ಸಮಸ್ತ ನಾಡಿನ ಜನತೆಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ಹೇಳುತ್ತಾ ಕವಿ ಪದ್ಮನಾಭ ಡಿ. ಅವರು ಬರೆದ ಗೌರಿಯ ಮೇಲಿನ ಒಂದು ಕವನ ಓದುಗರ ಮುಂದೆ…
ಶರಣೆಂಬೆ ಶಿವಸತಿಗೆ ಶರಣೆಂಬೆ ಗಿರಿಸುತೆಗೆ
ಶರಣೆಂಬೆ ಪಾರ್ವತಿಗೆ ಜಗದಾದಿ ಮಾತೆಗೆ//
ಭಾದ್ರಪದ ಶುಕ್ಲದ ತದಿಗೆಯ ದಿನದಂದು
ಕಾದಿರುವೆ ಭಕುತಿಯಲಿ ನಿನ್ನ ಪೂಜಿಸಲೆಂದು
ನವವಿಧದ ರಂಗೋಲಿ ಹಾಕಿ ಬಾಗಿಲಲಿ
ತೋರಣವ ಕಟ್ಟಿರುವೆ ನಿನ್ನ ಸ್ವಾಗತಕೆಂದೆ//
ಮರುಗ ಮಲ್ಲಿಗೆ ಜಾಜಿ ಸೇವಂತಿ ಕಣಗಲೆ
ಅರ್ಪಿಸುವೆ ಭಕ್ತಿಯಲಿ ಮೆನಕಾತ್ಮಜೆಯೇ
ಹದಿನಾರು ಗ್ರಂಥಿಗಳ ಹದಿನಾರು ಎಳೆಗಳ
ದಾರವ ಮುಂದಿರಿಸಿ ಪ್ರಾರ್ಥಿಸುವೆ ತಾಯೇ//
ಕಂಚುಕವು ಕುಂಕುಮ ಸಿಂಧೂರ ಅರಿಶಿನವು
ಗಂಧಾಕ್ಷತೆಯೊಡನೆ ತಾಟಂಕ ಕಜ್ಜಲವು
ನಾರಿಕೇಳ ಕದಳೀ ವಿಧವಿಧದ ಭಕ್ಷ್ಯಗಳ
ಸ್ವೀಕರಿಸಿ ನೀ ಹರಸು ನಿನ್ನ ಮಕ್ಕಳ ತಾಯೇ//
ಆರತಿಯ ಬೆಳಗಿರಲು ಘಂಟೆಗಳು ಮೊಳಗಿರಲು
ಆನಂದಭಾಷ್ಪಗಳು ನಿನ್ನ ಪಾದವ ತೊಳೆಯೇ
ಭಕ್ತಿಭಾವದಿ ಮಿಂದು ಧನ್ಯನಾದೆನು ಇಂದು
ಕರುಣೆಯಲಿ ಕೈಹಿಡಿದು ನಡೆಸೆಮ್ಮ ತಾಯೇ//
- ಪದ್ಮನಾಭ ಡಿ. ( ನಿವೃತ್ತ ಪೋಸ್ಟ್ ಮಾಸ್ಟರ್, ಸಾಹಿತ್ಯ ಕೃತಿಗಳು : ಸಂತೋಷ-ಸಂದೇಶ ಕವನ ಸಂಕಲನ – 2018, ಭಾವಲಹರಿ ಕವನಸಂಕಲನ -2018, ಹೂಬನ ಕವನಸಂಕಲನ – 2019, ಭಾವಸರಿತೆ – ಕಥಾ ಸಂಕಲನ – 2020, ರಾಜ್ಯ ಮಟ್ಟದ ಸಾಹಿತ್ಯ ಚಿಗುರು ಪ್ರಶಸ್ತಿ, ಪ್ರೇಮಕ್ಕೆ ಜಯ ಕಾದಂಬರಿ – 2021, ತರಂಗಿಣಿ – ಕವನಸಂಕಲನ– 2022 ಕವಿಗಳು, ಲೇಖಕರು) ಮೈಸೂರು.
