ನೋವೇ ಗಜಲ್ ಆಗುವುದೇ ? ಹೌದು ಪ್ರೇಮದ ನೋವುಗಳೇ ಅಂಥವು. ಅವು ನೋವುಗಳೆಂದರೆ ನೋವಲ್ಲ, ನೆನಪಿನ ನೋವುಗಳು, ನೋವುಗಳೇ ನೆನಪುಗಳಾಗಿಬಿಡುತ್ತವೆ. – ಸಿದ್ಧರಾಮ ಕೂಡ್ಲಿಗಿ, ತಪ್ಪದೆ ಮುಂದೆ ಓದಿ…
ಗಜಲ್ ಎಂದರೇನು ? ಎಂಬುದರ ಬಗೆ ಈಗಾಗಲೇ ಪತ್ರಿಕೆಗಳಲ್ಲಿ, ಇತರೆ ಗಜಲ್ ಸಂಕಲನಗಳಲ್ಲಿ, ಬ್ಲಾಗ್ ಗಳಲ್ಲಿ ಸಾಕಷ್ಟು ಮಾಹಿತಿ ಲಭಿಸುತ್ತಿದೆ. ಆದರೂ ಸಹ ಗಜಲ್ ನ ಬಗ್ಗೆ ಪರಿಪೂರ್ಣವಾಗಿ ತಿಳಿದುಕೊಳ್ಳದೇ ಬರೆಯುವವರೇ ಹೆಚ್ಚು. ಅಂತ್ಯಪ್ರಾಸ ಇರುವುದೆಲ್ಲವೂ ಗಜಲ್ ಗಳಾಗುವುದಿಲ್ಲ ಎಂದು ಬಹುತೇಕ ಕವಿಗಳು ತಿಳಿದೇ ಇಲ್ಲ. ಹೀಗೆ ಆಗಲು ಕಾರಣ ಅವರು ಗಜಲ್ ಬರೆಯುತ್ತಿದ್ದಾರೆ, ನಾನೂ ಬರೆಯಬೇಕು ಎಂಬ ಹುಮ್ಮಸ್ಸು, ಹಸಿಬಿಸಿಯಾದ ಪ್ರೇಮದ ಸಾಲುಗಳು, ನಾಡಿನಾದ್ಯಂತ ಈಗ ಪ್ರಚುರಗೊಂಡಿರುವ ಗಜಲ್ ನ್ನು ನಾನೂ ಬರೆದರೆ ಧಿಡೀರನೆ ಗುರುತಿಸಿಕೊಳ್ಳಬಹುದು ಎಂಬ ಅನೇಕ ಕಾರಣಗಳಿಂದಾಗಿಯೇ ಬಹುತೇಕ ಕವಿಗಳು ಗಜಲ್ ಬರೆಯಲು ಆರಂಭಿಸಿ ಅವು ಇತ್ತ ಪರಿಪೂರ್ಣ ಗಜಲ್ ಗಳೂ ಆಗದೆ, ಅತ್ತ ಕವಿತೆಗಳೂ ಆಗದೆ ಮಧ್ಯೆ ಯಾವುದೋ ಒಂದು ರೂಪ ತಾಳಿ ನಿಂತುಬಿಡುತ್ತವೆ.
–
ವಿಶಾದದ ಸಂಗತಿಯೆಂದರೆ ಈ ರೀತಿ ವಿಚಿತ್ರ ಬಗೆಯಲ್ಲಿ ಇರುವ ಕವಿತೆಯೂ ಅಲ್ಲದ, ಗಜಲ್ ಗಳೂ ಅಲ್ಲದ ವಿಚಿತ್ರ ಕಾವ್ಯ ಪ್ರಕಾರಗಳೇ ಗಜಲ್ ಎಂಬ ಹಣೆಪಟ್ಟಿ ಅಂಟಿಸಿಕೊಂಡು ಅವು ಪ್ರಚಾರ ಪಡೆಯುತ್ತವೆ ಹಾಗೂ ಆ ಕವಿಗಳೂ ಧಿಡೀರನೇ ಪ್ರಸಿದ್ಧರಾಗಿಬಿಡುತ್ತಾರೆ. ಇದು ನಿಜಕ್ಕೂ ಖೇದದ ಸಂಗತಿಯಾಗಿದೆ. ಪ್ರಸಿದ್ಧಿ, ಪ್ರಚಾರ ಪಡೆಯುವ ಹುಚ್ಚಿನಲ್ಲಿ ಯಾವ ಯಾವವೋ ಗಜಲ್ ಗಳಾಗಿಬಿಡುವುದು ಅಪಾಯಕಾರಿ ಬೆಳವಣಿಗೆ. ಮುಂದೆ ಏನಾಗುತ್ತದೆ ಎಂದರೆ ಏನು ಬರೆದರೂ ಅವು ಗಜಲ್ ಗಳಾಗಿ, ಗಜಲ್ ಎಂದರೇನು, ಅದರ ಅಂತ:ಸತ್ವವೇನು, ಅದರ ಹಿನ್ನೆಲೆಯನು ಅರಿಯದೇ ಮುಂದಿನವರೆಲ್ಲ ಅದನ್ನೇ ಅನುಸರಿಸಿ ಬರೆಯುತ್ತ ಹೋಗಿಬಿಡುವ ಅಪಾಯವೂ ಇದೆ.
–
ಗಜಲ್ ಎಂದರೆ ಅದೊಂದು ಧ್ಯಾನ, ಅದೊಂದು ತಾದ್ಯಾತ್ಮ, ಅದೊಂದು ಅನಿರ್ವಚನೀಯ ಪ್ರೇಮ. ಅದು ಪ್ರೇಮಿಯಾಗಿರಬಹುದು, ದೈವವಾಗಿರಲೂಬಹುದು. ಪ್ರೇಮದೊಂದಿಗೆ ನಿರ್ಮಲ ಮನಸು, ಪ್ರೇಮದೊಂದಿಗೆ ಆಧ್ಯಾತ್ಮದತ್ತ ನಡೆಯೇ ಗಜಲ್. ಅನೇಕ ಜನ ಪ್ರಾಚೀನ ಗಜಲ್ ಕಾರರಿಂದ ಹಿಡಿದು ಇತ್ತೀಚಿನ ಪ್ರಸಿದ್ಧ ಗಜಲ್ ಕಾರರೂ ಸಹ ಇದೇ ನಡೆಯಲ್ಲೇ ನಡೆದದ್ದು. ಇದನ್ನು ಗಮನಿಸದೇ, ಅಂಥವರ ಗಜಲ್ ಗಳನ್ನು ಓದದೇ, ಧ್ಯಾನಸ್ಥವಾಗದೇ, ನಿರ್ಮಲ ಪ್ರೇಮವನ್ನು ಅನುಭವಿಸದೇ ಕಂಡದ್ದೆಲ್ಲವನ್ನೂ ಬರೆದರೆ ಅದು ಖಂಡಿತ ಗಜಲ್ ಆಗದು. ಅದಕ್ಕೆ ತನ್ನದೇ ಆದ ಸೊಗಸಿದೆ, ಭಾವವಿದೆ, ಆತ್ಮವಿದೆ, ಅದಕ್ಕೊಂದು ಲಯವಿದೆ, ನಡೆಯಿದೆ, ಲಾವಣ್ಯವಿದೆ, ಲಾಲಿತ್ಯವಿದೆ. ಹಾಗಿದ್ದಾಗಲೇ ಗಜಲ್ ಸೊಗಸಾಗುವುದು.
–
ಒಂದು ಗಜಲ್ ಯಶಸ್ವಿಯಾಗಬೇಕಾದರೆ ಅದು ಸಹೃದಯನ ಹೃದಯದ ಬಾಗಿಲನ್ನು ತಟ್ಟಿ, ಒಳಪ್ರವೇಶಿಸಿ, ಅಲ್ಲೊಂದು ಮಧುರ ಯಾತನೆಯ ತರಂಗವನ್ನೇ ಸೃಷ್ಟಿಸಬೇಕು. ಅದಿಲ್ಲದಿದ್ದರೆ ಅದು ಗಜಲ್ ಅಲ್ಲವೇ ಅಲ್ಲ ಎಂಬುದು ನನ್ನ ಅಭಿಪ್ರಾಯ. ಗಜಲ್ ನ ಮೂಲ ಗುಣವೇ ಅದು. ಹೃದಯದ ಆಳಕ್ಕಿಳಿದು ಅಲ್ಲಿನ ಮಧುರ ನೋವಿನ ಭಾವ ತರಂಗಗಳನ್ನು ಅಕ್ಷರ ರೂಪದಲ್ಲಿ ಹಿಡಿದಿಡುವ ಮಾಂತ್ರಿಕನಿಗೆ ಮಾತ್ರ ಅದು ಸಿದ್ಧಿಸುತ್ತದೆ.
ಹಾಗಾದರೆ ಬರೀ ನೋವೇ ಗಜಲ್ ಆಗುವುದೇ ? ಹೌದು ಪ್ರೇಮದ ನೋವುಗಳೇ ಅಂಥವು. ಅವು ನೋವುಗಳೆಂದರೆ ನೋವಲ್ಲ, ನೆನಪಿನ ನೋವುಗಳು, ನೋವುಗಳೇ ನೆನಪುಗಳಾಗಿಬಿಡುತ್ತವೆ. ಅದನ್ನು ಅನುಭವಿಸಿದವನು, ಧ್ಯಾನಿಸಿದವನು, ಆಂತರ್ಯದಲ್ಲಿ ಪ್ರೇಮದಲ್ಲಿಯೇ ಮುಳುಗಿರುವವನು ಮಾತ್ರ ಅದ್ಭುತವನ್ನು ಸೃಷ್ಟಿಸಬಲ್ಲ. ಅದೊಂದು ಅಮಲು. ಅದರ ನಿಶೆಯಲ್ಲಿಯೇ ಅಕ್ಷರಗಳು ಮೊಳಕೆಯೊಡೆಯಬೇಕು, ಪದಗಳು ಬಳ್ಳಿಯಾಗಿ ಹರಡಬೇಕು, ಸಾಲುಗಳು ಮೈಚಾಚಬೇಕು, ಇಡೀ ಗಜಲ್ ಭಾವತುಂಬಿ ಹೂವಿನಂತೆ ಅರಳಿ ನಿಲ್ಲಬೇಕು. ಅದನ್ನು ಆಸ್ವಾದಿಸುವವನಿಗೆ ತಕ್ಷಣ ಅರ್ಥವಾಗಬೇಕು ಇದರಲ್ಲಿ ಚೆಲುವಷ್ಟೇ ಇಲ್ಲ ನೋವೂ ಇದೆ, ಆ ನೋವೇ ಇದರ ಚಲುವು ಎಂದು.
- ಸಿದ್ಧರಾಮ ಕೂಡ್ಲಿಗಿ
