ದೈವಿಕ ಶಕ್ತಿ ‘ಗುಡ್ಡಾಪುರದ ದಾನಮ್ಮ’ ದೇವಾಲಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿದ್ದರೂ ಕೂಡಾ ಕರ್ನಾಟಕದಲ್ಲೂ ಹೆಸರುವಾಸಿಯಾಗಿದೆ. ಭಕ್ತಾದಿಗಳು ಅಮ್ಮನ ಆಶೀರ್ವಾದ ಪಡೆಯಲು ದೂರ ದೂರದಿಂದ ಬರುತ್ತಾರೆ. ಆದರೆ ಗುಡ್ಡಾಪುರಕ್ಕೆ ಸರಿಯಾದ ಬಸ್ ವ್ಯವಸ್ಥೆಗಳಿಲ್ಲದಿರುವುದು ಭಕ್ತಾದಿಗಳ ಅಳಲು, ಸಂಬಂಧಪಟ್ಟ ಅಧಿಕಾರಿಗಳು ಇದರತ್ತ ಗಮನ ಹರಿಸಿದರೆ ಭಕ್ತರು ನೆಮ್ಮದಿಯಿಂದ ಅಮ್ಮನ ದರ್ಶನ ಪಡೆಯುತ್ತಾರೆ ಎನ್ನುತ್ತಾರೆ ಲೇಖಕಿ ರೇಶ್ಮಾಗುಳೇದಗುಡ್ಡಾಕರ್ ಅವರು, ಇತ್ತೀಚಿಗೆ ಅಮ್ಮನ ದರ್ಶನ ಪಡೆದು ಬರೆದಿರುವಂತಹ ಲೇಖನವಿದು, ಮುಂದೆ ಓದಿ…
ಕಪ್ಪು ನೆಲದ ಹೆಸರಾಂತ ದೈವಿಕ ಸ್ಥಳ ಗುಡ್ಡಾಪುರದ ದಾನಮ್ಮ ದೇವಾಲಯ ಗಡಿನಾಡದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ್ ತಾಲೂಕಿನ ಗುಡ್ಡಾಪುರ ಕರ್ನಾಟಕದಲ್ಲೂ ಬಹು ಪ್ರಸಿದ್ಧಿ. ವಿಜಯಪುರ ( ಬಿಜಾಪುರ) ದಿಂದ 66 ಕಿ.ಮೀ ದೂರದಲ್ಲಿದೆ ನೆರೆಯ ಮಹಾರಾಷ್ಟ್ರ ಹಾಗೂ ನಮ್ಮ ರಾಜ್ಯದ ಬಸ್ ಸೌಲಭ್ಯವಿದೆ.

ಫೋಟೋ ಕೃಪೆ : wikipedia
ಗಡಿನಾಡ ದೇವತೆಯ ದೇವಾಯದ ಫಲಕಗಳು ಕನ್ನಡದಲ್ಲಿ ಇದ್ದು ಕನ್ನಡದ ಹಾಡುಗಳೇ ದೇವಾಲಯದಲ್ಲಿ ಕೇಳಿ ಬರುತ್ತದೆ. ಅರ್ಚಕರು ಸಹ ಶುದ್ದ ಕನ್ನಡದಲ್ಲಿ ಉತ್ತರಿಸುತ್ತಾರೆ!. ಕನ್ನಡದ ಕಂಪು ಎಲ್ಲೆಡೆಯು ಹಬ್ಬಿ ಸಂಕುಚಿತ ಭಾವವಗಳ ಕಿತ್ತೊಗೆದಿದೆ. ವಿಜಯಪುರ ಪ್ರತಿ ಮನೆ ಮನೆಗಳಲ್ಲಿ ದಾನಮ್ಮನ ಫೋಟೋ ಅಗ್ರಸ್ಥಾನ ಪಡೆದಿದೆ. ಇನ್ನೂ ಗಡಿ ಭಾಗದ ರೈತಾಪಿ ಜನರ ಆರಾಧ್ಯ ದೈವ ಗುಡ್ಡಾಪುರ ದ ಶ್ರೀ ದಾನಮ್ಮ. ಮಮಕಾರದ ನಂಬಿಕೆಯ ಪ್ರತೀಕವು ಹೌದು.
ಗುಡ್ಡಾಪುರದ ದಾನಮ್ಮ ದೇವಿಯ ವಿವಿಧ ಅಲಂಕಾರಗಳನ್ನು ನೋಡಬಹುದು :
ಫೋಟೋ ಕೃಪೆ : facebook
ಅಣ್ಣ ಬಸಸವಣ್ಣರ ಸಮಕಾಲೀನರಾದ ಶರಣೆ ದಾನಮ್ಮ ಹಸಿವು ಮತ್ತು ಬರಗಾಲವನ್ನು ನೀಗಿಸುವ ಸಲುವಾಗಿ ಅವತರಿಸಿದರು ಎಂದು ಇತಿಹಾಸ ಹೇಳುತ್ತದೆ. ಇಂದಿಗೂ ಜನಾಮಾನಸವು ಆಕೆಯ ಆರಾಧಿಸುತ್ತಾರೆ. ಇಷ್ಟಾರ್ಥ ಸಿದ್ಧಿಯಾಗುವಂತೆ ಬೇಡಿ ಪುನೀತರಾಗುತ್ತಾರೆ. ಹೆಂಗಳೆಯರೇ ಹೆಚ್ಚಾಗಿ ದಾನಮ್ಮನ ಭಕ್ತರು ಸ್ವಾಲಂಬನೆಯ ಬದುಕಿಗೆ ನೆಮ್ಮದಿಯ ನೆರಳಿಗೆ ದಾನಮ್ಮನ ಕೃಪೆ ಅಪಾರ ಎನ್ನುತ್ತಾರೆ ಮಹಿಳಾ ಭಕ್ತಾದಿದಗಳು. ಹಾಗೆಂದು ಪುರಷರು ಬರುವದಿಲ್ಲ ಎಂಬುವದು ಇಲ್ಲ. ವಿವಾಹ, ಸಂತಾನ , ಬೆಳೆ ಮುಂತಾದ ಸಮಸ್ಯೆಗಳನ್ನು ಹೊತ್ತು ಬರುವ ಭಕ್ತರು ಅಮ್ಮನ ದರ್ಶನದಿಂದ ಪರಿಹಾರ ಪಡೆದು ಉಡಿತುಂಬುವದರ ಮೂಲಕ ಹರಕೆ ಅರ್ಪಿಸುತ್ತಾರೆ.

ಫೋಟೋ ಕೃಪೆ : wikipedia
ಮಧ್ಯಾಹ್ನ 12 ಕ್ಕೆ ಆರಂಭವಾಗುವ ಮಹಾ ಮಂಗಳಾರತಿ ನಂತರ ದೇವಿಯ ದರ್ಶನಕ್ಕೆ ಅವಕಾಶ. ಅಲಂಕಾರ ಭರಿತಳಾಗಿ ಕಂಗೊಳಿಸುವ ದೇವಿಯ ನೋಡಲು ಕಾತರಿಸುವ ಜನಸಾಗರ ನಿತ್ಯವು ಹಬ್ಬದಂತೆ ಅಲ್ಲಿನ ವಾತವರಣವ ಸಿಂಗರಿಸಿದೆ. ಮಧ್ಯಾಹ್ನ 12 ಕ್ಕೆ ಆರಂಭವಾಗುವ ಪ್ರಸಾದ ಗೋಧಿ ಹುಗ್ಗಿ, ಕೆಲವೊಮ್ಮೆ ಸಜ್ಜಕ, ಚಪಾತಿ ಪಲ್ಯ ಹೀಗೆ ರುಚಿಕರವಾಗಿ ಭಕ್ತರ ಹಸಿವನ್ನು ತೀರಿಸಲು ನೆರವಾಗುತ್ತದೆ . ವಾಸ್ತವ್ಯ ಉಳಿಯಲು ಭಕ್ತರಿಗೆ ಕೊಠಡಿಗಳು ಸಹ ಲಭ್ಯವಿದೆ.
ಕರೊನಾದ ಕರಿನೆರಳು ಕರಗಿ ಮತ್ತೆ ದೇವಾಲಯ ಭಕ್ತರಿಗೆ ದರ್ಶನವನ್ನು ನೀಡುತ್ತಿದೆ. ಬೆಳಗಾವಿ, ಸಾಂಗ್ಲಿ, ವಿಜಯಪುರಗಳಿಂದ ಬಸ್ ಗಳ ವ್ಯವಸ್ಥೆ ಇದೆಯಾದರೂ ಸರಿಯಾದ ಸಮಯಕ್ಕೆ ಬರುವುದಿಲ್ಲ ಎಂಬುದೇ ಭಕ್ತರ ಅಳಲು. ದೂರ ಊರುಗಳಿಂದ ಬರುವ ಭಕ್ತರಿಗೆ ಅಪಾರ ತೊಂದರೆ ಇದೆ. ಇದನ್ನು ಜಿಲ್ಲಾಡಳಿತ ಗಮನಿಸಿ ನೇರವಾಗ ಬೇಕು. ಅಗ ಮತ್ತಷ್ಟು ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿ ದೇವ ಕೃಪೆ ಪಡೆಯುತ್ತಾರೆ.
- ರೇಶ್ಮಾಗುಳೇದಗುಡ್ಡಾಕರ್ (ಯುವ ಬರಹಗಾರ್ತಿ, ಕವಿಯತ್ರಿ) ಕೊಟ್ಟೂರು.