ಕೂಡು ಕುಟುಂಬದಲ್ಲಿ ಹಪ್ಪಳ ಮಾಡುವಾಗ ಎಲ್ಲರೂ ಸೇರಿಕೊಂಡು ಹಂಚಿಕೊಳ್ಳುತ್ತಿದ್ದ ಕೆಲಸ, ಹುಸಿ ಮುನಿಸು ಮತ್ತು ಕೂಡು ಕುಟುಂಬದಲ್ಲಿದ್ದಂತಹ ಸುಂದರ ಒಡನಾಟಗಳನ್ನುಎಳೆ ಎಳೆಯಾಗಿ ಲೇಖಕಿ ಜ್ಯೋತಿ ರಾಜೇಶ್ ಅವರು ಈ ಲೇಖನದಲ್ಲಿ ಬಿಚ್ಚಿಟ್ಟಿದ್ದಾರೆ. ಓದುವಾಗ ನಮ್ಮ ಬಾಲ್ಯದ ನೆನೆಪನ್ನು ತರಿಸುತ್ತದೆ.
ಬೇಸಿಗೆ ರಜೆಯಲ್ಲಿ ಅಜ್ಜನ ಮನೆಯೆಂದರೆ ಒಂದು ರೀತಿ ಪಿಳ್ಳೆಗಳು. ಹಲಸಿನ ಹಪ್ಪಳ ಮಾಡುವ ಕಾರ್ಯವೇ ಒಂದು ಸಂಭ್ರಮ. ಅದು ಹಿಂದಿನ ದಿನದಿಂದಲೇ ಶುರುವಾಗ್ತಿತ್ತು. ‘ತೋಟದಲ್ಲಿ ಒಳ್ಳೇ ಬಲಿತ ಹಲಸಿನಕಾಯಿ ಇದ್ರೆ ನೋಡ್ರೋ. ಮಕ್ಕಳೆಲ್ಲ ಇದ್ದಾರೆ, ಹಪ್ಪಳ ಮಾಡುವ ‘ ಎನ್ನುವ ಮನೆಯ ಹೆಂಗಸರ ಮಾತಿನಿಂದ ಶುರುವಾಗುತ್ತಿತ್ತು ಹಪ್ಪಳದ ಪೀಠಿಕೆ. ನಂತರ ಮನೆಯ ಗಂಡು ಹುಡುಗರು ಒಳ್ಳೇ ಬಲಿತ ಹಲಸಿನ ಕಾಯಿ ಹುಡುಕಿ, ಮರ ಹತ್ತಿ, ಆರೇಳು ಕಾಯಿ ಬೀಳಿಸಿದರೆ. ನಾವೆಲ್ಲ ಅವುಗಳನ್ನು ತೋಟದಿಂದ ಮನೆಗೆ ಸಾಗಿಸುವ ಕೆಲಸಕ್ಕೆ ವೀರ ಸೈನಿಕರಂತೆ ಒಂದೊಂದು ಅಡಿಕೆ ಹಾಳೆ ಹಿಡಿದು ಹೊರಡೋದು. ನಮ್ಮ ಕೈಯಲ್ಲಿ ಎತ್ತಲು ಸಾಧ್ಯವಾಗುವಂಥ ಕಾಯಿಗಳಿದ್ರೆ ಹೊತ್ಕೊಂಡು ಬರೋದು. ಇಲ್ಲದಿದ್ರೂ ಹೋ…ನಾನು ಹೊರ್ತೀನಿ ಅಂತ ಜಂಭ ಮಾಡಿ ಎತ್ಕೊಂಡು, ಕೆಲವೊಮ್ಮೆ ದಾರೀಲಿ ಬೀಳ್ಸಿ, ಉರುಳಿಸಿಕೊಂಡು, ಜೊತೆಯಲ್ಲಿದ್ದ ಅಮ್ಮ, ಚಿಕ್ಕಮ್ಮರಿಂದ ಬೈಸಿಕೊಂಡು, ಅಂತೂ ಮನೆಗೆ ತಲುಪಿಸುತಿದ್ವಿ. ನಂತರ ಸಂಜೆ ಎಲ್ಲ ಸುತ್ತು ಕುಳಿತುಕೊಂಡು ಹರಟೆ ಹೊಡೀತಾ…ಹೆಚ್ಚಿಟ್ಟ ಹಲಸಿನ ಸೋಡೆಗಳಿಂದ ಸೊಳೆ ಬಿಡಿಸುತ್ತಾ ಮಧ್ಯ ಮಧ್ಯ ಒಂದೊಂದು ಸೊಳೆ ಸ್ವಾಹ ಮಾಡ್ತಾ.ಕೊನೆಯ ಕಾರ್ಯವಾಗಿ ಕೈಗಂಟಿದ ಮೇಣವನ್ನು ಎಣ್ಣೆ ಹಚ್ಚಿ ಬಿಡಿಸಿ ಕೈ ಸ್ವಚ್ಛ ಪಡಿಸಿಕೊಂಡರೆ ಒಂದು ಹಂತ ಮುಗಿದಂತೆ.
ಫೋಟೋ ಕೃಪೆ : amazon.com
ಮಾರನೇ ದಿನ ಬೆಳಿಗ್ಗೆ ನಾವು ಏಳುವಾಗಲೇ ಹಲಸಿನ ಸೊಳೆ ಬೇಯುವ ಪರಿಮಳ ನಾಸಿಕಕ್ಕೆ ಸಂತಸ ನೀಡುತ್ತಿತ್ತು. ಅದು ಬೆಂದಾದ ಮೇಲೆ ಬಿಸಿ ಇದ್ದಾಗಲೇ ಅದನ್ನು ಉಪ್ಪು ಮತ್ತು ಜೀರಿಗೆ ಮೆಣಸಿನ ಜೊತೆ ರುಬ್ಬುವ ಕಲ್ಲಿನಲ್ಲಿ ತಿರುವುವುದೋ ಅಥವಾ ಒನಕೆಯಿಂದ ಕುಟ್ಟುವುದೋ ಮಾಡಿ ಹಿಟ್ಟು ತಯಾರಿಸುವ ಕೆಲಸ. ಅಷ್ಟರ ಮಧ್ಯೆ ನಮಗೆಲ್ಲ ಬೆಂದ ಸೊಳೆಯನ್ನು ಸ್ವಲ್ಪ ಎತ್ತಿಟ್ಟುಕೊಳ್ಳುವ ಸಂಭ್ರಮ. ಮತ್ತೆ ಉಪ್ಪಿನಕಾಯಿ, ತೆಂಗಿನೆಣ್ಣೆ ಹಾಕಿ ತಿನ್ನಲು ಬೇಕಲ್ಲ. ನಂತರ ಮತ್ತೆ ಒಳಗೆ ಅಡುಗೆ ಮಾಡುವವರೊಬ್ಬರನ್ನ ಬಿಟ್ಟು(ಮಧ್ಯಾನ್ನ ಊಟ ಬೇಕಲ್ಲ…) ಮತ್ತೆಲ್ಲ ಹೆಂಗಸರು, ಮಕ್ಕಳು, ಹಪ್ಪಳ ಮಾಡುವ ಜಾಗಕ್ಕೆ ಶಿಫ್ಟ್. ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ, ಅದನ್ನು ಮಣೆಯ ಮೇಲಿಟ್ಟ ಬಾಳೆಲೆ ಅಥವಾ ಪ್ಲಾಸ್ಟಿಕ್ ಮೇಲೆ ಇಟ್ಟು ಇನ್ನೊಂದು ಕವರ್ ನಿಂದ ಮುಚ್ಚಿ, ಅದರ ಮೇಲೆ ಕಬ್ಬಿಣದ ಕಾವಲಿ ಇಟ್ಟು ಶಕ್ತಿ ಹಾಕಿ ಒತ್ತಿದರೆ ಹಪ್ಪಳ ರೆಡಿ. (ಆಗಿನ್ನೂ ಈ ಪ್ರೆಸ್ಸಿಂಗ್ ಮಿಷನ್ ಅಷ್ಟೊಂದು ಚಾಲ್ತಿಯಲ್ಲಿರಲಿಲ್ಲವೆನಿಸುತ್ತೆ). ನಂತರ ಆ ಹಪ್ಪಳವನ್ನು ಸರಿ ಮಾಡಿ, ತೆಂಗಿನ ಮಡಲಿನಿಂದ ಹೆಣೆದ ಚಾಪೆಯ ಮೇಲೆ ಅಥವಾ ದೊಡ್ಡ ಪ್ಲಾಸ್ಟಿಕ್ ಮೇಲೆ ಹರವಿದರೆ ಹಪ್ಪಳದ ಮುಕ್ಕಾಲು ಭಾಗ ಕೆಲಸ ಮುಗಿದಂತೆ. ಅಲ್ಲಿ ಶುರು ಮತ್ತೆ ನಮ್ಮ ಗಲಾಟೆ. ಹಿಟ್ಟಿನ ಉಂಡೆ ನಾನು ಮಾಡೋದು, ಹಪ್ಪಳ ನಾನು ಒತ್ತೋದು, ಬಿಸಿಲಿಗೆ ಹರವೋದು ನಾನು.
ಫೋಟೋ ಕೃಪೆ : Youtube
ಹೀಗೆ ಮಧ್ಯೆ ಹುಸಿ ಮುನಿಸುಗಳು ಬೇರೆ. ಚಿಕ್ಕಪುಟ್ಟ ಕೆಲಸ ಯಾರಿಗೂ ಬೇಡ. ಎಲ್ರೂ ದೊಡ್ಡ ಕೆಲಸ ಮಾಡೋಕೆ ಹೊರಡೋದು. ಮತ್ತೆ ದೊಡ್ಡವರಿಂದ ‘ಇವತ್ತು ನೀನಿದು ಮಾಡು, ನಾಳೆ ನೀನದು ಮಾಡು’ ಎಂಬ ಕೆಲಸ ಹಂಚಿಕೆ ಬುದ್ಧಿಮಾತುಗಳೊಂದಿಗೆ ಮುಗಿಯುತ್ತಿತ್ತು. ಹರಟೆ, ತಮಾಷೆ, ಕಥೆಗಳು ಹೀಗೆಲ್ಲ ಮಾಡ್ತಾ ಎಷ್ಟು ಕೆಲಸ ಮಾಡಿದರೂ ಗೊತ್ತೇ ಆಗ್ತಿರಲಿಲ್ಲ. ಎಲ್ಲ ಮುಗಿದ ಮೇಲೆ ತೆಗೆದಿಟ್ಟ ಹಲಸಿನ ಸೊಳೆಗಳಿಗೆ ಉಪ್ಪಿನಕಾಯಿ, ತೆಂಗಿನೆಣ್ಣೆ ಹಾಕಿ ಬಾಯಿ ಚಪ್ಪರಿಸುತ್ತ ತಿನ್ನುವಾಗ… ಆಹಾ…ಬಲ್ಲವರೇ ಬಲ್ಲರು ಆ ಸವಿಯ ಅಷ್ಟು ಹೊತ್ತಿಗೆ ಅರ್ಧ ಒಣಗಿದ ಹಪ್ಪಳಗಳೂ ನಮ್ಮನ್ನು ಕರೀತಿದ್ವು. ಅದೂ ಕೆಲವೊಮ್ಮೆ ಹಿರಿಯರಿಗೆ ಕಾಣದಂತೆ ಸ್ವಾಹಾ ಆಗೋದೇ…ಅಂತೂ ನಮ್ಮೆಲ್ಲರಿಂದ ಆ ಹಪ್ಪಳಗಳನ್ನು ಕಾಪಾಡಿ, ಮೂರ್ನಾಲ್ಕು ದಿನ ಬಿಸಿಲಲ್ಲಿ ಒಣಗಿಸಿ, ಗಟ್ಟಿಯಾದ ಅವುಗಳನ್ನು ಒಂದು ರಾತ್ರಿ ತೆಳು ಬಟ್ಟೆಯ ಮೇಲೆ ಹಾಕಿ ಮಾರನೇ ದಿನ ಐವತ್ತರದೋ, ನೂರರದ್ದೋ ಒಂದೊಂದು ಕಟ್ಟುಗಳನ್ನು ಮಾಡಿ ಗಾಳಿಯಾಡದ ಡಬ್ಬದಲ್ಲಿ ತುಂಬಿಡುವುದರೊಂದಿಗೆ ಒಂದು ಅಂಕ ಮುಗಿದಂತೆ. ಇದು ಪೂರ್ತಿ ಬೇಸಿಗೆಯಲ್ಲಿ ಎಂಟುಹತ್ತುಬಾರಿಯಾದರೂ ಪುನರಾವರ್ತನೆಯಾಗೋದು. ಅಷ್ಟೊಂದು ಹಪ್ಪಳ ಏನ್ಮಾಡ್ತಿದ್ರಿ? ಅಂತೀರಾ… ಮೊದಲೇ ಕೂಡು ಕುಟುಂಬ ಮಳೆಗಾಲದಲ್ಲಿ, ನೆನಪಾದಾಗೆಲ್ಲ ನಮಗೆ ಸುಟ್ಟ ಅಥವಾ ಕರಿದ ಹಪ್ಪಳವೇ ಸ್ನ್ಯಾಕ್ಸ್ ಆಗೋದು. ಅದಷ್ಟೇ ಅಲ್ಲದೆ ಮನೆಗೆ ಬಂದ, ಪೇಟೆಯಲ್ಲಿರುವ ನೆಂಟರಿಗೆಲ್ಲ ಒಂದೋ ಎರೆಡೋ ಹಪ್ಪಳದ ಕಟ್ಟುಗಳನ್ನು ಪ್ರೀತಿಯಿಂದ ಕೊಟ್ಟು ಕಳಿಸುವುದು ಒಂದು ರೀತಿಯ ಸಂಪ್ರದಾಯವೇ ಆಗಿಬಿಟ್ಟಿತ್ತು. ಈ ಕೊಡು ಕೊಳ್ಳುವ ಪ್ರಕ್ರಿಯೆ ಬಾಂಧವ್ಯವನ್ನು ಒಂದು ರೀತಿಯಲ್ಲಿ ಇನ್ನೂ ಗಟ್ಟಿಗೊಳಿಸುತ್ತಿತ್ತೆಂಬ ಭಾವ ಈಗ ನನ್ನ ಮನದಲ್ಲಿ ಮೂಡುತ್ತಿದೆ. ಈಗಲೂ ಅಜ್ಜನ ಮನೆಯಿಂದ ಪ್ರತಿ ವರ್ಷ ನನಗೆ ಹಪ್ಪಳದ ಕಟ್ಟುಗಳು ಬಂದು ಸೇರುವುದು ನನ್ನ ಅಜ್ಜನ ಮನೆಯವರು ಈ ಸುಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದುದರ ಫಲವೇ.
ಅಂತೂ ಹಿಂದಿನದೆಲ್ಲ ನೆನಪು ಮಾಡಿಕೊಳ್ಳುವಾಗ, ಯಾವ ಬೇಸಗೆ ಶಿಬಿರಗಳ ಹಂಗೂ ಇಲ್ಲದೇ ಪಠ್ಯೇತರ ಚಟುವಟಿಕೆಗಳು, ಆಟ, ನೀತಿ, ವ್ಯಾಯಾಮ ಇದೆಲ್ಲದರ ಜೊತಗೆ, ಕೂಡಿಬಾಳುವ, ಸಹಾಯಹಸ್ತ ನೀಡುವ, ಹಂಚಿ ತಿನ್ನುವ ಹೀಗೆ ಎಲ್ಲ ವಿಷಯಗಳನ್ನೂ ನಾವೆಲ್ಲ ಮಕ್ಕಳು ತಾನೇ ತಾನಾಗಿ ಕಲಿತು ಬಿಡುತ್ತಿದ್ದೆವಲ್ಲ ಅನಿಸುತ್ತೆ. ಒಂದು ಹಲಸಿನ ಕಾಯಿ ಹಪ್ಪಳವಾಗುವುದರ ಮಧ್ಯೆ ಇಷ್ಟೆಲ್ಲ ವಿಷಯಗಳಿತ್ತೆ? ಎಂಬ ಅಚ್ಚರಿಯೂ ಮೂಡುತ್ತದೆ. ನಿಮ್ಮಲ್ಲೂ ಇಂಥ ಸವಿ ನೆನಪುಗಳಿರಬಹುದಲ್ವಾ?.
ಈಗಿನ ಮಕ್ಕಳಿಗೆ ಇವೆಲ್ಲವೀಗ ದುಡ್ಡು ಕೊಟ್ಟರೆ ಕೈಗೆ ಸಿಗುವ ಸರಕುಗಳು. ಮಾಡುವ ಮನಸೂ ಇಲ್ಲ, ಇದ್ದರೂ ಅವಕಾಶವೂ ಇಲ್ಲ. ಈಗಿನ ಜಂಕ್ ಫುಡ್ ಗಳ ಮಧ್ಯೆ ಇವುಗಳನ್ನು ತಿನ್ನುವ ಆಸೆಯೂ ದೂರವೇ ಬಿಡಿ. ಆದ್ರೆ ನನಗಂತೂ ಈ ರೀತಿಯ ಪ್ರತೀ ವಸ್ತುಗಳೂ ಹೀಗೇ ಹಿಂದಿನ ಚೆಂದದ ನೆನಪುಗಳನ್ನು ಹೊತ್ತು ತರುತ್ತಲೇ ಇರುತ್ತವೆ.
- ಲೇಖಕರು: ಜ್ಯೋತಿ ರಾಜೇಶ್