‘ಕಾಡಿನ ಸುತ್ತ ಅಮೂಲ್ಯ ಬೆತ್ತ’

ನುರಿತ ಪೀಠೋಪಕರಣ ತಜ್ಞರು ಹೇಳುವ ಪ್ರಕಾರ ಬೆತ್ತದ ಉಪಕರಣಗಳು ೫೦ ರಿಂದ ೬೦ ವರ್ಷಗಳವರೆಗೆ ಬಾಳಿಕೆ ಬರುತ್ತದೆ ಎನ್ನುತ್ತಾರೆ. ನಮ್ಮ ಭಾರತದಲ್ಲಿಯೆ ಸುಮಾರು ೩೦ ಕ್ಕೂ ಹೆಚ್ಚು ಪ್ರಭೇದಗಳು ಬೆತ್ತದಲ್ಲಿ ಕಾಣ ಸಿಗುತ್ತವೆಯಂತೆ. ಇವುಗಳು ಹೆಚ್ಚಾಗಿ ನಮ್ಮ ಕರ್ನಾಟಕದಲ್ಲಿ ಮಲೆನಾಡು ಭಾಗಗಳ ಅರಣ್ಯಗಳಲ್ಲಿ ಕಾಣಸಿಗುತ್ತವೆ ಎನ್ನಲಾಗಿದೆ. 

‘ಬೆತ್ತ’ ಎಂಬ ಹೆಸರನ್ನು ಯಾರು ತಾನೆ ಕೇಳದೆ ಇರೋಕೆ ಸಾಧ್ಯ ಹೇಳಿ. ಚಿಕ್ಕವರಿಂದ ಹಿಡಿದು ಅಜ್ಜಂದಿರವರೆಗೂ ಎಲ್ಲರೂ ಬೆತ್ತವನ್ನು ನೋಡಿರುತ್ತಾರೆ, ಕೇಳಿರುತ್ತಾರೆ. ಕೆಲವರು ಬೆತ್ತದ ರುಚಿಯನ್ನು ಸಹ ಅನುಭವಿಸಿರುತ್ತಾರೆ. ಆದರೆ, ನಾವುಗಳು ಹೆಚ್ಚಾಗಿ ನೋಡಿರುವುದು ಬೆತ್ತದ ಕೋಲುಗಳನ್ನು, ಬೆತ್ತದ ಪೀಠೋಪಕರಣಗಳನ್ನು ಅಷ್ಟೆ. ಅದರ ರಚನೆ, ಬೆಳವಣಿಗೆ ವಿಧಾನಗಳ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಬೆತ್ತವೊಂದು ವಿಶೇಷ ರೀತಿಯ ಸಸ್ಯವರ್ಗವೆಂಬುದು ತಿಳಿಯುತ್ತದೆ. ಕಾಡುಗಳಲ್ಲಿರುವ ವೈಶಿಷ್ಟ್ಯವೆ ಹಾಗೆ ತನ್ನಲ್ಲಿರುವ ಪ್ರತಿಯೊಂದು ಸಸ್ಯ,ಪ್ರಾಣಿ ಸಂಕುಲಗಳಿಗೂ ತನ್ನದೆ ಆದ ವಿಶೇಷತೆಗಳಿವೆ. ಅಂತಹುದೆ ಒಂದು ಅಪರೂಪದ ಸಸ್ಯವರ್ಗ ಬೆತ್ತ(Calamus). ಇದು ನೋಡೊಕೆ ಸ್ವಲ್ಪ ಕಬ್ಬು, ಬಿದಿರಿನಂತೆ ಕಾಣುತ್ತದೆ. ಆದರೆ ಬಳ್ಳೀಯ ಜಾತಿಗೆ ಸೇರಿದ ಮುಳ್ಳಿನ ಸಸ್ಯ. ಭೂಮಿಯಲ್ಲಿ ಬಿದ್ದ ಇದರ ಬೀಜದಿಂದಲೆ ಇದು ನೈಸರ್ಗಿಕವಾಗಿ ಬೆಳೆಯುತ್ತದೆ. ಮಳೆಗಾಲದ ಸ್ವಾಭಾವಿಕ ನೀರು ಇದರ ಬೆಳವಣಿಗೆಗೆ ಸಾಕಾಗುತ್ತದೆ. ಇದರ ಕಾಂಡ ಎಲೆಗಳ ತುಂಬಾ ಮುಳ್ಳುಗಳಿರುತ್ತವೆ.

ಇವುಗಳು ಬಳ್ಳೀಯ ರೂಪದಲ್ಲಿದ್ದು ಎಲೆಯ ಮಧ್ಯದಲ್ಲಿ ರಚಿತವಾಗಿರುವ ತಂತುಗಳ ಸಹಾಯದಿಂದ ಕಾಡಿನ ಮರಗಳ ಪಕ್ಕದಲ್ಲಿ ಸುರುಳೆಯಾಕಾರದಲ್ಲಿ ಹಬ್ಬುತ್ತಾ ಹೋಗುತ್ತವೆ. ಇವುಗಳು ಎಲ್ಲಾ ಬಳ್ಳಿಗಳಂತೆ ಮರಗಳಿಗೆ ಅಂಟಿ ಕೊಂಡಿರುವುದಿಲ್ಲಾ. ಮುಳ್ಳಿನ ಕೊಕ್ಕೆಯಂತಿರುವ ತಂತುಗಳಿಂದ ಹಗ್ಗದ೦ತೆ ಜೋಲುತ್ತಾ ಮೇಲೆ ಏರುತ್ತಾ ಹೋಗುತ್ತದೆ. ಮುಳ್ಳಿನಿಂದ ಆವೃತವಾಗಿರುವ ಕಾಂಡಕ್ಕೆ ಬೆತ್ತ ಎನ್ನುತ್ತಾರೆ.

ಇದರ ಸುತ್ತಲೂ ಆಧಾರವಾಗಿರುವ ಎಲೆ, ಬಳ್ಳಿ ಕೊಕ್ಕೆಗಳಿಗೆ ಬೆತ್ತದ ಹಿಂಡು ಎಂದು ಕರೆಯುವುದುಂಟು.

ಯಾಕೆಂದರೆ ಬೆತ್ತದ ರಚನೆ ಮುಳ್ಳಿನಂತಹ ಹಿಂಡಿನಿಂದಲೆ ಆಗಿರುತ್ತದೆ. ಅದಕ್ಕೆ ಹೇಳುತ್ತಾರೆ,”ಜೇನು ತೆಗೆದವನ ಕೈಯನ್ನು ಜೇನು ಕಚ್ಚದೆ ಬಿಡದು, ಬೆತ್ತ ಕಡಿದವನ ಕೈಯನ್ನು ಮುಳ್ಳು ಚುಚ್ಚದೆ ಇರದು”. ಬೆತ್ತದ ಹಿಂಡಲ್ಲಿ ಆಕಸ್ಮಾತ್ ಸಿಕ್ಕಿ ಬಿದ್ದರೆ ಮೈಯೆಲ್ಲಾ ಗಾಯವಾಗುತ್ತದೆ. ಆದ್ದರಿಂದ ಬೆತ್ತವನ್ನು ಕಡಿದು ಸಂಗ್ರಹಿಸುವಾಗ ತುಂಬಾ ಎಚ್ಚರಿಕೆ ಹಾಗೂ ಅನುಭವ ಅಗತ್ಯ.

ಕಾಂಡವು ಬುಡದಿಂದ ತುದಿಯವರೆಗೂ ಒಂದೆ ದಪ್ಪದಲ್ಲಿರುತ್ತದೆ.ಹಾಗೂ ಹೊರ ಮೈ ನೋಡೊಕೆ ಹಳದಿ ಮಿಶ್ರಿತ ಬಣ್ಣದಿಂದಿದ್ದು ನಯವಾಗಿ ಹೊಳಪಿನಿಂದ ಕೂಡಿರುತ್ತದೆ. ಇದು ದಟ್ಟ ಕಾಡಿನಲ್ಲಿ ತನ್ನ ಪೂರ್ಣಾವಧಿಯಲ್ಲಿ ೧೦೦ ರಿಂದ ೧೫೦ ಮೀಟರ್ ನಷ್ಟು ಎತ್ತರಕ್ಕೆ ಉದ್ದವಾಗಿ ಬೆಳೆಯುತ್ತದೆ ಎನ್ನುತ್ತಾರೆ. ಇದನ್ನು ಉಪಯೋಗಿಸುವಾಗ ಇದರ ಬುಡವನ್ನು ಕತ್ತರಿಸಿ, ಮುಳ್ಳುಗಳಿಂದಿರುವ ಸಿಪ್ಪೆಯನ್ನು ಮೊದಲು ಕತ್ತಿಯಿಂದ ಬೇರ್ಪಡಿಸುತ್ತಾ ಹಿ೦ಡಿನಿ೦ದ ಎಳೆಯುತ್ತಾ ಬರುತ್ತಾರೆ. ನಂತರ ಮೃದುವಾಗಿರುವ ಕಾಂಡದ ತುದಿಯ ಭಾಗಗಳನ್ನು ಕತ್ತರಿಸಿ ಮರಗಳಿಗೆ ಉಜ್ಜಿ ಹೊರ ಮೈ ಮುಳ್ಳುಗಳನ್ನು ತೆಗೆಯುತ್ತಾರೆ. ಆಗ ಬೆತ್ತವು ಕಬ್ಬಿನ ಜಲ್ಲೆಯಂತೆ ನೋಡೋಕೆ ಸ್ವಲ್ಪ ಹಸಿಯಾಗಿ, ಗಟ್ಟಿಯಾಗಿರುತ್ತದೆ. ನಂತರ ಅದನ್ನು ಬೆಂಕಿಯ ಶಾಖಕ್ಕೆ ಇಲ್ಲವೆ ಬಿಸಿಲಿಗೆ ಇಟ್ಟು ಒಣಗಿಸಿ ಗಟ್ಟಿ-ಮುಟ್ಟಾಗಿ ಮಾಡುತ್ತಾರೆ. ಆಮೇಲೆ ಗೃಹ ಕೈಗಾರಿಕೆಗಳಿಗೆ ಉಪಯೋಗಿಸುತ್ತಾರೆ.

ಫೋಟೋ ಕೃಪೆ : International Directory

ಬೆತ್ತಗಳಲ್ಲೂ ಕೂಡ ವೈವಿಧ್ಯತೆಯಿದೆ.ಅರಣ್ಯ ಇಲಾಖೆಯ ವೈಜ್ಞಾನಿಕ ತಜ್ಞರ ಪ್ರಕಾರ ೩೦೦ ಕ್ಕೂ ಹೆಚ್ಚು ಪ್ರಭೇದಗಳು ಇದೆ ಎನ್ನುತ್ತಾರೆ. ನಮ್ಮ ಭಾರತದಲ್ಲಿಯೆ ಸುಮಾರು ೩೦ ಕ್ಕೂ ಹೆಚ್ಚು ಪ್ರಭೇದಗಳು ಕಾಣ ಸಿಗುತ್ತವೆಯಂತೆ. ಇವುಗಳು ಹೆಚ್ಚಾಗಿ ನಮ್ಮ ಕರ್ನಾಟಕದಲ್ಲಿ ಮಲೆನಾಡು ಭಾಗಗಳ ಅರಣ್ಯಗಳಲ್ಲಿ ಕಾಣಸಿಗುತ್ತವೆ ಎನ್ನಲಾಗಿದೆ. ವೈಜ್ಞಾನಿಕವಾಗಿ ಬೆತ್ತವನ್ನು ಕೆಲಾಮಸ್ ರೊಟಾಂಗ್, ಕೆಲಾಮಸ್ ಅಂಡಮಾನಿಕಸ್, ಕೆಲಾಮಸ್ ಲ್ಯಾಟಿಫೋಲಿಯಸ್, ಕೆಲಾಮಸ್ ಫ್ಲಾಜೆಲ್ಲಮ್ ಎಂದು ವರ್ಗೀಕರಿಸಲಾಗಿದೆ. ನಮ್ಮ ಕಡೆಗಳಲ್ಲಿರುವ ಬೆತ್ತಗಳು ಕೆಲಾಮಸ್ ರೊಟಾಂಗ್, ಕೆಲಾಮಸ್ ಲ್ಯಾಟಿಫೋಲಿಯಸ್ ಬೆತ್ತಗಳು ಎಂದು ಸಂಶೋಧಕರು ಹೇಳುತ್ತಾರೆ. ಇವಾಗ ಇದು ಅಳವಿನಲ್ಲಿರುವುದರಿಂದ ಅರಣ್ಯ ಇಲಾಖೆಯವರು ಕಾಡಿನಲ್ಲಿ ಸಿಗುವ ಬೆತ್ತದ ಬೀಜಗಳನ್ನು ಸಂಗ್ರಹಿಸಿ ನರ್ಸರಿ ಮಾಡಿ ಪುನಃ ಕಾಡಿನಲ್ಲಿ ನೇಡುತ್ತಿದ್ದಾರೆ.

ಬೆತ್ತಗಳಲ್ಲಿ ನಾಗಬೆತ್ತ, ಒಂಟಿ ಬೆತ್ತ, ಕಪ್ಪು ಬೆತ್ತ, ಹಂದಿ ಬೆತ್ತ ಹೀಗೆ ಹಲವು ವಿಧದ ಬೆತ್ತಗಳಿವೆ.

ಇತ್ತೀಚಿನ ದಿನಗಳಲ್ಲಿ ಆಕರ್ಷಕವಾದ ಗೃಹವಿನ್ಯಾಸದ ಸಾಮಗ್ರಿಗಳಿಗಾಗಿ ಬೆತ್ತಗಳನ್ನು ಕಡಿದು ಅರಣ್ಯ ಇಲಾಖೆಯ ಕಣ್ಣು ತಪ್ಪಿಸಿ ನಗರ ಭಾಗಗಳಿಗೆ ಮಾರುತ್ತಿದ್ದಾರೆ ಎನ್ನಲಾಗುತ್ತಿದೆ. ಕಾಡುಗಳ್ಳರು ಬೆತ್ತಗಳನ್ನು ಕಡಿದು ಗುರುತು ಸಿಗಬಾರದೆಂದು ಬೀಜಗಳನ್ನು ನಾಶ ಮಾಡುತ್ತಿದ್ದಾರೆ. ಅದರ ಅವಶೇಷಗಳನ್ನು ಮಣ್ಣಿನಲ್ಲಿ ಮುಚ್ಚಿ ಹಾಕುತ್ತಿದ್ದಾರೆ. ಇದರ ಪರಿಣಾಮ ಇಂದು ಬೆತ್ತದ ಸಮೂಹ ಕಡಿಮೆಯಾಗುತ್ತಿದೆ.

ಬೆತ್ತದ ಕೋಲುಗಳನ್ನು ಚಿಕ್ಕ-ಚಿಕ್ಕ ಪೈಪ್ ಗಳ ಮೂಲಕ ಸೇರಿಸಿ ಇಲಾಖೆಯ ಕಣ್ಣು ತಪ್ಪಿಸಿ ಮಧ್ಯವರ್ತಿಗಳಿಗೆ ಕೊಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ಅರಣ್ಯ ಇಲಾಖೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ. ಬೆತ್ತಗಳು ಕಡಿಮೆ ಕರ್ಚಿನಲ್ಲಿ ಹೆಚ್ಚಾಗಿ ಗೃಹೋಪಯೋಗಿ ಪೀಠೋಪಕರಣಗಳಿಗೆ ಉಪಯೋಗವಾಗುವುದರಿಂದ ಅದನ್ನು ಬಳಸುವುದು ಸಹಜ. ಆದರೆ,ಅವುಗಳ ಸಮೂಹವನ್ನು ನಾಶ ಮಾಡಿ ಸ್ವಾರ್ಥಕ್ಕೆ ಬಳಕೆ ಮಾಡುತ್ತಿರುವುದು ತಪ್ಪಾಗಿದೆ. ಅಷ್ಟೆ ಅಲ್ಲದೆ ಬೆತ್ತಗಳಲ್ಲಿ ಕೆಲವು ಔಷದೀಯ ಗುಣಗಳು ಸಹ ಅಡಗಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದರ ಔಷಧಿಯ ಗುಣಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ಕಾದು ನೋಡಬೇಕಿದೆ. ದೃಢತೆ ಹಾಗೂ ಸ್ಥಿತಿಸ್ಥಾಪಕತ್ವ ಗುಣಗಳನ್ನು ಬೆತ್ತವು ಹೊಂದಿರುವುದರಿಂದ ಕೈಗಾರಿಕೆಗಳಿಗೆ ಬೆತ್ತದ ಉಪಯೋಗ ಬಹಳವಿದೆ.

ಫೋಟೋ ಕೃಪೆ : YouTube

ಮುಖ್ಯವಾಗಿ ಬೆತ್ತದ ಉಪಯೋಗಗಳು:

೧. ಬೆತ್ತದ ಉಪಕರಣಗಳಿಗೆ ಮುಖ್ಯವಾಗಿ ಹುಳುಗಳ ಭಾದೆಯಿರುವುದಿಲ್ಲ ಆದ್ದರಿಂದ ದಪ್ಪ ಗಾತ್ರದ ಬೆತ್ತಗಳನ್ನು ಹೆಚ್ಚಾಗಿ ಕುರ್ಚಿ,ಮೇಜುಗಳ ಕಾಲುಗಳು,ಛತ್ರಿಯ ಹಿಡಿಗಳಿಗೆ ಬಳಸುತ್ತಾರೆ.

೨. ಪೋಲೊ ಆಟದ (Polo Games) ಕೋಲುಗಳ ತಯಾರಿಕೆಯಲ್ಲು ಬಳಸುತ್ತಾರೆ.

೩. ಕೆಲವು ಪ್ರಭೇದದ ಬೆತ್ತಗಳನ್ನು ಮದ್ದು, ಗುಂಡುಗಳನ್ನು ಸಂಗ್ರಹಿಸುವ ಪೆಟ್ಟಿಗೆ ತಯಾರಿಕೆಯಲ್ಲಿ ಬಳಸುತ್ತಾರೆ.

೪. ಪೀಠೋಪಕರಣಗಳ ತಯಾರಿಕೆಯಲ್ಲಿ ಬೆತ್ತಕ್ಕೆ ವಿಶೇಷ ಸ್ಥಾನವಿರುವುದರಿಂದ, ಬೆತ್ತವನ್ನು ಯಂತ್ರಗಳ ಮೂಲಕ ಸೀಳಿ ಹೊರಗಿನ ಹೊಳಪು ಪದರವನ್ನು ಬಿಡಿಸಿ ಕತ್ತರಿಸಿ ಹಣೆಯುತ್ತಾರೆ. ಉಳಿದ ಚೂರನ್ನು ಪ್ಯಾಕಿಂಗ್ ವಸ್ತುಗಳಾಗಿ ಉಪಯೋಗಿಸುತ್ತಾರೆ.

೫. ಮೇಜು, ಅಲಂಕಾರಿಕ ಕುರ್ಚಿ, ಮಲಗುವ ಮಂಚಗಳನ್ನು ತಯಾರಿಸುತ್ತಾರೆ. ಇದರ ನಿರ್ವಹಣೆಯೂ ಕೂಡ ಸುಲಭವಾಗಿದೆ. ಅತಿಹೆಚ್ಚು ಭಾರವು ಇರುವುದಿಲ್ಲಾ.

೬. ಗಟ್ಟಿ ಮುಟ್ಟಾದ ಬೆತ್ತಗಳನ್ನು ಹಗ್ಗಗಳಿಗೆ ಬದಲಾಗಿ ಸೇತುವೆಗಳಿಗೆ ಆಧಾರವಾಗಿ ಉಪಯೋಗಿಸುತ್ತಾರೆ. ಕಟ್ಟುಗಳನ್ನು ಕಟ್ಟಲು ಬಳಸುತ್ತಾರೆ.

೭. ಮುಖ್ಯವಾಗಿ ವೃದ್ಧರು ಹಳ್ಳಿಗಳಲ್ಲಿ ಕೈಕೋಲುಗಳಾಗಿ ಬಳಸುತ್ತಾರೆ.

೮. ಹೆಚ್ಚಿನದಾಗಿ, ಅರಣ್ಯ ಸಿಬ್ಬಂದಿ, ಪೋಲಿಸ್ ಸಿಬ್ಬಂದಿಗಳು ಬೆತ್ತದ ಕೋಲುಗಳನ್ನು ಬಳಕೆ ಮಾಡುತ್ತಾರೆ.

೯. ಹಳ್ಳಿಗಳಲ್ಲಿ ಬುಟ್ಟಿ, ದೊಡ್ಡ ಕುಕ್ಕೆ(ಚೂಳಿ) ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.

೧೦.ತುಳು ನಾಡಿನಲ್ಲಿ ಕಂಬಳಗಳ ಸ್ಪರ್ಧೆಯಲ್ಲಿ ಕೋಣಗಳನ್ನು ನಿಯಂತ್ರಿಸಲು ಬಳಸುತ್ತಾರೆ.

೧೧. ಮಂತ್ರಕೋಲು,ಭೂತಕೋಲುಗಳಾಗಿ ಕೂಡ ಪೂಜೆಗಳಲ್ಲಿ ನಾಗಬೆತ್ತಗಳನ್ನು ಬಳಸುವುದಿದೆ.

೧೨. ಚಿಕ್ಕ-ಚಿಕ್ಕ ಅಲಂಕಾರಿಕ ಸಾಮಗ್ರಿಗಳನ್ನು ಕೂಡ ಬೆತ್ತದ ಚೂರಿನಿಂದ ತಯಾರಿಸುತ್ತಾರೆ.

೧೩. ಬೆತ್ತದ ಹಣ್ಣಿನ ತಿರುಳಿನಲ್ಲಿ ಸಿಹಿ ಒಗರು ಮಿಶ್ರ ರುಚಿಯಿರುವುದರಿಂದ ಕೆಲವು ಖಾದ್ಯಯೋಗ್ಯ ತಿನಿಸುಗಳಲ್ಲು ರುಚಿಗೆ ಬಳಸುತ್ತಾರೆ.

೧೪. ಒಣಗಿದ ಬೀಜವನ್ನು ಅಡಿಕೆಯಂತೆ ಕೆಲವು ಕಡೆಗಳಲ್ಲಿ ತಾಂಬೂಲ ಸೇವನೆ ಮಾಡುವಾಗ ಹಾಕುತ್ತಾರೆ.

೧೫. ಕಾಂಡದ ಎಳೆಯ ಚಿಗುರನ್ನು ಸಾಂಬಾರ ಪದಾರ್ಥವಾಗಿಯೂ ಬಳಸುವುದಿದೆ.

೧೬. ಕೆಲವು ಜಾತಿಯ ಬೆತ್ತದ ಬೀಜಗಳನ್ನು ಪುಡಿ ಮಾಡಿ ಹೊಟ್ಟೆಯ ಹುಣ್ಣಿಗೆ ಔಷದೀಯಾಗಿ ಕೂಡ ಬಳಸುತ್ತಾರೆ ಎಂದು ವೈದ್ಯರು ಹೇಳುತ್ತಾರೆ.

೧೭. ಬೆತ್ತದ ಬೇರನ್ನು ಅತಿಸಾರಕ್ಕೆ ಔಷಧವಾಗಿ ವಿದೇಶಗಳಲ್ಲಿ ಸಹ ಬಳಸುತ್ತಾರೆ ಎಂಬುವುದನ್ನು ಓದಿದ್ದೇನೆ.

೧೮. ”ಕೆಲಾಮಸ್ ಟ್ರಾವಂಕೂರಿಕ” ಪ್ರಭೇದದ ಬೆತ್ತದ ಎಳೆಯ ಎಲೆಗಳನ್ನು ‘ಬುದ್ದಿಮಾಂಧ್ಯ’ ರೋಗಕ್ಕೆ ಮದ್ದಾಗಿ ಉಪಯೋಗಿಸಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

೧೯.ಕೆಲವು ದುಬಾರಿ ಹೋಟೆಲ್, ರೇಸ್ಟೋರೆಂಟ್, ಕಾಫಿ ಶಾಪ್ ಗಳಲ್ಲಿ ಬಿದಿರು ಹಾಗೂ ಬೆತ್ತದಿಂದ ಮಾಡಿದ ಸೋಫಾಗಳನ್ನು, ಬಾಗಿಲುಗಳನ್ನು, ಟೀ ಟೇಬಲ್ ಗಳನ್ನು ಬಳಸುತ್ತಾರೆ ನೋಡಿರಬಹುದು.

ಫೋಟೋ ಕೃಪೆ : Pen Folio

ಹೀಗೆ ಬೆತ್ತದಿಂದ ಮಾಡಿದ ವಸ್ತುಗಳು ಹಗುರವಾಗಿ,ಆಕರ್ಷಕವಾಗಿ ಹೆಚ್ಚುಕಾಲ ಬಾಳಿಕೆ ಬರುವುದರಿಂದ ಬೆತ್ತವನ್ನು ಬಹಳಷ್ಟು ಉಪಕರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ.ಕರ್ನಾಟಕ, ಮಹಾರಾಷ್ಟ್ರ, ಬ೦ಗಾಳಗಳಲ್ಲಿ ಬೆತ್ತವನ್ನಾಧರಿಸಿ ಹಲವು ಗೃಹ ಕೈಗಾರಿಕೆಗಳು ಇದೆ. ಕೆಲವು ನುರಿತ ಪೀಠೋಪಕರಣ ತಜ್ಞರು ಹೇಳುವ ಪ್ರಕಾರ ಬೆತ್ತದ ಉಪಕರಣಗಳು ೫೦ ರಿಂದ ೬೦ ವರ್ಷಗಳವರೆಗೆ ಬಾಳಿಕೆ ಬರುತ್ತದೆ ಎನ್ನುತ್ತಾರೆ. ಇಂತಹ ಬೆಲೆ ಬಾಳುವ ಬೆತ್ತದ ಬೆಳವಣೆಗೆಯಲ್ಲಿ ನಮ್ಮ ಸಹಕಾರದ ಅಗತ್ಯವಿದೆ. ನಮ್ಮ ಕಾಡಿನ ಸುತ್ತ ಬೆತ್ತಗಳಿದ್ದರೆ ಅವುಗಳನ್ನು ಕಡಿಯುವ ಮುನ್ನ ಅವುಗಳ ಬೀಜಗಳನ್ನು ಸ೦ರಕ್ಷಿಸುವುದು ಒಳ್ಳೇಯದು. ಇದರಿ೦ದ ಅಮೂಲ್ಯ ಬೆತ್ತದ ಸಸ್ಯ ವರ್ಗವನ್ನು ಹೆಚ್ಚಿಸಬಹುದು.


  • ಲೇಖನ್ ನಾಗರಾಜ್ (ಹರಡಸೆ, ಹೊನ್ನಾವರ)

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW