ನಟನೆಯೇ ಆಗಿನ ಕಾಲದ ನಿಶೆ – ರಂಗ ನಟಿ ರೇಣುಕಮ್ಮ ಮುರುಗೋಡು

ರೇಣುಕಮ್ಮ ಮುರುಗೋಡು ಎಂಥಾ ಕಲಾವಿದೆ. ನಿಶೆ ಆಗಿನ ಕಾಲದಲ್ಲಿ ನಟನೆಯ ಲೋಕಕ್ಕೆ ಕರೆದೊಯ್ಯುವ ಸಾಧನವಾಗಿತ್ತು ಅನ್ನುವುದು ಕೆಲವರ ಮಾತು. ಈಗ ಹಾಗಿಲ್ಲ. ಅದು ಹಣ ಮಾಡುವ ಮಾರ್ಗವಾಗಿದೆ. ಕಲೆಗೂ ಅದಕ್ಕೂ ಸಂಬಂಧವೇ ಇಲ್ಲ. 

ಮಧ್ಯಾನ ಒಂದೂವರೆ ಗಂಟೆ. ಈಗ ಶೂಟಿಂಗ್‌ಗೆ ಊಟದ ಬ್ರೇಕು. ಬೆಳಿಗ್ಗೆ ಎಂಟಕ್ಕೇ ಆರಂಭವಾದ ‘ಮೂಡಲ ಮನೆ’ ಯ ಶೂಟಿಂಗ್‌ ಬ್ರೇಕ್‌ ತಗೆದುಕೊಳ್ಳುವುದು ದಿನದ ಎರಡು ಹೊತ್ತಿನಲ್ಲಿ ಮಾತ್ರ. ಒಂದು ಮಧ್ಯಾನ ಊಟಕ್ಕೆ. ಎರಡು ಸಂಜೆ ಆರಕ್ಕೆ ಟೀ ಬ್ರೇಕಿಗೆಗ. ಸಂಜೆ ಚಹದ ನಂತರ ರಾತ್ರಿ ಒಂಭತ್ತರ ತನಕ ಬಿಡದೇ ಶೂಟಿಂಗ್‌ ನಡೆಯುತ್ತಿತ್ತು.  ನಾನೂ ತಂಡದ ಜೊತೆಗಿದ್ದು ಬೆಳಗಿನಿಂದ ಮಧ್ಯಾನದವರೆಗೆ ಅವತ್ತಿನ ದೃಶ್ಯಗಳನ್ನು ಬರೆದು ನಿರ್ದೇಶಕರ ಕೈಗೆ ಒಪ್ಪಿಸಿ ಕೆಮರಾ ಹಿಂದೆ ಹೋಗಿ ಮಾನಿಟರ್‌ ನೋಡುತ್ತ ಕೂಡುತ್ತಿದ್ದೆ. ನಾನು ಬರೆದ ಸಂಭಾಷಣೆಗಳಿಗೆ ಕಲಾವಿದರು ಹೇಗೆ ಜೀವ ತುಂಬುತ್ತಾರೆ ಎಂದು ನೋಡುವ ತವಕ ನನಗೆ.

ಅಲ್ಲಿ ನಮ್ಮೊಂದಿಗೇ ಇದ್ದ ಹಿರಿಯ ಕಲಾವಿದೆ ಶ್ರೀಮತಿ ರೇಣುಕಮ್ಮ ಮುರುಗೋಡರಿಗೆ ಆಗಲೇ ಎಪ್ಪತ್ತರ ಮೇಲೆ ವಯಸ್ಸು. ಅವರ ಬಗ್ಗೆ ನನಗೆ ವಿಶೇಷ ಆಸಕ್ತಿ ಮತ್ತು ಅಷ್ಟೇ ಕುತೂಹಲ. ಇಡೀ ಮೂಡಲಮನೆಯ ಕಲಾವಿದರ ತಂಡದಲ್ಲಿ ಅತ್ಯಂತ ದಟ್ಟ ರಂಗಾನುಭವ ಇದ್ದ ಕಲಾವಿದೆ ಅಂದರೆ ಅವರೊಬ್ಬರೇ. ಅವರ ಬದುಕಿನ ಪ್ರೀತಿ, ಜೀವನ ಶ್ರದ್ಧೆಯನ್ನು ಕಂಡಿದ್ದ ನನಗೆ ಅವರ ಬಗ್ಗೆ ಅಪಾರ ಗೌರವ, ಪ್ರೀತಿ ಇತ್ತು.   

ಅರವತ್ತು ವರ್ಷಗಳಿಂದ ವೃತ್ತಿ ನಾಟಕ ಕಂಪನಿಯಲ್ಲಿದ್ದು ಹಲವಾರು ಕಂಪನಿಗಳಲ್ಲಿ ನಟಿಯಾಗಿ ಪ್ರಸಿದ್ಧರಾಗಿದ್ದ ರೇಣುಕಮ್ಮನಿಗೆ ರಂಗಭೂಮಿ ದೊಡ್ಡ ಸಂಪತ್ತೇನೂ ಕೊಟ್ಟಿರಲಿಲ್ಲ. ವಯಸ್ಸು ಮಾಗುತ್ತ ಬಂದಂತೆ ವೃತ್ತಿ ನಾಟಕ ಕಂಪನಿಗಳೂ ಸೊರಗುತ್ತ ಬಂದಿದ್ದವು. ಹಾಗೆಂದು ತುತ್ತಿನ ಚೀಲ ಸುಮ್ಮನಿರುವದಿಲ್ಲವಲ್ಲ. ಇಂಥ ಸಂದರ್ಭದಲ್ಲಿ ಕಿರುತೆರೆ ಮತ್ತು ಕೆಲವು ಸಿನಿಮಾಗಳು ಅವರ ಕೈ ಹಿಡಿದಿದ್ದವು. 

ತಮ್ಮ ಇಡೀ ಜೀವಮಾನವನ್ನೇ ರಂಗನಟನೆಗೆ ಅರ್ಪಿಸಿದ ಈ ಹಿರಿಯ ನಟಿಯು ನಿತ್ಯದ ಅನ್ನಕ್ಕಾಗಿ ಈ ಇಳಿ ವಯಸ್ಸಿನಲ್ಲೂ ಹೆಣಗುತ್ತಿರುವುದು ನನಗೆ ಕನಿಕರವೂ ಆಗಿತ್ತು. ಯಾಕಂದರೆ ನಾನೂ ನೋಡಿದ್ದೇನೆ. ಈ ಇಂಡಸ್ಟ್ರಿಗೆ ಬಂದ ಎಲ್‌ ಬೋರ್ಡ ಹುಡುಗಿಯರು ಎರಡು ವರ್ಷಗಳಲ್ಲಿಯೇ ದಿಲ್‌ದಾರಾಗಿ ಹಣ ಬಾಚುತ್ತಾರೆ. ಮುಂದೆ ಸಿಲೆಬ್ರೆಟಿ ಅನ್ನಿಸಿಕೊಳ್ಳಲು ಟಿ.ವಿ. ಸಿನಿಮಾಗಳನ್ನು ಕೈಬ್ಯಾಗಿನಲ್ಲಿಟ್ಟುಕೊಂಡು ಹಣ ಮಾಡುವುದನ್ನೇ ಪರಮ ಧ್ಯೇಯ ಮಾಡಿಕೊಂಡಿರುತ್ತಾರೆ. ಸುಂದರಿಯೂ ಆದ ಈ ರೇಣುಕಮ್ಮ ತನ್ನ ಯೌವನ ಕಾಲದಲ್ಲಿ ನಟನೆಯೊಂದಿಗೆ ಹಣವನ್ನೂ ಮಾಡಬಹುದಿತ್ತು. ಆದರೆ ಕಾಲ ಹಾಗಿರಲಿಲ್ಲ. ಕಲೆ ಅನ್ನುವುದು ಆಗ ಅವರಿಗೆ ದೇವರಾಗಿತ್ತು. ಸೇವೆಯಾಗಿತ್ತು. ಅದರ ಇಂದಿನ ನಟಿಯರು ಹಣ ಮಾಡುವುದರ ಹಿಂದಿನ ಗುಟ್ಟೇನು ಎಂದು ನಾನು ಹಲವು ಬಾರಿ ಯೋಚಿಸುತ್ತಿದ್ದೆ. ಇಂಥದ್ದೊಂದು ಪ್ರಶ್ನೆಯನ್ನು ರೇಣುಕಮ್ಮನವರ ಬಳಿಯಿಟ್ಟು ಕೇಳಬೇಕು. ಈಗಿನವರಿಗೆ ಸಾಧ್ಯವಾಗುತ್ತಿರುವುದು ಹಳೇ ಕಾಲದ ನಟಿಯರಿಗೇಕೆ ಸಾಧ್ಯವಾಗಿಲ್ಲ ಎಂದು.  

ನಾನು ರೇಣುಕಮ್ಮನ ಜೊತೆಯೇ ಊಟ ಮುಗಿಸಿ ನಡೀರಿ ಅಜ್ಜೀ. ನಿಮ್ಮ ಹತ್ರ ಒಂದೀಟು ಮಾತಾಡಬೇಕು ಎನ್ನುತ್ತ ವಾಡೆಯ ನಡು ಮನೆಗೆ ಕರೆದುಕೊಂಡು ಬಂದೆ. ಅಲ್ಲಿದ್ದ ಚಾಪೆಯ ಮೇಲೆ ಇಬ್ಬರೂ ಕೂಡುತ್ತಿದ್ದಂತೆ ರೇಣುಕಮ್ಮ ಎಲೆಯಡಿಕೆ ಚಂಚಿ ಹೊರಗೆ ತಗೆದರು. 

ಇಬ್ಬರೂ ಅಲ್ಲಿ ಹಾಸಿದ್ದ ಚಾಪೆಯ ಮೇಲೆ ಕೂಡುತ್ತಿದ್ದಂತೆ ಮುದುಕಿ ಎಲೆಯಡಿಕೆಯ ಚಂಚಿ ಹೊರತಗೆದು ಕುಟ್ಟತೊಡಗಿತು. ರೇಣುಕಮ್ಮನ ಕೈಯಿಂದ ಕುಟ್ಟಿದ ಎಲೆಯಡಿಕೆ ಮೆಲ್ಲುವುದು ನನಗೂ ಇಷ್ಟ. ಈಗ ಮೊದಲು ಅವರ ನಾಟಕ ಕಂಪನೀ ಜೀವನದ ಕೆಲವು ಸಂಗತಿಗಳನ್ನು ಅವರ ಬಾಯಿಂದಲೇ ಕೇಳಬೇಕು ಎಂದು ಮಾತು ಸುರು ಮಾಡಿದೆ. 

‘’ಅಜ್ಜೀ… ನಿಮ್ಮ ಕಾಲದಾಗ ಎಷ್ಟೊಂದು ಪ್ರಭಾವಿಯಾಗಿ ಪಾರ್ಟು ಮಾಡ್ತಿದ್ದಿರಲ್ಲ. ಯಾಕ? ಯಾರಾದ್ರೂ ಇದ್ದರೇನು  , ನಿಶೇದ ದಾಸರು ನಿಮ್ಮ ಕಂಪನೀಯೊಳಗ. ಹೆಸರೇನು ಹೇಳಬ್ಯಾಡ್ರಿ. ಇದ್ರೋ ಇಲ್ಲೋ ಅಷ್ಟ ಹೇಳ್ರಿ’’

ನನ್ನ ಧಿಡೀರ್‌ ಮಾತಿಗೆ ರೇಣಕಜ್ಜಿ ಯೋಚನೆಗೆ ಬಿತ್ತು. 

‘’ಒಂದ್‌ ಮಾತು ಹೇಳ್ಲೀ ಸಾಹೇಬರ?’’

‘’ಹೇಳ್ರೆಲ…’’

(‘ಮೂಡಲ ಮನೆ’ ಧಾರಾವಾಹಿಯ ಸಂಭಾಷಣೆಯಲ್ಲಿ ತಲ್ಲೀನರಾಗಿರುವ ಚಿತ್ರಸಂಭಾಷಣಾಕಾರ ಹೂಲಿಶೇಖರ್)

‘’ನಿಮ್ಮ ಕೈಯಾಗ ಪೆನ್ನು ಐತಿ. ತಳಗಿಂದು ಅದರ ಮಾರಿ. ಎಷ್ಟ ಛಂದ ಬರೀತೈತಿ. ನಿಮ್ಮ ಮನಸಿನಾಗ ಇರೂದನ್ನೆಲ್ಲಾ ಅದು ಗೀಚತೈತಿ ಹೌದಲ್ಲರಿ?’’

‘’ಒಳೇ ಒಳೇ…!’’

‘’ಆದರ ಹಿಂದ ಇರೂದು ಮಾರೀನೂ ಅಲ್ಲ. ಮಸಡೀನೂ ಅಲ್ಲ. ಅದು ಪೆನ್ನಿನ ತಳಾ ಹೌದಲ್ಲ. ಹಂಗರೀಪಾ… ಮನಿಶಾ ಮಾರೀ ನೋಡತಾನ ಹೊರತಾಗಿ ಅದರ ಹಿಂದಿಂದು ಯಾಕ ನೋಡಬೇಕರೀ?’’ 

ರೇಣಕಜ್ಜಿಯ ಒಂದೇ ಮಾತಿಗೆ ನಾನು ಪೆಚ್ಚನಾದೆ.  

‘’ಹೋಗ್ಲಿ ಅಜ್ಜೀ. ನಿಮ್ಮ ಕಾಲದಾಗ ಕಲಾವಿದರು ಗಾಂಜೀ ಸೇದಿ ರಾತ್ರಿ ಪಾರ್ಟು ಮಾಡತ್ತಿದ್ದರಂತ ಕೇಳೇನಿ. ಅದಾದರೂ ಖರೇನ?’’

‘’ಹೋಗ್ರೀ ನಿಮ. ಈಗೇನೋ ಈ ಗಾಂಜೀ ಗುಳಿಗಿ ಬಂದಾವು. ಅದೂ ಈ ನಖರಾ ಮಂದಿ ಟೀವೀ, ಸಿನಿಮಾಕ್ಕ ಬಂದ ಮ್ಯಾಲ ಸುರೂ ಆತ ಅನ್ರಿ. ನಮ್ಮ ಕಾಲದಾಗ ಕಲಾವಿದರು ಹಂಗಿರಲಿಲ್ಲ ತಗೀರಿ. ಕುಡುದ್ರ ಏನೋ ಒಂದ್‌ ಚಿಪ್ಪು ಭಟ್ಟೀ ಸೆರೇ ಕುಡಿತಿದ್ವು ಮಂಗ್ಯಾಗೂಳು. ಅದೂ ಮಾಲಕರ ಕಣ್ಣು ತಪ್ಪಿಸಿ ಪಡದೇ ಹಿಂದ ನಿಂತು. ಪಾತ್ರದ ಗುಂಗು ತಲೀಗೇರಬೇಕಲ. ಇನ್ನ ಪೆಟಗೀ ಮಾಸ್ತರು, ತಬಲಾಜೀಗೂಳು, ಜಾಂಜು ಬಾರಿಸಾಂವ್ರೂ ಕುಡೀತಿದ್ರು. ನಾಟಕಕ್ಕ ಕಳೇ ಏರಬೇಕಾದ್ರ ಇವೆಲ್ಲಾ ಬೇಕಾಗೂವನ’’  

‘’ಈಗೂ ಹಂಗಽ ಅಲ್ಲೇನು. ಸಿನಿಮಾಕ್ಕ ಕಳೇ ಏರಬೇಕಾದ್ರ ಥೇಟರಿನಾಗ ಮಂದಿ ಶಿಳ್ಳೆ ಹೊಡೀಬೇಕು ಅಂದ್ರ ಗಾಂಜಾ-ಗುಳಿಗೀ ತಗೊಂಡ್ರ ತಪ್ಪೇನು ಅಂತ?’’

‘’ಯಾಕರೀ ಸಾಹೇಬರ? ನೀವೂ ಗಾಂಜಾ ಸೇದಿಕೋತನ ಸೀನು ಬರೀತೀರೇನು?’’

ರೇಣುಕಜ್ಜಿ ನನಗ ನೇರವಾಗಿ ಪ್ರಶ್ನೆ ಹಾಕಿ ಕುಲುಕುಲು ನಕ್ಕಿತು. 

‘’ಹೋಗಬೇ… ಚಹಾ ಬಿಟ್ಟರ… ನಾ ಏನೂ ಕುಡಿಯೂದಿಲ್ಲವಾ ತಾಯೀ’’ 

( ಚಿತ್ರ ಸಂಭಾಷಣಾಕಾರ ಹೂಲಿಶೇಖರ್, ನಟ ಶ್ರೀಧರ್, ಮಾನ್ವಿ, ಮೂಡಲಮನೆ ತಂತ್ರಜ್ಞರ ತಂಡದೊಂದಿಗೆ ನಟಿ ರೇಣುಕಮ್ಮ )

‘’ಗೊತೈತಿ ತಗೋರಿ. ನೀವು ಬರಿಯೂ ಸೀನು ನೋಡೇ ಎಲ್ಲಾರೂ ಮಾತಾಡಿಕೊಳ್ಳಾಕ್‌ ಹತ್ಯಾರು. ನಮ್ಮ ರೈಟರು ಭಾಳ ಕುಡೀಯೂವಂಗ ಕಾಣತೈತಿ. ಅದಕ಼ ಸೀನು ಫುರಮಾಸಿ ಬರತಾವು ಅಂತಾರು ಸೆಟ್ಟಿನಾಗ. ನಿಮ್ಮ ಕಿವೀಗೆ ಬಿದ್ದಿಲ್ಲೇನು? ನೀವು ಗಾಂಜಾದ ಗುಳಿಗೀ ತಗೊಂಡನ ಸೀನು ಬರೀತೀರಿ ಹೌದಲ್ಲೋ. ನನ್ನ ಮುಂದ ಯಾಕ ನಾಚತೀರಿ ಅರವತ್ತು ವರ್ಷ ಇದರಾಗನ ಉಳ್ಯಾಡಿ ಬಂದಾಕಿ ಅದೀನಿ ನಾ?’’  

ನಾನು ಗಾಬರಿಬಿದ್ದೆ. ನನ್ನ ಬಗ್ಗೆ ಸೆಟ್ಟಿನಲ್ಲಿ ಯೂನಿಟ್ಟಿನ ಜನ ಹೀಗೆಲ್ಲಾ ಮಾತಾಡುತ್ತಾರೆಂಯೇ. ಸೇಂದಿ ಮರದ ಕೆಳಗೆ ಕೂತು ಮಜ್ಜಿಗೆ ಕುಡಿದಂಗಾತು ಅಂದುಕೊಂಡೆ. ಕೂಡಲೇ ಮಾತಿನ ವರಸೆ ಬದಲಿಸಿದೆ. 

‘’ಅಜ್ಜೀ..ನೀವು ಗುಡುಗೇರಿ ಬಸವರಾಜು ಕಂಪನಿಯೊಳಗ ಇದ್ದಿರಲ್ಲ. ನಿಮಗ್ಯಾಕ ಅವ್ರು ನಾಯಕೀ ಪಾರ್ಟು ಕೊಡಲಿಲ್ಲ?

ಬರೇ ಅತ್ತಿ ಪಾರ್ಟು. ಇಲ್ಲಾ ಅವ್ವನ ಪಾರ್ಟು… ಅಷ್ಟ ಆತಲಾ…’’

‘’ಮಾಡೇನಿ ಬಿಡ್ರಿ. ಯಾಕ ಮಾಡಿಲ್ಲಾ? ಖರೇ ಹೇಳಬೇಕಂದ್ರ ನಾಯಕಿ ಪಾರ್ಟು ಮಾಡೂದಕ್ಕ ನನಗ ವಯಸ್ಸು ಇರಲಿಲ್ಲ. ಗುಡುಗೇರಿ ಬಸೂರಾಜ ನನಗ ಮಗಾ ಇದ್ದಾಂಗ ಇದ್ದ. ಹಾಂಗ ನೋಡಿದ್ರ ಅಂವಾ ನನ್ನ ಬಿಟ್ಟಽ ಇರತಿರಲಿಲ್ಲ ಅನ್ರಿ’’

‘’ಆಂ? ಏನು ಮೋಡೀ ಮಾಡಿದ್ರೀ ಅವ್ರಿಗೆ’’

‘’ಏನಿಲ್ಲ. ಬಸೂರಾಜ ತನ್ನ ಕಂಪನೀ ಬೋರ್ಡಿಂಗ ಊಟಾನ  ಉಣತಿರಲಿಲ್ಲ. ಅಂವಗ ನಾನು ಮಾಡಡೂ ಬಿಳಿಜ್ವಾಳದ ರೊಟ್ಟೀನ ಬೇಕಾಗತಿದ್ವು. ಯವ್ವಾ ನೀನು ಪಾರ್ಟು ಮಾಡದಿದ್ರೂ ಸೈ. ಪಗಾರ ಕೊಡತೀನಿ. ಆದರ ನನಗ ದಿನಾ ನಿನ್ನ ಕೈಯಾಗಿನ ರೊಟ್ಟೀನ ಬೇಕು ನೋಡು ಅಂತಿದ್ದ. ನಾಟಕ ಕಂಪನೀಗೆ ಪಾರ್ಟು ಮಾಡೂನು ಅಂತ ಹ್ವಾದಾಕೀಗೆ ಅಲ್ಲಿ ರೊಟ್ಟೀ ಬಡಿಯೂ ಕೆಲಸ ಮಾತ್ರ ಸಿಕ್ತು. ನೋಡಬೇಕಾಗಿತ್ತು ನೀವು. ನಾ ರೊಟ್ಟೀ ಬಡೀತಿದ್ರ ಒಲೀ ಮುಂದನ ಬಂದು ಕುಂಡ್ರತಿದ್ದ ಬಸೂರಾಜ. ಒಂದ್‌ ಪೆಟ್ಟೀಗೆ ಹತ್ತು ರೊಟ್ಟೀ ತಿಂತಿದ್ದ ಬಸಪ್ಪ. ಒಂದ್‌ ಸೀನು ಮುಗಿಸಿ ಒಳಗ ಬಂದ್ರ ಸಾಕು ಕೈಯಾಗ ರೊಟ್ಟೀ ಹಿಡಕೊಂಡು ನಿಂತಿರಬೇಕು ನಾ. ಒಂದೊಂದು ಸೀನಿಗೆ ಒಂದೊದು ರೊಟ್ಟೀ ತಿನ್ನಾಂವ. ಈಗೆಲ್ಲಿ ಅದಾರು ಅಂಥಾವ್ರು. ಒಂದೊಂದು ಸೀನಿಗೆ ಒಂದೊಂದು ಪೆಗ್ಗು ಹಾಕಾವ್ರ ಜಾಸ್ತಿ ಈಗ. ಅದೆಲ್ಲ ಈಗಿನ ಲೌಲ್ಯಾರ ಕತೀ ಅಷ್ಟ. 

ಫೋಟೋ ಕೃಪೆ : chitralokha.com

ಅಲ್ಲಾ ಅಜ್ಜೀ… ನೀವೂ ಕಲಾವಿದ್ರು ಅದೀರಿ. ಗುಂಗು ಇಲ್ಲದ ನೀವು ಪಾರ್ಟು ಮಾಡತಿರಲಿಲ್ಲ ಅಂತ ಯಾರಾದ್ರೂ ಹೇಳಿದರ ಈಗ? 

ಸಾಹೇಬರ… ಕಲಾವಿದ ಒಂದು ಹೊಸಾ ಲೋಕಕ್ಕ ಹೋಗಬೇಕಾದ್ರ ಒಂದ್‌ ಏನರ ಹವ್ಯಾಸ ಇಟಗೊಂಡಿರಬೇಕು ನೋಡ್ರಿ. 

‘’ಅಂದ್ರ ನೀವೂ ಹೊಸಾ ಲೋಕಕ್ಕ ಹೋಗಬೇಕು ಅಂದ್ರ ಒಂದ್‌ ಚಿಪ್ಪೂ…’’

ರೇಣುಕಜ್ಜಿಯ ಬಾಯಿ ಇಷ್ಟಗಲವಾಯಿತು. ನಾಟಿದ ಗಲ್ಲಗಳು ರಂಗೇರಿದವು. ಆ ವಯಸ್ಸಿನಲ್ಲೂ ರೇಣೂ ಅಜ್ಜಿ ಸುಂದರವಾಗಿ ಕಂಡಳು. 

‘’ಅದೆಲ್ಲಾ ಹಳೇ ಸುದ್ದಿ ಬಿಡ್ರಿ. ಹಳೇದ್‌ ತಗೊಂಡು ಏನ ಮಾಡತೀರಿ?’’ 

ರೇಣುಕಮ್ಮನ ಮುಖದ ಮುಗ್ಧತೆ ನನ್ನನ್ನು ಕಾಡತೊಡಗಿತು. ಈಕೆ ಎಂಥಾ ಕಲಾವಿದೆ. ನಿಶೆ ಆಗಿನ ಕಾಲದಲ್ಲಿ ನಟನೆಯ ಲೋಕಕ್ಕೆ ಕರೆದೊಯ್ಯುವ ಸಾಧನವಾಗಿತ್ತು ಅನ್ನುವುದು ಕೆಲವರ ಮಾತು. ಈಗ ಹಾಗಿಲ್ಲ. ಅದು ಹಣ ಮಾಡುವ ಮಾರ್ಗವಾಗಿದೆ. ಕಲೆಗೂ ಅದಕ್ಕೂ ಸಂಬಂಧವೇ ಇಲ್ಲ. 

‘’ಅಷ್ಟ ಯಾಕರೀ. ನಿಮ್ಮಂಗನ ನಾಟಕಾ ಬರೀತಿದ್ರಲ್ಲ ಕವಿಗೂಳು. ಅವರ ಕತಿ ಕೇಳ್ರಿ. ಕಂಪನೀ ಮಾಲಕರು ಅವರನ್ನು ಹಿಡಕೊಂಡು ಬಂದು ಒಂದ ಖೋಲೇದಾಗ ಕೂಡಿ ಹಾಕತಿದ್ರು. ಕಾಯಿ ಸೆರೇ, ಹತ್ತು ರೊಟ್ಟೀ ಇಟ್ಟು ಕಟ್ಟಿದ ಬುತ್ತೀನ ಒಳಗಿಟ್ಟು ಕೀಲೀ ಹಕ್ಕೊಂಡು ಬರತಿದ್ರು. ಆ ಬುತ್ತಿ ಖಾಲೀ ಆಗೂದರೊಳಗನ ಆ ಕವಿ ಒಂದ್‌ ನಾಟಕ ಬರಕೊಂಡು ಹೊರಗ ಬರತಿದ್ದ. ಕವಿಗೆ ಕಾಣಿಕೆ ಅಂದ್ರ ಐವತ್ತು ರೂಪಾಯಿ ರೊಕ್ಕ. ಅದರ ಮ್ಯಾಲ ಒಂದ್‌ ಕಾಯಿ ಸೆರೇ ಕೊಟ್ಟು ಕಳಿಸತಿದ್ರು. ಆ ಕಾಲನ ಬ್ಯಾರೇ… ಈ ಕಾಲಾನ ಬ್ಯಾರೇ ತಗೋರಿ…’’

ನಾನು ಯೋಚಿಸತೊಡಗಿದೆ. ಹೌದು. ಆಗ ಈ ನಿಶಾ-ಬಂದಿಗೆ ಒಂದು ಚೌಕಟ್ಟಿತ್ತು. ನಾಟಕ ಬರೆಯುವುದು. ಬರೆದದ್ದನ್ನು ಆಡುವುದು, ಆಡಿದ್ದನ್ನು ಇನ್ನಷ್ಟು ಜನಪ್ರಿಯಗೊಳಿಸುವುದು. ಅದರಾಚೆ ಅದಕ್ಕೆ ಯಾವ ಜಾಗವೂ ಇರಲಿಲ್ಲ. ಆದರೆ ಇವತ್ತು ಏನಾಗಿದೆ? ಕುಡಿದು ಇಲ್ಲ ಗಾಂಜೀ ಸೇದಿಕೊಂಡೇ ಕೆಮರಾ ಮುಂದೆ ನಿಲ್ಲುವುದು ಕೆಲವರಿಗೆ ಅಭ್ಯಾಸವಾಗಿದೆ. 

‘’ಅಜ್ಜೀ… ಇನ್ನೊಂದು ವಿಷಯ ಕೇಳಬೇಕು. ನೀವು ಈಗನ ಇಷ್ಟು ಛಂದ ಅದೀರಿ. ನಿಮ್ಮ ಯೌವನ ಕಾಲಕ್ಕ ಹೆಂಗಿರಬೇಕು. ನೀವು ಸಿನಿಮಾಕ್ಕ ಯಾಕ ಹೋಗಲಿಲ್ಲ. ಮುದುಕಿ ಆದ ಮ್ಯಾಲ ಈಗ ಸಿನಿಮಾಕ್ಕ ಬಂದ್ರಿ ಯಾಕ?’’

ನನ್ನ ಪ್ರಶ್ನೆ ರೇಣು ಅಜ್ಜಿಯ ನೆನಪಿನ ಭಂಡಾರಕ್ಕೆ ಲಗ್ಗೆ ಹಾಕಿತೇನೋ. ಏನೋ ಹೇಳಲು ಯತ್ನಿಸಿದಳು. ಅಷ್ಟರಲ್ಲಿ ಸೆಟ್ಟಿನಿಂದ

ಬುಲಾವ್‌ ಬಂತು. ಸಹಾಯಕ ನಿರ್ದೇಶಕ ಓಡಿ ಬಂದು ‘’ಅಜ್ಜೀ ಲಗೂ ಬರ್ರಿ. ಕೆಮರಾ, ಲೈಟು ರೆಡಿ ಅದ’’ ಎಂದು ಕೂಗಿದವನೇ ಓಡಿದ. ರೇಣುಕಮ್ಮ ‘’ಅದನ್ನ ಆಮ್ಯಾಲ ಹೇಳತೀನ್ರಿ’’ ಅಂದದ್ದೇ ಮೇಲಕ್ಕೆದ್ದು ಸೆಟ್‌ ಕಡೆಗೆ ಧಾವಿಸಿತು.


  • ಹೂಲಿಶೇಖರ್ 
    (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು)

hoolishekhar

 

 

 

 

 

 

 

 

 

 

 

 

 

 

 

 

 

 

 

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW