ಕಾಯಕ ಶರಣ ಹಡಪದ ಅಪ್ಪಣ್ಣನವರು



ಹನ್ನೆರಡನೇ ಶತಮಾನದ ಶರಣ ಪರಂಪರೆಯಲ್ಲಿ ಬಹು ದೊಡ್ಡ ಹೆಸರು ಪಡೆದ ಅನುಭವ ಮಂಟಪದಲ್ಲಿ ಭಕ್ತಿ ಭಂಡಾರಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದವರು ಹಡಪದ ಅಪ್ಪಣ್ಣನವರು.ಅವರ ಕುರಿತು ಲೇಖಕ ನಟರಾಜ್ ಸೋನಾರ್ ಅವರು ಬರೆದ ಕಿರು ಬರಹ, ಮುಂದೆ ಓದಿ…

.ಇವರು ಕ್ಷೌರಿಕ ವೃತ್ತಿಯ ಕಾಯಕದಲ್ಲಿ ಕೈಲಾಸ ಕಾಣುತ್ತ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರಾಗಿ ಮುಂಚೂಣಿಯಲ್ಲಿದ್ದರು. ಕುಲಕಸಬುಗಳ ಆಧಾರದ ಮೇಲೆಯೆ ಜಾತಿಯ ವ್ಯವಸ್ಥೆಯನ್ನು ಮಾಡಿ ಸಮಾಜದಲ್ಲಿ ಮೇಲು ಕೀಲುಗಳೆಂಬ ಕವಲುಗಳನ್ನು ಸೃಷ್ಟಿಸಿದ್ದರು. ಕ್ಷೌ ರಿಕ ವೃತ್ತಿಯನ್ನು ಮಾಡುವ ಸವಿತಾ (ಹಡಪದ) ಸಮಾಜದವರಾಗಿದ್ದ, ಹಡಪದ ಅಪ್ಪಣ್ಣನವರು ಮಾಡುವ ಕಾಯಕ ಕನಿಷ್ಠವೆಂದು ಭಾವಿಸಿದ್ದ ಸಮುದಾಯದ ಬಾಯಿ ಮುಚ್ಚುವಂತೆ ಬಸವಣ್ಣನವರು ಅನುಭವ ಮಂಟಪವೆಂಬ ಸಂಸತ್ತಿನಲ್ಲಿ ಹಡಪದ ಅಪ್ಪಣ್ಣನವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡು ಸಮಾಜದಲ್ಲಿ ಬಹುದೊಡ್ಡ ಕ್ರಾಂತಿಯನ್ನು ಮಾಡಿದರು.

ಬಸವಾದಿ ಪ್ರಮಥರ ಜೊತೆಯಲ್ಲಿದ್ದ #ಹಡಪದ_ಅಪ್ಪಣ್ಣನವರು ಲೌಕಿಕದಲ್ಲಿ ಮಾತ್ರವಲ್ಲ, ಪಾರಮಾರ್ಥದಲ್ಲಿಯೂ ಬಸವಣ್ಣನವರಿಗೆ ಆಪ್ತವಾಗಿದ್ದರು.

ಫೋಟೋ ಕೃಪೆ : lingayatreligion.

ಅನುಭವ ಮಂಟಪದ ಆಪ್ತ ಕಾರ್ಯದರ್ಶಿ ಹುದ್ದೆಯನ್ನು ಯಾರಿಗೂ ಮುಜುಗುರವಾಗದಂತೆ ಸಮರ್ಥ ರೀತಿಯಲ್ಲಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಒಬ್ಬ ಕಾರ್ಯದರ್ಶಿಯು ಯಾವ ರೀತಿ ಆ ಹುದ್ದೆಯನ್ನು ನಿಭಾಯಿಸಿಕೊಂಡು ಹೋಗಬೇಕೆಂಬುದಕ್ಕೆ ಹಡಪದ ಆಪ್ಪಣ್ಣನವರಿಗಿಂತ ಉತ್ತಮ ಉದಾಹರಣೆ ಮತ್ತೊಂದಿಲ್ಲ.

ಅವರ ಕಾಯಕ ನಿಷ್ಠೆಯೇ ಶ್ರೀರಕ್ಷೆಯಾಗಿ ಸಮಾಜಕ್ಕೆ ಬೆಳಕಾಗಿ, ದಮನಿತರ ದನಿಯಾಗಿ, ದಾರಿ ತಪ್ಪಿತ ಸಮಾಜವನ್ನು ಸರಿದಾರಿಯಲ್ಲಿ ನಡೆಸಿದರು. ಅಂದಿನ ಕಾಲದಲ್ಲಿ ಹಡಪದ ಜನಾಂಗದವರು ಬೆಳಿಗ್ಗೆ ಎದುರುಗಡೆ ಬಂದರೆ ಸಾಕು ಅನಿಷ್ಠವೆಂದುಕೊಂಡು, ಇಂದು ಏನೋ ಗಂಡಾಂತರ ಕಾದಿದೆಯೆಂದು ಭಾವಿಸುತ್ತಿದ್ದರು. ಇಂಥಹ ಮೂಢ ನಂಬಿಕೆಯನ್ನು ಹೋಗಲಾಡಿಸುವುದಕ್ಕಾಗಿಯೆ ಬಸವಣ್ಣನವರು ಯಾರೇ ಬಂದರೂ ಮೊದಲು ಹಡಪದ ಅಪ್ಪಣ್ಣನವರನ್ನು ನೋಡಿಕೊಂಡು ಬರಬೇಕೆಂಬ ನಿಯಮವನ್ನೇ ಮಾಡಿದ್ದರೆಂಬ ಪ್ರತೀತಿ ಇದೆ.

ಮತ್ತೊಂದು ಐತಿಹ್ಯದ ಪ್ರಕಾರ ’ಅಪ್ಪಣ್ಣನವರದು ತಾಂಬೂಲ ಕರಂಡ ಕಾಯಕವನ್ನು ಮಾಡುತ್ತ ಶರಣ ಶರಣೆಯರಿಗೆ ತಾಂಬೂಲ ಹಂಚುತ್ತಿದ್ದರು. “ಹಡಪ” ಎಂದರೆ ತಾಂಬೂಲದ ಚೀಲ. ಇನ್ನೊಂದು ಅರ್ಥದಲ್ಲಿ ಕ್ಷೌರ ಮಾಡುವ ಕಾಯಕದ ಚೀಲ. ಧರ್ಮಪತ್ನಿ ಶರಣೆ ಮತ್ತು ವಚನಕಾರ್ತಿ ಲಿಂಗಮ್ಮ ಅವರೊಂದಿಗೆ ಅನ್ಯೋನ್ಯ ದಾಂಪತ್ಯ ಜೀವನವನ್ನು ಸಾಗಿಸುತ್ತ, ಚೆನ್ನಬಸವೇಶ್ವರ ಗುರುವನ್ನು ಧ್ಯಾನಿಸಿದವರು.



ಬನವಾಸಿಯ ಮಧುಕೇಶ್ವರ ದೇವಾಲಯದ ಶಿವೋತ್ಸವ ಮಂಟಪದ ಗಗ್ಗರಿ ಕಲ್ಲಿನ ಮೇಲಿರುವ ಶರಣರ ಶಿಲ್ಪಗಳಲ್ಲಿ ಅಪ್ಪಣ್ಣನ ವಿಗ್ರಹವನ್ನು ಕಾಣಬಹುದು. ಅಪ್ಪಣ್ಣ ‘ಬಸವಪ್ರಿಯ ಕೂಡಲ ಚೆನ್ನಬಸವಣ್ಣ’ ಅಂಕಿತದಲ್ಲಿ ಇನ್ನೂರ ಐವತ್ತಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ.

ಅವುಗಳಲ್ಲಿ ಬೆಡಗಿನ ವಚನಗಳೆ ಅಧಿಕವಾಗಿವೆ. ಕೆಲವು ವಚನಗಳು ಕಥನಶೈಲಿಯನ್ನು ಹೊಂದಿದ್ದು ಷಟ್-ಸ್ಥಲ ತತ್ವನಿರೂಪಣೆಗೆ ಆದ್ಯತೆ ನೀಡಿದ್ದಾರೆ. ಇವರ ವಚನಗಳು ಗ್ರಹಿಸಲು ಸುಲಭವಾಗಿದ್ದು ಸಮಾಜಕ್ಕೆ ಮೌಲಿಕ ಸಂದೇಶಗಳನ್ನು ಬಿತ್ತರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಇವರಿಗೆ ಸಂಸ್ಕೃತಜ್ಞಾನ ಅಪಾರವಾಗಿತ್ತೆಂಬುದಕ್ಕೆ ಇವರ ವಚನಗಳೇ ಸಾಕ್ಷಿ. ನುಡಿಯಂತೆ ನಡೆ, ವಿಚಾರದಂತೆ ಆಚಾರ ಇವುಗಳಿಂದ ಕೂಡಿ ನಿಷ್ಠೆಯ ಕೆಚ್ಚಿನಿಂದ ಮೂಡಿ ಬಂದಿರುವ ಇವರ ವಚನಗಳು, ನಮ್ಮೆಲ್ಲರ ಬಾಳಿನ ಬೆಳಕಿಂಡಿಗಳಂತಿವೆ. ಅತ್ಯಂತ ಸರಳ, ನೇರ ಮತ್ತು ಹೃದಯತಲಸ್ಪರ್ಶಿ. ಬಸವಪ್ರಿಯ ಕೂಡಲಸಂಗಯ್ಯ ಎಂಬ ಅಂಕಿತದಿಂದ ರಚಿತವಾದ ವಚನಗಳಲ್ಲಿ ಕಾಯಕನಿಷ್ಠೆ, ದಾಸೋಹ ನಿಷ್ಠೆ, ಭಕ್ತಿ, ವೈರಾಗ್ಯ, ಆಚಾರ ವಿಚಾರ, ಇತ್ಯಾದಿ ವಿಷಯಗಳನ್ನು ವೈಚಾರಿಕತೆಯ ನೆಲೆಯಲ್ಲಿ ವಿಡಂಬನಾತ್ಮಕವಾಗಿ ಬೆಡಗಿನ ವಚನಗಳ ಮೂಲಕ ತಿಳಿಸಿದ್ದಾರೆ.


  • ನಟರಾಜ್ ಸೋನಾರ್ (ಮಾಜಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ) ಕುಷ್ಟಗಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW