‘ಶಿವಸತಿ ಗೌರಿ’ ಕವನ -ಪದ್ಮನಾಭ ಡಿ.

ಸಮಸ್ತ ನಾಡಿನ ಜನತೆಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ಹೇಳುತ್ತಾ ಕವಿ ಪದ್ಮನಾಭ ಡಿ. ಅವರು ಬರೆದ ಗೌರಿಯ ಮೇಲಿನ ಒಂದು ಕವನ ಓದುಗರ ಮುಂದೆ…

ಶರಣೆಂಬೆ ಶಿವಸತಿಗೆ ಶರಣೆಂಬೆ ಗಿರಿಸುತೆಗೆ
ಶರಣೆಂಬೆ ಪಾರ್ವತಿಗೆ ಜಗದಾದಿ ಮಾತೆಗೆ//

ಭಾದ್ರಪದ ಶುಕ್ಲದ ತದಿಗೆಯ ದಿನದಂದು
ಕಾದಿರುವೆ ಭಕುತಿಯಲಿ ನಿನ್ನ ಪೂಜಿಸಲೆಂದು
ನವವಿಧದ ರಂಗೋಲಿ ಹಾಕಿ ಬಾಗಿಲಲಿ
ತೋರಣವ ಕಟ್ಟಿರುವೆ ನಿನ್ನ ಸ್ವಾಗತಕೆಂದೆ//

ಮರುಗ ಮಲ್ಲಿಗೆ ಜಾಜಿ ಸೇವಂತಿ ಕಣಗಲೆ
ಅರ್ಪಿಸುವೆ ಭಕ್ತಿಯಲಿ ಮೆನಕಾತ್ಮಜೆಯೇ
ಹದಿನಾರು ಗ್ರಂಥಿಗಳ ಹದಿನಾರು ಎಳೆಗಳ
ದಾರವ ಮುಂದಿರಿಸಿ ಪ್ರಾರ್ಥಿಸುವೆ ತಾಯೇ//

ಕಂಚುಕವು ಕುಂಕುಮ ಸಿಂಧೂರ ಅರಿಶಿನವು
ಗಂಧಾಕ್ಷತೆಯೊಡನೆ ತಾಟಂಕ ಕಜ್ಜಲವು
ನಾರಿಕೇಳ ಕದಳೀ ವಿಧವಿಧದ ಭಕ್ಷ್ಯಗಳ
ಸ್ವೀಕರಿಸಿ ನೀ ಹರಸು ನಿನ್ನ ಮಕ್ಕಳ ತಾಯೇ//

ಆರತಿಯ ಬೆಳಗಿರಲು ಘಂಟೆಗಳು ಮೊಳಗಿರಲು
ಆನಂದಭಾಷ್ಪಗಳು ನಿನ್ನ ಪಾದವ ತೊಳೆಯೇ
ಭಕ್ತಿಭಾವದಿ ಮಿಂದು ಧನ್ಯನಾದೆನು ಇಂದು
ಕರುಣೆಯಲಿ ಕೈಹಿಡಿದು ನಡೆಸೆಮ್ಮ ತಾಯೇ//


  • ಪದ್ಮನಾಭ ಡಿ.  ( ನಿವೃತ್ತ ಪೋಸ್ಟ್ ಮಾಸ್ಟರ್,  ಸಾಹಿತ್ಯ ಕೃತಿಗಳು : ಸಂತೋಷ-ಸಂದೇಶ ಕವನ ಸಂಕಲನ – 2018, ಭಾವಲಹರಿ ಕವನಸಂಕಲನ -2018,  ಹೂಬನ ಕವನಸಂಕಲನ – 2019, ಭಾವಸರಿತೆ – ಕಥಾ ಸಂಕಲನ – 2020, ರಾಜ್ಯ ಮಟ್ಟದ ಸಾಹಿತ್ಯ ಚಿಗುರು ಪ್ರಶಸ್ತಿ, ಪ್ರೇಮಕ್ಕೆ ಜಯ ಕಾದಂಬರಿ – 2021, ತರಂಗಿಣಿ – ಕವನಸಂಕಲನ– 2022 ಕವಿಗಳು, ಲೇಖಕರು) ಮೈಸೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW