ಪ್ರಥಮ ಬಾರಿಗೆ ಮಹಿಳಾ ಹೋರಾಟಕ್ಕೆ ನಾಂದಿ ಹಾಡಿದ – ರಾಜಾರಾಮ್ ಮೋಹನ್ ರಾಯ್

ರಾಮಮೋಹನ್ ರಾಯ್ ಅವರು ಸಾಂಪ್ರದಾಯಿಕ ಕುಟುಂಬವೊಂದರಲ್ಲಿ ಜನಿಸಿದರೂ ಕೂಡ ಸಂಪ್ರದಾಯಗಳನ್ನೇ ಪ್ರಶ್ನಿಸಿದರು. ಮಹಿಳೆಯರ ಸಮಾನ ಹಕ್ಕುಗಳಿಗಾಗಿ ಬಹಳ ಶ್ರಮಿಸಿದರು. ಬಾಲ್ಯವಿವಾಹ, ಬಹುಪತ್ನಿತ್ವ ,ಕ್ರೂರ ಸತಿಸಹಗಮನ ಪದ್ಧತಿಗಳಿಂದ ತತ್ತರಿ ಹೋಗಿದ್ದ ಮಹಿಳೆಯರ ಪರವಾಗಿ ಪ್ರಪ್ರಥಮವಾಗಿ ಹೋರಾಟಕ್ಕೆ ಧುಮುಕಿದವರು. ಆದರೆ ಮಹಿಳೆಯರ ಪರಿಸ್ಥಿತಿ ಸುಧಾರಿಸಲು ರಾಜಾರಾಮ್ ಮೋಹನ್ ರಾಯ್ ರವರು ಕಂಡ ಕನಸು ಇನ್ನೂ ನನಸಾಗಿಲ್ಲಎನ್ನುವುದೇ ವಿಷಾದನೀಯ. 

ಪ್ರಥಮ ಬಾರಿಗೆ ಮಹಿಳಾ ಹೋರಾಟಕ್ಕೆ ನಾಂದಿ ಹಾಡಿದ ನವೋದಯದ ಹರಿಕಾರ ರಾಜಾರಾಮ್ ಮೋಹನ್ ರಾಯ್ ರವರ ೧೮೭ ನೇ ಸ್ಮರಣದಿನ ಸೆಪ್ಟೆಂಬರ್ ೨೭.

ಬಹುಭಾಷಾ ಪಂಡಿತರಾದ ರಾಮ್ ಮೋಹನ್ ರಾಯ್ ರವರು ಪಶ್ಚಿಮ ಬಂಗಾಳದ ರಾಧಾನಗರದಲ್ಲಿ ೧೭೭೨ ರ ಮೇ ೨೨ ರಂದು ಸಾಂಪ್ರದಾಯಿಕ ಮನೆತನದಲ್ಲಿ ಜನಿಸಿದರು. ಅವರು ಹಿಂದೂ ಧರ್ಮದ ಎಲ್ಲ ಸಾಂಪ್ರದಾಯಿಕ ಪವಿತ್ರ ಗ್ರಂಥಗಳನ್ನು ಮನನ ಮಾಡಿಕೊಂಡಿದ್ದರು. ಜೊತೆಗೆ ಮೌಲ್ವಿ ಒಬ್ಬರಿಂದ ಪಾರಸಿ ಭಾಷೆ, ಅರಬ್ಬೀ ಭಾಷೆ ಕಲಿತು ಇಸ್ಲಾಂ ಮತ ತತ್ವಗಳ ಬಗ್ಗೆ, ಕ್ರೈಸ್ತಮತ, ಬೌದ್ಧಮತ ಹಾಗೂ ಜೈನಮತದ ಬಗ್ಗೆ ಆಳವಾಗಿ ಅಭ್ಯಸಿಸಿದ್ದರು. ಯೂಕ್ಲಿಡ್, ಅರಿಸ್ಟಾಟಲ್ ಕೃತಿಗಳ ಅಧ್ಯಯನ ಮಾಡಿದ್ದರು. ಹೀಗೆ ವಿವಿಧ ಧಾರ್ಮಿಕ ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿದ್ದ ರಾಮಮೋಹನರಾಯರ ಮೇಲೆ ಆಧುನಿಕ ಚಿಂತನೆಗಳು ಅನೇಕ ಧಾರ್ಮಿಕ ವಿಧಿಗಳನ್ನು, ಸಂಪ್ರದಾಯಗಳನ್ನು ಪ್ರಶ್ನಿಸುವಂತೆ ಮಾಡಿತು.


ಫೋಟೋ ಕೃಪೆ : India Today

ಸಮಾಜದ ಪ್ರಗತಿಗೆ ಅಡ್ಡಿಯಾದ ಕಂದಾಚಾರಗಳನ್ನು ಅವರು ಬಲವಾಗಿ ವಿರೋಧಿಸಿದರು. ವಿಗ್ರಹಾರಾಧನೆ ಮತ್ತು ಮೂಢನಂಬಿಕೆಗಳನ್ನು ವಿರೋಧಿಸಿ ಅವರು ಬರೆದ ಗ್ರಂಥಗಳಿಗೆ ಅವರ ತಂದೆಯಿಂದ ಪ್ರತಿರೋಧ ಮೂಡಿಬಂದಾಗ ಅವರು ಮನೆಯನ್ನು ತ್ಯಜಿಸಬೇಕಾಯಿತು. ಸನಾತನಿಗಳ ಕ್ರೋಧಕ್ಕೆ ಗುರಿಯಾಗಬೇಕಾಯಿತು. ಆದರೂ ಅವರು ತಾವು ಬದ್ಧರಾದ ವಿಚಾರಗಳನ್ನು ತ್ಯಜಿಸಲಿಲ್ಲ. ಮೂಢನಂಬಿಕೆಗಳ ಕಪಿಮುಷ್ಟಿಯಿಂದ ಹೊರಬರಲು ವಿಚಾರಶೀಲತೆ, ತಾರ್ಕಿಕತೆ ಬೆಳೆಸಿಕೊಳ್ಳಬೇಕೆಂದು ಅವರು ಜನರನ್ನು ಪ್ರೇರೇಪಿಸಿದರು. ಸೂಕ್ಷ್ಮ ವಿವೇಚನಾಶಕ್ತಿಯನ್ನು ಹೊಂದಿದ್ದ ಅವರು ಜನರಲ್ಲಿ ಅದನ್ನು ಮೂಡಿಸಲು ಶ್ರಮಿಸಿದರು. ಜನರನ್ನು ಅಂಧಕಾರದಲ್ಲಿ ಇಡುವ ಹಾಗೂ ಅವರನ್ನು ಸಾವಿರಾರು ವರ್ಷಗಳ ಹಿಂದೆ ಕರೆದೊಯ್ಯುವ ಸಂಸ್ಕೃತ , ವೇದಾಂತ, ಶಾಸ್ತ್ರಗಳ ಬದಲಿಗೆ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವ ವಿಜ್ಞಾನವನ್ನು ಕಲಿಸಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದರು. ಪ್ರಗತಿಗೆ ಪೂರಕವಾದ ಗಣಿತಶಾಸ್ತ್ರ, ರಸಾಯನಶಾಸ್ತ್ರ ಸಾಮಾಜಿಕ ತತ್ವಜ್ಞಾನ, ಅಂಗ ರಚನಾಶಾಸ್ತ್ರ ಹಾಗೂ ಮತ್ತಿತರ ವಿಜ್ಞಾನದ ವಿಭಾಗಗಳ ಕಲಿಕೆ, ಸಾಮಾಜಿಕ ಪ್ರಗತಿಗೆ ಅವಶ್ಯಕ ಎಂಬುದು ಅವರ ಪ್ರತಿಪಾದನೆಯಾಗಿತ್ತು.

ರಾಜಾ ರಾಮ್ ಮೋಹನ್ ರಾಯ್  ಪಡೆದುಕೊಂಡಿದ್ದ ವೈಜ್ಞಾನಿಕ ತರ್ಕಬದ್ಧ ಶಿಕ್ಷಣ ಅವರ ಜೀವನ ಕ್ರಮವನ್ನೇ ಬದಲಿಸಿತು. ಸಾಂಪ್ರದಾಯಿಕ ಕುಟುಂಬವೊಂದರಲ್ಲಿ ಜನಿಸಿದ ಅವರು ಸಂಪ್ರದಾಯಗಳನ್ನೇ ಪ್ರಶ್ನಿಸಿದರು. ಯಾವುದೇ ವೈಜ್ಞಾನಿಕ ತಳಹದಿ ಇಲ್ಲದೆ ಬರಿಯ ಶೋಷಣೆಗಾಗಿ ರಚಿತವಾಗಿರುವ ಕಂದಾಚಾರ, ಮೂಢನಂಬಿಕೆಗಳನ್ನು ತೀವ್ರವಾಗಿ ವಿರೋಧಿಸಿದರು. ಇವುಗಳಿಂದ ತತ್ತರಿಸಿ ಹೋಗಿದ್ದ ಜನತೆಯ ಬಗ್ಗೆ ವಿಶಿಷ್ಟವಾಗಿ ಮಹಿಳೆಯರ ಬಗ್ಗೆ ಅವರಿಗೆ ಅಪಾರವಾದ ಸಹಾನುಭೂತಿ ಇತ್ತು.

ಬಾಲ್ಯವಿವಾಹ, ಬಹುಪತ್ನಿತ್ವ ,ಕ್ರೂರ ಸತಿಸಹಗಮನ ಪದ್ಧತಿಗಳಿಂದ ಅವರ ಅಂತಃಕರಣ ಕ್ಷುಬ್ಭ ಗೊಳ್ಳುತ್ತಿತ್ತು.ಇವುಗಳಿಂದ ಮಹಿಳೆಯರನ್ನು ಮುಕ್ತಗೊಳಿಸಲು ರಾಮಮೋಹನ್ ರಾಯ್ ರವರು ಪ್ರಪ್ರಥಮವಾಗಿ ಹೋರಾಟದ ಕಣಕ್ಕೆ ಧುಮುಕಿದರು. ಅದರಲ್ಲೂ ಸತಿ ಅಂತಹ ಬರ್ಬರ ಪದ್ಧತಿಯನ್ನು ನಿರ್ಮೂಲನೆಗೊಳಿಸಲು ಅವರು ಒಂದು ವಿಶಾಲ ತಳಹದಿ ಆಧಾರಿತ ಸಾಮಾಜಿಕ, ಸಾಂಸ್ಕೃತಿಕ ,ಕಾನೂನಾತ್ಮಕ ಚಳುವಳಿಯನ್ನು ಬೆಳೆಸಿದರು. ಸತಿ ಪದ್ಧತಿಯ ವಿರುದ್ಧ ಕಾನೂನು ಜಾರಿಗೊಳಿಸಲು ಅವರು ಜನ ಮತ ಪಡೆಯಲು ಮನೆಮನೆಗೆ ಹೋಗಿ ಸಹಿ ಸಂಗ್ರಹಿಸಿದರು. ಆಳುವ ಬ್ರಿಟಿಷರನ್ನು ಇದರ ಬಗ್ಗೆ ಒತ್ತಾಯಿಸಲು ಬ್ರಿಟನ್ ಗೆ ಸಹ ಪ್ರಯಾಣ ಬೆಳೆಸಿದರು. ಅವರ ಹೋರಾಟದ ದನಿ ಬ್ರಿಟಿಷ್ ಸಂಸತ್ತಿನಲ್ಲಿ ಮಾರ್ದನಿಗೊಂಡಿತ್ತು. ಸನಾತನವಾದಿಗಳ ಉಗ್ರಕೋಪ ಅವರನ್ನು ವಿಚಲಿತಗೊಳಿಸಲಿಲ್ಲ. ಕೊನೆಗೆ ಅವರ ಈ ಕಡು ಪರಿಶ್ರಮದ ಫಲವಾಗಿ ೧೮೩೨  ರಲ್ಲಿ ಸತಿ ವಿರೋಧಿ ಕಾನೂನು ಜಾರಿಗೊಂಡಿತು.

ಬಾಲ್ಯವಿವಾಹ, ಬಹುಪತ್ನಿತ್ವವನ್ನು ಕಟುವಾಗಿ ವಿರೋಧಿಸಿದ ರಾಮ್ ಮೋಹನರಾಯರು ಮಹಿಳೆಯ ಮೇಲಿನ ಧಾರ್ಮಿಕ ಶೋಷಣೆಯ ವಿರುದ್ಧ, ಮಾತ್ರವಲ್ಲದೆ ಅವಳ ಸಮಾನ ಹಕ್ಕುಗಳಿಗಾಗಿ ಬಹಳ ಶ್ರಮಿಸಿದರು.ಮಹಿಳೆಯರಿಗೆ ಪಿತ್ರಾರ್ಜಿತ  ಆಸ್ತಿಯಲ್ಲಿ ಹಾಗೂ ಪತಿಯ ಆಸ್ತಿಯಲ್ಲಿ ಸಮಾನ ಹಕ್ಕು ದೊರಕಬೇಕು ಎಂಬುದು ಅವರ ಆಶಯವಾಗಿತ್ತು. ಇದು ಪುರಾತನ ಹಿಂದೂ ಗ್ರಂಥದಲ್ಲಿಯೂ ಸಹ ಮಹಿಳೆಗೆ ನೀಡಲಾಗಿದ್ದ ಹಕ್ಕು ಎಂದವರು ತೋರಿಸಿಕೊಟ್ಟರು. ಮಹಿಳೆಯ ಆಸ್ತಿ ಬಹುಪತ್ನಿತ್ವ ದಿಂದ ಅನೂರ್ಜಿತವಾಗುವುದು ಎಂಬ ಕಾರಣದಿಂದಲೂ ಅವರು ಬಹುಪತ್ನಿತ್ವವನ್ನು ವಿರೋಧಿಸಿದ್ದರು. ತಾವು ನಂಬಿದ ತತ್ವ ವನ್ನು ಜೀವನದಲ್ಲಿ ಪಾಲಿಸಿದ ಮಹಾನ್ ಚೇತನ ರಾಜಾರಾಮ್ ಮೋಹನ್ ರಾಯ್. ಅಂದಿನ ಕಾಲದಲ್ಲಿಯೇ ಅವರು ವಿಧವಾ ವಿವಾಹದ ಸಮರ್ಥಕರಾಗಿ, ತಮ್ಮ ಪೀಳಿಗೆಯವರಿಂದ ಎಷ್ಟೋ ಮುಂದೆ ಸಾಗಿದ್ದನ್ನು, ಪ್ರಗತಿಪರ ವಿಚಾರವನ್ನು ತಮ್ಮದಾಗಿಸಿಕೊಂಡದ್ದನ್ನು  ನಾವು ಕಾಣಬಹುದು. ಓರ್ವ ಸ್ವಾತಂತ್ರ್ಯ ಅಭಿಮಾನಿಯಾಗಿದ್ದ ರಾಮಮೋಹನ್ ರಾಯ್ ರವರು ವಿಶ್ವಮಾನವ ಪರಿಕಲ್ಪನೆಯನ್ನು ಹೊಂದಿದ್ದರು. ವಿಶ್ವದ ಯಾವ ಮೂಲೆಯಲ್ಲೇ ಆಗಲಿ  ಸ್ವಾತಂತ್ರ ಹೋರಾಟ ನಡೆಯುತ್ತಿದ್ದರೆ ಅದಕ್ಕೆ ಅವರ ಬೆಂಬಲವಿರುತ್ತಿತ್ತು. ಫ್ರಾನ್ಸ್ ಮಹಾಕ್ರಾಂತಿಯಿಂದಂತೂ ಅವರು ಅಪಾರವಾಗಿ ಪ್ರಭಾವಿತರಾಗಿದ್ದರು. ವಾಕ್ ಸ್ವಾತಂತ್ರ್ಯಕ್ಕಾಗಿ ,ವ್ಯಕ್ತಿಗತ ಸ್ವಾತಂತ್ರ್ಯಕ್ಕಾಗಿ ಅವರು ಅವಿರತ ಹೋರಾಟ ನಡೆಸಿದರು. ತಮ್ಮ ವಿಚಾರಗಳನ್ನು ಪತ್ರಿಕೆಗಳ ಮೂಲಕ, ಗ್ರಂಥಗಳ ಮೂಲಕ ಅವರು ಪ್ರತಿಪಾದಿಸುತ್ತಿದ್ದರು. ಪತ್ರಿಕೋದ್ಯಮದಲ್ಲಿ ಅವರು ಪ್ರಗತಿಶೀಲತೆ ಯನ್ನು ತಂದರು. ಏಕೇಶ್ವರವಾದಿ ರಾಮಮೋಹನ್ ರಾಯ್ ರವರು ಇದೇ ವಿಚಾರವುಳ್ಳವರ ವೇದಿಕೆಯಾಗಿ ಬ್ರಹ್ಮ ಸಮಾಜವನ್ನು ಸ್ಥಾಪಿಸಿದರು.

ಆರ್ಥಿಕ ,ರಾಜಕೀಯ, ಸಾಮಾಜಿಕ ,ಸಾಂಸ್ಕೃತಿಕ ಎಲ್ಲಾ ರಂಗಗಳಲ್ಲೂ ಅಳಿಸಲಾಗದಂತಹ ಗುರುತನ್ನು ಮೂಡಿಸಿದ, ವಿಶಿಷ್ಟವಾಗಿ ಮಹಿಳಾ ಪ್ರಗತಿಯ ಮೊದಲ ದನಿಯಾದ ರಾಜಾ ರಾಮ್ ಮೋಹನ್ ರಾಯ್ ರವರು ತಮ್ಮ ಕಾರ್ಯ ಸಾಧನೆಗೆ ಮುಖ್ಯವಾಗಿ ಸತಿ ವಿರೋಧಿ ಕಾನೂನು ಜಾರಿಗೆ ತಂದು ಇಂಗ್ಲೆಂಡಿಗೆ ತೆರಳಿದಾಗ ಅಲ್ಲಿ ಸನ್ಮಾನಿತರಾದರು.ಅನೇಕ ಗೌರವ ,ಪ್ರಶಸ್ತಿಗಳಿಂದ ಮನ್ನಣೆ ಗಳಿಸಿಕೊಂಡರು. ಜನರ ಅಪಾರ ಪ್ರೀತಿ ಪಡೆದುಕೊಂಡರು. ಆದರೆ ಅವಿರತ ಶ್ರಮ ಹೋರಾಟದಿಂದ ಕೆಟ್ಟ ಅವರ ಆರೋಗ್ಯ ಮತ್ತೆ ಅವರನ್ನು ಭಾರತಕ್ಕೆ ಬರಗೊಡಲಿಲ್ಲ. ತಮ್ಮ ಆರೋಗ್ಯದ ಬಗ್ಗೆ ಎಳ್ಳಷ್ಟೂ ಕಾಳಜಿ ವಹಿಸದ, ಸದಾ ಸಾಮಾಜಿಕ ಕಲ್ಯಾಣದ ಕುರಿತಾಗಿ ಚಿಂತಿಸುತ್ತಿದ್ದ ಈ ಮಹಾನ್ ಚೇತನ ಇಂಗ್ಲೆಂಡಿನಲ್ಲಿ ೧೮೩೩ ಸೆಪ್ಟೆಂಬರ್ ೨೭ ರಂದು ಅಪಾರ ಅಭಿಮಾನಿಗಳನ್ನು, ಬೆಂಬಲಿಗರನ್ನು, ಹಿಂಬಾಲಕರನ್ನು ತೊರೆದು ಕಣ್ಮರೆಯಾಯಿತು. ಮಹಿಳಾ ಹೋರಾಟದ ಸ್ಫೂರ್ತಿಯ ಚಿಲುಮೆ.

ಫೋಟೋ ಕೃಪೆ : Yuvapress

ಈ ಸಮಾಜದಲ್ಲಿ ಬದಲಾವಣೆ ತರಲು ವಿಶಿಷ್ಟವಾಗಿ ಮಹಿಳೆಯರ ಪರಿಸ್ಥಿತಿ ಸುಧಾರಿಸಲು ರಾಜಾರಾಮ್ ಮೋಹನ್ ರಾಯ್ ರವರು ಕಂಡ ಕನಸು ಇನ್ನೂ ನನಸಾಗಿಲ್ಲ. ಯಾರ ಪ್ರಗತಿಗಾಗಿಯ ಹೋರಾಟವನ್ನು ಅವರು ಪ್ರಾರಂಭಿಸಿದ್ದರೋ, ತದನಂತರ ಈ ಹೋರಾಟವನ್ನು ಇನ್ನೂ ಮುಂದಕ್ಕೊಯ್ದು , ಯಾರ ವಿಮುಕ್ತಿಗಾಗಿ ಈಶ್ವರಚಂದ್ರ ವಿದ್ಯಾಸಾಗರರು ಶ್ರಮಿಸಿದ್ದರೋ,ಆ ಮಹಿಳಾ ವಿಮುಕ್ತಿ ಇಂದಿಗೂ ಗಗನ ಕುಸುಮವಾಗಿಯೇ ಉಳಿದಿದೆ.ಭಾರತದ ಸ್ವಾತಂತ್ರ್ಯ ಸಂಗ್ರಾಮ ಹೋರಾಟದ ನೇತಾರರು ಊಳಿಗಮಾನ್ಯ ಪದ್ಧತಿಯ ವಿರುದ್ಧ ,ರಾಜಿ ರಹಿತ ಹೋರಾಟ ಬೆಳೆಸಿ ಈ ಸಮಾಜದಲ್ಲಿ ಒಂದು ಸಾಮಾಜಿಕ ,ಸಾಂಸ್ಕೃತಿಕ ಕ್ರಾಂತಿಯನ್ನೂ ಬೆಳೆಸುವ ಕಾರ್ಯವನ್ನು ಗಾಳಿಗೆ ತೂರಿದರು. ಇದರಿಂದಾಗಿ ಹೆಣ್ಣು ಮಕ್ಕಳು ಹಳೆಯ ಊಳಿಗಮಾನ್ಯ ಸಾಮಾಜಿಕ ಧೋರಣೆಗಳಿಂದ ಬಿಡುಗಡೆ ಪಡೆಯಲು ಸಾಧ್ಯವಾಗಿಲ್ಲ. ಜೊತೆಗೆ ಬಂಡವಾಳಶಾಹಿ ವ್ಯವಸ್ಥೆಯ ಶೋಷಣೆ ಅವಳನ್ನು ಅತ್ಯಂತ ಕೆಟ್ಟ ಸ್ಥಿತಿಗೆ ತಳ್ಳಿದೆ. ಆದ್ದರಿಂದ ರಾಜಿ ರಹಿತ ಹೋರಾಟವನ್ನು ಮುನ್ನಡೆಸಿ ಶೋಷಣೆ ಇಲ್ಲದ ಸಮಾಜವನ್ನು ಸ್ಥಾಪಿಸುವುದು , ಅದಕ್ಕಾಗಿ ಅವರ ವಿಚಾರಗಳನ್ನು ನಾವು ಮೈಗೂಡಿಸಿಕೊಳ್ಳುತ್ತಾ ಸಂಘಟಿತ ಹಾದಿ ಹಿಡಿಯುವುದು ಅವಶ್ಯಕ.


  • ಎಂ.ಶಾಂತ ( ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಬೆಂಗಳೂರು, ಜಿಲ್ಲಾ ಕಾರ್ಯದರ್ಶಿ )
0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW