ಪದ್ಮಶ್ರೀ ಪುರಸ್ಕೃತೆ ಸೀತವ್ವ ಜೋಡಟ್ಟಿಯವರ ಕಥೆ- ವ್ಯಥೆ

ಆ ಅಪ್ರಾಪ್ತೆಗೆ ಹೊಸ ಬಟ್ಟೆ, ಹೊಸ ಬಳೆ, ಹೂವು ನೋಡಿದಾಗ ಸಂತೋಷವಾಗುತ್ತಿತ್ತು. ಆದರೆ ಅದರ ಹಿಂದಿದ್ದ ‘ಮಾರಾಟ’ ಅನ್ನುವ ಪದದ ನಿಜವಾದ ಅರ್ಥ ತಿಳಿದಿರಲಿಲ್ಲ. ಅದು ತಿಳಿಯುವಷ್ಟರಲ್ಲಿ ದೇವದಾಸಿಯಾಗಿ ಬಹು ದೂರ ಸಾಗಿ ಹೋಗಿದ್ದಳು ಸೀತವ್ವ ಜೋಡಟ್ಟಿ.

(ಕರ್ನಾಟಕದಲ್ಲಿ ಪದ್ಮಶ್ರೀ ಪುರಸ್ಕೃತರ ಸಾಧನೆಯ ಬಗ್ಗೆ ಎಷ್ಟು ಜನರಿಗೆ ಪರಿಚಯವಿದೆಯೋ ಇಲ್ಲವೋ ಗೊತ್ತಿಲ್ಲ. ಗೊತ್ತಿದ್ದರೂ ಸಿನಿಮಾದ ಕ್ಷೇತ್ರದಲ್ಲಿ ಪದ್ಮಶ್ರೀ ಪಡೆದ ಕಲಾವಿದರ ಪರಿಚಯ ತಿಳಿದಿಯೇ ತಿಳಿದಿರುತ್ತದೆ. ಆದರೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರ ಪರಿಚಯ ಅಷ್ಟಕಷ್ಟೆ ಇರುತ್ತದೆ. ಏಕೆಂದರೆ ಅವರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ, ಆಸಕ್ತಿ ಜನರಲ್ಲಿ ಇರುವುದು ಅತಿ ವಿರಳ. ಪದ್ಮಶ್ರೀ ಪುರಸ್ಕೃತೆ ಸೀತವ್ವ ಜೋಡಟ್ಟಿ ಅವರ ಬಗ್ಗೆ ಲೇಖನ ಬರೆಯಲು ವಿಷಯ ಸಂಗ್ರಹ ಮಾಡುವಾಗ ಅವರ ಪರಿಚಯ ಕನ್ನಡದಲ್ಲಿ ಸಿಕ್ಕಿದ್ದು ವಿರಳ, ಅನ್ನುವುದಕ್ಕಿಂತ ಸಿಗಲಿಲ್ಲ ಎನ್ನಬಹುದು. ಆದರೆ ಅವರ ಸಾಧನೆಯ ಬಗ್ಗೆ ಮರಾಠಿ, ಹಿಂದಿ, ಇಂಗ್ಲಿಷ್ ನಲ್ಲಿ ಸಂಗ್ರಹಿಸಿ ನಿಮ್ಮ ಮುಂದೆ ಲೇಖನದ ರೂಪದಲ್ಲಿ ತರುವ ಸಣ್ಣ ಪ್ರಯತ್ನವನ್ನು ಮಾಡಿದ್ದೇನೆ. ನಮ್ಮ ಕನ್ನಡಿಗರ ಸಾಧನೆಯ ಬಗ್ಗೆ ಇನ್ನಷ್ಟು ಜನರಿಗೆ ತಿಳಿಸುವ ಪ್ರಯತ್ನವನ್ನು ಆಕೃತಿ ಕನ್ನಡದ ಮೂಲಕ ಮಾಡುತ್ತಿದ್ದೇನೆ. ಆದಷ್ಟು ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಮತ್ತು ಶೇರ್ ಮಾಡಿ.)


ಸೀತವ್ವ ಜೋಡಟ್ಟಿ :

‘ನಾನು ಸಾಕಷ್ಟು ನೋವುಂಡವಳು. ಮತ್ತಷ್ಟು ನೋವನ್ನು ಸಹಿಸಲಾರೆ ಮತ್ತು ಬೇರೆ ಹೆಣ್ಣುಮಕ್ಕಳಿಗೂ ಸಹಿಸಲು ಬಿಡಲಾರೆ’ ಎಂದು ಆತ್ಮಸ್ಥೈರ್ಯದಿಂದ ಮುನ್ನುಗ್ಗಿ ಅಂಧಕಾರಲ್ಲಿದ್ದ ಸಾಕಷ್ಟು ಹೆಣ್ಣು ಮಕ್ಕಳ  ಬಾಳಿಗೆ ಬೆಳಕಾದವರು ಸೀತವ್ವ ಜೋಡಟ್ಟಿ. ‘ಮಕ್ಕಳಿಗೆ  ಶಾಲೆ ಕೊನೆಯ ಘಂಟೆಯ ಶಬ್ದಆನಂದವನ್ನು ಕೊಡುತ್ತದೆ. ಏಕೆಂದರೆ ಶಾಲೆಗಿಂತ ಮನೆಯೇ ಆನಂದ ನೀಡುವ ಸ್ಥಳವಾಗಿರುತ್ತದೆ. ಆದರೆ ನನ್ನ ಪಾಲಿಗೆ ಶಾಲೆಯೇ ಸಂತೋಷದ ಸ್ಥಳವಾಗಿತ್ತು. ನನ್ನ ಬಾಳಿಗೆ ಮನೆಯ ದಾರಿ ಕಲ್ಲು- ಮುಳ್ಳಿನ ಹಾಸಿಗೆಯಾಯಿತು’ ಎಂದು ಸೀತವ್ವ ನಡೆದು ಬಂದ ನೋವಿನ ಹಾದಿಯನ್ನು ನೆನಪಿಸಿಕೊಳ್ಳುತ್ತಾರೆ.

(ಸಾಂದರ್ಭಿಕ ಚಿತ್ರ. ಫೋಟೋ ಕೃಪೆ : Socialist.blogger )

(ಸಾಂದರ್ಭಿಕ ಚಿತ್ರ. ಫೋಟೋ ಕೃಪೆ : Yourstory)

ಸೀತವ್ವ ಜೋಡಟ್ಟಿ ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆಯ ಮೂಲಕ ದೀನ ಮಹಿಳೆಯರು, ದಲಿತರು ಮತ್ತು ದೇವದಾಸಿಯರ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ್ ಸಮಾಜ ಸೇವಕಿ. ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ  ಕಬ್ಬೂರು ಗ್ರಾಮದವರಾದ ಅವರು ಆರು ಹೆಣ್ಣು ಮಕ್ಕಳಲ್ಲಿ ಸೀತವ್ವ ಕೊನೆಯ ಮಗಳಾಗಿದ್ದರು. ಇವರು ಹುಟ್ಟುವ ಮೊದಲೇ, ಮನೆಯ ಕೊನೆಯ ಹೆಣ್ಣು ಮಗಳನ್ನು ದೇವದಾಸಿಯನ್ನಾಗಿ ಮಾಡಬೇಕೆಂದು ಅವರ ಅಪ್ಪ-ಅಮ್ಮ ನಿರ್ಧಾರ ಮಾಡಿದ್ದರು. ಹೀಗೆ ದೇವರಿಗೆ ದೇವದಾಸಿನ್ನಾಗಿ ಸಮರ್ಪಿಸುವುದರಿಂದ ಕುಟುಂಬಕ್ಕೆ ಗಂಡು ಮಗು ಪ್ರಾಪ್ತಿಯಾಗುವುದೆಂಬ ಆಸೆಯಿಂದ ಸೀತವ್ವ ಅವರನ್ನು ಏಳನೇಯ ವಯಸ್ಸಿಗೆ ಕುಟುಂಬದವರು ವಯಸ್ಸಾದ ವ್ಯಕ್ತಿಗೆ ಮಾರಾಟ ಮಾಡಿದರು. ಆಕೆಗೆ ಆತನಿಂದ ಎರಡು ಮಕ್ಕಳಾದ ಮೇಲೆ ಸೀತವ್ವನನ್ನು ಇನ್ನೊಂದು ಕುಟುಂಬಕ್ಕೆ ಮಾರಾಟ ಮಾಡಲಾಯಿತು. ‘ಮಾರಾಟ’ ಪದದ ನಿಜವಾದ ಅರ್ಥ ತಿಳಿಯದ ೧೨ ವರ್ಷದ ಅಪ್ರಾಪ್ತೆಗೆ ಹೊಸ ಬಟ್ಟೆ ತೋಡುವುದೆಂದರೆ ಮೊದಮೊದಲು ಸಂತೋಷವಾಗುತ್ತಿತ್ತು. ಯಾವಾಗ ಅದೇ ಮಾರಾಟದ ಅರ್ಥ ತಿಳಿಯಿತೋ ಜೀವನದ ಮೇಲೆ ಜಿಗುಪ್ಸೆ ಆರಂಭವಾಯಿತು. ಶಾಲೆಯ ಮೆಟ್ಟಿಲನ್ನೇ ಕಾಣದೇ ಆಟವಾಡುವ ವಯಸ್ಸಿನಲ್ಲಿ ದೇವದಾಸಿಯಾದ ಸೀತವ್ವ ತನ್ನಂತಹ ಹೀನ ಬದುಕು ಇತರ ಮಕ್ಕಳಿಗೆ ಸಿಗಬಾರದು ಮತ್ತು ಗೌರವಾನ್ವಿತ ಜೀವನವನ್ನು ನಡೆಸಬೇಕು ಎಂದು ತಮ್ಮ ಜೀವನವೆಲ್ಲ ಮಹಿಳೆಯರ ಕಲ್ಯಾಣಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ.

ದೇವದಾಸಿ ಪದ್ಧತಿಯೊಂದು ಈ ಸಮಾಜದಲ್ಲಿ ಸಂಪೂರ್ಣ ಪ್ರಮಾಣದಲ್ಲಿ ನಿರ್ಮಾಲನೆಯಾಗದೆ ಉಳಿದಿರುವ ಒಂದು ಅನಿಷ್ಠ ಪದ್ಧತಿಯಾಗಿದ್ದು, ದೇವದಾಸಿ ಪದ್ದತಿಯನ್ನು ಸ್ವೀಕರಿಸಿದ ಹೆಣ್ಣುಮಕ್ಕಳು ತಮ್ಮ ಸಂಪೂರ್ಣ ಜೀವನವನ್ನು ದೇವರ ಸೇವೆಗೆ ಮುಡಿಪಾಗಿಟ್ಟಿರುತ್ತಾರೆ. ಈ ಪದ್ಧತಿಯಲ್ಲಿ ದಲಿತ ಹೆಣ್ಣು ಮಕ್ಕಳನ್ನು, ಅದರಲ್ಲಿಯೂ ೪ ಅಥವಾ ೫ ನೇಯ ವಯಸ್ಸಿನಲ್ಲಿಯೇ  ಈ ಪದ್ದತಿಗೆ ದೂಡಲಾಗುತ್ತದೆ. ಈ ಹೆಣ್ಣುಮಕ್ಕಳನ್ನು ಪುರಷರು ಶೋಷಿಸಬಹುದಾಗಿತ್ತು. ಈ ಪದ್ದತಿಯನ್ನು ೧೯೮೮ ರಲ್ಲಿ ಭಾರತ ಸರ್ಕಾರವು ನಿಷೇಧಿಸಿತು. ಆದರೂ ಕೂಡ ಇಂದು ದಕ್ಷಿಣ ಭಾರತದ ಕೆಲವು ಭಾಗದಲ್ಲಿ, ಅದರಲ್ಲಿಯೂ ಉತ್ತರಕರ್ನಾಟಕದಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿರುವುದು ವಿಷಾದನೀಯ. ಆದರೆ ಸೀತವ್ವನಂತಹ ಸಮಾಜ ಸೇವಕರಿಂದ ಈ ಪದ್ಧತಿ ನಿರ್ಮೂಲನೆಗೆ ಸಾಧ್ಯವಾದಷ್ಟು ಪ್ರಯತ್ನಗಳು ನಡೆಯುತ್ತಲೇ ಇವೆ.

ಸೀತವ್ವರಲ್ಲಿ ಈ ಪದ್ದತಿಯ ಬಗ್ಗೆ ಅರಿವು ಮೂಡಿದ್ದು ಹೇಗೆಂದರೆ ಒಂದು ದಿನ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲತಾ ಮಾಲಾ ಅವರನ್ನು ಭೇಟಿ ಮಾಡಿದಾಗ ಅವರಿಂದ ದೇವದಾಸಿ ಪದ್ಧಿತಿಯಲ್ಲಿ ಮಹಿಳೆಯರ ಮೇಲೆ ಆಗುತ್ತಿದ್ದ ಅನ್ಯಾಯ, ದೌರ್ಜನ್ಯದ ಕುರಿತು ಅರಿವು ಮೂಡಿಸಿದರು. ಅಂದಿನಿಂದ ಸೀತವ್ವ ದೇವದಾಸಿ ಪದ್ದತಿಯ ನಿರ್ಮೂಲನೆಗೆ ಪಣತೊಟ್ಟರು. ತದನಂತರ ವಿವಿಧ ಸ್ಥಳಗಳಿಗೆ ಹೋಗಿ ಅಲ್ಲಿ ಹಿಂದುಳಿದ ಮಹಿಳೆಯರಿಗೆ ದೇವದಾಸಿ ಪದ್ದತಿಯ ಬಗ್ಗೆ ಜಾಗೃತಿ ಮೂಡಿಸತೊಡಗಿದರು. ಅವರ ಪ್ರಯತ್ನದ ಫಲವಾಗಿ ಒಂದು ವಾರದೊಳಗೆ ೪೪ ಜನ ಮಹಿಳೆಯರು ಅವರ ಜೊತೆ ಕೈಜೋಡಿಸಿದರು. ಮುಂದೆ ಸೀತವ್ವ ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆ ಜೊತೆಗೂಡಿ ೪,೦೦೦ ಹೆಣ್ಣು ಮಕ್ಕಳನ್ನು ಈ ಪದ್ದತಿಯಿಂದ ಹೊರ ತರುವಲ್ಲಿ ಯಶಸ್ವಿಯಾದರು. ಮತ್ತು ಅಂದಕಾರದಲ್ಲಿದ್ದವರ ಬಾಳಿಗೆ ಬೆಳಕಾಗಿ ನಿಂತರು. ಮುಂದೆ ೧೯೯೭ ರಲ್ಲಿ ಘಟಪ್ರಭಾದ ಮಾಸ್‌ ಸಂಸ್ಥೆಯ ವ್ಯವಸ್ಥಾಪಕಿ ನಿರ್ದೇಶಕಿಯಾಗಿ ಬಡ್ತಿ ಪಡೆದರು.  ಈ ಸಂಸ್ಥೆಯಲ್ಲಿ ಸುಮಾರು ೪,೦೦೦ ಮಾಜಿ ದೇವದಾಸಿ ಮಹಿಳೆಯರು ಸದಸ್ಯರಾಗಿದ್ದಾರೆ.

ಸೀತವ್ವ ಮತ್ತು ಅವರ ಸದಸ್ಯರ ತಂಡ ಜೋಗತಿ ಮಹಿಳೆಯರು, ಮಕ್ಕಳ ಹಕ್ಕುಗಳು, ಹಣಕಾಸು ನಿರ್ವಹಣೆ, ಎಸ್‌ಟಿಡಿಗಳು, ಇತರ ವಿಷಯಗಳ ಕುರಿತಾಗಿ ಕಾನೂನಾತ್ಮಕವಾಗಿ ಸಲಹೆ ನೀಡಲು ಹಲವಾರು ಕಾರ್ಯಾಗಾರಗಳು ಮತ್ತು ಕಾರ್ಯಕ್ರಮಗಳನ್ನು ವಿವಿಧೆಡೆ ಆಯೋಜಿಸಿದ್ದಾರೆ. ಮತ್ತು ಅಷ್ಟೇ ಅಲ್ಲದೆ ಸ್ವತಃ ಅವರೇ ಸುಮಾರು ೩೦೦ ಸ್ವ -ಸಹಾಯ ಕೇಂದ್ರಗಳನ್ನು ರಚಿಸಿ, ದೇವಾಸಿ ಪದ್ದತಿಯನ್ನು ಬಿಟ್ಟು ಬಂದ ಹೆಣ್ಣು ಮಕ್ಕಳಿಗೆ ಬ್ಯಾಂಕ್ ನಿಂದ ಆರ್ಥಿಕ ನೆರವು ಸಿಗುವಂತೆ ಮಾಡುತ್ತಿದ್ದಾರೆ. ಅವರೇ ಹೇಳುವಂತೆ ‘ನಾನು ಪಟ್ಟಂತಹ ಕಷ್ಟಗಳು ಮತ್ತ್ಯಾವ ಹೆಣ್ಣು ಮಕ್ಕಳಿಗೆ ಬರಬಾರದು ಎನ್ನುವ ಉದ್ದೇಶ ನಮ್ಮದಾದರೆ, ಕೆಲವಷ್ಟು ಜನ  ಇಂದಿಗೂ, ಈ ಪದ್ದತಿಯನ್ನು ಬಲವಾಗಿ ನಂಬಿಕೊಂಡಿದ್ದಾರೆ. ಆ ಕಾರಣಕ್ಕೆ ನಾವುಗಳು ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಕೈಗೊಂಡಾಗ ವಿರೋಧಿಸುತ್ತಾರೆ. ಮತ್ತೆ ಕೆಲವೊಮ್ಮೆ ನಮ್ಮ ಮೇಲೆ ಕಲ್ಲಿನಿಂದ ದಾಳಿಯು ಕೂಡ ಮಾಡುತ್ತಾರೆ ಎಂದು ತಮ್ಮ ನೋವನ್ನು ಹೇಳಿಕೊಳ್ಳುತ್ತಾರೆ.

ಆದರೆ ಸಮಾಜದ ಒಳಿತಿಗಾಗಿ ನಾನು ಹೆಜ್ಜೆ ಮುಂದಿಟ್ಟಾಗಿದೆ. ಕಾಲನ್ನು ಹಿಂದಕ್ಕೆ ಎತ್ತುವ ಮಾತೇ ಇಲ್ಲ. ಆದಷ್ಟು ದೇವದಾಸಿಯ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿ ಕೊಳ್ಳಬೇಕಿದೆ. ಶಿಕ್ಷಣವೇ ದೇವದಾಸಿ ಪದ್ಧತಿ ನಿರ್ಮೂಲನೆಗೆ ಮಹದ್ದಾರಿಯಾಗಿದೆ. ಈ ಪದ್ದತಿಯನ್ನು ನೆಲಸಮ ಮಾಡುವ ಗುರಿ ನನ್ನದಾಗಿದೆಯೆಂದು ಸೀತವ್ವ ಜೋಡಟ್ಟಿ ಹೇಳುತ್ತಾರೆ.

ಸೀತವ್ವ ಜೋಡಟ್ಟಿ ಅವರ ಸಮಾಜ ಸೇವೆಯನ್ನು ಪರಿಗಣಿಸಿ ಸಾಕಷ್ಟು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಅದರಲ್ಲಿ  ೨೦೧೮ ರಲ್ಲಿ , ಭಾರತದ ನಾಲ್ಕನೇಯ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ.


  • ಶಾಲಿನಿ ಹೂಲಿ ಪ್ರದೀಪ್

0 0 votes
Article Rating

Leave a Reply

2 Comments
Inline Feedbacks
View all comments
Anupama

Wow! ನಮ್ಮ ಪಕ್ಕದ ಊರಿನ ಈ ಸಾಧಕಿ ಬಗ್ಗೆ ಇಲ್ಲಿಯ ತನಕ ತಿಳಿದಿರಲಿಲ್ಲ. ಧನ್ಯವಾದಗಳು ಪರಿಚಯಿಸಿದ್ದಕ್ಕೆ 🙏

Home
Search
All Articles
Videos
About
2
0
Would love your thoughts, please comment.x
()
x
%d bloggers like this:
Aakruti Kannada

FREE
VIEW