ಪಾಲು

‘ಪಾಲು’ ಅನ್ನುವ ಪದ ಬಂದಾಗ ಮನೆ ಭಾಗವಾಗುತ್ತಿದೆ ಅಂದು ಕೊಳ್ಳುವುದು ಸಹಜ. ಆದರೆ ಕಥೆಗಾರರಾದ ಪ್ರಭಾಕರ್ ತಾಮ್ರಗೌರಿ ಅವರು ‘ಪಾಲು’ ಅನ್ನುವ ಪದಕ್ಕೆ ಇನ್ನೊಂದು ಅರ್ಥ ನೀಡಿದ್ದಾರೆ. ಅದು ಸಂತೋಷದ ಪಾಲು. ಯಾವ ರೀತಿಯ ಸಂತೋಷ ಅನ್ನುವುದನ್ನು ಈ ಕತೆಯನ್ನು ಓದಿದ ಮೇಲೆ ಅರ್ಥವಾಗುತ್ತದೆ. ಆದರೆ ಅಣ್ಣ-ತಮ್ಮ ಇರುವ ಮನೆಗೆ ಇದು ಸ್ಪೂರ್ತಿಯ ಕತೆಯಾಗಿದೆ…

ಆರಾಂ ಕುರ್ಚಿಯಲ್ಲಿ ಕುಳಿತಿದ್ದ ಶ್ರೀನಿವಾಸರಾಯರು  ” ಪೋಸ್ಟ್ ” ಎಂದು ಕರೆದದ್ದು ಕೇಳಿ, ಎಚ್ಛೆತ್ತುಕೊಂಡು ಹೋಗಿ ಬಾಗಿಲು ತೆರೆದರು. ಪೋಸ್ಟಮನ್  ಕವರೊಂದನ್ನು ಕೊಟ್ಟು ಹೋದ. ಒಳಗೆ ಬಂದು ಪತ್ರವನ್ನು ಬಿಡಿಸಿ ಒಂದಲ್ಲ , ಎರಡಲ್ಲ ಹತ್ತು ಸಲ ಓದಿದರು . ಎಷ್ಟು ಸಲ ಓದಿದರೂ  ವಿಷಯ ಒಂದೇ ! ಓದುತ್ತಿದ್ದರೆ ಮನಸ್ಸು ಛಿದ್ರ ಛಿದ್ರ ವಾಗುತ್ತಿದೆ .ಆ ಪತ್ರದಲ್ಲಿ ಬರೆದ ಒಂದೊಂದು ಸಾಲೂ ಸೂಜಿ ಮೊನೆಯಂತೆ ಚುಚ್ಚುತ್ತಿದೆ . ಮನಸ್ಸು ಘಾಸಿಗೊಳಿಸುತ್ತಿದೆ .

ಚಹಾ ತಂದ ಕಾವೇರಿ , ಗಂಡನ ಕೈನಲ್ಲಿದ್ದ ಪತ್ರ ಕಂಡು ಕುತೂಹಲದಿಂದ ಕೇಳಿದಳು. ” ಯಾರದು ಕಾಗ್ದ ? ಮಹೇಶಂದಾ ? ” ” ಅಲ್ಲ ಹರೀಶಂದಾ? ” ” ಏನು ಬರೆದಿದ್ದಾನೆ ಹರೀಶ ?” ರಾಯರು ಅವಳ ಕೈಗೆ ಪತ್ರ ಕೊಡುತ್ತಾ” ನೀನೇ ಓದಿ ನೋಡು ಗೊತ್ತಾಗುತ್ತೆ ” ಎಂದರು.  ” ನೀವೇ ಓದಿ ಹೇಳಿ ” ” ಬರುವ ಆದಿತ್ಯವಾರ ಮಹೇಶ, ಹರೀಶ, ರಾಮು ಮೂರು ಜನ ಅಣ್ಣ- ತಮ್ಮಂದಿರೂ ಒಟ್ಟಿಗೇ ಊರಿಗೆ ಬರ್ತಾರಂತೆ “.  ” ಯಾಕೆ ?” ” ಇನ್ಯಾತಕ್ಕೆ ಹೇಳು …? ಈ ಮನೇಲೂ ಪಾಲು ಕೇಳಕ್ಕೆ ಇರಬೇಕು ಬಹುಶಃ”. “ಏನು?! ” ಆಶ್ಚರ್ಯದಿಂದ ನಿಂತ ಜಾಗ ಮರೆತು ಕೂಗಿದಳು ಕಾವೇರಿ.

ಫೋಟೋ ಕೃಪೆ : Piterest

 “ಮೈದುನರಿಗೆ  ಈ ಮುರುಕು ಮನೆಯಲ್ಲೂ ಪಾಲು ಬೇಕೇ …? ” ಗಂಡನ ಮಾತಿನಲ್ಲಿ ನಂಬಿಕೆ ಬರಲಿಲ್ಲ . ” ಏನೂಂದ್ರೆ , ಈ ಮನೆಯಲ್ಲೂ ಅವರಿಗೆ ಪಾಲು ಬೇಕೇ ? ಮುಂದೆ ನಮ್ಮ ಮಕ್ಕಳಿಗೆ ಯಾತಕ್ಕಾದರೂ ಆಗುತ್ತೆ ಅಂದುಕೊಂಡಿದ್ದೆ. ಅವರಿಗೆ ಈ ಮುರುಕು ಮನೆಯಿಂದ ಏನಾಗಬೇಕಾಗಿದೆ ? ಕೈತುಂಬಾ ಸಂಬಳ ತಗೊಂಡು ಸುಖವಾಗಿದ್ದಾರೆ. ಇದರ ಅವಶ್ಯಕತೆ ಇದೆಯೇ ಅವರಿಗೆ …? ”  ” ಅತೀ ಆಸೆ ಪಡಬಾರದು ಕಾವೇರಿ. ಪಾಲಿಗೆ ಬಂದದ್ದು ಪಂಚಾಮೃತ ಎಂದಂತೆ ನಮ್ಮ ಹಣೆ ಬರಹದಲ್ಲಿ ಬರೆದಷ್ಟೇ ಸಿಗುತ್ತದೆ. ಇಷ್ಟಕ್ಕೂ ಇದು ನನ್ನ ಸ್ವಂತ ಆಸ್ತಿಯೆಲ್ಲವಲ್ಲ. ಪಿತ್ರಾರ್ಜಿತ ಆಸ್ತಿ . ಅವರಿಗೂ ಸಮಪಾಲು ಇದೆಯಲ್ಲ …..” ಎಂದು ಹೇಳುತ್ತಾ ಎದ್ದು ಹೊರ ಹೋದರು. ಒಳಗೆ ಅಡಿಗೆ ಮಾಡುತ್ತಿದ್ದ ಕಾವೇರಿ ಮಂಕಾಗಿ ಅಲ್ಲಿ ಕುಳಿತು ಆಲೋಚಿಸುತ್ತಿದ್ದಳು.

ಹಿಂದಿನ ನೆನಪು ಮರುಕಳಿಸಿತು . ತಾನು ಮದುವೆಯಾಗಿ ಮೊಟ್ಟಮೊದಲು ಆ ಮನೆಗೆ ಸೊಸೆಯಾಗಿ ಕಾಲಿಟ್ಟಾಗ ಹದಿನೆಂಟು ವರುಷದ ತರುಣಿ, ಅತ್ತೆ ಇಲ್ಲದ ಮನೆ, ವಯಸ್ಸಾದ ಮಾವ. ಮೈದುನರಲ್ಲಿ ಹಿರಿಯವನಾದ  ಹರೀಶ ಎಸ್.ಎಸ್.ಎಲ್. ಸಿಯಲ್ಲಿ, ಮಹೇಶ ಏಳನೇ ಕ್ಲಾಸಿನಲ್ಲೂ, ರಾಮು ಎರಡನೇ ಕ್ಲಾಸಿನಲ್ಲೂ ಓದುತ್ತಿದ್ದರು. ಹಿರಿಯ ಸೊಸೆಯಾಗಿ ತುಂಬು ಮನಸ್ಸಿನಿಂದ ಕಾಲಿಟ್ಟ ಕಾವೇರಿ ಎಲ್ಲರ ಪ್ರಶಂಸೆಗೆ ಪಾತ್ರಳಾದಳು. ಮಾವ ನರಸಿಂಹ ಶಾಸ್ತ್ರಿಗಳು ಎರಡು ವರ್ಷದಲ್ಲಿಯೇ ಹೃದಯಾಘಾತದಿಂದ ತೀರಿಕೊಂಡರು. ಮನೆಯ ಎಲ್ಲಾ ಜವಾಬ್ದಾರಿಯೂ ಹಿರಿಯರಾದ ಶ್ರೀನಿವಾಸರ ಹೆಗಲ ಮೇಲೆ ಬಿತ್ತು. ಎಷ್ಟೇ ತೊಂದರೆ ಆದರೂ ಕಾವೇರಿ ರಾಯರಿಗೆ ಜೊತೆಯಾಗಿ ಸಹಕರಿಸಿದಳು.

ಅದೇ ವರುಷ ರಾಮು ಪಿ.ಯು.ಸಿ ಪಾಸಾಗಿದ್ದ. ಅವನಿಗೆ ಡಾಕ್ಟರ್  ಆಗುವ ಹಂಬಲ. ಶ್ರೀನಿವಾಸರಾಯರು ಅವನ ಆಸೆಗೆ ಅಡ್ಡಿ ಬರದೇ ಬೆಂಗಳೂರಿನಲ್ಲಿ ಹಾಸ್ಟೆಲ್ಲಿನಲ್ಲಿಟ್ಟು ಓದಿಸಿದ್ದರು. ಎಷ್ಟೇ ತೊಂದರೆ ಆದರೂ, ಆತ ಕೇಳಿದಾಗಲೆಲ್ಲಾ ಹಣ ಕಳಿಸುತ್ತಿದ್ದರು. ಅಂತೂ, ಅವನು ಡಾಕ್ಟರ್  ಆಗುವಾಗ ಇದ್ದ ಎರಡೆಕರೆ ಗದ್ದೆ ಮಾರಾಟವಾಗಿತ್ತು. ಮಹೇಶ ಬಿ.ಇ ಗೆ ಸೇರಿದಾಗ ಕಾವೇರಿಯ ಮದುವೆಗೆ ಹಾಕಿದ್ದ ಒಡವೆಗಳೆಲ್ಲಾ ಮಾಯವಾಗಿದ್ದವು.

ಇಷ್ಟಾದರೂ ಅವರು ಮರುಗಲಿಲ್ಲ. ಮನೆಯಲ್ಲಿ ರಾಮೂನೇ ಸಣ್ಣ ಮಗುವಾಗಿದ್ದ. ಹರೀಶ, ಮಹೇಶ ಸ್ವಂತ ಕಾಲ ಮೇಲೆ ನಿಲ್ಲುವ ಸಮಯಕ್ಕೆ ಶ್ರೀನಿವಾಸರಾಯರು ಒಬ್ಬ ಮಗನ ತಂದೆಯಾಗಿದ್ದರು. ಅವನ ಹಿಂದೆ ಎರಡು ಹೆಣ್ಣು ಮಕ್ಕಳು  ಶೀಲಾ, ಗೀತಾ. ಸಣ್ಣವನಾದ ರಾಮೂನ ಓದಿನ ಜವಾಬ್ಧಾರಿಯನ್ನು ಹರೀಶ  ವಹಿಸಿಕೊಂಡ. ಇದರಿಂದ ರಾಯರಿಗೆ ಸ್ವಲ್ಪ ನೆಮ್ಮದಿಯಾಯಿತು. ಅವರಿಗೆ ತಮ್ಮ ಮಗ ತುಂಬಾ ಓದಬೇಕೆಂಬಾಸೆ. ಆದರೆ, ಇನ್ನೆರಡು ವರುಷಕ್ಕೆ ತಮ್ಮ ಸರ್ವೀಸ್ ಮುಗಿಯುತ್ತದೆ. ಆಗಾಗ ಹೆಂಡತಿಯ ಹತ್ತಿರ ಹೇಳುತ್ತಿದ್ದರು ರಾಯರು, ” ನನಗೆ ರಿಟೈರ್ಡ್ ಆದರೆ ಗ್ರಾಚ್ಯುಟಿ, ಇನಶೂರೆನ್ಸ ಎಲ್ಲಾ ಸೇರಿ ಸುಮಾರು ಐವತ್ತು ಸಾವಿರ ಬರುತ್ತದೆ. ಆಗ ಎಲ್ಲರೂ ಬೆಂಗಳೂರಿಗೆ ಹೋಗೋಣ. ಸತೀಶನನ್ನು ಬಿ.ಇ ಗೆ ಸೇರಿಸೋಣ. ಅವನು ಇಂಜಿನೀಯರ್ ಆಗಿ ಕೈತುಂಬಾ ಸಂಪಾದಿಸುವುದನ್ನು ನಾನು ನೋಡಬೇಕು”.

     

ಫೋಟೋ ಕೃಪೆ : DESLbitz

ಅದಕ್ಕೆ ಕಾವೇರಿ , “ನೋಡಿ, ಎಷ್ಟೆಂದರೂ ಸತೀಶ ಗಂಡು ಹುಡುಗ. ಅವನ ಜೀವನ ಹೇಗೋ ಸಾಗುತ್ತದೆ. ಆದರೆ ಶೀಲಾ, ಗೀತಾ ಅವರ ಮದುವೆ ಮಾಡಬೇಡವೇ?. ನಿಮ್ಮ ಹಣ ಬಂದ ಕೂಡಲೇ ಮೊದಲು ಇದರ ಬಗ್ಗೆ ವಿಚಾರ ಮಾಡೋಣ.” ” ಅವರಿನ್ನೂ ಚಿಕ್ಕವರಲ್ಲವೇ ! ಅವರ ಮದುವೆಗೇನು  ಆತುರ .” ನೀವು ಅವರ ಮದುವೆ ಯಾವಾಗ ಬೇಕಾದರೂ ಮಾಡಿ . ನನ್ನ ಅಭ್ಯಂತರವೇನೂ ಇಲ್ಲ. ಆದರೆ ಅವರ ಹೆಸರಿಗೆ ಇಂತಿಷ್ಟು ಅಂತ ಹಣ ತೆಗೆದಿಟ್ಟುಬಿಡಿ. ಕಾವೇರಿ ಹೇಳುತ್ತಿದ್ದಳು. ಸತೀಶ ಈಗ ರಾಮುವಿನ ಮನೆಯಲ್ಲಿದ್ದ. ರಾಮುವಿಗೆ ಮಕ್ಕಳಿಲ್ಲ ಅವನಿಂದ ತಮಗೇನಾದರೂ ಸಹಾಯ ಆಗಬಹುದೆಂದು ಕಾವೇರಿ ಯೋಚಿಸುತ್ತಿದ್ದಳು. ಆದರೆ , ಈಗ …? ಏನೇನೋ ನೆನಪಾಗಿ ದುಃಖ ಉಮ್ಮಳಿಸಿ ಬಂತು .

ರಾತ್ರಿ ಎಷ್ಟು ಹೊತ್ತಾದರೂ ಶ್ರಿನಿವಾಸರಾಯರಿಗೆ ನಿದ್ರೆ  ಹತ್ತಿರ ಸುಳಿಯಲಿಲ್ಲ. ಮನಸ್ಸು ಚಿಂತಿಸುತ್ತಿತ್ತು. ಅವರು ಬದುಕಿ ಬಾಳಿದ ಮನೆ ಅದು. ಯಾಕೋ ಏನೋ ಒಂದು ರೀತಿಯ ಮಮತೆ, ಮೋಹ ಆ ಮನೆಯ ಮೇಲೆ. ಮಕ್ಕಳಿಗಾಗಿ ಎಂದಾದರೊಂದು ದಿನ ಈ ಮನೆ ಮಾರಬೇಕಾಗಿ ಬರಬಹುದೆಂದು ಯೋಚಿಸಿ ಕಂಗೆಡಿಸುತ್ತಿದ್ದ ಮನಕ್ಕೆ ಈಗ ತಮ್ಮಂದಿರು ಈ ಮನೆಯಲ್ಲಿ ಪಾಲು ಕೇಳುತ್ತಾರೆಂಬ ಕಲ್ಪನೆಯೇ ಅವರಿಗೆ ನಂಬಲಸಾಧ್ಯ  !

ಹರೀಶ ಈಗ ಜಯನಗರದಲ್ಲಿ ತುಂಬಾ ಪ್ರಸಿದ್ಧ ಡಾಕ್ಟರ್ ಆಗಿದ್ದ . ದೊಡ್ಡ ಹಾಸ್ಪಿಟಲ್ ಕಟ್ಟಿ ಅದಕ್ಕೆ  ” ವಸಂತ ನರ್ಸಿಂಗ್ ಹೋಂ  ” ಎಂದು ಹೆಸರಿಟ್ಟಿದ್ದ . ವಸಂತ ನರ್ಸಿಂಗ್ ಹೋಂ ಹಣದ ಹೊಳೆಯನ್ನೇ ಹರಿಸುತ್ತಿತ್ತು . ಅವನ ಕೈ ಹಿಡಿದಿದ್ದ ತಾರಾಳ ಕಾಲ್ಗುಣ ನಿಜವಾಗಿಯೂ ಒಳ್ಳೆಯದಾಗೆ ಇತ್ತು . ಮುದ್ದಾದ ಎರಡು ಹೆಣ್ಣು ಮಕ್ಕಳು . ಕಳೆದ ವರುಷವಷ್ಟೇ ಹೊಸ ಮನೆ ಕಟ್ಟಿಸಿ ಗೃಹ ಪ್ರವೇಶ ಮಾಡಿ ಅಣ್ಣ ಅತ್ತಿಗೆಯರಿಗೆ ಭಾರಿ ಉಡುಗೊರೆ ಕೊಟ್ಟು ಕಳುಹಿಸಿದ್ದ . ಮನೆಯಲ್ಲಿ ಫ್ಯಾನ್, ಫೋನ್ , ಫ್ರಿಜ್  , ಕಾರು ಎಲ್ಲಾ ಸೌಕರ್ಯವೂ ಇತ್ತು . ಇದನ್ನು ನೋಡಿ ಶ್ರೀನಿವಾಸರಾಯರು ಬೆರಗಾಗಿದ್ದರು . ಆದರೆ , ಹರೀಶನ ಗುಣ ಮೊದಲಿನಂತೇಇತ್ತು . ಸ್ವಲ್ಪವೂ  ಬದಲಾಯಿಸಿರಲಿಲ್ಲ . ಮಹೇಶ ತನ್ನ ಮಟ್ಟಿಗೆ ತಾನು ಅನುಕೂಲವಾಗಿದ್ದ . ರಾಧಾ ಅವನ ಕೈ ಹಿಡಿದ ಹೆಂಡತಿ .ಅವಳದು ಕೊಂಚ ಕಿರಿಕಿರಿ ಸ್ವಭಾವ . ಎಷ್ಟಿದ್ದರೂ ಸಂತೃಪ್ತಿ ಇಲ್ಲ. ಹೊಟ್ಟೆ ಬಾಕತನ. ಇಬ್ಬರು ಗಂಡು ಮಕ್ಕಳು . ಖರ್ಚು ಮಾಡುವ ಹೆಣ್ಣು ಮಕ್ಕಳಿರಲಿಲ್ಲ .

           

ಫೋಟೋ ಕೃಪೆ : Suryaa

ಹರೀಶನ ಮನೆಯ ಗೃಹ ಪ್ರವೇಶಕ್ಕೆಂದು ಹೋಗಿದ್ದಾಗ  ಶ್ರೀನಿವಾಸರಾಯರು ಹಾಗೂ ಕಾವೇರಿ ಮಹೇಶನ ಮನೆಯಲ್ಲೂ ಎರಡು ದಿನ ಇದ್ದರು . ಮಹೇಶ ಅಣ್ಣನಿಗೆ ಕೈಗಡಿಯಾರ, ಅತ್ತಿಗೆಗೆ ಒಳ್ಳೆಯ ರೇಶ್ಮೆಸೀರೆ  ಹಾಗೂ ಮಕ್ಕಳಿಗೆ ಬಟ್ಟೆಗಳನ್ನು ಉಡುಗೊರೆಯಾಗಿ ಕೊಟ್ಟಿದ್ದ. ಆಗ, ರಾಧಾಳ ಹುಬ್ಬು ಗಂಟಿಕ್ಕಿಕೊಂಡಿತ್ತು. ಅದನ್ನು ಅವರು ಗಮನಿಸಿದರು. ಮಹೇಶ ರಾಧಾಳನ್ನು ಗದರಿಸಿದ್ದನ್ನೂ ಕೇಳಿದ್ದರು. ಅಂಥ ಮಹೇಶ  ಈಗ ಹೆಂಡತಿಗಾಗಿ ಬದಲಾದಾನೇ ? ಆದರೆ ಎಲ್ಲರಿಗಿಂತ ಹೆಚ್ಚು ಆಶ್ಚರ್ಯ ತಂದಿದ್ದು ರಾಮುವಿನ ವರ್ತನೆ ! ಅವನೂ ಇದರಲ್ಲಿ ಪಾಲುಗಾರನೇ ? ಆತ ಎಲ್. ಎಲ್. ಬಿ ಮುಗಿಸಿ ಮೈಸೂರಿನಲ್ಲಿ ಲಾಯರ್ ಆಗಿ ನೆಲೆಸಿದ ನಂತರ ಅವನು ಸಂಪಾದನೆಯಲ್ಲಿ ಅಣ್ಣಂದಿರನ್ನು ಮೀರಿಸಿದ್ದ. ಅವನ ಹೆಂಡತಿ ವಾಣಿ ಮುಗ್ದೆ. ಶ್ರೀಮಂತ ತಂದೆ ತಾಯಿಗಳಿಗೆ ಒಬ್ಬಳೇ ಮಗಳು. ಆದರೂ ಅಹಂಕಾರವಿಲ್ಲ. ಒಳ್ಳೆ ಗುಣ. ಸತೀಶ ರಾಮುವಿನ ಜೊತೆಯಲ್ಲಿದ್ದು ಅವನ ಮಕ್ಕಳಿಲ್ಲದ ದುಃಖವನ್ನು ನೀಗಿಸಿದ್ದ. ಇದೇ ಆಲೋಚನೆಯಲ್ಲಿಯೇ ನಿದ್ದೆ ಬಾರಾದೆ ಹೊರಳಾಡುತ್ತಿದ್ದರು ರಾಯರು. ಆದಿತ್ಯವಾರ ಬಲುಬೇಗ ಬಂದಿತು. ಕಾವೇರಿ ತನ್ನ ದುಃಖ ಮರೆತು ಅಡಿಗೆ ಕೆಲಸದಲ್ಲಿ ನಿರತಳಾದಳು .ಮೊದಲು ಅಡಿಗೆ ಮನೆಗೆ ಕಾಲಿಟ್ಟಾಗಲೆಲ್ಲಾ ಅವಳಿಗೆ ಮೈದುನರ ಮನೆಯ ವೈಭವ ನೆನಪಾಗಿ ಸಿಟ್ಟು ಬರುತ್ತಿತ್ತು . ಆದರೆ ಈಗ, ಕತ್ತಲೆ ತುಂಬಿದ ಈ ಮಣ್ಣು ನೆಲದ ಅಡಿಗೆ ಮನೆ ಅವರಿಗೆ ಸ್ವರ್ಗದಂತೆನಿಸಿತು. ಇನ್ನು ಮೇಲೆ ಈಗಿನ ಕತ್ತಲೆಯ ಕೋಣೆಯೂ ತಮ್ಮ ಪಾಲಿಗೆ ಇಲ್ಲವಲ್ಲ ಎಂದು ಅನ್ನಿಸಿ ಅಡಿಗೆ ಸಿದ್ಧತೆ ಮಾಡಿದಳು.

ಹತ್ತು ಗಂಟೆಯ ಹೊತ್ತಿಗೆ ಹರೀಶ , ಮಹೇಶ ಹೆಂಡತಿಯರೊಂದಿಗೆ ಹಾಜಾರಾದರು . ಹನ್ನೊಂದು ಗಂಟೆಗೆ ರಾಮು, ರಾಧಾ ಬಂದರು. ಸತೀಶ ಬರಲಿಲ್ಲ. ಬಂದವರ ಊಟವಾಯಿತು. ಎಲ್ಲರೂ ಕೋಣೆಯಲ್ಲಿ ಹರಟುತ್ತಾ ಕುಳಿತಾಗ ರಾಮು ” ಅಣ್ಣಾ, ನಮ್ಮ ಮೈಸೂರಿನ ಕೆನರಾ ಬ್ಯಾಂಕ್ ಮ್ಯಾನೇಜರ್ ಗೆ ಇಲ್ಲಿಗೆ ವರ್ಗವಾಗಿದೆ. ಯಾವುದಾದ್ರೂ ಮನೆ ಇದ್ರೆ ನೋಡಿ ಅಂತ ಹೇಳಿದ್ರು …”   “ಬೇರೆ ಮನೆ ಯಾಕೆ ನೋಡಬೇಕು ? ಈ ಮನೆಯಲ್ಲಿ ಎರಡು ಭಾಗ ಮಾಡಿ ದುರಸ್ತಿ ಮಾಡಿಸಿ ಬಾಡಿಗೆಗೆ ಕೊಟ್ಟರಾಯಿತು. ಅವರೂ ಬಹಳ ಒಳ್ಳೆಯವರು. ಅಕ್ಕಂಗೆ ಒಳ್ಳೆ ಜೊತೆ ಸಿಕ್ಕಂಗೆ ಆಯ್ತು  ” ಅಂದಳು ರಾಧಾ. ಓಹ್ ! ಇವರ ಪಾಲಿನ ಮನೆಯನ್ನು ಮ್ಯಾನೇಜರ್ ಗೆ ಬಾಡಿಗೆಗೆ ಕೊಡುತ್ತಾರೆ ಎಂದುಕೊಂಡರು ಶ್ರೀನಿವಾಸರಾಯರು.

ಫೋಟೋ ಕೃಪೆ : World Nomads Journals

” ಅಣ್ಣಾ , ಮಹಡಿ ಮೇಲೆ ಒಂದು ಅಡಿಗೆ ಮನೆ , ಬಚ್ಚಲು ಮನೆ , ರೂಮು ಹಾಕಿಸಿದ್ರೆ ಅದನ್ನೂ ಯಾರಿಗಾದರೂ ಬಾಡಿಗೆಗೆ ಕೊಡಬಹುದಲ್ಲವೇ ……?” ಎಂದು ಮಹೇಶ ಕೇಳಿದಾಗ ರಾಯರು ನಿರುತ್ತರರಾದರು . ಸಾಯಂಕಾಲ ಎಲ್ಲರೂ ಒಟ್ಟಿಗೇ ತಿರುಗಾಡಲು ಹೋದಾಗ  ಹರೀಶ ಕೇಳಿದ ,  ” ಏನಣ್ಣಾ , ಹಿತ್ತಲಿಗೆ ಭದ್ರವಾದ  ಬೇಲಿ ಹಾಕಿಸಿ , ಇಪ್ಪತ್ತೈದು ತೆಂಗಿನ ಸಸಿ ಹಾಕಿಸಬಹುದಲ್ವಾ  ? ಈಗ ಹಾಕಿದರೆ ಏನಿಲ್ಲವೆಂದರೂ ಹತ್ತು ವರುಷದಲ್ಲಿ ಫಲ ಕೊಡುತ್ತೆ  …”  ” ನಿಮ್ಮಿಷ್ಟದಂತೆ ನೀವು ಮಾಡಬಹುದು . ನನ್ನನ್ನೇನು ಕೇಳ್ತೀರಾ ….?” ಎಂದರು ರಾಯರು.  ” ಹಾಗಲ್ಲಣ್ಣಾ, ನೀನು ಈ ಮನೆಗೆ ಹಿರಿಯವ. ನಾವು ನಮ್ಮ ನಮ್ಮ ಅಭಿಪ್ರಾಯ ಏನೂಂತ ಹೇಳಿದ್ದೀವಿ. ಆದರೂ , ನೀನು ಹಿರಿಯವನಿರುವಾಗ ನಿನ್ನ ಅಭಿಪ್ರಾಯವೂ ನಮಗೆ  ಅಷ್ಟೇ ಮುಖ್ಯ ! ” ಎಂದು ಹೇಳಿದ ಮಹೇಶ.

ರಾತ್ರಿ ಎಲ್ಲರೂ ನಿದ್ರೆ ಮಾಡುತ್ತಿದ್ದಾಗ ಶ್ರೀನಿವಾಸರು ಹೊರಗೆ ಬಂದರು. ಹೆಂಡತಿ ಅಳುತ್ತಿದ್ದಳು.  ” ಅಳು ನಿಲ್ಲಿಸು ಕಾವೇರಿ . ಇದು ಅಪ್ಪನ ಆಸ್ತಿ. ಇದರಲ್ಲಿ ಅವರು ಪಾಲು ಕೇಳೋದು ಸಹಜ . ನನ್ನ ತಮ್ಮಂದಿರು ಇಷ್ಟಾದರೂ ಪ್ರೀತಿ ಇಟ್ಟುಕೊಂಡಿದ್ದಾರಲ್ಲ ಅದಕ್ಕೆ ಸಂತೋಷ ಪಡು….” ಗದರಿಸಿದರು ರಾಯರು.  ” ಅಲ್ರೀ, ಇವರ ಪ್ರೀತಿ, ವಿಶ್ವಾಸದಿಂದ ಹೊಟ್ಟೆ ತುಂಬುತ್ಯೇ ? ನಾಳೆ ನಮ್ಮ ಮಕ್ಕಳ ಗತಿ ಏನು …?”. ” ಹೇಗೋ ಸಾಗುತ್ತೆ  ಬಿಡು. ದೇವರು ಖಂಡಿತಾ ನಮ್ಮ ಕೈ ಬಿಡೋಲ್ಲಾ. ನೀನು ಎಲ್ಲರೆದುರೂ ಅಳಬೇಡ ” ಕಾವೇರಿ ಕಣ್ಣೀರೊರೆಸಿಕೊಂಡಳು. ಆದರೂ ಅವಳಿಗೆ ಸಮಾಧಾನವಿಲ್ಲ. ಇಷ್ಟು ಚೆನ್ನಾಗಿ ನೋಡಿಕೊಂಡಿದ್ದ ಮೈದುನರು ಇಂದು ಮುಳ್ಳಾದರೇ ?. ಹರೀಶನ ವಿದ್ಯಾಭ್ಯಾಸಕ್ಕಾಗಿ ಇದ್ದ ಎರಡೆಕರೆ ಭೂಮಿ ಮಾರಲಿಲ್ಲವೇ?. ಮಹೇಶನಿಗೆ, ಇದ್ದ ಒಡವೆ ಮಾರಲಿಲ್ಲವೇ?. ಎಂಟು ವರ್ಷದಿಂದ ಹದಿನೆಂಟು ವರ್ಷದವರೆಗೆ ಪ್ರೀತಿಯಿಂದ ಸಾಕಲಿಲ್ಲವೇ?. ಆದರೆ, ಇದಾವುದೂ ಅವರಿಗೆ ಗೊತ್ತಿಲ್ಲವೇ ? ಉಪಕಾರದ ಸ್ಮರಣೆಯೇ ಇಲ್ಲವೇ?.ಮರುದಿನ ಸಾಯಂಕಾಲ ಶ್ರೀನಿವಾಸರಾಯರು ತಮ್ಮಂದಿರನ್ನು ಕರೆದು ಹೇಳಿದರು , ” ನೋಡಿ, ನಿನ್ನೆ ನಾನು ಲಾಯರ್ ಸೀತಾರಾಂರವರ ಮನೆಗೆ ಹೋಗಿದ್ದೆ . ಅವರಿಗೆ ವಿಷಯ ಎಲ್ಲಾ ಹೇಳಿದ್ದೇನೆ . ಇವತ್ತು ನಾಲ್ಕು ಗಂಟೆಗೆ ಲಾಯರ್ ಸೀತಾರಾಂ ಬರ್ತಾರೆ. ನಿಮಗೆಲ್ಲಾ ಯಾವ ಯಾವ ಭಾಗ ಬೇಕೋ ಹೇಳಿಬಿಡಿ. ನೀವು ಬಿಟ್ಟ ಭಾಗ ನನಗಿರಲಿ. ಅಪ್ಪ ಬಿಟ್ಟು ಹೋದ ಆಸ್ತಿ ಈ ಮನೆ. ಎರಡೆಕರೆ ಭೂಮಿ, ಅಮ್ಮನ  ಒಡವೆ ಕೊಂಚ ಇದ್ದವು. ನಿಮಗೆ ತಿಳಿದಿರೋ  ಹಾಗೆ ನಿಮ್ಮ ಓದಿಗಾಗಿ ಭೂಮಿ, ಒಡವೆಗಳು ಕರಗಿದವು. ಕಾವೇರಿಯ ಹತ್ತಿರ ಎರಡೆಳೆ ಸರವಿದೆ. ಅದೊಂದೇ ಅಮ್ಮನ ಆಸ್ತಿಯಲ್ಲಿ ಉಳಿದಿರೋದು …..”.

” ಅಣ್ಣಾ, ನೀವು ಏನು ಮಾತನಾಡುತ್ತಿದ್ದೀರಿ ಅಂತ ನಮಗ್ಯಾರಿಗೂ ಅರ್ಥವಾಗ್ತಿಲ್ಲ”  ರಾಮು ಅವರ ಮಾತನ್ನು ತಡೆದು ಹೇಳಿದ. ” ಇದರಲ್ಲಿ ಅರ್ಥವಾಗೋದು ಏನಿದೆ? ನೀವೆಲ್ಲಾ ಒಟ್ಟಿಗೇ ಸೇರಿ ಬಂದಿರೋದು ಪಾಲು ಕೇಳೋದಕ್ಕಲ್ಲವೇ ?. ಬಂದು ಒಂದು ದಿನ ಕಳೆದರೂ ನಿಮಗೆ ಆ ವಿಷಯ ಮಾತನಾಡಲಿಕ್ಕೆ ಸಂಕೋಚವಾಗ್ತಿರೋದು ನೋಡಿ ನಾನೇ ಮಾತನಾಡಬೇಕಾಯ್ತು”.

ಫೋಟೋ ಕೃಪೆ : Fox News

ಹರೀಶ ಈಗ ಜೋರಾಗಿ ನಕ್ಕು ಹೇಳಿದ. ” ಅಣ್ಣಾ , ನಾವೆಲ್ಲಾ ಇಲ್ಲಿಗೆ ಬಂದಿರೋದು ಮನೆಯ ವಿಷಯ ಮಾತನಾಡಲಿಕ್ಕೆ ನಿಜ. ಆದ್ರೆ , ಪಾಲು ಕೇಳಲಿಕ್ಕಲ್ಲ . ಕೈತುಂಬಾ ಸಂಪಾದನೆ ಇದ್ರೂ, ನಮಗೆ ಒಂದೊಂದು ಸಲ ಸಂಸಾರ ತೂಗಿಸೋದು ಕಷ್ಟವಾಗುತ್ತದೆ. ಅಂಥದರಲ್ಲಿ ನೀನು ಪ್ರೈಮರಿ ಸ್ಕೂಲ್ ಟೀಚರ್ ಆಗಿ ನಿನಗೆ ಬರುವ ಆದಾಯದಲ್ಲಿ ಮನೆ ಖರ್ಚನ್ನು ತೂಗಿಸಿ, ನಮ್ಮನ್ನು ಯಾವ ಕೊರತೆಯೂ ಇಲ್ಲದೆ ಹೇಗೆ ಓದಿಸಿದೆ…..? ಅಂತ ಯೋಚಿಸಿದ್ರೆ ಆಶ್ಚರ್ಯವಾಗ್ತದೆ. ಇದು ಪಿತ್ರಾರ್ಜಿತ ಆಸ್ತಿ ನಿಜ. ನ್ಯಾಯವಾಗಿ ನಮಗೆ ಪಾಲು ಬೇಕು ನಿಜ. ಆದರೆ , ನಮ್ಮ ದೃಷ್ಟಿಯಲ್ಲಿ ಅದು ನ್ಯಾಯ ಅಲ್ಲ …..

ಶ್ರೀನಿವಾಸರಾಯರು ಆಶ್ಚರ್ಯದಿಂದ ಅವನೆಡೆ ನೋಡಿದರು . ” ದೇವರು ನಮಗೆ  ಸಾಕಷ್ಟು ಕೊಟ್ಟಿದ್ದಾನೆ . ತೊಂದರೆ ಇರೋದು ನಿನಗೆ .ನೀನು ರಿಟೈರ್ಡ್ ಆಗುವ ಹೊತ್ತಿಗೆ ಸತೀಶ ನಿನ್ನ ಕೈಗೆ ಬಂದಿರಲ್ಲ. ನಾಳೆ ಶೀಲಾ, ಗೀತಾಳ ಮಾಡುವೆ ಆಗಬೇಕು. ಇದಕ್ಕೆಲ್ಲಾ ಹಣ ಎಲ್ಲಿದೆ ?”  ” ದೇವರಿದ್ದಾನೆ. ಹೇಗೋ ಆಗುತ್ತೆ ” ರಾಯರು ಉತ್ತರಿಸಿದರು. ” ದೇವರಿದ್ದಾನೆ ನಿಜ. ಆದರೆ ಸುಮ್ಮನೆ ಕುಳಿತರೆ ಆಗುತ್ತದೆಯೇ ? ನಮ್ಮ ಪ್ರಯತ್ನಾನೂ ಮಾಡಬೇಕು . ”  ” ನಾನೇನು ಮಾಡಲಪ್ಪ ? ಕೈಲಾದಷ್ಟು ದುಡಿದಿದ್ದೇನೆ.  ನಾನು ಇದುವರೆಗೂ ಯಾರಿಗೂ ಅನ್ಯಾಯ ಮಾಡಿಲ್ಲ. ದೇವರು ಇರೋದು ನಿಜವಾದ್ರೆ ನನ್ನ ಕೈ ಬಿಡೋಲ್ಲ …”. ನಿನ್ನ ನಂಬಿಕೆ ನಿಜ. ನಿಮಗೆ ಇರುವ ನಂಬಿಕೆ ನಮಗೆ ನಮ್ಮಲ್ಲೇ ಇಲ್ಲ. ಅದಕ್ಕೇ ಈ ಏರ್ಪಾಡು …”

” ಯಾವ ಏರ್ಪಾಡು ? ”   ” ನಾವು ನಿನ್ನ ತಮ್ಮಂದಿರು. ನಿನ್ನ ಮೇಲೆ ಪ್ರೀತಿ ಇರಬಹುದು. ಆದ್ರೆ , ನಾಳೆ ನಮ್ಮ ಮಕ್ಕಳು. ನಿನ್ನ ಮಕ್ಕಳ ಮೇಲೆ ಇದೇ ವಿಶ್ವಾಸ ಇಟ್ಟಿರ್ತಾರೆ ಅಂತ ಹೇಗೆ ಹೇಳೋದು? ನಾಳೆ ನಾವೇ ಬದಲಾಗಬಹುದು. ಅದಕ್ಕೇ ಹೋದ ವಾರ ಬೆಂಗಳೂರಿನಲ್ಲಿ ನಾವು ಮೂವರೂ ಸೇರಿ ಒಂದು ನಿರ್ಧಾರಕ್ಕೆ ಬಂದೆವು….”ಎಂದು ಮಹೇಶ ಹೇಳಿದ. ” ಯಾವ ನಿರ್ಧಾರಕ್ಕೆ ಬಂದ್ರಿ …..? ”  ” ಅಣ್ಣಾ , ನಾನು ಮಹಡಿ ಮೇಲೆ ಒಂದು ಸಂಸಾರಕ್ಕೆ ಅನುಕೂಲ ಆಗುವ ಹಾಗೆ ಅಡಿಗೆ ಮನೆ, ಒಂದು ರೂಂ ಕಟ್ಟಿಸುತ್ತೀನಿ. ಹರೀಶ ಇಪ್ಪತ್ತೈದು ತೆಂಗಿನ ಸಸಿ ನೆಡಿಸುತ್ತಾನೆ. ರಾಮು ಈ ಮನೆ ದುರಸ್ತಿ ಮಾಡಿಸಿ ಮಧ್ಯೆ ಗೋಡೆ  ಹಾಕಿಸ್ತಾನೆ. ನೀನು ತೋಟ ಮಾಡಿಸು. ಮೇಲಿನ ಹಾಗೇ ಕೆಳಗಿನ ಮನೇನ ಬಾಡಿಗೆಗೆ ಕೊಡು. ಆ ಹಣನ ತೆಗೆದಿಟ್ಟು ಮಕ್ಕಳಿಗೆ ಉಪಯೋಗಿಸು” ಹರೀಶನ ಮುಂದಿನ ಮಾತುಗಳು ಕೇಳಿಸಲೇ  ಇಲ್ಲ. ಮೂರ್ನಾಲ್ಕು ದಿನಗಳಿಂದ ತಾವು ಯೋಚಿಸಿದ ಸಮಸ್ಯೆಯ ಮರ ನಿಧಾನವಾಗಿ ಉರುಳತೊಡಗಿದಂತೆ ಶ್ರೀನಿವಾಸರಾಯರಿಗೆ ಭಾಸವಾಗತೊಡಗಿತು. ತಾವು ಅಂದುಕೊಂಡಿದ್ದೇ ಒಂದು, ಈಗ ಆಗುತ್ತಿರುವುದು ಬೇರೊಂದು ಎಂದು ತಿಳಿದ ಅವರಿಗೆ ಗಗನದಲ್ಲಿ ತೇಲಾಡುತ್ತಿರುವಂತೆ ಸಂತಸವಾಯಿತು. ಹರ್ಷ ತಡೆಯಲಾರದೆ ಅವರು ಅವನನ್ನು ಅಪ್ಪಿಕೊಂಡು ಎಳೆ ಮಗುವಿನಂತೆ ಅತ್ತರು. ಅಡಿಗೆ ಮನೆಯಿಂದಲೇ ಇದನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದ ಕಾವೇರಿಯ ಕಣ್ಣುಗಳಲ್ಲಿ ಆನಂದಭಾಷ್ಪ  ಉದುರ ತೊಡಗಿದವು.


  •  ಪ್ರಭಾಕರ್ ತಾಮ್ರಗೌರಿ

1.5 2 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW