“ಶೋಲೆ” ಭಾರತೀಯ ಚಿತ್ರರಂಗವನ್ನು ಅಮರಗೊಳಿಸಿದಂತಹ ಚಿತ್ರವೆಂದೇ ಹೇಳಬಹುದು.ಆ ಸಿನಿಮಾದ ಚಿತ್ರೀಕರಣವು ಕರ್ನಾಟಕದ ರಾಮನಗರದಲ್ಲಿ ನಡೆದಿತ್ತು ಎನ್ನುವುದು ಹೆಮ್ಮೆಯ ವಿಷಯ. ಮುಷ್ತಾಕ್ ಹೆನ್ನಾಬೈಲ್ ಅವರ ಈ ಲೇಖನವನ್ನು ಓದುವಾಗ ‘ಶೋಲೆ’ ಯನ್ನು ಮತ್ತೊಮ್ಮೆ ನೋಡಬೇಕು ಎನ್ನುವುದಷ್ಟೆ ಅಲ್ಲ, ರಾಮನಗರದ ಬೋಳು ಬಂಡೆಗೆ ಭೇಟಿಕೊಡಬೇಕು ಎನ್ನಿಸದೆ ಇರದು.
ಕರ್ನಾಟಕದ ರಾಮನಗರದ ಗಗನಚುಂಬಿ ಬೋಳು ಬಂಡೆಗಳನ್ನು ವಿಶ್ವಕ್ಕೆ ಪರಿಚಯಿಸಿದ ಹಿರಿಮೆ ಹಿಂದಿಯ ಶೋಲೆ ಚಿತ್ರಕ್ಕಿದೆ. ಭಾರತೀಯ ಸಿನಿಮಾದ ಇತಿಹಾಸದಲ್ಲಿ, ೧೯೭೫ ರಲ್ಲಿ ತರೆಕಂಡ, ಶೋಲೆ ಸೃಷ್ಟಿಸಿದಷ್ಟು ಸಂಚಲನ ಬೇರಾವ ಚಿತ್ರವು ಸೃಷ್ಟಿಸಿಲ್ಲ. ರಮೇಶ್ ಸಿಪ್ಪಿ ನಿರ್ದೇಶನದ ಈ ಚಿತ್ರ, ಒಂದು ಪೀಳಿಗೆಯ ಬಹುತೇಕ ಜನರ ಮನಸ್ಸಿನಲ್ಲಿ ದಶಕಗಳ ನಂತರವೂ ಅಚ್ಚಳಿಯದೆ ನೆಲೆ ನಿಂತಿದೆ. ೧೯೭೩ ರಿಂದ ೧೯೭೫ ರವರೆಗೆ ಸರಿಸುಮಾರು ೩ ವರ್ಷಗಳ ಕಾಲ, ರಾಮನಗರದ ಬಂಡೆಗಳ ಮೇಲೆ ನಡೆದ ಈ ಸಿನಿಮಾದ ಶೂಟಿಂಗ್ ತಾಣ ಇಂದಿಗೂ ಒಂದು ಪ್ರವಾಸಿ ತಾಣ. ಶೂಟಿಂಗ್ ನಡೆದಿದೆ ಎಂಬ ಒಂದೇ ಕಾರಣಕ್ಕೆ ಆಕರ್ಷಣೆಗೆ ಒಳಗಾಗಿ, ಪ್ರವಾಸಿ ತಾಣವಾದ ಜಗತ್ತಿನ ಏಕೈಕ ಸ್ಥಳವಿದು. ಚಿತ್ರಿಕರಣ ನಡೆದು ೪೫ ವರ್ಷವಾದರೂ, ಇಂದಿಗೂ ರಾಮನಗರದ ಆ ಬಂಡೆಗಳ ಸುತ್ತ, ದೂರದೂರಿನಿಂದ ಹಲವು ಹಗಲು ರಾತ್ರಿಗಳ ದಾರಿಯನ್ನು ಕ್ರಮಿಸಿ ಬಂದ, ಈ ಚಿತ್ರದ ಅಭಿಮಾನಿಗಳನ್ನು ಕಾಣಬಹುದು. ಬೆಳೆದ ಪೊದೆಗಳನ್ನು ಸರಿಸಿ,ಅಂದಿನ ಈ ಚಿತ್ರದ ಪಾತ್ರಧಾರಿಗಳು ನಡೆದ ಹೆಜ್ಜೆಗಳ ಜಾಡನ್ನು ಹುಡುಕುವವರು ಮತ್ತು ಚಿತ್ರಿಕರಣ ನಡೆದ ಜಾಗಕ್ಕೆ ತಲುಪಿ ಚಿತ್ರದ ಡೈಲಾಗ್ ಹೇಳಿ ಸಂಭ್ರಮಿಸುವವರು ಅಲ್ಲಲ್ಲಿ ಕಂಡುಬರುತ್ತಾರೆ..ಆ ಬಂಡೆಗಳು ಅವರನ್ನು ಅದ್ಯಾವುದೋ ಲೋಕಕ್ಕೆ ಸೆಳೆದೊಯ್ಯುತ್ತವೆ. ಎಂದಿಗೂ ಮರೆಯಲಾರದ ಅವರ ಪಾಲಿನ ಅಮೋಘ ಚರಿತ್ರೆಯೊಂದು ಅಲ್ಲಿದೆ.

ಫೋಟೋ ಕೃಪೆ :offbeatexplorers
ಕುಖ್ಯಾತ ಚಂಬಲ್ ಕಣಿವೆಯ ಡಕಾಯಿತನೊಬ್ಬನ ಸುತ್ತ ಹಣೆದ ಈ ಚಿತ್ರದ ಕಥೆ, ಸಾಹಿತ್ಯ, ಸಂಗೀತ, ಸಂಭಾಷಣೆ, ಸಂಯೋಜನೆಗಳ ಅಪೂರ್ವ ಸಂಗಮ ಮತ್ತು ಶ್ರೀಮಂತಿಕೆ ಬೇರಾವ ಚಲನಚಿತ್ರದಲ್ಲಿ ಕಾಣಲು ಸಾಧ್ಯವಿಲ್ಲ. ಆರ್ ಡಿ ಬರ್ಮನ್ ಸಂಗೀತದ ಪ್ರತೀ ಹಾಡುಗಳು ಅಕ್ಷರಶಃ ಅಮರ ಗೀತೆಗಳು. ಈ ಚಿತ್ರದ ಪ್ರತೀ ಪಾತ್ರಧಾರಿಗಳು ತಮ್ಮ ಜೀವನದುದ್ದಕ್ಕೂ ಇದೇ ಚಿತ್ರದ ಪಾತ್ರದ ಹೆಸರಿನೊಂದಿಗೆ ಗುರುತಿಸಿಕೊಳ್ಳಲಾರಂಭಿಸಿ ಖ್ಯಾತಿಯನ್ನು ಗಳಿಸಿದರು. ಅಮಿತಾಭ್ ಬಚ್ಚನ್ ಜಯ್ ಆಗಿ, ಧರ್ಮೇಂದ್ರ ವೀರೂ ಆಗಿ, ಹೇಮಾಮಾಲಿನಿ ಬಸಂತಿಯಾಗಿ, ಜಯಾ ಭಾದುರಿ ರಾಧಾ ಎಂಬ ವಿಧವೆಯಾಗಿ, ಅಮ್ಜದ್ ಖಾನ್ ಗಬ್ಬರ್ ಸಿಂಗ್ ಆಗಿ, ಅಸ್ರಾಣಿ ಜೈಲರ್ ಆಗಿ ನಟಿಸಿದ ನಟನೆಯು, ಅವರ ಬದುಕಿನ ಪಥವನ್ನೇ ಬದಲಿಸಿತು. ನಂತರದ ದಿನಗಳಲ್ಲಿ ರಾಜಕಾರಣಿಯಾಗಿ ಬದಲಾದ ಹೇಮಾಮಾಲಿನಿ, ಇಂದಿಗೂ ಯಾವುದೇ ಚುನಾವಣಾ ಪ್ರಚಾರಕ್ಕೆ ಹೋದರೂ, ನೆರೆದ ಜನರು ಬಸಂತಿ ಎಂದೇ ಕೂಗುತ್ತಾರೆ. ಈ ಚಿತ್ರದಲ್ಲಿ ಎಲ್ಲರಿಗಿಂತ ಹೆಚ್ಚು ಸಂಚಲನ ಮೂಡಿಸಿದ್ದು ಖಳನಾಯಕ ಗಬ್ಬರ್ ಸಿಂಗ್ ಪಾತ್ರಧಾರಿ ಅಮ್ಜದ್ ಖಾನ್.

ಫೋಟೋ ಕೃಪೆ : indiatimes.com
ಶೋಲೆ ಚಿತ್ರದ ಕೇಂದ್ರಬಿಂದುವೇ ಈ ಗಬ್ಬರ್ ಸಿಂಗ್. ಚಿತ್ರದ ಇವರ ಪ್ರತಿಯೊಂದು ಡೈಲಾಗ್ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಕೊಲ್ಲಿ ರಾಷ್ಟ್ರಗಳಲ್ಲಿ ಇಂದಿಗೂ ಜನ ಅನುಕರಿಸುತ್ತಿದ್ದಾರೆ. ಬಿಬಿಸಿ ಈ ಚಿತ್ರವನ್ನು “ಫಿಲ್ಮ್ ಆಫ್ ದಿ ಮಿಲೇನಿಯಮ್” ಎಂದು ಘೋಷಿಸಿತು. ೩ ಗಂಟೆ ೧೦ ನಿಮಿಷದ ಈ ಚಿತ್ರವನ್ನು ೩ವರ್ಷ ನಿರಂತರವಾಗಿ ಚಿತ್ರಿಸಲಾಯಿತು. ಗಬ್ಬರ್ ಸಿಂಗ್ ನ ಮೊದಲ ಡೈಲಾಗ್ ” ಕಿತನೇ ಆದ್ಮಿ ಥೇ” ೪೦ ಬಾರಿ ಪುನರಾವರ್ತಿಸಿದ ನಂತರ ಅಂತಿಮಗೊಳಿಸಲಾಯಿತು. ” ಅರೆ ಓ ಸಾಂಭಾ…ಕಿತನಾ ಇನಾಮ್ ರಖೇ ಹೈ ಸರ್ಕಾರ್ ಹಮ್ ಪರ್?” ಎಂಬ ಗಬ್ಬರ್ ಪ್ರೆಶ್ನೆಗೆ ಉತ್ತರವಾಗಿ ಬೃಹತ್ ಬಂಡೆಯ ತುತ್ತತುದಿಯಲ್ಲಿ ಕೂತು ಸಾಂಭಾ ಪಾತ್ರಧಾರಿ ಮ್ಯಾಕ್ ಮೋಹನ್ ಹೇಳುವ ” ಪೂರೇ ಪಚಾಸ್ ಹಜಾರ್ “ಎನ್ನುವ ಒಂದು ಲೈನ್ ಉತ್ತರ,ಆ ಪಾತ್ರಧಾರಿಯ ಬದುಕನ್ನೇ ಬದಲಿಸಿತು. ಇಡೀ ಚಿತ್ರದಲ್ಲಿ ಆ ಪಾತ್ರಧಾರಿ ಹೇಳಿದ್ದು ಅದೊಂದೇ ಸಾಲಿನ ಡೈಲಾಗ್..ಅದಕ್ಕಾಗಿ ಆತ ಸೆಟ್ ನಲ್ಲಿ ಕಳೆದದ್ದು ಸುದೀರ್ಘ ಮೂರು ವರ್ಷ..ಆ ಡೈಲಾಗ್ ನಿಂದ ಜೀವಮಾನದುದ್ದಕ್ಕೂ ಆತ ಗಳಿಸಿದ ಹಣ ಆ ಕಾಲದ ಅದೆಷ್ಟೋ ಲಕ್ಷಗಳು. ಚಿತ್ರಿಕರಣ ಮುಗಿದು ಬಿಡುಗಡೆಯ ಮುಂಚಿನ ದಿನ ಖಳನಟ ಮ್ಯಾಕ್ ಮೋಹನ್ ತನ್ನ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಿ ಒಂದೇ ಡೈಲಾಗ್ ಮತ್ತು ದೃಶ್ಯಕ್ಕೆ ಸೀಮಿತಗೊಳಿಸಿದ್ದಕ್ಕೆ, ನಿರ್ದೇಶಕ ರಮೇಶ್ ಸಿಪ್ಪಿಯ ಮುಂದೆ ನೋವಿನಿಂದ ಗಳಗಳನೆ ಅತ್ತಿದ್ದ. ಅವನನ್ನು ಸಮಾಧಾನಗೊಳಿಸಿದ ಸಿಪ್ಪಿ, ಅದೊಂದೇ ದೃಶ್ಯ ನಿನ್ನನ್ನು ಖ್ಯಾತಿಯ ಉತ್ತುಂಗಕ್ಕೇರಿಸಲಿದೆ ಎಂದ. ಸಿಪ್ಪಿ ಅದೆಂತಹ ದೂರದೃಷ್ಟಿಯ ನಿರ್ದೇಶಕನೆಂದರೆ, ಆತ ಹೇಳಿದಂತೆ ಮ್ಯಾಕ್ ಮೋಹನ್ ಸಾಯುವವರೆಗಿನ ತನ್ನ ಬದುಕಿನಲ್ಲಿ ಮೋಹನ್ ಎನ್ನುವುದಕ್ಕಿಂತ ಹೆಚ್ಚಾಗಿ ಸಾಂಭಾ ಆಗಿ ಅಪಾರ ಖ್ಯಾತಿ ಗಳಿಸಿದ. ಆ ಪಾತ್ರ ಆತನನ್ನು ಮತ್ತೆ ಮೋಹನ್ ಆಗಲು ಬಿಡಲೇ ಇಲ್ಲ. ಹೋದಲ್ಲೆಲ್ಲಾ ಜನರು “ಅರೆ ಓ ಸಾಂಭಾ” ಎಂದು ಕರೆಕರೆದು ಸಂಭ್ರಮಿಸಿದರು.

ಫೋಟೋ ಕೃಪೆ : scoopwhoop
ಮನೆಯ ಉಪ್ಪರಿಗೆಯ ಮೇಲೆ ಲ್ಯಾಂಪ್ ಹಚ್ಚುವ ಜಯಾ ಭಾದುರಿ ಮತ್ತು ಇನ್ನೊಂದು ತುದಿಯಿಂದ ಮೌತ್ ಆರ್ಗನ್ ನುಡಿಸುತ್ತ ಜಯಾರನ್ನು ನೋಡುವ ಅಮಿತಾಬ್ ಬಚ್ಚನ್ ರ, ಹೆಚ್ಚುಕಡಿಮೆ ಏಕಕೋನದ 1.30 ನಿಮಿಷದ ದೃಶ್ಯವನ್ನು ೨೦೦ ಕ್ಕೂ ಹೆಚ್ಚು ಬಾರಿ ಟೇಕ್ ತೆಗೆದುಕೊಂಡು, 20 ದಿನಗಳಲ್ಲಿ ಚಿತ್ರಿಸಲಾಯಿತು. ಚಿತ್ರಿಕರಣದಲ್ಲಿ ಉತ್ಕೃಷ್ಟ ಗುಣಮಟ್ಟಕ್ಕೆ ಅತಿಹೆಚ್ಚು ಆದ್ಯತೆ ನೀಡಲಾಯಿತು. ಜಯಾ ಭಾದುರಿಗೆ ವಿಧವೆಯಾಗಿ ಚಿತ್ರದಲ್ಲಿ ಹೆಚ್ಚು ಮಾತುಗಳಿರಲಿಲ್ಲ. ಬಾಯಿಗಿಂತ ಹೆಚ್ಚು ಕಣ್ಣು ಮಾತನಾಡಿದ ಸಿನಿಮಾ ಇತಿಹಾಸದ ಅತೀ ಅಪರೂಪದ ಪಾತ್ರವದು. ಗಬ್ಬರ್ ಸಿಂಗ್ ದಾಳಿಗೆ, ತನ್ನ ಕಣ್ಣೆದುರೇ ಇಡೀ ಕುಟುಂಬ ಮತ್ತು ಗಂಡನನ್ನು ಕಳೆದುಕೊಂಡು ಎಳೆಯ ಪ್ರಾಯದಲ್ಲೇ ವಿಧವೆಯಾದ, ಕಮರಿದ ಬದುಕಿನ ನೋವನ್ನೆಲ್ಲ ಕಣ್ಣಲ್ಲಿ ಅತೀ ಯಾತನಾಮಯವಾಗಿ ಕಾಣಿಸಿದಳು ಜಯಾ. ಮೊದಲ ಗಂಡನನ್ನು ಗಬ್ಬರ್ ನ ದಾಳಿಯಿಂದ ಕಳೆದುಕೊಂಡರೂ, ನಂತರದ ಬದುಕಿನಲ್ಲಿ ಆಸೆಯ ಅಂಬರವಾಗಿ ಬಂದ ಜಯ್ (ಅಮಿತಾಭ್ ಬಚ್ಚನ್ ) ನೊಂದಿಗೆ ಪ್ರೇಮ ಅಂಕುರಿಸುವ ಹೊತ್ತಿನಲ್ಲೇ, ಗಬ್ಬರ್ ಅವನನ್ನೂ ಕೊಲ್ಲುತ್ತಾನೆ. ಸುದ್ದಿ ತಿಳಿದ ಜಯಾ ಮತ್ತದೇ ಕಣ್ಣೀರು ಬತ್ತಿದ ಕಣ್ಣುಗಳಿಂದ ಪ್ರೇಕ್ಷಕರನ್ನು ನೋಡುತ್ತಾ, ಸೂಚ್ಯವಾಗಿ ಬದುಕು ಜೀವಚ್ಛವವಾದುದನ್ನು ಅದ್ಭುತವಾಗಿ ಅಭಿವ್ಯಕ್ತಿಸುತ್ತಾಳೆ. ತನ್ನ ಮನೆಯ ಕಿಟಕಿಯ ಬಾಗಿಲನ್ನು ಮುಚ್ಚಿ, ಅದನ್ನು ತನ್ನ ಬಾಳಿನ ಅಂತ್ಯವೆಂದು ಬಿಂಬಿಸಿದ ಆ ದೃಶ್ಯ ,ಪರದೆಯ ಮೇಲೆ ಮೂಡಿದಾಗ ಹಿಂದಿ ಭಾಷಿಕ ರಾಜ್ಯದ ಚಿತ್ರಮಂದಿರಗಳ ಒಳಗೆ ಪ್ರೇಕ್ಷಕರು ಜಯಾ ಮುಖ ನೋಡಲಾಗದೆ ನೋವಿನಿಂದ ಚಡಪಡಿಸುತ್ತಿದ್ದರು. ಬಿಳಿ ಸೀರೆಯುಟ್ಟ ಜಯಾಳ ನೋವ ನುಂಗಿ ನೋಡುವ ಆ ಅನಾಥ ನೋಟಕ್ಕೆ ಸರ್ವರ ಮನ ಮಮ್ಮಲ ಮರುಗುತಿತ್ತು. ಈ ಜಗತ್ತಿನಲ್ಲಿ ಮಾತನಾಡದೆ ನಗಿಸಿದ್ದು ಚಾರ್ಲಿ ಚಾಪ್ಲಿನ್ ಆದರೆ, ಮಾತನಾಡದೇ ಬಹುಜನರನ್ನು ಅಳುವಂತೆ ಮಾಡಿದ ಹಿರಿಮೆ ಜಯಾ ಭಾದುರಿಯದ್ದು. ಆಕೆಯ ಪ್ರಬುದ್ಧ ಭಾವಾಭಿನಯಕ್ಕೆ ಮನಸೋಲದಿರಲು ಸಾಧ್ಯವೇ ಇರಲಿಲ್ಲ.
ಯಾವುದೇ ಭಾರತೀಯ ಚಿತ್ರವನ್ನು ಚಿತ್ರಮಂದಿರದಲ್ಲಿ ಅರ್ಧ ನೋಡಿ ಹಿಂತಿರುಗಬಹುದು,ಆದರೆ ಶೋಲೆಯನ್ನಲ್ಲ. ಕ್ಷಣಕ್ಷಣವೂ ಕುತೂಹಲ ಮೂಡಿಸುವ, ಪ್ರಖರ ತಿರುವುಗಳಿರುವ ಅದ್ಭುತ ಕಥಾಹಂದರ ಹೊಂದಿರುವ ಚಿತ್ರವಿದು. ಮೊದಲ ಕೆಲವು ನಿಮಿಷಗಳಲ್ಲೇ ಪ್ರೇಕ್ಷಕರನ್ನು ತನ್ನ ಮಡಿಲಲ್ಲಿ ಕೂಡಿಸಿಕೊಂಡು, ತೂಕಡಿಸದಂತೆ ಮಾಡಿ, ಕೊನೆಯ ದೃಶ್ಯದವರೆಗೆ ನೋಡುವಂತೆ ಮಾಡುವುದು ಈ ಚಿತ್ರದ ಹೆಚ್ಚುಗಾರಿಕೆ..ಹಿಂದಿ ಚಿತ್ರರಂಗದ ದಿಗ್ಗಜ ಸಾಹಿತಿಗಳಾದ ಜಾವೇದ್ ಅಖ್ತರ್ ಮತ್ತು ನಟ ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ಈ ಚಿತ್ರದ ಸಂಭಾಷಣೆಯನ್ನು ಬರೆದವರು. ಚಿತ್ರರಂಗಕ್ಕೆ ಪರಿಚಯವೇ ಇಲ್ಲದ ರಂಗಭೂಮಿ ನಟ ಅಮ್ಜದ್ ಖಾನ್ ನನ್ನು ತಂದು ಗಬ್ಬರ್ ಪಾತ್ರ ಮಾಡಿಸಿದ್ದೂ ಕೂಡ ಇದೇ ಸಲೀಮ್ ಖಾನ್.. ಅಮ್ಜದ್ ಅದೆಷ್ಟು ಪರಿಣಾಮಕಾರಿಯಾಗಿ ಆ ಡಕಾಯಿತ ಗಬ್ಬರ್ ಸಿಂಗ್ ನ ಪಾತ್ರ ಮಾಡಿದನೆಂದರೆ ,ಚಿತ್ರ ಬಿಡುಗಡೆಯಾದ ಆರಂಭದ ದಿನಗಳಲ್ಲಿ ಸ್ವತಃ ಈತನ ಹೆಂಡತಿ ಶೈಲಾ ಖಾನ್ ಗೆ ಆತ ಗಂಡನೆನ್ನುವುದಕ್ಕಿಂತ ಹೆಚ್ಚಾಗಿ ಗಬ್ಬರ್ ಆಗಿ ಕಾಣಿಸತೊಡಗಿದ.. ಅಕ್ಷರಶಃ ಅಮ್ಜದ್ ಆ ಪಾತ್ರವನ್ನು ವಿಶ್ವಖ್ಯಾತಿಗೊಳಿಸಿದ. ನಿಮಗೆ ಗೊತ್ತಿರಲಿ, ಸಿನಿಮಾದಲ್ಲಿ ಹಾಡುಗಳು ಕ್ಯಾಸೆಟ್ ಗಳಾಗಿ ಮಾರಾಟವಾಗುವುದು ಸಾಮಾನ್ಯ.

ಫೋಟೋ ಕೃಪೆ : fridaymoviezblog
ಶೋಲೆಯ ಗಬ್ಬರ್ ನ ಡೈಲಾಗ್ ಗಳು ಕ್ಯಾಸೆಟ್ ಆಗಿ ದಾಖಲೆ ಮಾರಾಟವಾಗಿದ್ದು ಜಾಗತಿಕ ಸಿನಿಮಾ ಇತಿಹಾಸದಲ್ಲಿ ಅದೇ ಮೊದಲು.. ಅಮ್ಜದ್ ಜನಪ್ರಿಯತೆ ಅದೆಷ್ಟು ಎತ್ತರಕ್ಕೆ ಹೋಯಿತೆಂದರೆ, ಬ್ರಿಟಾನಿಯಾ ಕಂಪೆನಿ ತನ್ನ ಜಾಹಿರಾತುಗಳಿಗೆ ಚಿತ್ರದ ನಾಯಕ ನಟರನ್ನು ಬಿಟ್ಟು ಅಮ್ಜದ್ ನನ್ನು ಆಯ್ಕೆ ಮಾಡಿತು. ಆ ಕಾಲದಲ್ಲಿ ಖಳನಾಯಕ ಅಷ್ಟೊಂದು ಪ್ರತಿಷ್ಠಿತ ಸಂಸ್ಥೆಯ ಜಾಹಿರಾತಿಗೆ ಆಯ್ಕೆಯಾದದ್ದು ಅದೇ ಪ್ರಥಮ. ಚಿತ್ರದ ಶೂಟಿಂಗ್ ನ ಆರಂಭದಲ್ಲಿ ಅಮ್ಜದ್ ಸ್ವರ ಸರಿಯಿಲ್ಲ ಎಂದು ಚಿತ್ರತಂಡ ಅಪಸ್ವರ ಎತ್ತಿತ್ತು. ಇವರ ಸ್ಥಾನಕ್ಕೆ ಮತ್ತೊಬ್ಬ ಬಾಲಿವುಡ್ ವಿಲನ್ ಡ್ಯಾನಿಯನ್ನೂ ತರುವ ಪ್ರಯತ್ನವೂ ನಡೆದಿತ್ತು. ಆದರೆ ನಿರ್ದೇಶಕ ರಮೇಶ್ ಸಿಪ್ಪಿ ಅಮ್ಜದ್ ನ ಮೇಲೆ ವಿಶ್ವಾಸವಿರಿಸಿದ. ಮುಂದೆ ಅಮ್ಜದ್ ನ ಗಬ್ಬರ್ ಪಾತ್ರ ಇತಿಹಾಸ ಸೃಷ್ಟಿಸಿತು. ಮೂರು ವರ್ಷಗಳ ನಿರಂತರ ಚಿತ್ರಿಕರಣದಲ್ಲಿ, ಒಮ್ಮೆಯೂ ಒಗೆಯದ ಒಂದೇ ಜೊತೆ ಬಟ್ಟೆ ಹಾಕಿಕೊಂಡು ಅಮ್ಜದ್ ಗಬ್ಬರ್ ಸಿಂಗ್ ಪಾತ್ರವನ್ನು ವಿಶೇಷವಾಗಿ ಮಂಡಿಸಿದ..ಗಬ್ಬರ್ ನ ” ಅಬ್ ತೇರಾ ಕ್ಯಾ ಹೋಗಾ ಕಾಲಿಯಾ”,ಏ ಹಾಥ್ ಹಮೇ ದೇದೆ ಠಾಕೂರ್, ಜಬ್ ಘರಮೇ ಬಚ್ಚಾ ರೋತಾ ಹೈ ತೋ ಮಾ ಕೆಹತಿ ಹೈ ಬೆಟಾ ಸೋಜಾ, ಸೋಜಾ.. ವರನಾ ಗಬ್ಬರ್ ಸಿಂಗ್ ಆ ಜಾಯೇಗಾ, ಲೇ ಅಬ್ ಗೋಲಿ ಖಾ” ಎಂಬ ಡೈಲಾಗ್ ಗಳು ಸಿನಿ ಪ್ರೀಯರಲ್ಲಿ ಸಂಚಲನ ಮೂಡಿಸಿದ್ದಲ್ಲದೆ, ಇಂದಿಗೂ ಎಲ್ಲರ ಬಾಯಲ್ಲಿವೆ. “ಏ ಹಾಥ್ ನಹೀ ಫಾಸಿ ಕಾ ಫಂದಾ ಹೈ” ಎಂದು ಹೇಳುವ ಅಪಾರ ವ್ಯಂಗ್ಯದಿಂದ ಕೂಡಿದ ಡೈಲಾಗ್ ಅನುಕರಿಸದವರೇ ಇಲ್ಲ..
ಗಬ್ಬರ್ ಡೈಲಾಗ್ ಇಲ್ಲದ ಸಿನಿ ವೇದಿಕೆಗಳೇ ಇಲ್ಲವಾದವು. ಆಶ್ಚರ್ಯವೆಂಬಂತೆ ಬಿಡುಗಡೆಯಾದ ಮೊದಲ ಕೆಲದಿನಗಳ ಈ ಚಿತ್ರದ ಪ್ರದರ್ಶನ ನೀರಸವಾಗಿತ್ತು. ಮಾಧ್ಯಮ ಸೀಮಿತ ವ್ಯಾಪ್ತಿಯಲ್ಲಿದ್ದ ಕಾಲವಾದ್ದರಿಂದ, ಚಿತ್ರ ಜನರನ್ನು ತಲುಪುವುದು ತಡವಾಗಿತ್ತು. ಚಿತ್ರ ನೋಡಿದವರು ಬಾಯಿಯಿಂದ ಬಾಯಿಗೆ ತಲುಪಿಸಿದ ಸಂದೇಶವೆನ್ನುವುದು ಇಡೀ ದೇಶದ ಮಹಾನಗರಗಳ ಥಿಯೇಟರ್ ಗಳು ಹೌಸ್ ಫುಲ್ ಆಗಲು ಕಾರಣವಾಯಿತು. ಈ ಚಿತ್ರ ಮುಂಬಯಿಯಲ್ಲಿ ಸರಿಸುಮಾರು 5 ವರ್ಷ ಪ್ರದರ್ಶಿತವಾಯಿತು. ಅದೊಂದು ದಿನ ನಿರ್ಮಾಪಕ ಜಿ ಪಿ ಸಿಪ್ಪಿ ಮತ್ತು ನಿರ್ದೇಶಕ ರಮೇಶ್ ಸಿಪ್ಪಿ ಅಮ್ಜದ್ ನನ್ನು ತಮ್ಮ ಮನೆಗೆ ಕರೆದು” ಅಮ್ಜದ್.. ಬಾಂಬೆಯ ಬೀದಿಗಳಲ್ಲಿ ಒಬ್ಬನೇ ಓಡಾಡಬೇಡ..ಚಿತ್ರ ಪ್ರದರ್ಶನಗೊಳ್ಳುವಾಗ ಚಿತ್ರಮಂದಿರಗಳ ಸನಿಹ ಹೋಗಬೇಡ..ನಿನ್ನ ಜೀವಕ್ಕೆ ಚಿತ್ರದ ಪ್ರೇಕ್ಷಕರಿಂದ ಅಪಾಯವಿದೆ ” ಎಂದು ಎಚ್ಚರಿಸಿದರು. ಗಬ್ಬರ್ ಪಾತ್ರದ ಅಮ್ಜದ್ ನ, ತೀಕ್ಷ್ಣ ಮೊನಚು ವ್ಯಂಗ್ಯಭರಿತ ಮಾತುಗಳು ಮತ್ತು ಮುಖದ ಕ್ರೌರ್ಯ ನೋಟ ಎಂಥವರನ್ನೂ ಕೆರಳಿಸುತ್ತಿತ್ತು. ನಿಜ ಜೀವನದಲ್ಲಿ ಅಮ್ಜದ್, ಮಗು ಮನಸ್ಸಿನ ಮುಗ್ಧ, ನಿಸ್ವಾರ್ಥಿ ಮತ್ತು ವಿಪರೀತ ಭಾವುಕ ಸ್ವಭಾವದವನಾದರೂ, ಚಿತ್ರದಲ್ಲಿ ಮಾತ್ರ ನಿಜ ಡಕಾಯಿತನಂತೆ ಕಾಣುತ್ತಿದ್ದ..ಅವನು ಆ ಖಳ ಪಾತ್ರಕ್ಕೆ ಅಷ್ಟು ಜೀವ ತುಂಬಿದ್ದ.

ಫೋಟೋ ಕೃಪೆ : you tube
ತುಂಡುಡುಗೆಯಲ್ಲಿ ಮೆಹಬೂಬಾ ಓ ಮೆಹಬೂಬಾ ಹಾಡಿಗೆ ಹೆಲೆನ್ ಎಂಬ ಮಾದಕ ನಟಿಯ ನೃತ್ಯ ಅಂದಿನ ಪಡ್ಡೆಗಳಾಗಿದ್ದ ಇಂದಿನ ಕಿಲಾಡಿ ಮುದುಕರ ನಿದ್ದೆಗೆಡಿಸಿತು. ಇಂದಿಗೂ ಅವರುಗಳು ಅದ್ಯಾವ ಮಾದಕ ನಟಿಯ ಮತ್ತೇರಿಸುವ ನೃತ್ಯ ಕಂಡರೂ, ಇವರ್ಯಾರೂ ಹೆಲೆನ್ ಅಲ್ಲ ಬಿಡು ಅನ್ನುತ್ತಾರೆ. ದಿನಕ್ಕೆ ಒಂದೇ ಹೊತ್ತು ತಿನ್ನಲು ಇದ್ದರೂ ತೊಂದರೆಯಿಲ್ಲ, ಹೆಂಡತಿಯೆಂದರೆ ಹೆಲೆನ್ ತರಹ ಇರಬೇಕು, ಸೊಂಟ ಹಾಗೆ ಬಳುಕಬೇಕು ಎಂದಿದ್ದಕ್ಕೆ ಇದ್ದ ಹೆಂಡತಿಯಿಂದ ಗುದ್ದು ಪಡೆದವರು ಅದೆಷ್ಟೋ? ಠಾಕೂರ್ ಬಲದೇವ್ ಸಿಂಗ್ ಪಾತ್ರದಲ್ಲಿ ನಟ ಸಂಜೀವ್ ಕುಮಾರ್ ಅಭಿನಯ ಚಿತ್ರದ ಗಾಂಭೀರ್ಯವನ್ನು ಎತ್ತರಿಸಿತು. ಶೋಲೆ ಬರೀ ಪ್ರೇಕ್ಷರನ್ನು ಮಾತ್ರವಲ್ಲ ಪಾತ್ರಧಾರಿಗಳನ್ನು ಅದೆಷ್ಟು ಆವರಿಸಿಕೊಂಡಿತೆಂದರೆ, ಚಿತ್ರಿಕರಣ ಸಂದರ್ಭದಲ್ಲೇ ಜಯಾ ಬಾಧುರಿ, ಅಮಿತಾಭ್ ಬಚ್ಚನ್ ರನ್ನು ಮದುವೆಯಾಗಿ ಜಯಾ ಬಚ್ಚನ್ ಆದಳು. ಚಿತ್ರಿಕರಣ ಮುಗಿದ ನಂತರ ಧರ್ಮೇಂದ್ರ ಹೇಮಾಮಾಲಿನಿಯನ್ನು ವರಿಸಿದ. ತೆರೆಯ ಮೇಲಿನ ಜೋಡಿಗಳು ನಿಜ ಜೀವನದಲ್ಲೂ ಒಂದಾದರು. ಈ ಚಿತ್ರ ಅದೆಂತಹ ಪ್ರಸಿದ್ಧಿ ಪಡೆಯಿತೆಂದರೆ, ರಾಮಗಢವೆಂಬ ಇಡೀ ಹಳ್ಳಿಯನ್ನೇ ಆ ರಾಮನಗರದ ಬಂಡೆಗಳ ಎಡೆಯಲ್ಲಿ ಸೃಷ್ಟಿಸಿದ ಆ ಚಿತ್ರತಂಡ, ಕೆಲವೊಂದು ಸಂಭಾಷಣೆಗಳಿಲ್ಲದ ಸಣ್ಣಪುಟ್ಟ ಪಾತ್ರಗಳಿಗೆ ಸ್ಥಳೀಯರನ್ನು ಬಳಸಿಕೊಂಡಿತು. ಡಕಾಯಿತ ಗಬ್ಬರ್ ಸಿಂಗ್ ಆ ಹಳ್ಳಿಯ ಮೇಲೆ ದಾಳಿ ಮಾಡುವ ದೃಶ್ಯ ಚಿತ್ರಿಕರಿಸುವಾಗ ಆತನ ಕುದುರೆಯ ಕಾಲಿಗೆ ಮಗು ಅಡ್ಡಬರುವುದನ್ನು ಮಗುವಿನ ತಾಯಿ ದೂರದಿಂದ ಗಮನಿಸುತ್ತಾಳೆ. ವೇಗವಾಗಿ ಓಡಿಬಂದು ಮಗುವನ್ನು ಕುದುರೆಯ ಕಾಲುಗಳಿಗೆ ಸಿಲುಕದಂತೆ ಕಾಪಾಡುತ್ತಾಳೆ.

ಫೋಟೋ ಕೃಪೆ : The Indian Express
ಅಂದು ಒಂದೂ ಮಾತನಾಡದೆ ಎರಡು ಸೆಕೆಂಡುಗಳ ಆ ೮ ವರ್ಷದ ಮಗುವಿನ ಪಾತ್ರ ಮಾಡಿದ, ಇದೀಗ ಮಧ್ಯವಯಸ್ಕಳಾಗಿರುವ ಆ ಹಳ್ಳಿಯ ಆಸುಪಾಸಿನ ಸ್ಥಳೀಯ ಮಹಿಳೆಯನ್ನು ಹುಡುಕಿಕೊಂಡು ಸಂದರ್ಶನಕ್ಕಾಗಿ ಇತ್ತೀಚೆಗೆ ಹಿಂದಿ ಟಿವಿ ವಾಹಿನಿಯೊಂದು ಬಂದಿತ್ತು. ಆ ಚಿತ್ರದ ಬರೀ ಕ್ಷಣಕಾಲದ ನೋಟ ಸೀಮಿತ ಪಾತ್ರಗಳನ್ನೂ ಕೂಡ ಜನರು ಮರೆತಿಲ್ಲ ಎಂಬುದನ್ನು ಇದರಿಂದ ಮನಗಾಣಬಹುದು. ಚಿತ್ರದಲ್ಲಿ ಕಾಣುವ ಇಡೀ ಹಳ್ಳಿಯ ಅಷ್ಟೂ ಕಟ್ಟಡ, ಸೇತುವೆ, ಮಂದಿರ, ಮಸೀದಿ ಹಾಗೂ ಇತರ ಪೂರಕ ವ್ಯವಸ್ಥೆಗಳನ್ನು ಚಿತ್ರ ತಂಡವೇ ಸಿದ್ಧ ಮಾಡಿತ್ತು. ೧೯೭೫ – ೭೬ನೇ ಇಸವಿಯಲ್ಲಿ ಚಿತ್ರ ಭಾರತದ ಹಳ್ಳಿಗಳಲ್ಲೂ ಪ್ರದರ್ಶನ ಕಾಣತೊಡಗಿತು.
ಶೋಲೆಯ ಪ್ರದರ್ಶನ ಸಮಯಗಳು ಅಕ್ಷರಶಃ ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತಿದ್ದವು. ಹೀಗೆ ಶೋಲೆ ಶತಮಾನದ ಚಿತ್ರವಾಗಿ ಭಾರತೀಯ ಸಿನಿಮಾವನ್ನು ಆಳಿತು. ಇಂದಿಗೂ ಹಿಂದಿ ಚಿತ್ರರಂಗದ ಇತಿಹಾಸವನ್ನು ಶೋಲೆಯ ಪೂರ್ವ ಮತ್ತು ಶೋಲೆಯ ನಂತರದ ಕಾಲವೆಂದು ವರ್ಗೀಕರಿಸಲಾಗುತ್ತದೆ. ಶೋಲೆಯದ್ದು ಸೂರ್ಯ ಮುಳುಗದ ಸಾಮ್ರಾಜ್ಯ..ಭಾರತೀಯನಾದವನು ಪ್ರಪಂಚದ ಅದ್ಯಾವ ಮೂಲೆಯಲ್ಲಿದ್ದರೂ ಆತ ಶೋಲೆಯಿಂದ ಆಕರ್ಷಿತನಾಗದೇ ಇರಲಾರ. ಹೊತ್ತಲ್ಲದ ಹೊತ್ತುಗಳಲ್ಲಿಯೂ ಶೋಲೆಯನ್ನು ಅದೆಲ್ಲೋ ಅದ್ಯಾರೋ ಖಂಡಿತ ನೋಡುತ್ತಿರುತ್ತಾರೆ. ಭಾರತೀಯ ಚಿತ್ರರಂಗದ ಅಮರ ಚಿತ್ರವೆಂಬುದು ಯಾವುದಾದರೂ ಇದ್ದರೆ, ಅದು “ಶೋಲೆ”
- ಮುಷ್ತಾಕ್ ಹೆನ್ನಾಬೈಲ್ , ಕುಂದಾಪುರ
