ದಕ್ಷಿಣ ಭಾರತದ ಗಿಣಿವಸ್ತ್ರದ ಮಹತ್ವ (ಭಾಗ ೨) – ಡಾ.ವಡ್ಡಗೆರೆ ನಾಗರಾಜಯ್ಯ



ಕೆಂಪು ವಸ್ತ್ರದ ಮಹಿಮೆ-ಮಹತ್ವಗಳ ಕುರಿತು ಡಾ.ವಡ್ಡಗೆರೆ ನಾಗರಾಜಯ್ಯ ಅವರು ಬರೆದ ಲೇಖನದ ಭಾಗ ೨ ಮುಂದೊರೆಯುತ್ತದೆ. ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ…

ಕಂಚಿ ಶಾಸನ ಕೈಫಿಯತ್ತಿನ ಪ್ರಕಾರ ಗಿಣಿವಸ್ತ್ರವನ್ನು ಧರಿಸಲು ಮಾದಿಗರಿಗೆ ಮಾತ್ರ ಅಗ್ರಪಟ್ಟವಿದೆ. ಉಳಿದ ಕೆಲವು ಮಾದಿಗೇತರ ಸಮುದಾಯಗಳು ಗಿಣಿವಸ್ತ್ರವನ್ನು ಧರಿಸುತ್ತಿವೆ. ಅದು ಆ ಸಮುದಾಯಗಳಿಗೆ ಮಾದಿಗರು ನೀಡಿರುವ ಕುಲದ ದಾನ. ಹೀಗೆಂದು ಮಾದಿಗರು ಹಕ್ಕು ಸ್ಥಾಪಿಸುತ್ತಾರೆ. ಗೋಸಂಗಿ ಮಾದಿಗರ ಕುಲಬಳ್ಳಿಯಾದ ದಕ್ಕಲ ಸಮುದಾಯದ ಕಟ್ಟೆಮನೆಯಾಗಿದ್ದ ಹಂಪಿಯಲ್ಲಿ ಶಾಲಿವಾಹನ ಶಕ ೧೧೨೬ ರ ರಾಕ್ಷಸ ಸಂವತ್ಸರ, ಕಾರ್ತಿಕ ಶುದ್ಧ ೫ರಂದು ಕ್ರಿಶ. ೧೨೦೪ ರಲ್ಲಿ ಬರೆದಿದೆಯೆಂದು ಹೇಳಲಾಗುವ ಕಂಚಿ ಶಾಸನವು ಈ ಸಂಗತಿಯನ್ನು ಉಲ್ಲೇಖಿಸುತ್ತದೆ.

ಆದಿಜಾಂಬವ ಕುಲಸ್ಥರಾದ ದಕ್ಕಲರು ಪ್ರತಿಮಾಡಿಕೊಂಡು ಬಿದಿರು ಕೊಳವೆಯಲ್ಲಿ ಸಂರಕ್ಷಿಸಿಕೊಂಡು ಬಂದಿರುವ ಈ ಶಾಸನವನ್ನು #ಕಂಚಿ_ಜಯರೇಖೆ ಎಂದು ಕರೆಯಲಾಗುತ್ತದೆ. ಇಂತಹ ಜಯರೇಖೆಗಳು ಇಡೀ ತಳಸ್ತರ ಸಮುದಾಯಗಳ ಅನುಶ್ರೇಣಿಯಲ್ಲಿ ಮಾದಿಗ ಸಮುದಾಯ ಹಾಗೂ ಮಾದಿಗ ಸಹಸಂಬಂಧಿ ಉಪಕುಲಗಳು ಪಾಲಿಸಬೇಕಾದ ಸಾಂಸ್ಕೃತಿಕ ರೀತಿ ರಿವಾಜುಗಳನ್ನು, ಆಚರಣೆಗಳನ್ನು, ಕುಲಹಕ್ಕು ಕಟ್ಟಳೆಗಳನ್ನು, ನ್ಯಾಯನಿಗರ ಮುಂತಾದ ಕುಲಾಚಾರ ನಿಯಮಗಳನ್ನು ತಿಳಿಸಿಕೊಡುವ ಶಾಸನಗಳಾಗಿರುತ್ತವೆ. ಎಡಗೈ ಒಂಭತ್ತು ಜಾತಿಗಳ ಹಾಗೂ ಬಲಗೈ ಹದಿನೆಂಟು ಜಾತಿಗಳ ನಡುವೆ ಉದ್ಭವವಾದ ಎಡಗೈ- ಬಲಗೈ ಪಣ ವ್ಯಾಜ್ಯದ ತೀರ್ಪು ನೀಡಿದ ವೇಳೆಯಲ್ಲಿ ಮಾದಿಗ ಜಾತಿಗೆ ಹಾಗೂ ಮಾದಿಗ ಸಹಸಂಬಂಧಿ ಉಪಕುಲಗಳಿಗೆ ಸಲ್ಲಬೇಕಾದ ಸ್ಥಾನಮಾನಗಳು, ಗೌರವಗಳು, ಕುಲಲಾಂಛನಗಳು ಮುಂತಾದ ವಿಷಯಗಳನ್ನು ಇತ್ಯರ್ಥಪಡಿಸುವಾಗ ಕೆಂಪುವಸ್ತ್ರದ ಲಾಂಛನವನ್ನು ಮಾದಿಗರು ಧರಿಸಲು ಅಗ್ರಪಟ್ಟ ಪಡೆದವರೆಂಬುದನ್ನು ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆ.

ಮಾದಿಗರು ಇಂದಿಗೂ ಮೌಖಿಕವಾಗಿ ಹೇಳಿಕೊಳ್ಳುವ ಪ್ರಕಾರ, ತಮ್ಮ ಮನೆಯ ಮಗಳಾದ ಮಾದಿಗಿತ್ತಿ ಆರಂಜ್ಯೋತಿಯು ಬ್ರಾಹ್ಮಣರ ವಸಿಷ್ಠಮುನಿಯನ್ನು ತನ್ನ ಗಂಡನನ್ನಾಗಿ ಕೈಹಿಡಿದು ಮದುವೆಯಾಗುವ ಕಾಲದಲ್ಲಿ, ತಾನು ಹುಟ್ಟಿದ ಮಾದಿಗ ಕುಲದ ಸ್ಥಾನಮಾನಗಳಿಗೆ ಸಲ್ಲಬೇಕಾದ ಎಲ್ಲಾ ಕುಲಗೌರವ ಹಕ್ಕುಗಳು ಮತ್ತು ಸವಲತ್ತುಗಳನ್ನು ಶಾಸನ ರೂಪದಲ್ಲಿ ಕೆತ್ತಿಸಿ, ಮಾದಿಗರ ಹಟ್ಟಿಯನ್ನು ತೊರೆದು ಬ್ರಾಹ್ಮಣರಿಗೆ ಸೊಸೆಯಾಗಿ ಹೊರಟು ಹೋದಳಂತೆ. ಆಗ ಅವಳು ಕೆಂಪುವಸ್ತ್ರವನ್ನು ಮಾದಿಗರು ತಮ್ಮ ಕುಲಲಾಂಛನವನ್ನಾಗಿ ಧರಿಸಬೇಕೆಂದು ನಿಯಮ ರೂಪಿಸಿ ಕೊಟ್ಟಳಂತೆ.

ಇಂತಹ ಕಂಚಿಶಾಸನ ಮತ್ತು ಪ್ರತಿಪಾಠ ಶಾಸನಗಳ ಅಸಲಿತನವು ಅನುಮಾನಾಸ್ಪದವಾಗಿರುವಂತೆ ತೋರುತ್ತದೆ. ಯಾಕೆಂದರೆ ಅಕ್ಷರಬಾರದ ಮತ್ತು ಅಸ್ಪೃಶ್ಯರಾದ ಮಾದಿಗರು ದಕ್ಕಲರು ಮಾಸ್ಟೀಕರು ಗೋಸಂಗಿಗಳು ಮುಂತಾದ ಅಂಚಿನ ಸಮುದಾಯಗಳ ಜನ ಆಗಿನ ಕಾಲದಲ್ಲಿ ಅಕ್ಷರಬಲ್ಲವರಾಗಿದ್ದ ಶಾನುಭೋಗರಿಂದಲೋ ಮೇಲ್ವರ್ಗದ ಅಕ್ಷರಸ್ಥರಿಂದಲೋ ಪ್ರತಿ ಮಾಡಿಸಿಕೊಳ್ಳುವ ಪರಿಪಾಠ ಅನುಸರಿಸಿರುತ್ತಾರೆ. ಮೂಲ ಶಾಸನ ಪಾಠವನ್ನು ಮರುಪ್ರತಿ ಮಾಡಿಸಿಕೊಳ್ಳುವಾಗ, ಮೂಲ ಶಾಸನವು ಆಯಾ ಕಾಲದ ಸಂದರ್ಭಗಳ ಒತ್ತಡಗಳಲ್ಲಿ ಸಿಲುಕಿ ಪಾಠಾಂತರಗೊಂಡಿರುವ ಮತ್ತು ಹಲವಾರು ಅಂಶಗಳು ಪ್ರಕ್ಷಿಪ್ತಗೊಂಡಿರುವ ಸಾಧ್ಯತೆಗಳನ್ನು ಅಲ್ಲಗಳೆಯಲು ಬರುವುದಿಲ್ಲ.

ಮಾದಿಗರಿಗೆ ಮಾತ್ರ ಕೆಂಪುವಸ್ತ್ರ ಗರುಡಧ್ವಜ ನಿಶಾನಿ ಹೊಂದಲು ಅಗ್ರಪಟ್ಟ ಇದೆಯೆಂದು ತಿಳಿಸುವ ಕಂಚಿ ಶಾಸನದ ಫರ್ಮಾನಿನ ಪ್ರಕಾರ, ಕರ್ನಾಟಕದ ಮಂಗಳೂರು ಕಸಬಾ ಮಸಕೂರಿನಲ್ಲಿ ಎಡಗೈ ಒಂಭತ್ತು ಪಣದ ಗೋಸಂಗಿ ವಂಶಸಂಜಾತನಾದ ಮಾದಿಗರ ಬಸವನಿಗೂ ಬಲಗೈ ಹದಿನೆಂಟು ಪಣದ ಛಲವಾದಿ ವೆಂಕಟರಾಮನಿಗೂ ಮದುವೆಯೊಂದರ ಸಂಬಂಧದಲ್ಲಿ ಉದ್ಭವಿಸಿದ ವ್ಯಾಜ್ಯವೊಂದು ಎಡಗೈ – ಬಲಗೈ ಪಣಗಳ ಸಕಲ ಕುಲಗಳ ಗಣ್ಯರನ್ನು ಒಳಗೊಂಡು ನಡೆಸಿದ ನ್ಯಾಯ ಪಂಚಾಯ್ತಿಗಳಲ್ಲಿ ಬಗೆಹರಿಯದೆ, ವ್ಯಾಜ್ಯದ ಇತ್ಯರ್ಥಕ್ಕಾಗಿ ಮಾದಿಗರ ಗೋಸಂಗಿ ಬಸವನು ನೂರಾರು ಜನರನ್ನು ಒಂದುಗೂಡಿಸಿಕೊಂಡು ಕಂಚಿಗೆ ಪ್ರಯಾಣ ಬೆಳೆಸುತ್ತಾನೆ. ಮಾದಿಗರ ಮಗಳಾದ ಆರಂಜ್ಯೋತಿ (ಅರುಂಧತಿ) ಮತ್ತು ಬ್ರಾಹ್ಮಣ ಪುತ್ರನಾದ ವಸಿಷ್ಠನ ನಡುವೆ ಮದುವೆಯಾದ ಕಾಲದಲ್ಲಿ ಬರೆಸಿದ್ದೆನ್ನಲಾದ ಕಂಚಿ ಪಣಕಟ್ಟು ತಾಮ್ರ ಶಾಸನವನ್ನು ತೆಗೆಸಿ, ಛಲವಾದಿ ವೆಂಕಟರಾಮನ ವಿರುದ್ಧ ಲಿಖಿತ ದಾಸ್ತಾವೇಜು ತೀರ್ಪು ತರುತ್ತಾನೆ. ಆ ತೀರ್ಪಿನ ಫರ್ಮಾನಿನ ಪ್ರಕಾರ ಎಡಗೈ ಪಣದ ಗೋಸಂಗಿ ಮಾದಿಗರು ಕೆಂಪುವಸ್ತ್ರದ ಲಾಂಛನ – ಗರುಡ ನಿಶಾನಿ ಮುಂತಾದ ಅನೇಕ ಗೌರವ ಲಾಂಛನಗಳನ್ನು ಗೆದ್ದುಕೊಂಡರು. ಬಲಗೈ ಪಣದ ಛಲವಾದಿ ಹೊಲೆಯರು ಅನೇಕ ಗೌರವ ಲಾಂಛನಗಳಿಂದ ವಂಚಿತರಾಗಿ ಸೋತುಹೋದರು.

“ಗೋಸಂಗಿ ವಂಶಭೂತರಾದ ಮಾದಿಗರ ಅರುಂಧತಿಯನ್ನು ಬ್ರಾಹ್ಮಣರ ವಸಿಷ್ಠನಿಗೆ ಕೊಟ್ಟು ಮದುವೆ ಮಾಡುವ ಕಾಲದಲ್ಲಿ ತಮಗೆ ಕೊಟ್ಟ ಬಿರುದುಬಾವಲಿಗಳು ಎಂದರೆ ೧೨ ಕಂಬ, ೧೨ ಕುಂಭ, ೧೨ ಪಂಜು, ಕರಿಕಂಬಳಿ ಗದ್ದಿಗೆ, ಹುಲಿಚರ್ಮ ಲಿಂಗ ಜನಿವಾರ, ಕೆಂಪು ನಾಲ್ಕು ಮೂಲೆಗಳ ವಸ್ತ್ರದ ತಳಿ, ತೊಂಡಲ, ತಾಂಬೂಲ, ಬಾಸಿಂಗ, ಮಲ್ಲಿಗೆ ಹೂವಿನ ಹಾರ ತುರಾಯಿ, ಭೇರಿ ಮೃದಂಗ ನಗಾರಿ ನೌಭತ್ತು, ಕೆಂಪು ಕುದುರೆ ವಾಹನ ಮೆರವಣಿಗೆ, ಜೋಡಿ ಕಳಸ, ಜೋಡಿ ಕನ್ನಡಿ, ದೇವತಾ ಮುದ್ರಿಕೆಗಳು, ಬಿರುದು ಪಟಾವಳಿಗಳು, ಕೆಂಪು ಛತ್ರಿ, ಹನುಮ ಗರುಡ ಭಗವಾ ನಿಶಾನಿ, ಕಟುಗತ್ತಿ ವೀರಕಂಕಣ, ಶಾಯಿಂದ ವಾದ್ಯ ಸೋನಾಯಿ ಮೇಳ, ತಪ್ಪಟೆ, ಸಣ್ಣ ಗೆಜ್ಜೆ, ಚಂದ್ರಗಾವಿ, ಮುಂಡಾಸು, ಬಿಳಿಕಟ್ಟಿನ ಬೆಳ್ಳಿ ಬೆತ್ತ, ಕಾಲಂದಿಗೆ ಪಾಪೋಸು, ಮುತ್ತೈದೆಯರಿಂದ ಸೋಬಾನೆ ಪದಗಳು, ವಾದ್ಯಗಳಿಂದ ರಾಜಬೀದಿ ಮೆರವಣಿಗೆ ನೃತ್ಯ, ಮಾವಿನ ಎಲೆ ಹಸಿರು ತೋರಣ, ನಾಗವಲ್ಲಿ, ಬೀಗರ ಭೋಜನ ಈ ಮೂವತ್ತಮೂರು ಬಿರುದಾವಳಿಗಳು ಮಾದಿಗರಿಗೆ ಸಲ್ಲುವಂಥವು”.



ಹೀಗೆ ಕಂಚಿ ಫರ್ಮಾನಿನ ಪ್ರಕಾರ ಕುಲಹಕ್ಕುಗಳನ್ನು ಪಡೆದಿರುತ್ತೇವೆಂದು ಸಾಂಸ್ಕೃತಿಕ ಹಕ್ಕು ಪ್ರತಿಪಾದಿಸುವ ಮಾದಿಗರು ಕೆಂಪು ಚೌಕಳಿಯ ಗಿಣಿವಸ್ತ್ರ(ಶಲ್ಯ)ವನ್ನು ತಲೆಗೆ ಮುಂಡಾಸು (ರುಮಾಲು- ಪೇಟ-ಪಟಗಾ-ಪಾಗು) ಸುತ್ತಿಕೊಳ್ಳುವುದನ್ನು ‘ಕಂಬಿಪೇಟ ಧರಿಸುವುದು’ ಎನ್ನುತ್ತಾರೆ. ಆದಿಜಾಂಬವ ಯಜಮಾನರು ತಮ್ಮ ಶುಭಕಾರ್ಯಗಳಲ್ಲಿ ಕಂಬಿಪೇಟ ಧರಿಸುತ್ತಾರೆ. ಉಳಿದಂತೆ ಗಿಣಿಮಾರ್ಕಿನ ಕೆಂಪು ವಸ್ತ್ರಗಳನ್ನು ಹೆಗಲ ಮೇಲೆ ಶಲ್ಯವಾಗಿ ಹಾಕಿಕೊಳ್ಳುತ್ತಾರೆ.


  • ಡಾ.ವಡ್ಡಗೆರೆ ನಾಗರಾಜಯ್ಯ (ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು, ಲೇಖಕರು)

 

0 0 votes
Article Rating

Leave a Reply

1 Comment
Inline Feedbacks
View all comments

[…] (ಒನಕೆಬಂಡೆ) ನುಣ್ಣಗೆ ರುಬ್ಬಿ #ಸ್ನಾನ ಮಾಡಲು ಕೊಡುತ್ತಿದ್ದಳು. ಸೌದೆ ಹೊಂದಿಸಿ […]

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

1
0
Would love your thoughts, please comment.x
()
x
Aakruti Kannada

FREE
VIEW