ಕತ್ತಲೆಯ ಬದುಕಿಗೆ ಜ್ಞಾನದ ಬೆಳಕನ್ನು ಮೂಡಿಸಿ, ನಮ್ಮ ನಾಳೆಗಳನ್ನು ಕಟ್ಟಿಕೊಳ್ಳಲು ನಮ್ಮನ್ನು ಪ್ರತಿ ಕ್ಷಣವೂ ಪ್ರೋತ್ಸಾಹಿಸಿ, ಸೋತಾಗ ಸಂತೈಸುತ, ಗೆದ್ದಾಗ ಸಂಭ್ರಮಿಸುತ್ತ, ಹೆಜ್ಜೆ ಹೆಜ್ಜೆಗೂ ನಮಗೆ ಸ್ಫೂರ್ತಿಯಾಗಿ, ಬದುಕಿನ ಅನಿರೀಕ್ಷಿತ ತಿರುವುಗಳಲ್ಲಿ ದಾರಿ ತೋರುವ ದಿಕ್ಸೂಚಿಯಾಗಿ, ನೆರಳಂತೆ ಜೊತೆಗಿದ್ದು ಕಾಯುವ ಜೀವ, ಏನನ್ನು ಅಪೇಕ್ಷಿಸದೆ ಮನಸಾರೆ ಹರಸುವ ದೈವವೇ ಗುರುವು. ಗುರು ಪೂರ್ಣಿಮೆಗೆ ಎಲ್ಲ ಗುರುವರ್ಯರಿಗೂ ಶುಭಾಶಯಗಳನ್ನು ಕೋರುತ್ತಾ ಲೇಖಕ ಎಸ್.ಸಂತೋಷ ಕುಮಾರ ಅವರು ಗುರುಗಳಿಗಾಗಿ ಬರೆದ ಈ ಲೇಖನವನ್ನು ತಪ್ಪದೆ ಓದಿ…
ಹರ ಮುನಿದರೆ ಗುರು ಕಾಯುವ ಎನ್ನುವ ಹಿರಿಯರ ನುಡಿಯಂತೆ, “#ಗುರು” ಅನ್ನೋ ಎರಡಕ್ಷರಕ್ಕೆ ನಮ್ಮ ಇಡೀ ಬದುಕನ್ನು ಬದಲಾಯಿಸುವ ಮಹಾಶಕ್ತಿ ಇದೆ. ಭಕ್ತಿಯಿಂದ ನಾವು ಮನಸಾರೆ ಆರಾಧಿಸಿ ಮುನ್ನಡೆಯಬೇಕಷ್ಟೇ.
ಮೊದಲ ಗುರುವಾಗಿ ತಾಯಿಯು, ತಿದ್ದಿ ಬುದ್ಧಿ ಹೇಳುವ ಗುರುವಾಗಿ ತಂದೆಯು, ಅಕ್ಷರದ ಜ್ಞಾನವ ನೀಡುವ ಶಿಕ್ಷಕರು, ಬದುಕಿನ ಅನುಭವದಿಂದ ದಾರಿ ತೋರುವ ಹಿರಿಯರು, ಬದುಕಿನ ಪ್ರತಿ ಕ್ಷಣವೂ ಒಂದೊಂದು ತಿರುವುಗಳನ್ನು ನೀಡುತ್ತಾ, ಪ್ರತಿ ತಿರುವುಗಳಲ್ಲಿ ಹಲವಾರು ಅನುಭವಗಳನ್ನು ಕೊಡುತ್ತಾ, ಪ್ರತಿ ಅನುಭವಗಳಿಂದಲು ಏನಾದರೊಂದು ಕಲಿಸುತ್ತಾ, ನಮ್ಮ ಬದಲಾವಣೆಗೆ ಕಾರಣವಾಗುವ ಕಾಲವು ಒಬ್ಬ ಅದ್ಭುತ ಗುರುವು. ಹೀಗೆ ಹುಟ್ಟಿದ ಮೊದಲ ಕ್ಷಣದಿಂದ, ಉಸಿರಿನ ಕೊನೆ ಕ್ಷಣಗಳವರೆಗೂ, ಒಂದಲ್ಲ ಒಂದು ರೀತಿಯ ಕಲಿಕೆಯಲ್ಲಿಯೇ ನಮ್ಮ ಬದುಕು ಸಾಗುವುದು.
ಬದುಕಿನ ಹಲವು ಮಜಲುಗಳಲ್ಲಿ ಗುರುವು ಎನ್ನುವ ದೈವವು ನಮ್ಮ ನಾಳೆಯ ಬದುಕಿಗೆ ಮುನ್ನುಡಿ ಬರೆದು ನಮ್ಮನ್ನು ಸಾಧನೆಯ ದಾರಿಯಲ್ಲಿ ಮುನ್ನಡೆಸುವರು.
“ಗುರುವಿನ ಗುಲಾನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ನಾಣ್ಣುಡಿಯಂತೆ, ಗುರುವನ್ನು ನಾವು ಮನಸಾರೆ ಆರಾಧಿಸಿ ಗೌರವಿಸಬೇಕು, ಆಗಲೇ ನಮಗೆ ಸಾಧನೆಯ ಹಾದಿಯಲೀ ಸರಾಗವಾಗಿ ಸಾಗಲು ಸಾಧ್ಯ ಮತ್ತು ದೂರದ ಗೆಲುವಿನ ತೀರವನು ಸೇರಲು ಸಾಧ್ಯ.

ಫೋಟೋ ಕೃಪೆ : commons.wikimedia
ಯುಗ ಯುಗಗಳಿಂದಲು ಗುರುವಿನ ಆರಾಧನೆ, ಗುರುವಿನ ಮಹಿಮೆ, ಗುರುವಿನ ಅನುಗ್ರಹದಿಂದ ಬದುಕಿನ ಸಾಕ್ಷಾತ್ಕಾರಗಳ ಅವಿಸ್ಮರಣೀಯ ನಿದರ್ಶನಗಳ ಬಗ್ಗೆ ನಾವೆಲ್ಲರೂ ತಿಳಿದಿದ್ದೇವೆ.
ಪ್ರತಿ ಯುಗಗಳಲ್ಲೂ ಗುರುವಿಗೆ ತನ್ನದೇ ಆದ ಮಹತ್ತರವಾದ ಸ್ಥಾನವಿದೆ.
ಅಂದಿನ ಗುರುಕುಲ ಶಿಕ್ಷಣ ಪದ್ಧತಿಯಿಂದ ಇಂದಿನ ಆಧುನಿಕ ಶಿಕ್ಷಣದವರೆಗೂ ಗುರುವಿನ ಪಾತ್ರವೂ ಪದಗಳ ಹೋಲಿಕೆಗೆ ಸಿಗದಷ್ಟು ಅಮೋಘವಾಗಿದೆ. ಯಾವುದೇ ನಿರೀಕ್ಷೆಯಿಲ್ಲದೆ ತನ್ನೆಲ್ಲಾ ಜ್ಞಾನವನ್ನು ಭೋಧಿಸಿ ಬದುಕಿಗೆ ಬೆಳಕಾಗುವ ಗುರುವಿಗೆ ಸರಿಸಮ ಯಾರಿಹರು ಈ ಜಗದಲ್ಲಿ. ಆಧುನಿಕ ಯುಗದ ಹುಚ್ಚು ಆವಿಷ್ಕಾರಗಳಲ್ಲಿ , ಭಾವನೆಗಳಿಗೆ ಬೆಲೆಯಿಲ್ಲದಂತಾಗಿ ಪ್ರತಿಯೊಂದಕ್ಕೂ ಒಂದು ಬೆಲೆ ಕಟ್ಟಿ ಎಲ್ಲವನ್ನೂ ವ್ಯವಹಾರಿಕವಾಗಿ ವರ್ತಿಸುವ ಮನಸ್ಥಿತಿಗೆ ತಲುಪಿದ್ದು ಈ ಯುಗದ ಘೋರ ದುರಂತ.
ವಿದ್ಯೆಗಾಗಿ ಹಗಲಿರುಳು ಹಂಬಲಿಸುವ ಮನಸ್ಸುಗಳು, ವಿದ್ಯೆ ಸಿಗದೆ ಜೀವವನ್ನೇ ಬಲಿಕೊಡುವ ಸ್ಥಿತಿಗಳು ಒಂದೆಡೆ ಆದರೆ, ವಿದ್ಯೆಯನು ಲೆಕ್ಕಿಸದೆ ಮೋಜೂ ಮಸ್ತಿಯಲ್ಲಿ ಬದುಕನ್ನು ಸವೇಸುವ ಮನಸ್ಸುಗಳು ಇನ್ನೊಂದು ಕಡೆ. ಇಂತಹ ಅರ್ಥವಿಲ್ಲದ ವ್ಯವಸ್ಥೆಯಿಂದಲೆ ಇಂದಿನ ಬದುಕು ದುರಂತದ ಕಡೆಗೆ ಸಾಗುತ್ತಿರುವುದು ವಿಷಾದನೀಯ.
ಇನ್ನಾದರೂ ಜ್ಞಾನವು ಒಂದು ವ್ಯಾಪಾರದ ಭಾಗವಾಗದೆ ಅದು ನಮ್ಮ ಬದುಕನ್ನು ಬೆಳಗುವ ದೀಪವಾಗಲೀ, ಜ್ಞಾನವು ಬರೀ ಸಿರಿವಂತರಿಗೆ ಸೇರದೆ, ಸಾಮಾನ್ಯರಿಗೂ ಸಿಗುವಂತಾಗಲಿ, ನಶಿಸುತ್ತಿರುವ ಮಾನವೀಯ ಮೌಲ್ಯಗಳು ಬರೀ ಪಠ್ಯ ಪುಸ್ತಕದಲ್ಲಿ ಉಳಿಯದೆ ನಮ್ಮ ಮನದಲ್ಲಿ ಅಚ್ಚಳಿಯದಂತ ಗುರುತಾಗಲೀ, ಆಧುನಿಕತೆಯಲ್ಲೂ ಭಾವನೆಗಳಿಲ್ಲದೆ ಅನಾಗರಿಕರಂತೆ ವ್ಯವರಿಸುವ ಮನಸ್ಸುಗಳು ಪರಿವರ್ತನೆಯಾಗಿ ಬದುಕಿನ ಮೌಲ್ಯಗಳು ಎಲ್ಲೆಡೆಯೂ ಬೆಳಗುವಂತಾಗಲೀ.

ಫೋಟೋ ಕೃಪೆ : google
ಬದುಕಿನ ಪ್ರತಿ ಹೆಜ್ಜೆಗೂ ಸತ್ಯ – ಸುಳ್ಳುಗಳ, ಒಳ್ಳೆಯದು – ಕೆಟ್ಟದ್ದು, ಧರ್ಮ – ಧರ್ಮಗಳ, ನಿಜರೂಪವು ಎಲ್ಲರೂ ಅರಿಯುವಂತಾಗಲಿ. ಆಚರಣೆಗಳೆಲ್ಲವೂ ಬರೀ ಹೆಸರಿಗೆ ಆಚರಿಸುತ್ತ, ಸಮಾಜಕ್ಕೆ ತೋರ್ಪಡಿಸಲು ಅಷ್ಟೇ ಸೀಮಿತವಾಗದೆ, ಅದು ನಮ್ಮನ್ನು ಸತ್ಯ, ಧರ್ಮದ ಜ್ಞಾನೋದಯದ ಕಡೆಗೆ ಕರೆದೊಯ್ಯಬೇಕು, ನಮ್ಮ ತನು ಮನವನ್ನು ಶುಚಿಯಾಗಿಸಬೇಕು. ಕಾಲವು ಎಲ್ಲರ ಪಾಲಿನ ನಿಜವಾದ ಗುರುವಾಗಿ ಎಲ್ಲರನ್ನೂ ಪರಿವರ್ತಿಸಿ ಸನ್ಮಾರ್ಗದಲ್ಲಿ ನಡೆಸುವಂತಾಗಲಿ, ಎಲ್ಲರ ಬದುಕಲ್ಲಿ ಜ್ಞಾನದ ಸಾಕ್ಷಾತ್ಕಾರವಾಗಲಿ..
ಅದುವೇ ನಿಜವಾದ..
ಗುರು ಪೌರ್ಣಿಮೆ….!
- ಎಸ್.ಸಂತೋಷ ಕುಮಾರ(ವೃತ್ತಿಯಲ್ಲಿ ಇಂಜಿನಿಯರ್, ಹವ್ಯಾಸಿ ಬರಹಗಾರರು) ಬೀದರ.
