ನೆನಪಾದರು ಡಾ.ಕುಸುಮಾ ಸೊರಬ (ಕುಸುಮಕ್ಕ)




ಡಾ. ಕುಸುಮಾ ಸೊರಬ , ಎಂ ಬಿ ಬಿ ಎಸ್, ಎಂ.ಎಸ್ ಜನರಲ್ ಸರ್ಜನ್. ಅವರನ್ನು ಜನರು ಪ್ರೀತಿಯಿಂದ ಹೃದಯದ ಭಾಷೆಯಿಂದ ಕರೆದಿದ್ದು ” ಕುಸುಮಕ್ಕ” ಅಥವಾ ಸ್ನೇಹಪೂರ್ವಕವಾಗಿ ಕರೆದಿದ್ದು ” ಸ್ನೇಹ ಕುಂಜದ ಕುಸುಮಕ್ಕ” ಎಂದು.

ಇಂದಿಗೆ ಮೂವತ್ತೈದು ವರ್ಷಗಳಷ್ಟು ಹಿಂದೆಯೇ ಮುಂಬೈಯಲ್ಲಿ ಡಾಕ್ಟರಾಗಿ ನಂತರ ಸರ್ಜನ್ ಪದವಿ ಪಡೆದ ಡಾ. ಕುಸುಮಾ ಸೊರಬ ಬಯಸಿದ್ದರೆ ಹಣ ಹೆಸರು ಐಷಾರಾಮೀ ಜೀವನ ಎಲ್ಲವನ್ನೂ ಗಳಿಸಬಹುದಾಗಿತ್ತು. ಆದರೆ ಗಾಂಧೀವಾದಿ ಕುಸುಮಾ ಸೊರಬ ಬಡವರ ಸೇವೆ ಮಾಡಿ ಕುಸುಮಕ್ಕ ಆದರು. ನನ್ನ ಸೌಭಾಗ್ಯವೆಂದರೆ ಕುಸುಮಕ್ಕ ಅವರ ಸಂಪರ್ಕಕ್ಕೆ ಬಂದಿದ್ದು….ಅವರ ನೆನಪಿಗೆ ಇದು ನನ್ನ ನುಡಿ ನಮನ.

ಕುಸುಮಕ್ಕ ಹುಟ್ಟಿದ್ದು ೧೯೩೭ ರಲ್ಲಿ, ಹೊನ್ನಾವರದ ಸನಿಹದ ಕೆರವಳ್ಳಿಯಲ್ಲಿ. ಹೆತ್ತವರಿಂದಲೇ ಅವರಿಗೆ ಸಮಾಜ ಸೇವೆಯ ಪ್ರೇರಣೆಯಾಯಿತು. ಡಾಕ್ಟರಾಗಲು ಆರ್ಥಿಕ ಅಡಚಣೆಯಾದ್ದರಿಂದ ಸೇವೆಗೆ ಹೆಚ್ಚೇ ಸೂಕ್ತವಾದ ಸೂಲಗಿತ್ತಿಯಾಗುವ ತರಬೇತಿಯನ್ನು ಬಿಜಾಪುರದಲ್ಲಿ ಪಡೆದು ಮುಂಬೈನ ಆಸ್ಪತ್ರೆಯೊಂದರಲ್ಲಿ ದಾದಿಯಾಗಿ ಸೇರಿಕೊಂಡರು. ಆದರೂ ಡಾಕ್ಟರಾಗಬೇಕೆಂಬ ಅದಮ್ಯ ಉತ್ಸಾಹವಿದ್ದ ಕುಸುಮಾ ಅದೃಷ್ಟವಶಾತ್ ಮೆಡಿಕಲ್ ಕಾಲೇಜ್ ಪ್ರವೇಶ ಪಡೆದರು. ಆರ್ಥಿಕ ಸಂಕಷ್ಟದಲ್ಲಿದ್ದ ಕುಸುಮಾ ರಾತ್ರಿಯಿಡೀ ನರ್ಸ್ ಕೆಲಸ ಮಾಡಿ ಹಗಲಿನಲ್ಲಿ ಕಾಲೇಜಿಗೆ ಹೋಗಿ ಕಷ್ಟಪಟ್ಟು ಓದುವಾಗ ಎರಡೇ ಘಂಟೆ ನಿದ್ರಿಸುತ್ತಿದ್ದರು.

ಫೋಟೋ ಕೃಪೆ : sneha kunja

ಜನರ ಸೇವೆಗೆ ಸಂಪೂರ್ಣ ಸನ್ನದ್ದರಾಗಬಯಸಿದ ಕುಸುಮಾ ಹಾಗೆಯೇ ಎಂ. ಎಸ್. ಓದಿ ಶಸ್ತ್ರಚಿಕಿತ್ಸಾ ತಜ್ಞರೂ ಆದರು. ಸರ್ಕಾರಿ ಕೆಲಸವೂ ಸಿಕ್ಕಿತು.

ಹುಟ್ಟೂರಿನ ಜನರಿಗೆ ಸೇವೆ ಮಾಡುವ ಪ್ರಜ್ಞೆ ಸದಾ ಅಂತರ್ಗತವಾಗಿದ್ದ ಡಾ. ಕುಸುಮಾ ಸೊರಬ ಹೊನ್ನಾವರದ ಬಳಿ ಅವರ ನೆಚ್ಚಿನ ಶರಾವತಿ ನದಿಯ ಹತ್ತಿರದಲ್ಲಿ ಹನ್ನೊಂದು ಎಕರೆ ಭೂಮಿಯನ್ನು ಜನರು ಕೊಟ್ಟ ದೇಣಿಗೆಯಿಂದ ಖರೀದಿಸಿ ಒಂದು ಆಸ್ಪತ್ರೆ ಸ್ಥಾಪಿಸಿದರು. ಅದೇ ವಿವೇಕಾನಂದ ಆರೋಗ್ಯ ಧಾಮವಾಯಿತು. ಅವರಿಗೆ ಪರಿಚಯವಿದ್ದ ಮುಂಬೈನ ಅನೇಕ ದಾನಿಗಳ ಸಹಾಯದಿಂದ ಆಸ್ಪತ್ರೆಗೆ ಬೇಕಾದ ಸಾಮಗ್ರಿ ಸಲಕರಣೆಗಳನ್ನಲ್ಲದೆ ಎಕ್ಸ್-ರೇ ಉಪಕರಣಗಳಂಥ ಜನಹಿತಕಾರಿ ಸೌಲಭ್ಯಗಳನ್ನೂ ಹೊಂದಿಸಿಕೊಂಡರು. ಈ ಉತ್ಸಾಹದಲ್ಲಿರುವಾಗಲೇ ತನ್ನ ಆರೋಗ್ಯದ ಕಡೆ ಸಾಕಷ್ಟು ಕಾಳಜಿ ವಹಿಸದ ಡಾ. ಕುಸುಮ ತಮ್ಮ ಒಂದು ಕಣ್ಣಿನ ದೃಷ್ಟಿಯನ್ನೇ ಕಳೆದುಕೊಳ್ಳಬೇಕಾಯ್ತು. ಇಷ್ಟೆಲ್ಲ ಮಾಹಿತಿಯನ್ನು ಸುಧಾ ವಾರ ಪತ್ರಿಕೆಯಲ್ಲಿ ಅವರ ಬಗ್ಗೆ ಬಂದ ಲೇಖನವೊಂದರಲ್ಲಿ ಓದಿದ್ದೆ.

ಫೋಟೋ ಕೃಪೆ : sneha kunja

೧೯೮೫….ಸಾಗರದಲ್ಲಿ ಹಂದಿಗೋಡು ಕಾಹಿಲೆಯೆಂಬ ವಿಚಿತ್ರ ರೋಗಕ್ಕೆ ತುತ್ತಾದ ನಿರ್ಗತಿಕರ ಬಗ್ಗೆ ಸಂಶೋಧನೆ ನಡೆಯುತ್ತಿತ್ತು. ನಾನು ಮತ್ತು ನನ್ನ ಸಹಧರ್ಮಿಣಿ ಆ ಸಂಶೋಧನೆಯಲ್ಲಿ ಕೆಲಸದಲ್ಲಿದ್ದೆವು. ಧುತ್ತೆಂದು ಪ್ರತ್ಯಕ್ಷರಾದವರು ಸಾಕ್ಷಾತ್ ಡಾ. ಕುಸುಮಾ ಸೊರಬ. ಕೆಲ ದಿನಗಳ ಹಿಂದಷ್ಟೇ ಅವರ ಬಗ್ಗೆ ಸುಧಾದಲ್ಲಿ ಓದಿದ್ದ ನನಗೆ ಅವರ ಗುರುತು ತತ್‌ಕ್ಷಣ ಸಿಕ್ಕಿತು. ಆಶ್ಚರ್ಯ ಆನಂದ ಒಟ್ಟಿಗೇ ಅನುಭವವಾಯ್ತು. ನನ್ನ ಮತ್ತು ನನ್ನವಳ ಬಗ್ಗೆ ತಿಳಿದುಕೊಂಡು ಅವರು ನಮ್ಮನ್ನು ಭೇಟಿ ಮಾಡಲು ಬಂದಿದ್ದು ಅವರ ಸರಳತೆಯ ಬಗ್ಗೆ ಮುನ್ನುಡಿ ಆಯ್ತು. ನಮ್ಮ ಕೆಲಸದ ಬಗ್ಗೆ ಕೇಳಿದರು. ಮಾರನೆಯ ದಿನ ಒಂದು ಆಟೋ ರಿಕ್ಷಾ ಹತ್ತಿಕೊಂಡು ಹಂದಿಗೋಡು, ಬೇಳೂರು ಬೆಳೆಯೂರು ಬಂದಗದ್ದೆ ಹಾರೋಕೊಪ್ಪ ಮೊದಲಾದ ಸುಮಾರು ನಲವತ್ತು ಹಳ್ಳಿಗಳಲ್ಲಿ ಹತ್ತು ಹಳ್ಳಿಗಳಿಗೆ ಹೋದೆವು. ನಿರ್ಗತಿಕರಾದ ಹರಿಜನರನ್ನೇ ಹೆಚ್ಚಾಗಿ ಬಾಧಿಸಿದ್ದ ಆ ರೋಗದಿಂದ ಹೆಳವರಾದ ರೋಗಿಗಳನ್ನು ತೋರಿಸಿದೆ. ಆರ್ದ್ರ ಹೃದಯದ ಡಾ. ಕುಸುಮ ಕಣ್ಣೇರು ಮಿಡಿದಿದ್ದರು. ಸಂಜೆ ಬೀಳ್ಕೊಡುವಾಗ ಕಾಸರಕೊಡದ ಅವರ ಆಸ್ಪತ್ರೆಯನ್ನು ನೋಡಲು ಹೇಳಿ ಹೊರಟಿದ್ದರು. ಅವರ ಭೇಟಿ ನನ್ನ ಕೆಲಸಕ್ಕೆ ಉತ್ಸಾಹ ನೀಡಿತ್ತು.

ಫೋಟೋ ಕೃಪೆ : sneha kunja

ಕೆಲ ದಿನಗಳಲ್ಲೇ ನನ್ನವಳನ್ನು ಕರೆದುಕೊಂಡು ಅವರ ಸ್ನೇಹ ಕುಂಜದ ವಿವೇಕಾನಂದ ಆರೋಗ್ಯಧಾಮಕ್ಕೆ ಹೋದೆವು. ಒಂದು ಕಡೆ ಅರಬ್ಬೀ ಸಮುದ್ರ. ಸ್ವಲ್ಪ ದೂರದಲ್ಲಿ ನಮ್ಮ ಶರಾವತಿ ತಾಯಿ. ಅತಿ ಪ್ರಶಾಂತ ತಾಣದಲ್ಲಿ ಅವರ ಆಸ್ಪತ್ರೆ. ಎಲ್ಲವನ್ನೂ ತೋರಿಸಿದರು. ನಂತರ ಶರಾವತಿ ನದಿಯಲ್ಲಿ ಬೋಟ್ ಮೂಲಕ ಪಯಣಿಸಿ ಅವರ ಅನೇಕ ಕ್ಲಿನಿಕ್‌ಗಳನ್ನು ಕುಗ್ರಾಮಗಳಲ್ಲಿ ನೋಡಿದೆವು. ಮುಂಬೈನ ಸರ್ಜನ್ ಈ ಕುಗ್ರಾಮಗಳಲ್ಲಿ ವೈದ್ಯಕೀಯ ಸೇವೆ ನೀಡುವ ಪರಿಯನ್ನು ನೋಡಿ ಮೂಕ ವಿಸ್ಮಿತನಾಗಿದ್ದೆ. ಸೇವೆ ಎಂದರೆ ಹೀಗಿರಬೇಕು ಎನಿಸಿತು.

ಆ ಹೊತ್ತಿಗೆ ಅಲೋಪತಿಯ ಜೊತೆಗೆ ಆಯುರ್ವೇದ ಮತ್ತು ನ್ಯಾಚುರೋಪತಿಗಳ ಬಗ್ಗೆಯೂ ಅವರು ಆಸಕ್ತಿ ವಹಿಸಿ ಹಳ್ಳಿಗಾಡಿನ ಜನರಿಗೆ ಸುಲಭಸಾಧ್ಯವಾಗುವ ಈ ವಿಧಾನಗಳನ್ನೂ ಅಳವಡಿಸಿಕೊಂಡಿದ್ದರು.
ಬೀಳ್ಕೊಡುವ ಮುನ್ನ ನಮಗೊಂದು ಆಶ್ಚರ್ಯವಿತ್ತು. ಕುಸುಮಕ್ಕ ನನ್ನನ್ನೂ ಮತ್ತು ನನ್ನವಳನ್ನೂ ಅವರ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ವಿನಂತಿಸಿದರು. ಹಂದಿಗೋಡು ಕಾಹಿಲೆಯ ರೋಗಿಗಳ ಹೊಣೆ ಹೊತ್ತಿದ್ದ ನಮಗೆ ಯೋಚಿಸಲು ಕಾಲಾವಕಾಶ ಬೇಕೆಂದು ತಿಳಿಸಿದೆವು.

ಸಾಗರಕ್ಕೆ ಹಿಂದಿರುಗಿದ ನಂತರ ನಮಗೆ ಸ್ನಾತಕೋತ್ತರ ಪದವಿಯ ಕೋರ್ಸುಗಳಿಗೆ ಪ್ರವೇಶ ದೊರೆತು ಉರಿಬಿಸಿಲಿನ ಬಳ್ಳಾರಿಗೆ ಹೋಗಿ ಬಿದ್ದೆವು.

ರೇಡಿಯಾಲಜಿಸ್ಟ್ ಆಗಿ ಭಟ್ಕಳದಲ್ಲಿ ಸೇವೆಗೆ ಸೇರಿದ್ದೆ. ಮತ್ತೆ ಮನೆಗೆ ಬಂದರು….ಕುಸುಮಕ್ಕ.

ನಮಗೆ ನಾಚಿಕೆಯೇ ಆಗಿತ್ತು. ಅವರ ಜೊತೆ ಸೇರಿ ನಿಸ್ವಾರ್ಥ ಸೇವೆ ಸಲ್ಲಿಸುವ ಸಾಧ್ಯತೆ ನಮಗಿರಲಿಲ್ಲ. ಓದುವಾಗ ಮಾಡಿದ್ದ ಸಾಲ ತೀರಿಸದಿದ್ದರೆ ಕೋರ್ಟಿಗೆ ಎಳೆಯುವುದಾಗಿ ಚಕ್ರಾನಗರದ ಬ್ಯಾಂಕಿನಿಂದ ಜೋರಾದ ನೋಟಿಸ್ ಬಂದಿತ್ತು. ಸಂದಿಗ್ಧ. ಕುಸುಮಕ್ಕನ ಕನಸಿನ ಯೋಜನೆಗಳಿಗೆ ನಾವು ಸೇರಲಾಗಲಿಲ್ಲ.



ನಂತರದ ವರ್ಷಗಳಲ್ಲಿ ಕುಸುಮಕ್ಕ ಸಾಮಾಜಿಕ ಕಳಕಳಿಯ ಅನೇಕ ಯೋಜನೆಗಳಲ್ಲಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಪರಿಸರ ಸಂರಕ್ಷಣೆಯ ಅನೇಕ ಹೋರಾಟಗಳಲ್ಲಿ ಧುಮುಕಿದರು. ಹಲವರ ವಿರೋಧವನ್ನೂ ಕಟ್ಟಿಕೊಂಡರೋ ಗೊತ್ತಿಲ್ಲ.

ದೇವರಿಗೆ ಬೇಗನೆ ಪ್ರಿಯವಾಗಿಬಿಟ್ಟರು. ಯಾವುದೋ ಹೋರಾಟದಲ್ಲಿ ಸಕ್ರಿಯವಾಗಿದ್ದ ಉತ್ಸಾಹದಲ್ಲಿ ರಸ್ತೆ ದಾಟುವಾಗ ವಾಹನವೊಂದು ಡಿಕ್ಕಿ ಹೊಡೆದು ಡಾ. ಕುಸುಮಾ ಸೊರಬ, ಸ್ನೇಹಕೂಂಜದ ಕುಸುಮಕ್ಕ, ಹೊನ್ನಾವರ ಕಾಸರಕೊಡದ ಪರಿಸರವಾದಿ ಬಡವರ ಆಶಾಕಿರಣ ಇನ್ನಿಲ್ಲವಾದರು. ಕೆಲ ವರ್ಷಗಳ ಹಿಂದೆ ಪತ್ರಿಕೆಯಲ್ಲಿ ಸುದ್ದಿ ಓದಿ ನನ್ನನ್ನೇ ನಾನು ಸಂಭಾಳಿಸಿಕೊಳ್ಳಲಾಗಲಿಲ್ಲ.
ಎಂದೆಂದಿಗೂ ಕೆಲವು ಕೊರಗುಗಳು ಉಳಿದುಬಿಡುತ್ತವೆ. ಕುಸುಮಕ್ಕನವರ ಯೋಜನೆಗಳಿಗೆ ನಾನು ಸೇರಿ ಸೇವೆ ಮಾಡುವ ಅವಕಾಶವನ್ನು ನಾನು ಕಳೆದುಕೊಂಡೆನಲ್ಲಾ ಎಂದು ಈ ಕ್ಷಣದವರೆಗೂ ಪಶ್ಚಾತ್ತಾಪ ಪಡುತ್ತಿದ್ದೇನೆ.

ಕುಸುಮಕ್ಕ ನೀವು ಅಮರರು. ನಿಮ್ಮ ಆದರ್ಶಗಳು ನಮ್ಮೊಂದಿಗಿವೆ.

  • ಸ್ನೇಹ ಕುಂಜ
    ವಿವೇಕಾನಂದ ಅರೋಗ್ಯ ಧಾಮ
    ಸ್ನೇಹಕುಂಜ ಟ್ರಸ್ಟ್
    ಹೊನ್ನಾವರ ತಾಲೂಕು, ಉತ್ತರ ಕನ್ನಡ ಜಿಲ್ಲೆ
    ಕಾಸರಗೋಡು – ೫೮೧೩೪೨

ಅರುಣ್ ನಾಯಕ್ – ೯೧ ೮೨೭೭೭೯೬೬೨೭


  • ಡಾ. ಕೃಷ್ಣಮೂರ್ತಿ ಸೋಮಶೇಖರ್

5 1 vote
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW