ನನ್ನ ನಾವೆಯಿಂದ ನಿನ್ನ ನಾವೆಯವರೆಗೆ….

ಸುಧಾ ಅಡುಕಳ ಅವರು ಕನ್ನಡಕ್ಕೆ ತಂದಿರುವ ರವೀಂದ್ರನಾಥ ಟಾಗೋರ್ ಅವರ ‘ಗೀತಾಂಜಲಿ’ಯ ಕುರಿತು ಹಿರಿಯ ಲೇಖಕಿ ಗಿರಿಜಾ ಶಾಸ್ತ್ರಿ ಅವರು ಬರೆದ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…

ಪುಸ್ತಕ: ಗೀತಾಂಜಲಿ
ಲೇಖಕರು : ಸುಧಾ ಅಡುಕಳ 
ಪ್ರಕಾಶಕರು : ಲಡಾಯಿ ಪ್ರಕಾಶನ
ಬೆಲೆ : 150.00

ಗೆಳತಿ ಸುಧಾ ಅಡುಕಳ ಅವರು ಕನ್ನಡಕ್ಕೆ ತಂದಿರುವ ರವೀಂದ್ರನಾಥ ಟಾಗೋರ್ ಅವರ ‘ಗೀತಾಂಜಲಿ’ಯನ್ನು ಕಳುಹಿಸಿ ಬಹಳ ದಿನಗಳ ಮೇಲಾಗಿತ್ತು. ಅದನ್ನು ಈಗ ಓದಿ ಮುಗಿಸಿದ ತಕ್ಷಣ, ಕಣ್ಣು ಕಂಡಷ್ಟೂ ವಿಸ್ತರಿಸುವ ವಿಶಾಲವಾದ ಸಾಗರದ ಮುಂದೆ ನಿಂತ ಅನುಭವವಾಯಿತು. ಮೇರು ಪರ್ವತ ಒಂದರ ತಪ್ಪಲಲ್ಲಿ ನಿಂತಂತೆ ಭಾಸವಾಯಿತು. ಕುವೆಂಪು ಅವರು ಇಂತಹ ಅನುಭವವನ್ನು ಭೂಮಾನುಭೂತಿ ( Sublime theory – Longinus) ಎನ್ನುತ್ತಾರೆ.
words worth ತನ್ನ ಕವಿತೆಯಲ್ಲಿ “The world is too much with us; late and soon, Getting and spending, we lay waste our powers” ಎನ್ನುತ್ತಾನೆ.

ಇಲ್ಲಿ ನನಗೆ ಟಾಗೋರರ ಜೊತೆಗೆ ಕುವೆಂಪು ಮತ್ತು words worth ನೆನಪಾಗಿರುವುದಕ್ಕೆ ಕಾರಣವಿದೆ. ಈ ಮೂವರೂ ರೊಮ್ಯಾಂಟಿಕ್ ಕವಿಗಳು.(ಕುವೆಂಪು ಅವರಂತೂ ಕನ್ನಡದ wordsworth ಎಂದೇ ಹೆಸರಾದವರು) ನಿಸರ್ಗದೊಡನೆ ತಾದಾತ್ಮ್ಯ ಈ ಮೂವರ ಮೂಲ ಸೆಲೆ. ಪ್ರಕೃತಿಯ ದೈವೀಕರಣ ಭಾರತೀಯ ನವೋದಯದ ಮುಖ್ಯಲಕ್ಷಣಗಳಲ್ಲಿ ಒಂದು. ಅವರುಗಳೆಲ್ಲರ ಅಧ್ಯಾತ್ಮಿಕ ಔನ್ನತ್ಯದ ನೆಲೆಯೂ ಪ್ರಕೃತಿಯೇ! words worth ಕವಿತೆಯಲ್ಲಿರುವ ಕೊರಗಿಗೆ, ವಿಷಾದಕ್ಕೆ ಟಾಗೋರವರ ಕವಿತೆಗಳಲ್ಲಿ ಉತ್ತರವಿದೆ ಎಂದು ನನಗೆ ತೋರುತ್ತದೆ. ಅದು ಇಂದಿಗೂ ಪ್ರಸ್ತುತ.
ನಾವಿಂದು ವ್ಯಾವಹಾರಿಕ ಪ್ರಪಂಚದಲ್ಲಿ ಸದಾ ಕಾಲವೂ ವ್ಯಸ್ತರಾಗಿದ್ದೇವೆ. ವೇಗ ಮತ್ತು ಧಾವಂತ ನಮ್ಮ ಬದುಕನ್ನು ರೂಪಿಸುತ್ತಿದೆ. ಆಧುನಿಕತೆಯ ಅಭಿಶಾಪವಿದು. ಕನಸು ಎಚ್ಚರಗಳಲ್ಲೂ ಪ್ರಪಂಚ ನಮ್ಮನ್ನು ಬಿಡದೆ ಕಾಡುತ್ತದೆ. ಆವರಿಸುತ್ತದೆ. ಅದರಿಂದ ಬಿಡುಗಡೆಯೇ ಇಲ್ಲ. ಆದುದರಿಂದಲೇ “ಒಂದರೆಕ್ಷಣ ನಿನ್ನೆದುರು ಕುಳಿತುಬಿಡುವ ಭಾಗ್ಯವ ಕೊಡು ದೊರೆಯೇ ಮತ್ತೆ ಮುಗಿಸುವೆ ಕೈಯಲ್ಲಿರುವ ಕೆಲಸಗಳೆಲ್ಲವನ್ನೂ”ಎನ್ನುತ್ತಾರೆ ಕವಿ
ಹೀಗೆ ‘ಪ್ರಭುವೇ ದೊರೆಯೇ’ ಎಂದು ಅಲವರಿಯುವ, ಸಂಪೂರ್ಣ ಶರಣಾಗತಿಯ ರೀತಿ ಆಧುನಿಕರಿಗೆ ಗುಲಾಮತನವಾಗಿ ಕಾಣಬಹುದು.

ಬ್ರಹ್ಮಾಂಡ ಎನ್ನುವುದು ಎಷ್ಟು ದೊಡ್ಡದಿದೆ ಎನ್ನುವುದನ್ನು ವಿವರಿಸುತ್ತಾ ಜಿ.ಟಿ. ನಾರಾಯಣರಾಯರು ಒಮ್ಮೆ ಅದರ ಮುಂದೆ ಮನುಷ್ಯ ಹೇಗೆ ಅಣುವಿಗಿಂತಲೂ ತೀರ ಚಿಕ್ಕವನು. ಆದರೆ ಸಂತಸದ ಸಂಗತಿಯೆಂದರೆ‌ ಈ ಅಣುವಿಗೆ ಬ್ರಹ್ಮಾಂಡದಲ್ಲಿ ತಾನು ಒಂದು ಅಣು ಎಂದು ಗೊತ್ತಿರುವುದು, ಎಂದಿದ್ದರು. ನಮ್ಮ ನಮ್ಮ ಗ್ರಹಿಕೆಯ ಸಾಮರ್ಥ್ಯಕ್ಕನುಗುಣವಾಗಿ ವಿಶ್ವ ತನ್ನ ರಹಸ್ಯವನ್ನು ಬಿಟ್ಟುಕೊಡುತ್ತದೆ ಎಂದಿದ್ದರು. ‘ನಾನು ಅಣು’ ಎಂಬ ಈ ಅರಿವೇ ಬ್ರಹ್ಮಾಂಡದ ಅಗಾಧತೆಯನ್ನು ಕಲ್ಪನೆ ಮಾಡಿಕೊಳ್ಳಲು ಸಹಾಯ ಮಾಡಬಹುದು.

ಅಣುವೊಂದು ಬ್ರಹ್ಮಾಂಡವನ್ನು ಅರಿಯುವ ತಹ ತಹ, ಅದರೊಳಗೆ ಲೀನವಾಗಬೇಕೆನ್ನುವ ಹಂಬಲ ಟಾಗೋರರ ಈ ಕವಿತೆಗಳಲ್ಲಿದೆ. ಭೌತಿಕ ಮತ್ತು ಅಭೌತಿಕ ಸಂಘರ್ಷದಲ್ಲಿ ಹುಟ್ಟುವ ಚಿತ್ತವೃತ್ತಿ ಇದು. ಇದು ಗುಲಾಮತನವಲ್ಲ. ಭೂಮಾನುಭೂತಿ. ಗ್ರಹಿಕೆಗೆ ದಕ್ಕದ ವೈಶಾಲ್ಯದ‌ ಮುಂದೆ ನಿಂತಾಗ ಉಂಟಾಗುವ ತಳಮಳವಿದು. ವಿಸ್ಮಯವಿದು. ವ್ಯಾಕುಲತೆ ಇದು. ವ್ಯಾಕುಲತೆ ಭಕ್ತರ ಮುಖ್ಯ ಗುಣ. ವಿಸ್ಮಯಕ್ಕೆ ವಿಸ್ಮಯವೇ ಉತ್ತರ. ಬೇರೆ ಉತ್ತರಗಳಿಲ್ಲ.
ಅಖಂಡವನ್ನು ಹಿಡಿಯಬೇಕೆನ್ನುವ ನಿಟ್ಟಿನಲ್ಲಿ ಈ ಕವಿತೆಗಳಲ್ಲಿ ಕಾಣುವುದು, ನಿರ್ಮಲತೆ, ಸೌಂದರ್ಯ, ಅನಿಚ್ಚಬೋಧ (ಬದಲಾವಣೆಯೊಂದೇ ಶಾಶ್ವತ) ಶುದ್ಧಪ್ರೇಮ, ಕರುಣೆ, ಪ್ರತೀಕ್ಷೆ, ಬಂದಾನೋ ಬಾರನೋ ಎನ್ನುವ ತಳಮಳ, ಬಾಗಿಲಲ್ಲೇ ನಿಂತಿರಬಹುದೆನ್ನುವ ಕನಸು, ಅದರ ಬಗೆಗಿನ ಅಸ್ಪಷ್ಟತೆ, ಅನಿಶ್ಚತತೆ, ಅದಕ್ಕಾಗಿ ಹಂಬಲಿಸುವ ಮೊರೆ ಅಖಂಡವಾದ ವಿಶ್ವಚೈತನ್ಯದಿಂದ ಬೇರ್ಪಟ್ಟ ವಿರಹದ ನೋವು ಮತ್ತು ಅದರೊಳಗೆ ಲೀನವಾಗುವ ಸಂಭ್ರಮ, -ಇವು ಆತ್ಮ ಪರಿವೀಕ್ಷಣೆಯ ಗುರಿಯಲ್ಲಿ ತನ್ನನ್ನೇ ತಾನು ಶೋಧಿಸಿಕೊಳ್ಳಲು ಹೊರಟ ಏಕಾಂಗಿ ದಾರಿಯಾಗಿ ಕಾಣಿಸುತ್ತದೆ. ಇಲ್ಲಿರುವುದು ಒಂಟಿದನಿ “ನನ್ನ ನಾವೆಯನ್ನು ನಾನೇ ನಡೆಸಬೇಕಿತ್ತು” ಎನ್ನುವಲ್ಲಿ ನನ್ನ ದಾರಿಯನ್ನು ನಾನೇ ನಡೆಯಬೇಕು ಎನ್ನುವ ಅರಿವಿದೆ. ಈ ಹಂಬಲದ ದಾರಿಯಲ್ಲಿ ನಿಮಗ್ನವಾಗಿ ನಡೆಯುವಾಗ ಮುತ್ತಿಕೊಳ್ಳುವ ಮಾಯಕದ ಬಗೆಯನ್ನು ಕೆಳಗಿನ ಸಾಲುಗಳು ಬಹಳ ತೀವ್ರವಾಗಿ ಹೇಳುತ್ತವೆ.

ಆ ರಾತ್ರಿ ಅವನು ಬಂದು
ನನ್ನ ಸನಿಹದಲ್ಲೇ ಕುಳಿತಿದ್ದ
ನನಗೆ ಎಚ್ಚರವೇ ಆಗಲಿಲ್ಲ
ಎಂಥಹ ಶಾಪಗ್ರಸ್ತ ನಿದ್ದೆ!
ಓ, ದುರದೃಷ್ಟವಿದು ನನಗೆ!

ಈ ಹಾದಿಯಲ್ಲಿ ನಡೆಯುವಾಗ ಅರೆಕೊರೆಗಳು, ತೊಡಕುಗಳೂ ಎಲ್ಲವೂ ಇರುವಂತಹುದೇ ಯಾವುದೂ ಪರಿಪೂರ್ಣವಲ್ಲ. “ಬಿರುಕಿಲ್ಲದ ಪೂರ್ಣತೆಯ ಹುಡುಕಾಟ ಆಹಾ ! ಅದೆಷ್ಟು ವ್ಯರ್ಥ” ಯಾರೂ ಕೇಳುವವರಿಲ್ಲದ ಒಬ್ಬಂಟಿ ಹಾದಿಯಲ್ಲಿ ಪಥಿಕ ಅನಾಥ, ಅಲೆಮಾರಿ- “ಶರತ್ಕಾಲದ ಮೋಡದ ಅವಶೇಷದಂತೆ ಅನುಪಯುಕ್ತವಾಗಿ ಮುಗಿಲಲ್ಲಿ ಅಲೆಯುತ್ತಿದ್ದೇನೆ”.

ಕವಿ ಪ್ರಕೃತಿಯ ಎಲ್ಲಾ ಚಟುವಟಿಕೆಗಳಲ್ಲಿ ಒಂದು ಅಖಂಡವಾದ ಸೃಷ್ಟಿಶೀಲತೆಯನ್ನು ಕಾಣುತ್ತಿದ್ದಾರೆ. ಇವು ಒಂದನ್ನೊಂದು ಛೇದಿಸುವುದಿಲ್ಲ. ಅವುಗಳು ಭೇದರೂಪವಲ್ಲ ಬದಲಾಗಿ ಅಸಂಖ್ಯ ವೈವಿಧ್ಯಗಳ ಸಾಧ್ಯತೆ.

“ಗಾಳಿಯೊಂದಿಗೆ ತೇಲಿ ಬರುವ ಗಾನದೊಳಗೆ ಮುಳುಗಿ ಹೋಗುವ ರೋಮಾಂಚನವನ್ನು” ಇವು ಉಂಟು ಮಾಡುತ್ತವೆ. ಕವಿ ತಮ್ಮ ಚಿತ್ತವೃತ್ತಿಗಳನ್ನು ಪ್ರಕೃತಿಯ ಸೃಷ್ಟಿಶೀಲ ಚಟುವಟಿಕಗಳಿಗೆ ಆರೋಪಿಸುತ್ತಿದ್ದಾರೋ ಅಥವಾ ಪ್ರಕೃತಿಯ ಸೃಷ್ಟಿಶೀಲ ಚಟುಚಟಿಕೆಗಳೇ ಕವಿಯ ಚಿತ್ತವೃತ್ತಿಗಳನ್ನು ನಿರ್ಮಾಣಮಾಡುತ್ತಿವೆಯೋ ಎಂಬ ಶಂಕೆ ಮೂಡುತ್ತದೆ.

“ಹತಾಶೆಯಿಂದ ಆಗಸವು ನರಳುತ್ತಿದೆ” ಕಾಡುಗಳು ಎದೆಯ ಹಾಡುಗಳನ್ನು ಅಡಗಿಸಿವೆ”

ಮನುಷ್ಯ ಕೂಡ ಪ್ರಕೃತಿಯ ಭಾಗವೇ! ಆದುದರಿಂದ ಮನುಷ್ಯ ಸಂಬಂಧಗಳ ಬಗೆಗೆ ಮಾತಾನಾಡುವಾಗಲೂ ಅವರ ಈ ಅಖಂಡ ದೃಷ್ಟಿಯೇ ಕೆಲಸಮಾಡಿದೆ. ಸಮಾಜದ ನಿಮ್ನವರ್ಗದವರ ದುಡಿಮೆಯಲ್ಲಿ ದೇವರನ್ನು ಕಾಣುವ “ಅವನು…..ಬರಡು ನೆಲವ ನೇಗಿಲಿನಿಂದ ಹಸನುಗೊಳಿಸುತ್ತಿರುವವರೊಂದಿಗಿದ್ದಾನೆ” ಎನ್ನುವ ಸಾಲುಗಳು ಕುವೆಂಪು ಅವರ ಕವಿತೆಗಳನ್ನೇ ನೆನಪಿಸುತ್ತವೆ. ಭೂಮಿಯ ಮೇಲಿನ ಅಖಂಡ ಜೀವ ಜಡ ಜಾಲವನ್ನು ಏಕತ್ರಗೊಳಿಸಿ ನೋಡುವ ಅದ್ವೈತ ದೃಷ್ಟಿಯಿದು.

ಇಂತಹ ಒಂದು ವಿಶ್ವ ಪ್ರಜ್ಞೆಗೆ ಸಾವಿನ ಭಯವನ್ನು ಮೀರುವ ಧೈರ್ಯವಿದೆ. ಸಾವನ್ನು ಆಹ್ವಾನಿಸುವ ರೀತಿ ಅದಕ್ಕೆ ಮಾನಸಿಕವಾಗಿ ಸಿದ್ಧವಾಗುವಾಗಲೂ ಬದುಕಿನ ಧನ್ಯತೆಯ ಬಗ್ಗೆಯೇ ಹೆಚ್ಚು ಒತ್ತು ಇದೆ. ಇದು ಪರಿಪಕ್ವಗೊಂಡ ಸ್ಥಿತಿಯ ಪ್ರತೀಕವಾಗಿದೆ. ಅಹಂಕಾರದಿಂದ ಬಿಡುಗಡೆಗೊಂಡ ವಿನೀತ ಕವಿತೆಗಳಿವು.

“ಯಾವ ಪದಗಳ ವ್ಯಾಖ್ಯೆಗೂ ನಿಲುಕದ ಹರ್ಷ
ನನ್ನ ಕೊನೆಯ ಹಾಡಿನೊಂದಿಗೆ ಬೆರೆತು ಹೋಗಲಿ…”
“ನಾನು ಚುಕ್ಕಾಣಿಯನು ಕೈ ಬಿಟ್ಟಾಗಲೇ
ನನಗೆ ತಿಳಿದಿದೆ ನೀನದನ್ನು ಹಿಡಿಯುವ ಸಮಯ ಬಂದಿದೆ” ಎನ್ನುವ ಆತ್ಮ ವಿಶ್ವಾಸ ಬೆರಗು ಹುಟ್ಟಿಸುವಂತಹುದು.
“ಓ ಪ್ರೀತಿಯೇ
ಯಾಕೆ ನನ್ನನ್ನಿನ್ನೂ ಬಾಗಿಲ ಬಳಿಯೇ
ಒಂಟಿಯಾಗಿ ಕಾಯುವಂತೆ ಮಾಡುತ್ತಿರುವೆ?”
“ನೀನು ಮಾತನಾಡದಿದ್ದರೆ
ನಿನ್ನ ಮೌನವನು ಹೃದಯದೊಳಗೆ ತುಂಬಿಕೊಳ್ಳುತ್ತೇನೆ”

“ಅಮ್ಮಾ, ನನ್ನ ಕಣ್ಣೀರಿನ ಮುತ್ತುಗಳಿಂದ ಮಾಡಿದ ಮಾಲೆಗಳಿಂದ ನಿನ್ನ ಕತ್ತನಲಂಕರಿಸುವೆ” (ಇಲ್ಲಿ ತ್ಯಾಗರಾಜರು ಬಿಂದುಮಾಲಿನಿ ರಾಗದಲ್ಲಿ ರಚಿಸಿದ ಕೀರ್ತನೆಯ ನೆನಪಾಗುತ್ತಿದೆ) ವಿಶ್ವ ಪ್ರಜ್ಞೆಯ ಭಾಗವಾಗಬೇಕೆನ್ನುವ ಮೊರೆಯನ್ನು ಹೊತ್ತ ಈ ಎಲ್ಲಾ ಕವಿತೆಗಳು ಹೀಗೆ ಎಷ್ಟು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ! ನಾನು ಟಾಗೋರ್ ಕವಿತೆಗಳನ್ನು ಇಂಗ್ಲಿಷಿನಲ್ಲಿ ಓದಿದ್ದೆ. ಕನ್ನಡದಲ್ಲಿ ಅವುಗಳನ್ನು ಓದುವ ಸುಖವೇ ಬೇರೆ! Later poems of Tagore ನ್ನು ಡಿ.ಆರ್. ಎನ್ ಮೇಷ್ಟ್ರು ಪಾಠ ಮಾಡುತ್ತಿದ್ದರು. ಸುಧಾ ಅವರ ಪುಸ್ತಕವನ್ನು ಓದುವಾಗ ನನಗೆ ಅವರದೇ ನೆನಪು ! ಬಹಳ ಆಪ್ತವಾಗಿ ತಟ್ಟಿದ್ದು, ಈ ಕವಿತೆಗಳ ಅತಿಯಾದ ಅಲಂಕಾರಗಳಿಂದ ಹೊರತಾದ ಸರಳವಾದ ಭಾಷೆ. ಇದಕ್ಕಾಗಿ ಸುಧಾ ಅವರನ್ನು ಅಭಿನಂದಿಸುತ್ತೇನೆ.

ಓದಿನ ಸುಖ ಕೊಡುವುದು ಅನುವಾದ ಸರಾಗವಾಗಿ ಓದಿಸಿಕೊಂಡು ಹೋದಾಗ ಮಾತ್ರ! ಬಳಸುವ ನುಡಿಗಟ್ಟುಗಳು, ಪ್ರತಿಮೆ ಅಲಂಕಾರಗಳು ಕನ್ನಡದ್ದೇ ಎಂದೆನಿಸಬೇಕು. ಗೆಳತಿ ಸುಧಾ ಅಂತಹ ಕೆಲಸವನ್ನು ಬಹಳ ಸಮರ್ಥವಾಗಿ ಸಮಗ್ರವಾಗಿ ಮಾಡಿದ್ದಾರೆ. ಎಲ್ಲಿಯೂ ಅನುವಾದದ ವಾಸನೆ ಹತ್ತಿಲ್ಲ. ಇಲ್ಲಿ ಮೆರೆಯುವುದು ಕನ್ನಡದ ಗಂಧವತಿ. ಟಾಗೋರರ ಕವಿತೆಗಳ ಬಗ್ಗೆ ಸುಧಾ ಅವರಿಗೆ ಇರುವ ಅದಮ್ಯ ಪ್ರೀತಿ ವ್ಯಕ್ತವಾಗುತ್ತದೆ. ಅವರು ಹೇಳಿ ಕೇಳಿ ಗಣಿತದ ಅಧ್ಯಾಪಕಿ. ಅಂತಹವರು ಎಲ್ಲಿಯೂ ಕನ್ನಡದ ಗಂಧ ಮಾಸದ ಹಾಗೆ ಅನುವಾದಿಸಿರುವುದು, ಅನುವಾದದ ಸುಳಿವೂ ಸಿಕ್ಕದಂತೆ ಅನನ್ಯವಾಗಿ ಕನ್ನಡಕ್ಕೆ ತಂದಿರುವುದು ಅಚ್ಚರಿಯ ಸಂಗತಿ.

ನನ್ನ ಮೇಲಿನ ಪ್ರೀತಿಯಿಂದ ಪುಸ್ತಕವನ್ನೂ ಕಳುಹಿಸಿದ್ದಾರೆ. ಅವರಿಗೆ ಶುಭಾಶಯಗಳು ಮತ್ತು ಧನ್ಯವಾದಗಳು.


  • ಗಿರಿಜಾ ಶಾಸ್ತ್ರೀ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW