ಹೃದಯ ಮಾಂತ್ರಿಕ ಡಾ. ವಿವೇಕ ಜಾವಳಿಡಾ.ವಿವೇಕ ಜಾವಳಿ ಅವರು ಜಗತ್ತಿನಲ್ಲಿಯೇ ಮೊಟ್ಟಮೊದಲ ಬಾರಿಗೆ ೭೨ ರ ವೃದ್ಧ ವ್ಯಕ್ತಿಯೊಬ್ಬರಿಗೆ ವಾಲ್ ರಿಪ್ಲೇಸೆಮೆಂಟ್ ಮತ್ತು ಬೈಪಾಸ್ ಸರ್ಜರಿಯನ್ನು ಪ್ರಜ್ಞಾ ಸ್ಥಿತಿಯಲ್ಲಿಯೇ ಹೃದಯ ಶಸ್ತ್ರ ಚಿಕಿತ್ಸೆ ಮಾಡಿದ ಕೀರ್ತಿ ಇವರದು. ಜಾವಳಿಯವರು ಗುಲ್ಬರ್ಗವರಾಗಿದ್ದು, ಕರ್ನಾಟಕದ ಹೆಮ್ಮೆಯ ಮಗ. ಅವರ ಸಾಧನೆಯ ಮುಂದೆ ನನ್ನ ಲೇಖನ ಪುಟ್ಟದಾಗಬಹುದು. ಓದಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.

ಮಕ್ಕಳ ಭವಿಷ್ಯವನ್ನು ಅವರಿಗೆ ರೂಪಿಸಲು ಬಿಡಬೇಕು, ಅವರ ವೃತ್ತಿ ಅವರ ಆಯ್ಕೆಯಾಗಿರಬೇಕು ಎನ್ನುವ ನಿಲುವನ್ನುಆ ತಂದೆ ತಾಯಿಯೂ ಅಂದು ಪಾಲಿಸಿದ್ದರೆ, ಇಂದು ವೈದ್ಯಕ್ಷೇತ್ರಕ್ಕೆ ಈ ಶ್ರೇಷ್ಠ ವೈದ್ಯ ಕಾಲಿಡುತ್ತಿರಲಿಲ್ಲ. ಕಾರಣ ಆ ವೈದ್ಯನ ಇಚ್ಛೆ, ಆಕಾಂಕ್ಷೆಯೇ ಬೇರೆಯಾಗಿತ್ತು. ಚಿತ್ರ ಬಿಡಿಸುವುದು, ಬಣ್ಣಗಳ ಜೊತೆ ಆಡುವುದು, ಕುಂಚದಲ್ಲಿ ಹೊಸದೊಂದು ಅಲೆಯನ್ನೇ ಸೃಷ್ಟಿಸಬೇಕೆಂಬ ಹಂಬಲ ಅ  ಹುಡುಗನಿಗಿತ್ತು. ಆದರೆ ಅಪ್ಪ ಅಮ್ಮನಿಗೆ ಮಗ ವೈದ್ಯನಾಗಬೇಕೆಂಬ ಕನಸ್ಸು. ಆಗ ತನ್ನ ಆಸೆಗಳನ್ನು ಬದಿಗೊತ್ತಿ ಪಾಲಕರ ಆಸೆಯನ್ನು ಈಡೇರಿಸಲು ಒಲ್ಲದ ಮನಸ್ಸಿನಿಂದಲೇ ವೈದ್ಯಕೀಯ ಕ್ಷೇತ್ರಕ್ಕೆ ಕಾಲಿಟ್ಟರು. ಮುಂದೆ ಅದೇ ವೈದ್ಯ, ಸಾವಿರಾರು ಹೃದಯಗಳ ಸರದಾರರಾದರು. ಈ ವೈದ್ಯ ಮತ್ಯಾರು ಅಲ್ಲ, ಕರ್ನಾಟಕದ ಹೆಮ್ಮೆಯ ಹೃದಯ ಮಾಂತ್ರಿಕ ಡಾ.ವಿವೇಕ ಜಾವಳಿ ಅವರು.

ವಿವೇಕ ಜಾವಳಿ ಅವರ ಪೂರ್ಣ ಹೆಸರು ವಿವೇನಕಾನಂದ ಸಿದ್ದರಾಮಪ್ಪ ಜಾವಳಿ. ಅವರು ಏಪ್ರಿಲ್ ೧೩, ೧೯೫೩ರಂದು ಕರ್ನಾಟಕ ಹಾಗೂ ಮಹಾರಾಷ್ಟ ಗಡಿಯ ಆಲಂದ ತಾಲೂಕಿನ ಬಾರ್ಶಿಯಲ್ಲಿ ಜನಿಸಿದರು. ಮಾತೃಭಾಷೆ ಕನ್ನಡವಾದರೆ, ಪ್ರಾಥಮಿಕ ಶಿಕ್ಷಣವು ಮರಾಠಿಯಾಗಿತ್ತು. ಕಾಲೇಜಿನಲ್ಲಿ ವಿಜ್ಞಾನ ವಿಷಯವನ್ನು ಆಯ್ದುಕೊಂಡ ಮೇಲೆ ಇಂಗ್ಲಿಷ್ ಭಾಷೆಯನ್ನು ಕಲಿಯುವುದು ಅವರಿಗೆ ಅನಿವಾರ್ಯವಾಯಿತು. ಅಲ್ಲಿಯವರೆಗೂ ಇಂಗ್ಲಿಷ್ ಭಾಷೆ ಎಂದರೆ ದುಃಸಪ್ನವಾಗಿತ್ತು. ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಸಾಧಿಸಲು ಕನಿಷ್ಠವೆಂದರು ಅವರಿಗೆ ಆರು ತಿಂಗಳೇ ಬೇಕಾಯಿತು. ಕಠಿಣ ಶ್ರಮ, ಶ್ರದ್ದೆ ಇದ್ದರೇ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಉತ್ತಮ ಉದಾಹರಣೆ ವಿವೇಕ ಜಾವಳಿಯವರು. ಪಿಯುಸಿಯಲ್ಲಿ ಅತಿ ಹೆಚ್ಚು ಅಂಕವನ್ನು ಪಡೆದು, ಗುಲ್ಬರ್ಗದ ಎಂ.ಆರ್. ಮೆಡಿಕಲ್ ಕಾಲೇಜಿನಲ್ಲಿ ವೈದಕೀಯ ಸೀಟ್ ಗಿಟ್ಟಿಸಿಕೊಂಡರು. ಮತ್ತು ೧೯೭೫ ರಲ್ಲಿ ಧಾರವಾಡ ವಿಶ್ವವಿದ್ಯಾಲಯಕ್ಕೆ ಪ್ರಥಮರಾದರು. ಓದು ಮತ್ತು ಕ್ರೀಡೆಯಲ್ಲಿ ಸದಾ ಮುಂದಿದ್ದ ಜಾವಳಿಯವರಿಗೆ ಆಲ್ ರೌಂಡರ್ ಬೆಸ್ಟ್ ಸ್ಟೂಡೆಂಟ್ ಪ್ರಶಸ್ತಿಗೆ ಭಾಜರಾಗಿದ್ದರು.

ದಾವಣಗೆರೆಯ ಜೆ.ಜೆ.ಎಂ ಮೆಡಿಕಲ್ ಕಾಲೇಜಿನಲ್ಲಿ ಎಂ.ಎಸ್ ಮಾಡಿ, ಅದೇ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ಸರ್ಜರಿ ವಿಭಾಗದಲ್ಲಿ ವೃತ್ತಿ ಬದುಕನ್ನು ಆರಂಭಿಸಿದರು. ಅಲ್ಲಿ ಅತ್ಯುತ್ತಮ ಪ್ರೊಫೆಸರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಹೋದ ಕಡೆಯೆಲ್ಲ ಭೇಷ್ ಎನ್ನಿಸಿಕೊಳ್ಳುತ್ತಾ ಹೋದ ಜಾವಳಿಯವರಿಗೆ ಇನ್ನಷ್ಟು ಕಲಿಯಬೇಕು, ಹೊಸ ಅನುಭವಗಳನ್ನು ಪಡೆದುಕೊಳ್ಳಬೇಕೆಂಬ ತುಡಿತದಿಂದ ೧೯೭೯ರಲ್ಲಿ ಬಾಂಬೆಗೆ ತೆರಳಿದರು. ಆಕಾಲದಲ್ಲಿ ಭಾರತದಲ್ಲಿ ವ್ಯಾಸ್ಕುಲರ್ (ನಾಡಿ) ಸರ್ಜರಿಯಲ್ಲಿ ಹೆಸರಾಗಿದ್ದ ಕೆ.ಪಿ. ಕುಲಕರ್ಣಿಯವರ ಮಾರ್ಗದರ್ಶನದಲ್ಲಿ ತಮ್ಮ ವೈದ್ಯ ವೃತ್ತಿಯನ್ನು ಮುಂದೊರೆಸಿದರು.

This slideshow requires JavaScript.

ಪೆರೀಫುಲ್ ವ್ಯಾಸ್ಕುಲರ್ ಸರ್ಜರಿ, ಅಯೋಟಿಕ್ ಸರ್ಜರಿ  ಹಾಗೂ ಆಂಜಿಯೋಗ್ರಾಫಿಯಲ್ಲಿ ತಮ್ಮ ಹತೋಟಿಯನ್ನು ಸಾಧಿಸಿದರು. ಹೀಗೆ ಹಂತ ಹಂತವಾಗಿ ಹೃದಯ ಶಸ್ತ್ರ ಚಿಕಿತ್ಸೆಯಲ್ಲಿ ಪರಿಣಿತರಾಗುತ್ತಾ ಹೋದರು. ಅವರ ಪ್ರತಿಭೆಯನ್ನು ಪರಿಗಣಿಸಿದ ಕರ್ನಾಟಕ ಸರ್ಕಾರ ಅವರನ್ನು ವಾಪಸ್ಸು ತಮ್ಮ ರಾಜ್ಯಕ್ಕೆ ಬರುವಂತೆ ಆಹ್ವಾನ ನೀಡಿತು. ಆ ಆಹ್ವಾನವನ್ನು ಪ್ರೀತಿಯಿಂದ ಸ್ವೀಕರಿಸಿ ೧೯೮೪ರಲ್ಲಿ ಕರ್ನಾಟಕಕ್ಕೆ ವಾಪಸ್ಸಾದರು.

೧೯೯೨ರ ಸಂದರ್ಭದಲ್ಲಿ ವೈದಕೀಯ ಕ್ಷೇತ್ರ ಅಷ್ಟೊಂದು ಪ್ರಗತಿಯಲ್ಲಿ ಇರಲಿಲ್ಲ. ಅದನ್ನು ಗಮನಿಸಿದ ಜಾವಳಿಯವರು ನಮ್ಮ ರಾಜ್ಯದಲ್ಲಿಯೂ ಹೃದಯ ಶಸ್ತ್ರಚಿಕಿತ್ಸೆ ಆಸ್ಪತ್ರೆಯನ್ನು ತೆರೆಯಬೇಕೆನ್ನುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು. ಅವರ ಶ್ರಮದ ಫಲವೇ ಇಂದಿನ ‘ಜಯದೇವ ಇನ್ಸ್ಟಿಟ್ಯೂಷನ್ ಆಫ್ ಕಾರ್ಡಿಯಾಲಜಿ’. ಜಯದೇವ ಇಂದು ದೇಶದಲ್ಲಿಯೇ ಶ್ರೇಷ್ಠ ಹೃದಯಾಲಯ ಹಾಗು ಜಗತ್ತಿನಲ್ಲಿಯೇ ಅಗ್ರ ಹೃದ್ರೋಗ ಇನ್ಸ್ಟಿಟ್ಯೂಷನ್ ಎನ್ನುವ ಖ್ಯಾತಿಯನ್ನು ಪಡೆದಿದೆ.

ಜಾವಳಿಯವರ ಓಡುವ ಕುದರೆಯಂತೆ, ಒಂದು ಕಡೆ ನಿಲ್ಲುವವರಲ್ಲ. ಅಲ್ಲಿಂದ ಖಾಸಗಿ ಕ್ಷೇತ್ರಕ್ಕೆ ಕಾಲಿಟ್ಟರು. ಅಂದಿನ ಬಹುದೊಡ್ಡ ಖಾಸಗಿ ಆಸ್ಪತ್ರೆಯಲ್ಲೊಂದಾಗಿದ್ದ ವಕಾರ್ಡ್ ಆಸ್ಪತ್ರೆಯಲ್ಲಿ ಕಾರ್ಡಿಯಾಲೊಜಿ ವಿಭಾಗವನ್ನು ಆರಂಭಿಸಿ ಅಲ್ಲಿಯೂ ಯಶಸ್ವಿಯಾದರು. ವಾಕರ್ಡ್ ಆಸ್ಪತ್ರೆ ಇಂದು ಫೋರ್ಟಿಸ್ ಆಸ್ಪತ್ರೆಯಾಗಿದೆ. ಅವರು ಹೋದಲ್ಲೆಲ್ಲಾ  ಹೊಸ ಭರವಸೆ ಮತ್ತು ಹೊಸದೊಂದು ಆಶಾಕಿರಣ ಹುಟ್ಟು ಹಾಕುತ್ತಿದ್ದರು. ಹೀಗೆ ಶುರುವಾದ ಅವರ ಯಶೋಗಾಥೆ. ಇಂದು ಬಹು ಬೇಡಿಕೆಯ ಹೃದಯ ತಜ್ಞರಲ್ಲಿ ವಿವೇಕ ಜಾವಳಿಯವರು ಮುಂಚೂಣಿಯಲ್ಲಿದ್ದು, ವೈದಕೀಯ ಕ್ಷೇತ್ರದಲ್ಲಿಯೇ ಹೊಸದೊಂದು ಕ್ರಾಂತಿಯನ್ನೇ ಸೃಷ್ಟಿಸಿದವರು.

೧೯೯೨ರಲ್ಲಿ ಭಾರತದಲ್ಲಿಯೇ ಮೊದಲ ಬಾರಿಗೆ ಹಾಫ್ ಪಂಪ್ ಬೀಟಿಂಗ್ ಬೈಪಾಸ್ ಸರ್ಜರಿ ಯನ್ನು ಮಾಡಿದ ಕೀರ್ತಿ ಇವರದು. ಭಾರತದಲ್ಲಿಯೇ ಪ್ರಪ್ರಥಮ ಬಾರಿಗೆ ಮಿನಿಮರಿ ಇನ್ವೆಸಿವ್ ತಂತ್ರಜ್ಜಾನವನ್ನು ಬಳಸಿಕೊಂಡು ಮೈತ್ರಿವ್ ವಾಲ್ ರಿಪ್ಲೇಸೆಮೆಂಟ್ ಮತ್ತು ಬೈಪಾಸ್ ಸರ್ಜರಿ ಯನ್ನು ಮಾಡಿದ ಮೊದಲಿಗರು. ಪ್ರಜ್ಞಾಹೀನ ಸಂದರ್ಭದಲ್ಲಿ ಆಪರೇಷನ್ ಮಾಡುತ್ತಿದ್ದ ಆ ಕಾಲದಲ್ಲಿ ಅಂದರೆ ೨೦೦೦ ರಲ್ಲಿ ಜನರಲ್ ಅನಸ್ತೇಶಿಯಾ ಮತ್ತು ವೆಂಟಿಲೇಟರ್ ರಹಿತ ಅವೇಕ್ ಸರ್ಜರಿ ಮಾಡಿದ ಮೊದಲಿಗರು ಹೌದು. ವಿಶ್ವದಲ್ಲಿಯೇ ಮೊದಲ ಬಾರಿಗೆ ೭೨ ರ ವೃದ್ಧ ವ್ಯಕ್ತಿಯೊಬ್ಬರಿಗೆ ವಾಲ್ ರಿಪ್ಲೇಸೆಮೆಂಟ್ ಮತ್ತು ಬೈಪಾಸ್ ಸರ್ಜರಿಯನ್ನು ಪ್ರಜ್ಞಾ ಸ್ಥಿತಿಯಲ್ಲಿಯೇ ಸರ್ಜರಿ ಮಾಡಿ ಯಶಸ್ಸು ಸಾಧಿಸಿದ ವೈದ್ಯರು ಇವರಾಗಿದ್ದಾರೆ. ಸುಮಾರು ೬೦೦ ಕ್ಕೂ ಹೆಚ್ಚು ಅವೇಕ್ ಸರ್ಜರಿ, ೨೫,೦೦೦ಕ್ಕೂ ಹೆಚ್ಚು ಹೃದಯ ಶಸ್ತ್ರ ಚಿಕಿತ್ಸೆ ಮಾಡಿದ ದಾಖಲೆ ಅವರದಾಗಿದೆ.

(ಖ್ಯಾತ ಲೇಖಕ ವೇಣುಗೋಪಾಲ್ ಅವರ ಓಪನ್ ಹಾರ್ಟ್ ಸರ್ಜರಿಯನ್ನು ಡಾ.ಜಾವಳಿಯವರೇ ಮಾಡಿದ್ದು, ಅವರು ಬರೆದ ‘ರಸಾಯನ ಜ್ಞಾನ ಬೆಳೆದು ಬಂದ ಹಾದಿ’ ಕೃತಿಗೆ ಕರ್ನಾಟಕ ಸರ್ಕಾರದಿಂದ ಪ್ರಶಸ್ತಿ ಬಂದಿದೆ. ಆ ಪುಸ್ತಕವನ್ನು ಡಾ.ಜಾವಳಿಯವರಿಗೆ ಹಸ್ತಾಂತರ ಮಾಡುವ ಸಂದರ್ಭದಲ್ಲಿ ತಗೆದಂತಹ ಚಿತ್ರ)

”ಯುವ ವೈದ್ಯರಿಗೆ, ವೈದಕೀಯ ಕೋರ್ಸ್ ಮುಗಿಯುತ್ತಿದ್ದಂತೆ ಹಳ್ಳಿಗಳಲ್ಲಿ ಸೇವೆ ಸಲ್ಲಿಸುವಂತೆ ಸರ್ಕಾರ ಖಡ್ಡಾಯ ಮಾಡುವ ಬದಲು, ವೈದ್ಯರ ನಿವೃತ್ತಿ ಸಮಯದಲ್ಲಿ ಹಳ್ಳಿಗಳಿಗೆ ಸೇವೆ ಮಾಡಲು ಕಳುಹಿಸಿದರೆ ಉತ್ತಮ. ಏಕೆಂದರೆ ಯುವ ವೈದ್ಯರಿಗೆ ಆಗಷ್ಟೇ ವೃತ್ತಿ ಬದುಕು ಆರಂಭವಾಗಿರುತ್ತದೆ. ಜೀವನದಲ್ಲಿ ಆದಷ್ಟು ಬೇಗ ನೆಲೆ ಕಾಣಬೇಕೆಂಬ ಆತುರದಲ್ಲಿರುತ್ತಾರೆ. ಅದೇ ನಿವೃತ್ತ ವಯಸ್ಸಿನಲ್ಲಿರುವ ವೈದ್ಯನಿಗೆ ಕೊಟ್ಟಾಗ ಆತ ನಿಸ್ವಾರ್ಥದಿಂದ ಸಮಾಜ ಸೇವೆ ಮಾಡುತ್ತಾನೆ”. 

– ಡಾ.ವಿವೇಕ ಜಾವಳಿಅವರ ಸಾಧನೆ ಭಾರತದಲ್ಲಿಯೇ ಅಷ್ಟೇ ಅಲ್ಲ, ದೇಶ- ವಿದೇಶದ ದೊಡ್ಡ ದೊಡ್ಡ ಮ್ಯಾಗಝಿನ್ ಮತ್ತು ಮಾಧ್ಯಮಗಳಲ್ಲಿ ಬಿತ್ತರವಾಗಿವೆ. ಜಾವಳಿಯವರ ಬಳಿ ತರಬೇತಿ ಪಡೆಯಲು ದೇಶ ವಿದೇಶದಿಂದ ವೈದ್ಯರು ಬರುತ್ತಾರೆ. ಮತ್ತು ಅವರ ಜ್ಞಾನವನ್ನು ಹಂಚಿಕೊಳ್ಳಲು ಜಾವಳಿಯವರು ಆಗಾಗ ಬಿಡುವು ಮಾಡಿಕೊಂಡು ಹೊರದೇಶಗಳ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುತ್ತಾರೆ. ಕರ್ನಾಟಕ ವೈದಕೀಯ ಪ್ರವಾಸೋದ್ಯಮದಲ್ಲಿ ಜಾವಳಿಯವರ ಸೇವೆಯೂ ಅಪಾರವಾಗಿದೆ.

(ವಿವೇಕ ಜಾವಳಿಯವರ ಹೃದಯ ಅಂದರೆ ಅವರ ಧರ್ಮಪತ್ನಿ ಸಾಧನಾ ಜೊತೆ ಡಾ.ಜಾವಳಿ )

ಅವರ ಯಶಸ್ಸಿನ ಹಿಂದೆ ಅವರ ಧರ್ಮಪತ್ನಿ ಸಾಧನಾ ಹಾಗು ಮಗಳು ನಿವೇದಿತಾ ಅವರ ಪ್ರೋತ್ಸಾಹವಿದೆ. ಸಾಕಷ್ಟು ಹೃದಯ ಬಡಿತದ ಹಿಂದೆ ಜಾವಳಿಯವರಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ದೇಶ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ.

  • ಹಾವರ್ಡ್ ವಿಶ್ವವಿದ್ಯಾಲಯದಿಂದ ಜೀವಮಾನ ಪ್ರಶಸ್ತಿ
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (2017)

ಸದಾ ಹಸನ್ಮುಖಿಯಾಗಿರುವ ಡಾ. ವಿವೇಕ ಜಾವಳಿಯವರು ಹೃದಯಗಳ ಮಾತ್ರಿಕನೆಂದೇ ಹೆಸರಾಗಿದ್ದಾರೆ. ವೈದ್ಯ ವೃತ್ತಿಯಲ್ಲಿ ಹೆಸರು ಮಾಡಿದ್ದಷ್ಟೇ ಅಲ್ಲ, ಒಳ್ಳೆಯ ಛಾಯಾಗ್ರಾಹಕರು, ಚಿತ್ರ ಕಲಾವಿದರು ಆಗಿದ್ದಾರೆ. ೪೦ ವರ್ಷ ವೈದ್ಯ ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಿದ್ದು, ಸದಾ ಕ್ರಿಯಾಶೀಲ ವ್ಯಕ್ತಿತ್ವದ ಹುರುಪಿನ ವೈದ್ಯ ನಮ್ಮ ನಡುವೆ ಇರುವುದು ಕನ್ನಡಿಗರಾಗಿ ನಮ್ಮ ಹೆಮ್ಮೆ, ಕರ್ನಾಟಕದ ಹೆಮ್ಮೆಯ ಕೊಡು ಡಾ.ವಿವೇಕ ಜಾವಳಿಯವರಾಗಿದ್ದಾರೆ. ಸಾಕಷ್ಟು ಹೃದಯಗಳಲ್ಲಿ ಅವರು ನೆಲೆಸಿದ್ದಾರೆ. ಅವರ ಸೇವೆ ಹೀಗೆ ಯಶಸ್ವಿಯಾಗಿ ಮುಂದೊರೆಯಲಿ ಎನ್ನುವುದು ಆಕೃತಿಕನ್ನಡ ಆಶಿಸುತ್ತದೆ.


  • ಶಾಲಿನಿ ಹೂಲಿ ಪ್ರದೀಪ್

3 2 votes
Article Rating

Leave a Reply

2 Comments
Inline Feedbacks
View all comments
ರಘುರಾಂ

ಹೃದಯಗಳ ಮಾಂತ್ರಿಕ- ಚೆನ್ನಾಗಿ ಮೂಡಿಬಂದಿದೆ.

Home
Search
All Articles
Videos
About
2
0
Would love your thoughts, please comment.x
()
x
%d bloggers like this:
Aakruti Kannada

FREE
VIEW