ಒಂದೆಡೆ ಸೂಪಾ ಡ್ಯಾಮ್ ಕಟ್ಟುವ ಕೆಲಸ ಭರದಿಂದ ಸಾಗುತ್ತಿದ್ದರೆ, ಡ್ಯಾಮು ಕಟ್ಟಿದರೆ ಹಿರಿಯರು ಬಾಳಿ ಬದುಕಿದ ಊರು, ಅಲ್ಲಿಯ ಕಾಡು, ಕಾಳೀ ನದಿ ಎಲ್ಲವು ಮುಳುಗಡೆಯಾಗುತ್ತದೆ. ಮತ್ತು ಸೂಪಾದಲ್ಲಿ ಯಾರೂ ಹೊಸ ಕಟ್ಟಡಗಳನ್ನು ಕಟ್ಟಬಾರದೆಂಬ ಸರಕಾರದ ಆದೇಶ. ಜೊತೆಗೆ ಕಟ್ಟುವ ಯಾವುದೇ ಕಟ್ಟಡಗಳಿಗೆ ಸರಕಾರದಿಂದ ಪರಿಹಾರ ಸಿಗುವುದಿಲ್ಲವೆನ್ನುವ ಆದೇಶವು ಇನ್ನೊಂದೆಡೆ.ಇದರಿಂದ ಸರಕಾರ ಕೊಡುವ ಅರೆಕಾಸಿನ ಮಜ್ಜಿಗೆ ಕುಡಿದು ಹೋಗುವುದಾದರೂ ಎಲ್ಲಿಗೆ? ಎಂದು ಜನ ಗಾಬರಿಯಾಗಿದ್ದರು. ಓದಿ ಮುಂದೆ ಏನಾಯಿತು …
ಸೂಪಾ ಡ್ಯಾಮ ಸೈಟ್, ಇಸ್ವಿ-೧೯೭೦
ಚಿತ್ರ ಸಂಗ್ರಹ : ಚಳಗೇರಿ ವಿ. ಎಸ್
******** ******************************************
ಮತ್ತೆ ಮತ್ತೆ ನೆನಪಾಗುತ್ತಾಳೆ ಶೂರ್ಪನಖಿ ಎಂಬ ನತದೃಷ್ಟೆಸೂಪಾದಲ್ಲಿ ಕಾಳೀ ನದಿಯ ಎಡದಂಡೆಯಲ್ಲಿ ಕಾಳೀ ರೂಪಿಣಿ ದುರ್ಗೆಯ ಗುಡಿಯಿದ್ದರೆ ಬಲ ದಂಡೆಯಲ್ಲಿ ದಂಡಕಾರಣ್ಯ ದಲ್ಲಿ ವಾಸವಾಗಿದ್ದ ಶ್ರೀರಾಮನ ಮಂದಿರವಿತ್ತು. ನದೀ ಬಲಗಡೆಯಿರುವ ಈ ರಾಮ ಮಂದಿರ ಪೂರ್ವಾಭಿಮುಖವಾ ಗಿತ್ತು. ಈ ರಾಮದೇವರ ದೃಷ್ಟಿಗೆ ನೇರವಾಗಿ ಪೂರ್ವ ದಿಕ್ಕಿನಲ್ಲಿದ್ದ ಡ್ಯಾಮು ಕಟ್ಟುವ ಸ್ಥಳದಲ್ಲಿ ನದಿಯ ಬಲದಂಡೆಯಲ್ಲೇ ಶೂರ್ಪನಖಿಯ ಗುಹೆ ಇತ್ತು.
ಅಚ್ಚರಿಯೆಂದರೆ ಪ್ರತಿ ದಸರೆಯ ಹಬ್ಬದಲ್ಲಿ ಈ ರಾಮದೇವರು ಮತ್ತು ದುರ್ಗಾ ಮಾತೆಯರಿಗೆ ಹೇಗೆ ಪೂಜೆ ನಡೆಯುತ್ತಿತ್ತೋ ಹಾಗೆಯೇ ಶೂರ್ಪನಖಿಗೂ ಪೂಜೆ- ನೈವೇದ್ಯ ನಡೆಯುತ್ತಿತ್ತು. ಊರಲ್ಲಿ ಈ ಎರಡೂ ದೇವರುಗಳಿಗೆ ಪೂಜೆ ನಡೆದು ಕಾಳೀ –ಪಾಂಡ್ರಿ ನದೀ ನೀರಿನ ಸಂಗಮದಲ್ಲಿ ಉತ್ಸವ ಆಚರಣೆ ನಡೆಯುವ ಸಂದರ್ಭದಲ್ಲಿಯೇ ಊರಿನ ಕೆಲವು ಜನ ಡ್ಯಾಮು ಸ್ಥಳಕ್ಕೆ ಹೋಗಿ ಅಲ್ಲಿದ್ದ ಗುಹೆಯೊಳಗಿನ ಶೂರ್ಪನಖಿ ಕಲ್ಲಿಗೂ ಪೂಜೆ ನೈವೇದ್ಯ ಸಲ್ಲಿಸುತ್ತಿದ್ದರು. ನಾನೂ ಅನೇಕ ಸಲ ಈ ಶೂರ್ಪನಖಿ ಗವಿಯೊಳಗೆ ಹೋಗಿ ಅಲ್ಲಿನ ಪೂಜಾ ಕಲ್ಲಿಗೆ ನಮಸ್ಕಾರ ಹಾಕಿ ಬಂದದ್ದೂ ಇದೆ. ರಾಮನ ಶತ ಶತಮಾನಗಳ ದೃಷ್ಟಿ ನೋಟದಿಂದ ಇಲ್ಲಿ ಶೂರ್ಪನಖಿಯೂ ದೇವರಂತೆ ಕಾಣುವ ಭಾಗ್ಯ ಶತಮಾನಗಳ ಕಾಲದಿಂದ ನಡೆದು ಬಂದಿದೆ. ಇದು ಮುಳುಗಿ ಹೋದ ನಾಡಿನ ಕತೆ.
ಇದು ಮುಳುಗಿ ಹೋದ ಊರು-ಕೇರಿಯ ಕತೆ
ಒಂದೆಡೆ ಸೂಪಾದಲ್ಲಿ ಡ್ಯಾಮು ಕಟ್ಟುವ ಕೆಲಸಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಸೂಪಾದಲ್ಲಿ ಯಾರೂ ಹೊಸ ಕಟ್ಟಡಗಳನ್ನು ಕಟ್ಟಬಾರದೆಂದು ಸರಕಾರ ಆದೇಶ ಹೊರಡಿಸಿತು. ಡ್ಯಾಮು ಕಟ್ಟಿದರೆ ಅವೆಲ್ಲ ಮುಳುಗಡೆಯಾಗುತ್ತವೆಂದೂ ಈ ಆದೇಶ ಹೊರಬಿದ್ದ ನಂತರ ಕಟ್ಟುವ ಯಾವುದೇ ಕಟ್ಟಡಗಳಿಗೆ ಸರಕಾರದಿಂದ ಪರಿಹಾರ ಸಿಗುವುದಿಲ್ಲವೆಂದೂ ಈ ಆದೇಶದಲ್ಲಿ ಹೇಳಲಾಗಿತ್ತು.
ಇದರಿಂದ ಊರಿನ ಜನ ಗಾಬರಿಯಾಗಿದ್ದರು. ಸರಕಾರ ಕೊಡುವ ಅರೆಕಾಸಿನ ಮಜ್ಜಿಗೆ ಕುಡಿದು ಹೋಗುವುದಾದರೂ ಎಲ್ಲಿಗೆ? ಹಿರಿಯರು ಬಾಳಿ ಬದುಕಿದ ಊರಿದು. ಇಲ್ಲಿಯ ಕಾಡು, ಕಾಳೀ ನದಿ ಮತ್ತು ಇಲ್ಲಿಯ ಕಣಿವೆಯ ಬೆಟ್ಟಗಳೇ ಬದುಕಾಗಿದ್ದ ಜನರಿಗೆ ಇಲ್ಲಿಂದ ಒಕ್ಕಲೆದ್ದು ಹೋಗುವ ಮನಸ್ಸಿರಲಿಲ್ಲ.
ಕಾಡಿಗೆ ಹೋದರೆ ವನ್ಯ ಸಂಪತ್ತಿದೆ. ಜೇನಿದೆ. ಹೂವಿದೆ. ಮಕರಂದವಿದೆ, ಉರಿಯಲು ಕಟ್ಟಿಗೆಯಿದೆ. ಉಳುಮೆಗೆ ಬಯಲು ಪ್ರದೇಶವಿದೆ. ಅತ್ತ ಕಾರವಾರ, ಇತ್ತ ಗೋವಾ ಎಂದು ಕೂಲಿ ನಾಲಿಗೆ ಹೋಗಿ ಬರಲು ಅನುಕೂಲವಿದೆ. ಕಾರವಾರ ಕಡೆಗೆ ಹೋದರೆ ಮೀನು ಕೆಲಸ. ಗೋವಾ ಕಡೆಗೆ ಹೋದರೆ ಮ್ಯಾಂಗನೀಸು ಗಣಿಯಲ್ಲಿ ಕೆಲಸ, ಗೇರು, ತಾಳೆ ಗುಡ್ಡದ ತೋಟದಲ್ಲಿ ಯಾವುದಾದರೂ ಕೆಲಸ, ಬೀರು- ಬ್ರ್ಯಾಂಡಿಗೆ ಅಲ್ಲಿ ಬರವಿಲ್ಲ. ಕೆಲವು ಹಡಗು ಕಂಪನಿಗಳಲ್ಲಿ ಹಮಾಲೀ ಉದ್ಯೋಗ. ಇಲ್ಲಿಯೇ ಇರುವುದಾದರೆ ಹನ್ನೆರಡೂ ತಿಂಗಳೂ ಹರಿಯುವ ಕಾಳೀ ನದಿಯಿದೆ. ಅಲ್ಲಿ ಯಥೇಚ್ಛ ಮೀನು ಸಂಪತ್ತಿದೆ. ಬೆಟ್ಟ, ಕಾಡು, ನೀರಿನಲ್ಲೂ ಐತಿಹ್ಯಗಳಿವೆ. ಕಾಡಿನ ಪ್ರಾಣಿಗಳೊಂದಿಗೆ ನಿತ್ಯದ ಹೋರಾಟವಿದೆ. ನಂಬಿಕೆಗಳಿವೆ.
ನಾಗರಿಕ ಸಮಾಜದಿಂದ ದೂರದಲ್ಲೇ ಇರುವ ಇಲ್ಲಿ ತಮ್ಮದೇ ಆದ ಜನ ಸಂಸ್ಕೃತಿಯಿದೆ. ಇದನ್ನೆಲ್ಲ ಮುಳುಗಿಸಲು ಇಲ್ಲಿ ಡ್ಯಾಮು ಬರುತ್ತಿದೆ. ಅದನ್ನು ಕಟ್ಟಿ ಕಾಡು-ನಾಡು ಎರಡನ್ನೂ ಮುಳುಗಿಸುವುದಾದರೂ ಏತಕ್ಕೋ.
ಸೂಪಾ ಎಂಬ ಊರು ಮುಂದಿನ ತಲೆಮಾರಿನ ಮಕ್ಕಳಿಗೆ ನೋಡಲೂ ಸಿಗದು
ಚಿತ್ರ ಸಂಗ್ರಹ : ಚಳಗೇರಿ ವಿ. ಎಸ್
ಅದು ಮುಂದಿನ ತಲೆಮಾರಿನ ತಮ್ಮ ಮಕ್ಕಳಿಗೆ ಶಾಪವೇ ಸರಿ. ಅವರಾದರೂ ಹೋಗಬೇಕೆಲ್ಲಿಗೆ. ಬದುಕಿನಲ್ಲಿ ಬೆಳಕು ಕಾಣುವುದು ಹೇಗೆ ಎಂದೆಲ್ಲ ಯೋಚಿಸಿದ ಸೂಪಾ ಪ್ರದೇಶದ ಜನ ಒದ್ದಾಡಿದರು. ಏನು ಮಾಡುವುದೆಂದು ಅವರಿಗೆ ಗೊತ್ತಾಗಲಿಲ್ಲ. ಇಲ್ಲಿ ಮಂತ್ರಿಗಳಿಲ್ಲ. ಶಾಸಕರಿಲ್ಲ. ಎಂ.ಪಿ.ಗಳಿಲ್ಲ. ಕಲೆಕ್ಟರು ಇಲ್ಲ. ಈಗಿನ ಹಾಗೆ ತಾಲೂಕು, ಜಿಲ್ಲಾ ಪಂಚಾಯಿತಿಗಳಿಲ್ಲ. ಅಧಿಕಾರ ಇದ್ದವರೆಲ್ಲ ನೂರು ಕಿ.ಮೀ.ದೂರದ ಕಾರವಾರದಲ್ಲಿದ್ದಾರೆ. ಕಾರವಾರಕ್ಕೆ ಹೋಗಲು ಆಗ ದಿನಕ್ಕೆ ಒಂದೇ ಒಂದು ಬಸ್ಸಿತ್ತು. ಅದು ಬೆಳಗಾವಿಯಿಂದ ಬಂದು ಸಂಜೆ ನಾಲ್ಕೂವರೆಗೆ ಸೂಪಾ ಬಿಟ್ಟು ರಾತ್ರಿ ಎಂಟೂವರೆಗೆ ಕಾರವಾರ ಮುಟ್ಟುವ ಬಸ್ಸು. ದಾಂಡೇಲಿಯಿಂದ ಲೋಂಟಾಕ್ಕೆ ಹೋಗುವ ಎರಡು ಬಸ್ಸುಗಳು ಸೂಪಾದಲ್ಲಿ ಹಾದು ಹೋಗುತ್ತಿದ್ದವು. ರಸ್ತೆಗಳು ಎಂಟು ಅಡಿಗಿಂತ ಅಗಲವಿರಲಿಲ್ಲ. ಅದೂ ತಗ್ಗಿನನಿಂದ ಕೂಡಿದ ಕೆಂಪು ಮಣ್ಣಿನ ರಸ್ತೆಗಳು. ಇಲ್ಲಿಯ ಜನ ಡಾಂಬರು ನೋಡಿರಲೇ ಇಲ್ಲ.
ಬಿ.ಪಿ.ಕದಂ, ಪಿ.ಬಿ.ದೇಸಾಯಿ, ಮಾರ್ಗರೆಟ್ ಆಳ್ವಾ, ವಿ.ಎಸ್.ಘಾಡಿ ಎಂಬ ರಾಜಕೀಯಸ್ಥರ ಹೆಸರುಗಳನ್ನು ಕೇಳಿದ್ದರೇ ವಿನಹ ಅವರು ಯಾರು, ಹೇಗಿದ್ದಾರೆಂಬುದೇ ಗೊತ್ತಿಲ್ಲ. ಯಾರೂ ಇವರ ಹತ್ತಿರ ಬಂದು ಏನು ಎತ್ತ ಎಂದೂ ಕೇಳಿರಲಿಲ್ಲ. ಇವರನ್ನು ಸಂಘಟಿಸಿಕೊಂಡು ಹೋಗುವ ಸ್ಥಳೀಯ ನಾಯಕರೂ ಆಗ ಇರಲಿಲ್ಲ. ಹೀಗಾಗಿ ಎಲ್ಲವೂ ಅಯೋಮಯ ವಾಗಿತ್ತು.
ಜೋಗದಲ್ಲಿ ಡ್ಯಾಮು ಕಟ್ಟಿ ವಿದ್ಯುತ್ ತಂದವರಿಗೆ ಕೆಲಸವೇ ಖಾಯಂ ಆಗಿರಲಿಲ್ಲ ಮತ್ತೆ ಬದಲಾದ ನನ್ನ ಡ್ಯೂಟಿ
ಇಂಥ ಸ್ಥಿತಿಯಲ್ಲಿ ಸೂಪಾ ಪ್ರದೇಶದ ಜನ ಹಣೆಗೆ ಕೈ ಹಚ್ಚಿ ಕೂತಿದ್ದರೆ ನಾವು ಸಮಗ್ರ ನಾಡಿನ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆಂದು ನದಿಗೆ ಡ್ಯಾಮು ಕಟ್ಟುವ ಕೆಲಸ ಸುರು ಮಾಡಿದ್ದೆವು.
ಸಂಜೆ ಐದು ಗಂಟೆಗೆ ನಾನೂ ಚಾಂದಗುಡೆಯವರೂ ಡ್ಯಾಮ ಸೈಟಿನಿಂದ ಸೂಪಾದತ್ತ ನಡೆದುಕೊಂಡು ಬಂದೆವು. ಹಾಗೆ ಬರುವಾಗ ಜೊತೆಗೆ ಬೋರಿಂಗ್ ಕಾಂಪ್ರೆಸರ್ ಆಪರೇಟರ್ ಮೊಮ್ಮದ ಕೋಯಾ ಇದ್ದರು. ಅವರು ಕೋಳೀ ನರಸಿಂಹಯ್ಯನವರ ಸಬ್ ಡಿವಿಜನ್ ನಲ್ಲಿದ್ದರು. ಹದಿನೈದು ವರ್ಷದಿಂದ ಎಚ್.ಇ.ಸಿ.ಪಿ. ಇಲಾಖೆಯಲ್ಲಿ ಮೆಕ್ಯಾನಿಕ್‌ವಿಭಾಗದಲ್ಲಿ ದಿನಗೂಲಿಯಲ್ಲೇ ಕೆಲಸ ಮಾಡುತ್ತಿದ್ದರಂತೆ. ದಿನಕ್ಕೆ ಈಗ ನಾಲ್ಕು ರೂಪಾಯಿ ಹಾಕುತ್ತಾರಂತೆ. ಅದೂ ಹದಿನೈದು ವರ್ಷ ಇಲಾಖೆಯಲ್ಲಿ ದುಡಿದ ನಂತರ. ನಮ್ಮನ್ನು ಖಾಯಂ ಮಾಡಿ ಎಂದು ಅವರು ಇಲಾಖೆಯ ಚೀಫ್ ಇಂಜನಿಯರರ ಹತ್ತಿರ ಬೇಡಿಕೆಯಿಟ್ಟಾಗ, ಈಗ ನೀವು ಕಾಳೀ ಯೋಜನೆಗೆ ಹೋಗಿ. ಅಲ್ಲಿ ನಿಮ್ಮನ್ನೆಲ್ಲ ಖಾಯಂ ಮಾಡುತ್ತೇವೆ ಎಂದು ಭರವಸೆ ಕೊಟ್ಟು ಕಳಿಸಿದ್ದರಂತೆ. ಭರವಸೆ ಇನ್ನೂ ಈಡೇರಿಲ್ಲ. ಈಗಲೂ ದಿನಕ್ಕೆ ಅವರಿಗೆ ನಾಲ್ಕೇ ರೂಪಾಯಿ ಸಂಬಳ. ನನಗೆ ಮಾತ್ರ ದಿನಕ್ಕೆ ಎರಡೂವರೆ ರೂಪಾಯಿ ಖಾಯಮ್ ಆಗಿತ್ತು.
ಹದಿನೈದು ವರ್ಷಗಳಿಂದ ದಿನಕ್ಕೆ ನಾಲ್ಕು ರೂಪಾಯಿ ಸಂಬಳ ಪಡೆಯುತ್ತಿದ್ದ ಬೋರಿಂಗ್ ಆಪರೇಟರ್
ಇಲಾಖೆಯಲ್ಲಿ ಇವರದೇ ಹೀಗೆ. ನನ್ನದು ಹೇಗೋ ಎಂದು ನೆನೆದು ನನಗೆ ಆಕ್ಷಣದಲ್ಲಿ ಆತಂಕವೂ ಆಯಿತು. ಮೊಮ್ಮದ್ ಈ ಮೊದಲು ಜೋಗ ಎಬಿ ಸೈಟಿನಲ್ಲಿದ್ದರಂತೆ. ಅಲ್ಲಿದ್ದ ಎಲ್ಲಾ ಬೋರಿಂಗ್ ಮಶೀನುಗಳನ್ನು ಕಾಳೀ ಯೋಜನೆಗೆ ಹೊತ್ತು ತಂದವರೇ ಈ ಮೊಮ್ಮದ್ ಕೋಯಾ ಮತ್ತು ಅವರ ಸಹೋದ್ಯೋಗಿಗಳು.
ಡ್ಯಾಮ ಸೈಟಿಗೆ ಬಂದ ಮೇಲೆ ಇವತ್ತು ನನ್ನ ಪಾಲಿಗೆ ಹೊಸ ಕೆಲಸಗಳು ಎದುರಾಗಿದ್ದವು. ಇನ್ನು ದಿನವೂ ನಾನು ನದಿಯ ಪಕ್ಕದ ಎರಡೂ ಬೆಟ್ಟಗಳಲ್ಲಿ ಓಡಾಡಿಕೊಂಡೇ ಇರಬೇಕಾಗುತ್ತದೆ ಅನಿಸಿಹೋಗಿತ್ತು.
ಇದುವರೆಗೆ ನಾನು ಶೇಷಗಿರಿಯವರ ಸಹಾಯಕನಾಗಿ ಇರಬೇಕಾಗುತ್ತದೆ ಎಂದು ಅಂದುಕೊಂಡಿದ್ದೆ. ಆದರೆ ಮಧ್ಯಾನ ಹಿರಿಯ ಅಧಿಕಾರಿಗಳು ಮತ್ತು ಮೆಸರ್ಸ್.ಆರ್.ಜೆ. ಶಾಹ್ ಕಂಪನಿಯವರು ಡ್ಯಾಮ ಸೈಟಿನಿಂದ ವಾಪಸು ಹೋದ ಮೇಲೆ ಬಣ್ಣವೇ ಬದಲಾಯಿತು. ಇಂಜಿನಿಯರ್ ವಿ.ವೈ.ನಾಯಕ್ ಅವರು ಒಂದು ಸುದ್ದಿ ಹೇಳಿದ್ದರು.
‘’ಶೇಖರ್… ಆರ್.ಜೆ.ಶಾಹ್ ಕಂಪನಿಯವರು ಇಲ್ಲಿ ಕೆಲಸ ಸುರು ಮಾಡಿದ ಮೇಲೆ ನಿಮ್ಮನ್ನು ಅವರ ಕಾಮಗಾರಿಗೆ ಸೂಪರವೈಜನ್ ಡ್ಯೂಟಿಗೆ ಶಿಫ್ಟ ಮಾಡಲು ಹೆಬ್ಲಿ ಸಾಹೇಬರು ಹೇಳೀದಾರೆ’’ ಅಂದರು. ನಾನು ಪೆಚ್ಚನಾದೆ. ಈ ಕೆಲಸ ಏನೆಂದು ಇನ್ನೂ ಅರ್ಥವನ್ನೂ ಮಾಡಿಕೊಂಡಿಲ್ಲ. ಆಗಲೇ ಜವಾಬ್ದಾರಿ ಬೇರೆ. ನನಗೆ ಏನೂ ಅರ್ಥವಾಗಲಿಲ್ಲ. .
ಚಂಬಲ್ ಕಣಿವೆಯಲ್ಲಿ ಸುರಂಗ ಕಾಮಗಾರಿ ಮಾಡಿದವರು
ಫೋಟೋ ಕೃಪೆ : indiatimes.com
ಆ ಕೆಲಸವೂ ನನಗೆ ಹೊಸದೇ. ನಾನು ಈ ಹಿಂದೆ ಯಾವ ಸುರಂಗ ಕಾಮಗಾರಿಯಲ್ಲಿಯೂ ಕೆಲಸ ಮಾಡಿದವನಲ್ಲ. ಅದರ ಅನುಭವ ನನಗಿರಲಿಲ್ಲ. ನಾನು ಹುಡುಗನಾಗಿದ್ದಾಗ ಮಲಪ್ರಭಾ ಡ್ಯಾಮಿನ ಬಲ ದಂಡೆಯ ಕಾಲುವೆಗಾಗಿ ಯಲ್ಲಮ್ಮನ ಗುಡ್ಡದಲ್ಲಿ ಕೊರೆದ ಸುರಂಗ ಮಾರ್ಗದ ಕಾಮಗಾರಿಯನ್ನು ನೋಡಿದ್ದೆ ಅಷ್ಟೇ.
ಮೆಸರ್ಸ್.ಆರ್.ಜೆ.ಶಾಹ್ ಕಂಪನಿ ಸುರಂಗ ಕೆಲಸದಲ್ಲಿ ಸಾಕಷ್ಟು ಅನುಭವ ಇರುವ ಕಂಪನಿ. ಸಧ್ಯ ಈಗ ಅವರು ಮಧ್ಯಪ್ರದೇಶದ ಚಂಬಲ್ ಕಣಿವೆಯಲ್ಲಿ ಹೈವೇ ಗಾಗಿ ಎಂಟು ಕಿ.ಮೀ. ಉದ್ದದ ಸುರಂಗ ಮಾರ್ಗ ತೋಡುವ ಕೆಲಸದ ಗುತ್ತಿಗೆ ಹಿಡಿದಿದ್ದಾರಂತೆ. ಈಗ ಅಲ್ಲಿ ಅದರ ಕಾಮಗಾರಿ ಭರದಿಂದ ನಡೆಯುತ್ತಿದ್ದು ಅವರಲ್ಲಿ ನುರಿತ ಕಾಮಗಾರಿ ಸಿಬ್ಬಂದಿಯೂ ಇತ್ತು.
ಸೂಪಾ ಡ್ಯಾಮಿನಲ್ಲಿಯೂ ಅಂಥದೇ ಕೆಲಸ ಸಿಕ್ಕಿದ್ದರಿಂದ ಅವರಿಗೆ ಖುಶಿಯಾಗಿತ್ತು. ಮುಂದೆ ಇದೇ ಕಾಳೀ ಯೋಜನೆಯಲ್ಲಿ ಬರಲಿರುವ ಬೊಮ್ಮನಳ್ಳಿ ಡ್ಯಾಮಿನಿಂದ [ಗುತ್ತಿಯಿಂದ] ಶೇಕ್ಸಪಾಯಿಂಟ್‌ವರೆಗಿನ ಒಂಭತ್ತೂವರೆ ಕಿ.ಮೀ. ಉದ್ದದ ಮತ್ತು ಹದಿನಾಲ್ಕು ಅಡಿ ಎತ್ತರ, ಹನ್ನೆರಡು ಅಡಿ ಅಗಲವಿರುವ ಸುರಂಗ ಮಾರ್ಗ ತೋಡುವ ಬಹುಕೋಟಿ ಗುತ್ತಿಗೆಯ ಕೆಲಸವು ಸರಕಾರದ ಯೋಜನೆಯ ಕಡತದಲ್ಲಿತ್ತು. ಆ ಕೆಲಸವೂ ತಮಗೇ ಸಿಗುತ್ತದೆ ಎಂಬ ಭರವಸೆ ಈ ಶಾಹ್ ಕಂಪನಿಯವರಿಗಿತ್ತು.
ಲೆಕ್ಕಾಚಾರದೊಂದಿಗೆ ಬಂದರು ಕಂತ್ರಾಟುದಾರರು
ಸೂಪಾದಲ್ಲಿ ಕಡಿಮೆ ಟೆಂಡರ್ ಹಾಕಿ ಮೊದಲು ಕಾಳೀ ಯೋಜನೆಯಲ್ಲಿ ಪ್ರವೇಶ ಮಾಡೋಣ. ನಂತರ ಬೊಮ್ಮನಳ್ಳಿ-ಶೇಕ್ಸಪಾಯಿಂಟ್‌ನ [ಹೆಡ್ ರೇಸ್ ಟನಲ್] ಆ ದೊಡ್ಡ ಸುರಂಗ ಮಾರ್ಗದ ಕಾಮಗಾರಿಯನ್ನು ಸಲೀಸಾಗಿ ಗಿಟ್ಟಿಸಿಕೊಳ್ಳಬಹುದು ಎಂದು ಲೆಕ್ಕ ಹಾಕಿದ್ದರು. ಆಗ ರಾಜ್ಯದಲ್ಲಿ ಚುನಾಯಿತ ಸರಕಾರವಿರಲಿಲ್ಲ. ಘನತೆವೆತ್ತ ರಾಜ್ಯಪಾಲರಾದ ಶ್ರೀ ಧರ್ಮವೀರರ ನೇತೃತ್ವದಲ್ಲಿ ರಾಷ್ಟ್ರಪತಿ ಆಳ್ವಿಕೆಯಿತ್ತು.
ಇನ್ನು ನನಗೆ ಬೆಟ್ಟದಲ್ಲಿ ತೋಡಲಿರುವ ಡ್ರಿಪ್ಟ [ಗುಹೆ] ಗಳಲ್ಲಿ ಸೂಪರವೈಜರ್ ಕೆಲಸ.
ಡಾ.ನಾಸು ಹರ್ಡೀಕರರ ಶಿಷ್ಯನಾಗಿ ಬೆಳೆದು ಬಂದ ನನಗೆ ಆತ್ಮ ವಿಶ್ವಾಸ ತಾನಾಗಿಯೇ ಬೆಳೆದು ಬಂದಿತ್ತು
ಫೋಟೋ ಕೃಪೆ : twitter
ಅಂಥ ಅನುಭವಸ್ಥ ಕಂಪನಿಯು ಮಾಡುವ ಕೆಲಸಕ್ಕೆ ನಾನು ಸೂಪರ್‌ವೈಜರ್. ಇಲ್ಲ ಅನ್ನುವಂತಿರಲಿಲ್ಲ. ನಾವು ಕನ್ನಡಿಗರು ಎಂಥ ಕೆಲಸಕ್ಕೂ ಸೈ ಅನ್ನಲೇಬೇಕು. ಇದು ನನಗೆ ಬೆಳಗಾವಿ ಕಲಿಸಿದ ಪಾಠ. ‘ಆಗ್ಲಿ ಸಾರ್ ಮಾಡ್ತೀನಿ’ ಅಂದಿದ್ದೆ. ನಾನು ಚಿಕ್ಕವನಿದ್ದಾಗ ಮಲಪ್ರಭಾ ನದಿಯ ಬಲ ದಂಡೆಯ ಕಡೆಗೆ ಯಲ್ಲಮ್ಮನ ಗುಡ್ಡದ ಕೆಳಗೆ ಸುರಂಗ ತೋಡಿ ಒಳ ಕಾಲುವೆ ನಿರ್ಮಿಸಿದ್ದನ್ನು ನೋಡಿದ್ದೆ. ಏನಿದ್ದರೂ ಡಾ.ನಾ.ಸು.ಹರ್ಡೀಕರರ ಪ್ರಭಾವದಲ್ಲಿ ಅವರ ಶಿಷ್ಯನಾಗಿ ಬೆಳೆದು ಬಂದವನಾದ್ದರಿಂದ ಆತ್ಮ ವಿಶ್ವಾಸವೂ ಇತ್ತು.
ಚಾಂದಗುಡೆಯವರಿಗೆ ಒಂದು ರೀತಿಯಲ್ಲಿ ಸಂತೋಷವಾಗಿತ್ತು. ಹೊಸ ರೀತಿಯ ಕೆಲಸ. ಪಗಾರದಲ್ಲಿ ಭಡ್ತಿ ಸಿಗದಿದ್ದರೂ ಕೆಲಸದಲ್ಲಿ ಸಿಗ್ತಾ ಇದೆ. ಮುಂದೆ ಒಂದಿನ ಅದೂ ಸಿಗಬಹುದು ಮಾಡಿ. ಕಾಯಕವೇ ಕೈಲಾಸ ಅಂದರು.
ಇಬ್ಬರೂ ಅದೂ-ಇದೂ ಮಾತಾಡುತ್ತ ಡ್ಯಾಮ್ ಸೈಟಿನಿಂದ ವಾಪಸು ನಮ್ಮ ಚಾಳಕ್ಕೆ ಬಂದೆವು. ದಾರಿಯುದ್ದಕ್ಕೂ ಅದೇ ಮಾತುಗಳು. ಇನ್ನು ಮುಂದೆ ಡ್ಯಾಮು ಕಟ್ಟುವ ಕೆಲಸ ಸುರುವಾಗುತ್ತದೆ. ದೊಡ್ಡ ದೊಡ್ಡ ಕಂತ್ರಾಟುದಾರರು ಇಲ್ಲಿ ಬರುತ್ತಾರೆ. ಕಾಡು ನಾಡಾಗುತ್ತದೆ ಎಂಬ ಮಾತುಗಳು. ಮೂಸಾನ ಲಕ್ಕೀ ಹೊಟೆಲ್ ಹತ್ತಿರ ಬರುತ್ತಲೂ ಮೊಮ್ಮದ್ ಅತ್ತ ಸರಿದರು. ನಾವು ಇಬ್ಬರೂ ಚಾಳದತ್ತ ನಡೆದೆವು.
ಹೂಲಿ ಸರ್ ನಿಮ್ಮ ಕತೆ ಓದಿದೆ
ನಾನು ಇನ್ನೂ ಚಾಳದ ಮೆಟ್ಟಿಲು ಹತ್ತಿರಲಿಲ್ಲ. ಮೊದಲ ಮನೆಯಲ್ಲಿದ್ದ ಪರಿಮಳಾ ಅವರ ದನಿ ಕೇಳಿತು. ‘’ಹೂಲಿ ಸರ್. ನಿಮ್ಮ ಕತೆ ‘ಬೊಲೋ ಮಾತಾಕೀ’ ಓದಿದೆ. ಈ ಥರ ಕತೆ ನಾನು ಓದಿರಲಿಲ್ಲ. ಉಷಾ ನವರತ್ನರಾಮ್, ತ್ರಿವೇಣಿಯವರ ಕತೇಲಿ ಇಂಥ ಸಬ್ಜೆಕ್ಟ ಇರೋದಿಲ್ಲ. ನಿಮ್ಮದು ಡಿಫರೆಂಟ್ ಸ್ಟೋರಿ. ತುಂಬ ಖುಶಿಯಾಯಿತು’’
ಬಾಗಿಲು ತೋಳು ಹಿಡಿದುಕೊಂಡೇ ಉತ್ಸಾಹದಿಂದ ಹೇಳಿದರು ಪರಿಮಳಾ. ಆಕೆ ಮೊದಲ ಬಾರಿ ನನಗೆ ‘ಹೂಲಿ ಸರ್’ ಅಂದಿದ್ದರು. ನನಗಿಂತ ದೊಡ್ಡವರಾದ ಪರಿಮಳಾ ಅವರು ನನಗೆ ‘ಸರ್’ ಎಂದು ಸಂಭೋಧಿಸಿದ್ದು ನನಗೆ ಮುಜುಗುರ ವನ್ನುಂಟು ಮಾಡಿತು. ಆದರೂ ಹಾಗೆ ಕೇಳಿಸಿಕೊಳ್ಳುವುದರಲ್ಲೂ ಒಂದು ರೀತಿಯ ಆನಂದವಿತ್ತು.
ಬನ್ನಿ. ಕಾಫೀ ಕುಡುದ್ಹೋಗಿ ಎಂದು ಪರಿಮಳಾ ಅವರು ಕರೆದದ್ದೇಕೆ
ನನ್ನ ಜೊತೆಯಲ್ಲಿಯೇ ಇದ್ದ ಚಾಂದಗುಡೆಯವರು ಖುಶಿಯಿಂದ ‘ಹ್ಹಹ್ಹಹ್ಹ…’ ಎಂದು ನಕ್ಕರು. ‘’ಅಕ್ಕಾವ್ರ…ಇನ್ನ ಮ್ಯಾಲ ಅವ್ರಿಗೆ ಕತೀ ಬರಿಯೂದಕ್ಕ ಛುಲೋ ಜಾಗಾನ ಸಿಕ್ತು ತಗೋರಿ’’ ಎಂದೂ ಹೇಳಿ ಮತ್ತೆ ನಕ್ಕರು. ಪರಿಮಳಾ ಅವರು ಅಷ್ಟಕ್ಕೇ ಬಿಡಲಿಲ್ಲ. ‘’ಬನ್ನಿ ಒಳಕ್ಕೆ. ಕಾಫೀ ಕುಡ್ಕೊಂಡ್ಹೋಗಿ’’ ಅಂದರು. ನನಗಾದರೋ ಒಳಗೆ ಹೋಗುವ ಮನಸ್ಸು. ನನ್ನ ಕತೆಯ ಬಗ್ಗೆ ಇನ್ನಷ್ಟು ಏನು ಹೇಳುತ್ತಾರೋ ಎಂದು ಕೇಳುವ ತವಕ.
‘’ಹ್ಹೆಹ್ಹೆಹ್ಹೆ…. ನನಗ ಪಾಯಖಾನೀ ಅವಸರ ಐತ್ರೀ ಬಾಯಾರ. ರೈಟರು ಕುಡೀಲಿ. ನಾ ಸದ್ದೇಕನ ಬರತೀನಿ. ಹಾಂ… ಶೇಖರವರ. ನೀವು ಕುಡುದು ಲಗೂನ ತಯಾರ ಆಗ್ರಿ. ಇವತ್ತ ಸಂಜೀ ಕಡೆ ಸಕ್ಕೂಬಾಯಿ ಮೆಸ್ ತೋರಸ್ತೀನಿ ಅಂತ ಹೇಳೇನಲ್ಲ ಮುಂಜಾನಿ. ಇಬ್ರೂ ಆಮ್ಯಾಲ ಬೈಲಪಾರ ಕಡೆ ಹೋಗೂನು’’
ಎಂದು ನೆನಪು ಮಾಡುತ್ತ ಹೊರಟೇ ಬಿಟ್ಟರು. ಪೈಜಾಮು ಏರಿಸಿಕೊಂಡು ಲುಟುಪುಟು ನಡೆದವರೇ ತಮ್ಮ ಮನೆಯ ಬಾಗಿಲು ದೂಡಿ ಒಳಗೆ ಹೋಗಿ ಕದ ಹಾಕಿಕೊಂಡರು. ಅತ್ತ ಪೋಲೀಸ ಮನೆಯ ಹೆಂಗಸರು ಬಾಗಿಲ ಸಂದಿನಿಂದ ಕತ್ತು ಹೊರಗೆ ಚೆಲ್ಲಿ ಹೊಸ ಪ್ರಾಣಿಯನ್ನು ನೋಡಿದಂತೆ ನನ್ನತ್ತ ನೋಡಿ ಪಟಕ್ಕನೆ ಕದ ಹಾಕಿಕೊಂಡರು. ನನ್ನನ್ನೇ ಗಮನಿಸುತ್ತಿದ್ದ ಪರಿಮಾಳಾ ಅವರು ನಕ್ಕರು. ಅವರ ಗಲ್ಲದ ಮೇಲೆ ಬಿದ್ದಿದ್ದ ಕುಳಿಯನ್ನು ಮತ್ತೆ ಮತ್ತೆ ನೋಡಿದೆ. ನಂತರ ಅವರು ‘ನೀವು ಬನ್ನಿ’ ಅಂದು ಒಳ ನಡೆದರು. ನಾನು ಮುಜುಗುರದಿಂದಲೇ ಮನೆಯೊಳಗೆ ಕಾಲಿಟ್ಟೆ.
ಡ್ಯಾಮು ಅಂದರೆ ಒಂದು ಮಿನಿ ಭಾರತ. ಅಲ್ಲಿ ಕೆಲಸ ಮಾಡುವವರು ಆರೇಳು ಭಾಷಿಕ ಜನ
ಚಿತ್ರ ಸಂಗ್ರಹ : ಚಳಗೇರಿ ವಿ. ಎಸ್
‘’ಹೇಗಿತ್ತು ಇವತ್ತಿನ ಕೆಲಸ? ಇನ್ ಮೇಲೆ ನಿಮ್ಗೆ ಡ್ಯಾಮ ಸೈಟಿನಲ್ಲೇ ಕೆಲಸವಂತೆ. ಇವ್ರು ಹೇಳ್ತಿದ್ರು’’
‘’ ಹೌದುರೀ ಮೇಡಮ್. ಡ್ಯಾಮ ಸೈಟು ಅನ್ನುವುದೇ ಒಂದು ಅದ್ಭುತ ಕಲ್ಪನೆ ನೋಡ್ರಿ. ಕಟ್ಟೋದು ಒಂದು ಡ್ಯಾಮು. ಆದ್ರೆ ಅಲ್ಲಿ ಕೆಲ್ಸ ಮಾಡೋರು ಆರೇಳು ರಾಜ್ಯಗಳ ಆರೇಳು ಭಾಷೆಯ ಜನ. ಹಿಂದೀ, ಮರಾಠೀ, ಕನ್ನಡ, ತೆಲುಗು, ತಮಿಳು, ಮಲಯಾಳೀ ಜನ ಎಲ್ರೂ ಇದಾರೆ ಅಲ್ಲಿ. ಡ್ಯಾಮು ಅಂದ್ರೆ ಒಂದು ಮಿನಿ ಭಾರತವೆ ಅನ್ನಿ’’
ಅಂದೆ. ಅವರು ಮತ್ತೆ ನಕ್ಕರು.
‘’ಭಾರತ ಜನನಿಯ ತನುಜಾತೆ ಅನ್ನೋದು ಇದಕ್ಕೇ. ಎಲ್ಲರೊಂದಿಗೆ ಇದ್ದು ಕನ್ನಡ ಸಾಹಿತ್ಯ ಬರೆಯುತ್ತೀರಲ್ಲ. ಇಂಥ ಅವಕಾಶ ಯಾವ ಯೂನಿವರ್ಸಿಟಿ ಜನಕ್ಕೂ ಸಿಗೋದಿಲ್ಲ ಬಿಡಿ. ಈ ವಿಷಯದಲ್ಲಿ ನೀವು ಗ್ರೇಟ್’’
ಎಂದೂ ಹೇಳಿದರು. ನಾನು ನನಗರಿವಿಲ್ಲದೆಯೇ ಮತ್ತೆ ಅವರ ಕೆನ್ನೆಯ ಗುಳಿಯನ್ನು ನೋಡಿದೆ. ಪರಿಮಳಾ ಅವರು ಆಗಲೇ ಕನ್ನಡಿ ಮುಂದೆ ನಿಂತು ಬಂದಿದ್ದರೇನೋ. ಅವರು ಹತ್ತಿರ ಸುಳಿದು ಹೋದಾಗಲೆಲ್ಲ ಮುಖಕ್ಕೆ ಬಳಿದುಕೊಂಡ ಸ್ನೋ-ಪೌಡರಿನ ಕೃತಕ ವಾಸನೆ ಮೂಗಿಗೆ ಬಡಿಯುತ್ತಿತ್ತು. ಹುಬ್ಬು ತೀಡಿದ್ದರಿಂದ ಸಿನಿಮಾ ನಟಿ ‘ಕಾಶ್ಮೀರ ಕಿ ಕಲೀ’ ಮಾಲಾಸಿನ್ಹಾ ಥರ ಕಾಣುತ್ತಿದ್ದರು. ರಾತ್ರಿ ಅಲ್ಲಿ ಪಾನ ಕಟ್ಟುವ ಫ್ಲೋರಿನಾಳು ಸಾಯಿರಾಬಾನು ಥರ ಕಂಡಿದ್ದಳು. ಇಲ್ಲಿ ಈಗ ಈ ಪರಿಮಳಾರು ಮಾಲಾಸಿನ್ಹಾ ಥರ ಕಾಣುತ್ತಿದ್ದಾರೆ. ಯಾಕೆ ಹೀಗೆ? ನನಗೇನಾದರೂ ಆಗಿದೆಯೇ. ಪ್ರಶ್ನಿಸಿ ಕೊಂಡೆ. ಬ್ರಹ್ಮಚಾರಿಗಳು ಸಂಸಾರಸ್ಥರ ಚಾಳದಲ್ಲಿ ವಾಸ ಮಾಡಬಾರದು ಎಂಬ ವಿವೇಕ ನನಗೇಕೆ ಬರಲಿಲ್ಲ?
ನಿಮಗೆ ಕತೆ ಬರೆಯೋ ತಾಕತ್ತಿದೆ. ಬರೆಯಿರಿ ಅಂದದ್ದೇಕೆ ಪರಿಮಳಾ ಅವರು
‘’ನಿಮ್ಮ ಕತೆಯ ವಸ್ತು ಭಿನ್ನ. ಹೆಂಗಸ್ರು ಬರೆಯೋ ಥರ ಇಲ್ಲ’’
‘’ಹೆಂಗಸರು ಬರೆಯೋದು ಬೇರೆ ಥರಾ ಅನ್ನಿಸ್ತದಾ ನಿಮ್ಗೆ?’’
‘’ಹೌದು. ಹೆಂಗಸರಿಗೆ ಅಡುಗೆ ಮನೆ, ಹೊರಗಿನ ಮನೆ, ಹಿತ್ತಲು, ಪೇಟೆ ತಿರುಗೋದು ಬಿಟ್ರೆ ಇನ್ನೇನಿರುತ್ತದೆ ಹೇಳಿ. ಹೆಚ್ಚೆಂದ್ರೆ ಯುಗಾದಿ, ದೀಪಾವಳಿ ಇರುತ್ತೆ ಅಲ್ವಾ. ಗಂಡಸರಾದ್ರೆ ಕಾಡು-ಬೆಟ್ಟ ಏನು, ಹಿಮಾಲಯ ತನಕ ತಿರುಗಿ ಬರಬಹುದು. ಅವರಿಗಿರೋ ಅನುಭವದ ವ್ಯಾಪ್ತಿ ಹೆಂಗಸ್ರಿಗೆ ದಕ್ಕೋದೇ ಇಲ್ಲ. ಅದಕ್ಕೇ ಹೆಂಗಸರ ಸಾಹಿತ್ಯದಲ್ಲಿ ಜೀವನದ ಪೂರ್ಣತೆ ಕಾಣೋದಿಲ್ಲ. ಭೈರಪ್ಪನವ್ರು ಬರೆಯೋ ಥರ ಹೆಂಗಸರ ಕೈಲಿ ಆಗೋದಿಲ್ಲ ಬಿಡಿ. ಆ ಮನುಷ್ಟ ಹಿಮಾಲಯಕ್ಕೆ ಹೋಗಿ ಅಲ್ಲೇ ಕೂತು ಬರೆದ್ರಂತೆ. ಹಾಗೆಲ್ಲಾ ಹೆಂಗಸ್ರು ಹೋಕೋಕ್ ಆಗುತ್ತಾ? ನಿಮ್ಮ ಕತೇಲಿ ನೋಡಿ. ಭಾಷೆಯ ಬಗ್ಗೆ ಹೇಳ್ತೀರ. ಭಾರತೀಯತೆ ಬಗ್ಗೆ ಹೇಳ್ತೀರ. ಸೌಹಾರ್ದತೆಯ ಬಗ್ಗೆ ಹೇಳ್ತೀರ ಅಲ್ವೆ?’’
ನನಗೆ ಏನು ಮಾತಾಡುವುದು ಎಂದು ತಿಳಿಯಲಿಲ್ಲ. ನನ್ನ ಕತೆಯಲ್ಲಿ ನಾನು ಗುರುತಿಸದೇ ಇದ್ದ ಹಲವು ಅಂಶಗಳನ್ನು ಪರಿಮಳಾ ಅವರು ಗುರುತಿಸಿದ್ದು ಕೇಳಿ ಅಚ್ಚರಿಯೂ ಆಯಿತು. ಸಂತೋಷವೂ ಆಯಿತು. ಪಕ್ಕದಲ್ಲಿಯೇ ಇದ್ದು ಹಸ್ತಪ್ರತಿ ಓದಿ ವಿಮರ್ಶಿಸಬಲ್ಲವರು ಸೂಪಾದಂಥ ಊರಲ್ಲಿ ಇದ್ದಾರಲ್ಲ ಎಂಬ ಹೆಮ್ಮೆಯೂ ಆಯಿತು.
ಕಾಫೀ ಮಾಡುತ್ತಲೇ ಪರಿಮಳಾ ಅವರು ನನ್ನ ಬರವಣಿಗೆಯ ಬಗ್ಗೆ ಮಾತಾಡಿದ್ದೇ ಮಾತಾಡಿದ್ದು. ನನಗೆ ನನ್ನ ರೂಮಿಗೆ ಹೋಗುವುದೇ ಮರೆತು ಹೋಯಿತು.
‘’ನಿಜಾ ಹೇಳ್ತಿದೀನಿ. ಅದೇನು ಶಬ್ದ ಸಂಗ್ರಹ ನಿಮ್ದು. ಅದೇನು ನಿರೂಪಣೆ, ಅನುಭವಸ್ಥರು ಬರೆದ ಹಾಗಿದೆ. ನಿಮ್ಮನೇಲಿ ಕತೆ ಬರೆಯೋರು ಯಾರಾದ್ರೂ ಇದ್ದಾರಾ?
‘’ಇಲ್ಲ ಮೇಡಮ್. ನಮ್ಮದು ಅನಕ್ಷರಸ್ಥ ಹಳ್ಳೀ ಕುಟುಂಬ. ನನ್ನ ತಾಯಿ ಸ್ಕೂಲು ಹಿಂದೆಯೂ ಹೋಗಿಲ್ಲ. ನನ್ನ ತಂದೆ ಓದಿದ್ದು ಎರಡನೇ ಕ್ಲಾಸು. ಆದ್ರೆ ರಾಮಾಯಣ, ಮಹಾಭಾರತದ ಕತೆಗಳನ್ನು ರಸವತ್ತಾಗಿ ಹೇಳ್ತಿದ್ರು. ಬರೀತಿರಲಿಲ್ಲ’’
‘’ನೋಡಿ ಮತ್ತೆ. ನಿಮಗೆ ಕತೆ ಬರೆಯೋ ತಾಕತ್ತನ್ನ ದೇವ್ರೇ ಕೊಟ್ಟೀದಾನೆ. ಬರೀರಿ ಶೇಖರ್’’
ಅದುವರೆಗೆ ಹೂಲಿ ಸರ್ ಅನ್ನುತ್ತಿದ್ದವರು ಈಗ ಶೇಖರ್ ಎಂದು ಸಲುಗೆ ತೋರಿದರು.
ಫೋಟೋ ಕೃಪೆ : story of kannadiga
ಒಂದು ಮಾತು ಹೇಳ್ತೀನಿ. ನೀವು ಅಧ್ಯಾಪಕರಾಗಿ ಸಾಹಿತ್ಯ ಬರೆದ್ರೆ ಒಳ್ಳೆಯದು. ಬೇಗ ಪ್ರಸಿದ್ಧರಾಗ್ತೀರಿ. ಡ್ಯಾಮಿನಲ್ಲಿ ಕೆಲ್ಸ ಮಾಡ್ಕೊಂಡು ಕತೆ-ಕಾದಂಬರಿ ಬರೀತೀನಿ ಅಂದ್ರೆ ಬರೀರಿ. ಆದ್ರೆ ಯಾರೂ ಕೇಳೋದಿಲ್ಲ.
ಪರಿಮಳಾರು ಹೇಳಿದ ಆ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿವೆ. ಅದು ಸತ್ಯವೂ ಹೌದು. ಆ ಕ್ಷಣ ಅವರು ನನ್ನ ಬಗ್ಗೆ ತುಸು ಹೆಚ್ಚಾಗಿಯೇ ಹೇಳಿದರೇನೋ ಅನ್ನಿಸಿತು.
ಅದುವರೆಗೆ ನಾನು ಏನೇನೋ ಬರೆದು ಟ್ರಂಕಿನಲ್ಲಿ ಜೋಪಾನವಾಗಿ ಇಟ್ಟುಕೊಂಡಿದ್ದೆ. ಬಸವರಾಜ ಕಟ್ಟೀಮನಿಯವರ ‘ಮಾಡಿ ಮಡಿದವರು’ ನಾನು ಓದಿದ ಮೊದಲ ಕಾದಂಬರಿ. ನಂತರ ಕೃಷ್ಣಮೂರ್ತಿ ಪುರಾಣಿಕರ ಒಂದೆರಡು ಕಾದಂಬರಿ ಓದಿದ್ದೆ. ಗದಗಿನವರು ಪ್ರಕಟಿಸಿದ ಒಂದಷ್ಟು ವೃತ್ತಿ ಕಂಪನಿ ನಾಟಕಗಳನ್ನೂ ಓದಿದ್ದೆ. ಸರ್ವಜ್ಞ, ಶರಣ ಸಾಹಿತ್ಯ, ನಿಜಗುಣಿ, ಪತ್ತಾರ ಮಾಸ್ತರರ ಸಂಗ್ಯಾ ಬಾಳ್ಯಾ, ಹಲವು ಲಾವಣಿಕಾರರನ್ನೂ ಓದಿದ್ದೆ. ಅವರ್ಯಾರೂ ಯೂನಿವರ್ಸಿಟಿ ಅಧ್ಯಾಪಕರು ಅಲ್ಲ. ಡಾಕ್ಟರೇಟ್ ಮಾಡಿದವರೂ ಅಲ್ಲ. ಅದೆಲ್ಲವನ್ನು ಬಿಟ್ಟು ನಾನೂ ಅಂಥ ಕಾದಂಬರಿಗಳನ್ನು ಬರೆಯಬೇಕು. ಅದಕ್ಕೂ ಮೊದಲು ಇನ್ನಷ್ಟು ಸಣ್ಣ ಕತೆಗಳನ್ನು ಬರೆಯಬೇಕು.
‘’ಶೇಖರ್ ಸರ್. ನಾನು ಹೀಗೆ ಹೇಳ್ತಿದೀನಿ ಅಂತ ಏನೂ ಅನ್ಕೋಬೇಡಿ. ಈಗ ನೀವು ಮಾಡ್ತಿರೋ ಕೆಲಸ ನಿಮ್ಗೆ ಒಗ್ಗೋದಿಲ್ಲ. ಈಗೆಲ್ಲ ಶಿಕ್ಷಣ ಕ್ಷೇತ್ರದಲ್ಲಿರೋರೇ ಸಾಹಿತಿಗಳಾಗಿರೋದು. ಯಾಕಂದ್ರೆ ಅವರು ಓದುವುದೂ ಒಂದು ವೃತ್ತಿ ಕಾರಣದಿಂದ. ಬರೆಯುವುದೂ ವೃತ್ತಿ ಕಾರಣದಿಂದಲೇ. ಅವರು ಪಿ.ಎಚ್.ಡಿ ಪದವಿ ಮಾಡುವುದಕ್ಕೂ ಅದೇ ಕಾರಣ. ಇಲ್ಲಾಂದ್ರೆ ಮಾಸ್ತಿ, ಸಿದ್ದಯ್ಯ ಪುರಾಣಿಕರ ಥರ ದೊಡ್ಡ ಅಧಿಕಾರಿಯಾಗಿ ಬರೀಬೇಕು. ಆಗ ನೀವು ಬೇಡ ಅಂದ್ರೂ ಜನ ಹೊಗಳ್ತಾರೆ. ಅವ್ರ ಥರ ಕಮೀಶನರೋ, ಡೀಸೀನೋ ಆಗಿ ಸಾಹಿತ್ಯ ಬರೆದ್ರೆ ಜನ ಮರ್ಯಾದೆ ಕೊಡೋದು. ನೀವು ಇಲ್ಲಿ ಡ್ಯಾಮಿನಲ್ಲಿ ಚಿಕ್ಕ ಕೆಲಸದಲ್ಲಿದ್ದುಕೊಂಡು ಸಾಹಿತ್ಯ ಬರೀತೀನಿ ಅಂದ್ರೆ ಯಾರೂ ಕೇಳೋದಿಲ್ಲ. ಏನೂ ಇಲ್ಲಾಂದ್ರೂ ಕನಿಷ್ಠ ಸ್ಕೂಲು ಮೇಸ್ಟ್ರು ಆಗಿ ಸಾಹಿತ್ಯ ಬರೀರಿ. ಕಾಲೇಜು ಅಧ್ಯಾಪಕ ಆಗಿ ಬರೆದ್ರೆ ಇನ್ನೂ ಒಳ್ಳೆಯದೇ. ಅದ್ರಲ್ಲೂ ‘ಡಾ’ ಸಾಹಿತಿಯಾದ್ರೆ ಇನ್ನೂ ಮರ್ಯಾದೆ. ಯಾಕಂದ್ರೆ ನೀವು ಬರೆದಿರೋದನ್ನ ಓದೋದಕ್ಕೆ ಒಂದಷ್ಟು ಶಿಷ್ಯವರ್ಗ ಇರುತ್ತೆ. ಇವ್ರು ನಮ್ಮ ಗುರುಗಳು ಅಂತ ಅವ್ರೇ ಮೆರವಣಿಗೆ ಮಾಡ್ತಾರೆ. ಡ್ಯಾಮಿನಲ್ಲಿದ್ದು ಇಂಥ ಕೆಲಸ ಮಾಡೋರನ್ನ ಯಾರು ನೆನಪಿಸಿಕೊಳ್ತಾರೆ ಹೇಳಿ’’ ಅಂದರು. ನನಗೆ ಅವರ ವಿಚಾರಧಾರೆ ತಪ್ಪೂ ಅನ್ನಿಸಲಿಲ್ಲ. ಆದರೂ ತಕ್ಷಣವೇ ಹೇಳಿದೆ.
‘’ನೀವಿದ್ದೀರಲ್ಲ ನನ್ನ ಓದುಗರಾಗಿ. ಅಷ್ಟು ಸಾಕು. ನಿಮ್ಮಂಥ ನಾಲ್ಕು ಜನ ಸಹೃದಯರು ನನ್ನ ಬರಹ ಓದಿದ್ರೆ ಸಾಕು. ಅದೇ ನನ್ನ ಪೂರ್ವ ಜನ್ಮದ ಪುಣ್ಯ ಅಂತ ಭಾವಿಸ್ತೀನಿ’’
ಎಂದೆ. ನನ್ನ ಮಾತಿನ ದನಿ ಗಟ್ಟಿಯಾಗಿರಲಿಲ್ಲವೇನೋ. ನಾನು ಆಡಿದ ಅಕ್ಷರ ನನಗೇ ಕೇಳಿಸಲಿಲ್ಲ. ನನಗೆ ಗೊತ್ತಿರದ ಎಷ್ಟೋ ವಿಷಯಗಳನ್ನು ಪರಿಮಳಾ ಅವರು ತಿಳಿದಿದ್ದಾರೆ. ನನ್ನ ಅಸಹಾಯಕತೆಯನ್ನೂ ಅವರು ಗುರುತಿಸಿದ್ದಾರೆ. ತಲೆ ಕೆಳಗೆ ಹಾಕಿ ಕೂತೆ.
ಒಣಗಿದ ಎಲೆಗಳು ಗಾಳಿ ಬೀಸಿದತ್ತ ತೂರಿಕೊಂಡು ಹೋಗೋದಿಲ್ವ
ಪರಿಮಳಾ ಅವರು ಹೇಳಿದ್ದು ತುಸು ಯೋಚಿಸುವಂತೆ ಮಾಡಿತು. ನನಗೂ ಶಿಕ್ಷಕನಾಗಬೇಕೆಂಬ ಹಂಬಲವಿತ್ತು. ಆದರೆ ಕಾಲ ಅಂದುಕೊಂಡಂತಿರುವುದಿಲ್ಲ. ನಮ್ಮಂಥ ಸಾಮಾನ್ಯ ಜನ ಸಮಾಜದಲ್ಲಿ ಒಣಗಿದ ಎಲೆಗಳಿದ್ದಂತೆ. ಗಾಳಿ ಬೀಸಿದ ಕಡೆಗೆ ತೂರಿಕೊಂಡು ಹೋಗಬೇಕಷ್ಟೆ. ನಮ್ಮ ಪಾಲಿನ ಅನ್ನ ಎಲ್ಲಿದೆಯೋ ಅಲ್ಲಿಯೇ ನಮಗೆ ಜಾಗ ಇರುತ್ತದೆ. ನನಗೆ ನಾನೇ ಸುಧಾರಿಸಿಕೊಂಡೆ.
ಸಣ್ಣ ಕತೆಗಳಷ್ಟೇ ಅಲ್ಲ. ಒಂದು ಕಂಪನೀ ನಾಟಕವನ್ನೂ ಬರೆದಿದ್ದೆ. ಒಂಭತ್ತನೇ ತರಗತಿಯಲ್ಲಿದ್ದಾಗ
ಫೋಟೋ ಕೃಪೆ : You Tube
ಸಣ್ಣ ಕತೆ ಬರೆಯಲು ನನಗೆ ಪ್ರೇರಣೆ ನೀಡಿದ್ದು ಆಗಿನ ಕಾಲದಲ್ಲಿ ಜನಪ್ರಿಯವಾಗಿದ್ದ ಮಾಸಿಕ ಚಂದಮಾಮ. ಅಲ್ಲಿಯ ಕತೆಗಳ ಸರಳತೆ, ಕುತೂಹಲಕಾರೀ ನಿರೂಪಣೆ ನನ್ನನ್ನು ಆಕರ್ಷಿಸಿದ್ದವು. ಹಾಗೆಯೇ ಬೆಳಗಾವಿಯಲ್ಲಿ ಏಣಗಿ ಬಾಳಪ್ಪ ನವರ ಕಂಪನಿ ನಾಟಕಗಳನ್ನು ನೋಡಿ ಅವುಗಳ ಪ್ರಭಾವದಿಂದ ಒಂಭತ್ತನೇ ತರಗತಿಯಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಒಂದು ಕಂಪನೀ ಶೈಲಿಯ ನಾಟಕವನ್ನೂ ಬರೆದಿದ್ದೆ. ಅದರ ಹೆಸರು ‘’ನಿರಪರಾಧಿ ಕಳ್ಳ’’. ಅದರ ಹಸ್ತಪ್ರತಿಯನ್ನು ಯಾರಿಗೂ ತೋರಿಸಿರಲಿಲ್ಲ. ತೋರಿಸುವ ಅವಕಾಶವೂ ಬಂದಿರಲಿಲ್ಲ.
ಸರ್ವೇ ಕ್ಯಾಂಪಿನಲ್ಲಿದ್ದಾಗನ್ನೊಂದಿಗೆ ಯಾರೂ ಓದುಗರಿರಲಿಲ್ಲ. ಅಲ್ಲಿ ಹಸ್ತಪ್ರತಿಗಳನ್ನು ಹೊರಗೆ ತಗೆದರೆ ಅದೆಲ್ಲಿ ಅವು ಅಪ್ಪೂ ಕೈಗೆ ಸಿಕ್ಕು ಒಲೆಯ ಪಾಲಾಗುತ್ತಾವೋ ಎಂಬ ಭಯವಿತ್ತು. ಈಗ ಇಲ್ಲಿ ಓದುಗ ಪ್ರಭು ಸಿಕ್ಕಿದ್ದಾರೆ. ಒಂದೊಂದಾಗಿ ಇವರಿಗೇ ಓದಲು ಕೊಟ್ಟು ಅಭಿಪ್ರಾಯ ಪಡೆಯಬೇಕು ಎಂದು ಒಳ ಮನಸ್ಸು ಹೇಳಿತು.
ಪರಿಮಳಾ ಅವರು ಬೆನ್ನು ತಟ್ಟಿದರು. ರಾಜ್ಯ ಮಟ್ಟದ ಕಥಾ ಸ್ಫರ್ಧೆಗೆ ಕತೆ ಕಳಿಸಿ ಅಂದರು
‘’ಕಾಫೀ ತಗೊಳ್ಳಿ’’
ಪರಿಮಳಾ ಅವರು ಎರಡು ಕಾಫೀ ಕಪ್ಪುಗಳೊಂದಿಗೆ ಬಂದರು. ನನಗೊಂದು ಗ್ಲಾಸು ಕೊಟ್ಟು ತಾವೂ ಕುಡಿಯುತ್ತ ನನ್ನ ಎದುರಿಗೇ ಕುಳಿತರು. ನನಗೆ ಮತ್ತಷ್ಟು ಮುಜುಗುರವಾಯಿತು. ತಲೆ ತಗ್ಗಿಸಿ ಕಾಫೀ ಕುಡಿಯತೊಡಗಿದೆ.
‘’ನೀವು ಬರತಾ ಇದ್ದಂಗೆ ಇದನ್ನು ಕೊಡೋಣಾಂತ ಕಾಯ್ತಿದ್ದೆ… ತಗಳ್ಳಿ’’ ಎಂದು ಅವರು ನನ್ನತ್ತ ಆಗಿನ ಜನಪ್ರಿಯ ವಾರ ಪತ್ರಿಕೆ ಪ್ರಜಾಮತವನ್ನು ನನ್ನತ್ತ ಚಾಚಿದರು.
ನಾನು ಈ ಪತ್ರಿಕೆಯ ಹೆಸರು ಕೇಳಿದ್ದೆ. ನೋಡಿರಲಿಲ್ಲ. ನಾನು ಇದ್ದ ಕಡೆ ಈ ಪತ್ರಿಕೆ ಬರುತ್ತಿರಲಿಲ್ಲ. ಕುತೂಹಲದಿಂದ ನೋಡಿದೆ. ಅದರಲ್ಲಿದ್ದ ಒಂದು ವಿಷಯದ ಮೇಲೆ ಪರಿಮಳಾ ಅವರು ಬೆರಳನ್ನಿಟ್ಟು ತೋರಿಸಿದರು. ಕಣ್ ಬಿಟ್ಟು ನೋಡಿದೆ. ಅದೊಂದು ಪ್ರಕಟಣೆಯಾಗಿತ್ತು.
ಕಾದಂಬರಿಗಾರ್ತಿ ತ್ರಿವೇಣಿ – ಫೋಟೋ ಕೃಪೆ : Memory of Triveni – Facebook Page
ಕಾದಂಬರಿಗಾರ್ತಿ ತ್ರಿವೇಣಿಯವರ ನೆನಪಿಗಾಗಿ ಬೆಂಗಳೂರಿನ ಸಾಹಿತ್ಯ ಸಂಘವೊಂದು ರಾಜ್ಯ ಮಟ್ಟದ ಕಥಾ ಸ್ಪರ್ಧೆಯನ್ನು ಇಟ್ಟಿತ್ತು. ಮೊದಲ ಬಹುಮಾನ ಎಪ್ಪತೈದು ರೂಪಾಯಿ. ದ್ವಿತೀಯ ಬಹುಮಾನ ಐವತ್ತು ರೂಪಾಯಿ. ತೃತೀಯ ಮೂವತ್ತು ರೂಪಾಯಿ. ಬಹುಮಾನಿತ ಕತೆಗಳನ್ನು ಪ್ರಜಾಮತ ವಾರ ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತದೆ ಎಂದೂ ಹೇಳಿದ್ದರು. ಅದು ರಾಜ್ಯ.ಮಟ್ಟದ ಸ್ಫರ್ಧೆಯಾದ್ದರಿಂದ ಯಾರು ಬೇಕಾದರೂ ಭಾಗವಹಿಸಬಹುದು ಎಂದು ಹೇಳಿದ್ದರು. ಒಂದು ಕ್ಷಣ ಅದನ್ನು ಓದಿ ಸುಮ್ಮನೆ ಕೂತೆ. ಸ್ಫರ್ಧೆ ನನಗೆ ಯಾವತ್ತಿದ್ದರೂ ಹುಮ್ಮಸ್ಸು ಕೊಡುವ ಸಂಗತಿ. ಆದರೂ ಅದನ್ನು ಜಗಜ್ಜಾರು ಮಾಡುವ ಜಾಯಮಾನ ನನ್ನದಾಗಿರಲಿಲ್ಲ.
‘’ನನಗನಿಸುತ್ತೆ. ಈಗ ನೀವು ಬರೆದಿರೋ ಕತೇನ ಈ ಸ್ಫರ್ಧೆಗೆ ಕಳುಹಿಸಿ. ಬಹುಮಾನ ಬರುತ್ತೋ ಬಿಡುತ್ತೋ. ಯೋಚನೆ ಬೇಡ. ಆದ್ರೆ ಈ ನೆಪದಲ್ಲಾದ್ರೂ ಹತ್ತು ಜನ ಅಲ್ಲಿ ನಿಮ್ಮ ಕತೇನ ಓದ್ತಾರೆ’’ ಅಂದರು. ಈಗ ನಾನು ಗಾಢ ಯೋಚನೆಯಲ್ಲಿ ಬಿದ್ದೆ. ಅವರು ಹೇಳಿದ್ದೂ ಸರಿಯೇ. ಸ್ಫರ್ಧೆ ಅಂತ ಬಂದಾಗ ನಾನು ಯಾವತ್ತೂ ಹಿಂದೆ ಸರಿದವನಲ್ಲ. ಓದಿನ ದಿನಗಳಿಂದಲೂ ನಾನು ಅಂಥದ್ದರಲ್ಲಿ ಮುಂಚೂಣಿಯಲ್ಲಿದ್ದೆ. ನನ್ನೊಳಿಗಿನ ಸ್ಫರ್ಧಿ ಎಚ್ಚರಗೊಂಡ.
ನೀವು ನಿಮ್ಮ ಕೆಲಕ್ಕೆ ಹೋಗಿ. ನಾಳೆ ನಾನೇ ನಿಮ್ಮ ಪರವಾಗಿ ಪೋಸ್ಟಆಫೀಸೀಗೆ ಹೋಗಿ ರಿಜಿಸ್ಟರ ಮಾಡಿ ಬರ್ತೀನಿ ಅಂದರು ಪರಿಮಳಾ ಅವರು. ನನ್ನ ಹೃದಯ ಭಾರವಾಯಿತು.
[ಮುಂದುವುರಿಯುತ್ತದೆ. ಇದು ಬೆಳಕು ತಂದವರ ಕತ್ತಲ ಬದುಕಿನ ಕತೆ. ಪ್ರತಿ ಶನಿವಾರ ತಪ್ಪದೇ ಓದಿರಿ. ಮತ್ತು ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿರಿ]
- ಹೂಲಿಶೇಖರ್
(ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು)
