ಗಡಿಮಾರಿ!! ನಂಬಿಕೆಯೋ ? ಮೂಢನಂಬಿಕೆಯೋ?

“ಗಡಿ ಮಾರಿ” ಒಂದು ಗ್ರಾಮೀಣ ಸಂಪ್ರದಾಯವಾಗಿ ಉಳಿಯಬೇಕೋ ಅಥವಾ ಈ ಆಧುನಿಕ ಯುಗದಲ್ಲಿ ಮೂಢನಂಬಿಕೆಯೆಂದು ತೊಲಗಬೇಕೋ ಕಾಲವೇ ತೀರ್ಮಾನಿಸಬೇಕು.- ಡಾ.ಎನ್.ಬಿ.ಶ್ರೀಧರ ಅವರ ಒಂದು ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…

ಅನೇಕ ನಂಬುಗೆಗಳು ಮನುಷ್ಯರಲ್ಲಿ ತಲೆತಲಾಂತರದಿಂದ ಹಾಸುಹೊಕ್ಕಾಗಿವೆ. ಊರಿನಲ್ಲಿ ಕಾಯಿಲೆ ಸಂಕಷ್ಟ ಬಂದಾಗ ಒಂದು ಮರದ ಮೂರ್ತಿ ತಯಾರಿಸಿ ಅದನ್ನು ಅಲಂಕಿರಿಸಿ ಪೂಜಿಸಿ ಊರ ಗಡಿ ದಾಟಿಸಿ ಬಂದರೆ ಈ ಸಂಕಷ್ಟಗಳೆಲ್ಲ ಬಗೆಹರೆಯುತ್ತವೆ ಎಂಬುದು ನಂಬಿಕೆ. ಇದರ ಒಂದು ಭಾಗವೇ “ಗಡಿ ಮಾರಿ”. ಇದು ಒಂದು ಗ್ರಾಮೀಣ ಸಂಪ್ರದಾಯವಾಗಿ ಉಳಿಯಬೇಕೋ ಅಥವಾ ಈ ಆಧುನಿಕ ಯುಗದಲ್ಲಿ ಮೂಢನಂಬಿಕೆಯೆಂದು ತೊಲಗಬೇಕೋ ಕಾಲವೇ ತೀರ್ಮಾನಿಸಬೇಕು.
—-
ಈಗ ಸ್ವಲ್ಪ ದಿನಗಳ ಹಿಂದೆ ಶಿವಮೊಗ್ಗದಿಂದ ಸಾಗರಕ್ಕೆ ಕಾರ್ಯನಿಮಿತ್ತ ಹೋಗುವಾಗ ರಸ್ತೆಯ ಬದಿಯಲ್ಲಿ ಒಂದು ಮರದ ಗಾಡಿ, ಅದಕ್ಕೆ ಎಳೆಯಲು ಎರಡು ಮರದ ರೆಂಬೆಗಳು, ಅದರ ಮೇಲೊಂದು ದೇವರ ದೇವತೆಯ ಮೂರ್ತಿ, ಅದರ ಕೈಲೊಂದು ಖಡ್ಗ, ಹಿಂದುಗಡೆ ಕಸಬರಿUಗಳ ಮತ್ತು ಕಸದ ರಾಶಿ ಕಂಡೆ. ಕೆಲವೊಮ್ಮೆ ಗಂಡು ಮತ್ತು ಹೆಣ್ಣು ಇರುವ ಜೋಡಿ ಮೂರ್ತಿಗಳೂ ಸಹ ಕಂಡು ಬಂದವು. ಒಂದಲ್ಲ ಎರಡಲ್ಲ.. ಶಿವಮೊಗ್ಗದಿಂದ ಸಾಗರದವರೆಗಿನ ರಸ್ತೆಯಲ್ಲೆÃ ಮೂರು ನಾಲ್ಕು ಈ ತರದ ಪ್ರತಿಕೃತಿಗಳು ಕಂಡು ಬರುತ್ತವೆ. ಬಹಳ ವರ್ಷಗಳಿಂದಲೂ ಇದು ಬಹಳ ಸಹಜವಾಗಿ ಕಂಡು ಬರುವ ಈ ದೃಶ್ಯ ಶಿವಮೊಗ್ಗ-ಹೊಸನಗರ, ಶಿವಮೊಗ್ಗ-ತೀರ್ಥಹಳ್ಳಿ ರಸ್ತೆಯಲ್ಲಿಯೂ ಕಂಡು ಬರುವುದು ಸಾಮಾನ್ಯ. ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಈ ಆಚರಣೆ ಉತ್ತರ ಕರ್ನಾಟಕದಲ್ಲಿ ಕಾಣಸಿಗದು.

ಏನಿದರ ಅರ್ಥ ? ಅಂತ ನೋಡಲು ಹೋದಾಗ ಇದರ ಹೆಸರು “ಗಡಿಮಾರಿ” ಎಂದು ತಿಳಿದು ಬಂದಿತು. ಊರಲ್ಲಿ ಯಾವುದಾದರೂ ಸೋಂಕು ರೋಗ ಕಂಡು ಬಂದರೆ ಅಥವಾ ಇತರ ದುರ್ಘಟನೆಗಳು ನಡೆದರೆ ಆ ಘಟನೆಗೆ ಕಾರಣವಾದ ದುಷ್ಟ ಶಕ್ತಿಯನ್ನು ಊರ ಗಡಿ ದಾಟಿಸಲು ಈ ಪದ್ಧತಿ ಇದೆ ಎಂದು ಹಲವು ಹಿರಿಯರು ಹೇಳಿದರು. ಈ ಬಗ್ಗೆ ಸದ್ಯದ ಯುವಕರಿಗೆ ಇರುವ ಮಾಹಿತಿ ಅಷ್ಟಕ್ಕಷ್ಟೇ. ಒಂದು ಊರಿನ ಗಡಿ ದಾಟಿಸುವಾಗ ಆ ಮೂರ್ತಿಯ ಜೊತೆಗೆ ಊರಲ್ಲಿರುವ ಕಸ, ಕಡ್ಡಿ ಇತ್ಯಾದಿಗಳನ್ನು ಹೇರಿಕೊಂಡು ಮತ್ತೊಂದು ಊರಿನ ಗಡಿಯ ಹತ್ತಿರ ಬಂದರೆ ಅವರ ಕೆಲಸ ಮುಗಿದಂತೆ.

ಮರದಿಂದ ತಯಾರಿಸಿದ ಬೊಂಬೆಗೆ ಕೆಂಪು, ಬಿಳಿ ಹಳದಿ ಮತ್ತು ಕಪ್ಪು ಬಣ್ಣ ಬಳಿದು ಅದನ್ನು ಚಿಕ್ಕ ಮರದ ಕೈಗಾಡಿಯಲ್ಲಿ ಕುಳ್ಳಿರಿಸಿ ಬೊಂಬೆಯ ಕುತ್ತಿಗೆಗೆ ಹೂವಿನ ಹಾರ ಹಾಕಿ ಪೂಜೆ ಮಾಡುತ್ತಾರೆ. ನಂತರ ಬೊಂಬೆಗೆ ಊದುಬತ್ತಿ ಇಟ್ಟು, ಆರತಿ ಬೆಳಗಿ ಊರಿನ ಜನರೆಲ್ಲ ಮಾರಿಯನ್ನು ಕೈಗಾಡಿಯ ಮುಖೇನ ದೂಡಿಕೊಂಡು ಬಂದು ತಮ್ಮ ಗ್ರಾಮದ ಗಡಿ ದಾಟಿಸಿ ಬಿಡುವುದು ಸಂಪ್ರದಾಯ. ಕೆಲವೊಮ್ಮೆ ಮುಂದಿನ ಊರಿಗೆ ಒಯ್ಯದಿದ್ದರೆ, ಇದು ಇಟ್ಟಲ್ಲೇ ಕೊಳೆತು ಅಥವಾ ಗೆದ್ದಲು ಹಿಡಿದು ಮಣ್ಣು ಸೇರಲು ಹಲವಾರು ವರ್ಷಗಳು ಬೇಕಾಗುತ್ತವೆ. ಹೀಗಾಗಿ ಸಾಗರ, ತೀರ್ಥಹಳ್ಳಿಯ ರಸ್ತೆಯ ಇಕ್ಕೆಲಗಳಲ್ಲಿ ಇಂಥ ನೂರಾರು ಬೀದಿ ದೇವರು ಯಾವಾಗಲೂ ಕಂಡುಬರುತ್ತವೆ.

ರಾಜ್ಯದ ನಾನಾ ಭಾಗಗಳಲ್ಲಿ ನಾನಾ ರೀತಿಯ ಆಚರಣೆ, ನಂಬಿಕೆ ಈಗಲೂ ಜೀವಂತ. ಈ ನಂಬಿಕೆ ಅನ್ನುವುದು ಹಾಗೆ. ಅದು ಎಲ್ಲಿ, ಹೇಗೆ ಹುಟ್ಟಿಕೊಳ್ಳುತ್ತದೆಯೋ ಗೊತ್ತಿಲ್ಲ. ಅದು ಸಂಪ್ರದಾಯ ಅಥವಾ ಆಚರಣೆ ರೂಪದಲ್ಲಿ ಅವತರಿಸುತ್ತದೆ. ಇಂಥದ್ದೇ ಭಕ್ತಿಯ ಈ ಗಡಿ ಮಾರಿ ದೇವರು!!
ಈ ಗಡಿಮಾರಿಯ ಉಗಮಕ್ಕೆ ತರಹೆವಾರಿ ಕಥೆಗಳಿದ್ದರೂ ಯಾರೂ ಅಷ್ಟು ನಿಖರವಾದ ಮಾಹಿತಿ ನೀಡಲಿಲ್ಲ.

ಸಾಗರ ಮತ್ತು ತೀರ್ಥಹಳ್ಳಿಯ ಹಳೆಯ ತಲೆಮಾರಿನ ರೈತರ ಪ್ರಕಾರ, ಇದು ಊರಿನ ಮಾರಿ ದೇವತೆಯಂತೆ. ಪ್ರತೀ ವರ್ಷ ಮಳೆಗಾಲಕ್ಕೂ ಮುನ್ನ ಹಳ್ಳಿಯ ಜನರು ಖಾಯಿಲೆ, ಕೋಟಲೆ, ಕಷ್ಟ-ನಷ್ಟ, ಬಡತನ, ದಾರಿದ್ರ್ಯಕ್ಕೆ ಈಡಾಗುತ್ತಿದ್ದರಂತೆ. ಹಸುಗಳು ಖಾಯಿಲೆ ಬೀಳುತ್ತಿದ್ದವಂತೆ. ಇದಕ್ಕೆಲ್ಲ ಊರ ಮಾರಿಯ ಮುನಿಸೇ ಕಾರಣ ಎಂದುಕೊಂಡ ಹಳ್ಳಿಗರು ಊರಿನ ಮಾರಿಯನ್ನು ಊರಿನ ಗಡಿ ದಾಟಿಸಿ ಬರಲು ಇಂಥ ಆಚರಣೆಯನ್ನು ಶುರುವಿಟ್ಟುಕೊಂಡರಂತೆ. ಇನ್ನು ಹಲವಾರು ಅಂತೆ ಕಂತೆಗಳ ಮಹಾ ಬೊಂತೆಯೇ ಈ ನಂಬಿಕೆಯ ಹಿಂದಿವೆ.

ಅವರವರ ನಂಬಿಕೆಯಂತೆ ಪೂಜೆಗೊಂಡ ಈ “ಗಡಿಮಾರಿ” ಯನ್ನು ಊರು ದಾಟಿಸುವ ಪದ್ಧತಿಯೇ ವಿಶಿಷ್ಟ. ವಿವಿಧ ವಾಧ್ಯಗಳು, ಕೆಲವೊಮ್ಮೆ ಡೊಲ್ಲು, ತಮಟೆ ಮೆರವಣಿಗೆಯೊಂದಿಗೆ ಹೊರಟ ಮಂದಿ, ಗಡಿಮಾರಿಯನ್ನು ತಮ್ಮ ಊರಿನ ಗಡಿದಾಟಿಸಿ, ಮುಂದಿನ ಊರಿನ ಗಡಿಗೆ ಸೇರಿಸುತ್ತಾರೆ. ಹೀಗೆ ಗಡಿಮಾರಿ ಸಾಗಿ ಹೋದಂತೆ, ಹಿಂದೆ ದಾರಿಯುದ್ದಕ್ಕೂ, ಹಳೇ ಪೊರಕೆ, ಮೊರ, ಚಾಪೆ, ತಟ್ಟಿ, ಬುಟ್ಟಿ, ಒಡೆದ ಮಡಿಕೆ-ಕುಡಿಕೆ, ಹಳೆಯ ಬಟ್ಟೆಗಳನ್ನು ಎಸೆಯುತ್ತ ಹೋಗುತ್ತಾರೆ.

ಸ್ವಲ್ಪ ದಿನಗಳ ನಂತರ ತಮ್ಮ ಗಡಿಯಲ್ಲಿ ಕುಳಿತ ಈ ಗಡಿಮಾರಿಯನ್ನು ಮತ್ತೊಂದು ಗ್ರಾಮದ ಜನರು ತಮ್ಮ ಊರಿನಲ್ಲಿ ಸಂಗ್ರಹವಾದ ಹಳೆಯ ವಸ್ತುಗಳನ್ನು ಸೇರಿಸಿ ತಮ್ಮ ಊರಿಗೆ ಬಂದ ಗಡಿಮಾರಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ತಮ್ಮ ಮುಂದಿನ ಊರಿನ ಎಲ್ಲೆಗೆ ದಾಟಿಸುತ್ತಾರೆ. ಹೀಗೆ ಎಲ್ಲೆಯಿಂದ ಎಲ್ಲೆಗೆ ಸಂಚಾರಿಸುತ್ತ ಹೋಗುವ ಗಡಿಮಾರಿಯನ್ನು ಕೊನೆಗೆ ಯಾವುದಾದರೊಂದು ನೀರಿರುವ ಜಾಗದಲ್ಲಿ ವಿಸರ್ಜಿಸುತ್ತಾರೆ. ಪ್ರತಿ ಊರಲ್ಲಿ ಕಾಯಿಲೆ ಕಸಾಲೆ ಕಷ್ಟ ಇದ್ದಾಗ ಈ “ಗಡಿಮಾರಿ” ದೇವರನ್ನು ತಯಾರಿಸಿ ಅವರ ಊರಿನ ಗಡಿ ದಾಟಿಸುತ್ತಾರೆ. ಅದಕ್ಕಾಗಿಯೇ ಹಲವಾರು ಗಡಿಮಾರಿಗಳು ನಮಗೆ ರಸ್ತೆಯ ಗುಂಟ ಕಾಣಲು ಸಿಗುವುದು.

ಪ್ರತಿಯೊಂದು ಆಚರಣೆಗೂ ಅದರದೇ ಆದ ಹಿನ್ನೆಲೆ ಇರುತ್ತದೆ. ಗಡಿಮಾರಿಯನ್ನು ಗಡಿಪಾರು ಮಾಡುವ ವಿಶಿಷ್ಟ ಆಚರಣೆಯ ಕಾರಣದಿಂದ, ಗ್ರಾಮವನ್ನು ಶುದ್ಧೀಕರಿಸುವ ಕ್ರಿಯೆ ಮೊದಲಾಗಿ, ಜನರು ತಮ್ಮ ಮನೆಯಲ್ಲಿರುವ ಹಳೆಯ ಸಾಮಾನುಗಳನ್ನು ಹೊರಗೆ ಹಾಕುವುದರಿಂದ, ಊರೆಲ್ಲ ಸ್ವಚ್ಛವಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಕಡಿಮೆಯಾಗುವುದೆಂಬುದು ಇದರ ಹಿಂದಿನ ಗೂಢ ಮರ್ಮವಿರಬಹುದೇನೋ…! ಈಗಲೂ ಅಲ್ಲಿ ಇಲ್ಲಿ ಇಂಥ ಆಚರಣೆಗಳು, ನಂಬಿಕೆಗಳು, ಆರಾಧನೆಗಳು ಇದ್ದರೂ, ಅಂದಿನ ಆರಾಧನಾ ವಿಧಾನಗಳಲ್ಲಿ ಜನಪದರಿಗಿದ್ದ ತನ್ಮಯತೆ, ಸಮರ್ಪಣಾ ಭಾವಗಳನ್ನು ಪ್ರಸ್ತುತ ಕಾಣಲು ಸಾಧ್ಯವಿಲ್ಲ. ಕೆಲವೊಮ್ಮೆ ರಸ್ತೆಯಲ್ಲಿ ಹೋಗುತ್ತಿರುವ ವಾಹನ ಸವಾರನ್ನು ಅಡ್ಡಗಟ್ಟಿ ಒತ್ತಾಯದಿಂದ ಹಣ ವಸೂಲಿ ಮಾಡಿ “ಎಣ್ಣೆ” ಹಾಕುವ ವಸೂಲಿ

ದಂಧೆಯಾಗಿಯೂ ಗೋಚರಿಸುತ್ತದೆ. ಇನ್ನು ಕೆಲವು ವರ್ಷ ಕಳೆದರೆ ಈ ಗಡಿಮಾರಿಗಳು ಗಡಿ ದಾಟಿದರೂ ಆಶ್ಚರ್ಯವಿಲ್ಲ!!

ಈ ಗಡಿಮಾರಿಯನ್ನು ಊರಿಂದ ಹೊರಗಟ್ಟುವ ದಿನ ಊರಿನ ಗಡಿಯಲ್ಲಿ ಕೋಳಿಯನ್ನು ಬಲಿಕೊಡುವ ಸಂಪ್ರದಾಯವೂ ಚಾಲ್ತಿಯಲ್ಲಿದೆ. ಇಲ್ಲಿ ಬಲಿ ನೀಡಿದ ಕೋಳಿಗಳನ್ನು ಹಳ್ಳಿಗರು ತಂತಮ್ಮ ಮನೆಗೆ ಕೊಂಡೊಯ್ದು ಹಬ್ಬದ ಅಡುಗೆ ಮಾಡಿ ಸವಿಯುತ್ತಾರೆ. ಗಡಿಮಾರಿ ಓಡಿಸುವ ದಿನ ಮನೆಗೆ ನೆಂಟರಿಷ್ಟರು, ಬಂಧು ಬಳಗ ಬರುವ ವಾಡಿಕೆಯೂ ಇಡೀ ಊರಿನಲ್ಲಿ ಇದೊಂಥರಾ ಜಾತ್ರೆಯ ವಾತಾವರಣ ಸಷ್ಟಿಸುತ್ತದೆ. ಇದೊಂದು ಹಳ್ಳಿ ಜನರ ದುಗುಡ ನಿವಾರಣೆಯ ದಾರಿಯಾಗಿದೆ ಎಂದರು ಸಹ ಆಶ್ಚರ್ಯವಿಲ್ಲ !!..

ಈ ಗಡಿಮಾರಿ ದೇವರು ಘಟ್ಟದ ಮೇಲಿನವರ ನಂಬಿಕೆಯಾದರೂ ಬೊಂಬೆ ತಯಾರಿಯಲ್ಲಿ ಕಲಾವಿದನ ಕೈಚಳಕ ಗಮನ ಸೆಳೆಯದೇ ಇರದು. ಬೊಂಬೆ ಕೆತ್ತನೆಯಲ್ಲಿ ನೈಪುಣ್ಯ ತೋರಿಸುವ ಕಲಾವಿದ, ಅದರ ಮುಖ, ಹುಬ್ಬು, ಕಣ್ಣು, ತುಟಿ, ಗಾಂಭೀರ್ಯ ಎಲ್ಲವನ್ನೂ ಚಿತ್ರಿಸಿದ ಚಂದಕ್ಕೆ ಬೆರಗಾಗಲೇಬೇಕು. ತಲೆತಲಾಂತರಗಳು ಉರುಳಿದರೂ ಇಂದಿಗೂ ಬೀದಿ ದೇವರು ಅದರದ್ದೇ ಆದ ಗತ್ತು-ಗೈರತ್ತುಗಳಿಂದ ಮಲೆನಾಡಿನ ಜನರ ಆರಾಧ್ಯ ದೇವತೆಯಾಗಿ ಉಳಿದಿದೆ.ಇತ್ತೀಚಿಗೆ ಈ ಮೂರ್ತಿಗಳನ್ನು ತಯಾರಿಸುವವರು ಸಿಗದೇ, ಪೂರ್ತಿ ಕಸುಬು ಬಾರದವರು ತಯಾರಿಸುವುದರಿಂದ ಇವು ವಿಕಾರವಾಗಿ ಭೂತದಂತೆ ಕಾಣಿಸುವುದೂ ಇದೆ.

ಅದರಲ್ಲೂ ಪಶುಗಳಲ್ಲಿ ಸಾಮಾನ್ಯವಾಗಿ ಬರುವ ಕಾಲುಬಾಯಿ ಜ್ವರವೆಂಬ ವೈರಾಣು ಕಾಯಿಲೆ ಬಂದಾಗ ಈ ರೀತಿ ಗಡಿಮಾರಿಗಳು ಊರಿಂದ ಊರಿನ ಗಡಿಯಲ್ಲಿ ಕಂಡು ಬರುವುದು ಸಾಮಾನ್ಯ.

ಇದೊಂದು ಗ್ರಾಮೀಣ ಜನರ ಮನಸ್ಸಿನ ದುಗುಡ ತುಮುಲವನ್ನು ಹಗುರಗೊಳಿಸಲು ಇರುವ ಸಂಪ್ರದಾಯ ಹಾಗೇ ಇರಲಿ ಎಂದು ಸ್ವೀಕರಿಸಬೇಕೋ ಅಥವಾ ರೋಗಗಳನ್ನು ನಿಯಂತ್ರಿಸಲು ಉತ್ತಮ ಲಸಿಕೆಗಳು, ಉತ್ತಮ ತಂತ್ರಜ್ಞಾನವಿರುವ ಈ ಆಧುನಿಕ ಯುಗದಲ್ಲಿ ಇಂತಹ ಆಚರಣೆ ಎಷ್ಟರ ಮಟ್ಟಿಗೆ ಸರಿ ?! ಇದು ಮೌಢ್ಯವಲ್ಲವೇ? ಎಂಬ ಪ್ರಶ್ನೆಗಳಿಗೆಲ್ಲಾ ಓದುಗರೇ ಉತ್ತರಿಸಬೇಕು !!


  • ಡಾ.ಎನ್.ಬಿ.ಶ್ರೀಧರ
    ಪ್ರಧಾನ ಸಂಶೋಧಕರು ಮತ್ತು ಮುಖ್ಯಸ್ಥರು
    ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರ, ಶಿವಮೊಗ್ಗ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW