ವಿಶ್ವದ ಅತಿದೊಡ್ಡ ದ್ವಿದಳ ಧಾನ್ಯ

ಬಹುಶಃ ಈ ತರಕಾರಿ ಬಹಳ ಜನಕ್ಕೆ ಗೊತ್ತೇ ಇಲ್ಲ. ಮಲೆನಾಡಿನ ಹಾಗೂ ಪಶ್ಚಿಮ ಘಟ್ಟದ ಅರಣ್ಯವಾಸಿಗಳಿಗೆ ಮಾತ್ರ ತಿಳಿದಿದೆ. ಅದರ ಹೆಸರೇ ಗಣಪೆ ಕಾಯಿ. ಇದರ ವಿಶೇಷತೆಯ ಕುರಿತು ಉದ್ಯಮಿ ಅರುಣ್ ಪ್ರಸಾದ್ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಇದು ಮಲೆನಾಡಿನ ದಟ್ಟ ಅಡವಿಯಲ್ಲಿನ ಬೃಹತ್ ಮರಕ್ಕೆ ಹಬ್ಬುವ ಬೃಹತ್ ಬಳ್ಳಿಯಲ್ಲಿ ಬಿಡುತ್ತದೆ. ವಿಶ್ವದ ಅತಿದೊಡ್ಡ ಗಾತ್ರದ ದ್ವಿದಳ ಧಾನ್ಯ ಇದು. ಇದರ ಉದ್ದವಾದ ಕಾಯಿಯ ಹೊರಕವಚ ಹಣ್ಣಾಗಿ ಒಣಗಿ ಒಡೆದು ಅದರ ಒಳಗಿನ ಗಣಪೆಕಾಯಿ ಮರದ ಬುಡದಲ್ಲಿ ಬಿದ್ದಾಗ ಸಂಗ್ರಹಿಸುತ್ತಾರೆ.

ನಮ್ಮ ತಾಯಿ ಬಿದನೂರು ನಗರದಿಂದ ತಂದಿರಿಸಿದ್ದ ಗಣಪೆ ಕಾಯಿ ಚಿಕ್ಕವನಿದ್ದಾಗ ನೋಡಿದ್ದೆ. ಕೆಮ್ಮಣ್ಣು ನೆಲಕ್ಕೆ ಸಾರಿಸಿ ಅದನ್ನ ಹೊಳಪು ಮಾಡಲು ಈ ಗಣಪೆ ಕಾಯಿಯಿಂದ ತಿಕ್ಕುತ್ತಿದ್ದರು. ಯಾವುದೋ ಮನೆ ಮದ್ದಿಗೆ ಇದನ್ನ ತೇಯಿದು ಸೇವಿಸುವುದು ಗೊತ್ತಿತ್ತು. ಹಸೆ ಚಿತ್ತಾರದ ರಾಷ್ಟ್ರಪ್ರಶಸ್ತಿಗಳನ್ನು ಪಡೆದ ಈಶ್ವರ ನಾಯ್ಕರು ನಮ್ಮ ಕಾಟೇಜಿಗೆ ಹಸೆ ಚಿತ್ತಾರದ ಸ್ಪಷ೯ ನೀಡಲು ಬಂದಾಗ ಈ ಗಣಪೆ ಕಾಯಿ ಖಾದ್ಯದ ಬಗ್ಗೆ ಹೇಳಿದಾಗ ಬಾಯಲ್ಲಿ ನೀರು ಬಂತು.

ಸಿದ್ದಾಪುರ, ಸಿರಸಿ ಭಾಗದ ಕಾಡಲ್ಲಿ ಗಣಪೆ ಕಾಯಿ ಯಥೇಚವಾಗಿ ಸಿಗುತ್ತದೆ. ಅದನ್ನ ಸಂಗ್ರಹಿಸಿ ತಂದಿಟ್ಟುಕೊಳ್ಳುತ್ತಾರೆ. ಇದರ ಪದಾಥ೯ ತಯಾರಿಸುವಾಗ ಈ ಗಣಪೆ ಕಾಯಿ ಸುಡುತ್ತಾರೆ. ನಂತರ ಒಡೆದು ಒಳಗಿನ ತಿರುಳು ಎರಡು ಸಾರಿ ಬೇಯಿಸಿ ನೀರು ಚೆಲ್ಲುತ್ತಾರೆ. ಇದು ಅದರಲ್ಲಿರುವ ಜೈವಿಕ ವಿಷದ ಅಂಶ ನಿವಾರಿಸುವ ಕ್ರಮ.

ನಂತರ ಸಣ್ಣ ತೆಳುವಾದ ತುಂಡು ಮಾಡುತ್ತಾರೆ. ನಂತರ ಇದೇ ರೀತಿ 5 ಸಾರಿ ಬೇಯಿಸಿ ನೀರು ಬದಲಿಸಿ. ನಂತರ ಒಣ ಮಸಾಲೆ, ಉಪ್ಪು, ಕಾರ ರುಚಿಗೆ ತಕ್ಕಂತೆ ಬೆರೆಸಿ ಪಲ್ಯ ಮಾಡುತ್ತಾರೆ.

ಅವರು ಅವರ ಮನೆಯಲ್ಲಿ ತಯಾರಿಸಿದ ಪಲ್ಯ ಮತ್ತು ಗಣಪೆ ಕಾಯಿಗಳು ತಂದುಕೊಟ್ಟಿದ್ದರು. ನಿಜಕ್ಕೂ ಇದೊಂದು ಅಪರೂಪದ ರುಚಿಯ ಸಸ್ಯಹಾರಿ ಖಾದ್ಯ. ಇದು ವಷ೯ಕೊಮ್ಮೆಯಾದರೂ ತಿನ್ನಬೇಕು, ಒಮ್ಮೆ ತಿಂದರೆ ಕನಿಷ್ಟ ಒಂದು ತಿಂಗಳ ನಂತರವೇ ಉಪಯೋಗಿಸಬೇಕೆಂಬ ಆಚರಣೆ ಇದೆಯಂತೆ ಕಾರಣ ಇದು ತುಂಬಾ ಉಷ್ಣ ಅಂತೆ.

ಇದಕ್ಕೆ ಗಣಪೆ ಅಂತ ಯಾಕೆ ಹೆಸರು ಬಂತು ಗೊತ್ತಿದ್ದರೆ ತಿಳಿಸಿ ಅದಕ್ಕೂ ಒಂದು ಕಾರಣ ಇದೆ. ಶುದ್ದ ಸಾವಯವ ಪಶ್ಚಿಮ ಘಟ್ಟದ ಗಣಪೆ ಕಾಯಿ, ಮಲೆನಾಡಿನ ಎಲ್ಲಾ ಪ್ರದೇಶದಲ್ಲಿ ಸಿಗುವುದಿಲ್ಲ, ನಿದಿ೯ಷ್ಟ ಹವಾಮಾನದಲ್ಲಿ ಮಾತ್ರ ಹುಲುಸಾಗಿ ಬೆಳೆಯುತ್ತದೆ.


  • ಅರುಣ್ ಪ್ರಸಾದ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading