂ ಸಿಗುವ ಮುಖದರ್ಶನ. ಪ್ರತಿ ದಿನ ಬೆಳಿಗ್ಗೆ ಸೊಂಟಕ್ಕೆ ಟವೆಲ್ಲು ಸುತ್ತಿಕೊಂಡು ಶೌಚಕ್ಕೆ ಬರುವ ಭೈರಾಚಾರಿಯವರನ್ನೂ ಇಲ್ಲಿ ಕಾಣಬಹುದು.

ಚಾಳದ ಕೆಲವು ಗಂಡಸರು ಬಹಿರ್ದೆಸೆಗೆ ಬೆಳಗಿನ ಹೊತ್ತು ಹೊಳೆಯ ಕಡೆಗೆ ಹೋಗುತ್ತಾರೆ. ಬಯಲಿನಲ್ಲಿ ಬಹಿರ್ದೆಶೆಗೆ ಕೂಡುವಾಗಿನ ಆತ್ಮಾನಂದ ಶೌಚಾಗೃಹದಲ್ಲಿ ಸಿಗುವುದಿಲ್ಲ. ಹಾಗೇ ಮುಖಮಾರ್ಜನವನ್ನೂ ಅಲ್ಲಿಯೇ ಮಾಡಿಕೊಳ್ಳುತ್ತಾರೆ. ಬೇಕೆನಿಸಿದರೆ ಕಪ್ಪು ಕಲ್ಲುಬಂಡೆಯಲ್ಲಿ ಹರಿವ ಸ್ಫಟಿಕಂದಂಥ ನೀರಿರುವ ಹೊಳೆಯ ಸ್ನಾನವೂ ಅಲ್ಲಿಯೇ ಆಗುತ್ತದೆ.

ಕೆಲವು ಗಟ್ಟಿಗಿತ್ತಿಯರು ಬಹಿರ್ದೆಶೆಗೆಂದು ನದೀ ಬಯಲಿಗೆ ಹೋಗುತ್ತಾರೆ. ಮೊಸಳೆ ಬಂದರೂ ಹೆದರುವುದಿಲ್ಲ ಆದರೆ ಬಹುತೇಕ ಚಾಳದ ಹೆಂಗಸರು ಮಾತ್ರ ನದಿಯ ಕಡೆಗೆ ಹೋಗುವುದಿಲ್ಲ. ಅವರಿಗೆ ಮಾತ್ರ ಈ ಶೌಚಗೃಹಗಳೇ ಅನಿವಾರ್ಯ. ಆದರೆ ಕೆಲವು ಗಟ್ಟಿಗಿತ್ತಿಯರೂ ಶೌಚಕ್ಕೆಂದು ತಂಬಿಗೆ ಹಿಡಿದು ಹೊಳೆ ದಂಡೆಯ ಕಡೆಗೇ ಹೋಗುತ್ತಾರಂತೆ. ಜನವಿಲ್ಲದಿದ್ದರೆ ಅಲ್ಲಿಯೇ ನೀರಿಗಿಳಿದು ಕಲ್ಲಿನಿಂದ ಕಾಲು-ಕೈ, ಮೈಯನ್ನು ತಿಕ್ಕಿಕೊಂಡೂ ಬರುತ್ತಾರೆ. ನೀರು ಕಂಡಲ್ಲಿ ಮುಳುಗುವರಯ್ಯ ಅನ್ನುವುದು ಸುಳ್ಳಲ್ಲ. ಅವರು ಮೊಸಳೆ ಬಂದರೂ ಹೆದರುವುದಿಲ್ಲ. ಇನ್ನು ಚಾಳದ ಮಕ್ಕಳು ಶೌಚಕ್ಕೆ ಹೋಗುವ ಕ್ರಮವೇ ಬೇರೆ. ಚಡ್ಡಿಯನ್ನು ಮನೆಯಲ್ಲೇ ಕಿತ್ತು ಬಿಸಾಕಿ ‘ಬರಿಗುಂಡಿ’ ಯಲ್ಲಿಯೇ ಶೌಚದ ಕೋಣೆಗೆ ಓಡಿ ಬರುತ್ತಾರೆ. ಖೋಲೆಯ ಕಡೆಗೆ ನೋಡುವುದೂ ಇಲ್ಲ. ಅಲ್ಲಿ ಬಾಗಿಲನ್ನೂ ಸರಿಯಾಗಿ ಹಾಕಿಕೊಳ್ಳುವುದಿಲ್ಲ. ನೀರೂ ಸರಿಯಾಗಿ ಹಾಕುವುದಿಲ್ಲ. ಮಕ್ಕಳಲ್ಲವೆ. ಪೋಲೀಸು ಮನೆಯ ಹೆಂಗಸರಂತೂ ಬಿಡಿ. ತಾವಿನ್ನೂ ಸದಾಶಿವಗಡದ ಕರೀ ಹೊಳೆಯಲ್ಲಿ ಮೀನು ಹಿಡಿಯಲು  ಬಂದಿದ್ದೇವೆ ಅಂದುಕೊಂಡಿದ್ದಾರೆ. ಸೀರೆಯನ್ನು ಮೇಲೆ ಕಟ್ಟಿಕೊಂಡೇ ಚಾಳದಲ್ಲಿ ಅವರು ಓಡಾಡುವುದು ಮಾಮೂಲು. ಕೆಲವು ಹೆಂಗಸರು ಈಗೀಗ ಮನೆಯಲ್ಲಿದ್ದಾಗ [ಎಲ್ಲರೂ ಲಗ್ನವಾದವರೆ] ಗೋವಾದವರಂತೆ ಸ್ಕರ್ಟ ಹಾಕಲು ಸುರು ಮಾಡಿದ್ದಾರೆ. ಶೌಚಕ್ಕೆ ಹೋಗಲು ಅದರಿಂದ ತುಂಬ ಅನುಕೂಲವಂತೆ. ನೀವು ಅವರತ್ತ ತಿರುಗಿಯೂ ನೋಡಬೇಡಿ. ಚಾಳದಲ್ಲಿ ಕಾಲಿಟ್ಟರೆ ನಿಮ್ಮ ತಲೆ ನೆಲ ನೋಡುತ್ತಿರಬೇಕು ಅಷ್ಟೇ ಎಂದು ಚಾಂದಗುಡೆಯವರು ಮೆಲ್ಲಗೆ ಕಿವಿಯಲ್ಲಿಹಿತವಚನ ಹೇಳಿದರು. ಅದರಿಂದ ನನಗೆ ತುಸು ಭಯವಾದರೂ ಪರಿಮಳಾನಂಥ ಪುಸ್ತಕ ಓದುಗರೂ ಇಲ್ಲಿದ್ದಾರಲ್ಲ. ಮೊದಲು ಇಲ್ಲಿ ಪುಸ್ತಕ ಓದುವ ಸಂಸ್ಕೃತಿ ಬೆಳೆಸಿದರೆ ಮನೆಗಳ ಸಂಸ್ಕೃತಿ ಬದಲಾಗುತ್ತದೆ ಎಂದು ನನಗನಿಸಿತು. ಅದು ನನ್ನ ಹುಚ್ಚುತನವೂ ಆಗಿರಬಹುದು.

ಅಬ್ಬಾ! ಡುಕ್ರುಗಳ ಹಿಂಡು

ಫೋಟೋ ಕೃಪೆ : Asiannet Newsable

ಶೌಚಾಲಯಗಳ ಪಕ್ಕದಲ್ಲಿಯೇ ಓಡಾಡುವ ಡುಕ್ರುಗಳ ಹಿಂಡು [ದಪ್ಪ, ಕಪ್ಪು ಬಣ್ಣದ ಸಾಕು ಹಂದಿಗಳು] ಯಾವಾಗಲೂ ಅಲ್ಲಿಯೇ ಇರುತ್ತದೆ. ಅವುಗಳ ಕಿಚಿಕಿಚಿ ಸದ್ದು ಖೋಲೆಯ ಬಾಗಿಲಿಗೆ ರಪ್ಪೆಂದು ಹೊಡೆಯುತ್ತದೆ. ಈ ಡುಕ್ರುಗಳ ಮಾಲೀಕರು ಯಾರೋ ಗೊತ್ತಿಲ್ಲ. ಅವರು ಯಾವಾಗ ಇಂಥ ಹಂದಿಗಳನ್ನು ತಂದು ಊರಲ್ಲಿ ಬಿಡುತ್ತಾರೋ-ಯಾವಾಗ ಎತ್ತಿಕೊಂಡು ಹೋಗುತ್ತಾರೋ ಎಂದು ಯಾರಿಗೂ ಗೊತ್ತಾಗುವುದಿಲ್ಲ.

ಊರಿನ ಸ್ವಚ್ಛತೆಗಾಗಿ ಹಂದಿಗಳನ್ನು ಸಾಕುವವರು ಊರಲ್ಲಿ ಹೀಗೆ ಹಂದಿಗಳನ್ನು ತಂದು ಬಿಟ್ಟು ಹೋಗಬಹುದು ಎಂದು ಪಂಚಾಯಿತಿಯವರು ಸಾರಿದ್ದಾರಂತೆ. ಒಂದಷ್ಟು ಹಣ ಭರತಿ ಮಾಡಿದರೆ ಸಾಕು. ಹಂದೀ ಸಾಕೋ ಲೈಸನ್ಸೂ ಕೊಡುತ್ತಾರಂತೆ.

ಅದರಿಂದ ಸೂಪಾ ಊರಲ್ಲಿ ಯಾರೂ ಹಂದಿಗಳ ಕಿರಿಕ್‌ ಬಗ್ಗೆ ತಕರಾರು ಮಾಡುವ ಹಾಗಿಲ್ಲ. ಊರಿನ ಎಲ್ಲ ಮನೆಗಳ ಹಿಂದೆ ಶೌಚಾಲಯದ ಹತ್ತಿರ ಇಂಥ ಡುಕ್ರುಗಳ ಹಿಂಡು ಇರುತ್ತದಂತೆ. ಶೌಚಾಲಯಗಳ ಸಂದಿಯೇ ಇವುಗಳಿಗೆ ಅರಮನೆಯ ಲಾಯ ಇದ್ದಂತೆ.

ಪ್ರತಿ ರವಿವಾರಕ್ಕೊಮ್ಮೆ ಚಾಳದ ಎರಡು ದೊಡ್ಡ ಡುಕ್ರುಗಳನ್ನು ಗಾಡಿಯಲ್ಲಿ ಎತ್ತಿಕೊಂಡು ಹೋಗುತ್ತಾರೆ. ಮತ್ತು ಅವುಗಳಿಗೆ ಬದಲಾಗಿ ಮತ್ತೆರಡು ಮರಿ-ಡುಕ್ರುಗಳನ್ನು ಇಲ್ಲಿ ತಂದು ಬಿಡುತ್ತಾರೆ. ಅವುಗಳ ನೆಲೆ ಇಲ್ಲಿ ಅವು ದೊಡ್ಡವು ಆಗಿ ಮೈತುಂಬಿಕೊಳ್ಳುವವರೆಗೆ ಮಾತ್ರ. ಆಮೇಲೆ ಗೋವಾ-ಲೋಂಡಾ ಕಡೆಗೆ ಅವುಗಳ ಪ್ರಯಾಣ. ಅವುಗಳಿಗೆ ಅಲ್ಲಿ ಡಾ- ಗೋವಾದಲ್ಲಿ ದೊಡ್ಡ ಮಾರ್ಕೆಟ್ಟು ಇದೆಯಂತೆ. ಚಾಂದಗುಡೆಯವರು ಪಿಸುಗುಡುತ್ತ ವಿವರಿಸಿದರು.

ಅಲ್ಲಿ ಕೋಳಿಗಳು! ಇಲ್ಲಿ ಡುಕ್ರುಗಳು!
ಯಾರಿದು ಬಾಬು ಅಸೋಟಿಕರ?

ಫೋಟೋ ಕೃಪೆ : Rgbstock

ನನಗೆ ಆ ಕ್ಷಣ ಎ.ಇ.ಇ. ನರಸಿಂಹಯ್ಯನವರ ಆಫೀಸು ನೆನಪಾಯಿತು. ಅಲ್ಲಿ ಕೋಳಿಗಳು. ಇಲ್ಲಿ ಡುಕ್ರುಗಳು. ವ್ಯತ್ಯಾಸವೇನಿಲ್ಲ. ಅಲ್ಲಿ ಅವರು ತಾವು ತಿನ್ನುವುದಕ್ಕೆ ಸಾಕುತ್ತಾರೆ. ಇಲ್ಲಿ ಇನ್ಯಾರೋ ತಿನ್ನೋದಕ್ಕೆ ಇನ್ಯಾರೋ ಸಾಕುತ್ತಾರೆ ಅಷ್ಟೇ.

ಅಷ್ಟರಲ್ಲಿ ಅಲ್ಲಿಗೆ ದಪ್ಪ ಹೊಟ್ಟೆಯ ನಡು ವಯಸ್ಸಿನ ವ್ಯಕ್ತಿಯೊಬ್ಬಬಂದ. ಬೆಲ್ಟಿನಿಂದ ಬಿಗಿದ ದೊಗಳೆ ಹಾಫ್‌ ಪ್ಯಾಂಟು, ಮೇಲೆ ಉದ್ದದ ಬಿಳಿಯಂಗಿ. ತಲೆಯ ಮೇಲೆ ಅಡ್ಡ ಹಾಕಿದ ಕೇಸರೀ ಟೋಪಿ. ನೋಡಿದ ತಕ್ಷಣ ಪಕ್ಕಾ ಮರಾಠೀ ಎಂ.ಇ.ಎಸ್‌. ಛಾಪು. ಬಂದವನೇ ಚಾಂದಗುಡೆಯವರನ್ನು ನೋಡಿ – ‘ನಮಷ್ಕಾರ್‌… ಚಾಂದ್‌ಗುಡೇ ಸಾಹೇಬ್‌’. ಅಂದ. ಅವನನ್ನು ನೋಡಿದ ಕೂಡಲೇ ಚಾಂದಗುಡೆಯವರ ತುಟಿಯಲ್ಲಿ ಸಹಜವೆನ್ನುವಂತೆ ನಗು ಚಿಮ್ಮಿತು.

‘’ಯಾಽಕೀ. ಯಾ. ಬಾಬೂಜೀ. ನಮಷ್ಕಾರ್‌. ಹ್ಹಹ್ಹಹ್ಹ… ಇವ್ರೇ… ಶೇಖರ್‌ ಅಂತ. ಬಾಡಿಗೀದಾರ್‌. ನಮ್ಮ ಡಿಪಾರ್ಟಮೆಂಟೂ- ನಮ್‌ ಧಾರವಾಡ ಕಡೇಯವ್ರು. ತುಮ್‌ಚಾ ವಿಚಾರ ಸಗಳ ಸಾಂಗಲಾ ಮೀ. ಹ್ಹಹ್ಹಹ್ಹ….’’ ಮರಾಠಿಯಲ್ಲಿ ಹೇಳಿದರು. ಆತ ನನ್ನನ್ನು ಇಡಿಯಾಗಿ ನೋಡಿದ.

ನಾವು ಚಾಳದ ಮಾಲಕ್‌ ಇದ್ದೀವಿ

‘’ನಿಮ್ಮ ಹೆಸ್ರು ಶೇಖರ್‌. ನಾಂವ ಫಸಂದ್‌ ಅಸಾಕೀ. ನೋಡು ಶೇಖರ್‌ ಅವ್ರೇ. ನೀವು ಡ್ಯಾಮಿನಾಗ ಕೆಲಸಾ ಮಾಡ್ತೀರಿ ಅಂದ್ರು. ಅಂದ್ರ ಸರಕಾರೀ ಕೆಲಸ ಹೌದಲ್ಲರೀ?

‘’ಹೌದುರೀ. ಡ್ಯಾಮ ಕೆಲಸಕ್ಕ ಬಂದೇನಿ’’

‘’ಸಿಂಗಲ್‌ ಅದೀರೋ…? ಲಗ್ನಾ-ಪಗ್ನಾ ಆಗೇದನೋ? ಯಾಕ ಕೇಳತೀನಿ ಅಂದ್ರ. ಹಿಂದಕ್ಕ ಇದ್ದ ಭಾಡಿಗೀದಾರನ ಕತೀ ಹೇಳತೀನಿ ನಿಮಗ ಕೇಳಕೋರಿ. ನಾವು ಲಫಡಾಬಾಜೀ ಮಂದಿ ಅಲ್ಲ. ಸಿಂಗಲ್‌ ಮನಿಶಾ ಅದೀನಿ ಅಂತ ಬಂದು ಆಮ್ಯಾಲ ಹೆಂಡತೀ ಅಂತ ಒಬ್ಬಾಕೀನ ಕರಕೊಂಡು ಬಂದ್ರು. ಹೆಂಡತಿ ಅಂದ್ರ ನಾವೇನ ಮಾಡಾಕ ಅಕೈತಿ?. ಛಾವೀ ಅಂತೂ ಕೊಟ್ಟಾಗಿತ್ತು. ಒಂದ್‌ ತಿಂಗ್ಳಾ ಆಗಿರಲಿಲ್ಲ. ಒಂದಿನಾ ಪೋಲೀಸ್ರು ಬಂದು ಇಬ್ಬರಿಗೂ ಬೇಡೀ ಹಾಕಿ ಕರಕೊಂಡು ಹ್ವಾದ್ರು. ಹೂಂ…ಅಲ್ಲ.. ನೀವು ಅಂಥಾ ಹಲ್ಕಟ್‌ ಕೆಲಸಾ ಯಾಕ ಮಾಡತೀರಿ? ಗೊರ್ಮೆಂಟು ಕೆಲಸದಾಗ ಇರಾವ್ರು. ನಿಮಗೂ ಒಂದ್‌ ಮಾತು ಗೊತ್ತಿರಲಿ ಅಂತ ಹೇಳಿದ್ನಿ. ಇನ್ನೂ ತನಕಾ ಲಗ್ನಾ ಆಗಿಲ್ಲಲ ನಿಮ್ದು?’’

‘’ಇಲ್ರೀ… ಅದರ ಬಗ್ಗೆ ನಾನು ಇನ್ನೂ ವಿಚಾರನ಼ಽ ಮಾಡಿಲ್ಲ. ಮದಲ ನೌಕರೀ ಗಟ್ಟಿ ಆಗಬೇಕು ನೋಡ್ರಿ’’

‘’ಹೌದಲ… ಆತು. ಸೀದಾ ಮಾತೀಗೆ ಬರತೀನಿ. ನಾವು ಈ ಚಾಳದ ಮಾಲಕ್‌ ಇದ್ದೀವಿ. ಚಾಂದಗುಡೆ ಯಜಮಾನ್ರು ನಿಮಗ ನಮ್ಮದ಼ಽ ಮಾನುಷ್‌ ಅಂದ್ರು. ನೀವು ಅವ್ರ ಕಡೆಯವ್ರು ಅಂದದ್ದಕ್ಕ ನಾನು ಭಾಡಿಗೀ ಸಲುವಾಗಿ ಹೆಚ್ಚು ವಿಚಾರ ಮಾಡ್ಲಿಲ್ಲ’’

ಖೋಲೇ ಬಾಡಿಗಿ ತಿಂಗಳಿಗೆ ನಾಲ್ಕು ರೂಪಾಯಿ ಎಂಟಾಣೆ

ದಿ. ಆನಂದ ರಾವ್ ಚಾಂದಗುಡೆ,  ದಿ ಶಾರದಾ ಬಾಯಿ ಚಾಂದಗುಡೆ,  ಶ್ರೀ ಪ್ರತಾಪ್ ಚಾಂದಗುಡೆ

‘’ಇಲ್ಲ ತಗೋರಿ. ಬಾಡಿಗೀ ಹೇಳ್ರಿ. ಕೊಡತೀನಿ’’

‘’ತಿಂಗ್ಳಾ ನಾಲ್ಕು ರೂಪಾಯಿ ಎಂಟಾಣೆ ಭಾಡಿಗಿ. ದೀವಾರಕ್ಕ ಮೊಳೀ ಹೊಡೆಯಾಂಗಿಲ್ಲ. ಭಾಡಿಗಿ ಪಹಿಲಾ ಕೊಟ್ಟನ ಒಳಗ ಹೋಗಬೇಕು. ಪೋಟಗೀ ಅಡ್ವಾನ್ಸ ಏನೂ ಇಲ್ಲ. ನಮ್ಮ ಮನೀ ಛಂದ ಇಟ್ಕೋಬೇಕ್‌ ಮತ್ತ. ಬೆವರು ಸುರಿಸಿ ಕಟ್ಟಿದ ಮನೀ ಇದು. ನಮ್‌ ಕಡಿಂದ್‌ ಇಷ್ಟು ಕರಾರು ಇದೆ. ನಿಮಗ್‌ ಪುರೋಟು ಆಗತೈತಿ ಅಂದ್ರ ಇವತ್ತನ ತಿಂಗಳ ಬಾಡಿಗೀ ರೊಕ್ಕಾ ಕೊಡ್ರಿ. ಚಾವೀ ತಗೋರಿ. ಕಾಯ್‌ ಹೋ… ಚಾಂದಗುಡೆ ಸಾಹೇಬ?’’

ಚಾಂದಗುಡೆಯವರು ನಕ್ಕರು. ನಾನೆಲ್ಲಾ ಹೇಳೇನಿ ತಗೋರಿ.ಎಂದೂ ಹೇಳಿದರು.

ಅಸೋಟಿಕರ ಮೆತ್ತಗೆ ಹೇಳಿದರೂ ಮಾತು ಖಡಕ್‌ ಆಗಿತ್ತು. ನಾನು ಮತ್ತೆ ವಿಚಾರ ಮಾಡಲಿಲ್ಲ. ಇರೋದು ನಾನೊಬ್ಬ. ಹಗಲು ಹೊತ್ತು ಡ್ಯಾಮಿನಲ್ಲಿ ಕೆಲಸ. ಸಂಜೆ ಹೊತ್ತು ಇಲ್ಲಿ ಬಂದು ಮಲಗುವುದಷ್ಟೇ. ‘ಹೊಟೆಲ್‌ ಮೆ ಖಾನಾ. ಮಜೀದ್‌ ಮೆ ಸೋನಾ’ ಅನ್ನುವ ಹಾಗೆ. ಆಗಲೇ ಕಿಸೆಯಿಂದ ರೊಕ್ಕ ತಗೆದು ಚಾಂದಗುಡೆಯವರ ಕೈಗೆ ಕೊಡುತ್ತ ‘ಖೋಲೆ ಒಪ್ಪಿಗೆ ಆಗೇತರೀ’ ಎಂದು ಹೇಳಿದೆ. ಮನೆಯ ಚಾವಿ ಕೈಗೆ ಬಂತು. ಬಾಬೂ ಅಸೋಟಿಕರ ಚಾಳದ ಎಲ್ಲರಿಗೂ ಹೊಸ ಭಾಡಿಗೆದಾರ ಬಂದ ಸುದ್ದಿಯನ್ನು ಹೇಳಿಕೊಂಡು ಬಂದ. ಪೋಲೀಸರ ಮನೆಯ ಹೆಂಗಸರು ಹೊರಗೆ ಬಂದು ನಿಂತು ನನ್ನನ್ನು ನೋಡಿದರು.

ಬಾಗಿಲಿಗೆ ಊದುಬತ್ತಿ ಬೆಳಗುತ್ತಿದ್ದಂತೆ ಶೌಚಗೃಹದಿಂದ ಎದ್ದು ಬಂದ ದಪ್ಪ ಹೆಂಗಸು ತೇರು ಬಂದಂತೆ ಬಂದಳು

ಏನೋ ಕಾಣದ ಆನಂದ ಮನಸಿನೊಳಗೆ. ಸೂಪಾದಲ್ಲಿ ನನ್ನ ವಿಳಾಸ ಹೇಳುವದಕ್ಕಾದರೂ ಒಂದು ಜಾಗ ಸಿಕ್ಕಿತಲ್ಲ ಅನಿಸಿತು. ಚಾಂದಗುಡೆಯವರು ಇಷ್ಟಗಲ ಬಾಯಿ ತಗೆದು – ‘’ಹ್ಹಹ್ಹಹ್ಹ…. ಶೇಖರವರ…. ತಡೀರಿ. ಊದ ಬತ್ತಿ ತಗೊಂಡು ಬಾಗಿಲಕ್ಕ ಬೆಳಗಿ ಒಳಗ ಕಾಲಿಡ್ರಿ’’

ಅಂದವರೇ ತಮ್ಮ ಮಗ ಪ್ರತಾಪನನ್ನು ಕೂಗಿ ಕರೆದು, ತಮ್ಮ ಮನೆಯಿಂದ ಎರಡು ಊದಬತ್ತಿ ತಗೊಂಡು ಬಾ ಅಂದರು. ಪ್ರತಾಪ ಮನೆಯಿಂದ ಉರಿಯುತ್ತಿದ್ದ ಊದುಬತ್ತಿ ಹಿಡಿದು ಓಡಿ ಬಂದ. ನಾನು ಅವುಗಳನ್ನು ಕೈಗೆ ತಗೆದುಕೊಂಡು ಬಾಗಿಲಿಗೆ ಬೆಳಗಿದೆ. ನಾನು ಹಾಗೆ ಬೆಳಗುವಾಗ ಸೀರೆ ಎತ್ತಿ ಕಟ್ಟಿದ ದಪ್ಪ ಹೆಂಗಸೊಬ್ಬಳು ಶೌಚ ಕಾರ್ಯ ಮುಗಿಸಿಕೊಂಡು ತೇರು ಬಂದಂತೆ ಪೀಠದಿಂದ ಎದ್ದು ಹೊರಬಂದಳು. ನಾನು ಆಕೆಯ ಕಡೆಗೂ ನೋಡುತ್ತ ಊದುಬತ್ತಿ ಬೆಳಗಿದೆ. ಅಷ್ಟೇ. ಮನೆ ಪ್ರವೇಶ ಅಲ್ಲಿಗೆ ಆಗಿ ಹೋಯಿತು.

ಮಂಡಕ್ಕಿ ಗಿರಮಿಟ್ಟು- ಮೆಣಸಿನಕಾಯಿ ಭಜಿಯ ವೆಲ್‌ ಕಮ್‌ ಪಾರ್ಟಿ

ಫೋಟೋ ಕೃಪೆ : swasthis recipies

‘’ಬರ್ರಿ… ಬಾಬೂ ಅಸೋಟಿಕರ ಅವರ… ನಮ್‌ ಮನಿಯೊಳಗ ಚಹಾ ಪಾನೀ ವ್ಯವಸ್ಥಾ ಆಗೇದ. ಸ್ವೀಕಾರ ಮಾಡೇ ಹೋಗ್ರಿ ಹ್ಹಹ್ಹಹ್ಹ…’’ ಅಂದರು ಚಾಂದಗುಡೆ. ಬಾಬುಸೋಟಿಕರ ಮುಜುಗುರ ಮಾಡಿಕೊಳ್ಳಲಿಲ್ಲ. ‘ಓಹ್ಹೋ…’ ಅನ್ನುತ್ತ ಚಾಂದಗುಡೆಯವರನ್ನು ಮುಂದಿಟ್ಟುಕೊಂಡು ನಡದೇ ಬಿಟ್ಟರು.

ಚಾಂದಗುಡೆಯವರು ಮನೆಯಲ್ಲಿ ಎಲ್ಲ ವ್ಯವಸ್ಥೆ ಮಾಡಿದ್ದರು. ಅವರ ಹೆಂಡತಿ ಶಾರದಾಬಾಯಿಯವರು ಮುತುವರ್ಜಿಯಿಂದ ಚುರುಮುರಿ ಒಗ್ಗರಣಿ, ಮೆಣಸಿನಕಾಯಿ ಭಜಿ ಮಾಡಿಟ್ಟಿದ್ದರು. ಈಗ ಚಾಳದ ಓನರ್‌ ಬಾಬೂ ಅಸೋಟಿಕರರೂ ಬಂದ್ದದ್ದು ಅವರ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.

ಚಾಂದಗುಡೆ ತಮ್ಮ ಹೆಂಡತಿ ಶಾರದಾಬಾಯಿಯವರಿಗೆ ನನ್ನ ಪರಿಚಯ ಮಾಡಿಕೊಟ್ಟರು. ಸದ್ಗೃಹಿಣಿ ಅವರು. ಹಣೆಯ ಮೇಲೆ ರೂಪಾಯಿ ಅಗಲದ ಕುಂಕುಮ. ಮೂಗಿನಲ್ಲಿ ನತ್ತು. ಮನೆ ಮಾತು ಮರಾಠಿ ಅವರದು.
ಮೂರು ಜನ ಗಂಡು ಮಕ್ಕಳು, ಒಂದು ಹೆಣ್ಣು ಮಗಳು ಇರುವ ಮುದ್ದಾದ ಸಂಸಾರ ಅವರದು. ಕೊನೆಯ ಮಗಳಿಗೆ ಇನ್ನೂ ಮೂರು ವರ್ಷ ವಯಸ್ಸು. ಉಳಿದವರು ಸೂಪಾದಲ್ಲಿದ್ದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದರು. ಹುಡುಗರು ಶಾಲೆಯಲ್ಲಿ ಅಷ್ಟೊಂದು ಬುದ್ಧಿವಂತರಲ್ಲ ಎಂದು ಅವರ ಮಾತಿನಿಂದ ತಿಳಿಯಿತು. ನಡುವೆ ಶಾರದಾಬಾಯಿ ಯವರು – ‘’ಹೆಂಗೂ ಇನ್ನ ಮ್ಯಾಲ ನೀವು ಇಲ್ಲೇ ಇರ್ತೀರಲ್ಲ. ದಿನಾ ಸಂಜೀ ಕಡೆಗೆ ನಮ್ಮ ಹುಡುಗೂರಿಗೆ ಸಾಲೀ ಪಾಠಾ ಹೇಳ್ರಿ. ನಿಮ್ಮ ಬಾಯಿ ಗುಣದಿಂದಲಾದ್ರೂ ಇವ್ರು ಶಾಣ್ಯಾರಾಗ್ಲಿ’’ ಎಂದರು. ಅವರಿಗಿರುವ ಮಕ್ಕಳ ಕಕ್ಕುಲಾತಿ ಕಂಡು ನನಗೆ ಇಲ್ಲ ಅನ್ನಲಾಗಲಿಲ್ಲ.

ನನ್ನ ಕತೆಯ ಮೊದಲ ಓದುಗಳ ಕೈಗೆ ನನ್ನ ಮೊದಲ ಕತೆ

ಅಷ್ಟರಲ್ಲಿ ಪಕ್ಕದ ಮನೆಯಲ್ಲಿದ್ದ ಭೈರಾಚಾರಿಯವರೂ, ಪರಿಮಳಾ ಅವರೂ ಬಂದರು. ನನ್ನನ್ನು ನೋಡಿ ಪರಿಮಳಾ ಅವರಿಗೆ ಸಂತೋಷವಾಯಿತು. ಅವರ ಕೈಯಲ್ಲಿ ಏನೋ ಪಾತ್ರೆ ಇತ್ತು.ಸಾಹಿತಿಗಳು ನಮ್ಮ ಚಾಳಕ್ಕೆ ವಾಸಕ್ಕೆ ಬಂದಿದಾರೆ. ಅದಕ್ಕೇ ಸ್ವೀಟು ಮಾಡೀದೀನಿ. ಕೇಸರೀ ಬಾತ್‌ ಎನ್ನುತ್ತ ಅದನ್ನು ಶಾರದಾಬಾಯಿಯವರ ಕೈಗೆ ಕೊಟ್ಟರು.

‘’ಅಂತೂ ನಮ್ಮ ಚಾಳಕ್ಕೆ ಬರ್ತೀರೋ ಇಲ್ಲೋ ಅನ್ಕೊಂಡಿದ್ದೆ. ಬಂದ್ರೆಲ್ಲ. ನಿಜವಾದ ಸಾಹಿತಿಗೆ ಅನುಭವ ಸೇಗೋದು ಇಂಥಲ್ಲಿಯೇ ಪರಿಮಳಾ ಅವರ ಮಾತು ಸತ್ಯವಾಗಿತ್ತು. ಜೀವನದ ಅನುಭವಗಳೇ ನಮ್ಮನ್ನು ಸರಿದಾರಿಯತ್ತ ಕೊಂಡೊಯ್ಯುತ್ತವೆ. ಇಲ್ಲಿ ಬದುಕು ಕಲಿಸುವ ಸಾಮಾನ್ಯ ಜನರಿದ್ದಾರೆ. ಮಕ್ಕಳಿದ್ದಾರೆ. ಹಂದಿಗಳೂ ಇವೆ. ಇನ್ನು ಮೇಲೆ ನಾನು ಇವರೆಲ್ಲರ ಜೊತೆಗೇ ಇರಬೇಕು. ಮನಸ್ಸಿಗೆ ಏನೋ ಉತ್ಸಾಹ, ತಳಮಳ, ಆತಂಕ.

‘’ಕತೆ ತಂದೀದೀರಾ’’ ಎಂದು ಪರಿಮಳಾ ಅವರೇ ಕುತೂಹಲದಿಂದ ಕೇಳಿದರು. ಕೂಡಲೇ ಅಂಗಿಯ ಬನಿಯನ್ನಿನ ಒಳಗೆ ಹುದುಗಿಸಿಕೊಂಡಿದ್ದ ‘ಬೋಲೋ! … ಮಾತಾಕೀ!’ ಕತೆಯ ಹಸ್ತ ಪ್ರತಿಯನ್ನು ಈಚೆಗೆ ತಗೆದು ಅವರ ಕೈಗಿತ್ತೆ. ನನ್ನನ್ನು ವಿಚಿತ್ರವಾಗಿ ನೋಡಿದ ಬಾಬೂ ಅಸೋಟೀಕರ ಗಲಿಬಿಲಿಗೊಂಡರು. ಯಾಕೆ ಅಂತ ಗೊತ್ತಾಗಲಿಲ್ಲ.

ಏನೂ ಖರೇನ ಕತೀ ಬರೆದೀರಿ? ನೀವೂ ಭಾರೀ ಅದೀರಿ ಮತ್ತ

‘’ಏನೂ… ಖರೇನ ಕತೀ ಬರಿದೀರಿ? ಹೇ…ಭಾಳ ಛುಲೋ ಆತು. ಅಗದೀ ಛುಲೋ ಆತು. ಕತಿಗಾರು ನಮ್ಮ ಬಾಜೂನ ಇರತಾರು ಬಿಡು ಇನ್. ಹ್ಹಹ್ಹಹ್ಹ… ‘’

ಚಾಂದಗುಡೆಯವರು ನಕ್ಕರು. ಭೈರಾಚಾರಿಯವರು ಪಿಳಿಪಿಳಿ ಕಣ್ಣು ಬಿಟ್ಟರು. ಅವರ ಕಣ್ಣಲ್ಲಿ ಆಫೀಸಿನಲ್ಲಿ ನಾನು ಕಂಡ ಹೆಬ್ಬಾವು…. ಕೋಳಿ ಇದ್ದುವೇನೋ.

ಈಗ ಶಾರದಾಬಾಯಿಯವರು ಎಲ್ಲರಿಗೂ ಚುನುಮುರಿ ಗಿರಮಿಟ್ಟು-ಭಜೀ, ಚಹ ಸರಬರಾಜು ಮಾಡಿದರು. ಹಾಗೇ ಪರಿಮಳಾ ಅವರು ತಂದಿದ್ದ ಕೇಸರೀಬಾತನ್ನೂ ಎಲ್ಲರ ತಟ್ಟೆಗೂ ಹಾಕಿದರು.

‘’ನೀವು ಕಾನಡೀ ಒಳಗ ಕತೀ ಬರೀಯೂದು ಬ್ಯಾಡ. ಮರಾಠೀ ಒಳಗ ಬರೀರಿ. ಪೂನಾ ಕಡೆ ಫೇಮಸ್ಸು ಅಕ್ಕೀರಿ’’ ಅಸೂಟಿಕರ ಹಾಗಂದಾಗ ಈತ ಪಕ್ಕಾ ಎಂ.ಇ.ಎಸ್‌. ಕಡೆಯವನೇ ಹೌದು ಅನಿಸಿತು.

ಏನ್‌ ಬೇಡ. ಕನ್ನಡದಲ್ಲಿಯೇ ಬರೀರಿ. ಕನ್ನಡದಲ್ಲಿ ಈಗ ಮಹಿಳೆಯರೇ ಹೆಚ್ಚಾಗಿ ಬರೆಯೋದು. ತ್ರಿವೇಣಿ, ಎಂ.ಕೆ.ಇಂದಿರಾ, ಉಷಾ ನವರತ್ನರಾಮ್‌, ಈಗೀಗ ಈಚನೂರು ಶಾಂತಾ ಅನ್ನೋವ್ರೂ ಬರೀತಿದಾರೆ.
ಅಲ್ಲಿದ್ದ ಉಳಿದ ಯಾರಿಗೂ ಇವು ಅರ್ಥವಾಗಲಿಲ್ಲ. ಆದರೆ ಪರಿಮಳಾ ಅವರು ಎಷ್ಟೊಂದು ಕತೆಗಳನ್ನು ಓದಿದ್ದಾರಲ್ಲ ಎಂದು ನಾನು ಅಚ್ಚರಿಪಟ್ಟೆ.

ಸೂಪಾದಲ್ಲಿ ಸಿಕ್ಕಿತು ಖಾನಾವಳಿ ‘ಘರೇಲೂ ಜೇವನ್’

‘’ಹಾಂ… ನೀವು ದಿನಾ ಊಟಕ್ಕ ಏನ್‌ ಮಾಡ್ತೀರಿ? ತ್ರಾಸ ಇದ್ರ ಹೇಳ್ರಿ. ಒಂದ ಮನೀಗ್ ಊಟಾ ಹಚ್ಚಿ ಕೊಡತೀನಿ. ಮನೀ ಊಟಾನೇ ಅದು. ಅಲ್ಲಿ ಉಂಡರ ಆರೋಗ್ಯ ಕೆಡೂದಕ್ಕ ಸಾಧ್ಯಾನ ಇಲ್ಲ. ಪಕ್ಕಾ ಮನೀ ಊಟ’’
ಮಾತಿನ ದಿಕ್ಕು ಬದಲಿಸಿದ ಬಾಬೂ ಅಸೋಟಿಕರ ತಾನೇ ಸಲಹೆ ಕೊಟ್ಟ.

‘ಇಲ್ಲೇ ನದೀ ಬ್ರಿಡ್ಜು ಬೈಲ ಪಾರಾ ಕಡೆ ಹ್ವಾದ್ರ ಮುಗೀತು. ದೇಸಾಯರ ಬಂಗ್ಲೇ ಬಾಜೂನ ಹಂಚಿನ ಮನೀ ಅಸಾ. ಅಲ್ಲಿ ಇಬ್ರು ಬಾಯಿಕಾ [ಹೆಂಗಸರು] ಖಾನಾವಳಿ ಇಟ್ಟಾರು. ಒಂದು ಪ್ಲೇಟು ಊಟಾ ಪಚಾಸ್‌ ಪೈಸಾ. ಮೀನು ಬೇಕಾದ್ರೂ ಕೊಡ್ತಾರೆ. ಕ್ಕ ಬ್ಯಾರೇ ಪೈಸಾ ಕೊಡಬೇಕು. ಥೇಟ್‌ ಘರಾಲೂ ಜೇವನ್‌ [ಪಕ್ಕಾ ಮನೀ ಊಟ]. ಒಮ್ಮೆ ಹೋಗಿ ಊಟಾ ಮಾಡಿ ಬರ್ರಿ. ಆಮ್ಯಾಲ ನೀವಽ ಕರೆದು ನನಗ ಹೇಳದಿದ್ದರ ಕೇಳ್ರಿ’

ಅಂದ. ನನಗೆ ಅಚ್ಚರಿಯಾಯಿತು. ಡ್ಯಾಮ ಸೈಟಿನಲ್ಲಿ ದಾಮೋದರನ್‌ ಹೊಟೆಲ್ಲಿನಲ್ಲಿ ಪ್ಲೇಟು ಊಟಕ್ಕೆ ಅರವತ್ತು ಪೈಸೆ. ಸೂಪಾದ ಲಕ್ಕೀ ಹೋಟೆಲ್ಲಿನಲ್ಲೂ ಅಷ್ಟೇ ರೇಟು. ಆದ್ರೆ ಇಲ್ಲಿ ನಲವತ್ತು ಪೈಸೆ. ಯಾವುದಕ್ಕೂ ನಾಳೆ ಸಂಜೆ ಡ್ಯಾಮ ಸೈಟಿನಿಂದ ಬಂದ ಮೇಲೆ ರಾತ್ರಿ ಊಟ್ಟಕ್ಕೆ ಅಲ್ಲಿಗೇ ಹೋಗಬೇಕು ಎಂದು ನಿರ್ಧರಿಸಿದೆ. ಮತ್ತು ಆ ಮೆಸ್ಸು ಇರುವ ವಿಳಾಸವನ್ನೂ ಪಡೆದುಕೊಂಡೆ. ಕೂಡಲೇ ಚಾಂದಗುಡೆಯವರು –

‘’ನಾಳೆ ನಾನ ಕರಕೊಂಡು ಹೋಗತೀನಿ ತಗೋರಿ. ಹೊಸಾ ಊರು ನಿಮಗ. ಎಲ್ಲಾಕಡೆ ತಿರುಗಾಡಿಸಿ ಕೊಂಡು ಬರತೀನಿ. ಬ್ರಿಟಿಷ್‌ ಬಂಗ್ಲೆ, ಬಾಳೀ ಸಾವಕಾರ ಅಂಗಡಿ, ದೇಸಾಯರ ಬಂಗ್ಲೆ, ಶ್ರೀರಾಮ ಹೈಸ್ಕೂಲು, ಪಾಂಡ್ರಿ, ಕಾಳೀ ನದಿಗೂಳು ಸೇರೂ ಸಂಗಮ ಸ್ಥಳಾ, ದುರ್ಗಾ ಮಂದಿರ, ಹಂಗ ಎಲ್ಲಾನೂ ನೋಡಿ ಬರೂನು. ಹ್ಹಹ್ಹಹ್ಹ… ಬೇಕಾದ್ರ ನಮ್ಮ ಶ್ರೀಧರ್‌ ಕಾಣಕೋಣ್ಕರರ ಚಹಾ ಅಂಗಡಿಗೂ ಭೇಟಿ ಕೊಡೂನಲಾ. ಏನಂತೀರಿ’’ ಅಂದರು. ನಾನು ತಲೆಯಾಡಿಸಿದೆ. ನಾಳೆ ಡ್ಯಾಮ್‌ ಸೈಟಿಗೆ ಕಾಳೀ ಪ್ರಾಜೆಕ್ಟಿನ ಮಾಡೆಲ್‌ ಬೆಂಗಳೂರಿನಿಂದ ಲಾರಿಯಲ್ಲಿ ಬರುತ್ತದೆ. ಅದನ್ನು ಇಳಿಸಬೇಕು. ಮುಂಬಯಿಯಿಂದ ಶಾಹ್‌ ಕಂಪನಿಯವರು ಬರುತ್ತಾರೆ. ಡ್ರಿಫ್ಟ ಸರ್ವೇ ಕೆಲಸ ಬೇರೆ ಇದೆ. ತಲೆ ಗೊಂದಲದ ಗೂಡಾಯಿತು. ನನ್ನತ್ತಲೇ ನೋಡುತ್ತಿದ್ದ ಭೈರಾಚಾರಿಯವರು ‘’ಶೇಖರ್‌, ಮೊದ್ಲು ಆಫೀಸೀಗೆ ಹೋಗಿ ನಿಮ್ಮ ಟ್ರಂಕು ಎತ್ಕೊಂಡು ಬಂದುಬಿಡೀಪಾ. ನಾಳೆ ಬೆಳಿಗ್ಗೆ ಸಾಹೇಬ್ರು ಬರ್ತಾ ಇದಾರೆ. ಅವ್ರು ನೋಡಿದ್ರೆ ಪ್ರಾಬ್ಲಮ್ಮು’’ ಎಂದು ಮತ್ತೆ ಎಚ್ಚರಿಸಿದಾಗ ನಾನು ತಕ್ಷಣ ಹೊರಟು ನಿಂತೆ.


[ಮುಂದುವರೆಯುತ್ತದೆ – ಪ್ರತಿ ಶನಿವಾರ ತಪ್ಪದೆ ಓದಿರಿ- ಕಾಳೀ ಕಣಿವೆಯ ಕತೆಗಳು ಪ್ರತಿವಾರ ರೋಚಕ ಕತೆಗಳು]


  • ಹೂಲಿಶೇಖರ್
    (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು)
hoolishekhar
0 0 votes
Article Rating

Leave a Reply

1 Comment
Inline Feedbacks
View all comments
ಲಕ್ಷ್ಮೀ ನಾಡಗೌಡ

ನಕ್ಕೂ ನಕ್ಕೂ ಸಾಕಾಯ್ತು. ಕೋಳಿ, ಹೆಬ್ಬಾವು, ಚಾಳು, ಶೌಚಾಲಯದ ಅವಸ್ಥೆ, ನಿಮ್ಮ ರೂಮಿನ ವರ್ಣನೆ… ದೇವರೇ😄😄 ಮನೆಯವರೆಲ್ಲರಿಗೂ ಓದಿ ಹೇಳಿದಾಗ ಅವರದ್ದೂ ಅದೇ ಪರಿಸ್ಥಿತಿ🤗🤗 Humorous ,ಬರಹ😍💐

Home
Search
All Articles
Videos
About
1
0
Would love your thoughts, please comment.x
()
x
%d bloggers like this:
Aakruti Kannada

FREE
VIEW