ಯಕ್ಷಗಾನದ ಕಲಾವಿದ ಶ್ರೀ ಪದ್ಯಾಣ ಪರಮೇಶ್ವರ ಭಟ್

‘ಶ್ರೀ ಪದ್ಯಾಣ ಪರಮೇಶ್ವರ ಭಟ್ಟರು ಕಲೆಯ ಮೇಲಿನ ಪ್ರೀತಿ, ಆಸಕ್ತಿಯಿಂದಾಗಿ ಮೊದಲಿಗೆ ಮೃದಂಗ ನುಡಿಸುವುದನ್ನು ಕಲಿತರು, ನಂತರ ಯಕ್ಷಗಾನ ದಿಗ್ಗಜರ ಒಡನಾಟದಿಂದ ಮದ್ದಳೆ ನುಡಿಸುವುದನ್ನು ಆರಂಭಿಸಿದರು, ಹೀಗೆ ಅವರು ಯಕ್ಷಗಾನ ಹವ್ಯಾಸಿ ಕಲಾವಿದರಾದರು.ಶ್ರೀ ಪದ್ಯಾಣ ಪರಮೇಶ್ವರ ಭಟ್ಟರ್ ಸಾಧನೆಯ ಕುರಿತು ಬಾಲು ದೇರಾಜೆ ಅವರು ಬರೆದಿರುವ ಲೇಖನವನ್ನು, ಮುಂದೆ ಓದಿ..

ಬೆಳ್ಳಾರೆಯಲ್ಲಿ ಬೆಳಗಿದ ಕಿರಣ – ಕಿರಣ್ ಪ್ರಿಂಟರ್ಸ್ : ಯಕ್ಷಗಾನದ ಕಲಾವಿದ ಶ್ರೀ ಪದ್ಯಾಣ ಪರಮೇಶ್ವರ ಭಟ್

ಪದ್ಯಾಣದ ಹಿರಿಯರು, ಯಕ್ಷಗಾನದ ಕಲಾವಿದರಾಗಿದ್ದ ಶ್ರೀ ಪುಟ್ಟು ನಾರಾಯಣ ಭಾಗವತರ ಮಗ ಪದ್ಯಾಣ ಶ್ರೀ ತಿರುಮಲೇಶ್ವರ ಭಟ್ ಹಾಗೂ ಪತ್ನಿ ಸಾವಿತ್ರಿ ಅಮ್ಮ, ಈ ದಂಪತಿಗಳು ದಿವಂಗತರಾಗಿದ್ದು, ಇವರಿಗೆ ಇವರ ಮೊಮ್ಮಕ್ಕಳ ಜೇನ್ನುಡಿ – ಪಂಚ ಪಾಂಡವರಂತೆ 5 ಜನ ಗಂಡು ಮಕ್ಕಳು.ಶ್ರೀ ಪದ್ಯಾಣ ನಾರಾಯಣ ಭಟ್, ಪದ್ಯಾಣ ಶ್ರೀ ಪರಮೇಶ್ವರ ಭಟ್ , ದಿ. ಶ್ರೀ ಪದ್ಯಾಣ ಗಣಪತಿ ಭಟ್, ಶ್ರೀ ಪದ್ಯಾಣ ಗೋಪಾಲಕೃಷ್ಣ ಭಟ್, ಶ್ರೀ ಪಿ.ಟಿ. ಜಯರಾಮ್ ಭಟ್ ಪದ್ಯಾಣ. ಈ 5 ಜನರಲ್ಲಿ ಇಲ್ಲೀಗ ವಿಷಯದಲ್ಲಿರುವವರು 2 ನೆಯವರಾದ ಶ್ರೀ ಪದ್ಯಾಣ ಪರಮೇಶ್ವರ ಭಟ್.

ಇವರು ಆರಂಭದ ವಿದ್ಯಾಭ್ಯಾಸವನ್ನು ಕಿರಿಯ ಪ್ರಾಥಮಿಕ ಶಾಲೆ, ಕಲ್ಮಡ್ಕದಲ್ಲಿ ಮಾಡಿದ್ದು, ಈ ಶಾಲಾ ದಿನಗಳು ಸೈಕಲ್ ಸವಾರಿಯ ಮೂಲಕ ಸ್ವಾರಸ್ಯಕಥೆಯಿಂದ ಕೂಡಿದ್ದು, ಈ ವಿಷಯ ಶ್ರೀ ಪ. ಭಟ್ಟರು ನನ್ನಲ್ಲಿ ಹೇಳಿದ್ದಲ್ಲ. ನಾನು ಕೇಳಿಸಿಕೊಂಡವ.(ಕದ್ದು ಕೇಳಿಸಿ ಕೊಂಡದ್ದಲ್ಲ) ಹಾಗಾಗಿ ಅವರು ಹೇಳುವ ಸ್ವಾರಸ್ಯತನ ನಾನು ಬರೆಯುವಲ್ಲಿ ಬರುವುದಕ್ಕೆ ಸಾಧ್ಯವೇ ಇಲ್ಲ. ಯಾರಿಗೆ ಉಂಟು – ಯಾರಿಗಿಲ್ಲ ಈ ಅದೃಷ್ಟ. ನಂತರ ಇದೇ ತಾಲೂಕಿನ ವಿದ್ಯಾಭೋದಿನಿ ಪ್ರೌಢ ಶಾಲೆ, ಬಾಳಿಲ ಮತ್ತು ಬೋರ್ಡ್ ಹೈಸ್ಕೂಲ್ ಪುತ್ತೂರಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಮಾಡಿದ್ದರು.

ನಂತರ ಗಮನ‌ ಯಕ್ಷಗಾನ ದತ್ತ ಸೆಳೆಯಿತು. ಶ್ರೀ ಪದ್ಯಾಣ ಪರಮೇಶ್ವರ ಭಟ್ಟರು ಯಕ್ಷಗಾನ ಮನೆತನದವರಾಗಿದ್ದುದಲ್ಲದೆ, ಈ ಕಲೆಯ ಮೇಲಿನ ಪ್ರೀತಿ – ಆಸಕ್ತಿಯಿಂದಾಗಿ ಮೊದಲಿಗೆ ಮೃದಂಗ ನುಡಿಸುದನ್ನು ಕಲಿತರು. ಗಾನಯೋಗಿ ದಿ. ಶ್ರೀ ಅಜ್ಜನಗದ್ದೆ ಗಣಪಯ್ಯ ಭಾಗವತರು ಹಾಗೂ ದಿ. ಶ್ರೀ ಚನಿಯ ನಾಯ್ಕ, ದಾಸರಬೈಲು ಭಾಗವತರ ಒಡನಾಟದಿಂದ ಯಕ್ಷಗಾನದ ಕೂಟಗಳಲ್ಲಿ ಮದ್ದಳೆ ನುಡಿಸುದನ್ನು ಆರಂಭಿಸಿದರು. ಈ ಹವ್ಯಾಸವು ಅಭ್ಯಾಸವಾಗಿ
ಮುಂದೆ ಯಕ್ಷರಂಗದಲ್ಲಿ ಮುಂದುವರೆದರು. 1978 – 80 ನೇ ಇಸವಿಯಲ್ಲಿ ಇರಾ ಸೋಮನಾಥೇಶ್ವರ ನಾಟಕ ಸಭಾ ಕುಂಡಾವು ಮೇಳದಲ್ಲಿ 2 ವರ್ಷ ಮದ್ದಳೆ ಗಾರನಾಗಿ ತಿರುಗಾಟ ಮಾಡಿದರು. ನಂತರ ಊರಿನ ಸುತ್ತ ಮುತ್ತಲಿನ ಸಂಘ- ಸಂಸ್ಥೆ ಗಳ ಯಕ್ಷಗಾನ ದ ತಾಳಮದ್ದಳೆ – ಬಯಲಾಟಗಳಲ್ಲಿ ಮದ್ದಳೆ ಯಲ್ಲಿನ ಇವರ ಕೈಚಳಕ ಕಂಡುಬಂದು ಜನರಿಗೆ ಪ್ರೀತಿ ಪಾತ್ರರಾಗಿದ್ದರು.

ಅಣ್ಣ ದಿ. ಶ್ರೀ ಸತ್ಯಮೂರ್ತಿದೇರಾಜೆ ಯಕ್ಷಗಾನದ ಅರ್ಥಧಾರಿ – ವೇಷಧಾರಿ ಯಾಗಿದ್ದುದರಿಂದ ಅಲ್ಲದೆ ಕಾರ್ತಿಕೇಯ ಯಕ್ಷಗಾನ ಕಲಾ ಸಂಘ, ನಾರ್ಣಕಜೆ ಮೂಲಕ ಶ್ರೀ ಪದ್ಯಾಣದವರ ಒಡನಾಟ ಆರಂಭವಾಗಿ ನಮಗೂ ಇವರು ಬಹಳ ಹತ್ತಿರವಾಗಿ ಪ್ರಿಯರಾಗಿದ್ದುದಲ್ಲದೆ, ದೇರಾಜೆ ಸೀತಾರಾಮಯ್ಯ ಸಂಸ್ಕೃತಿ ರಂಗ ಚೊಕ್ಕಾಡಿ ಯ ಸ್ಪಾಪಕ ಸದಸ್ಯರಾಗಿದ್ದರು. ಈ ಸಮಯ ದಲ್ಲಿ ರಂಗದ ಮೂಲಕ ಯಕ್ಷಗಾನ ಕೂಟಗಳ ಕಾರ್ಯಕ್ರಮಗಳ ವ್ಯವಸ್ಥೆ ಯಲ್ಲಿ… ಅದೆಲ್ಲ ಮೂರ್ತಿ ಹೇಳಿದಾಂಗೆ , ಅವ ಹೇಳಿದಲ್ಲಿಗೆ ವಿಷಯ ಮುಗ್ತು…ಎಂದು ಹೇಳಿ, ತಪ್ಪಿಸಿ ಕೊಳ್ಳುವುದಲ್ಲ, ಪ್ರೀತಿ-ಗೌರವ ದಿಂದ ಕಾಣುವ ಸ್ವಭಾವ ಇವರದ್ದು.ಇದರ ಜೊತೆಯಲ್ಲೇ ಹವ್ಯಾಸವಾಗಿ ಮದುವೆ-ಉಪನಯನ ಮುಂತಾದ ಸಮಾರಂಭ ಗಳ ಮಂಟಪ ಇನ್ನಿತರ ಅಲಂಕಾರದಲ್ಲಿ ಶ್ರೀ ಕೆರೆಕ್ಕೋಡಿ ಶ್ರೀ ಗಣಪತಿ ಭಟ್ಟರ ಜೊತೆಯಲ್ಲಿ ಭಾಗಿಯಾಗುತ್ತಿದ್ದರು. ಮಳೆಗಾಲದಲ್ಲಿ ವಿದ್ಯಾಕೋಳ್ಯೂರು ತಂಡದ ಮೂಲಕ ಮೈಸೂರು, ಬೆಂಗಳೂರು, ಮದ್ರಾಸು, ಮಂಡ್ಯ ಮುಂತಾದ ಕಡೆ
ಗಳಿಗೆ ಯಕ್ಷಗಾನ ದ ಅಂಗವಾಗಿ ಪ್ರವಾಸ ಕೈಗೊಂಡಿದ್ದರು.

1981ನೇ ಇಸವಿಯಲ್ಲಿ ಶ್ರೀ ಪರಮೇಶ್ವರ ಭಟ್ ರು ಯಕ್ಷಗಾನ ಕಲಾವಿದ ಖ್ಯಾತ ಅರ್ಥಧಾರಿ ಶ್ರೀ ಮೂಡಂಬೈಲು ಕೃಷ್ಣಶಾಸ್ತ್ರಿಯವರ ಮಾರ್ಗದರ್ಶನ ಹಾಗೂ ಸ್ಪೂರ್ತಿಯಿಂದ ಅಲ್ಲದೆ ಶಣ್ಮುಖ ಪವರ್ ಪ್ರೆಸ್ ಸುಬ್ರಹ್ಮಣ್ಯ ಇವರಿಂದ ಮಾರ್ಗದರ್ಶನದ ಮುಖಾಂತರ ಹಳ್ಳಿ ಪ್ರದೇಶವಾದ ಬೆಳ್ಳಾರೆಯಲ್ಲಿ ಪ್ರಪ್ರಥಮವಾಗಿ ” ಕಿರಣ್ ಪ್ರಿಂಟರ್ಸ್”ಹೆಸರಿನಲ್ಲಿ ಪ್ರೆಸ್ ನ್ನು ಆರಂಭಿಸಿದ್ದು, ಎಡನೀರು ಮಠದ ಶ್ರೀ ಶ್ರೀ ಕೇಶವಾನಂದ ಸ್ವಾಮಿಗಳಿಂದ ಉದ್ಘಾಟನೆ ಗೊಂಡಿತ್ತು. ಈ ಪ್ರೆಸ್ ನಲ್ಲಿ ಶ್ರೀ ಭಟ್ಟರ ಜೊತೆಗೆ ಯಕ್ಷಗಾನ ಹವ್ಯಾಸಿ ಕಲಾವಿದರಾದ ದಿ. ಶ್ರೀ ಗಂಗಾಧರ ಬೆಳ್ಳಾರೆ ಯವರು ಸಹಕರಿಸುತ್ತಿದ್ದರು. ಸುಳ್ಯತಾಲೂಕಿನ ವಾರಪತ್ರಿಕೆ – ಸುದ್ದಿ ಬಿಡುಗಡೆ ಆರಂಭದ ಪತ್ರಿಕೆ ಹಾಗೂ ಶ್ರೀ ರಾಮ ಪಟ್ಟಾಭಿಷೇಕದ ಪುಸ್ತಕ ವು ಪ್ರಥಮ ವಾಗಿ ಇಲ್ಲಿಯೇ ಮುದ್ರಿತ ಗೊಂಡದ್ದು, ಅಣ್ಣ (ಸತ್ಯಮೂರ್ತಿದೇರಾಜೆ) ನ ಮರಣೋತ್ತರ 2 ಪುಸ್ತಕ ಗಳನ್ನು ಅಂದವಾಗಿ ಮುದ್ರಿಸಿಕೊಟ್ಟಿದ್ದಾರೆ. ಊರಿನಲ್ಲಿ ನಡೆಯತಕ್ಕ ಎಲ್ಲಾ ಸಮಾರಂಭಗಳ ಆಮಂತ್ರಣ ಪತ್ರಿಕೆಗಳು, ರಶೀದಿ ಪುಸ್ತಕ, ಕರ ಪತ್ರಗಳು ಮುಂತಾದವುಗಳು ಕಿರಣ ಪ್ರಿಂಟರ್ಸ್ ನಲ್ಲೇ ಮುದ್ರಿತ ಗೊಂಡು ಮುಂದುವರಿಯುತ್ತಾ ಬಂದಿದೆ.ಕಾಗದ ಗಳ ಮೇಲಿನ ಅಚ್ಚು- ಅಚ್ಚುಕಟ್ಟಾಗಿ ಮುದ್ರಿತಗೊಂಡು, ಹೇಳಿದ ಸಮಯಕ್ಕೆ ಸರಿಯಾಗಿ…ಸಂಜೆ 5 ಗಂ.ಅಂದರೆ 5 ಗಂಟೆ ಗೇ ಸರಿಯಾಗಿ ಕಟ್ಟುಗಳು ರೆಡಿ ಯಾಗುತ್ತದೆ. ಕಿರಣ್ ಪ್ರೆಸ್ – ಒಂದೊಂದು ಕಿರಣಗಳಾಗಿ ನಾಡಿನಾದ್ಯಂತ ಪಸರಿಸಿ ಪ್ರಸಿದ್ದಿ ಪಡೆದಿದೆ.

1984 ನೇ ಇಸವಿಯಿಂದ ಸಂತ ಕಟ್ಟಡದಲ್ಲಿ ಮುಂದುವರೆದ ಪ್ರೆಸ್ ನ್ನು ಶ್ರೀ ಪದ್ಯಾಣ ಪರಮೇಶ್ವರ ಭಟ್ಟರು ಸುಮಾರು 35 ವರ್ಷಗಳ ಕಾಲ ನಡೆಸಿದ್ದು, ನಂತರ ಪದವೀದರಾದ ಮಕ್ಕಳು ಶ್ರೀ ಅಕ್ಷಯ ಪದ್ಯಾಣ ಹಾಗೂ ಶ್ರೀ ಸೂರಜ್ ಪದ್ಯಾಣರಿಗೆ ವಹಿಸಿ ಕೊಟ್ಟಿದ್ದು, ಅಲ್ಲದೆ ಪತ್ನಿ ಶ್ರೀಮತಿ ನಿರ್ಮಲಾ ಪಿ. ಭಟ್ ಕಾಯಕದಲ್ಲಿ ಭಾಗಿಯಾಗುತ್ತಾರೆ. ಸಂದರ್ಭ ಸಿಕ್ಕಿದಾಗ ನಾಲ್ವರು ತಮ್ಮ ಕಿರಣ ಪ್ರಿಂಟರ್ಸ್ ನ ಕಾಯಕ ಗಳಲ್ಲಿ ನಿರತರಾಗುತ್ತಾರೆ. ಇವರಿಗೆ ಸಹೋದ್ಯೋಗಿಗಳು ಸಹಕರಿಸುತ್ತಾರೆ. ಇತ್ತೀಚೆಗೆ ಹೊಸ ಹೊಸ ತಂತ್ರಜ್ಞಾನಗಳೊಂದಿಗೆ, ಸುಸಜ್ಜಿತವಾದ ವಿನ್ಯಾಸದೊಂದಿಗೆ ರೂಪುಗೊಂಡಿದ್ದು, ಇಲ್ಲಿ ಸನ್ಮಾನಗಳಿಗೆ ನೀಡುವ ಹಾರ – ಸ್ಮರಣಿಕೆ ಗಳೂ ಲಭ್ಯವಿದೆ.

ದ.ಕನ್ನಡ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಅಕ್ಷರ (ಅಮೈ) ನಲ್ಲಿ ಚಿಕ್ಕವಾದ ಚೊಕ್ಕಸಂಸಾರದೊಂದಿಗೆ ವಾಸಿಸುವ 71ನೇ ವಯಸ್ಸಿನ ಶ್ರೀ ಪದ್ಯಾಣ ಪರಮೇಶ್ವರ ಭಟ್ಟರು ಬೆಳ್ಳಾರೆ JCI ಸ್ಪಾಪಕ ಸದಸ್ಯರಾಗಿದ್ದುದಲ್ಲದೆ, ಕೀರಿಕ್ಕಾಡು ವಿಷ್ಣುಭಟ್ ಹೆಸರಿನಲ್ಲಿ ಸನ್ಮಾನ, ಸಂಗಮ ಕಲಾ ಸಂಘ,ಕಲ್ಮಡ್ಕ ವತಿಯಿಂದ ಸನ್ಮಾನಗೊಂಡುದಲ್ಲದೆ, ಸುಳ್ಯ ತಾಲೂಕು ಮಡಪ್ಪಾಡಿ ಸಾಹಿತ್ಯ ಸಮ್ಮೇಳನ ದಲ್ಲಿ ” ಕನ್ನಡ ಸಿರಿ ” ಎಂಬ ಬಿರುದನ್ನಿತ್ತು ಗೌರವಿಸಿ ಸನ್ಮಾನಿಸಿದೆ.
ನಿರ್ಜೀವ ವಾದ ವಾದನ ಮೃದಂಗ- ಮದ್ದಳೆ ಗಳಿಗೆ ಜೀವ ತುಂಬುವ ಶ್ರೀ ಪದ್ಯಾಣ ಪರಮೇಶ್ವರ ಭಟ್ಟರ ಪೆಟ್ಟುಗಳು ಇವುಗಳಿಗೇ ಮೀಸಲು.ಹೊರತಾಗಿ ಬೇರೆ ಯಾರಿಗೂ ಬೀಳಲು ಸಾದ್ಯವೇ ಇಲ್ಲ.ಯಾಕೆಂದರೆ ಅವರೊಬ್ಬ ಸ್ನೇಹ ಜೀವಿ. ಅವರ ದೇರಾಜೆ ಯ ಮೇಲಿನ ಅಭಿಮಾನಕ್ಕೆ….ಅವರ (ಪದ್ಯಾಣ) ಮೇಲಿನ ಅಭಿಮಾನದಿಂದ ಯಕ್ಷಗಾನ ಕಲಾವಿದರಾದ ಶ್ರೀ ಪದ್ಯಾಣ ಪರಮೇಶ್ವರಣ್ಣಂಗೆ


  • ಬಾಲು ದೇರಾಜೆ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW