ಕಾಳೀ ಕಣಿವೆಯ ಕತೆಗಳು, ಭಾಗ – ೧೮  

ಕಾಳೀ ಕಣಿವೆಯಲ್ಲಿ ತ್ರಿಕೋಣ ದೈವೀ ಶಕ್ತಿಗಳು ಇದ್ದುವೇ…?.  ಸೂಪಾದ ಬಲದಂಡೆಯಲ್ಲಿ ಶ್ರೀ ರಾಮ ಇದ್ದ. ಅಲ್ಲಿ ಪ್ರತಿವರ್ಷ ಜಾತ್ರೆ, ಆರಾಧನೆ ನಡೆಯುತ್ತಿತ್ತು.ಎಡದಂಡೆಯಲ್ಲಿ ದುರ್ಗೆ ಅಂದರೆ ಕಾಳಿ ಇದ್ದಳು. ಅಲ್ಲಿಯೂ ಜಾತ್ರೆ,ಉತ್ಸವ ನಡೆಯುತ್ತಿತ್ತು. ಊರಿನ ಪೂರ್ವಕ್ಕೆ ಆಣೆಕಟ್ಟು ಕಟ್ಟುವ ಸ್ಥಳದಲ್ಲಿ ಶೂರ್ಪನಿಕೆ ಇದ್ದಳು. ಅಲ್ಲಿಯೂ ಪೂಜೆ,ಎಡೆ ಕೊಡುವ ಪದ್ಧತಿ ಇತ್ತು. ಡ್ಯಾಮ್ ಕಟ್ಟಿದ ಮೇಲೆ ಈ ಮೂರೂ ಶಕ್ತಿ ಕೇಂದ್ರಗಳು ಶಾಶ್ವತವಾಗಿ ಮುಳುಗಿದವು. ಮುಂದೆ ಓದಿ…

***********

ಬೆಳಕು ತಂದವರ ಕತ್ತಲ ಬದುಕಿನ ಕತೆಗಳು – ಕರ್ನಾಟಕ ವಿದ್ಯುತ್‌ ನಿಗಮದ ನಿವೃತ್ತನ ನೆನಪುಗಳು   * ಸೂಪಾ ಡ್ಯಾಮ್‌ ಸೈಟ್‌,   ೧೯೭೦

ಹೊರಗೆ ಕಚ್ಚೆಸೀರೆ ಉಟ್ಟು ಕೊಲ್ಲಾಪುರ ಮಹಾಲಕ್ಷ್ಮಿಯಂತಿದ್ದವಳು ಇವತ್ತು ಸ್ಕರ್ಟು ಹಾಕಿಕೊಂಡಿದ್ದಾಳೆ

ನಾನು ಪರಿಮಳಾ ಅವರು ಹೇಳಿದ ಮಾತುಗಳನ್ನೇ ಮೆಲುಕು ಹಾಕುತ್ತ ಖೋಲೆಗೆ ಹೋದೆ. ಕೈಕಾಲು ಮುಖ ತೊಳೆದುಕೊಂಡು ಬಟ್ಟೆ ಬದಲಿಸಿದೆ. ಡಬ್ಬದಲ್ಲಿ ಕುಚೇಲನ ಅವಲಕ್ಕಿ, ಬೆಲ್ಲ, ಶೇಂಗಾ ಕಾಳು ಇತ್ತು. ಒಂದು ಮುಷ್ಠಿ ಬಾಯಿಗೆ ಹಾಕಿಕೊಂಡು ಲೋಟ ನೀರು ಕುಡಿದು ಹೊರಬಿದ್ದೆ. ಬಾಗಿಲಿಗೆ ಬೀಗ ಹಾಕುವಾಗ ಪಾಯಖಾನೆಯ ಬಾಗಿಲು ಕಿರ್‌ ಅಂದಿತು. ಅತ್ತ ನೋಡಿದೆ. ವಿಸರ್ಜನೆಗೆಂದು ಹೋಗಿದ್ದ ಪೋಲೀಸನ ಹೆಂಡತಿಯೊಬ್ಬಳು ಈಚೆ ಬಂದಳು.

ಫೋಟೋ ಕೃಪೆ : Homegrown

ನನಗೆ. ಮನೆಯ ಹೊರಗೆ ಹೋಗುವಾಗ ಮರಾಠೀ ಶೈಲಿಯಲ್ಲಿ ಕಚ್ಚೆ ಸೀರೆ ಉಡುತ್ತಿದ್ದ ಆ ಹೆಂಗಸು ಸ್ಕರ್ಟು ಹಾಕಿದ್ದಳು. ನೋಡಿದರೆ ಗುರುತೇ ಹತ್ತುವಂತಿರಲಿಲ್ಲ. 

ಈ ಹೆಂಗಸರೇ ಹಾಗೆ. ಒಂದೊಂದು ಡ್ರೆಸ್ಸಿಗೆ ಒಂದೊಂದು ಥರ ಕಾಣುತ್ತಾರೆ. ನನ್ನ ನೋಡಿ ಕಿಸಕ್ಕೆಂದು ನಕ್ಕು ಕೊರಳಲ್ಲಿಯ ತಾಳಿಯನ್ನು ಮುಂದೆ ತೂಗಾಡಿಸುತ್ತ ತನ್ನ ಮನೆಯತ್ತ ಓಡಿದಳು. ಈ ಊರಿನ ರೀತಿ ರಿವಾಜೇ ನನಗೆ ಅರ್ಥವಾಗಲಿಲ್ಲ. ನೀಲೀ ನಭದಲ್ಲಿ ತೇಲಾಡುವ ಮೋಡಗಳು ಕ್ಷಣ-ಕ್ಷಣಕ್ಕೂ ತಮ್ಮ ಆಕಾರ ಬದಲಿಸುವಂತೆ ಜಗತ್ತು. ಇನ್ನು ಇಲ್ಲಿ ತಾನು ಇಂಥದ್ದನ್ನು ದಿನವೂ ನೋಡಬೇಕು. ನೋಡಿ ಆಕ್ಷಣದಲ್ಲಿಯೇ ಮರೆಯಬೇಕು. . ಓ ! ಮನಸೇ ಕಲ್ಲಾಗು ನೀನು ಎಂದು ಅರ್ಧ ಕಣ್ಣು ಮುಚ್ಚಿಕೊಂಡೇ ಚಾಂದಗುಡೆಯವರ ಮನೆಯತ್ತ ಬಂದೆ. 

ಬರ್ರಿ ನಿಮಗ ರಾಮ ಮಂದಿರ ತೋರಸ್ತೀನಿ

‘’ಹ್ಹಹ್ಹಹ್ಹ… ಬರ್ರಿ… ಬರ್ರಿ. ಪರಿಮಳಾ ಬಾಯಾರು ಚಹಾ-ಪಾನೀ ಭರಪೂರ ಮಾಡೇ ಕಳಿಸಿದ್ರು ಅಂತ ಕಾಣತೈತಿ. ಅವ್ರು ಹಂಗನ ನೋಡ್ರಿ. ಹಚಗೊಂಡ್ರ ಬಿಡೂದನ ಇಲ್ಲ. ಭಾಳ ಛುಲೋ ಹೆಣಮಗಳು’’ 

ಎಂದು ಪರಿಮಳಾ ಅವರನ್ನು ಕುರಿತು ಹೊಗಳಿಕೆ ಮಾತು ಹೇಳಿದರು. 

‘’ಹಾಂ… ಮದಲ ನಿಮಗ ರಾಮಮಂದಿರ ತೋರಸ್ತೀನಿ. ಊರಾಗ ದೊಡ್ಡ ದೇವ್ರು ಅದು. ಅಲ್ಲಿಂದ ಸೀದಾ ಶ್ರೀಧರ ಕಾಣಕೋಣಕರ ಮನೀಗೆ ಹೋಗೂನು. ಅಲ್ಲೇ ಮನಿಯೊಳಗನ ಅವರ ಚಹಾದ ಅಂಗಡಿ ಐತಿ. ಅಂವೇನ ನಮಗ ದುಡ್ಡು-ಪಡ್ಡು ತಗೋದಿಲ್ಲ. ಅಲ್ಲಿ ಚಹಾ ಕುಡ್ದು ಹರಟೀ ಹೊಡಿಯೂದರೊಳಗ ಕತ್ತಲಾನೂ ಅಕೈತಿ. ಅಲ್ಲಿಂದ ಮತ್ತ ಸೀದಾ… ಸಕ್ಕೂಬಾಯಿ ಖಾನಾವಳಿಗೆ ಹೋಗೂನು. ನಿಮ್ಮನ್ನ ಅಕೀಗೆ ಪರಿಚಯ ಮಾಡಿಸ್ತೀನಿ. ಅಕೀನೂ ಭಾಳ ಚುಲೋ ಹೆಣಮಗಳು. ಅಲ್ಲಿ ನೀವು ಊಟಾ ಮಾಡ್ತಿದ್ದಂಗನ ಚಾಳದ ಕಡೆ ಕರಕೊಂಡು ಬರತೀನಿ. ಇಲ್ಲಿ ಮನಿಯೊಳಗ ಹೆಣಮಕ್ಳು ಕಾಯ್ತಿರತಾರು ನೋಡ್ರಿ’’  

ಫೋಟೋ ಕೃಪೆ : Dissolve

ಎಂದು ಕಾರ್ಯಕ್ರಮದ ಮೆನೇಜರಂತೆ ಎಲ್ಲ ಹೊಂದಿಸಿಕೊಂಡು ಅವರೇ ಹೇಳಿದರು. ಹಿಂದಿನಿಂದ ಅವರ ಹೆಂಡತಿ ಶಾರದಾಬಾಯಿ ಮೆಲ್ಲಗೆ ಮರಾಠಿಯಲ್ಲಿ ಕೂಗಿ ಹೇಳಿದರು. 

‘’ನೀವೂ ಅಲ್ಲೇ ಊಟಾ ಮಾಡಿ-ಗೀಡೀರಿ ಮತ್ತ. ನಿಮ್ಮ ಸಲುವಾಗಿ ಕಾಯ್ತಿರತೀನಿ’’ 

ಎಂದದ್ದು ಕೇಳಿತು. ಇವರು  – ‘ನಾನು ಊಟಕ್ಕ ಮನೀಗನ ಬರತೀನಿ. ಪಾಪ.. ಇವ್ರು ಹೊಸಬ್ರು. ಊರು –ಖಾನಾವಳಿ ಗೊತ್ತಿಲ್ಲ. ಇವರೊಬ್ಬರಿಗೆ ಅಲ್ಲೇ ಮಾಡಿಸಿ ಕರಕೊಂಡು ಬರತೀನಿ. ನಾಳಿಯಿಂದ ಅವರ ಹೋಗ್ತಾರು. 

ಎನ್ನುತ್ತ ಹೆಂಡತಿಗೆ ವರದಿ ಒಪ್ಪಿಸಿ ನಡದೇ ಬಿಟ್ಟರು. ಪರಿಮಳಾ ಅವರ ಮನೆ ದಾಟಿಕೊಂಡೇ ನಾವು ರಸ್ತೆಗೆ ಇಳಿಯ ಬೇಕಾಗಿತ್ತು. ಸಧ್ಯ ಅವರು ಕದ ಹಾಕಿಕೊಂಡಿದ್ದರು. 

ಮತ್ತೆ ಕೋಳಿಯ ನೆನಪೂ… ! ಬೆಂಗಳೂರಿನಿಂದ ಬಂದ ನರಸಿಂಹಯ್ಯ ಸಾಹೇಬರೂ…! 

ಸಂಜೆ ಸಮಯವಾದ್ದರಿಂದ ರಸ್ತೆಯಲ್ಲಿ ಜನರ ಓಡಾಟವಿತ್ತು. ನಾವು ಬೈಲಪಾರಾ ಕಡೆ ಅಂದರೆ ನದೀ ದಾಟಿಕೊಂಡು ಊರಿನ ಆಚೆ ಬದಿ ಹೋಗಬೇಕಂದರೆ ಎ.ಇ.ಇ. ನರಸಿಂಹಯ್ಯನವರ ಕಚೇರಿಯ ಮುಂದೆಯೇ ಹೋಗಬೇಕಾಗಿತ್ತು.. ನಾವು ಅಲ್ಲಿ ಹೋಗತ್ತಲೂ ಚಾಂದಗುಡೆಯವರು ಥಟ್ಟನೆ ಮಾತು ನಿಲ್ಲಿಸಿದರು. ‘’ಓಹೋಹೋ…! ನರಸಿಂಹಯ್ಯ ಸಾಹೇಬ್ರು… ಬೆಂಗಳೂರಿಂದ ಬಂದಾರ ನೋಡ್ರಿ. ಅಲ್ಲಿ ನಿಂತಾರಲ್ಲ ಭೈರಾಚಾರಿಯವ್ರ ಎದುರೀಗೆ. ಅವರಽ ನೋಡ್ರಿ. ಕೋಳೀ ನರಸಿಂಹಯ್ಯ ಸಾಹೇಬ್ರು.. ಹಾಂ’’

ನಾನು ಕುತೂಹಲದಿಂದ ಅತ್ತ ನೋಡಿದೆ. ಸಾಧಾರಣ ಎತ್ತರದ, ದಪ್ಪ ಮೈಯ ಸಾದುಗಪ್ಪಿನ ನಡುವಯಸ್ಸಿನ ನರಸಿಂಹಯ್ಯ ಸಾಹೇಬರು ತುಸು ಬಿಗಿ ಮುಖದವರು ಅನಿಸಿತು. ಕಣ್ಣುಗಳು ದುಂಡಗೆ ಕೆಂಪಾಗಿದ್ದವು. ಅವರು ನಮ್ಮತ್ತ ಹೊರಳಿ ನೋಡುತ್ತಲೇ ಚಾಂದಗುಡೆಯವರು ನಡು ಬಾಗಿಸಿ ಕೈಮುಗಿದರು. ಅದು ಸಾಹೇಬರುಗಳಿಗೆ ಆಗಿನ ಕಾಲದಲ್ಲಿ ನಜರಾ ಒಪ್ಪಿಸುವ ರೀತಿಯಾಗಿತ್ತು. ನನಗೆ ಅದೆಲ್ಲ ಗೊತ್ತಿರಲಿಲ್ಲ. ಸುಮ್ಮನೆ ನಿಂತುಬಿಟ್ಟೆ. 

ಹೆಬ್ಬಾವು ಆಫೀಸಿಗೇ ಬಂದು ಹೆಂಗ್ರೀ ಕೋಳೀ ನುಂಗ್ತದೇ? … ಸಾಹೇಬರ ಪ್ರಶ್ನೆ

ಸಾಹೇಬರು ನನ್ನನ್ನು ಒಮ್ಮೆ ದುರುಗುಟ್ಟಿ ನೋಡಿದರು. ಅಲ್ಲಿಯೇ ಇದ್ದ ಭೈರಾಚಾರಿಯವರಿಗೆ ಅದೇನು ಹೇಳಿದರೋ. ಭೈರಾಚಾರಿಯವರು ನಮ್ಮತ್ತ ನೋಡಿ- ‘ಶೇಖರ್‌ ಬನ್ನಿ ಇಲ್ಲಿ…’ ಅಂದರು ತುಸು ದರ್ಪದಿಂದ. ನಾನು ಪೆಚ್ಚನಂತೆ ಚಾಂದಗುಡೆಯವರತ್ತ ನೋಡಿದೆ.

‘’ಶೇಖರ್‌. ಯಾಕೋ ಕರೀತಿದಾರ. ಹೋಗಿ ನಮಸ್ಕಾರ ಅನ್ರಿ. ಅವ್ರು ಮೆಕ್ಯಾನಿಕ್‌ ಡಿವಿಜನ್‌ ಸಾಹೇಬ್ರು….ಇವ್ರೂ ನಮ್ಮ ಹೆಬ್ಲಿ ಸಾಹೇಬರ ಗ್ರೇಡು. ಹೂಂ….ಬರ್ರಿ’’ 

ಎನ್ನುತ್ತ ಅತ್ತ ಕೈಹಿಡಿದು ಕರೆದೊಯ್ದರು. ಇಬ್ಬರೂ ಈಗ ನರಸಿಂಹಯ್ಯ ಸಾಹೇಬರ ಎದುರು ನಿಂತೆವು.

‘’ಇವ್ರೇ ಸರ್‌ ಶೇಖರ್‌ ಅಂತ. ಸರ್ವೇ ಗ್ರೂಪ್‌ನಿಂದ ಬಂದ್ರು. ಒಂದು ದಿನ ನಮ್ಮ ಆಫೀಸಿನಲ್ಲೇ ಉಳ್ಕೊಂಡಿದ್ರು. ನಾಯಕ್‌ ಅವ್ರು ಹೇಳಿದ್ರು ಅಂತ ನಾನೂ ಹೂಂ ಅನ್ನಬೇಕಾಯ್ತು ಸರ್‌…’’

ಭೈರಾಚಾರಿಯವ್ರು ತುಸು ಹೆದರುತ್ತಲೇ ಹೇಳಿದರು. ಸಾಹೇಬರು ಮತ್ತೊಮ್ಮೆ ನನ್ನತ್ತ ತಿರುಗಿ ಹೇಳಿದರು.   

‘’ಅಲ್ರೀ… ಹೆಬ್ಬಾವು ಆಫೀಸಿಗೆಂಗೆ ಬರ್ತದೆ? ಎಲ್ಲಾ ಕಡೆ ಬಂದೋ ಬಸ್ತು ಅದೆ. ಬೆಳಿಗ್ಗೆದ್ದು ಕೋಳಿ ಹೋಯ್ತು ಅಂದ್ರೆ? ನಂಬೋದಕ್ಕೆ ಆಗ್ತದಾ?’’  

ಒಂದ್‌ ಕೋಳೀ ನೋಡೋಕ್‌ ಆಗದಿದ್ದವ್ರು. ನಾಳೆ ಡ್ಯಾಮು ಹೆಂಗ್ರಯ್ಯಾ ಕಟ್ತೀರಿ… ಮಣ್ಣೂ…!

ಅಂದರು. ನನಗೆ ಗಾಬರಿಯಾಯಿತು. ನಾನೆಲ್ಲ ಸಾಹೇಬರಿಗೆ ಹೇಳ್ತೀನಿ ಬಿಡಿ ಅಂದಿದ್ದ ಭಾರಾಚಾರಿಯವ್ರು ಈಗ ನಾನೇ ಸುಳ್ಳು ಹೇಳಿ ಕೋಳಿ ಕದ್ದಿದ್ದೇನೆ ಎಂದು ಅವರ ಹತ್ತಿರ ಹೇಳಿದರೇನೋ. 

‘’ಆ ಮಲಯಾಳೀ ಹೋಟ್ಲವನಿಗೆ ನಮ್ಮ ಆಫೀಸು ಕೋಳೀ ಮೇಲೇನೇ ಕಣ್ಣು. ಹುಷಾರಾಗಿ ನೋಡ್ಕೊಳ್ಳೋಕ್‌ ಆಗ್ಲಿಲ್ವ? ಒಂದು ಕೋಳೀ ನೋಡೋಕ್‌ ಆಗದಿದ್ದವ್ರು ನಾಳೆ ಡ್ಯಾಮ್‌ ಹೆಂಗಯ್ಯಾ ಕಟ್ತೀರಾ? ಹೋಗಿ…ಹೋಗೀ…’’

ಸಾಹೇಬರು ಅಷ್ಟು ಹೇಳಿದವರೇ ಆಫೀಸಿನೊಳಗೆ ಹೋಗಿಬಿಟ್ಟರು. ಭೈರಾಚಾರಿಯವರು ಕಣ್ಣು ಸನ್ನೆ ಮಾಡುತ್ತ ಹೋಗಿ ಹೋಗಿ ಅಂದರು. ಕೂಡಲೇ ಚಾಂದಗುಡೆಯವರು ತಮ್ಮ ಪೈಜಾಮ ಸವರಿಕೊಂಡು ನನ್ನ ಕೈ ಹಿಡಿದು ಕರೆದುಕೊಂಡು ಬೈಲ ಪಾರಿ ಕಡೆ ನಡೆದರು. ನನಗೆ ತುಂಬ ಬೇಜಾರಾಯಿತು. ಕೊನೆಗೂ ನಾನು ಕೋಳೀ ಕಳ್ಳ ಆಗೇಬಿಟ್ಟನಲ್ಲ ಎಂದು. 

‘’ಅವ್ರು ಹಂಗಽ ನೋಡ್ರಿ. ಎಮ್ಮೀಗೆ ಜ್ವರಾ ಬಂದ್ರ ಎತ್ತೀಗೆ ಬರೇ ಹಾಕ್ತಾರು. ನೀವೇನೂ ತಲೀ ಬಿಸೀ ಮಾಡ್ಕೋಬ್ಯಾಡ್ರಿ. ತುರಿಕಿ ಬಂತು. ತುರಿಸ್ಕೊಂಡ್ನಿ ಅಂದ್‌ ಬಿಡ್ರಿ ಅಷ್ಟ’’ 

ಚಾಂದಗುಡೆಯವರು ಸಮಾಧಾನ ಹೇಳಿದರೂ ನನ್ನ ಮನಸಿಗೆ ಮುಳ್ಳು ನಟ್ಟಂತಾಗಿತ್ತು. ಯಥಾಸ್ಥಿತಿಗೆ ಬರಲು ತುಸು ಸಮಯವೇ ಹಿಡಿಯಿತು. 

ಕಾಳಿ ಮತ್ತು ಪಾಂಡ್ರಿ ನದಿಗಳ ಸಂಗಮದಲ್ಲಿ

(ಸೂಪಾದಲ್ಲಿ ಕಾಳಿ ಮತ್ತು ಪಾಂಡ್ರಿ ನದಿಗಳ ಸಂಗಮ ಚಿತ್ರ) ( ಚಿತ್ರ ಸಂಗ್ರಹ : ಚಳಗೇರಿ ವಿ. ಎಸ್ )

ಇಬ್ಬರೂ ಕಾಳೀ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಬ್ರಿಟಿಷ್‌ ಕಾಲದ ಸೇತುವೆ ಮೇಲೆ ಬಂದೆವು. ಅದು ಸೂಪಾದಲ್ಲಿ ಕಾಳೀ ನದಿ ದಾಟಲು ಯಾವುದೋ ಕಾಲದಲ್ಲಿ ಕಟ್ಟಿದ ಹಳೇಯ ಸೇತುವೆ ಇದು. ಬ್ರಿಟಿಷರು ಸ್ವತಃ ನಿಂತು ಇದನ್ನು ಕಟ್ಟಿಸಿದ್ದಾರೆ ಎಂದೂ ಹೊಗಳಿದರು. ಈ ಸೇತುವೆ ಮೇಲೆ ನಿಂತು ಪಶ್ಚಿಮಕ್ಕೆ ನೋಡಿದರೆ ಕಾಳಿ ಮತ್ತು ಪಾಂಡ್ರಿ ನದಿಗಳು ಸಂಗಮವಾಗುವ ಸುಂದರ ದೃಶ್ಯ ಕಾಣುತ್ತದೆ. ಈ ಸಂಗಮದ ಹಿಂದೆ ದಟ್ಟ ಕಾಡು. ಎರಡೂ ಕಡೆ ಚಾಚಿರುವ ಕಾಡು ಹಂಚಿನ ಮನೆಗಳು. ನದಿಯ ದಂಡೆಯಮೇಲೆ ಬೆಳೆದು ನಿಂತಿರುವ ಬಿದಿರು ಮೆಳೆಗಳು, ಹಸಿರಿನಿಂದ ಹೆಣೆದುಕೊಂಡಿರುವ ಗಿಡ-ಬಳ್ಳಿಗಳು. 

ನದಿಗಳ ಸಂಗಮದ ಸ್ಥಳದಲ್ಲಿ ಕಟ್ಟಿದ ದೊಡ್ಡ ಕಲ್ಲಿನ ಕಟ್ಟೆ ಮತ್ತು ಅದರ ಮೇಲಿನ ಮಂಟಪವೂ ಕಾಣುತ್ತದೆ. ಅದರ ಬಳಿ ಹೋಗಬೇಕೆಂದರೆ ತೆಪ್ಪದಲ್ಲಿಯೇ ಹೋಗಬೇಕು. ಇಲ್ಲಿಯೇ ವರ್ಷಕ್ಕೊಂದು ಬಾರಿ ದಸರೆಯಲ್ಲಿ ಜಾತ್ರೆಯಾಗುವುದು. ಅವತ್ತು ರಾಮನ ಪೂಜೆಯಲ್ಲದೆ ಶೂರ್ಪನಖಿಗೆ ಎಡೆಯಾಗುತ್ತದೆ. ಎಂದು ಚಾಂದಗುಡೆಯವರು ಹಿಂದೆ ಹೇಳಿದ್ದನ್ನೇ ಮತ್ತೆ ಹೇಳಿದರು. ಆಗ ನನಗೆ ಇದರ ಬಗ್ಗೆ ಪರಿಮಳಾ ಅವರು ಈ ಮೊದಲೇ ಇದರ ಬಗ್ಗೆ ಹೇಳಿದ್ದಾರೆ ಅಂದುಕೊಂಡೆ. 

ಇದು ಹಳೆಯ ಸೂಪಾ ಅಥವಾ ಮೂಲ ಊರು

(ಚಿತ್ರ : ಸೂಪಾ ಊರಿನ ಫೋಟೋ ಸಂಗ್ರಹ : ಚಳಗೇರಿ ವಿ. ಎಸ್ )

ನಾವು ಸೇತುವೆಯಲ್ಲಿ ನಡೆದು ಈಚೆ ಬಂದಾಗ ಬೈಲ್‌ಪಾರಾ ಸುರುವಾಗುತ್ತದೆ. ಕಪ್ಪು ಹಂಚಿನ ಮನೆಗಳ ಸಾಲುಗಳು ಕಾಣುತ್ತವೆ. ಇದೇ ಹಳೆಯ ಸೂಪಾ. ನದಿಯ ಬಲ ದಂಡೆಯ ಮೇಲೆ ಅನಾದಿ ಕಾಲದಿಂದ ಇರುವ ಊರು. ಇಲ್ಲಿಯೇ ರಾಮ ಮಂದಿರ ಇರುವುದು. ಇಲ್ಲಿಂದ ಒಂದು ಕಿ.ಮೀ. ನದೀಗುಂಟ ಹೋದರೆ ಡ್ಯಾಮ್‌ ಬೆಟ್ಟದಲ್ಲಿ ಶೂರ್ಪನಖಿಯ ಗುಹೆಯೂ ಬಲದಂಡೆಯಲ್ಲಿದೆ. ಶೂರ್ಪನಖಿ ಇಲ್ಲೆಲ್ಲ ಓಡಾಡಿದ್ದಾಳೆ. ರಾಮನ ಗುಡಿ ಕಟ್ಟಿದ ಮೇಲೆ ಆಕೆಗೆ ಇತ್ತ ಬರಲು ನಿರ್ಭಂದವಾಗಿರಲೂ ಬಹುದು. 

ಚಾಂದಗುಡೆಯವರ ಬೆನ್ನ ಹಿಂದೆಯೇ ನಡೆದೆ. ಅಲ್ಲಿ ಪರಿಚಯದವರು ಅವರನ್ನು ಮರಾಠಿಯಲ್ಲಿ ಮಾತಾಡಿಸುತ್ತಿದ್ದರು. ‘’ಕಾಯ್‌… ಓ…! ಪಾವಣ್ಯಾ. ಕಸಾಽ…ಕೀ?’’  ಅನ್ನುತ್ತಿದ್ದರು. 

ಗುಡಿಯ ನೋಡಿರಣ್ಣ… ರಾಮನ ಗುಡಿಯ ನೋಡಿರಣ್ಣ

ರಾಮದೇವರ ಗುಡಿಯ ಮುಂದೆ ನಿಂತಾಗ ನನಗೆ ಕುತೂಹಲ ಇಮ್ಮಡಿಸಿತು. ಮಲೆನಾಡಿನ ಪ್ರದೇಶವಾದ್ದರಿಂದ ಇಲ್ಲಿಯ ಮಳೆಗೆ ಸೂಕ್ತ ರಕ್ಷಣೆ ಸಿಗುವ ರೀತಿಯಲ್ಲಿ ಮಂದಿರದ ವಿನ್ಯಾಸವಿತ್ತು. ಮೇಲ್ಛಾವಣಿಗೆ ಕೆಂಪು ಹಂಚನ್ನು ಹೊದಿಸಿದ್ದರು. ನೋಡಿದರೆ ಪಗೋಡಾ ಥರ ಕಾಣುತ್ತಿತ್ತು. 

(ಚಿತ್ರ -೭, supa ರಾಮ ಮಂದಿರ ಫೋಟೋ ಚಿತ್ರ ಸಂಗ್ರಹ : ಚಳಗೇರಿ ವಿ. ಎಸ್ )

ಒಳಗೆ ತೇಗಿನ ದೊಡ್ಡ ದೊಡ್ಡ ಕಂಬಗಳು, ತೊಲೆಗಳು, ಒಟ್ಟಾರೆ ಕಟ್ಟಿಗೆಯಿಂದಲೇ ನಿರ್ಮಾಣವಾದ ಆಕೃತಿ ಅದು. ಗುಡಿ ನಿರ್ಮಾಣವಾಗಿ ಶತಮಾನಗಳೇ ಕಳೆದಿರಬೇಕು. ಗರ್ಭಗುಡಿಯಲ್ಲಿ ಶ್ರೀ ಸೀತಾ-ರಾಮ- ಲಕ್ಷ್ಮಣರ ಮೂರ್ತಿಗಳು. ಅಲ್ಲಿಯೇ ಆಂಜನೇಯನೂ ಇದ್ದ.  ಭಕ್ತರು ಕೂಡ್ರುವುದಕ್ಕೆ ದೊಡ್ಡ ಹಜಾರ, ನೆಲಕ್ಕೆ ಕೆಂಪು ಬಣ್ಣದ ಸಿಮೆಂಟು ಸಾರಣೆ ಮಾಡಿದ್ದರು. ಗುಡಿಯ ಮುಂದೆ ಒಂದೇ ತೇಗು ಮರದ ಎತ್ತರದ ದೀಪ ಸ್ತಂಭ. ಮೇಲೆ ಹಿತ್ತಾಳೆಯ ಕಳಸಗಳು. ಒಳಗೆ ಹೆಚ್ಚು ಜನರಿಲಿಲ್ಲ. ಆಗೊಬ್ಬರು ಈಗೊಬ್ಬರು ಭಕ್ತರು ಬಂದು ಕೈ ಮುಗಿದು ಹೋಗುತ್ತಿದ್ದರು. ಗರ್ಭ ಗುಡಿಯ ಎದುರು ತಲೆಯ ಮೇಲೆ ನಾಲ್ಕಾರು ದೊಡ್ಡ ಗಂಟೆಗಳನ್ನು ತೂಗು ಹಾಕಲಾಗಿತ್ತು. ಅವು ಭಕ್ತರು ಕೊಟ್ಟದ್ದು ಇರಬೇಕು. ಗೋಡೆಯ ಮೇಲೆ ಮರಾಠಿಯಲ್ಲಿ ಬರೆದ ರಾಮ ನಾಮ ಭಜನಾ ವಾಕ್ಯಗಳು. ಒಳಗೆ ಹೋದರೆ ಏನೋ ನೆಮ್ಮದಿ. ಆರತಿ ತಟ್ಟೆಗೆ ಹತ್ತು ಪೈಸೆಯ ಒಂದು ನಾಣ್ಯ ಹಾಕಿ ರಾಮ ದೇವರನ್ನು ನೋಡುತ್ತ ಕೈ ಮುಗಿದೆ. 

ತ್ರಿಕೋಣ ದೈವೀ ಶಕ್ತಿಗಳು ಕಾಳೀ ಕಣಿವೆಯಲ್ಲಿ ಇದ್ದುವೇ…!

ಎಡ ದಂಡೆಯಲ್ಲಿ ದುರ್ಗಾ ಮಾತೆಯ ಗುಡಿ. ಅದಕ್ಕೆ ಎದುರಾಗಿ ಬಲದಂಡೆಯಲ್ಲಿ ಶ್ರೀ ರಾಮನ ಗುಡಿ. ಇವೆರಡಕ್ಕೂ  ನೇರವಾಗಿ ಪೂರ್ವ ದಿಕ್ಕಿನತ್ತ ನದಿಯ ಹರವಿನ ಕೆಳಗೆ ಒಂದೂವರೆ ಕಿ.ಮೀ. ದೂರದಲ್ಲಿ ಶೂರ್ಪನಖಿಯ ಗುಹೆ. ಈ ಮೂರೂ ತ್ರಿಕೋಣ ಬಿಂದುಗಳು ಈ ಕಣಿವೆಯಲ್ಲಿ ಸಹಜವಾಗಿಯೇ ನಿರ್ಮಿತವಾಗಿವೆ. ಅಂದರೆ ಈ ಮೂರೂ ಶಕ್ತಿ ಬಿಂದುಗಳಿಗೆ ಏನೋ ಅವ್ಯಕ್ತ –ಅಗೋಚರ ಶಕ್ತಿ ಈ ಕಣಿವೆಯಲ್ಲಿ ಇರಲೇಬೇಕು ಅನಿಸಿತು. 

ಒಂದು ಕಡೆ ರಾಮನಿದ್ದ ದಂಡಕಾರಣ್ಯ[ದಾಂಡೇಲಿ] ಮತ್ತು ಶೂರ್ಪನಖಿ ತಿರುಗಾಡುತ್ತ ತನ್ನ ವಾಸ ಸ್ಥಾನ ಮಾಡಿಕೊಂಡಿದ್ದ ಗುಹೆ ಇರುವ ಜಾಗ, ಇನ್ನೊಂದು ಕಡೆ ಶ್ರೀ ರಾಮಚಂದ್ರನ ಶಕ್ತಿ ಕೇಂದ್ರವಾದ ಬಲದಂಡೆಯಲ್ಲಿದ್ದ ಹಳೆಯ ಸೂಪಾ, ಹಾಗೂ ಮತ್ತೊಂದು ಕಡೆ ಕಾಳೀ ಅವತಾರವಾದ ದುರ್ಗೆಯ ಶಕ್ತಿ ಸ್ಥಾನ ನದೀ ಸಂಗಮದ ಎಡದಂಡೆಯಲ್ಲಿತ್ತು. ಆದರೆ ಡ್ಯಾಮು ಕಟ್ಟಿದ ಮೇಲೆ ಯಾರಿಗೂ ಅರ್ಥವಾಗದ ಈ ಮೂರೂ ಶಕ್ತಿ ಸ್ಥಾನಗಳು ಶಾಶ್ವತವಾಗಿ ನಾಶ ಆಗುತ್ತವೆ. ಮುಂದಿನ ತಲೆಮಾರಿಗೆ ನೋಡಲೂ ಸಿಕ್ಕುವುದಿಲ್ಲ. ಅದು ಖಂಡಿತ. ನನ್ನ ತಲೆ ಗಿರ್‌ ಅಂದಿತು. ಇದೂ ಕೂಡ  ವಿಧಿ ಲಿಖಿತವೇ ಇರಬಹುದು. ಕೃಷ್ಣನ ಅವಸಾನದ ನಂತರ ದ್ವಾರಕೆ ಸಮುದ್ರದಲ್ಲಿ ಮುಳುಗಿ ಹೋಯಿತಂತೆ. ಅದಕ್ಕೆ ಬೇರೆ ಏನೋ ಕಾರಣವಿರಬಹುದು. ಆದರೆ ಇಲ್ಲಿಯ ಈ ಮೂರು ದೈವೀಶಕ್ತಿಗಳು ಮುಂದೆ ಸೂಪಾ ಆಣೆಕಟ್ಟಿನಲ್ಲಿ ಮುಳುಗುವುದು ಅಷ್ಟೇ ಸತ್ಯ. ಸೃಷ್ಟಿಯು ಆಗಾಗ ತನ್ನನ್ನು ತಾನೇ ಹೀಗೆ ಪುನರಃ ನಿರ್ಮಾಣ ಮಾಡಿಕೊಳ್ಳುತ್ತದಂತೆ. ಇದೂ ಹಾಗೇ ಇರಬಹುದು. ನನಗೆ ಇಲ್ಲಿಯ ಇಡೀ ಕಾಡೇ ನಿಗೂಢವಾಗಿ ಕಂಡಿತು. 

‘’ಬರ್ರಿ ಹೋಗೂನು. ಶ್ರೀಧರ್‌ ದಾರೀ ಕಾಯ್ತಾರು.  ಮನೀಗೆ ಹೋಗೂನು’’ 

ಎಂದು ಚಾಂದಗುಡೆಯವರು ಹೇಳಿದರು. ಹೊರಗೆ ಬಂದೆವು. ಸ್ವಲ್ಪು ದೂರ ಊರಿನ ಮುಖ್ಯ ರಸ್ತೆಯಲ್ಲಿ ಬರುತ್ತಿದ್ದಂತೆ ಎದುರಿಗೆ ಒಬ್ಬ ಅಜಾನುಬಾಹು ವ್ಯಕ್ತಿಯೊಬ್ಬ ಬಂದು ಚಾಂದಗುಡೆಯವರಿಗೆ ಕೈಮುಗಿದು ಎದುರಿಗೆ ನಿಂತ. 

(ಚಾಂದಗುಡೆಯವರ ಭಾವಚಿತ್ರ)

‘’ಕಾಯ್‌ ಹೋ… ಕಾಕಾ.  ನಮಷ್ಕಾರ… ಕಸಽ ಹೋ…’’ ಎಂದು ದೊಡ್ಡದಾಗಿ ತನ್ನ ಸಹಜ ದನಿಯಲ್ಲಿ ಕೇಳಿದ. 

ಅವನನ್ನು ನೋಡಿದ್ದೇ ತಡ. ಚಾಂದಗುಡೇಯವರು ಕೃತಕ ನಗೆ ದನಿಯಿಂದ ನಗುತ್ತ ಅವನ ಕೈ ಹಿಡಿದು ಹ್ಹೇಹ್ಹೇಹ್ಹೇ… ಎಂದು ನಕ್ಕರು.

ಗೋವಾದ ಆಗಿನ ಕುಖ್ಯಾತ ರೌಡಿ ಪೀಕೇ ದೇವಧರ್‌ ಈಗ ಸೂಪಾದಲ್ಲಿ

‘’ಕಾಯ್‌ ಓ…! ಪೀಕೇ ದಾದಾ. ಹಮ್ಚಾ ಕಡೀ ಸಗಳಾ ಠೀಕ್‌. ತುಮೀ ಕಸಾ ಸಾಂಗ್‌. ಆರಾಮ್‌…ಆರಾಮ್‌ ಅಸಾ… ಕಾಯ್‌?’’ 

ಅಂದರು ಪ್ರತಿಯಾಗಿ. ಪೀಕೇ ದೇವಧರಗೆ ನಮಸ್ಕಾರ ಅಂದೆ. ನೋಡಿದರೆ ಹೆದರಿಕೆ ಬರುವಂಥ ಮುಖಚರ್ಯೆ. ಹಿಂದೀ ಸಿನಿಮಾದ ವಿಲನ್‌ ಕಂ ಹೀರೋ ದಾರಾಸಿಂಗ್‌ನ ಹಾಗೆ ಕಾಣುತ್ತಿದ್ದ.  

‘’ಇವ್ರು ಪೀಕೇ ದೇವಧರ್‌ ಅಂತ. ಇಷ್ಟು ದಿನ ಗೋವಾದಲ್ಲಿದ್ರು. ಈಗ ಸೂಪಾಕ ಬಂದಾರು’’ 

ಎಂದು ನನಗೆ ಪರಿಚಯ ಮಾಡಿಸಿದರು ಚಾಂದಗುಡೆ. ಪೀಕೇ ದೇವಧರ ನಕ್ಕು ‘’ಆಗಾಗ ಇತ್ತಾ ಕಡೆ ಬರ್ರಿ’’

ಅನ್ನುತ್ತ ಮುಂದೆ ಹೋದರು.    

‘’ಅವ್ರು ಗೋವಾದೊಳಗ ದೊಡ್ಡ ಅಡ್ಡಾವಾಲಾ ಅದಾರೀ ಹೂಂ…. ಬೇಕಾದ್ರ ಇವ್ರಿಗೆ ಪೀಕೇ ದಾದಾ ಅನ್ರಿ. ಗೋವಾ ಪೋಲೀಸ ಠಾಣಾದಾಗ ಇವರ ಹೆಸ್ರು ಖಾಯಂ ಕುಂತ಼ಽ ಬಿಟೈತಿ ನೋಡ್ರಿ. ಅಷ್ಟಽ ಅಲ್ಲ. ಸ್ವಂತಕ್ಕ ಒಂದು ಬೋಟೂ ಖರೀದಿ ಮಾಡಿ ವಾಸ್ಕೋದಾಗ ಇಟ್ಟಿದ್ದರಂತ. ಅದೇನಾತೋ…ಏನೋ. ಪೋಲೀಸರ ಕೇಸಿನಾಗ ಸಿಕ್ಕು ಎರಡು ವರ್ಷ ಪಣಜೀ ಜೇಲಿನಾಗ ಇದ್ದರಂತ. ಹೂಂ… ಅಲ್ಲಿ ಪೋಲೀಸ್ರು ಇವ್ರ ಹಿಂಬಡದ ನರಾನ ಕಿತ್ತು ಕಳಿಸ್ಯಾರಂತ್ರೆಪಾ…. ಹೂಂ… ನೋಡ್ರಲ್ಲೆ… ಕುಂಟಗೋತ ಹೆಂಗ ಹೊಂಟಾನು ಮನಿಶಾ. ಇವ್ರೂ ಸೂಪಾ ಮೂಲದಾವ್ರನ ಅಂತ. ಕಾಳೀ ನದಿ ನೀರು ಕುಡದ಼ಽ ದೊಡ್ಡಾಂವಾ ಆದದ್ದು. ಮುಂದ ಗೋವಾಕ್ಕ ಹ್ವಾದಾಂವ ಈಗ ಬಂದಾನು. ಇಂವನ ಹಕೀಕತ್ತು ತಗೊಂಡು ನಮಗೇನ್‌ ಆಗೂದೈತ್ರೀ? ಅವನೌವ್ನ. ಊರ ಸುದ್ದೀಗೆ ಮುಲ್ಲಾ ಸೊರಗಿದ್ನಂತ…. ಹ್ಹಹ್ಹಹ್ಹ…’’

ಫೋಟೋ ಕೃಪೆ : Noor Alam

ಪೀಕೇ ದೇವಧರನ ಪರಿಚಯ ನನಗೂ ಆಯಿತು. ಒಂದೆರಡು ಸಲ ಅವನ ಜೊತೆ ಗೋವಾಕ್ಕೂ ಹೋಗಿ ಬಂದೆ. ಅದೇ ಕಾರಣವಾಗಿ ಮುಂದೆ ನಾನು ‘ಒಂದು ರಾತ್ರಿಯ ಪಯಣ’ ಎಂಬ ಕಾದಂಬರಿ ಬರೆದೆ

ಅನ್ನುತ್ತ ತಾವೇ ಊರ ಸುದ್ದಿ ಹೇಳುತ್ತ ನಡೆದರು. ನನಗೆ ಪೀಕೆ ದೇವಧರ ಬಗ್ಗೆ ಕುತೂಹಲವಾಯಿತು. ಅವನ ಬಗ್ಗೆ ಇನ್ನಷ್ಟು ತಿಳಿದು ಮುಂದೆ ರೌಡಿಗಳ ಬಗ್ಗೆಯೂ ಕತೆ ಬರೆಯಬೇಕು ಎಂದು ಹೊಳಹು ಹಾಕಿದೆ. 

ಮುಂದೆ ನಾನು ಸೂಪಾ ಬಿಡುವವರೆಗೆ ಈ ಪೀಕೆ ದೇವಧರ ನನಗೆ ಗೆಳೆಯನೂ ಆದ. ಒಂದೆರಡು ಸಲ ಅವನೊಂದಿಗೆ ಗೋವಾಕ್ಕೂ ಹೋಗಿ ಬಂದೆ. 

ಅಲ್ಲಿ ಅವನ ವ್ಯವಹಾರಗಳ ಬಗ್ಗೆ ಮಾಹಿತಿ ಪಡೆಯುವಲ್ಲಿ ನಾನು ವಿಫಲನಾದರೂ ಅಲ್ಲಿಯ ಕೆಲವು ಚಟುವಟಿಕೆಗಳು ಹಾಗೂ ರೌಡಿಗಳ ವಿವರಗಳಿಂದ ದೊರೆತ ಮಾಹಿತಿಗಳಿಂದಾಗಿ ಮುಂದೆ ನಾನು ‘ಒಂದು ರಾತ್ರಿಯ ಪಯಣ’ ಎಂಬ ಕಿರು ಕಾದಂಬರಿ ಬರೆಯಲು ಕಾರಣವಾಯಿತು.  

(ಹೂಲಿಶೇಖರ್ ಅವರ ಕಾದಂಬರಿ ‘ಒಂದು ರಾತ್ರಿಯ ಪಯಣ’ಮುಖಪುಟ )

ಬಿದಿರು ತಟ್ಟಿಯ ಮನೆಯ ಛಾವಣಿಯೇ ಒಣ ಮೀನು ಅಂಗಡಿಯಾಗಿತ್ತು

ಶ್ರೀಧರ್‌ ಕಾಣಕೋಣಕರ ಮನೆಯ ಬಳಿ ನಾವು ಬಂದಾಗ ಮನೆಯಲ್ಲಿ ದೀಪ ಬೆಳಗತೊಡಗಿತ್ತು. ಕುಂಬಾರವಾಡಾ ಕಡೆಗೆ ಹೋಗುವ ರಸ್ತೆಯಲ್ಲಿ ನದಿಗೆ ಹೊಂದಿಯೇ ಶ್ರೀಧರ ಮನೆ ಇದ್ದದ್ದು.

ಮನೆಯ ಮುಂದೆ ಬಿದಿರಿನಿಂದ ಕಟ್ಟಿ ಸಾರಣೆಮಾಡಿದ್ದ ಒಂದು ಅಗಲವಾದ ಛಾವಣಿ. ಅದನ್ನೇ ಅವರು ಒಣ ಮೀನು ಅಂಗಡಿಯನ್ನಾಗಿ ಮಾಡಿಕೊಂಡಿದ್ದರು. ಬಿದಿರು ಬುಟ್ಟಿಯಲ್ಲಿ ನಾನಾ ಜಾತಿಯ, ನಾನಾ ಆಕಾರದ ಉಪ್ಪು ಹಚ್ಚಿ ಒಣಗಿಸಿ ತಂದ ಮೀನುಗಳನ್ನು ತುಂಬಿ ಇಟ್ಟಿದ್ದರು.

ಇಡೀ ಛಾವಣಿಯನ್ನು ಒಂದು ಗುಬ್ಬೀ ಕಂದೀಲು ಬೆಳಗುತ್ತಿತ್ತು. ಆಗ ಸೂಪಾದಲ್ಲಿ ಬೀದಿ ಲೈಟು ಬಿಟ್ಟರೆ ಹೆಚ್ಚಿನ ಯಾವ ಮನೆಗಳಿಗೂ ಕರೆಂಟು ದೀಪಗಳಿರಲಿಲ್ಲ. ಸರಕಾರೀ ಕಟ್ಟಡಗಳಿಗೆ ಮತ್ತು ಹಣ ಕಟ್ಟಿದ ಕೆಲವೇ ಕೆಲವು ಅನುಕೂಲಸ್ಥರ ಮಾತ್ರ ಮನೆಗಳಿಗೆ ಕರೆಂಟು ಸರಬರಾಜಿತ್ತು. ಈಗಿನಂತೆ ಸರಕಾರದ ಭಾಗ್ಯಜ್ಯೋತಿ ಆಗಿನ್ನೂ ಬಂದಿರಲಿಲ್ಲ. ಯಾಕಂದರೆ ಕರೆಂಟು ಆಗಿನ ಕಾಲಕ್ಕೆ ಎಲ್ಲರ ಕೈಗೆ ಸಿಗುವ ಬೇಕಾಬಿಟ್ಟಿ ವಸ್ತುವಾಗಿರಲಿಲ್ಲ. ಅದರಿಂದ ಎಲ್ಲರ ಮನೆಯಲ್ಲಿ ಚಿಮಣೀ ಎಣ್ಣೆಯ ದೀಪಗಳೇ ಉರಿಯುತ್ತಿದ್ದವು. ದೀಪ ಹಚ್ಚಲು ಸೀಮೆ ಎಣ್ಣೆಗಾಗಿ ಯಾರೂ ಕಷ್ಟಪಡಬೇಕಾಗಿರಲ್ಲಿಲ್ಲ. ಕಿರಾಣಿ ಅಂಗಡಿಗಳಲ್ಲಿ ಅದು ಸಲೀಸಾಗಿ ಅಕ್ಕಿ ಬೇಳೆಯಂತೆ ಸಿಗುತ್ತಿತ್ತು.  

(ಚಿತ್ರ : ಗುಡಿಸಲಲ್ಲಿ ಗುಬ್ಬೀ ಕಂದೀಲು) ಫೋಟೋ ಕೃಪೆ : Littlegate publishing 

ಮನೆಯ ಬಾಗಿಲಲ್ಲಿ ನಾವು ನಿಲ್ಲುತ್ತಿದ್ದಂತೆ ಶ್ರೀಧರ ಕಾಣಕೋಣಕರ ನಗುತ್ತಲೇ ನಮ್ಮನ್ನು ಸ್ವಾಗತಿಸಿದ. ಬಾಗಿಲಿಗೆ ಹೊಂದಿ ಎಡ ಭಾಗಕ್ಕೆ ಈ ಮೀನು ಅಂಗಡಿಯ ಛಾವಣಿಯಿತ್ತು. ಆ ಅಂಗಡಿಯಲ್ಲಿ ಇಟ್ಟಿದ್ದ ಥರಾವರಿ ಒಣ ಮೀನುಗಳ  ಬುಟ್ಟಿಯನ್ನು ನೋಡಿದೆ. 

ಸಮುದ್ರದಲ್ಲಿ ಎಂಥೆಂಥ ಆಕಾರದ, ಎಂಥೆಂಥ ಜಾತಿಯ ಮೀನುಗಳು ಸಿಗುತ್ತವೆ ಎಂದು ನೋಡಬೇಕಾದರೆ ಇಂಥ ಒಣ ಮೀನು ಅಂಗಡಿಗೆ ಹೋಗಿ ನೋಡಬೇಕು.ಒಂದೊಂದು ಮೀನು ಜಾತಿಗೆ ಒಂದೊಂದು ಬುಟ್ಟಿ. ಸೀಗಡೀ ಮೀನು, ಜಿಂಗೀ ಮೀನು, ಹಾವು ಮೀನು, ತಾರಲೆ ಮೀನು, ಬಾಂಗಡೆ ಮೀನು, ಹಾವುಸೆ ಮೀನು, ಕಾಣೇ ಮೀನು ಹೀಗೆ ಇನ್ನೂ ಅನೇಕ ಜಾತಿಯಮೀನುಗಳನ್ನು ಅಲ್ಲಿ ಉಪ್ಪು ಹಚ್ಚಿ ಒಣಗಿಸಿ ಇಡಲಾಗಿತ್ತು. ಅವು ಒಣಗುಸುದ ಮೀನುಗಳಾಗಿದ್ದರಿಂದ ವಿಪರೀತ ವಾಸನೆ ಅವಕ್ಕೆ. ಅಲ್ಲಿ ನಿಲ್ಲಬೇಕಂದೆ ಮೀನು ವಾಸನೆ ಸಹಿಸಿಕೊಳ್ಳಲು ಸಿದ್ಧರಿರಬೇಕು ಅಷ್ಟೇ. ಚಾಂದಗುಡೆಯವರು ಸ್ವತಃ ಮೀನು ತಿನ್ನುತ್ತಿದ್ದುದರಿಂದ ಅದೆಲ್ಲವೂ ಅವರಿಗೆ ಸಹ್ಯವಾಗಿತ್ತು. 

ಮೀನು ಬುಟ್ಟಿಯ ಬಳಿ ಎರಡು ಬೆಕ್ಕುಗಳು ಮಲಗಿದ್ದರೂ ಅವು ಬುಟ್ಟಿಗೆ ಬಾಯಿ ಹಾಕುತ್ತಿರಲಿಲ್ಲ. ಯಾಕಂದರೆ ಅವುಗಳನ್ನು ಕಾಯಲು ಶ್ರೀಧರ ತಾಯಿ ಮತ್ತು ಎಂಟು ವರ್ಷದ ವಿನಯ ಕೋಲು ಹಿಡಿದು ಕೂತಿದ್ದರು. ಚಾಂದಗುಡೆಯವರು ಒಮ್ಮೆ ಮುದುಕಿಗೆ ನಮಷ್ಕಾರ ಹೇಳಿದರು.

‘’ಹ್ಹಹ್ಹಹ್ಹ… ಇವ್ರು ಶ್ರೀಧರ ತಾಯಿ. ಇವರ಼ಽ ಮೀನು ಅಂಗಡಿ ನೋಡ್ಕೊಳ್ಳೂದು. ಎಲ್ಲಾ ಥರದ ಒಣಾ ಮೀನು ಇಲ್ಲಿ ಸಿಗತಾವು ನೋಡ್ರಿ’’ 

ಚಾಂದಗುಡೆಯವರು ನಗುತ್ತ ಹೇಳಿದರಾದರೂ ನನಗೆ ಮಾತ್ರ ಆ ಮೀನಿನ ವಾಸನೆ ತಡೆಯಲಾಗಲಿಲ್ಲ. ಆದರೆ ಇಂಥ  ಮೀನು ವಾಸನೆ ಇಲ್ಲದಿದ್ದರೆ ಈ ಭಾಗದವರಿಗೆ ಊಟವೇ ಸೇರುವುದಿಲ್ಲವಂತೆ.  

( ಚಿತ್ರ: ಮಾರಾಟಕ್ಕೆ ಇಟ್ಟ ಬುಟ್ಟಿಯಲ್ಲಿನ ಒಣ ಮೀನುಗಳು ) ಫೋಟೋ ಕೃಪೆ : wikimedia common

ಈ ಬುಟ್ಟಿಗಳಿಂದಾಗಿ ಇಡೀ ಮನೆಯೆಲ್ಲ ಮೀನು ವಾಸನೆಯಿಂದ ತುಂಬಿಹೋಗಿತ್ತು. ಅದೇನು ದೊಡ್ಡ ಮನೆಯಲ್ಲ. ಸಣ್ಣದಾದ ಮಣ್ಣಿನ ಗೋಡೆಯ ಗೂಡು. ಮೇಲೆ  ಕಪ್ಪು ಹಂಚು ಹೊದಿಸಿದ್ದರು. ಶ್ರೀಧರ ಅವರ ಕಿರಿಯ ಸೋದರ  ವಿನಯ ಒಂದು ತಟ್ಟೆಯಲ್ಲಿ ಒಣ ಮೀನುಗಳನ್ನು ಎತ್ತಿಕೊಂಡು ಅಡುಗೇ ಮನೆಯತ್ತ ಹೋದ. ಬಹುಶಃ ನಾವು ಬಂದೆವೆಂದು ಹುರಿಯಲು ತಗೆದುಕೊಂಡು ಹೋಗಿರಬೇಕು ಎಂದುಕೊಂಡೆ.

‘ಇಲ್ಲ…ನಾನು ಮೀನು ತಿನ್ನುವುದಿಲ್ಲ’ ಎಂದು ಮೊದಲೇ ಅವರಿಗೆ ಹೇಳಿದೆ. ಮನೆ ಹಳೆಯ ಕಾಲದ್ದು. ನೆಲಕ್ಕೆ ಸಿಮೆಂಟೂ ಹಾಕಿರಲಿಲ್ಲ. ಊರೇ ಮುಳುಗಿ ಹೋಗೋವಾಗ ಮನೇ ಬಗ್ಗೆ ಯಾಕೆ ಚಿಂತೆ ಮಾಡೋದು ಎಂದು ಹೇಳಿ ಶ್ರೀಧರ್‌ ನಕ್ಕ. 

ಒಳಗೆ ಜಗುಲಿಯ ಮೇಲೆ ಅವರ ತಾಯಿ ಚಾಪೆಯ ಮೇಲೆ ಮಲಗಿತ್ತು. ಅದಕ್ಕೆ ಮೂರು ದಿನದಿಂದ ಜ್ವರವಂತೆ. ಊರಿನ ಡಾಕ್ಟರ ತಿನೈಕರ [ಊರು ಮುಳುಗಿದ ನಂತರ ಅವರು ಗೋವಾ ಕಡೆಗೆ ಹೋದರು] ಎಣ್ಣೆ-ಗುಳಿಗೆ ಕೊಟ್ಟಿದ್ದಾರಂತೆ. ಅದೇನಿಲ್ಲ. ಒಂದು ಲೋಟ ಹೆಚ್ಚಿಗೆ ಗೋವಾ ಫೆನ್ನಿ ಕುಡಿಸಿದ್ರೆ ಎಲ್ಲ ನೋವು ಹೋಗ್ತದೆ ಎಂದು ಶ್ರೀಧರ ನಕ್ಕು ಹೇಳಿದ. .  

ನಿಮಗೆ ದಶಕಗಳ ಹಿಂದಿನ ತೆಲಗೀ ನಕಲೀ ಛಾಪಾ ಕಾಗದದ ಬಹುಕೋಟಿ ಹಗರಣ ನೆನಪಿದೆಯಾ? ಈ ಹಗರಣದ ಮೂಲಕ್ಕೆ ಕೈ ಹಾಕಿದ್ದು ಇದೇ ಶ್ರೀಧರನ ಎಂಟು ವರ್ಷದ ತಮ್ಮ

ನಾನು ಕಾಣಕೋಣಕರ ಮನೆಗೆ ಬರುವ ಸಂದರ್ಭದಲ್ಲಿ ಅಲ್ಲಿ ಬಾಗಿಲ ಬಿದಿರು ಚಾವಣಿಯಲ್ಲಿ ಮೀನು ಬುಟ್ಟಿಗಳನ್ನು ಇಟ್ಟುಕೊಂಡು ನೊಣ ಹೊಡೆಯುತ್ತ ಕೂತಿದ್ದ ಎಂಟು ವರ್ಷದ ಹುಡುಗನ ಬಗ್ಗೆ ಹೇಳಿದ್ದೆನಲ್ಲ. ಆತ ಶ್ರೀಧರ ಕಾಣಕೋಣಕರರ ಇನ್ನೊಬ್ಬ ತಮ್ಮನಂತೆ. ಆತನ ಕೆಲಸ ಅಂದರೆ ಮೀನು ತುಂಬಿದ ಬುಟ್ಟಿಯ ಮೇಲೆ ಹಾರುತ್ತಿದ್ದ ನೊಣಗಳನ್ನು ಕೋಲಿನಿಂದ ಓಡಿಸುವುದು. ಸೂಪಾ ಊರು ಮುಳುಗಿದ ನಂತರ ಈ ಕಾಣಕೋಣಕರ ಕುಟುಂಬ ಖಾನಾಪುರಕ್ಕೆ ಎತ್ತಂಗಡಿಯಾಯಿತು. ಅಲ್ಲಿ ಈ ಹುಡುಗನೇ ಮುಂದೆ ತೆಲಗೀ ನಕಲೀ ಛಾಪಾ ಕಾಗದ ಪ್ರಕರಣದಲ್ಲಿ ಆರೋಪಿಯನ್ನು ಹಿಡಿದುಕೊಟ್ಟು ಒಂದೇ ದಿನಕ್ಕೆ ಪ್ರಸಿದ್ಧನಾದ. ಆಗ ಕೋಣಕೋಣಕರ ಹೆಸರೂ ಎಲ್ಲರ ಬಾಯಲ್ಲಿತ್ತು.  

ಮುಂದೆ ಸೂಪಾ ಊರು ಮುಳುಗಡೆಯಾದ ನಂತರ ಶ್ರೀಧರ ಕಾಣಕೋಣಕರ ಮತ್ತು ಅವರ ಸಹೋದರರು ಖಾನಾಪುರ, ಬೆಳಗಾಂವ, ಗೋವಾ ಕಡೆಗೆ ಹೋಗಿ ತಮ್ಮ ವ್ಯವಹಾರ ಕುದುರಿಸಿಕೊಂಡರಂತೆ. ಅಂದು ಸೂಪಾ ಊರಲ್ಲಿ ಸಣ್ಣ ಮೀನು ವ್ಯಾಪಾರ ಮಾಡುತ್ತ, ಬಿದ್ದು ಹೋಗುವಂತಿದ್ದ ಹಳೆಯ ಮನೆಯಲ್ಲಿ ಜೀವನ ಮಾಡುತ್ತಿದ್ದ ಈ ಕಾಣಕೋಣಕರ ಸಹೋದರರು ಈಗ ಕೋಟಿ ಕೋಟಿ ಸಂಪಾದಿಸಿದ್ದಾರಂತೆ. ಖಾನಾಪುರ, ಬೆಳಗಾಂವ, ಗೋವಾಗಳಲ್ಲಿ ದೊಡ್ಡ ಮನೆಗಳೂ, ಕಾರುಗಳೂ, ಲಾರಿಗಳೂ ಇವೆಯಂತೆ. ಅಲ್ಲಿ ಅದೇನು ಬಿಜಿನೆಸ್ಸು ಮಾಡಿಕೊಂಡಿದ್ದಾರೋ ತಿಳಿಯದು.

 

(ಚಿತ್ರ:  ಛಾಪಾ ಕಾಗದ ಪೋಟೋ) ಫೋಟೋ ಕೃಪೆ : Delcampe

ಈಗ ಸಕ್ಕೂಬಾಯಿಯ ಖಾನಾವಳಿಯತ್ತ ಹೊರಟೆವು

ಮಾತಿನ ಮಧ್ಯ ಶ್ರೀಧರ ಹೇಳಿದ.

‘’ಸ್ವಲ್ಪ ದಿನ ಅಷ್ಟೇ ನಾನು ಡ್ಯಾಮಿನಲ್ಲಿ ಕೆಲಸ ಮಾಡೋದು. ಬ್ಯಾಂಕಿಗೆ ಸಾಲ ಕೇಳೀದೀನಿ. ಸಿಕ್ಕ ಕೂಡ್ಲೇ ಒಂದು ಮಿನಿ ಟ್ರಕ್ಕು ತಗೋತೀನಿ. ಕಾರವಾರ, ಗೋವಾ, ಲೋಂಡಾಕ್ಕೆ ಮೀನು ಟ್ರಿಪ್ಪು ಬೇಕಾದಷ್ಟು ಸಿಗ್ತದೆ. ಮನೇಲಿ ಅಪ್ಪ ಇಲ್ಲ. ತಮ್ಮಂದಿರು-ತಾಯಿ ಜವಾಬ್ದಾರಿ ಎಲ್ಲ ನನ್ನ ಮೇಲೇ ಇದೆ. ಈ ಸರಕಾರೀ ಕೆಲಸ ಅಂದ್ರೆ ನಮ್ಮಂಥೋರಿಗೆ ಹೊದ್ಕೋಳ್ಳೋಕೂ ಆಗೋಲ್ಲ. ಹಾಸ್ಕೋಳ್ಳೂಕೂ ಆಗೋಲ್ಲ. ಕೈಯಲ್ಲಿ ಒಂದಷ್ಟು ದುಡ್ಡು ಮಾಡ್ಕೋಬೇಕು ಅಂದ್ರೆ. ನಮಗೆ ಬಿಜಿನೆಸ್ಸೇ ಸರಿ’’  

ಅಂದ. ಚಾಂದಗೋಡಿಯವರು ನನ್ನತ್ತ ನೋಡಿ ‘ಖರೇ… ಖರೇ…’ ಎಂದು ನಕ್ಕರು. ಚಹಾ- ಪಾನೀ ಆಯಿತು. ವಾರದ ಹಿಂದೆ ಮಾಡಿದ್ದ ಶಂಕರಪೋಳೆ ತಿಂಡಿಯೊಂದಿಗೆ ಚಹ ಕುಡಿದು ಎದ್ದೆವು. ನನಗೆ ಅಲ್ಲಿ ಮೀನು ವಾಸನೆ ತಡೆಯಲಾಗಿರಲಿಲ್ಲ. ಕತ್ತಲವೂ ಆಗಿತ್ತು. ಚಾಂದಗುಡೆಯವರಿಗೆ ಮನೆಯ ನೆನಪಾಯಿತು. ಬರ್ತೀವಿ ಶ್ರೀಧರ್‌ ಅನ್ನುತ್ತ ಸಕ್ಕೂಬಾಯಿಯ ಖಾನಾವಳಿಯತ್ತ ಹೊರಟೆವು.

ಕಾಶ್ಮೀರ ಕಿ ಕಲೀ’ ಗೋಮ್ಲಿ [ಲಂಬಾಣೀ ಹುಡುಗಿ], ಇಂಡಿಯಾ ಸುಂದರಿ ಸಾಯಿರಾಬಾನು [ಫ್ಲೋರಿನಾ], ಘರ್‌ವಾಲಿ ಮಾಲಾಸಿನ್ಹಾ [ಪರಿಮಳಾ] ರಂಥ ಹುಡುಗಿಯರನ್ನು ನೋಡಿದ ಮೇಲೆ ಈಗ ಹೇಮಾಮಾಲಿನಿಯಂಥ ಹುಡುಗಿಯೂ ಅಲ್ಲಿ ಥಟ್ಟನೇ ಕಂಡಳು

ಫೋಟೋ ಕೃಪೆ : News24 (ಹೇಮಾಮಾಲಿನಿ)

ಬೀದೀ ದೀಪಗಳು ಅಲ್ಲೊಂದು-ಇಲ್ಲೊಂದು ಹತ್ತಿದ್ದವು. ನಡುವೆ ಕತ್ತಲೆ ದಾರಿಯೂ ಇತ್ತು. ಹಂದಿಗಳು ಅಲ್ಲಿಯೂ ಇದ್ದವು. ಕೆಲವರು ಸೈಕಲ್ಲಿಗೆ ಟಾರ್ಚು ಹಾಕಿಕೊಂಡು ಮನೆಯತ್ತ ಹೊರಟಿದ್ದರು. ಅಲ್ಲೇ ಹತ್ತಿರದಲ್ಲಿಯೇ ಹರಿಯುತ್ತಿದ್ದ ಕಾಳಿ ನದಿ ಮೌನವಾಗಿ ಜುಳು ಜುಳು ಅನ್ನುತ್ತಿತ್ತು. ಅಲ್ಲಿಯೇ ಎಡಗಡೆ ಸಿಂಡಿಕೇಟ ಬ್ಯಾಂಕಿನ ಶಾಖೆ ಇತ್ತು. ಕಾವಲುಗಾರ ಬಂದೂಕು ಹಿಡಿದು ನಿಂತಿದ್ದ. ಅದರ ಪಕ್ಕದಲ್ಲಿಯೇ ಒಂದು ದೊಡ್ಡ ಮನೆ. ಅದು ದೇಸಾಯರ ಮನೆ. ಅವರೆಲ್ಲ ಈಗ ಬೆಳಗಾವಿಯಲ್ಲಿದ್ದು ಬ್ಯಾಂಕಿನವರಿಗೆ ಬಾಡಿಗೆ ಕೊಟ್ಟಿದ್ದಾರಂತೆ. ಹಾಗೇ ಮುಂದೆ ಹೋದರೆ ಬಾಳೀ ಸಾವುಕಾರರ ಕಿರಾಣಿ ಅಂಗಡಿ ಸಿಗುತ್ತದೆ. ಇಡೀ ಊರು ಅವರ ಬಳಿಯೇ ರೇಶನ್ನು ತಗೆದುಕೊಳ್ಳುತ್ತದಂತೆ. ದೊಡ್ಡ ಕಿರಾಣೀ ಸ್ಟಾಕಿಸ್ಟು ಅವರು. ಕೊಂಕಣೀ ಜನ. ಕನ್ನಡ-ಮರಾಠಿಯನ್ನೂ ಮಾತಾಡುತ್ತಾರೆ. 

ಚಾಂದಗುಡೆ ಹೇಳುತ್ತ ಖಾನಾವಳಿ ಬಾಗಿಲಲ್ಲಿ ನಿಂತರು. ನನಗೆ ಗಲಿಬಿಲಿಯಾಯಿತು. ಹಾಗನ್ನುವುದಕ್ಕಿಂತ ಭಗ್ಗನೆ ಬೆಂಕಿಯ ಬೆಳಕು ಅಲ್ಲಿ ಕಂಡಂತಾಯಿತು. ಎದುರು ಬಾಗಿಲಲ್ಲಿ ಹದಿನೆಂಟು ವರ್ಷದ ಹೇಮಾಮಾಲಿನಿಯನ್ನೇ ಹೋಲುವ ಸುಂದರ ಹುಡುಗಿಯೊಂದು ಅಲ್ಲಿ ನಿಂತಿದ್ದಳು. 

ಆಕೆ ಖಾನಾವಳಿಯ ಸಕ್ಕೂಬಾಯಿ ಮಗಳು ಕಲಾವತಿಯಂತೆ. ಸಕ್ಕೂಬಾಯಿ ಅಡುಗೆ ಮಾಡುತ್ತಿದ್ದರೆ ಈಕೆ ಬಂದ ಗಿರಾಕಿಗಳಿಗೆ ಊಟ ಸಪ್ಲಾಯ್‌ ಮಾಡುವ ಕೆಲಸ ಮಾಡುತ್ತಾಳಂತೆ. 

ಚಾಂದಗುಡೆಯವರು ಕಾಮೆಂಟ್ರಿ ಕೊಡುತ್ತಲೇ ಇದ್ದರು. ನಾನು ಒಂದು ಕ್ಷಣ ಕಲಾವತಿಯನ್ನು ನೋಡುತ್ತಲೇ ನಿಂತೆ. ಕಂದೀಲು ಬೆಳಕಿನಲ್ಲಿ ಆಕೆಯ ನಗು ಮೇಲಿನಿಂದ ಹೂವು ಬುಟ್ಟಿ ಸುರುವಿದಂತಾಯಿತು. 

ಯೇ ಸಾಹೇಬ್‌… ಜೇವನ್‌ ತಯ್ಯಾರ್‌ ಆಹೇ.

ಕಲಾವತಿ ಮೆಲ್ಲಗೆ ಹೇಳಿದರೂ ಕಿವಿಗೆ ಸ್ಪಷ್ಟವಾಗಿತ್ತು. ಅಷ್ಟರಲ್ಲಿ ಒಳಗಿಂದ ನಮ್ಮನ್ನು ಗಮನಿಸಿದ ಸಕ್ಕೂಬಾಯಿಯೂ ಎದ್ದು ಬಂದು ಟೇಬಲ್ಲು ಒರೆಸಿದಳು. ನಾನು ಚಾಂದಗುಡೆಯವರ ಹಿಂದೆಯೇ ಅಡಿಯಿಡುತ್ತ ಒಳಗೆ ಹೋದೆ. 

***

[ಮುಂದಿನ ವಾರ ಮತ್ತೆ ನಿಮ್ಮ ಮುಂದೆ. ವಾರದಿಂದ ವಾರಕ್ಕೆ ಜನಪ್ರಿಯವಾಗುತ್ತಿರುವ ಕಾಳೀ ಕಣಿವೆಯ ಕತೆಗಳು. ಓದಿರಿ. ಇದು ನಿಗಮದ ನಿವೃತ್ತನ ನೆನಪುಗಳ ಮಾಲೆ. ಪ್ರತಿ ಶನಿವಾರಕ್ಕೊಮ್ಮೆ ತಪ್ಪದೇ ಓದಿರಿ]


  • ಹೂಲಿಶೇಖರ್  (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು)

  

0 0 votes
Article Rating

Leave a Reply

1 Comment
Inline Feedbacks
View all comments
ಲಕ್ಷ್ಮೀ ನಾಡಗೌಡ

ಅಬ್ಬಾ!!! ಅದೆಷ್ಟು ವಿಷಯ ಸಂಗ್ರಹ ಇದೆ. ನಿಮ್ಮ ನೆನಪಿನ ಶಕ್ತಿಗೊಂದು ಸಲಾಂ ಸರ್🤗🤗🤗🙏🙏🙏💐💐💐

Home
Search
All Articles
Videos
About
1
0
Would love your thoughts, please comment.x
()
x
%d bloggers like this:
Aakruti Kannada

FREE
VIEW