ಭಾರತದ ನವೋದಯದ ಮಹಾನ್ ಚೇತನ – ಈಶ್ವರಚಂದ್ರ ವಿದ್ಯಾಸಾಗರ

ಮಹಿಳೆಯರನ್ನು ಶಿಕ್ಷಣದಿಂದ ವಂಚಿಸಿದರೆ ಅಂತಹ ಸಮಾಜ ಮುಂದುವರಿಯಲು ಸಾಧ್ಯವಿಲ್ಲ ಎಂದು ಅರಿತು ಕೇವಲ ಮೂರು ಹೆಣ್ಣುಮಕ್ಕಳಿಗೆ ಶಾಲೆಯನ್ನು ತೆರೆದು ಸಮಾಜದಲ್ಲಿದ್ದ ಅಂಧಕಾರವನ್ನು ಹೊಡೆದೋಡಿಸಲು ಮುಂದಾದವರು  ವಿದ್ಯಾಸಾಗರ ಅವರು. ಮತ್ತು ತನ್ನ ಮಗನಿಗೆ ವಿಧವೆಯ ಜೊತೆ ಮದುವೆ ಮಾಡಿಸುವ ಮೂಲಕ ವಿಧವಾ ವಿವಾಹವನ್ನು ಪ್ರೇರೇಪಿಸಿದ ಮಹಾನ್ ವ್ಯಕ್ತಿ.

‘ಮನುಷ್ಯನನ್ನಾಗಿ ಮಾಡುವ ಪ್ರಕ್ರಿಯೆ ಶಿಕ್ಷಣ, ಅದು ಪ್ರತಿಯೊಬ್ಬರ ಹಕ್ಕು’ ಹೀಗೆಂದವರು ಭಾರತ ನವೋದಯದ ಧರ್ಮ ನಿರಪೇಕ್ಷ ಮಾನವತಾವಾದಿ ಈಶ್ವರಚಂದ್ರ ವಿದ್ಯಾಸಾಗರರವರು. ಈ ಯುಗದ ಯಾವುದೇ ಅಕ್ಷರಸ್ಥ ಸ್ತ್ರೀ ಅತ್ಯಂತ ಕೃತಜ್ಞತೆಯಿಂದ ಸ್ಮರಿಸಿಕೊಳ್ಳಲೆ ಬೇಕಾದ ಧೀಮಂತ ವ್ಯಕ್ತಿ ವಿದ್ಯಾಸಾಗರ್. ಈ ಮೇರು ವ್ಯಕ್ತಿತ್ವ ನಮ್ಮ ದೇಶದ ನೆಲದಲ್ಲಿ ಜನಿಸಿ ಸೆಪ್ಟೆಂಬರ್ ೨೬ ಕ್ಕೆ ಎರಡು ಶತಮಾನಗಳು ಪೂರೈಸುತ್ತದೆ. ತಮ್ಮ ಜೀವನದುದ್ದಕ್ಕೂ ಮಾಡಿದ ಅನೇಕ ಸಾಧನೆಗಳ ಜೊತೆಗೆ ವಿಶೇಷವಾಗಿ ಮಹಿಳಾ ವಿಮೋಚನೆಗಾಗಿ ಜೀವಮಾನದುದ್ದಕ್ಕೂ ರಾಜಿ ರಹಿತವಾಗಿ ದುಡಿದ ಅಮೋಘ ವ್ಯಕ್ತಿತ್ವ. ವಿದ್ಯಾಸಾಗರರ ಬಗ್ಗೆ ‘ನಮ್ಮ ದೇಶದಲ್ಲಿ ಅವರಿಂದ ಸ್ಫೂರ್ತಿ ಪಡೆಯದಿದ್ದಂತಹ ಯಾವುದೇ ವ್ಯಕ್ತಿ ಇರಲಿಲ್ಲ’ ಎಂದು ವಿವೇಕಾನಂದರು ನುಡಿದಿದ್ದಾರೆ.

ತಮ್ಮ ಸಮಕಾಲೀನ ಪ್ರಮುಖ ವ್ಯಕ್ತಿಗಳೆಲ್ಲರಿಂದಲೂ ಗೌರವ, ಪ್ರಶಂಸೆ ಗಳಿಸಿಕೊಂಡವರು ವಿದ್ಯಾಸಾಗರರು. ಶತ ಶತಮಾನಗಳ ಹಳೆ ಸಂಪ್ರದಾಯ ವಿಚಾರಗಳ ಗಾಡಾಂಧಕಾರದಲ್ಲಿ ‘ಭಾರತ ನವೋದಯದ ಧರ್ಮಾತೀತ ಮಾನವತಾವಾದಿ ವ್ಯಕ್ತಿತ್ವವಾಗಿ ಹೊರಹೊಮ್ಮಿದ ಯುಗಪುರುಷ’.

ಇವರು ‘ಧಾರ್ಮಿಕ ಮನೋಭಾವನೆಯನ್ನು ಚಳುವಳಿಯಿಂದ ದೂರ ಉಳಿಸಿದರು’.  ಈ ನೆಲದಲ್ಲಿ ಮೊಟ್ಟ ಮೊದಲ ಬಾರಿಗೆ  ಮಾನವತಾವಾದದ ಚಳುವಳಿಯನ್ನು ಸಾಧ್ಯವಾದಷ್ಟು ವಿಜ್ಞಾನ, ಇತಿಹಾಸ ಹಾಗೂ ತರ್ಕದ ಆಧಾರದ ಮೇಲೆ ಬೆಳೆಸಲು ತುಂಬಾ ಪ್ರಯತ್ನಪಟ್ಟು, ಆಧುನಿಕ ಶಿಕ್ಷಣದ ಭದ್ರ ಬುನಾದಿ ಹಾಕಿದರು. ಈ ಹಾದಿ ತುಳಿದಿದ್ದರಿಂದಲೇ ನವೋದಯದ ರಾಜಿ ರಹಿತ ಪಂಥದ ಹರಿಕಾರರಾದರು.

ಬಾಲ್ಯದಿಂದಲೂ ಇವರ ಜೀವನ ಕಡು ಬಡತನದಿಂದ ಇದ್ದರೂ ಉನ್ನತ ಸಂಸ್ಕೃತಿ ಹಾಗೂ ಪ್ರಾಮಾಣಿಕತೆಗೆ ಕೊರತೆಯಿರಲಿಲ್ಲ. ಇವರ ಅಜ್ಜಿ, ತಾಯಿ ಮತ್ತು ಅತ್ತೆಯರ ಪ್ರೀತಿ, ಮಮತೆಗಳ ಮಡಿಲಲ್ಲಿ ಬೆಳೆದವರು. ಓದಲು ಹೋದಾಗ ತಾವು ವಾಸವಿದ್ದ ಮನೆಯಾಕೆ ಬೀದಿ ಬದಿ ವ್ಯಾಪಾರಿ ಹೆಣ್ಣು ಮಗಳು ಮತ್ತು ಆಕೆ ಬಂಗಾಳದ ಅನಕ್ಷರಸ್ಥೆಯಾಗಿದ್ದಳು. ಆಕೆ ಅವರನ್ನು ಮಗನಂತೆ ಕಂಡು ವಾತ್ಸಲ್ಯ ತೋರಿ ಅರೆ ಹೊಟ್ಟೆಯಲ್ಲಿದ್ದ ವಿದ್ಯಾಸಾಗರರಿಗೆ ಆಹಾರ ನೀಡಿ ಕಾಪಾಡಿದಳು. ಹೀಗೆ ಸುಸಂಸ್ಕೃತ ಮಮತಾಮಯಿ ಹೆಣ್ಣುಮಕ್ಕಳ ಮಾತೃತ್ವದ ಸವಿ ಉಂಡು ಮಹಿಳೆಯರ ಬಗ್ಗೆ ಗೌರವ ಬೆಳೆಸಿಕೊಂಡವರು ಇವರು.

ಶತಮಾನಗಳಿಂದ ಧರ್ಮದ ಹೆಸರಿನಲ್ಲಿ ಪೋಷಿಸಿಕೊಂಡು ಬಂದಿದ್ದ ಕಂದಾಚಾರಗಳು ಹಾಗೂ ಗೊಡ್ದು ಸಂಪ್ರದಾಯಗಳಿಗೆ ಬಲಿಯಾಗಿ ಬಾಲ್ಯವಿವಾಹ, ಬಹುಪತ್ನಿತ್ವ ಪದ್ಧತಿಯಿಂದ ಬಾಲ ವಿಧವೆಯರ ಸಂಖ್ಯೆ ಹೆಚ್ಚಾಯಿತು. ವಿಧವಾ ಪುನರ್ ವಿವಾಹವನ್ನು ಸಮಾಜ ಅಂಗೀಕರಿಸುವ ಹಾಗೂ ಬೆಂಬಲಿಸುವ ಶಾಸ್ತ್ರದ ಮೊರೆ ಹೋಗಿ ಶಾಸನವನ್ನು ರೂಪಿಸಲು ಕಾರಣಕರ್ತರಾದರು. ತನ್ನ ಮಗನಿಗೆ ವಿಧವೆಯ ಜೊತೆ ಮದುವೆ ಮಾಡಿಸುವ ಮೂಲಕ ವಿಧವಾ ವಿವಾಹವನ್ನು ಪ್ರೇರೇಪಿಸಿದರು.

ಮಹಿಳೆಯರನ್ನು ಶಿಕ್ಷಣದಿಂದ ವಂಚಿಸಿದರೆ ಅಂತಹ ಸಮಾಜ ಮುಂದುವರಿಯಲು ಸಾಧ್ಯವಿಲ್ಲ ಎಂದು ಅರಿತು ಕೇವಲ ಮೂರು ಹೆಣ್ಣುಮಕ್ಕಳಿಗೆ ಶಾಲೆಯನ್ನು ತೆರೆಯುವುದರ ಮೂಲಕ ಎಂದು ಅಂಧಶ್ರದ್ಧೆಗಳ ಶೋಷಣೆಯಿಂದ ಮಹಿಳಾ ವಿಮುಕ್ತಿಗೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ನಿರೂಪಿಸಿದರು.

  • ಅಂದು ಜನ ಸಾಮಾನ್ಯರಿಗೆ ಶಿಕ್ಷಣ ಪ್ರವೇಶ ಇಲ್ಲದ್ದರಿಂದ ವಿದ್ಯಾಸಾಗರರು ಕಾಲೇಜಿನ ಆಡಳಿತ ವರ್ಗಕ್ಕೆ ಸೇರಿದ ನಂತರ ಎಲ್ಲರಿಗೂ ಶಿಕ್ಷಣ ಮುಕ್ತವಾಗಿ ತೆರೆದಿಟ್ಟರು.
  • ಮಾತೃಭಾಷೆಯಲ್ಲೇ ವಿದ್ಯೆ ಕಲಿಸಲು ದೇಶೀಯ ಶಾಲೆಗಳನ್ನು ತೆರೆದರು. ಶಿಕ್ಷಕರಿಗೆ ತರಬೇತಿ ನೀಡಲು ತರಬೇತಿ ಶಾಲೆಗಳನ್ನು ತೆರೆದರು.
  • ದೇಶೀಯ ಭಾಷೆಯಲ್ಲಿ ಪಠ್ಯ ಪುಸ್ತಕ ಹೊರತಂದರು ಕಷ್ಟಕರ ವಿಷಯವನ್ನು ಸರಳವಾಗಿ ವಿವರಿಸುವ ಮೂಲಕ ಶಿಕ್ಷಣ ಪ್ರೇಮವನ್ನು ಬೆಳೆಸಿದರು.
  • ಶಿಕ್ಷಣಕ್ಕೆ ಧರ್ಮನಿರಪೇಕ್ಷ ಹಾಗೂ ವೈಜ್ಞಾನಿಕ ಮನೋಭಾವದ ತಳಹದಿ ಹಾಕಿದರು.
  • ಧರ್ಮದಿಂದ ದೂರವಿದ್ದು ಚಳುವಳಿಗೆ ಹೊಸ ಆಯಾಮ ನೀಡಿದರು.
  • ಸಾಮಾಜಿಕ ಸಂಪ್ರದಾಯಗಳಿಗೆ ಎಂದೂ ಗುಲಾಮರಾಗಲಿಲ್ಲ.

ಬ್ರಿಟಿಷ್ ಅಧಿಕಾರಿಗಾಗಲಿ ಅಥವಾ ಭಾರತೀಯ ರಾಜನಿಗೇ ಆಗಲಿ ಯಾರಿಗೂ ತಲೆಬಾಗದೆ ಸಂಧಾನ ಮಾಡಿಕೊಳ್ಳದೆ ಹಿಮಾಲಯ ಶಿಖರದಂತೆ ದಿಟ್ಟ ನಿಲುವಿನ ವ್ಯಕ್ತಿಯಾಗಿದ್ದರು. ವಿದ್ಯಾಸಾಗರರ ಬಗ್ಗೆ ಜನರಿಗೆ ಆರಾಧನಾಭಾವ ಎಷ್ಟಿತ್ತೆಂದರೆ, ತಮ್ಮ ದೇವರ ಹಾಗೂ ಧರ್ಮಗುರುಗಳ ಭಾವಚಿತ್ರದ ಜೊತೆಗೆ ಈಗಲೂ ವಿದ್ಯಾಸಾಗರರ ಭಾವಚಿತ್ರವನ್ನೂ ತೂಗು ಹಾಕುತ್ತಾರೆ.

ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದು, ಬಾಹ್ಯ ರೂಪದಲ್ಲಿ ಬ್ರಾಹ್ಮಣ ವಿದ್ವಾಂಸರಂತೆ ಕಂಡರೂ, ಅಂತರಾಳದಲ್ಲಿ ಸಂಪ್ರದಾಯವಾದಿ, ಅಂಧ ವಿಶ್ವಾಸ-ಮೂಢಾಚಾರಣೆಗಳನ್ನು ಬುಡ ಸಮೇತ ಕಿತ್ತು ಹಾಕಲು ಆಧುನಿಕ ವಿಚಾರಗಳನ್ನು ಮೈಗೂಡಿಸಿಕೊಂಡಿದ್ದರು. ಆದರೆ ವಿದ್ಯಾಸಾಗರರು ಕಂಡ ಕನಸುಗಳು ಇಂದಿಗೂ ಅಪೂರ್ಣವಾಗಿವೆ. ಜಾತಿಯತೆ, ಮಹಿಳೆಯರ ದಮನ, ಕೋಮುವಾದ ಉಳಿಗಮಾನ್ಯ ಪದ್ಧತಿಯ ಪಳೆಯುಳಿಕೆಗಳು ವಿದ್ಯಾಸಾಗರರ ಆಶೋತ್ತರಗಳಿಗೆ ವಿರುದ್ಧವಾಗಿ ಸಮಾಜದಲ್ಲಿ ಬೇರುಬಿಟ್ಟಿವೆ. ಜನಮಾನಸದಿಂದ ಇವರ ಹೆಸರನ್ನು ಅಳಿಸಿ ಹಾಕುವ ಸರ್ವ ಪ್ರಯತ್ನವನ್ನು ಆಳುವ ವರ್ಗ ತನ್ನ ಗುರಿಯಾಗಿಸಿಕೊಂಡಿದೆ.

ಈ ಹಿನ್ನೆಲೆಯಲ್ಲಿ ವಿದ್ಯಾಸಾಗರರು ಕೈಗೆತ್ತಿಕೊಂಡ ಕಾರ್ಯಗಳನ್ನು ಪೂರ್ಣಗೊಳಿಸಲು ಪಣತೊಡಬೇಕು. ಈ ಉದಾತ್ತ ಕಾರ್ಯದಲ್ಲಿ ಎಲ್ಲಾ ಪ್ರಜ್ಞಾವಂತ ವಿದ್ಯಾರ್ಥಿ, ಯುವಜನ ಮಹಿಳೆಯರು ಕೈಜೋಡಿಸಿ ನವ ಸಮಾಜವನ್ನು ಸೃಷ್ಠಿಸಲು ಅವರ ಸ್ಮರಣೆ ನಮಗೆ ಚಿರಂತನ ಸ್ಫೂರ್ತಿಯಾಗಬೇಕು.


  • ಎಂ.ಶಾಂತ ( ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಬೆಂಗಳೂರು, ಜಿಲ್ಲಾ ಕಾರ್ಯದರ್ಶಿ )
0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW