ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ನಮ್ಮ ಹೆಮ್ಮೆ ನಮ್ಮ ಆಸ್ತಿ….ಗೋಕರ್ಣದಲ್ಲಿ ಅವರ ಮನೆಗೆ ಹೋಗಿ ಬಂದ ಸಂದರ್ಭವನ್ನು ನನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದೀನಿ. ಜೊತೆಗೆ ಅವರೊಂದಿಗಿನ ಸುಮಧುರ ನೆನಪುಗಳನ್ನು ನನ್ನ ಪ್ರವಾಸ ಕಥನದಲ್ಲಿ ಹಂಚಿಕೊಂಡಿದ್ದೇನೆ. ತಪ್ಪದೆ ಮುಂದೆ ಓದಿ…
ಆಗ ನಾನು ಬಿ ಎ ಎರಡನೇಯ ವರ್ಷ ಎನ್.ಎಂ. ಕೆ. ಆರ್. ವಿ ಕಾಲೇಜಿನಲ್ಲಿ ಓದುತ್ತಿದ್ದೆ. ಅಪ್ಪ ಡೆಪ್ಯೂಟೇಷನ್ ಮೇಲೆ ಕೆಪಿಟಿಸಿಎಲ್ ಗೆ ವರ್ಗವಾಗಿದ್ದರು, ಅಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀ ಚಂದ್ರಶೇಖರ ಕಂಬಾರ ಅವರ ನೇತೃತ್ವದಲ್ಲಿ ರೂಪಕೊಂಡಿದ್ದ ಕಮ್ಯುನಿಕೇಷನ್ ಅಡ್ವೈಸರ್ ತಂಡದಲ್ಲಿ ಅಪ್ಪ ಕೂಡಾ ಒಬ್ಬರಾಗಿದ್ದರು. ಇಲ್ಲಿಂದ ಬೆಂಗಳೂರಿನ ನಂಟು ಶುರುವಾಯಿತು. ಆಗ ಜೆಪಿ ನಗರ ಆರನೇ ಹಂತದ ಒಂದು ಬಾಡಿಗೆ ಮನೆಯಲ್ಲಿ ಇದ್ದೆವು. ಮನೆಯಿಂದ ಜೆಪಿ ನಗರ ಬಸ್ ಸ್ಟ್ಯಾಂಡ್ ಹತ್ತಿರವಿತ್ತು, ನಾನು ಕಾಲೇಜ್ ಹೋಗುವ ಸಮಯ ಮತ್ತು ಅಪ್ಪ ಆಫೀಸ್ ಹೋಗುವ ಸಮಯ ಒಂದೇ ಆದ್ದರಿಂದ ಬೆಳಗ್ಗೆ ಇಬ್ಬರು ಜೊತೆಗೆ ಮನೆ ಬಿಡುತ್ತಿದ್ದೆವು. ಇಬ್ಬರೂ ಬಸ್ ಸ್ಟಾಂಡ್ ಬರೋವರೆಗೂ ಅದು ಇದು ಮಾತಾಡುತ್ತಾ ಹೋಗುತ್ತಿದ್ದೆವು. ಇಬ್ಬರದೂ ಒಂದೇ ಬಸ್ ಆದ್ದರಿಂದ ನಾನು ಜಯನಗರದಲ್ಲಿ ಇಳಿದುಕೊಳ್ಳುತ್ತಿದ್ದೆ, ಅಪ್ಪ ಅದೇ ಬಸ್ ಲ್ಲಿ ಮುಂದೆ ಹೋಗಿ ಕಾವೇರಿ ಭವನ ಬಸ್ ಸ್ಟಾಪ್ ನಲ್ಲಿ ಇಳಿದುಕೊಳ್ಳುತ್ತಿದ್ದರು. ಹೀಗೆ ನಿತ್ಯ ನಮ್ಮಿಬ್ಬರದು ನಡೆಯುತ್ತಿತ್ತು. ಆದರೆ ಅಂದು ಇಬ್ಬರು ಬಸ್ ಗಾಗಿ ಕಾಯುತ್ತ ನಿಂತಿದ್ದೆವು. ಬಸ್ ಬರುವುದು ಯಾಕೋ ತಡವಾಯಿತು. ಇಬ್ಬರು ಲೋಚ್ ಪಚ್ ಅಂತ ಬಸ್ ಡ್ರೈವರ್ ಗೆ ಬೈಯುತ್ತಾ ನಿಂತಿದ್ದೆವು, ಅಷ್ಟರಲ್ಲಿ ಹಿಂದಿನಿಂದ ಯಾರೋ ಹೂಲಿ …ಹೂಲಿ…ಎಂದು ಕರೆದಂತೆ ಕೇಳಿಸಿತು. ಅಪ್ಪ, ನಾನು ತಿರುಗಿ ನೋಡಿದ್ವಿ. ಹಸಿರು ಬಣ್ಣದ ಜುಬ್ಬಾ, ಜೀನ್ಸ್ ಪ್ಯಾಂಟ್, ಬಗಲಿಗೆ ಒಂದು ಕೈ ಚೀಲ ನೇತು ಹಾಕಿಕೊಂಡ ವ್ಯಕ್ತಿಯನ್ನು ನೋಡಿ ಇದು ಅಪ್ಪನ ಸಾಹಿತ್ಯ ಬಳಗ ಅಂದುಕೊಂಡು ಸುಮ್ಮನೆ ಅವರತ್ತ ನೋಡುತ್ತಾ ನಿಂತೆ. ಅಪ್ಪ ಅವರನ್ನು ನೋಡಿ ಆಶ್ಚರ್ಯದಿಂದ ನಮಸ್ಕಾರ ಹೇಗಿದ್ದೀರಿ? ಏನು ಇಲ್ಲಿ ಅಂತ ಮಾತಾಡೋಕೆ ಶುರು ಮಾಡಿದರು. ಇಬ್ಬರ ನಡುವೆ ತುಂಬಾ ಹೊತ್ತು ಸಾಹಿತ್ಯ, ನಾಟಕ, ರಂಗಭೂಮಿ ವಿಷಯಗಳು ಚರ್ಚೆಯಾಯಿತು.

(ನಮ್ಮ ಮದುವೆಗೆ ಜಯಂತ್ ಕಾಯ್ಕಿಣಿ ದಂಪತಿಗಳು ಬಂದು ಆಶೀರ್ವಾದಿಸಿದ ಸಂದರ್ಭ)
ಅವರ ಮಾತಿಗೆ ಬಿಡುವು ಸಿಕ್ಕಾಗ ಅವರ ಕಣ್ಣಿಗೆ ನಾನು ಕಂಡೆ, ‘ನೋಡು ಇವರು ಜಯಂತ್ ಕಾಯ್ಕಿಣಿ ಅಂತ ಅದ್ಬುತ ಕವಿಗಳು, ಲೇಖಕರು ಮತ್ತು ಇವರ ತಂದೆ ಗೌರೀಶ್ ಕಾಯ್ಕಿಣಿ, ಅವರು ಕೂಡ ದೊಡ್ಡ ಬರಹಗಾರರು’ ಅಂತ ಅಪ್ಪ ಪರಿಚಯ ಮಾಡಿಕೊಟ್ಟರು. ಆಗ ‘ಮುಂಗಾರು ಮಳೆ’ ಸಿನಿಮಾ ಬಂದಿರಲಿಲ್ಲ ನೋಡಿ, ಹಾಗಾಗಿ ಯಾರು ಜಯಂತ್ ಕಾಯ್ಕಿಣಿ?… ಯಾರು ಗೌರೀಶ್ ಕಾಯ್ಕಿಣಿ….ಅನ್ನೋದು ಗೊತ್ತಿರಲಿಲ್ಲ. ಆಗ ಸಾಹಿತಿಗಳ ಪರಿಚಯ ಆಗುತ್ತಿದ್ದದ್ದೇ ೪೦ ವರ್ಷ ವಯಸ್ಸಾದ್ಮೇಲೆ ಯಾಕೆಂದರೆ ಆಗ ಕಾದಂಬರಿ, ಕತೆ ಪುಸ್ತಕ ಓದೋ ವಯಸ್ಸು ಶುರು ಆಗ್ತಿತ್ತು. ಆಗ ಕಾಲೇಜ್ ಹುಡುಗರೆಲ್ಲ ಕತೆ- ಕಾದಂಬರಿ ಓದೋರು ತುಂಬಾ ಕಮ್ಮಿ ಇದ್ದರು. ಸಿನಿಮಾ ಹುಚ್ಚು ಜಾಸ್ತಿ ಇತ್ತು. ನನಗೇನು ಸಿನಿಮಾ ಹುಚ್ಚು ಇರಲಿಲ್ಲ. ಆದ್ರೆ ಜಯಂತ್ ಕಾಯ್ಕಿಣಿ ಗೊತ್ತಿರಲಿಲ್ಲ.
ನಮಗೆ ಗೊತ್ತಿರಲಿ ಬಿಡಲಿ ಹಿರಿಯರು ಅಂದ್ರೆ ನಮಸ್ತೆ ಹೇಳ್ಬೇಕು… ಚನ್ನಾಗಿ ಇದ್ದೀರಾ… ಅಂತ ನಾಲ್ಕು ಮಾತು ಮಾತಾಡಿಸಬೇಕು … ಇಷ್ಟು ನಮ್ಮ ಅಪ್ಪ ಅಮ್ಮ ನಮಗೆ ಹೇಳಿಕೊಟ್ಟಿದ್ದಾರೆ. ಅವರು ಮಾತಾಡಿಸಿದಾಗ ‘ನಮಸ್ತೆ ಅಂಕಲ್… ಹೇಗಿದ್ದೀರಿ? ಅಂದೇ. ಅವರು ನನ್ನ ಮಾತಿಗೆ ನಗುತ್ತಾ ‘ನಾನು ಅಂಬಿಕಾನಗರಕ್ಕೆ ಬಂದಾಗ ನೀನು ಪುಟ್ಟ ಹುಡುಗಿ, ನನ್ನ ಪರಿಚಯ ನಿನಗೆ ಇರೋಲ್ಲ. ಯಾವ ಕ್ಲಾಸ್ ಲ್ಲಿ ಓದುತ್ತಿದ್ದೀಯಾ?’… ಅಂತ ನನ್ನ ಬಗ್ಗೆ ಎಲ್ಲ ವಿಚಾರಿಸಿದ್ರು ಅವರ ನಗು ಮುಖ ನೋಡಿ ಅವರು ಕೇಳಿದ್ದಕ್ಕೆಲ್ಲ ಉತ್ತರ ಕೊಟ್ಟು ‘ಅಂಕಲ್ ಮನೆಗೆ ಬನ್ನಿ ಮಾತಾಡೋಣ’ ಅಂದೇ. ಅವರು ‘ನಾನು ಇಲ್ಲೇ ಕುಮಾರಸ್ವಾಮಿ ಲೇಔಟ್ ನಲ್ಲಿರೋದು ಹೂಲಿ, ಹತ್ತಿರದಲ್ಲಿ ಇದ್ದೀವಿ ಒಮ್ಮೆ ಮನೆಗೆ ಬರ್ತೀನಿ ಅಂತ ಮಾತನಾಡಿ. ‘ಹೂಲಿ… ಮತ್ತೆ ಸಿಗ್ತೀನಿ. ಪುಟ್ಟಾ… ಬರ್ತೀನಿ’ ಅಂತ ನನಗೆ ಟಾಟಾ ಮಾಡಿ ಹೊರಟರು.

ಅವರು ಹೋದ್ಮೇಲೆ ಅಪ್ಪ ಜಯಂತ್ ತುಂಬಾ ಚಿಕ್ಕ ವಯಸ್ಸಿನಿಂದಲೂ ಬರೀತ್ತಿದ್ದಾರೆ. ಒಳ್ಳೆ ಬರಹಗಾರ, ಅವರ ತಂದೆಯನ್ನು ಮೀರಿಸುವ ಶಕ್ತಿ ಅವರಲ್ಲಿದೆ. ತುಂಬಾ ಸರಳ ವ್ಯಕ್ತಿ, ಈಗ zee ಕನ್ನಡ ವಾಹಿನಿಯಲ್ಲಿ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ ಅಂತೇ ಅಂತ ಅಪ್ಪ ಅವರ ಕಿರು ಪರಿಚಯ ಮತ್ತೊಮ್ಮೆ ಮಾಡಿದರು.
ಇದು ನನ್ನ ಹಾಗೂ ಜಯಂತ್ ಕಾಯ್ಕಿಣಿ ಅಂಕಲ್ ಮೊದಲ ಭೇಟಿಯಾಗಿತ್ತು. ಯಾವಾಗ ‘ಮುಂಗಾರು ಮಳೆ’ ಬಂತೋ ಜಯಂತ್ ಅಂಕಲ್ ಮನೆ ಮನೆಗೂ ತಲುಪಿ ಬಿಟ್ಟರು. ಆಗ ಜಯಂತ್ ಅಂಕಲ್ ಹೋಗಿ, ಜಯಂತ ಸರ್ ಅಂತ ಕರಿಬೇಕಾ? ಅನ್ನೋ ಗೊಂದಲಗಳು ನನ್ನಲ್ಲಿ ಶುರು ಆಯ್ತು. ಮುಂಗಾರು ಮಳೆ ಬರುವ ಮೊದಲೇ ಅವರು ಹೆಸರಾಂತ ಕವಿಯಾಗಿದ್ದರೂ, ಅವರ ಪ್ರತಿಭೆಯನ್ನು ನಾನು ಅರ್ಥ ಮಾಡಿಕೊಳ್ಳಲು ಮುಂಗಾರು ಮಳೆ ಸಿನಿಮಾ ಬರಬೇಕಾಯಿತಾ? ಅನ್ನೋ ಪಾಪ ಪ್ರಜ್ಞೆ ನನ್ನಲ್ಲಿ ತುಂಬಾ ದಿನ ಕಾಡಿತು. ಈ ತರ ಗೋಪಾಲ ವಾಜಪೇಯಿ ಅಂಕಲ್ ವಿಷಯದಲ್ಲಿಯೂ ಆಗಿತ್ತು. ಅವರು ನಮಗೆ ತುಂಬಾ ಆತ್ಮೀಯರಾದರೂ ಅವರ ಪ್ರತಿಭೆ ಗುರುತಿಸಲು ‘ನಾಗಮಂಡಲ’ ದ ‘ಕಂಬದಾ ಮ್ಯಾಲಿನ ಗೊಂಬಿಯೇ’… ಹಾಡು ಬರಬೇಕಾಯಿತು. ಹೀಗೆ ತುಂಬಾ ಸರಿ ಈ ರೀತಿ ನನಗೆ ನಾನೆ ಮುಜುಗುರಕ್ಕೆ ಒಳ ಪಟ್ಟಿದ್ದೇನೆ. ಇಲ್ಲ… ನಾನು ಕನ್ನಡದ ಕವಿಗಳನ್ನ, ಲೇಖಕರನ್ನ ಸರಿಯಾಗಿ ಅರ್ಥಮಾಡ್ಕೊಬೇಕು, ಗೌರವಿಸಬೇಕು ಎಂದರೆ ಹೆಚ್ಚು ಹೆಚ್ಚು ಪುಸ್ತಕಗಳನ್ನ ಓದಬೇಕು ಎಂದು ಓದಲು ಶುರು ಮಾಡಿದೆ. ಹೀಗೆ ಶುರುವಾದ ನನ್ನ ಹಾಗೂ ಪುಸ್ತಕದ ನಡುವಿನ ನಂಟಿಗೆ ಜಯಂತ್ ಕಾಯ್ಕಿಣಿ ಸರ್ ನಂತಹ ಅನೇಕ ಲೇಖಕರು ಕಾರಣರಾಗಿದ್ದಾರೆ.

ಮುಂದೆ ಜಯಂತ್ ಸರ್ ದಂಪತಿಗಳು ನಮ್ಮ ಮದುವೆಗೆ ಬಂದು ಇಡಗುಂಜಿ ಗಣೇಶನ ಮೂರ್ತಿ ಕೊಟ್ಟು ನನ್ನ ಹಾಗೂ ಪದ್ದಣ್ಣನ ಆಶೀರ್ವಾದಿಸಿದ್ದರು. ಹೀಗೆ ಅವರೊಂದಿಗಿನ ಒಡನಾಟ ಮುಂದೊರೆಯಿತು. ಎಷ್ಟೋ ಸಮಯದಲ್ಲಿ ಶಂಖದಲ್ಲಿ ಬಂದ್ರೆ ಮಾತ್ರ ತೀರ್ಥ ಅನ್ಕೊಂತೀವಿ, ಅದೇ ತರ ಸಿನಿಮಾದಲ್ಲಿ ಬಂದ್ರೆ ಮಾತ್ರ ಪ್ರತಿಭಾನ್ವಿತರು ಅನ್ನೋ ಹುಚ್ಚು ಭ್ರಮೆಯಲ್ಲಿರುತ್ತೇವೆ ಅನ್ನೋಕೆ ಇದೊಂದು ಪುಟ್ಟ ನನ್ನ ಅನುಭವದ ಕತೆ ಹೇಳಿದೆ. ಈ ಕತೆಗೂ ಗೋಕರ್ಣಕ್ಕೂ ಏನು ಲಿಂಕ್ ಇದೆ ಅಂತ ನೋಡಿದ್ರೆ ತುಂಬಾ ಲಿಂಕ್ ಇದೆ.
ಗೋಕರ್ಣದಲ್ಲಿ ಮಹಾಬಲೇಶ್ವರ ದೇವಸ್ಥಾನದ ದಾಟಿ ಸ್ವಲ್ಪ ಮುಂದೆ ಬಂದರೆ ಅಲ್ಲಿ ದೊಡ್ಡ ಅಕ್ಷರದಲ್ಲಿ ‘ಗೌರೀಶ್ ಕಾಯ್ಕಿಣಿ ಓಣಿ’ ಫಲಕ ಕಣ್ಣಿಗೆ ಬೀಳುತ್ತದೆ. ಅದು ಹೆಸರಾಂತ ಲೇಖಕ ಗೌರೀಶ ಕಾಯ್ಕಿಣಿ ಅವರ ಮನೆಗೆ ಹೋಗುವ ದಾರಿ ಮತ್ತು ಜಯಂತ್ ಕಾಯ್ಕಿಣಿ ಅವರು ಹುಟ್ಟಿದ ಮನೆ ಅಲ್ಲಿದೆ. ನಾನು ಅಲ್ಲಿ ಹಾಕಿದ್ದ ಫಲಕದ ಮುಂದೆ ನಿಂತು ಸೆಲ್ಫಿ ತಗದೆಕೊಳ್ಳುತ್ತಿದ್ದೆ. ಅಲ್ಲೇ ಕಟ್ಟೆಗೆ ಸುಸ್ತಾಗಿ ಕೂತಿದ್ದ ಪ್ರವಾಸಿ ಹೆಣ್ಣು ಮಕ್ಕಳು ನನ್ನ ನೋಡಿ ಇದೇನ್ ಹುಚ್ಚ ಐತಿ ಎಲ್ರು ಬೀಚ್ , ದೇವಸ್ಥಾನ ಅಂತ ಫೋಟೋ ತಕ್ಕೊಂಡ್ರೆ ಇದು ಯಾವದೋ ಬೋರ್ಡ್ ಮುಂದೆ ತಕ್ಕೊಳಕ್ಕತ್ತೈತಿ’… ಅನ್ನೋ ರೀತಿಯಲ್ಲಿ ಆ ಹೆಣ್ಣುಮಕ್ಕಳ ನೋಡುವ ನೋಟದಲ್ಲಿತ್ತು. ಆದ್ರೂ ಕತ್ತೆಗೇನು ಗೊತ್ತು, ಕಸ್ತೂರಿ ವಾಸನೆ… ಅಂತಾರಲ್ಲ ಹಾಗೆ ಕನ್ನಡಿಗರ ಹೆಮ್ಮೆಯ ನಿಧಿ ಸಿಕ್ಕಿದ್ದು ಇದೆ ಗೋಕರ್ಣದಲ್ಲಿ ಅನ್ನೋದು ಅವರಿಗೇನು ಗೊತ್ತು ಅಂತ ನನ್ನ ಪಾಡಿಗೆ ನಾನು ಫೋಟೋ ತಕ್ಕೊಂಡು. ಜಯಂತ ಕಾಯ್ಕಿಣಿ ಅವರು ಹುಟ್ಟಿದ ಮನೆಯನ್ನು ಹುಡುಕುತ್ತಾ ಆ ಓಣಿಯೊಳಗೆ ಹೊರಟೆ. ಕಿರಿದಾದ ದಾರಿ ಇತ್ತು. ಆದ್ರೂ ಅವರ ಮನೆ ನೋಡಲೇ ಬೇಕು ಅನ್ನೋ ಉತ್ಸಾಹ. ಮಕ್ಕಳಿಗೆ ಈ ದಾರಿ ಮುಂಗಾರು ಮಳೆ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಮನೆಗೆ ಹೋಗುತ್ತೆ… ಶಾಲೆಯಲ್ಲಿ ರಜೆಗೆ ಎಲ್ಲಿಗೆ ಹೋಗಿದ್ರಿ ಅಂದ್ರೆ ಟೀಚರ್ ಗೆ ಹೇಳು ಖ್ಯಾತ ಕವಿ ಜಯಂತ್ ಕಾಯ್ಕಿಣಿ ಅವರ ಮನೆಗೆ ಹೋಗಿದ್ವಿ… ಅಂತ ಹೇಳು ಎಂದು ಅವರನ್ನು ಹುರುದುಂಬಿಸಿದೆ.

ಮಕ್ಕಳಿಗೆ ಆಗ ಉತ್ಸಾಹ, ಕುತೂಹಲ ಹೆಚ್ಚಾಗಿ ಅವರು ಮುಂದೆ ಮುಂದೆ ಹೆಜ್ಜೆ ಹಾಕುತ್ತಾ ನಡೆದರು. ಆ ಓಣಿ ಸಮುದ್ರದ ತೀರಕ್ಕೆ ಕೊಂಡೊಯ್ಯಿತು. ಆದರೆ ನಮಗೆ ಮನೆ ಕಾಣಲಿಲ್ಲ. ಅಲ್ಲೇ ಶರ್ಟ್ ಇಲ್ಲದೆ ಹೊಟ್ಟೆ ಬಿಟ್ಕೊಂಡು ನಿಂತಿದ್ದ ನಡು ವಯಸ್ಸಿನ ವ್ಯಕ್ತಿಯನ್ನು ಜಯಂತ್ ಕಾಯ್ಕಿಣಿ ಅವರ ಮನೆ ಯಾವುದು ಎಂದು ಕೇಳಿದೆ. ಅವನು ನಗುತ್ತಾ ಮನೆ ಮುಂದೆ ನಿಂತು ಯಾವ ಮನೆ ಅಂತಿಯಲ್ಲಮ್ಮಾ… ಇದೆ ಮನೆ… ಎಂದು ನಮ್ಮ ಎದುರಿಗಿದ್ದ ಮನೆ ತೋರಿಸಿದ. ಮನೆ ಸಮುದ್ರದಂತೆ ವಿಶಾಲವಾಗಿತ್ತು. ಬಾಗಿಲ ಪಕ್ಕದಲ್ಲಿ ಚಿಕ್ಕದಾಗಿ ಗೌರೀಶ್ ಕಾಯ್ಕಿಣಿ ಎನ್ನುವ ನಾಮಫಲಕವಿತ್ತು, ಸಮುದ್ರದ ಅಲೆಗಳು,ಮಣಿಭದ್ರ ದೇವಸ್ಥಾನ ಅಪ್ಪ ಮಗನಿಗೆ ಸಾಹಿತ್ಯಕ್ಕೆ ಸ್ಫೂರ್ತಿ ನೀಡಿರಬಹುದು ಅನ್ನೋದು ಸಮುದ್ರ ತೀರದಲ್ಲಿದ್ದ ಅವರ ಮನೆ ನೋಡಿ ಅನಿಸಿತು.

ಸ್ವಲ್ಪ ವರ್ಷದ ಹಿಂದೆ ಜಯಂತ ಸರ್ ತಾಯಿ ಅದೇ ಮನೆಯಲ್ಲಿ ಇಹಲೋಕ ತ್ಯೆಜಿಸಿದರು ಎಂದು ಕೇಳಿದ್ದೆ. ಹಾಗಾಗಿ ಮನೆ ಬಣ್ಣ ಮಾಸಿ, ಕಸ ತುಂಬಿ ಬಿಕೋ ಅನ್ನುತಿದೆ. ಮನೆ ಪಕ್ಕದಲ್ಲಿ ಪುಟ್ಟದಾದ ಬಾವಿ ಇದೆ. ಮನೆ ಸುತ್ತ ಒಂದು ಇನ್ಸ್ಪೆಕ್ಷನ್ ಮಾಡಿ, ಫೋಟೋ ತಗೆದುಕೊಂಡೆ.
ಗೋಕರ್ಣದಲ್ಲಿ ಈಗ ಬೀಚ್, ದೇವಸ್ಥಾನಗಳು ಮಾತ್ರ ಗಮನ ಸೆಳೆಯುತ್ತಿಲ್ಲ . ಗೌರೀಶ ಕಾಯ್ಕಿಣಿ ಮತ್ತು ಜಯಂತ ಕಾಯ್ಕಿಣಿಯಂತ ದೊಡ್ಡ ಲೇಖಕರು ಓಡಾಡಿದ ಮನೆಯು ಕೂಡ ಪ್ರವಾಸಿಗರ ಗಮನ ಸೆಳೆಯುತ್ತಿದೆ ಎಂದರೆ ತಪ್ಪಲ್ಲ. ಕನ್ನಡ ಸಾಹಿತ್ಯಲೋಕಕ್ಕೆ ಅವರ ಕೊಡುಗೆ ಅಪಾರ. ಅವರ ಮನೆಯತ್ತ ಸರ್ಕಾರ ಹಾಗೂ ಸ್ಥಳೀಯರು ಗಮನ ಹರಿಸಿದರೆ ಮತ್ತೊಂದು ಶ್ರೀಶೈಲ ಗೋಕರ್ಣದಲ್ಲಿ ಕಾಣಬಹುದು.
ಪ್ರವಾಸ ಇನ್ನೂ ಮುಗಿದಿಲ್ಲ…
- ಶಾಲಿನಿ ಹೂಲಿ ಪ್ರದೀಪ್
