ನಾನು ಮಂಬೈಯಲ್ಲಿನ ಚಾಳ್ ಮನೆಯಲ್ಲಿದ್ದಾಗ ಹಾಲಿನವನು ಇದ್ದಕ್ಕಿಂದಂತೆ ಸಾಷ್ಟಾಂಗ ನಮಸ್ಕಾರ ಮಾಡಿದ, ಯಾಕೆ ಅಂತ ಅರ್ಥವಾಗಲಿಲ್ಲ. ಅರ್ಥವಾದಾಗ ಜೋರಾಗಿ ನಗು ಬಂತು, ನೀವು ಓದಿ ನಕ್ಕು ಬಿಡಿ…
ಇದು 1969ರಲ್ಲಿ ನಡೆದ ಘಟನೆ. ಆಗ ನಾವು ವರ್ಲಿಯ ಒಂದು ಚಾಳ್ ನಲ್ಲಿ ವಾಸಿಸುತಿದ್ದೆವು. ಚಾಳ್ ಅಂದರೆ ಒಂದೇ ಕೋಣೆ, ಅದಕ್ಕೆ ಪಾರ್ಟಿಷನ್ ಮಾಡಿ ನಾವು ಅಡುಗೆ ಕೋಣೆಯನ್ನು ಮಾಡಿಕೊಂಡಿದ್ದೆವು. ಮನೆಯ ಮುಖ್ಯ ದ್ವಾರ ತೆರೆದರೆ ಇಡೀ ಮನೆ ಕಾಣುತಿತ್ತು.
ಆಗ ಮುಂಬೈಯಲ್ಲಿ ದೊಡ್ಡ “ತಬೇಲಾ” ಗಳಿರುತಿದ್ದವು. ಅಂದರೆ ದೊಡ್ಡ ಕೊಟ್ಟಿಗೆ, ಅದರಲ್ಲಿ ತುಂಬಾ ಎಮ್ಮೆ, ದನ, ಕರುಗಳು. ಅದನ್ನು ಚಲಾಯಿಸಿತ್ತಿರುವವರು ಹೆಚ್ಚಾಗಿ ಉತ್ತರ ಪ್ರದೇಶದವರು. ಅವರೇ ಎಲ್ಲರ ಮನೆ ಬಾಗಿಲಿಗೆ ಹಾಲನ್ನು ತಂದು ಕೊಡುತಿದ್ದರು. ಅವರೆಲ್ಲ ಹಿಂದಿ ಭಾಷಿಕರು.
ಆ ದಿನ ಶಿವರಾತ್ರಿ ಆಗಿತ್ತು. ಎಂದಿನಂತೆ ಭೈಯ್ಯಾ ಹಾಲು ತಗೊಂಡು ಬರುವ ಹೊತ್ತಾಗಿತ್ತು. ಬಾಗಿಲನ್ನು ಬಡಿದ ಶಬ್ದ ಕೇಳಿ ನಾನು ಬಾಗಿಲನ್ನು ತೆರೆದಾಗ ಎದುರಿಗೆ ಹಾಲಿನ ಕೆಟಲ್ ನೊಂದಿಗೆ ಭೈಯ್ಯಾ ನಿಂತಿದ್ದ. ಇವ ಹೊಸಬನಾಗಿದ್ದ, ನಮ್ಮ ದೂಧವಾಲಾನ ತಮ್ಮನೆಂದು ಸ್ವತಃ ತನ್ನನ್ನು ಪರಿಚಯಿಸಿದ. ಕೂಡಲೇ ನಾನು ಪಾತ್ರೆಯನ್ನು ತರಲು ಒಳಗೆ ಹೋಗಿ ಒಂದು ಸ್ಟೀಲ್ ಪಾತ್ರೆಯನ್ನು ತಂದು ಬಾಗಿಲಿಗೆ ಬಂದಾಗ ಈ ಹಾಲಿನ ಭೈಯ್ಯಾ ಕೈ ಮುಗಿದು ಅಡ್ಡ ಬಿದ್ದ.
ನನಗೋ ಗಾಬರಿ, ಇವನ ಕಣ್ಣಿಗೆ ನಾನೇನಾದರೂ ದೇವಿಯ ಹಾಗೆ ಕಂಡೆನಾ!?…ಅಥವಾ ಇವನಿಗೆ ನಮ್ಮನೆಯೊಳಗೆ ನನ್ನ ಹಿಂದೆ ದೇವರು ಕಂಡರಾ?…. ಎಂದು ಹಿಂದೆ ಮುಂದೆ ನೋಡಿದೆ. ಏನೂ ಅರ್ಥ ಆಗಲಿಲ್ಲ. ಕೊನೆಗೆ ಹಾಲು ತೆಗೆದುಕೊಂಡು ಮನೆ ಒಳಗೆ ಹೋಗುತಿದ್ದಾಗ ‘ಬಹನ್ಜೀ’ ಎಂಬ ಅವನ ಕರೆಯನ್ನು ಕೇಳಿ ಅಲ್ಲೇ ನಿಂತೆ, ಕಣ್ಣಿನಲ್ಲೇ “ಏನು” ಎಂದೆ.
ನಮ್ಮ ಅಡುಗೆ ಕೋಣೆಯಲ್ಲಿದ್ದ ರುಬ್ಬೊ ಗುಂಡಿನತ್ತ ಬೆರಳು ತೋರಿಸಿ” ಇತನಾ ಬಡಾ ಶಿವಲಿಂಗ್ ಆಪ್ ಕೆ ಘರ್ ಮೇ ಹೈ, ನಮನ್ ಕರ್ಕೇ ಹಂ ಧನ್ಯ ಹೋಗಯೇ” ಎಂದಾಗ ಅವನು ಅಡ್ಡ ಬಿದ್ದದ್ದು ನನಗಲ್ಲ ನಮ್ಮ ಕಡೆಯುವ ಕಲ್ಲಿಗೆ ಎಂದು ಅರ್ಥ ಆಯಿತು ಮಾರ್ರೇ…
ನಮ್ಮ ಆಗಿನ ಕಡೆಯುವ ಕಲ್ಲು, ಹಾಗೂ ಜಿಮ್
- ವಸುಧಾಪ್ರಭು , ಮುಂಬೈ